ವಿಶ್ವವಿದ್ಯಾನಿಲಯ ವಿಷ ವಿದ್ಯಾನಿಲಯವಾಗದಿರಲಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಜಾತ್ಯತೀತ ತತ್ವ, ಸಿದ್ಧಾಂತಗಳನ್ನು ಎತ್ತಿ ಹಿಡಿಯಬೇಕಾದ ವಿಶ್ವವಿದ್ಯಾನಿಲಯಗಳು, ಜಾತಿ ಮತ್ತು ಕೋಮುವಾದಗಳ ಕಾರಣಗಳಿಂದ ಎಷ್ಟು ಗಬ್ಬೆದ್ದು ಹೋಗಿವೆೆ ಎಂದರೆ ‘‘ವಿಶ್ವವಿದ್ಯಾನಿಲಯಗಳಲ್ಲಿ ಜಾತ್ಯತೀತ ವಿರೋಧಿ ಮನೋಭಾವ, ಸಾಮಾಜಿಕ ಚಿಂತಕರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಸಭೆ, ಸಮಾರಂಭಗಳನ್ನು ಯಾವುದೇ ಕಾರಣಕ್ಕೂ ಆಯೋಜನೆ ಮಾಡಬಾರದು’’ ಎಂದು ಮುಖ್ಯಮಂತ್ರಿ ಆದೇಶ ನೀಡುವ ಸ್ಥಿತಿ ನಿರ್ಮಾಣವಾಗಿದೆ. ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕುಲಪತಿಗಳ ಮತ್ತು ಉನ್ನತ ಶಿಕ್ಷಣ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ‘ಸಂವಿಧಾನಕ್ಕೆ ವಿರುದ್ಧವಾದ ಚಟುವಟಿಕೆ ಮತ್ತು ಕ್ರಮಗಳು ವಿವಿಗಳಲ್ಲಿ ನಡೆಯಬಾರದು. ಕೆಲವೊಮ್ಮೆ ಸ್ವಾತಂತ್ರ್ಯ ಹೋರಾಟಗಾರರು, ಸಂವಿಧಾನ ಕರ್ತೃಗಳು, ಸಾಮಾಜಿಕ ಚಿಂತಕರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಸಭೆ, ಸಮಾರಂಭಗಳು ನಡೆದಿರುವುದನ್ನು ಕಂಡಿದ್ದೇವೆ. ವಿಶ್ವವಿದ್ಯಾನಿಲಯಗಳು ಜಾತ್ಯತೀತ ವಿರೋಧಿ ಮನೋಭಾವವನ್ನು ಯಾವತ್ತೂ ಪುರಸ್ಕರಿಸಬಾರದು’ ಎಂದು ಅವರು ಸೂಚನೆ ನೀಡಿದ್ದಾರೆ. ಆದರೆ ಈ ಸೂಚನೆ, ಆದೇಶಗಳು ಪಾಲನೆಯಾಗುವುದು ಅಷ್ಟು ಸುಲಭವಿಲ್ಲ ಎನ್ನುವುದು ಸ್ವತಃ ಮುಖ್ಯಮಂತ್ರಿಯವರಿಗೂ ಗೊತ್ತಿದೆ.
ವಿಶ್ವವಿದ್ಯಾನಿಲಯಗಳು ವೈಚಾರಿಕವಾಗಿ, ವೈಜ್ಞಾನಿಕವಾಗಿ ಯೋಚನೆ ಮಾಡುವುದೇ ತಪ್ಪು ಎನ್ನುವ ಅಭಿಪ್ರಾಯ ರೂಪಿಸುವ ಕೆಲಸದಲ್ಲಿ ಆರೆಸ್ಸೆಸ್‌ಈಗಾಗಲೇ ಭಾಗಶಃ ಯಶಸ್ವಿಯಾಗಿದೆ. ದೇಶದ ಬಗ್ಗೆ, ಸಮಾಜದ ಬಗ್ಗೆ ವಿಶ್ವವಿದ್ಯಾನಿಲಯಗಳಲ್ಲಿ ಉಪನ್ಯಾಸಕರು ಜಾಗೃತಿಯನ್ನು ಮೂಡಿಸಿದರೆ ಅವರನ್ನು ಅರ್ಬನ್ ನಕ್ಸಲ್ ಎಂದು ಕರೆದು ಮಾನಸಿಕವಾಗಿ ಮತ್ತು ದೈಹಿಕವಾಗಿ ಚಿತ್ರಹಿಂಸೆ ನೀಡುವ ಪ್ರವೃತ್ತಿ ಕಳೆದ ಒಂದು ದಶಕದಿಂದ ಆರಂಭವಾಗಿದೆ. ಈ ದೇಶಕ್ಕೆ ಸಾವಿರಾರು ಪ್ರತಿಭಾವಂತರನ್ನು ನೀಡಿದ, ಹೋರಾಟಗಾರರನ್ನು ನೀಡಿದ, ಬಡ ವಿದ್ಯಾರ್ಥಿಗಳ ಕನಸುಗಳಿಗೆ ಏಣಿ ಏರಿಸಿ ಕೊಟ್ಟ ಜೆಎನ್‌ಯುನಂತಹ ಸಂಸ್ಥೆಯ ಮೇಲೆ ಸರಕಾರದ ನೇತೃತ್ವದಲ್ಲೇ ನಡೆದ ದಾಳಿಗಳನ್ನು ನಾವು ನೋಡಿದ್ದೇವೆ. ವಿದ್ಯಾರ್ಥಿಗಳಲ್ಲಿ ವಿಶ್ವವಿದ್ಯಾನಿಲಯಗಳು ಪ್ರಶ್ನಿಸುವುದನ್ನು ಕಲಿಸಬೇಕು. ದುರದೃಷ್ಟವಶಾತ್ ವಿಶ್ವವಿದ್ಯಾನಿಲಯಗಳಲ್ಲಿ ಇಂದು ವಿದ್ಯಾರ್ಥಿಗಳು ಎದ್ದು ನಿಂತು ಪ್ರಶ್ನಿಸಿದರೆ ಅವರು ಆತ್ಮಹತ್ಯೆ ಮಾಡಿ ಬದುಕನ್ನೇ ಮುಗಿಸಬೇಕಾದ ಸ್ಥಿತಿಯಿದೆ. ರೋಹಿತ್ ವೇಮುಲಾ ಪ್ರಕರಣ ಈ ದೇಶದಲ್ಲಿ ವಿಶ್ವವಿದ್ಯಾನಿಲಯಗಳು ಹೇಗೆ ಜಾತೀವಾದಿಗಳು ಮತ್ತು ಕೋಮುವಾದಿಗಳ ಕಪಿಮುಷ್ಟಿಯಲ್ಲಿವೆ ಎನ್ನುವುದನ್ನು ವಿಶ್ವಕ್ಕೆ ಜಾಹೀರು ಪಡಿಸಿತ್ತು. ಇಂದಿಗೂ ವಿಶ್ವವಿದ್ಯಾನಿಲಯಗಳಲ್ಲಿ ಜಾತಿಯ ಹೆಸರಲ್ಲಿ ನಿಂದನೆಗಳು ನಡೆಯುತ್ತವೆ. ಜಾತಿ ದೌರ್ಜನ್ಯಗಳಿಗೆ ಹೇಸಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡುತ್ತಿದ್ದಾರೆ. ಆದರೂ ಇದನ್ನು ತಡೆಯಲು ವಿಶ್ವವಿದ್ಯಾನಿಲಯಗಳು ವಿಫಲವಾಗುತ್ತಿವೆ. ಯಾಕೆಂದರೆ ವಿಶ್ವವಿದ್ಯಾನಿಲಯದಲ್ಲಿರುವ ಕುಲಪತಿಗಳೇ ಆಳದಲ್ಲಿ ಕೋಮುವಾದಿಗಳು ಮತ್ತು ಜಾತೀವಾದಿಗಳಾಗಿದ್ದಾರೆ.
ಕೋಮುಹಿಂಸಾಚಾರಗಳಿಗೆ ಕರಾವಳಿ ಕುಖ್ಯಾತವಾಗಿದೆ. ಇಂತಹ ಕರಾವಳಿಯಲ್ಲಿ ವಿದ್ಯಾರ್ಥಿಗಳ ನಡುವೆ ಜಾತ್ಯತೀತತೆ, ಸೌಹಾರ್ದಗಳನ್ನು ಬಿತ್ತಿ ಉತ್ತಮ ಸಮಾಜವೊಂದನ್ನು ನಿರ್ಮಾಣ ಮಾಡುವುದು ಮಂಗಳೂರು ವಿಶ್ವವಿದ್ಯಾನಿಲಯದ ಕರ್ತವ್ಯವಾಗಬೇಕಾಗಿತ್ತು. ದುರದೃಷ್ಟವಶಾತ್, ಕಳೆದ ವರ್ಷ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಪರಿಷತ್ ಉದ್ಘಾಟನೆಗೆ ಕುಲಪತಿಯ ನೇತೃತ್ವದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಕರೆಸಲಾಯಿತು. ಕರಾವಳಿಯ ಕೋಮುಗಲಭೆಗಳಿಗೆ ಕಲ್ಲಡ್ಕ ಪ್ರಭಾಕರ ಭಟ್ ಅವರು ನೀಡಿರುವ ಕೊಡುಗೆಗಳೇನು ಎನ್ನುವುದು ಇಲ್ಲಿನ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೂ ಗೊತ್ತಿದೆ. ತನ್ನ ಆರೆಸ್ಸೆಸ್ ಸಿದ್ಧಾಂತಗಳನ್ನು ಹರಡುವ ನಿಟ್ಟಿನಲ್ಲಿ ಇವರು ಶಾಲೆಗಳನ್ನು ಸ್ಥಾಪಿಸಿದ್ದಾರೆ ಮತ್ತು ಧರ್ಮದ ಹೆಸರಿನಲ್ಲೇ ತನ್ನ ಉದ್ಯಮಗಳನ್ನು ಬೆಳೆಸಿದ್ದಾರೆ ಎನ್ನುವುದನ್ನು ಹೊರತು ಪಡಿಸಿದರೆ ಇನ್ನಾವುದೇ ಅರ್ಹತೆಗಳು ಇವರಿಗಿಲ್ಲ. ತಮ್ಮ ಭಾಷಣಗಳಿಂದ ಕರಾವಳಿಯ ಸಾವಿರಾರು ಯುವಕರ ಮನಸ್ಸನ್ನು ಕಲುಷಿತಗೊಳಿಸಿ ಅವರನ್ನು ಗಲಭೆಗೆ ಅಣಿಗೊಳಿಸಿ ಜೈಲು ಸೇರಲು ಕಾರಣರಾದವರು ಇವರು. ಇಂತಹ ಸಂಘಪರಿವಾರ ಮುಖಂಡನನ್ನು ವಿಶ್ವವಿದ್ಯಾನಿಲಯದೊಳಗೆ ಕಾಲಿಡಲು ಬಿಡುವುದೇ ಅಪರಾಧ. ಆದರೆ ವಿಶ್ವವಿದ್ಯಾನಿಲಯದ ಕುಲಪತಿಗಳು ಇವರನ್ನು ವಿಶ್ವವಿದ್ಯಾನಿಲಯಕ್ಕೆ ಗಣ್ಯ ಅತಿಥಿಯಾಗಿ ಆಹ್ವಾನಿಸಿದ್ದಷ್ಟೇ ಅಲ್ಲ, ಶಾಲು ಹೊದಿಸಿ ಸನ್ಮಾನಿಸಿದರು. ಇದರ ವಿರುದ್ಧ ಹಲವು ಸಂಘಟನೆಗಳು ತಮ್ಮ ಪ್ರತಿಭಟನೆಗಳನ್ನು ದಾಖಲಿಸಿದ್ದರೂ ಅವುಗಳಿಗೆ ಈ ಕುಲಪತಿ ಕಿವಿಗೊಡಲಿಲ್ಲ. ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳು ಕೆಲವು ರಾಜಕೀಯ ಪಕ್ಷಗಳ ಹಿಂಬಾಲಕರಾಗಿ ದಾಂಧಲೆ ಮಾಡುವುದು ಸುದ್ದಿಯಲ್ಲಿರುತ್ತವೆ. ಆದರೆ ಇಂತಹ ವಿದ್ಯಾರ್ಥಿಗಳು ಆಕಾಶದಿಂದ ಉದುರುವುದಿಲ್ಲ. ಅವರನ್ನು ಇಂತಹ ಕುಲಪತಿಗಳು, ಉಪನ್ಯಾಸಕರೇ ಸೃಷ್ಟಿಸಿರುತ್ತಾರೆ. ಮಂಗಳೂರು ವಿಶ್ವವಿದ್ಯಾನಿಲಯಗಳಲ್ಲಿ ಜಾತ್ಯತೀತ ವಿರೋಧಿ ಸಭೆ, ಸಮಾರಂಭಗಳು ಸದಾ ಸುದ್ದಿಯಾಗುತ್ತಿರುತ್ತವೆ. ಕಾಲೇಜುಗಳ ಮುಖ್ಯಸ್ಥರು ಪ್ರಜ್ಞಾಪೂರ್ವಕವಾಗಿಯೇ ಇಂತಹ ಸಭೆಗಳನ್ನು ಹಮ್ಮಿಕೊಳ್ಳುತ್ತಾರೆ. ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿಕೊಂಡ, ದ್ವೇಷ ಭಾಷಣಗಳನ್ನು ಮಾಡುವ ರಾಜಕೀಯ ನಾಯಕರನ್ನು ವಿಶ್ವವಿದ್ಯಾನಿಲಯದೊಳಗೆ ಕರೆತಂದು ಅದರ ಆವರಣವನ್ನು ಕಳಂಕಗೊಳಿಸುತ್ತಾರೆ. ವಿದ್ಯಾರ್ಥಿಗಳ ನಡುವೆಯೇ ಬಿರುಕುಗಳನ್ನು ಸೃಷ್ಟಿಸುತ್ತಾರೆ.
ಇತ್ತೀಚೆಗೆ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳು ಅಂಬೇಡ್ಕರ್‌ರನ್ನು, ಸಂವಿಧಾನವನ್ನು, ಮೀಸಲಾತಿಯನ್ನು ಅಣಕಿಸಿ ಮಾಡಿರುವ ಪ್ರಹಸನ ಸಾಕಷ್ಟು ಸುದ್ದಿಯಾಯಿತು. ಇಲ್ಲಿ ಬಲಿಪಶುಗಳಾಗಿದ್ದು ವಿದ್ಯಾರ್ಥಿಗಳು. ಆದರೆ ಅಂತಹದೊಂದು ಪ್ರಹಸನವನ್ನು ಮಾಡಿ ಪ್ರದರ್ಶಿಸಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಿದ ಉಪನ್ಯಾಸಕರು, ಸಂವಿಧಾನ ವಿರೋಧಿ ಚಿಂತನೆಗಳನ್ನು ವಿದ್ಯಾರ್ಥಿಗಳ ತಲೆಯಲ್ಲಿ ತುಂಬಿದ ಶಾಲಾ ಮುಖ್ಯಸ್ಥರೇ ಆ ಪ್ರಕರಣಕ್ಕೆ ನೇರ ಅಪರಾಧಿಗಳು. ವಿದ್ಯಾರ್ಥಿಗಳು ಮಾಡಿದ ಪ್ರಹಸನವಷ್ಟೇ ಇಲ್ಲಿ ಪ್ರಶ್ನೆಯಲ್ಲ. ಸಂವಿಧಾನದ ಕುರಿತಂತೆ, ಅಂಬೇಡ್ಕರ್ ಕುರಿತಂತೆ ಕಾಲೇಜೊಂದರಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿಗಳನ್ನು ನೀಡುತ್ತಿರುವವರು ಯಾರು? ಇಂದು ವಿದ್ಯಾವಂತರೆಂದು ಕರೆಸಿಕೊಂಡವರೇ ಹೆಚ್ಚು ಜಾತೀವಾದಿಗಳು, ಕೋಮುವಾದಿಗಳು, ಮೂಲಭೂತವಾದಿಗಳು ಆಗಲು ಕಾರಣವೇನು? ಶಿಕ್ಷಣ ಕ್ಷೇತ್ರದಲ್ಲಿ ಹಲವು ಸಾಧನೆಗಳನ್ನು ಮಾಡಿದ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಹೆಚ್ಚು ಕೋಮು ಹಿಂಸೆಗಳು ನಡೆಯಲು ಕಾರಣವೇನು? ಈ ಎಲ್ಲ ಪ್ರಶ್ನೆಗಳಿಗೆ ಸರಕಾರ ಉತ್ತರ ಹುಡುಕುವ ಪ್ರಯತ್ನ ನಡೆಸಬೇಕಾಗಿದೆ. ವಿಶ್ವವಿದ್ಯಾನಿಲಯಗಳನ್ನು ಮಾತ್ರವಲ್ಲ, ಪ್ರಾಥಮಿಕ ಶಾಲೆಗಳನ್ನು ಕೂಡ ಜಾತೀಯ ಶಕ್ತಿಗಳು ದುರ್ಬಳಕೆ ಮಾಡುತ್ತಿವೆ. ಪ್ರಾಥಮಿಕ ಶಾಲೆಗಳಲ್ಲಿ ಜಾತ್ಯತೀತ ವಿರೋಧಿ ಸಭೆಗಳು ನಡೆಯುತ್ತವೆ. ಆರೆಸ್ಸೆಸ್‌ಗೆ ಸಂಬಂಧಪಟ್ಟ ವಿಚಾರ ಸಂಕಿರಣಗಳು ನಡೆಯುತ್ತವೆ. ಪ್ರಾಥಮಿಕ ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ನೆಪದಲ್ಲಿ, ಆರೆಸ್ಸೆಸ್‌ನಂತಹ ಸಂಘಟನೆಗಳು ಈಗಾಗಲೇ ಹಲವು ಶಾಲೆಗಳನ್ನು ತನ್ನ ವಶ ಮಾಡಿಕೊಂಡಿವೆ. ಇವರ ಪ್ರಭಾವದಲ್ಲಿ ಬೆಳೆದ ವಿದ್ಯಾರ್ಥಿಗಳು ಸಂವಿಧಾನದ ಬಗ್ಗೆ, ಜಾತ್ಯತೀತ ಮೌಲ್ಯಗಳ ಬಗ್ಗೆ ಗೌರವವನ್ನು ಬೆಳೆಸಿಕೊಳ್ಳುವುದಾದರೂ ಹೇಗೆ ಸಾಧ್ಯ?
ಬರೇ ಕಟ್ಟು ನಿಟ್ಟಿನ ಸೂಚನೆಗಳಿಂದ ವಿಶ್ವವಿದ್ಯಾನಿಲಯಗಳಲ್ಲಿ, ಸರಕಾರಿ ಶಾಲೆಗಳಲ್ಲಿ ಜಾತ್ಯತೀತ ವಿರೋಧಿ ಶಕ್ತಿಗಳು ಪ್ರವೇಶಿಸದಂತೆ ತಡೆಯುವುದು ಸಾಧ್ಯವಿಲ್ಲ. ಇಂತಹ ಸಭೆಗಳು ನಡೆದ ದೂರು ಬಂದರೆ, ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ಕೋಮುವಾದಿ ನಾಯಕರು ವಿಶ್ವವಿದ್ಯಾನಿಲಯಗಳನ್ನು ಪ್ರವೇಶಿಸಿದ ಬಗ್ಗೆ ಮಾಹಿತಿಗಳು ದೊರಕಿದರೆ ತಕ್ಷಣ ಆಯಾ ಸಂಸ್ಥೆಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು ಸರಕಾರ ಮುಂದಾಗಬೇಕು. ಶಾಲೆ-ಕಾಲೇಜುಗಳ ಆವರಣದಲ್ಲಿ ಯಾವುದೇ ಧರ್ಮದ ಧಾರ್ಮಿಕ ಆಚರಣೆಗಳನ್ನು ಆಚರಿಸುವುದಕ್ಕೆ ಅವಕಾಶ ನೀಡಬಾರದು. ಈ ಹಿನ್ನೆಲೆಯಲ್ಲಿ ಸರಕಾರ ಒಂದು ಸ್ಪಷ್ಟ ನೀತಿಸಂಹಿತೆಯನ್ನು ರೂಪಿಸಲು ಮುಂದಾಗಬೇಕು. ಈ ಮೂಲಕ ವಿಶ್ವವಿದ್ಯಾನಿಲಯಗಳು ವಿಷ ವಿದ್ಯಾನಿಲಯಗಳಾಗುವುದನ್ನು ತಪ್ಪಿಸಬೇಕು.