ತೊಳೆಯಬೇಕಾದುದು ದಲಿತರ ಪಾದವನ್ನಲ್ಲ, ನಮ್ಮ ಮೆದುಳನ್ನು

Update: 2023-07-10 04:14 GMT

ಮಧ್ಯ ಪ್ರದೇಶದಲ್ಲಿ ಆದಿವಾಸಿಯೊಬ್ಬನ ಮೇಲೆ ಬಿಜೆಪಿ ಮುಖಂಡನೊಬ್ಬ ಮೂತ್ರ ವಿಸರ್ಜನೆ ಮಾಡಿದ ಪ್ರಕರಣದ ಬಳಿಕ, ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಮತ್ತೆ ಚರ್ಚೆಗೆ ಬರುತ್ತಿವೆ. ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಎಚ್ಚೆತ್ತುಕೊಂಡರು. ಮಧ್ಯಪ್ರದೇಶದಲ್ಲಿ ಬುಡಕಟ್ಟು ಸಮುದಾಯದ ಮತಗಳು ಅತ್ಯಂತ ನಿರ್ಣಾಯಕ. ಮಧ್ಯಪ್ರದೇಶದಲ್ಲಿ ಆದಿವಾಸಿ ಸಮುದಾಯಗಳನ್ನು ತಮ್ಮ ದ್ವೇಷ ರಾಜಕಾರಣಕ್ಕೆ ಬಳಸಿಕೊಳ್ಳಲು ಸಂಘಪರಿವಾರ ಸಂಘಟನೆಗಳು ದೊಡ್ಡ ಮಟ್ಟದ ಆಂದೋಲನವನ್ನೇ ನಡೆಸುತ್ತಿವೆ. ಮಧ್ಯಪ್ರದೇಶದ ಜನಸಂಖ್ಯೆಯ ಶೇ. ೨೧ರಷ್ಟು ದಲಿತ ಸಮುದಾಯವಿದ್ದು, ವಿಧಾನಸಭೆಯ ಚುನಾವಣೆಯಲ್ಲಿ ಬುಡಕಟ್ಟು ಸಂಘಟನೆಗಳು ಈ ಬಾರಿ ನೇರವಾಗಿ ಕಣಕ್ಕಿಳಿಯಲು ಮುಂದಾಗಿವೆ. ಇಂತಹ ಸಂದರ್ಭದಲ್ಲಿ ಬಿಜೆಪಿಯ ನಾಯಕನೆಂದು ಗುರುತಿಸಿಕೊಂಡ ವ್ಯಕ್ತಿಯೊಬ್ಬ ಆದಿವಾಸಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣ ಮುಖ್ಯಮಂತ್ರಿಯ ನಿದ್ದೆಕೆಡಿಸುವುದು ಸಹಜವೇ. ಘಟನೆ ನಡೆದ ಎರಡೇ ದಿನದಲ್ಲಿ ಅವರು ಆದಿವಾಸಿ ಸಂತ್ರಸ್ತನ ಬಳಿಗೆ ತೆರಳಿ ಆತನ ಪಾದ ತೊಳೆಯುವ ಮೂಲಕ ಪಶ್ಚಾತ್ತಾಪ ಪಟ್ಟರು. ಆದರೆ ಮಧ್ಯಪ್ರದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯ ಇದು ಮೊದಲನೆಯದೂ ಅಲ್ಲ, ಕೊನೆಯದೂ ಅಲ್ಲ. ಒಂದು ವೇಳೆ ಮೂತ್ರ ಹೊಯ್ದವನು ಬಿಜೆಪಿಯಲ್ಲಿ ಗುರುತಿಸಿಕೊಳ್ಳದೇ ಇದ್ದಿದ್ದರೆ ಮುಖ್ಯಮಂತ್ರಿ ಈ ಬಗ್ಗೆ ಕನಿಷ್ಠ ಖಂಡನಾ ಹೇಳಿಕೆಯನ್ನು ಕೂಡ ನೀಡುತ್ತಿರಲಿಲ್ಲ. ಒಬ್ಬ ಆದಿವಾಸಿಯ ಪಾದ ತೊಳೆಯುವ ಮೂಲಕ ಬಿಜೆಪಿಯ ಮತಗಳಿಗೆ ಅಂಟಿಕೊಂಡ ಕಳಂಕವನ್ನು ತೊಳೆಯುವ ಪ್ರಯತ್ನವನ್ನಷ್ಟೇ ಅವರು ಮಾಡಿದ್ದಾರೆ.

ಹೀಗೆ ಅವರು ಪಾದ ತೊಳೆದ ಮೂರೇ ದಿನಗಳಲ್ಲಿ ದಲಿತರಿಗೆ ಮಲ ತಿನ್ನಿಸಿದ ಪ್ರಕರಣವೊಂದು ವರದಿಯಾಗಿದೆ. ಮಾಧ್ಯಮದಲ್ಲಿ ಪ್ರಕಟವಾಗಿರುವಂತೆ ಈ ದಲಿತ ಯುವಕರಿಗೆ ಮಲ ತಿನ್ನಿಸುವ ಪ್ರಯತ್ನ ನಡೆಸಿದ್ದು, ಚಪ್ಪಲಿ ಹಾರ ಹಾಕಿ ದೌರ್ಜನ್ಯವೆಸಗಿರುವುದು ಮುಸ್ಲಿಮ್ ಕುಟುಂಬ. ತಮ್ಮ ಮಗಳಿಗೆ ದೂರವಾಣಿ ಮೂಲಕ ಅಶ್ಲೀಲವಾಗಿ ವರ್ತಿಸುತ್ತಿದ್ದರು ಎಂದು ಆ ಇಬ್ಬರು ದಲಿತ ಯುವಕರನ್ನು ಮನೆಗೆ ಕರೆಸಿ ಬಳಿಕ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಮಾತ್ರವಲ್ಲ ಅವರಿಗೆ ಚಪ್ಪಲಿ ಹಾರ ಹಾಕಿ, ಮಲ ತಿನ್ನಿಸುವ ಪ್ರಯತ್ನ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದು ನಿಜವೇ ಆಗಿದ್ದರೆ ಅತ್ಯಂತ ಆಘಾತಕಾರಿಯಾಗಿದೆ. ಈ ದೇಶದಲ್ಲಿ ಸ್ವತಃ ಮುಸ್ಲಿಮರೇ ಬೇರೆ ಬೇರೆ ಕಾರಣಗಳಿಂದ ಹಲ್ಲೆ, ದೌರ್ಜನ್ಯಗಳಿಗೆ ಒಳಗಾಗುತ್ತಿದ್ದಾರೆ. ದನ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಬರ್ಬರವಾಗಿ ಅವರನ್ನು ಥಳಿಸಿ ಕೊಲ್ಲುವ ಘಟನೆಗಳು ಪ್ರತಿ ದಿನ ವರದಿಯಾಗುತ್ತವೆ. ಒಂದು ಕಾಲದಲ್ಲಿ ಜಾತಿಯ ಅಸ್ಪಶ್ಯತೆ, ಶೋಷಣೆಯನ್ನು ವಿರೋಧಿಸಿ ಮತಾಂತರವಾದವರೇ ಈಗಿನ ಮುಸ್ಲಿಮರು. ಇಂದು ರಾಜಕೀಯ ಕಾರಣಗಳಿಗಾಗಿ ಬೇರೆಯೇ ರೀತಿಯ ಅಸ್ಪಶ್ಯತೆಯನ್ನು ಅನುಭವಿಸುತ್ತಾ ಬದುಕುತ್ತಿದ್ದಾರೆ. ದಲಿತರ ನೋವುಗಳನ್ನು ಈ ದೇಶದ ಮುಸ್ಲಿಮರಿಗಿಂತ ಚೆನ್ನಾಗಿ ಇನ್ನಾರೂ ತಮ್ಮದಾಗಿಸಿಕೊಳ್ಳುವುದು ಅಸಾಧ್ಯ. ಇಸ್ಲಾಮ್ ಧರ್ಮದಲ್ಲಿ ಜಾತಿ, ಮೇಲು-ಕೀಳುಗಳಿಲ್ಲ ಎಂದು ಹೇಳಲಾಗುತ್ತದೆಯಾದರೂ, ಭಾರತದಲ್ಲಿ ಮತಾಂತರವಾದ ಮುಸ್ಲಿಮರ ಆಳದಲ್ಲಿ ಜಾತೀಯತೆ ಬಿಟ್ಟೂ ಬಿಡದಂತೆ ಉಳಿದುಕೊಂಡಿರುವುದು ಸುಳ್ಳಲ್ಲ. ಎಲ್ಲ ಜಾತಿ, ಧರ್ಮಗಳ ಜನರು ದಲಿತರ ಮೇಲೆ ದೌರ್ಜನ್ಯಗಳನ್ನು ಎಸಗಿದ್ದಾರೆ. ಎಸಗುತ್ತಿದ್ದಾರೆ. ಶೋಷಿತ ಸಮುದಾಯಗಳೆಂದು ಗುರುತಿಸಿಕೊಂಡ ಜಾತಿಗಳು ಕೂಡ ತಮಗಿಂತ ಕೆಳಜಾತಿಯೆಂದು ಗುರುತಿಸಲ್ಪಟ್ಟವರ ಜೊತೆಗೆ ಅಸ್ಪಶ್ಯತೆಯನ್ನು ಪಾಲಿಸುತ್ತಿರುವುದು ಭಾರತದ ದುರಂತಗಳಲ್ಲಿ ಒಂದು. ಇಂದಿನ ದಿನಗಳಲ್ಲಿ ಶೋಷಿತ ಸಮುದಾಯವಾಗಿರುವ ದಲಿತರ ನೋವು ನಲಿವುಗಳನ್ನು ಮುಸ್ಲಿಮ್ ಸಮುದಾಯ ತಮ್ಮದಾಗಿಸಿಕೊಂಡು ಅವರ ಜೊತೆಗೆ ನಿಲ್ಲುವುದು ಅತ್ಯಗತ್ಯವಾಗಿದೆ. ಇಂತಹ ಸಂದರ್ಭದಲ್ಲಿ ಮುಸ್ಲಿಮ್ ಕುಟುಂಬವೇ ದಲಿತರ ಮೇಲೆ ಅತ್ಯಂತ ಹೀನಾಯವಾಗಿ ವರ್ತಿಸಿರುವುದು ಆಘಾತಕಾರಿ. ಯುವಕರು ತಮ್ಮ ಹೆಣ್ಣು ಮಕ್ಕಳ ಜೊತೆಗೆ ಕೆಟ್ಟದಾಗಿ ನಡೆದುಕೊಂಡಿದ್ದರೆ ಅವರನ್ನು ಶಿಕ್ಷಿಸಲು ಕಾನೂನು ರೀತಿಯ ಬೇರೆ ಬೇರೆ ದಾರಿಗಳಿದ್ದವು. ಒಂದು ವೇಳೆ ಆರೋಪಿಗಳ ಸ್ಥಾನದಲ್ಲಿ ಮೇಲ್ಜಾತಿಯ ಜನರಿದ್ದರೆ ಅವರೊಂದಿಗೆ ಇದೇ ರೀತಿಯಲ್ಲಿ ಆ ಕುಟುಂಬ ವರ್ತಿಸುತ್ತಿತ್ತೆ? ಆರೋಪಿಗಳು ದಲಿತರು ಎಂದಾಕ್ಷಣ ಅವರ ಮೇಲೆ ಮೂತ್ರ ವಿಸರ್ಜನೆಗೈಯ್ದು, ಮಲತಿನ್ನಿಸಿ ಅಥವಾ ಬೂಟು ನೆಕ್ಕಿಸಿ ಅವರಿಗೆ ಶಿಕ್ಷೆ ನೀಡುವ ಮನಸ್ಥಿತಿಯ ಹಿಂದೆ ಜಾತೀಯತೆ ಆಳವಾಗಿ ಕೆಲಸ ಮಾಡುತ್ತಿದೆ. ಇಂತಹ ಕೃತ್ಯದ ಮೂಲಕ ಆ ಮುಸ್ಲಿಮ್ ಕುಟುಂಬ ತಮ್ಮದೇ ಧಾರ್ಮಿಕ ಮೌಲ್ಯಗಳಿಗೂ ಅಪಚಾರವನ್ನು ಎಸಗಿದೆ.

ಮಧ್ಯ ಪ್ರದೇಶದ ಮುಖ್ಯಮಂತ್ರಿ ಆದಿವಾಸಿಯ ಪಾದ ತೊಳೆದ ಎರಡೇ ದಿನಗಳಲ್ಲಿ ದಲಿತರ ಮೇಲೆ ಇನ್ನಷ್ಟು ದೌರ್ಜನ್ಯಗಳು ನಡೆದಿರುವುದು ವರದಿಯಾಗಿವೆೆ. ಒಂದು ಪ್ರಕರಣದಲ್ಲಿ ದಲಿತ ಯುವಕನಿಗೆ ಶೂ ನೆಕ್ಕುವಂತೆ ಒತ್ತಾಯಿಸಲಾಗಿದೆ. ಮುಖ್ಯಮಂತ್ರಿಯ ಪ್ರಹಸನದಿಂದ ಮಧ್ಯಪ್ರದೇಶದ ಮೇಲ್ಜಾತಿಯ ಜನರ ಮೆದುಳಲ್ಲಿ ಅಂಟಿರುವ ಜಾತಿಯ ಮಲವನ್ನು ಶುಚಿಗೊಳಿಸುವುದು ಸಾಧ್ಯವಿಲ್ಲ ಎನ್ನುವುದನ್ನು ಇದು ಹೇಳುತ್ತಿದೆ. ಆದಿವಾಸಿಯ ಪಾದ ತೊಳೆಯುವ ಮೂಲಕ ಮುಖ್ಯಮಂತ್ರಿ ಮಾಧ್ಯಮಗಳಲ್ಲಿ ಸುದ್ದಿಯಾದರೇ ಹೊರತು, ಹಾಗೆ ಪಾದ ತೊಳೆಸಿಕೊಂಡಂತಹ ಆದಿವಾಸಿಯನ್ನು ಯಾರೂ ದೇವಸ್ಥಾನಗಳ ಒಳಗೆ ಸೇರಿಸಿಕೊಳ್ಳುವುದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಆತನಿಗೆ ವಿಶೇಷ ಗೌರವವೂ ದೊರಕುವುದಿಲ್ಲ. ಕೊಳೆಯಾಗಿರುವುದು ಆದಿವಾಸಿಯ ಪಾದವಲ್ಲ. ಅದನ್ನು ತೊಳೆಯುವ ಅಗತ್ಯವೂ ಇಲ್ಲ. ಮೆದುಳು ಇರಬೇಕಾದ ಜಾಗದಲ್ಲಿ ಜಾತೀಯ ಮಲ ತುಂಬಿಕೊಂಡಿರುವುದು ಈ ದುರಂತಗಳಿಗೆಲ್ಲ ಕಾರಣ. ಆದುದರಿಂದ ಮೊದಲು ಮಧ್ಯ ಪ್ರದೇಶದ ಮುಖ್ಯಮಂತ್ರಿ ತಮ್ಮ ಮೆದುಳನ್ನು ತೊಳೆಯುವ ಪ್ರಯತ್ನ ಮಾಡಬೇಕು. ಸಾಮಾಜಿಕವಾಗಿ ಸಮಾನ ಬದುಕನ್ನು ದಲಿತರಿಗೆ, ಆದಿವಾಸಿಗಳಿಗೆ ನೀಡಿದಾಗ ಮಾತ್ರ ಇಂತಹ ಘಟನೆಗಳು ನಡೆಯದೇ ಇರಲು ಸಾಧ್ಯ. ದಲಿತರು, ಆದಿವಾಸಿಗಳನ್ನು ಧರ್ಮ ರಾಜಕಾರಣಕ್ಕೆ, ದ್ವೇಷ ರಾಜಕಾರಣಕ್ಕೆ ಬಳಸುತ್ತಿರುವ ಸಂಘಪರಿವಾರದ ನಾಯಕರು ಕನಿಷ್ಠ ಅವರಿಗೆ ತಮ್ಮದೇ ಧರ್ಮದಲ್ಲಿ ಸಮಾನ ಅವಕಾಶ ಸಿಗುವಂತೆ ನೋಡಿಕೊಳ್ಳಬೇಕು. ದೇವಸ್ಥಾನಗಳಲ್ಲಿ ಪ್ರವೇಶ, ಸಮಾನ ಪಂಕ್ತಿಯಲ್ಲಿ ಊಟ, ಸಾರ್ವಜನಿಕ ಸ್ಥಳಗಳಲ್ಲಿ ಸಮಾನ ಗೌರವ ಇವೆಲ್ಲವನ್ನು ನೀಡಲು ಆರಂಭಿಸಿದಾಗ ಮಾತ್ರ ಮೆದುಳಿಗೆ ಅಂಟಿರುವ ಮಲ ಶುಚಿಗೊಳ್ಳಲು ಸಾಧ್ಯ. ೨೦೧೯ರಲ್ಲಿ ನಡೆದ ಕುಂಭಮೇಳ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪೌರಕಾರ್ಮಿಕರ ಪಾದತೊಳೆಯುವ ಪ್ರಹಸನ ನಡೆಸಿದ್ದನ್ನು ನಾವಿಲ್ಲಿ ಸ್ಮರಿಸಬೇಕು. ಕುಂಭಮೇಳದಲ್ಲಿ ಸಾವಿರಾರು ಪೌರ ಕಾರ್ಮಿಕರು ಮಲಹೊರುವ ಕೆಲಸವನ್ನು ಮಾಡಿದರು. ಕುಂಭಮೇಳದಲ್ಲಿ ಶುಚಿತ್ವ ಆಂದೋಲನಕ್ಕೆ ದುಡಿದವರು ಎನ್ನುವ ಕಾರಣವನ್ನು ಮುಂದೊಡ್ಡಿ ಸಾಂಕೇತಿಕವಾಗಿ ನಾಲ್ವರು ಪೌರ ಕಾರ್ಮಿಕರ ಪಾದವನ್ನು ಅವರು ತೊಳೆದರು. ನಿಜಕ್ಕೂ ಆ ಪೌರ ಕಾರ್ಮಿಕರ ಮೇಲೆ ಪ್ರಧಾನಿಗೆ ಗೌರವವಿದ್ದಿದ್ದರೆ ಅವರಿಂದ ಮನುಷ್ಯರ ಮಲಹೊರುವ ಕೆಲಸವನ್ನೇ ಮಾಡಿಸುತ್ತಿರಲಿಲ್ಲ. ಕುಂಭಮೇಳದಲ್ಲಿ ಮಲಹೊರುವ ವ್ಯವಸ್ಥೆಯನ್ನು ನಿಷೇಧಿಸಿ, ಪೌರ ಕಾರ್ಮಿಕರ ಗೌರವವನ್ನು ಎತ್ತಿ ಹಿಡಿಯುವುದು ಪ್ರಧಾನಿಯ ಹೊಣೆಗಾರಿಕೆಯಾಗಿತ್ತು. ಪೌರ ಕಾರ್ಮಿಕರಿಂದ ಇನ್ನೊಬ್ಬರ ಮಲವನ್ನು ಹೊರುವಂತೆ ಮಾಡಿ ಬಳಿಕ ಅವರ ಪಾದತೊಳೆಯುವ ನಾಟಕ ಮಾಡುವುದರಿಂದ ಈ ದೇಶದಲ್ಲಿ ದಲಿತರ ಬದುಕನ್ನು ಮೇಲೆತ್ತಲು ಸಾಧ್ಯವಿಲ್ಲ. ಆದುದರಿಂದಲೇ ಈ ದೇಶದಿಂದ ಮಲಹೊರುವ ಪದ್ಧತಿಯನ್ನು ಸಂಪೂರ್ಣ ನಿವಾರಿಸುವುದಕ್ಕೆ ನಮಗೆ ಸಾಧ್ಯವಾಗಿಲ್ಲ. ದುರಂತವೆಂದರೆ, ನಾವು ಮಲಹೊರುವ ಪದ್ಧತಿಯಿಂದ ಮಲ ತಿನ್ನಿಸುವ ಪದ್ಧತಿಯ ಕಡೆಗೆ ಹೊರಳುತ್ತಿದ್ದೇವೆ. ನಾಗರಿಕ ಸಮಾಜ ನಾಚಿ ತಲೆತಗ್ಗಿಸಬೇಕಾದ ವಿಷಯ ಇದು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News