ಬರದಿಂದ ತತ್ತರಿಸಿದ ರಾಜ್ಯ, ಕುಡಿಯುವ ನೀರಿನ ಸಮಸ್ಯೆ

Update: 2024-03-12 05:37 GMT

Photo: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮಳೆಗಾಲ ಆರಂಭವಾಗಲು ಇನ್ನೂ ಮೂರು ತಿಂಗಳು ಬೇಕು. ಈಗಲೇ ಬರದ ಹೊಡೆತದಿಂದ ತತ್ತರಿಸಿರುವ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸತೊಡಗಿದೆ. ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಅದರಲ್ಲೂ 194 ತಾಲೂಕುಗಳ ಪರಿಸ್ಥಿತಿ ದಾರುಣವಾಗಿದೆ. ಕಂದಾಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ರಾಜ್ಯದ 98 ತಾಲೂಕುಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿದೆ.ಮುಂಗಾರು ಆರಂಭಕ್ಕೆ ಮೊದಲು ಬೇಸಿಗೆಯಲ್ಲಿ ಒಂದೆರಡು ಮಳೆ ಬೀಳದಿದ್ದರೆ ಕುಡಿಯುವ ನೀರಿನ ಕೊರತೆ ಇನ್ನೂ ತೀವ್ರ ಸ್ವರೂಪ ತಾಳುವ ಸಂಭವವಿದೆ.ರಾಜ್ಯ ಸರಕಾರವೇನೂ ಸುಮ್ಮನೆ ಕುಳಿತಿಲ್ಲ. ಎಲ್ಲ ರಾಜ್ಯಗಳಿಗಿಂತ ಮೊದಲು ಬರಪೀಡಿತ ತಾಲೂಕುಗಳ ಪಟ್ಟಿಯನ್ನು ಸರಕಾರ ಘೋಷಿಸಿತ್ತು. ಕುಡಿಯುವ ನೀರು ಮತ್ತು ದನಕರುಗಳಿಗೆ ಮೇವಿನ ಕೊರತೆಯಾಗುವ ಪ್ರದೇಶಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ತಾಲೂಕು ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯ ಕಾರ್ಯಪಡೆಗಳು, ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರಗಳು ನಿರಂತರವಾಗಿ ಸಭೆಗಳನ್ನು ನಡೆಸುತ್ತಲೇ ಇವೆ. ಆದರೂ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸತೊಡಗಿದೆ.

ಈ ಸಲದ ಬೇಸಿಗೆ ಅತ್ಯಂತ ತೀವ್ರವಾಗಿದೆ. ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಸೇರಿದಂತೆ ರಾಜ್ಯದ ಬಹುತೇಕ ಭಾಗದ ಜನ ಬಿಸಿಲಿನ ಝಳದಿಂದ ಬಸವಳಿದು ಹೋಗಿದ್ದಾರೆ. ಬಹುತೇಕ ಜಲಮೂಲಗಳು ಬತ್ತಿ ಹೋಗಿವೆ. ಜಲಾಶಯಗಳ ನೀರಿನ ಸಂಗ್ರಹದ ಮಟ್ಟ ಕುಸಿದಿದೆ. ಅಂತರ್ಜಲದ ಮಟ್ಟವೂ ಕುಸಿದಿದೆ. ಕೊಳವೆ ಬಾವಿಗಳಿಂದ ನೀರೆತ್ತಲು ಆಗುತ್ತಿಲ್ಲ. ಕುಡಿಯುವ ನೀರಿಗಾಗಿ ಜನ ಬಾಯಿ ಬಾಯಿ ಬಿಡುತ್ತಿದ್ದಾರೆ. ಜಾನುವಾರುಗಳಿಗೂ ತೊಂದರೆಯಾಗಿದೆ. ಕಾಡಿನಲ್ಲಿ ಇರುವ ಪ್ರಾಣಿಗಳಿಗೂ ನೀರಿಲ್ಲ. ರಾಜ್ಯದ ಬಹುತೇಕ ನಗರಗಳು ಮತ್ತು ರಾಜಧಾನಿ ಬೆಂಗಳೂರಿನಲ್ಲಿ ವಾರಕ್ಕೊಮ್ಮೆ, ಹತ್ತು ದಿನಕ್ಕೊಮ್ಮೆ ಕುಡಿಯುವ ನೀರು ಬಿಡಲಾಗುತ್ತಿದೆ. ಮಾರ್ಚ್ ತಿಂಗಳಲ್ಲೇ ಈ ಪರಿಸ್ಥಿತಿ ಉಂಟಾದರೆ ಇನ್ನೆರಡು ತಿಂಗಳು ಕಳೆಯುವುದು ಹೇಗೆ?

ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಉಂಟಾಗಿ ಕುಡಿಯುವ ನೀರಿಗೂ ಪರದಾಡಬೇಕಾದ ಪರಿಸ್ಥಿತಿ ಉಂಟಾಗಿರುವಾಗ ಲೋಕಸಭಾ ಚುನಾವಣೆಯೂ ಬಂದಿದೆ. ರಾಜಕಾರಣಿಗಳು ಅವರು ಯಾವುದೇ ಪಕ್ಷದವರಾಗಿರಲಿ ಸಹಜವಾಗಿ ಚುನಾವಣೆ ಪ್ರಚಾರದಲ್ಲಿ ಮುಳುಗುತ್ತಾರೆ. ಆಡಳಿತ ಯಂತ್ರ ಚುನಾವಣೆ ಸಿದ್ಧತೆಯಲ್ಲಿ ತೊಡಗುತ್ತದೆ. ಇದು ಸಹಜ. ಆದರೆ ಯಾವುದೇ ಕಾರಣಕ್ಕೂ ಜನಸಾಮಾನ್ಯರಿಗೆ ಕುಡಿಯುವ ನೀರಿನ ತೊಂದರೆಯಾಗಬಾರದು.ಸರಕಾರದ ಮೊದಲ ಆದ್ಯತೆ ಜನರಿಗೆ, ದನಕರುಗಳಿಗೆ ಕುಡಿಯುವ ನೀರನ್ನು ಪೂರೈಸುವುದಾಗಿರಬೇಕು.

ಈ ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಂಡು ಟ್ಯಾಂಕರ್ ಮಾಫಿಯಾದವರು ಜನ ಸಾಮಾನ್ಯರನ್ನು ಸುಲಿಗೆ ಮಾಡದಂತೆ ಸರಕಾರ ಎಚ್ಚರ ವಹಿಸಬೇಕು. ಲಭ್ಯವಿರುವ ಜಲ ಮೂಲಗಳನ್ನು ಬಳಸಿಕೊಂಡು ಜನರಿಗೆ ಮೊದಲು ಕುಡಿಯುವ ನೀರನ್ನು ಒದಗಿಸಬೇಕು. ಈ ಸಂದರ್ಭದಲ್ಲಿ ಕೇಂದ್ರ ಸರಕಾರವೂ ನೆರವಿಗೆ ಬರಬೇಕು.

ಜೀವ ಜಲವನ್ನು ಕಾಪಾಡುವುದು ಬರೀ ಸರಕಾರದ ಜವಾಬ್ದಾರಿಯಲ್ಲ.ಸಮಾಜದ ಸಾಮೂಹಿಕ ಹೊಣೆಗಾರಿಕೆಯೂ ಅಗತ್ಯ. ಬರ ಪರಿಸ್ಥಿತಿ ಉಂಟಾಗಿದ್ದರೂ ಕೂಡಾ ಬೇಕಾಬಿಟ್ಟಿ ನೀರನ್ನು ವ್ಯಯ ಮಾಡುವವರ ಬಗೆಗೂ ಸರಕಾರ ಕ್ರಮ ಕೈಗೊಳ್ಳಬೇಕು. ಅಂಥವರನ್ನು ಗುರುತಿಸಿ ದಂಡನೆಗೆ ಗುರಿಪಡಿಸಬೇಕು. ಖಾಸಗಿ ಬೋರ್ ವೆಲ್‌ಗಳನ್ನು ಮತ್ತು ಟ್ಯಾಂಕರ್‌ಗಳನ್ನು ತಕ್ಷಣ ತನ್ನ ವಶಕ್ಕೆ ತೆಗೆದುಕೊಂಡು ನೀರು ಮಾರಾಟ ದಂಧೆಗೆ ಕಡಿವಾಣ ಹಾಕಬೇಕು. ಈಗ ಸಾಮಾನ್ಯವಾಗಿ ಒಂದು ಟ್ಯಾಂಕರ್ ನೀರು ಮೂರರಿಂದ ನಾಲ್ಕು ಸಾವಿರ ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಶ್ರೀಮಂತರೇನೋ ಹಣ ಕೊಟ್ಟು ಖರೀದಿಸಬಹುದು, ಜನಸಾಮಾನ್ಯರು ಇಷ್ಟು ದುಬಾರಿ ಮೊತ್ತ ತೆತ್ತು ಖರೀದಿಸಲು ಅಸಾಧ್ಯವಾಗುತ್ತದೆ.

ಸಾಮಾನ್ಯವಾಗಿ ಕೆಲವು ಕಡೆ ನೀರಿನ ತೀವ್ರ ಕೊರತೆಯುಂಟಾಗಿದ್ದರೆ, ಇನ್ನು ಕೆಲವು ಕಡೆ ನೀರಿನ ಅನುಕೂಲ ಇದ್ದವರು ನಿತ್ಯವೂ ಕಾರು, ದ್ವಿಚಕ್ರ ವಾಹನ ಇತ್ಯಾದಿ ವಾಹನಗಳನ್ನು ತೊಳೆಯಲು ನೀರನ್ನು ಉಪಯೋಗಿಸುವುದನ್ನು ತಡೆಯಬೇಕು. ನೀರಿನ ಅಪವ್ಯಯಕ್ಕೆ ಅವಕಾಶ ನೀಡಬಾರದು. ಇಂಥ ಪರಿಸ್ಥಿತಿಯಲ್ಲಿ ಜನರು ನೀರನ್ನು ಮಿತವಾಗಿ ಬಳಸುವುದು ಅಗತ್ಯವಾಗಿದೆ.ಇನ್ನೂ ಮೂರು ತಿಂಗಳು ಪರಿಸ್ಥಿತಿ ಗಂಭೀರವಾಗಿರುವುದರಿಂದ ಎಚ್ಚರ ವಹಿಸಬೇಕಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಕಡೆ ಬರ ನಿರ್ವಹಣೆಯ ಹೊಣೆಗಾರಿಕೆಯನ್ನು ಕೆಲ ಸಮಯದವರೆಗಾದರೂ ಸರಕಾರ ಒಂದು ನಿರ್ದಿಷ್ಟ ಇಲಾಖೆಗೆ ವಹಿಸಬೇಕು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂತೆ ಹಲವು ಯೋಜನೆಗಳು ಹೆಸರಿಗೆ ಮಾತ್ರ ಇವೆ. ಕೇಂದ್ರ ಮತ್ತು ರಾಜ್ಯ ಸರಕಾರದ ಸಹ ಭಾಗಿತ್ವದ ಜಲ ಜೀವನ ಯೋಜನೆ ಇದ್ದರೂ ಇಂಥ ಸಂದರ್ಭದಲ್ಲಿ ಅದು ಉಪಯೋಗಕ್ಕೆ ಬರುವುದಿಲ್ಲ. ಸರಕಾರ ತಕ್ಷಣ ಕುಡಿಯುವ ನೀರು ಒದಗಿಸಲು ಯುದ್ಧೋಪಾದಿಯಲ್ಲಿ ಕಾರ್ಯೋನ್ಮುಖವಾಗಬೇಕು.

ಈ ಪರಿಸರ ಮನುಷ್ಯರಿಗೆ ಮಾತ್ರ ಸೇರಿದ್ದಲ್ಲ. ಇಲ್ಲಿ ಉಸಿರಾಡುವ ಪ್ರಾಣಿ, ಪಕ್ಷಿ ಸೇರಿದಂತೆ ಸಕಲ ಜೀವ ಚರಗಳಿಗೆ ಸೇರಿದ್ದು. ಇಲ್ಲಿನ ಗಾಳಿ, ನೀರು ಇವೆಲ್ಲ ಎಲ್ಲರ ಬಳಕೆಗೆ ಇರುವಂಥ ನೈಸರ್ಗಿಕ ಸಂಪನ್ಮೂಲಗಳು. ಹಾಗಾಗಿ ನಾಗರಿಕರು ಮಾತ್ರವಲ್ಲ ದನಕರುಗಳು ಮತ್ತು ಕಾಡಿನಲ್ಲಿ ಇರುವ ಪ್ರಾಣಿಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಸರಕಾರ ನೋಡಿಕೊಳ್ಳಬೇಕಾಗಿದೆ.ಇದರಲ್ಲಿ ಪಕ್ಷ ರಾಜಕಾರಣ ಅಡ್ಡ ಬರಬಾರದು.

ಇನ್ನು ರಾಜಧಾನಿ ಬೆಂಗಳೂರಿನ ನೀರಿನ ಸಮಸ್ಯೆ ಭೀಕರ ಎಂಬಂತೆ ಕೆಲ ಮಾಧ್ಯಮಗಳಲ್ಲಿ ಬರುತ್ತಿದೆ. ಆದರೆ ಜಲ ಮಂಡಲಿ ಅಧ್ಯಕ್ಷರ ಪ್ರಕಾರ ಜುಲೈ ಅಂತ್ಯದವರೆಗೆ ನೀರು ಪೂರೈಕೆಗೆ ತೊಂದರೆಯಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಈ ಕುರಿತು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಸದ್ಯಕ್ಕೆ ರಾಜಧಾನಿಯ ಜನತೆ ಆತಂಕ ಪಡಬೇಕಿಲ್ಲ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News