ಸ್ವಚ್ಛತಾ ಕಾರ್ಮಿಕರ ತಲೆಗೆ ಸೆಗಣಿ ಸುರಿದ ವ್ಯವಸ್ಥೆ

Update: 2023-08-24 04:00 GMT

ತಮ್ಮ ಬಾಕಿಯಿರುವ 15 ತಿಂಗಳ ವೇತನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ರಾಮನಗರ ಜಿಲ್ಲೆಯ ಕನಕಪುರದ ಕಲ್ಲಹಳ್ಳಿ ಗ್ರಾಮಪಂಚಾಯತ್‌ನ ಪೌರಕಾರ್ಮಿಕರಿಬ್ಬರು ಸೆಗಣಿಯನ್ನು ತಲೆಯ ಮೇಲೆ ಸುರಿದು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ. ಇಬ್ಬರು ಕಾರ್ಮಿಕರ ಸುಮಾರು ಮೂರೂವರೆ ಲಕ್ಷ ರೂ. ವೇತನವನ್ನು ಗ್ರಾಮ ಪಂಚಾಯತ್ ಬಾಕಿ ಉಳಿಸಿತ್ತು. ಒಂದೆಡೆ ಸರಕಾರ ಪೌರಕಾರ್ಮಿಕರ ಯೋಗಕ್ಷೇಮಗಳ ಬಗ್ಗೆ ಮಾತನಾಡುತ್ತದೆ. ವಿಪರ್ಯಾಸವೆಂದರೆ, ಪೌರಕಾರ್ಮಿಕರಿಗೆ ಸವಲತ್ತುಗಳನ್ನು ಒದಗಿಸಿ ಅವರ ಬದುಕನ್ನು ಮೇಲೆತ್ತುವುದು ಬದಿಗಿರಲಿ, ಕನಿಷ್ಠ ಅವರ ವೇತನವನ್ನು ಕೊಡುವ ಯೋಗ್ಯತೆಯೂ ತನಗಿಲ್ಲ ಎನ್ನುವುದನ್ನು ಈ ಮೂಲಕ ಸಾಬೀತು ಪಡಿಸಿದೆ. ಒಂದು ರೀತಿಯಲ್ಲಿ ಊರನ್ನು ಸ್ವಚ್ಛವಾಗಿಡುತ್ತಾ ಬಂದಿರುವ ಪೌರಕಾರ್ಮಿಕರ ತಲೆಯ ಮೇಲೆ ಸ್ವತಃ ಆಡಳಿತ ವ್ಯವಸ್ಥೆಯೇ ಸೆಗಣಿ ಸುರಿದಿದೆ. ತಾವು ದುಡಿದ ಹಕ್ಕಿನ ಹಣವನ್ನು ಪಡೆಯಲು ತಲೆಯ ಮೇಲೆ ಸೆಗಣಿ, ಮಲ ಸುರಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದರೆ ನಮ್ಮ ವ್ಯವಸ್ಥೆ ಸ್ವಚ್ಛತೆಯನ್ನು ಎಷ್ಟರ ಮಟ್ಟಿಗೆ ಗಂಭೀರವಾಗಿ ತೆಗೆದುಕೊಂಡಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬಹುದು ಅಥವಾ ಹಣ ಪಡೆಯದೆಯೇ ಊರನ್ನು ಸ್ವಚ್ಛವಾಗಿಡುವುದು ಈ ಕಾರ್ಮಿಕರ ಕರ್ತವ್ಯವೆಂದು ಈ ಅಧಿಕಾರಿಗಳು ಬಗೆದಿರಬೇಕು. ಯಾವಾಗ ಸೆಗಣಿ ಸುರಿದು ಪ್ರತಿಭಟನೆಗಿಳಿದರೋ ಆಗಲೆ ತಮ್ಮ ಮಾನ ಉಳಿಸಿಕೊಳ್ಳಲು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವೇತನವನ್ನು ಪಾವತಿಸಿದರು. ಒಂದು ಲಕ್ಷ ರೂ. ನಗದನ್ನು, ಉಳಿದ ಹಣಕ್ಕೆ ಚೆಕ್‌ನ್ನು ನೀಡಿದರು.

ಪೌರಕಾರ್ಮಿಕರಿಗೆ ವೇತನ ಬಾಕಿ ಉಳಿಸಿರುವುದು ಯಾವುದೋ ಒಂದು ಗ್ರಾಮಪಂಚಾಯತ್‌ಗಷ್ಟೇ ಸೀಮಿತವಾದ ವಿಷಯವಲ್ಲ. ಒಂದೆಡೆ ಸ್ವಚ್ಛತಾ ಆಂದೋಲನದ ಬಗ್ಗೆ ಸಾರ್ವಜನಿಕ ವೇದಿಕೆಗಳಲ್ಲಿ ಪುಂಖಾನುಪುಂಖವಾಗಿ ಮಾತನಾಡುತ್ತಲೇ, ಇನ್ನೊಂದೆಡೆ ಈ ಸ್ವಚ್ಛತೆಯ ನಿಜವಾದ ಯೋಧರನ್ನು ಸರಕಾರ ನಿರ್ಲಕ್ಷಿಸುತ್ತಾ ಬಂದಿದೆ. ನಮ್ಮ ಬೆಂಗಳೂರು ನಗರ ಪಾಲಿಕೆಯೇ ಪೌರಕಾರ್ಮಿಕರಿಗೆ ನೀಡಬೇಕಾಗಿರುವ ಹಲವು ಕೋಟಿ ರೂ.ಗಳನ್ನು ಬಾಕಿ ಉಳಿಸಿದ ಆರೋಪಗಳಿವೆ. ಒಣ ತ್ಯಾಜ್ಯ ಸಂಗ್ರಹಕಾರರ ಬಾಕಿ ಉಳಿಸಿರುವ ವೇತನಗಳನ್ನು ಪಾವತಿಸಲು ಕಳೆದ ಮೇ ತಿಂಗಳಲ್ಲಿ ಸರಕಾರೇತರ ಸಂಘಟನೆಗಳು ಆಂದೋಲನವನ್ನು ನಡೆಸಿದ್ದವು. ಆ ಸಂಘಟನೆಗಳ ಪ್ರಕಾರ ಬಿಬಿಎಂಪಿ 46 ವಾರ್ಡ್

ಗಳಲ್ಲಿ ಎರಡು ವರ್ಷಗಳಿಂದ 9.4 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿದೆ. ಒಣ ತ್ಯಾಜ್ಯ ಸಂಗ್ರಹಕಾರರಿಗೆ 28 ತಿಂಗಳಿಂದ ಸರಿಯಾದ ರೀತಿಯಲ್ಲಿ ವೇತನಗಳನ್ನು ಪಾವತಿಸಿಲ್ಲ ಎಂದು ಸಂಘಟನೆಗಳು ಆರೋಪಿಸಿವೆ. ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಪೌರಕಾರ್ಮಿಕರ ಸಮಸ್ಯೆಗಳು ಕನಿಷ್ಟ ಚರ್ಚೆಯಾದರೂ ಆಗುತ್ತವೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಪೌರಕಾರ್ಮಿಕರ ಸಮಸ್ಯೆಗಳು ಚರ್ಚೆಯ ವಿಷಯವೇ ಅಲ್ಲ. ಕನಿಷ್ಠ ಅವರ ವೇತನ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಬೇಕಾದರೆ ತಲೆಗೆ ಮಲ ಸುರಿಯುವ ಅಥವಾ ಸೆಗಣಿ ಸುರಿಯುವ ಮೂಲಕ ಪ್ರತಿಭಟನೆ ಮಾಡಬೇಕು. ಎಲ್ಲರೂ ಮಾಡುವಂತೆ ಧರಣಿ ಸತ್ಯಾಗ್ರಹಗಳನ್ನು ಮಾಡಿದರೂ ಅದನ್ನು ಕೇಳುವವರಿಲ್ಲ. ಮಾಧ್ಯಮಗಳೂ ಅವರನ್ನು ನಿರ್ಲಕ್ಷಿಸುತ್ತವೆ.

ಇನ್ನು ಗ್ರಾಮೀಣ ಪ್ರದೇಶದಲ್ಲಿ ತಮ್ಮ ಹಕ್ಕುಗಳಿಗಾಗಿ ಬೇಡಿಕೆ ಇಡುವುದು ಕೂಡ ಅಪರಾಧವಾಗಿ ಬಿಡುತ್ತದೆ. ಯಾಕೆಂದರೆ ಜಿಲ್ಲಾ ಪಂಚಾಯತ್, ಗ್ರಾಮಪಂಚಾಯತ್ ಜನಪ್ರತಿನಿಧಿಗಳ ಮುಂದೆ ತಲೆ ಯೆತ್ತಿ ಮಾತನಾಡುವ ಶಕ್ತಿಯೂ ಈ ಕಾರ್ಮಿಕರಿಗಿರುವುದಿಲ್ಲ. ಪೌರಕಾರ್ಮಿಕರಲ್ಲಿ ಬಹುತೇಕ ಮಂದಿ ಶೋಷಿತ ಸಮುದಾಯದಿಂದ ಬಂದಿರುತ್ತಾರೆ. ಜಿಲ್ಲಾ ಪಂಚಾಯತ್, ಗ್ರಾಮಪಂಚಾಯತ್‌ನಲ್ಲಿ ಮೇಲ್‌ಜಾತಿಯ ಜನರು ಕುಳಿತಿರುತ್ತಾರೆ. ಮೇಲ್‌ಜಾತಿಯ ಜನರ ವಿರುದ್ಧ ಧ್ವನಿಯೆತ್ತಿ ಮಾತನಾಡುವುದೇ ಅಪರಾಧವಾಗಿರುವಾಗ ಪೌರ ಕಾರ್ಮಿಕರು ತಮ್ಮ ವೇತನವನ್ನು ದೊಡ್ಡ ಸ್ವರದಲ್ಲಿ ಕೇಳುವುದು ಸಾಧ್ಯವೆ? ಗ್ರಾಮೀಣ ಪ್ರದೇಶದಲ್ಲಿ ಪೌರಕಾರ್ಮಿಕರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿರುವುದು ಆಗಾಗ ಸುದ್ದಿಯಾಗುತ್ತಿರುತ್ತವೆ. ಗುತ್ತಿಗೆದಾರರು, ಪಂಚಾಯತ್ ಅಧಿಕಾರಿಗಳು, ಜನಪ್ರತಿನಿಧಿಗಳು ಇವರನ್ನು ಕೇವಲವಾಗಿ ನೋಡುವುದಕ್ಕೆ ಪೌರಕಾರ್ಮಿಕರ ಜಾತಿಯೂ ಮುಖ್ಯ ಕಾರಣ ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ತಮ್ಮ ಹಕ್ಕಿನ ವೇತನವನ್ನೇ ಪಡೆದುಕೊಳ್ಳುವುದು ಇಷ್ಟು ಕಷ್ಟವಿರುವಾಗ ಸರಕಾರ ನೀಡುತ್ತಿದೆ ಎನ್ನಲಾಗುತ್ತಿರುವ ಇನ್ನಿತರ ಸವಲತ್ತುಗಳನ್ನು ಪಡೆದುಕೊಳ್ಳುವುದು ಸಾಧ್ಯವಾಗುವ ಮಾತೆ? ಗ್ರಾಮೀಣ ಪ್ರದೇಶದ ಪೌರಕಾರ್ಮಿಕರು ಕೈಗವಚ, ಬೂಟುಗಳು ಸೇರಿದಂತೆ ಆರೋಗ್ಯ ರಕ್ಷಣೆಗೆ ಸಂಬಂಧ ಪಟ್ಟ ಸಲಕರಣೆಗಳಿಂದ ವಂಚಿತರಾಗಿದ್ದಾರೆ. ಎಷ್ಟೋ ಪೌರಕಾರ್ಮಿಕರಿಗೆ ಸರಕಾರ ತಮಗೆ ಒದಗಿಸಿರುವ ಆರೋಗ್ಯ ಸುರಕ್ಷೆಯ ಸಾಧನಗಳ ಬಗ್ಗೆ ಅರಿವೇ ಇಲ್ಲ. ಇವರಿಗೆ ಸಿಗಬೇಕಾದ ಸವಲತ್ತುಗಳನ್ನು ಕಾರ್ಮಿಕರ ಹೆಸರಿನಲ್ಲಿ ಮಧ್ಯವರ್ತಿಗಳು ತಮ್ಮದಾಗಿಸಿಕೊಂಡಿರುತ್ತಾರೆ.

ಇನ್ನು ಒಳಚರಂಡಿ ಶುಚಿಗೊಳಿಸುವ ಕಾರ್ಮಿಕರ ಸ್ಥಿತಿಯಂತೂ ಭೀಕರವಾಗಿದೆ. ದೇಶದ 246 ಜಿಲ್ಲೆಗಳಲ್ಲಿ ಮಲ ಹೊರುವ ಪದ್ಧತಿ ಇನ್ನೂ ಜೀವಂತವಿದೆ ಎನ್ನುವುದನ್ನು ಸರಕಾರವೇ ಒಪ್ಪಿಕೊಂಡಿದೆ. ಕನಕಪುರದಲ್ಲಿ ಕಾರ್ಮಿಕರು ತಮ್ಮ ವೇತನಕ್ಕಾಗಿ ಪ್ರತಿಭಟನೆಯ ರೂಪದಲ್ಲಿ ತಲೆಗೆ ಸೆಗಣಿ ಸುರಿದುಕೊಂಡಿದ್ದರೆ, ಈ ದೇಶದಲ್ಲಿ ಸಾವಿರಾರು ಜನರು ತಲೆಯಲ್ಲಿ ಮಲ ಹೊರುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ. ಆದರೆ ಇವರು ಸುದ್ದಿಯಾಗುವುದು ಒಳಚರಂಡಿ ಅಥವಾ ಮಲದ ಗುಂಡಿಯಲ್ಲಿ ಸಿಕ್ಕಿ ಮೃತರಾದಾಗ ಮಾತ್ರ. ಅದೂ ಅಧಿಕೃತವಾಗಿ ಪ್ರಕರಣ ದಾಖಲಾದಾಗ. ಈ ದೇಶದಲ್ಲಿ ಇಂತಹ ದುರಂತ ಸಂಭವಿಸಿದಾಗ ಆಕಸ್ಮಿಕ ಅವಘಡಗಳೆಂದು ಪರಿಗಣಿಸಿ ಮುಚ್ಚಿ ಹಾಕಲಾಗುತ್ತದೆ. ಯಾಕೆಂದರೆ ದೇಶದ ಎಲ್ಲ ಜಿಲ್ಲಾಡಳಿತಗಳು ತಮ್ಮಲ್ಲಿ ಮಲ ಹೊರುವ ಪದ್ಧತಿ ಇಲ್ಲ ಎಂದು ಸ್ಪಷ್ಟಪಡಿಸಿವೆ. ಹೀಗಿರುವಾಗ ಮಲದ ಗುಂಡಿಯಲ್ಲಿ ವ್ಯಕ್ತಿ ಸತ್ತು, ಪ್ರಕರಣ ದಾಖಲಾದರೆ ಅದಕ್ಕಾಗಿ ಜಿಲ್ಲಾಡಳಿತ ತನ್ನ ತಲೆ ಕೊಡಬೇಕಾಗುತ್ತದೆ. ಆದುದರಿಂದ ಎಲ್ಲ ಅಧಿಕಾರಿಗಳು ಒಟ್ಟು ಸೇರಿ ಇಂತಹ ದುರಂತಗಳು ಬೆಳಕಿಗೆ ಬರದಂತೆ ನೋಡಿಕೊಳ್ಳುತ್ತಾರೆ. ಇವೆಲ್ಲವುಗಳ ನಡುವೆಯೂ, ರಾಜ್ಯದಲ್ಲಿ ಮ್ಯಾನ್‌ಹೋಲ್‌ಗಳಲ್ಲಿ 100ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಸರಕಾರಿ ದಾಖಲೆಗಳು ಸಿಗುತ್ತವೆ. ಆದರೆ ಇವರಿಗೆ ನೀಡಬೇಕಾದ ಪರಿಹಾರದ ಬಗ್ಗೆ ಸರಕಾರ ಸ್ಪಷ್ಟ ಕಾನೂನೊಂದನ್ನು ಇನ್ನೂ ಜಾರಿಗೊಳಿಸಿಲ್ಲ. ಈ ದೇಶದಲ್ಲಿ ರೌಡಿಯೊಬ್ಬ ಕೋಮು ಹಿಂಸೆಯಲ್ಲಿ ಮೃತಪಟ್ಟರೆ ಆತನಿಗೆ ಸರಕಾರ ತಕ್ಷಣ 25 ಲಕ್ಷ ರೂ.ಯನ್ನು ಮುಖ್ಯಮಂತ್ರಿ ನಿಧಿಯಿಂದ ಬಿಡುಗಡೆ ಮಾಡುತ್ತದೆ. ಆದರೆ ಈ ನಾಡಿನ ಶುಚಿತ್ವಕ್ಕಾಗಿ ಪ್ರಾಣ ತ್ಯಾಗ ಮಾಡಿದ ಪೌರಕಾರ್ಮಿಕರಿಗೆ ಪರಿಹಾರ ನೀಡುವ ಸಂದರ್ಭದಲ್ಲಿ ಈ ಉದಾರತೆಯನ್ನು ಪ್ರದರ್ಶಿಸುವುದಿಲ್ಲ.

ದೇಶದಲ್ಲಿ ಸ್ವಚ್ಛತಾ ಆಂದೋಲನ ಯಶಸ್ವಿಯಾಗಬೇಕಾದರೆ ನಮ್ಮನ್ನಾಳುವವರ ಮೆದುಳಲ್ಲಿರುವ ಜಾತಿಯ ಕೊಳಚೆ ಮೊದಲು ಶುಚಿಗೊಳ್ಳಬೇಕಾಗಿದೆ. ಈ ನಾಡಿನ ಆರೋಗ್ಯವನ್ನು ಕಾಪಾಡುವುದಕ್ಕಾಗಿ ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಕೆಲಸ ಮಾಡುವ ಪೌರಕಾರ್ಮಿಕರನ್ನು ಕೂಡ ಯೋಧರೆಂದು ಪರಿಗಣಿಸಿ ಅವರನ್ನು ಗೌರವಿಸಲು ಸಮಾಜ ಕಲಿಯಬೇಕು. ಶುಚಿತ್ವದ ಸಂದರ್ಭದಲ್ಲಿ ಮೃತಪಡುವ ಈ ಯೋಧರನ್ನು ಹುತಾತ್ಮರೆಂದು ಪರಿಗಣಿಸಿ ಸರಕಾರಿ ಗೌರವದ ಜೊತೆಗೆ ಅಂತ್ಯ ಸಂಸ್ಕಾರ ನೆರವೇರಿಸಬೇಕು. ಯೋಧರಿಗೆ ನೀಡುವ ಪರಿಹಾರವನ್ನು ಇವರಿಗೂ ನೀಡಬೇಕು. ಯಾಕೆಂದರೆ, ಯೋಧರು ಗಡಿ ಕಾಯುವುದನ್ನು ನಿಲ್ಲಿಸಿದರೆ ಶತ್ರುಗಳು ದೇಶದೊಳಗೆ ನುಗ್ಗಿದಂತೆಯೇ, ಈ ಯೋಧರು ಎರಡು ದಿನ ತಮ್ಮ ಕಾಯಕವನ್ನು ನಿಲ್ಲಿಸಿದರೆ ದೇಶ ರೋಗ ಪೀಡಿತವಾಗಬಹುದು. ಅಭಿವೃದ್ಧಿ ಗಬ್ಬು ನಾರಲು ಶುರುಹಚ್ಚಬಹುದು. ನಮ್ಮ ಪರಿಸರ ಮನುಷ್ಯರು ಬದುಕುವುದಕ್ಕೆ ಅನರ್ಹವಾಗಬಹುದು. ಪೌರಕಾರ್ಮಿಕರ ಬದುಕನ್ನು ಸುಧಾರಿಸುವ ನಿಜವಾದ ಪ್ರಯತ್ನವೆಂದರೆ, ಕೊಳಚೆಗುಂಡಿಗೆ ಮನುಷ್ಯರು ಇಳಿದು ಶುಚಿಗೊಳಿಸುವ ಸ್ಥಿತಿಯೇ ನಿರ್ಮಾಣವಾಗದಂತೆ ನೋಡಿಕೊಳ್ಳುವುದು. ಅದಕ್ಕಾಗಿ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮುಂದಾಗಬೇಕು. ಸಾವಿರಾರು ಮೈಲು ದೂರದಲ್ಲಿರುವ ಚಂದ್ರನೆಡೆಗೆ ಯಶಸ್ವಿಯಾಗಿ ಉಪಗ್ರಹಗಳನ್ನು ಹಾರಿಸಲು ನಮಗೆ ಸಾಧ್ಯವಿದೆಯಾದರೆ, ಶೌಚಗುಂಡಿಗೆ ಇಳಿಸುವ ತಂತ್ರಜ್ಞಾನಗಳನ್ನು ಅಭಿವೃದ್ಧಿಗೊಳಿಸಲು ನಮಗೆ ಯಾಕೆ ಸಾಧ್ಯವಿಲ್ಲ?

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News