ರಾಜ್ಯದ ಹಿತಾಸಕ್ತಿಯನ್ನು ಜೆಡಿಎಸ್ ಕೇಂದ್ರದಲ್ಲಿ ಎತ್ತಿ ಹಿಡಿಯಬಹುದೆ?

Update: 2024-06-06 04:50 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ನರೇಂದ್ರ ಮೋದಿಯವರು ಮೂರನೇ ಅವಧಿಗೆ ಪ್ರಧಾನಿಯಾಗುವ ಸಿದ್ಧತೆ ನಡೆಸುತ್ತಿದ್ದಾರೆ. ನಿತೀಶ್ ಕುಮಾರ್, ಚಂದ್ರ ಬಾಬು ನಾಯ್ಡು ಅವರ ಜೊತೆಗಿನ ಸಂಧಾನ ಬಹುತೇಕ ಯಶಸ್ವಿಯಾದಂತಿದೆ. ಆರಂಭದಲ್ಲಿ ನಿತೀಶ್ ಕುಮಾರ್ ಕುರಿತಂತೆ ವದಂತಿಗಳು ಹಬ್ಬಿತ್ತಾದರೂ, ಅದನ್ನು ಬೆಳೆಯಗೊಡದೆ ತಕ್ಷಣವೇ ಬಿಜೆಪಿ ಚಿವುಟಿ ಹಾಕಿದೆ. ಸರಕಾರ ರಚಿಸಲು ಇಂಡಿಯಾ ಕೂಟ ಆಸಕ್ತಿ ತೋರಿಸುತ್ತಿದೆಯೆನ್ನುವುದು ಗೊತ್ತಾಗುತ್ತಿದ್ದಂತೆಯೇ ಮಿತ್ರರ ಎಲ್ಲ ಶರತ್ತುಗಳಿಗೆ ಬಿಜೆಪಿ ತಲೆಬಾಗುವುದು ಅನಿವಾರ್ಯವಾಯಿತು. ಈ ಬಾರಿಯ ಫಲಿತಾಂಶ ಬಿಜೆಪಿಗೆ ತೀವ್ರ ಮುಖಭಂಗವನ್ನುಂಟು ಮಾಡಿದ್ದು, ಈ ಸೋಲಿನ ಹೊಣೆಯನ್ನು ಬಿಜೆಪಿಯಲ್ಲಿ ಯಾರು ಹೊರಬೇಕು ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಸುಬ್ರಮಣಿಯನ್ ಸ್ವಾಮಿಯೂ ಸೇರಿದಂತೆ ಕೆಲವರು ಸೋಲಿನ ಹೊಣೆಯನ್ನು ಸಂಪೂರ್ಣವಾಗಿ ನರೇಂದ್ರ ಮೋದಿಯವರೇ ಹೊತ್ತುಕೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಈ ವರೆಗಿನ ಬಿಜೆಪಿಯ ಭರ್ಜರಿ ಯಶಸ್ಸುಗಳನ್ನೆಲ್ಲ ಮೋದಿಯ ತಲೆಗೆ ಕಟ್ಟಬಹುದಾದರೆ, ಈ ಸೋಲಿನ ಹೊಣೆಯನ್ನು ಕೂಡ ಅವರೇ ಹೊತ್ತುಕೊಳ್ಳಬೇಕು ಎಂದು ಬಿಜೆಪಿಯೊಳಗಿರುವ ಕೆಲವು ನಾಯಕರು ಬಯಸುವುದರಲ್ಲಿ ತಪ್ಪೇನೂ ಇಲ್ಲ. ಕೇಂದ್ರ ಸರಕಾರದ ಎಲ್ಲ ಖಾತೆಗಳು ನೆಪಮಾತ್ರಕ್ಕೆ ಇದ್ದು, ನರೇಂದ್ರ ಮೋದಿಯೇ ಎಲ್ಲವನ್ನು ನಿಭಾಯಿಸುತ್ತಾ ಬಂದಿದ್ದಾರೆ. ನೋಟು ನಿಷೇಧದಂತಹ ಮಹತ್ತರ ತೀರ್ಮಾನವನ್ನು ತೆಗೆದುಕೊಂಡಾಗ ವಿತ್ತ ಸಚಿವರಿಗೆ ಆ ಬಗ್ಗೆ ಅರಿವೇ ಇದ್ದಿರಲಿಲ್ಲ. ವಿತ್ತ ಸಚಿವ, ರಕ್ಷಣಾ ಸಚಿವ, ವಿದೇಶಾಂಗ ಸಚಿವರೆಲ್ಲರ ಪಾತ್ರವನ್ನೂ ಮೋದಿಯೇ ನಿರ್ವಹಿಸಿದ್ದಾರೆ. ಸಿಎಎ, ಎನ್ಆರ್ಸಿ ಮೊದಲಾದ ಅಸಂಬದ್ಧಗಳು ಹೊರಬಿದ್ದಿರುವುದು ಮೋದಿ-ಅಮಿತ್ ಶಾ ಅವರಿಂದಲೇ. ಗುಜರಾತನ್ನು ಕೇಂದ್ರವಾಗಿಟ್ಟುಕೊಂಡು ಮೋದಿ ಸರಕಾರವನ್ನು ಮುನ್ನಡೆಸಿದರು. ಈ ಸರ್ವಾಧಿಕಾರಿ ನಡೆಯನ್ನು ಪ್ರಶ್ನಿಸುವಂತಹ ವಾತಾವರಣ ಬಿಜೆಪಿಯೊಳಗೆ ಇರಲಿಲ್ಲ. ಯಾಕೆಂದರೆ, ಮೋದಿಯಿಂದಲೇ ಬಿಜೆಪಿ ಎನ್ನುವುದನ್ನು ಎಲ್ಲರೂ ಪರೋಕ್ಷವಾಗಿ ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿಯ ಜನಾದೇಶ ನೇರವಾಗಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ವಿರುದ್ಧ ಹೊರಬಿದ್ದಿದೆ ಎನ್ನುವುದನ್ನು ಮರು ಮಾತಿಲ್ಲದೆ ಒಪ್ಪಿಕೊಳ್ಳಬೇಕಾಗಿದೆ. ಇಷ್ಟಾದರೂ ಮೋದಿ ಪ್ರಧಾನಿಯಾಗುವುದನ್ನು ತಡೆಯುವಂತಹ ಭಿನ್ನಮತ ಈವರೆಗೆ ಬಿಜೆಪಿಯೊಳಗಿಂದ ವ್ಯಕ್ತವಾಗಿಲ್ಲ.

ಮೋದಿ ಪ್ರಧಾನಿಯಾಗುವುದನ್ನು ಎನ್ಡಿಎ ಒಪ್ಪಿಕೊಂಡಿದೆ ಮಾತ್ರವಲ್ಲ, ಪೂರ್ಣ ಬೆಂಬಲವನ್ನೂ ಘೋಷಿಸಿದೆ. ಇದರ ಬೆನ್ನಿಗೇ ಸರಕಾರ ರಚನೆ ಪ್ರಯತ್ನವನ್ನು ಕೈ ಬಿಟ್ಟಿರುವ ಇಂಡಿಯಾ ಬಳಗ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುವುದಾಗಿ ಹೇಳಿಕೊಂಡಿದೆ. ಇಂಡಿಯಾ ಮಿತ್ರ ಕೂಟದ ಈ ನಿರ್ಧಾರ ಮುತ್ಸದ್ದಿತನದಿಂದ ಕೂಡಿದೆ. ಈ ಹಿಂದೆ ಮೋದಿ ಸರಕಾರದ ಮೇಲಿದ್ದ ಅತಿ ದೊಡ್ಡ ಆರೋಪವೆಂದರೆ, ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಾ ಬಂದಿರುವುದು. ಹಂತ ಹಂತವಾಗಿ ರಾಜ್ಯಗಳ ಅಧಿಕಾರವನ್ನು ಕಿತ್ತುಕೊಂಡು, ಅವುಗಳ ಮೇಲೆ ಕೇಂದ್ರ ಸವಾರಿ ಮಾಡಲು ಮುಂದಾದದ್ದು. ಸಂಗ್ರಹವಾದ ಜಿಎಸ್ಟಿ ಹಣದ ಪಾಲನ್ನು ರಾಜ್ಯಕ್ಕೆ ಮರಳಿಸದೇ ಸತಾಯಿಸಿದ್ದು. ನೆರೆ, ಬರ ಪರಿಹಾರ ಸಂದರ್ಭದಲ್ಲಿ ಬಿಡುಗಡೆ ಮಾಡಬೇಕಾದ ಹಣವನ್ನು ಉಳಿಸಿಕೊಂಡು ರಾಜ್ಯಗಳನ್ನು ಸಂಕಟಕ್ಕೆ ತಳ್ಳಿರುವುದು. ಪೈಸೆ ಪೈಸೆಗೂ ಕೇಂದ್ರದ ಕಡೆಗೆ ಮುಖ ಮಾಡಬೇಕಾದ ಸ್ಥಿತಿಯನ್ನು ರಾಜ್ಯಗಳಿಗೆ ನಿರ್ಮಾಣ ಮಾಡಿರುವುದು. ಇದರ ವಿರುದ್ಧ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ಸುಪ್ರೀಂಕೋರ್ಟ್ನ ಮೊರೆ ಹೋಗಿವೆ. ಅಷ್ಟೇ ಅಲ್ಲದೆ ಪ್ರಾದೇಶಿಕ ವೈವಿಧ್ಯತೆಯ ಮೇಲೆ ಹಿಂದಿ ಹೇರಿಕೆಯನ್ನೂ ದಕ್ಷಿಣ ರಾಜ್ಯಗಳು ಬಲವಾಗಿ ವಿರೋಧಿಸುತ್ತಾ ಬಂದಿವೆ. ಇದೀಗ ಎನ್ಡಿಎ ಮಿತ್ರರ ಬೆಂಬಲದೊಂದಿಗೆ ಪ್ರಧಾನಿ ಮೋದಿ ಆಡಳಿತ ನಡೆಸಬೇಕಾಗಿದೆ. ಎನ್ಡಿಎಯಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಿರುವುದೇ ಪ್ರಾದೇಶಿಕ ಪಕ್ಷಗಳು. ಅದರಲ್ಲೂ ದಕ್ಷಿಣ ಭಾರತದಿಂದ ಚಂದ್ರಬಾಬು ನಾಯ್ಡು , ಅತ್ತ ಬಿಹಾರದಿಂದ ನಿತೀಶ್ ಕುಮಾರ್ ನೂತನ ಸರಕಾರದಲ್ಲಿ ನಿರ್ಣಾಯಕವಾಗಿದ್ದಾರೆ. ಈ ಕಾರಣದಿಂದಲೇ ರಾಜ್ಯಗಳ ಕುರಿತಂತೆ ಕೇಂದ್ರದ ನೀತಿ ಈ ಬಾರಿ ಬದಲಾಗುವುದು ಅನಿವಾರ್ಯವಾಗಿದೆ. ಒಕ್ಕೂಟ ವ್ಯವಸ್ಥೆಯನ್ನು ಗೌರವಿಸುತ್ತಾ, ತನ್ನ ಸಹಭಾಗಿಗಳ ಜೊತೆ ಜೊತೆಗೆ ಸಾಗುವ ಹೊಸ ಪಾತ್ರವನ್ನು ಪ್ರಧಾನಿ ಮೋದಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿ ನಿರ್ವಹಿಸುತ್ತಾರೆ ಎನ್ನುವ ಆಧಾರದಲ್ಲಿ ಹೊಸ ಸರಕಾರದ ಭವಿಷ್ಯ ನಿಂತಿದೆ.

ಕರ್ನಾಟಕದಲ್ಲಿ ಜೆಡಿಎಸ್ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಎರಡು ಸ್ಥಾನಗಳನ್ನು ಜೆಡಿಎಸ್ ತನ್ನದಾಗಿಸಿಕೊಂಡಿದೆಯಾದರೂ, ಸದ್ಯದ ಮಟ್ಟಿಗೆ ಆ ಎರಡು ಸ್ಥಾನಗಳು ಸರಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಆದುದರಿಂದ, ಈ ಸ್ಥಾನಗಳನ್ನು ಬಳಸಿಕೊಂಡು ಕುಮಾರ ಸ್ವಾಮಿಯವರು ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡುತ್ತಾರೆಯೋ ಅಥವಾ ತನ್ನ ಕುಟುಂಬದ ಹಿತಾಸಕ್ತಿಗಾಗಿ ಕರ್ನಾಟಕವನ್ನು ಬಲಿಕೊಡುತ್ತಾರೆಯೋ ಎನ್ನುವುದನ್ನು ಕಾದು ನೋಡಬೇಕಾಗಿದೆ. ಈಗಾಗಲೇ ಕರ್ನಾಟಕಕ್ಕೆ ಬರಬೇಕಾದ ಪರಿಹಾರ ನಿಧಿಯನ್ನು ಹಿಡಿದಿಟ್ಟುಕೊಂಡಿದೆ ಎನ್ನುವ ಆರೋಪವನ್ನು ಕೇಂದ್ರ ಎದುರಿಸುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಒತ್ತಡದಲ್ಲಿ, ಕರ್ನಾಟಕದ ಹಿತಾಸಕ್ತಿಯನ್ನು ಕುಮಾರಸ್ವಾಮಿ ಯಾವಕಾರಣಕ್ಕೂ ಮರೆಯಬಾರದು. ನಿತೀಶ್, ಚಂದ್ರಬಾಬುನಾಯ್ಡುರಂತಹ ನಾಯಕರು ಪ್ರಧಾನಿ ಮೋದಿಯನ್ನು ಬೆಂಬಲಿಸುವ ಸಂದರ್ಭದಲ್ಲಿ, ತಮ್ಮ ರಾಜ್ಯಗಳ ಪರವಾಗಿ ಹಲವು ಬೇಡಿಕೆಗಳನ್ನು ಮುಂದಿಟ್ಟಿರುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಕರ್ನಾಟಕದ ಹಿತಾಸಕ್ತಿಯನ್ನು ಬಿಜೆಪಿ ಸಂಸದರು ಎಷ್ಟರಮಟ್ಟಿಗೆ ಎತ್ತಿ ಹಿಡಿಯಬಲ್ಲರು ಎನ್ನುವುದನ್ನು ಕಳೆದ ಬಾರಿ ತೋರಿಸಿಕೊಟ್ಟಿದ್ದಾರೆ. ಬಿಜೆಪಿಯಿಂದ 26 ಸಂಸದರನ್ನು ಕರ್ನಾಟಕದ ಜನತೆ ಆಯ್ಕೆ ಮಾಡಿ ಕಳುಹಿಸಿದ್ದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು ಡಬಲ್ ಇಂಜಿನ್ ಸರಕಾರ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿತ್ತು. ಆದರೆ, ಸಂಸದರಿಗೆ ಪ್ರಧಾನಿ ಮೋದಿ, ಅಮಿತ್ ಶಾ ಅವರ ಮುಂದೆ ಕರ್ನಾಟಕದ ಹಿತಾಸಕ್ತಿಯನ್ನು ಮುಂದಿಡುವ ಯಾವುದೇ ಆತ್ಮಸ್ಥೈರ್ಯ ಇದ್ದಿರಲಿಲ್ಲ. ಯಾಕೆಂದರೆ ಇವರೆಲ್ಲ ತಮ್ಮನ್ನು ತಾವು ಮೋದಿ ಹೆಸರಿನಲ್ಲಿ ಜನರ ಮುಂದೆ ಪರಿಚಯಿಸಿಕೊಂಡವರು. ಮೋದಿಯಿಂದಲೇ ಗೆದ್ದಿದ್ದೇವೆ ಎಂದು ಗಾಢವಾಗಿ ನಂಬಿದ್ದ ಇವರಾರಿಗೂ ಮೋದಿಯ ಮುಂದೆ ನಿಂತು ಕರ್ನಾಟಕದ ನೋವು, ದುಮ್ಮಾನಗಳನ್ನು ತೋಡಿಕೊಳ್ಳುವ ಧೈರ್ಯ ಇರಲಿಲ್ಲ. ಆದುದರಿಂದ, ಡಬಲ್ ಇಂಜಿನ್ ಸರಕಾರವಿದ್ದಾಗಲೂ ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯವೇ ಆಯಿತು. ಇದೀಗ ಬಿಜೆಪಿ ರಾಜ್ಯದಲ್ಲಿ ೯ ಸ್ಥಾನಗಳನ್ನು ಕಳೆದುಕೊಂಡಿದೆ. ಇಂತಹ ಸಂದರ್ಭದಲ್ಲಿ ಎನ್ಡಿಎ ಭಾಗವಾಗಿರುವ ಜೆಡಿಎಸ್ನಿಂದ ಅದರಲ್ಲೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯಿಂದ ರಾಜ್ಯ ಬಹಳಷ್ಟನ್ನು ನಿರೀಕ್ಷಿಸುತ್ತಿದೆ.

ಮೋದಿ ಮೂರನೆಯ ಬಾರಿ ಪ್ರಧಾನಿಯಾಗುತ್ತಿರುವುದು ನಿಜವೇ ಆಗಿದ್ದರೂ, ಕಳೆದ ಎರಡು ಬಾರಿಗಿಂತ ಭಿನ್ನ ಪಾತ್ರವನ್ನು ಅವರು ನಿರ್ವಹಿಸಬೇಕಾಗುತ್ತದೆ. ದಕ್ಷಿಣ ಭಾರತದ ಕುರಿತ ಪೂರ್ವಾಗ್ರಹಗಳನ್ನು ಬದಿಗಿಟ್ಟು ಅವರು ಆಡಳಿತ ನಡೆಸಬೇಕಾಗುತ್ತದೆ. ಜಾತಿಗಣತಿಯನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ಸಿಎಎ-ಎನ್ಆರ್ಸಿ ಹೆಸರಿನಲ್ಲಿ ಜನರಲ್ಲಿ ಅನಗತ್ಯ ಆತಂಕ, ಅಭದ್ರತೆಯನ್ನು ಸೃಷ್ಟಿಸುವ ಚಾಳಿಯನ್ನು ಬಿಡಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಅಮಿತ್ ಶಾ ಜೊತೆಗೆ ಸಣ್ಣದೊಂದು ಅಂತರವನ್ನು ಇಟ್ಟುಕೊಂಡು ಆಡಳಿತ ನಡೆಸಬೇಕಾಗುತ್ತದೆ. ಒಟ್ಟಿನಲ್ಲಿ, ಎಲ್ಲ ಪ್ರಭಾವಳಿಗಳನ್ನು, ಭ್ರಮೆಗಳನ್ನು ಕಳಚಿಕೊಂಡು, ವಾಸ್ತವವನ್ನು ಒಪ್ಪಿಕೊಂಡು ಮಿತ್ರ ಪಕ್ಷಗಳ ನಾಯಕರ ಒತ್ತಡಗಳನ್ನು, ಬೇಡಿಕೆಗಳನ್ನು ಸಹಿಸಿಕೊಳ್ಳುತ್ತಾ, ಗೌರವಿಸುತ್ತಾ ನೂತನ ಪ್ರಧಾನಿ ಮೋದಿಯವರು ಹೆಜ್ಜೆಯಿಡಬೇಕಾಗಿದೆ. ಮೂರನೆಯ ಬಾರಿಯಾದರೂ ಮೋದಿಯವರು ಅಂಬಾನಿ-ಅದಾನಿಗಳ ಪ್ರಧಾನಿಯಾಗದೆ ಈ ದೇಶದ ಶ್ರೀಸಾಮಾನ್ಯರ ಪ್ರಧಾನಿಯಾಗಿ ಜನಮನವನ್ನು ಗೆಲ್ಲಲಿ ಎನ್ನುವುದು ದೇಶದ ಹಾರೈಕೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News