ಕಾಂಗ್ರೆಸ್ ಮುಖಂಡರ ವೈಫಲ್ಯಕ್ಕೆ ‘ಗ್ಯಾರಂಟಿ’ ಬಲಿಯಾಗದಿರಲಿ

Update: 2024-06-12 05:12 GMT

PC: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ರಾಜ್ಯ ಕಾಂಗ್ರೆಸ್ ವಲಯದೊಳಗೆ ಲೋಕಸಭಾ ಫಲಿತಾಂಶದ ಕುರಿತಂತೆ ಬಿರುಸಿನ ಆತ್ಮವಿಮರ್ಶೆ ನಡೆಯುತ್ತಿದೆ. ‘ಇದೊಂದು ಎಚ್ಚರಿಕೆಯ ಗಂಟೆಯಾಗಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಕೇಂದ್ರ ವರಿಷ್ಠರೂ ರಾಜ್ಯದ ಸಾಧನೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ವಿಧಾನಸಭಾ ಚುನಾವಣೆಯ ಭರ್ಜರಿ ಫಲಿತಾಂಶ ಹೊರ ಬಿದ್ದು ಬರೇ ಒಂದು ವರ್ಷವಾಗಿದೆ. ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯ ಸರಕಾರ ಆತುರಾತುರವಾಗಿ ಗ್ಯಾರಂಟಿಗಳನ್ನು ಕೂಡ ಜಾರಿಗೊಳಿಸಿತ್ತು. ಗ್ಯಾರಂಟಿ ಯೋಜನೆಗಳು ಕಳೆದ ಒಂದು ವರ್ಷದಲ್ಲಿ ಬಹಳಷ್ಟು ಸುದ್ದಿ ಮಾಡಿತ್ತು. ಮಾತ್ರವಲ್ಲ, ಅದರ ಜಾರಿಯೇ ತನ್ನ ಒಂದು ವರ್ಷದ ಸಾಧನೆ ಎಂದು ಕಾಂಗ್ರೆಸ್ ಹೇಳಿಕೊಂಡಿತ್ತು. ವಿರೋಧ ಪಕ್ಷಗಳ ವ್ಯಾಪಕ ಟೀಕೆ, ವಿರೋಧ, ಅಡ್ಡಿಗಳಿದ್ದರೂ ಗ್ಯಾರಂಟಿಗಳಿಂದ ಹಿಂದೆ ಸರಿದಿರಲಿಲ್ಲ. ಇವುಗಳ ನಡುವೆ ಬಿಜೆಪಿಯೊಳಗೂ ಸಾಕಷ್ಟು ಭಿನ್ನಮತಗಳಿದ್ದವು. ಯಡಿಯೂರಪ್ಪ ಬಣಕ್ಕೆ ಮುಖಭಂಗ ಮಾಡಲು ಆರೆಸ್ಸೆಸ್‌ನ ಒಂದು ಗುಂಪು ಬಹಳಷ್ಟು ಕೆಲಸ ಮಾಡಿತ್ತು. ಇಷ್ಟಾದರೂ ಲೋಕಸಭಾ ಚುನಾವಣೆಯಲ್ಲಿ 10 ಸ್ಥಾನಗಳನ್ನೂ ಪಡೆಯುವುದಕ್ಕೆ ಸಾಧ್ಯವಾಗದೆ ಇರುವುದು ಕಾಂಗ್ರೆಸ್ ನಾಯಕರಿಗೆ ಬಹಳಷ್ಟು ಇರಿಸುಮುರಿಸನ್ನುಂಟು ಮಾಡಿದೆ. ತನಗೆ ಪೂರಕವಾಗಿದ್ದ ಅವಕಾಶಗಳನ್ನು ಕಾಂಗ್ರೆಸ್ ಕೈ ಚೆಲ್ಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದೀಗ, ಈ ವೈಫಲ್ಯದ ಹೊಣೆಯನ್ನು ಯಾರ ತಲೆಗೆ ಕಟ್ಟುವುದು ಎನ್ನುವ ಗೊಂದಲದಲ್ಲಿದ್ದಾರೆ ಕಾಂಗ್ರೆಸ್ ನಾಯಕರು.

ಸದ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಗುರಿ ಮಾಡುವಂತೆ ಇಲ್ಲ. ಆದುದರಿಂದ ಅವರೆಲ್ಲರ ದೃಷ್ಟಿ ಇದೀಗ ‘ಗ್ಯಾರಂಟಿ ಯೋಜನೆ’ಗಳ ಮೇಲೆ ಬಿದ್ದಿದೆ. ಗ್ಯಾರಂಟಿ ಯೋಜನೆಗಳನ್ನು ಆತುರಾತುರವಾಗಿ ಜಾರಿ ಮಾಡಿದರೂ ಅದು ನಿರೀಕ್ಷಿತ ಪರಿಣಾಮ ಬೀರಿಲ್ಲ ಎನ್ನುವ ಅಸಮಾಧಾನ ಸ್ವತಃ ಕಾಂಗ್ರೆಸ್‌ನೊಳಗೇ ಎದ್ದಿದೆ. ‘ಗ್ಯಾರಂಟಿ ಯೋಜನೆಗಳಿಂದಲೇ’ ವಿಧಾನಸಭಾ ಚುನಾವಣೆಯನ್ನು ಭರ್ಜರಿಯಾಗಿ ಗೆಲ್ಲಲು ಸಾಧ್ಯವಾಯಿತು ಎಂದು ನಂಬಿದ್ದ ಕಾಂಗ್ರೆಸ್, ಇದೀಗ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಮುಂದಿಟ್ಟುಕೊಂಡು ಅದೇ ‘ಗ್ಯಾರಂಟಿ’ಯನ್ನು ಅನುಮಾನದಿಂದ ನೋಡುತ್ತಿದೆ. ವಿರೋಧ ಪಕ್ಷಗಳಂತೂ ಸರಕಾರ ‘ಗ್ಯಾರಂಟಿ ಯೋಜನೆ’ಗಳನ್ನು ಹಿಂದಕ್ಕೆ ಪಡೆಯುವುದನ್ನೇ ಕಾಯುತ್ತಿವೆ. ಸರಕಾರವನ್ನು ಟೀಕಿಸುವುದಕ್ಕೆ ಈ ಯೋಜನೆಗಳು ಬಹುದೊಡ್ಡ ಅಡ್ಡಿಯಾಗಿವೆ. ಶ್ರೀಸಾಮಾನ್ಯರು ಈ ಯೋಜನೆಗಳ ಕಾರಣಗಳಿಂದ ಸರಕಾರದ ಜೊತೆಗೆ ಭಾವನಾತ್ಮಕವಾಗಿ ಬಲವಾಗಿ ನಿಂತಿದ್ದಾರೆ. ಅದನ್ನು ಮತಗಳಾಗಿ ಪರಿವರ್ತಿಸಲು ಕಾಂಗ್ರೆಸ್ ನಾಯಕರು ವಿಫಲರಾಗಿದ್ದಾರಷ್ಟೇ. ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ನೊಳಗೆ ಕೆಲವರು ಗ್ಯಾರಂಟಿ ಯೋಜನೆಗಳ ವಿರುದ್ಧ ಧ್ವನಿಯೆತ್ತ ತೊಡಗಿದ್ದಾರೆ. ಈ ಯೋಜನೆಗಳಿಗಾಗಿ ಕೋಟ್ಯಂತರ ರೂಪಾಯಿಯನ್ನು ಮೀಸಲಿಡಬೇಕಾಗಿರುವುದರಿಂದ, ಸರಕಾರದೊಳಗಿರುವ ಹಲವರಿಗೆ ‘ಹಣದ ಕೊರತೆ’ ಸೃಷ್ಟಿಯಾಗಿದೆ. ಈ ಗ್ಯಾರಂಟಿ ಯೋಜನೆಗಳನ್ನು ಬದಿಗಿಟ್ಟರೆ, ತಮ್ಮ ತಿಜೋರಿ ತುಂಬಿಸಿಕೊಳ್ಳುವುದು ಸುಲಭವಾಗುತ್ತದೆ ಎಂದು ಭಾವಿಸಿರುವ ಶಕ್ತಿಗಳು ಕಾಂಗ್ರೆಸ್ ಸರಕಾರದೊಳಗಿದ್ದು, ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಅವರೆಲ್ಲರೂ ಚಿಗುರಿಕೊಂಡಿದ್ದಾರೆ.

ಈ ಬಾರಿ ಕನಿಷ್ಠ 12 ಸ್ಥಾನಗಳನ್ನಾದರೂ ತನ್ನದಾಗಿಸಿಕೊಳ್ಳುವ ಅವಕಾಶ ಕಾಂಗ್ರೆಸ್‌ಗಿತ್ತು. ನಾಯಕರೊಳಗಿನ ಭಿನ್ನಮತ, ತಳಸ್ತರದಲ್ಲಿ ಕಾರ್ಯಕರ್ತರ ನಡುವೆ ಹೊಂದಾಣಿಕೆಯ ಕೊರತೆ ಇತ್ಯಾದಿಗಳಿಂದಾಗಿ ಕಾಂಗ್ರೆಸ್ ಪಕ್ಷ ತನ್ನದೇ ತಪ್ಪುಗಳಿಂದ ಕೆಲವು ಸ್ಥಾನಗಳನ್ನು ಕಳೆದುಕೊಂಡಿದೆ. ‘ಗ್ಯಾರಂಟಿ ಯೋಜನೆ’ಗಳು ಗುಪ್ತ ಮತಗಳಾಗಿ ತನ್ನೆಡೆಗೆ ತಾನೇ ಹರಿದು ಬರುತ್ತವೆ ಎಂಬ ಕಾಂಗ್ರೆಸ್ ಭ್ರಮೆಯೂ ಕೆಲವು ಸ್ಥಾನಗಳನ್ನು ಕಳೆದುಕೊಳ್ಳುವುದಕ್ಕೆ ಕಾರಣವಾಗಿದೆ. ಇಷ್ಟಕ್ಕೂ ಗ್ಯಾರಂಟಿ ಯೋಜನೆಗಳು ಕೇವಲ ಲೋಕಸಭಾ ಚುನಾವಣೆಗಾಗಿ ಅನುಷ್ಠಾನಗೊಳಿಸಿರುವುದಲ್ಲ ಎನ್ನುವುದನ್ನು ಮುಖ್ಯಮಂತ್ರಿಯವರೇ ಪದೇ ಪದೇ ಸಾರ್ವಜನಿಕ ವೇದಿಕೆಗಳಲ್ಲಿ ಘೋಷಿಸಿಕೊಂಡಿದ್ದರು. ಐದೂ ಗ್ಯಾರಂಟಿಗಳು ಜಾರಿಗೊಂಡು ಒಂದು ವರ್ಷವೂ ಆಗಿಲ್ಲ. ಅದು ಸಾಮಾಜಿಕವಾಗಿ, ಆರ್ಥಿಕವಾಗಿ ಜನರ ಬದುಕಿನಲ್ಲಿ ತನ್ನ ಪರಿಣಾಮಗಳನ್ನು ಇನ್ನಷ್ಟೇ ಬೀರಬೇಕಾಗಿದೆ. ಬೀಜ ಬಿತ್ತಿದ ಮರುದಿನವೇ ಕಾಂಗ್ರೆಸ್ ಕೊಯ್ಲಿಗೆ ಸಿದ್ಧವಾದರೆ ನಿರಾಶೆಯಾಗದೇ ಇರುತ್ತದೆಯೇ? ಇಷ್ಟಕ್ಕೂ ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಪಕ್ಷವು ಬಿಜೆಪಿಯೊಂದಿಗೆ ಹೊಂದಾಣಿಕೆಯನ್ನು ಮಾಡಿಕೊಂಡಿತ್ತು. ಒಕ್ಕಲಿಗರ ಮತಗಳನ್ನು ಕೇಸರೀಕರಣಗೊಳಿಸುವಲ್ಲಿ ಜೆಡಿಎಸ್ ಭಾಗಶಃ ಯಶಸ್ವಿಯಾಗಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆದಿರುವುದಕ್ಕೆ ಹೋಲಿಸಿದರೆ ಈ ಬಾರಿಯ ಫಲಿತಾಂಶ ನಿರಾಶಾದಾಯಕ ವಾಗಿಯೇನೂ ಇಲ್ಲ. ಅತಿ ನಿರೀಕ್ಷೆ ಕಾಂಗ್ರೆಸ್‌ಗೆ ಮುಳುವಾಯಿತು ಎನ್ನಬಹುದಷ್ಟೇ.

ಕಳೆದುಕೊಂಡ ಸ್ಥಾನಗಳಿಗೆ ಖೇದ ಪಟ್ಟು ಗ್ಯಾರಂಟಿ ಯೋಜನೆಗಳನ್ನು ಕಿತ್ತು ಹಾಕುವ ಯೋಚನೆಯನ್ನು ಬದಿಗಿಟ್ಟು, ಪಡೆದುಕೊಂಡ ಸ್ಥಾನಗಳಿಗೆ ಕೃತಜ್ಞರಾಗಿ ಗ್ಯಾರಂಟಿ ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹೇಗೆ ಅನುಷ್ಠಾನಗೊಳಿಸಬಹುದು ಎನ್ನುವುದರ ಕಡೆಗೆ ಕಾಂಗ್ರೆಸ್ ಸರಕಾರ ಮನ ಮಾಡಬೇಕು. ಈ ಬಾರಿ ತನಗೆ ಸಿಕ್ಕಿದ ಎಂಟು ಹೆಚ್ಚುವರಿ ಸ್ಥಾನಗಳು ಗ್ಯಾರಂಟಿ ನೀಡಿದ ಭಿಕ್ಷೆ ಎನ್ನುವುದನ್ನು ಪಕ್ಷ ಒಪ್ಪಿಕೊಳ್ಳಬೇಕು. ಇದೇ ಸಂದರ್ಭದಲ್ಲಿ, ಗ್ಯಾರಂಟಿ ಯೋಜನೆ ಎನ್ನುವುದು ಜನರಿಗೆ ಸರಕಾರ ನೀಡುವ ಭಿಕ್ಷೆ ಎನ್ನುವ ಅಭಿಪ್ರಾಯ ಕಾಂಗ್ರೆಸ್ ಪಕ್ಷದೊಳಗೇ ಕೆಲವರಿಗೆ ಇದ್ದಂತಿದೆ. ಅವರನ್ನು ಮೊದಲು ತಿದ್ದುವ ಕೆಲಸ ಕಾಂಗ್ರೆಸ್‌ನೊಳಗೆ ನಡೆಯಬೇಕು. ಜನಸಾಮಾನ್ಯರು ಕಟ್ಟುವ ತೆರಿಗೆಯನ್ನೇ ಅವರಿಗೆ ಮರಳಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ. ಬಿಜೆಪಿ ನೋಟು ನಿಷೇಧ, ಕೊರೋನ, ಲಾಕ್‌ಡೌನ್, ಜಿಎಸ್‌ಟಿ, ಶೇ. 40 ಭ್ರಷ್ಟಾಚಾರ, ಹಣದುಬ್ಬರ ಇವೆಲ್ಲದರ ಮೂಲಕ ರಾಜ್ಯದ ಜನರಿಗೆ ಮಾಡಿರುವ ಅನ್ಯಾಯ, ವಂಚನೆಗಳನ್ನು ಗ್ಯಾರಂಟಿಗಳ ಮೂಲಕ ನೂತನ ಸರಕಾರ ತಿದ್ದಿಕೊಳ್ಳುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ತಪ್ಪು ನೀತಿಗಳಿಂದ ಜನಸಾಮಾನ್ಯರ ಮೇಲಾದ ಗಾಯಗಳಿಗೆ ಹಚ್ಚಿದ ಮುಲಾಮು ಈ ಗ್ಯಾರಂಟಿ ಯೋಜನೆಗಳು ಎನ್ನುವುದನ್ನು ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದ್ದರು. ಇದೀಗ, ಗ್ಯಾರಂಟಿ ಯೋಜನೆಗಳಿಂದ ಸರಕಾರವೇನಾದರೂ ಹಿಂದೆ ಸರಿದರೆ ವಿರೋಧ ಪಕ್ಷಗಳ ಆರೋಪಗಳನ್ನೆಲ್ಲ ಒಪ್ಪಿಕೊಂಡಂತಾಗುತ್ತದೆ.

ಸದ್ಯಕ್ಕೆ ಗ್ಯಾರಂಟಿ ಯೋಜನೆಗಳ ಸಾಧಕ ಬಾಧಕಗಳ ಬಗ್ಗೆ ಗಂಭೀರ ಅಧ್ಯಯನವನ್ನು ನಡೆಸುವ ಬಗ್ಗೆ ಸರಕಾರ ಯೋಜನೆಯನ್ನು ಹಾಕಿಕೊಳ್ಳಬೇಕು. ಶಕ್ತಿ ಯೋಜನೆ, ಗೃಹ ಲಕ್ಷ್ಮಿ ಯೋಜನೆಗಳು ಗ್ರಾಮೀಣ ಪ್ರದೇಶದ ಮಹಿಳೆಯರ ಬದುಕಿನಲ್ಲಿ ಕ್ರಾಂತಿಯನ್ನೇ ಮಾಡಿವೆ. ಗೃಹ ಜ್ಯೋತಿಯೂ ಬಡವರ ಮನೆಯನ್ನು ಮಾತ್ರವಲ್ಲ, ಬಹುತೇಕ ಮಧ್ಯಮವರ್ಗದ ಮನೆಗಳನ್ನು ಬೆಳಗಿದೆ. ಕೊರೋನದಿಂದ ಬಹುತೇಕ ನೆಲಕಚ್ಚಿ ಕೂತ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಬದುಕನ್ನು ಮೇಲೆತ್ತಿ ನಿಲ್ಲಿಸಿದೆ. ಮುಖ್ಯವಾಗಿ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿದೆ. ಇದೇ ಸಂದರ್ಭದಲ್ಲಿ ಅನುಷ್ಠಾನದಲ್ಲಾಗಿರುವ ತೊಡಕುಗಳೇನು ಎನ್ನುವುದನ್ನೂ ಕಂಡುಕೊಳ್ಳಬೇಕು. ಶಕ್ತಿ ಯೋಜನೆ, ಗೃಹ ಲಕ್ಷ್ಮಿ ಯೋಜನೆ ಇನ್ನೂ ದೊಡ್ಡ ಮಟ್ಟದಲ್ಲಿ ಅರ್ಹರನ್ನು ತಲುಪಿಲ್ಲ. ಅವರಿಗೆ ತಲುಪಿಸುವಲ್ಲಿ ಎದುರಾಗಿರುವ ಎಡರು ತೊಡರುಗಳನ್ನು ನಿವಾರಿಸಬೇಕು. ಹಾಗೆಯೇ ಗ್ಯಾರಂಟಿ ಯೋಜನೆಗಳನ್ನು ಮುಂದಿನ ಚುನಾವಣೆಯಲ್ಲಿ ಮತಗಳಾಗಿ ಪರಿವರ್ತಿಸುವುದಕ್ಕಾಗಿ ಕಾರ್ಯಕರ್ತರನ್ನು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವುದು ಕೂಡ ಕಾಂಗ್ರೆಸ್ ಮುಖಂಡರ ಹೊಣೆಗಾರಿಕೆಯಾಗಿದೆ. ಇಲ್ಲದೇ ಇದ್ದರೆ ಗ್ಯಾರಂಟಿಗಳನ್ನು ಕೊಟ್ಟರೂ ಜನರು ನಮ್ಮ ಕೈ ಬಿಟ್ಟರು ಎಂದು ಸುಖಾಸುಮ್ಮನೆ ಮತದಾರರ ಮೇಲೆ ಗೂಬೆ ಕೂರಿಸಿ ತಮ್ಮ ತಪ್ಪುಗಳಿಂದ ನುಣುಚಿಕೊಳ್ಳುವ ಸ್ಥಿತಿ ರಾಜ್ಯ ಕಾಂಗ್ರೆಸ್‌ಗೆ ಮತ್ತೊಮ್ಮೆ ಎದುರಾಗಬಹುದು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News