‘ಯಕಃಶ್ಚಿತ್’ ಗಾದೆಗಳಿಗಾಗಿ ದಲಿತರು ತೆರುತ್ತಿರುವ ಬೆಲೆ!

Update: 2023-08-18 04:25 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕನ್ನಡದ ಖ್ಯಾತನಟನೊಬ್ಬ ಮಾಧ್ಯಮದ ಜೊತೆಗೆ ಮಾತನಾಡುವ ಸಂದರ್ಭದಲ್ಲಿ ಆಡಿದ ‘ಗಾದೆ ಮಾತಿ’ನ ಕಾರಣಕ್ಕೆ ಆತ ಜೈಲು ಸೇರುವಂತಹ ಸನ್ನಿವೇಶ ಸೃಷ್ಟಿಯಾಗಿದೆ. ಮಾತನಾಡುವ ಭರದಲ್ಲಿ ಬಳಸಿದ ಗಾದೆ ಮಾತನ್ನು ಮುಂದಿಟ್ಟು ಒಬ್ಬನ ಮೇಲೆ ಎಫ್ಐಆರ್ ದಾಖಲಿಸುವುದು ಎಷ್ಟು ಸರಿ ಎಂದು ಇದೇ ಸಂದರ್ಭದಲ್ಲಿ ಕೆಲವರು ಪ್ರಶ್ನಿಸುತ್ತಿದ್ದಾರೆ. ‘ಒಂದು ಯಕಃಶ್ಚಿತ್ ಗಾದೆ ಮಾತಿಗಾಗಿ ಇಷ್ಟೊಂದು ದ್ವೇಷ’ವೇ ಎಂದು ಸ್ವತಃ ನಟ ಉಪೇಂದ್ರ ಅವರೇ ತಮ್ಮ ಕ್ಷಮಾಯಾಚನೆಯಲ್ಲಿ ಕೇಳಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಶತಶತಮಾನಗಳಿಂದ ಈ ಗಾದೆ ಮಾತಿನ ಕಾರಣಕ್ಕಾಗಿಯೇ ದಲಿತರು ಯಾವೆಲ್ಲ ಕಷ್ಟನಷ್ಟಗಳನ್ನು ಅನುಭವಿಸುತ್ತಾ ಬಂದಿದ್ದಾರೆ ಎನ್ನುವ ಸಣ್ಣ ಅರಿವಾದರೂ ಈ ಸೃಜನಶೀಲ ನಟನಿಗೆ ಇದ್ದಿದ್ದರೆ ಆತ ತಾನು ಆಡಿದ ಮಾತನ್ನು ‘ಯಕಃಶ್ಚಿತ್’ ಎಂದು ಸಮರ್ಥಿಸಿಕೊಳ್ಳುತ್ತಿರಲಿಲ್ಲ. ಈ ಗಾದೆಯ ಮೂಲಕವೇ ಸಮಾಜ ಶತಮಾನಗಳಿಂದ ದಲಿತರು ಬದುಕುವ ಕೇರಿಯನ್ನು ಊರಿನಿಂದ ಹೊರಗಿಟ್ಟಿರುವುದು ಮಾತ್ರವಲ್ಲ, ಅಲ್ಲಿರುವ ಸರ್ವರನ್ನು ಕೊಳಕರು, ಹೊಲಸುಗಳು ಎಂದು ಅಧಿಕೃತ ಮೊಹರನ್ನು ಒತ್ತಿ ಅವರನ್ನು ಅಸ್ಪಶ್ಯರನ್ನಾಗಿಸಿದ್ದಾರೆ. ಮೇಲ್ಜಾತಿಯ ಜನರು ಈ ಗಾದೆಯನ್ನು ತಮ್ಮ ಮಾತುಗಳಲ್ಲಿ ಬಳಸುವ ಮೂಲಕ ದಲಿತ ಸಮುದಾಯವನ್ನು ನಿಂದಿಸುವುದರ ಜೊತೆಗೆ ತಮ್ಮನ್ನು ತಾವು ಶ್ರೇಷ್ಠರು ಎಂದು ಪ್ರತಿಪಾದಿಸುತ್ತಾ ಬಂದಿದ್ದಾರೆ. ಈ ಗಾದೆಯನ್ನು ಯಾವತ್ತಾದರೂ ಒಬ್ಬ ದಲಿತ ಸಮುದಾಯದ ವಿದ್ಯಾವಂತ ಯುವಕ ತನ್ನ ಆಡು ಮಾತಿನಲ್ಲಿ ಬಳಸಲು ಸಾಧ್ಯವೆ? ಅಥವಾ ಉಪೇಂದ್ರನಂತಹ ನಟ ಇಂತಹ ಗಾದೆಯನ್ನು ಆಡಿದಾಗ ದಲಿತ ಕೇರಿಯಲ್ಲಿ ಬದುಕಿ ಬಂದ ಯುವಕ ಅದನ್ನು ಸಹಿಸುವುದಾದರೂ ಸಾಧ್ಯವೆ? ಮೇಲ್ಜಾತಿಯ ನಟನೊಬ್ಬ ಗಾದೆಯ ಹೆಸರಿನಲ್ಲಿ ತನ್ನನ್ನು ಬಹಿರಂಗವಾಗಿ ‘ಹೊಲಸು’ ಎಂದು ದೂರವಿಟ್ಟಾಗ ಶೋಷಿತ ಸಮುದಾಯದ ವಿದ್ಯಾರ್ಥಿಯೊಬ್ಬ ‘ಹಿರಿಯ ನಟನೊಬ್ಬ ಬಾಯಿ ತಪ್ಪಿ ಆಡಿದ ಮಾತು’ ಎಂದು ನಗು ನಗುತ್ತಾ ಅದನ್ನು ಒಪ್ಪಿಕೊಳ್ಳಬೇಕಾದ ಹೃದಯ ವಿದ್ರಾವಕ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಉಪೇಂದ್ರನಂತಹ ನಟನಿಗೆ ಯಾಕೆ ಸಾಧ್ಯವಾಗಿಲ್ಲ? ಈ ಅಸೂಕ್ಷ್ಮ ಮನುಷ್ಯನಿಂದ ಈ ಸಮಾಜ ‘ಉಪೇಂದ್ರ’ನಂತಹ ಗಬ್ಬು ಸಿನಿಮಾನಗಳನ್ನಲ್ಲದೆ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ?

ಭಾರತದಲ್ಲಿ ಬೈಗುಳಕ್ಕೂ ಸಾಂಸ್ಕೃತಿಕ ಇತಿಹಾಸವಿದೆ. ಇಲ್ಲಿ ಪರಸ್ಪರ ಬೈಯುತ್ತಾ ಆಚರಿಸುವ ಹಬ್ಬಗಳಿವೆ. ದೇವರನ್ನು ‘ನಿಂದಿಸುವ’ ಭಜನೆಗಳಿವೆ. ಮಹಿಳೆಯರನ್ನು ಅತ್ಯಂತ ಕೀಳಾಗಿ ಚಿತ್ರಿಸುವ ಗಾದೆ ಮಾತುಗಳ ಬಹುದೊಡ್ಡ ಚರಂಡಿಯೇ ಪುರುಷ ಪ್ರಧಾನ ವ್ಯವಸ್ಥೆಯ ಹಿತ್ತಲಲ್ಲಿ ಹರಿಯುತ್ತಿದೆ. ತಮಾಷೆಗಾಗಿ ‘ಬೋ...ಮಗ’ ‘ಸೂ...ಮಗ’ ಎಂದು ಕರೆಯುವವರಿದ್ದಾರೆ. ಅವೆಲ್ಲವನ್ನು ಬದುಕಿನ ದೈನಂದಿನ ಭಾಷೆಯಾಗಿ ರೂಢಿಸಿಕೊಂಡಿದ್ದಾರೆ. ಭಾರತೀಯ ಸಮಾಜ ಹೆಣ್ಣನ್ನು ಎಷ್ಟು ನಿಕೃಷ್ಟವಾಗಿ ನಡೆಸಿಕೊಂಡು ಬರುತ್ತಿದೆ ಎನ್ನುವುದಕ್ಕೆ ಹಿಡಿದ ಕನ್ನಡಿಯಾಗಿದೆ ಈ ಗಾದೆಗಳು. ನಾವು ದೈನಂದಿನ ಬದುಕಿನಲ್ಲಿ ಬಳಸುವ ಸಾಮಾನ್ಯ ಪದವೆಂದು ಅದನ್ನು ಸಮರ್ಥಿಸಿಕೊಳ್ಳುವವರು, ಪರೋಕ್ಷವಾಗಿ ಹೆಣ್ಣನ್ನು ನಿಂದಿಸುವುದು ತಮ್ಮ ಅವಿಭಾಜ್ಯ ಹಕ್ಕೆಂದು ಭಾವಿಸುತ್ತಾರೆ. ಇಲ್ಲಿ ಮೇಲ್ಜಾತಿಗಳನ್ನು, ಮುಸ್ಲಿಮರನ್ನು, ಕ್ರೈಸ್ತರನ್ನು ನಿಂದಿಸುವ, ಅಣಕಿಸುವ ನೂರಾರು ಗಾದೆಗಳಿವೆ. ಆದರೆ ಅದು ಅವರ ಸಂಪೂರ್ಣ ಅಸ್ತಿತ್ವವನ್ನು ಪ್ರಶ್ನಿಸುವಂತಿರುವುದಿಲ್ಲ. ಬಲಾಢ್ಯರು ಪರಸ್ಪರ ತಮಾಷೆ ಮಾಡಲೆಂದು ಸೃಷ್ಟಿಸಿದ ಗಾದೆಗಳಿಗೂ, ಬಲಾಢ್ಯರು ದುರ್ಬಲರನ್ನು ಕೀಳಾಗಿ ಚಿತ್ರಿಸುವ ದುರುದ್ದೇಶದಿಂದ ಸೃಷ್ಟಿಸಿದ ಗಾದೆಗಳಿಗೂ ಇರುವ ವ್ಯತ್ಯಾಸ ತಿಳಿಯದೆ ಅದನ್ನು ಬಳಸುವ ಮೂಲಕ ಪರೋಕ್ಷವಾಗಿ ನಮಗೇ ತಿಳಿಯದಂತೆ ಅಸಮಾನತೆಯನ್ನು ಪೋಷಿಸುತ್ತಿರುತ್ತೇವೆ. ಉಪೇಂದ್ರ ಬಳಸಿದ ಗಾದೆ, ಇಡೀ ದಲಿತ ಸಮುದಾಯವನ್ನು ಸಮಾಜದ ಪಾಲಿನ ಹೊಲಸು ಎಂದು ಗುರುತಿಸುತ್ತದೆ. ಜಾತಿ ಅಸಮಾನತೆಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಬಳಕೆಯಲ್ಲಿದ್ದ ಈ ಗಾದೆಯನ್ನು ಈಗ ಯಾರಾದರೊಬ್ಬ ಬಳಸಿದ್ದಾನೆ ಎಂದರೆ ಆತನ ಮೆದುಳಲ್ಲಿ ಜಾತಿ, ಅಸಮಾನತೆಯ ಹೊಲಸು ಇನ್ನೂ ಉಳಿದುಕೊಂಡಿದೆ ಎಂದು ಅರ್ಥ.

ಸ್ವಾತಂತ್ರ್ಯ ಪೂರ್ವದಲ್ಲಿ ಅಸಮಾನತೆ ತಲೆಯೆತ್ತಿದ್ದ ಕಾಲದಲ್ಲಿ ಬಳಸುತ್ತಿದ್ದ ಹಲವು ದಲಿತ ವಿರೋಧಿ, ಸ್ತ್ರೀ ವಿರೋಧಿ ಪದಗಳನ್ನು ಬಳಸದಂತೆ ನ್ಯಾಯಾಲಯ ನಿರ್ಬಂಧವನ್ನು ಹೇರಿದೆ. ಈಗಾಗಲೇ ‘ಹೊಲೆಯ’ ಎನ್ನುವ ಪದ ಬಳಸುವುದನ್ನು ನಿಷೇಧಿಸಲಾಗಿದೆ. ಒಂದು ಕಾಲದಲ್ಲಿ ದಲಿತರಿಗೆ ಮಹಾತ್ಮಾಗಾಂಧಿ ‘ಹರಿಜನ’ ಎಂಬ ಪದವನ್ನು ಬಳಸಿದಾಗ ಆಕ್ರೋಶಗೊಂಡ ಅಂಬೇಡ್ಕರ್ ‘‘ದಲಿತರು ಹರಿಯ ಜನರಾದರೆ ನೀವೆಲ್ಲ ದೆವ್ವದ ಜನರೇ?’’ ಎಂದು ಪ್ರಶ್ನಿಸಿದ್ದರು. ಇಂದು ಹರಿಜನ ಎನ್ನುವ ಪದಬಳಕೆಯನ್ನು ಕೂಡ ಹೊರಗಿಡಲಾಗಿದೆ. ಇಂತಹ ಸಂದರ್ಭದಲ್ಲಿ ‘ಊರು ಇದ್ದಲ್ಲಿ....ಇರುವುದು ಸಹಜ’ ಎನ್ನುವ ಒಂದಿಡೀ ಸಮುದಾಯವನ್ನು ಊರಿನ ಪಾಲಿನ ಹೊಲಸೆಂದು ಚಿತ್ರಿಸುವ ಗಾದೆಯನ್ನು ಬಳಸುವುದು ಅತ್ಯಂತ ಕ್ರೌರ್ಯದ ಪರಮಾವಧಿಯಾಗಿದೆ. ಇಷ್ಟಕ್ಕೂ ಅದನ್ನು ‘ಯಕಃಶ್ಚಿತ್’ ಎಂದು ಕರೆಯುವವರು ಇಂತಹ ಯಕಃಶ್ಚಿತ್ಗಳ ಕಾರಣದಿಂದಲೇ ದಲಿತರು ಈ ಸಮಾಜದಲ್ಲಿ ಎಷ್ಟೆಲ್ಲ ದೌರ್ಜನ್ಯಗಳನ್ನು ಅನುಭವಿಸುತ್ತಿದ್ದಾರೆ ಎನ್ನುವುದನ್ನು ನೆನಪಿಡಬೇಕಾಗಿದೆ.

ಒಬ್ಬ ದಲಿತ ಬಾಲಕ ನೀರಿನ ಮಡಕೆಯನ್ನು ಮುಟ್ಟಿದ ಎನ್ನುವ ‘ಯಕಃಶ್ಚಿತ್’ ಕಾರಣಕ್ಕಾಗಿ ರಾಜಸ್ಥಾನದಲ್ಲಿ ಶಿಕ್ಷಕನೊಬ್ಬ ಆತನನ್ನು ಥಳಿಸಿ ಕೊಂದು ಹಾಕುತ್ತಾನೆ. ಯಾಕೆಂದರೆ ಆ ಶಿಕ್ಷಕನ ಪಾಲಿಗೆ ದಲಿತನೊಬ್ಬ ನೀರಿನ ಮಡಕೆಯನ್ನು ಮುಟ್ಟುವುದು ‘ಯಕಃಶ್ಚಿತ್’ ವಿಷಯ ಅಲ್ಲ. ಮೀಸೆ ಇಟ್ಟ ಯಕಃಶ್ಚಿತ್ ಕಾರಣಕ್ಕಾಗಿ ದಲಿತ ಯುವಕನನ್ನು ಥಳಿಸಲಾಗುತ್ತದೆ. ದಲಿತ ವರನೊಬ್ಬ ಕುದುರೆಯೇರಿದ ಯಕಃಶ್ಚಿತ್ ಕಾರಣಕ್ಕಾಗಿ ಆತನ ಮೇಲೆ ಹಲ್ಲೆ ನಡೆಯುತ್ತದೆ. ಖೈರ್ಲಾಂಜಿಯಲ್ಲಿ ದಲಿತರ ಹೆಣ್ಣುಮಕ್ಕಳು ಸೈಕಲಲ್ಲಿ ಓಡಾಡುತ್ತಾ ಶಾಲೆ ಕಲಿಯುತ್ತಿದ್ದಾರೆ ಎನ್ನುವ ಯಕಃಶ್ಚಿತ್ ಕಾರಣಕ್ಕಾಗಿಯೇ ಇಡೀ ಗ್ರಾಮ ಆ ಹೆಣ್ಣು ಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಂದು ಹಾಕಿತು. ದೇವರ ಕೋಲನ್ನು ಮುಟ್ಟಿದ ಕಾರಣಕ್ಕಾಗಿ ದಲಿತ ಬಾಲಕನ ಮೇಲೆ ಹಲ್ಲೆ ನಡೆಸ ಲಾಗುತ್ತದೆ ಮಾತ್ರವಲ್ಲ, ಆತನ ಕುಟುಂಬಕ್ಕೆ ದಂಡ ವಿಧಿಸಲಾಗುತ್ತದೆ. ಇಂತಹ ಸಮಾಜದಲ್ಲಿ ಉಪೇಂದ್ರ ಬಳಸಿದ ಗಾದೆಯನ್ನು ‘ಯಕಃಶ್ಚಿತ್’ ಎಂದು ನಿರ್ಲಕ್ಷಿಸಲು ಸಾಧ್ಯವೆ? ಇಂತಹ ಯಕಃಶ್ಚಿತ್ಗಳಿಗಾಗಿ ದಲಿತರು ತೆರುತ್ತಿರುವ ಬೆಲೆಯೇನು ಎನ್ನು ವುದು ಗೊತ್ತಿದ್ದವರು ಈ ಗಾದೆಗಳನ್ನು ಸಾರ್ವಜನಿಕವಾಗಿ ಬಳಸುವುದು ಸಾಧ್ಯವೆ? ತನ್ನ ಪ್ರಮಾದವನ್ನು ‘ಕ್ಷಮೆ ಯಾಚನೆ’ಯಿಂದ ತೊಳೆದುಕೊಳ್ಳಲು ಉಪೇಂದ್ರ ಮುಂದಾ ಗಿದ್ದಾರೆ. ಈ ನಾಡಿನ ಲಕ್ಷಾಂತರ ದಲಿತರು ಅವರು ಆಡಿದ ಮಾತುಗಳನ್ನು ಈಗಾಗಲೇ ಕ್ಷಮಿಸಿದ್ದಾರೆ. ಆದುದರಿಂದಲೇ ಅವರು ಉಪೇಂದ್ರ ವಿರುದ್ಧ ಬೀದಿಗೆ ಇಳಿದಿಲ್ಲ. ಇದೇ ಸಂದರ್ಭದಲ್ಲಿ ಕ್ಷಮಿಸದೆ ಇರುವ ಅಧಿಕಾರವೂ ದಲಿತರಿಗಿದೆ. ಇಂತಹ ಅವಹೇಳನಕಾರಿ, ಜಾತಿ ನಿಂದನೆಯ ಪದ ಬಳಸುವುದು ಅಪರಾಧ ಎಂದು ಕಾನೂನು ಹೇಳುತ್ತಿರುವಾಗ ಆತನಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು ಎಂದು ಆಗ್ರಹಿಸುವ ಅಧಿಕಾರ ಈ ನಾಡಿನ ಪ್ರಜ್ಞಾವಂತರಿಗಿದೆ. ಸಂಘಪರಿವಾರ ಸಮಾಜದಲ್ಲಿ ಎಸಗುತ್ತಿರುವಂತೆ ದಲಿತರು ಇಂದು ಉಪೇಂದ್ರನ ವಿರುದ್ಧ ‘ಗೂಂಡಾಗಿರಿ’ಯನ್ನು ಪ್ರದರ್ಶಿಸಿಲ್ಲ. ಕಾನೂನು ಕೈಗೆತ್ತಿಕೊಂಡಿಲ್ಲ. ಸಂವಿಧಾನದ ಮಾರ್ಗದಲ್ಲಿ ಉಪೇಂದ್ರ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆ. ಅವರಿಗೆ ನ್ಯಾಯ ನೀಡುವುದು ನ್ಯಾಯಾಲಯದ ಕರ್ತವ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News