ಅಂಬೇಡ್ಕರ್ ಮಾತುಗಳನ್ನು ಸ್ಪೀಕರ್ ವಿರೂಪಗೊಳಿಸದಿರಲಿ

Update: 2023-12-09 03:46 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ನಿಲ್ಲಿಸಿರುವ ವಿನಾಯಕ ದಾಮೋದರ್ ಸಾವರ್ಕರ್ ಭಾವಚಿತ್ರ ವಿವಾದ ಮರು ಜೀವ ಪಡೆದುಕೊಂಡಿದೆ. ‘ಸದನದಲ್ಲಿರುವ ಸಾರ್ವಕರ್ ಭಾವಚಿತ್ರವನ್ನು ನನಗೆ ಅವಕಾಶ ನೀಡಿದರೆ ಕಿತ್ತು ಬಿಸಾಕುವೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ ಬೆನ್ನಿಗೇ, ಸ್ಪೀಕರ್ ಯು. ಟಿ. ಖಾದರ್ ಅವರು ಸಾವರ್ಕರ್ ಭಾವಚಿತ್ರವನ್ನು ತೆಗೆದು ಹಾಕುವ ಪ್ರಸ್ತಾವವನ್ನು ತಳ್ಳಿ ಹಾಕಿದ್ದಾರೆ. ಅಷ್ಟೇ ಅಲ್ಲ, ‘ನನ್ನ ಕೆಲಸ ಜೋಡಿಸುವುದೇ ಹೊರತು, ಕಿತ್ತು ಬಿಸಾಡುವುದಲ್ಲ. ಸಮಾಜವನ್ನು ಒಗ್ಗೂಡಿಸುವುದಕ್ಕೆ ನನ್ನ ಆದ್ಯತೆ. ಏಕೆಂದರೆ ನಾನು ಬೆಳೆದು ಬಂದ ಪರಿಸರ ಆ ರೀತಿಯದ್ದು’’ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ‘ಪ್ರಿಯಾಂಕ್ ಖರ್ಗೆಯವರು ಬೆಳೆದು ಬಂದ ಪರಿಸರ’ವನ್ನು ವ್ಯಂಗ್ಯವಾಡಿದಂತಾಗಿದೆ. ಸಾವರ್ಕರ್ ಭಾವಚಿತ್ರವನ್ನು ತೆಗೆದು ಹಾಕುವುದು ಯಾವುದರ ಸಂಕೇತ? ಈ ದೇಶವನ್ನು ಒಡೆಯುವ ಸಂಕೇತವೋ ಅಥವಾ ಒಂದು ಗೂಡಿಸುವ ಸಂಕೇತವೋ? ಸಾವರ್ಕರ್ ಪ್ರತಿಪಾದಿಸುತ್ತಾ ಬಂದಿರುವ ಸಿದ್ಧಾಂತ ಈ ದೇಶವನ್ನು ಒಡೆಯುತ್ತದೆ ಎನ್ನುವ ಕಾರಣಕ್ಕಾಗಿಯೇ ಪ್ರಿಯಾಂಕ ಖರ್ಗೆ ಮಾತ್ರವಲ್ಲ, ವಿರೋಧ ಪಕ್ಷದ ನಾಯಕರಾಗಿದ್ದಾಗ ಸಿದ್ದರಾಮಯ್ಯ ಕೂಡ ವರ್ಷದ ಹಿಂದೆ ಸಾವರ್ಕರ್ ಭಾವಚಿತ್ರವನ್ನು ವಿರೋಧಿಸಿದ್ದರು. ಇದೀಗ ಇವರೆಲ್ಲರೂ ಈ ಸಮಾಜವನ್ನು ವಿಭಜಿಸುವ ಉದ್ದೇಶವನ್ನು ಹೊಂದಿದ್ದಾರೆ ಎಂದು ಸ್ವತಃ ಸ್ಪೀಕರ್ ಯು. ಟಿ. ಖಾದರ್ ಅವರೇ ನಾಡಿನ ಜನತೆಯ ಕಿವಿಯೂದಿದಂತಾಗಿದೆ.

ನಾಡಿನ ಅಭಿವೃದ್ಧಿಯನ್ನು ಚರ್ಚಿಸುವ ಬದಲು, ಸಾವರ್ಕರ್ ಭಾವಚಿತ್ರದ ಹೆಸರಿನಲ್ಲಿ ಸಮಯವನ್ನು ಪೋಲು ಮಾಡುವುದು ಬೇಡ ಎಂದು ಅವರು ನೇರವಾಗಿ ಸಲಹೆ ನೀಡಿದ್ದಿದ್ದರೆ ಅದನ್ನು ಒಪ್ಪ ಬಹುದಿತ್ತು. ಅಧಿವೇಶನವನ್ನು ದಾರಿ ತಪ್ಪಿಸುವುದಕ್ಕಾಗಿ ಸಾವರ್ಕರ್ ಭಾವಚಿತ್ರವನ್ನು ಬಿಜೆಪಿಯ ನಾಯಕರು ನೆಪವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಎರಡು ಮಾತಿಲ್ಲ. ಆದರೆ ಸ್ಪೀಕರ್ ಯು. ಟಿ. ಖಾದರ್ ಅವರು ಭಾವಚಿತ್ರ ತೆರವಿಗೆ ಅಸಮ್ಮತಿಯನ್ನು ಸೂಚಿಸುತ್ತಾ ಅದಕ್ಕೆ ಅಂಬೇಡ್ಕರ್ ಹೇಳಿಕೆಗಳನ್ನು ಸಮರ್ಥನೆಯಾಗಿ ಬಳಸಿದ್ದಾರೆ. ಡಾ. ಬಿ. ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ಅರ್ಪಣೆ ಮಾಡುವಾಗ ‘ಈ ರಥವನ್ನು ಸಾಧ್ಯವಾದರೆ ಮುಂದಕ್ಕೆ ತೆಗೆದುಕೊಂಡು ಹೋಗಿ. ಸಾಧ್ಯವಿಲ್ಲದಿದ್ದರೆ ಎಲ್ಲಿದೆಯೋ ಅಲ್ಲಿಯೇ ಬಿಟ್ಟು ಬಿಡಿ. ಆದರೆ ಹಿಂದಕ್ಕೆ ಮಾತ್ರ ತೆಗೆದುಕೊಂಡು ಹೋಗಬೇಡಿ’’ ಎನ್ನುವ ಹೇಳಿಕೆಯನ್ನು ನೀಡಿದ್ದರು. ಅಂಬೇಡ್ಕರ್ ಅವರ ಈ ಐತಿಹಾಸಿಕ ಹೇಳಿಕೆಯನ್ನು ಸಾವರ್ಕರ್ ಭಾವಚಿತ್ರ ತೆರವಿಗೆ ನಿರಾಕರಿಸುವುದಕ್ಕೆ ಖಾದರ್ ಬಳಸಿಕೊಂಡಿದ್ದಾರೆ. ಅಂಬೇಡ್ಕರ್ ಹೇಳಿರುವ ಮಾತನ್ನು ಗ್ರಹಿಸಲು ಸ್ಪೀಕರ್ ವಿಫಲವಾಗಿದ್ದಾರೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

‘‘ಹಿಂದೆ ಏನಾಯಿತು ಎಂದು ಆಲೋಚಿಸುವ ಬದಲು ಮುಂದೆ ಏನು ಮಾಡಬೇಕು ಎನ್ನುವುದರ ಬಗ್ಗೆ ನಮ್ಮ ಲಕ್ಷ್ಯ ಇರಲಿ’’ ಎಂದು ಅಂಬೇಡ್ಕರ್ ಮಾತಿಗೆ ಸ್ಪೀಕರ್ ವ್ಯಾಖ್ಯಾನ ನೀಡಲು ಪ್ರಯತ್ನಿಸಿದ್ದಾರೆ. ಅಂಬೇಡ್ಕರ್ ಮೇಲಿನ ಮಾತುಗಳನ್ನು ಸಂವಿಧಾನದ ಪ್ರಜಾಸತ್ತಾತ್ಮಕ ಜಾತ್ಯತೀತ ಆಶಯಗಳ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸುತ್ತಾ ಹೇಳಿದ್ದಾರೆ. ಈ ದೇಶದ ಪ್ರಜಾಸತ್ತಾತ್ಮಕವಾದ ಆಶಯಗಳನ್ನು ನಿಮಗೆ ಎತ್ತಿ ಹಿಡಿಯಲು ಸಾಧ್ಯವಾಗದೇ ಇದ್ದರೂ ಪರವಾಗಿಲ್ಲ, ನೀವು ಪ್ರಜಾಸತ್ತೆಗೆ ವಿರುದ್ಧವಾದ ಚಿಂತನೆಗಳನ್ನು ಸಂವಿಧಾನದೊಳಗೆ ತುರುಕಬೇಡಿ ಎಂದು ಅವರು ಆಗ್ರಹಿಸಿದ್ದರು. ಅಂಬೇಡ್ಕರ್ ಚಿಂತನೆಯನ್ನು ಸಮಾಜದಲ್ಲಿ ಹರಡುವುದಕ್ಕೆ ಸಾಧ್ಯವಾಗದಿದ್ದರೂ ಪರವಾಗಿಲ್ಲ, ಕನಿಷ್ಠ ಸಾವರ್ಕರ್ ಪ್ರತಿಪಾದಿಸುವ ಮನುವಾದಿ ಚಿಂತನೆಗಳೆಡೆಗೆ ಮತ್ತೆ ಕೊಂಡೊಯ್ಯಬೇಡಿ ಎನ್ನುವ ಪರೋಕ್ಷ ಸಂದೇಶವದು. ಅಂಬೇಡ್ಕರ್ ಈ ಸಮಾಜವನ್ನು ಜೋಡಿಸುವ ಸಂಕೇತವಾದರೆ, ಸಾವರ್ಕರ್ ಸಮಾಜವನ್ನು ಒಡೆಯುವುದರ ಸಂಕೇತವಾಗಿದ್ದಾರೆ. ವಿಪರ್ಯಾಸವೆಂದರೆ, ಸ್ಪೀಕರ್ ಯು.ಟಿ. ಖಾದರ್ ಅವರು ಅಂಬೇಡ್ಕರ್ ಸಂವಿಧಾನದ ರಥವನ್ನು ಹಿಂದಕ್ಕೆ ಒಯ್ಯುವ ಸಾವರ್ಕರ್ ಚಿಂತನೆಯ ಜೊತೆಗೆ ಅವರಿಗೇ ಅರಿವಿಲ್ಲದೆ ಕೈ ಜೋಡಿಸಿದ್ದಾರೆ.

ಅಂಬೇಡ್ಕರ್ ಮಾತುಗಳು ಪಕ್ಕಕ್ಕಿರಲಿ. ಈ ಭಾವಚಿತ್ರವನ್ನು ಬಿಜೆಪಿ ಸರಕಾರ ಕಳೆದ ಡಿಸೆಂಬರ್ನಲ್ಲಿ ಇಟ್ಟಿತ್ತು. ಈ ಸಂದರ್ಭದಲ್ಲಿ ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ನೇತೃತ್ವದಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು. ಆ ಪ್ರತಿಭಟನೆಯನ್ನು ಆಗ ಶಾಸಕರಾಗಿದ್ದ ಯು. ಟಿ. ಖಾದರ್ ಅವರೂ ಬೆಂಬಲಿಸಿದ್ದರು. ಜುಜುಬಿ ಭಾವಚಿತ್ರದ ಹೆಸರಿನಲ್ಲಿ ಕಲಾಪದ ಸಮಯ ಪೋಲು ಮಾಡಬಾರದು ಎನ್ನುವ ಪ್ರಜ್ಞೆ ಆಗ ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಇರಲಿಲ್ಲ? ಅಂದಿನ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಒಂದಿಷ್ಟು ಪ್ರಾಮಾಣಿಕತೆಯಿದ್ದಿದ್ದರೆ, ಇದೀಗ ಮುಖ್ಯಮಂತ್ರಿ ಸ್ಥಾನದಲ್ಲಿರುವ ಸಿದ್ದರಾಮಯ್ಯ ಆ ಭಾವಚಿತ್ರದ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದರು. ‘‘ನನ್ನ ಕೆಲಸ ಜೋಡಿಸುವುದೇ ಹೊರತು, ಕಿತ್ತು ಬಿಸಾಡುವುದಲ್ಲ. ಸಮಾಜವನ್ನು ಒಗ್ಗೂಡಿಸುವುದಕ್ಕೆ ನನ್ನ ಆದ್ಯತೆ’’ ಎಂದಿದ್ದಾರೆ ಸ್ಪೀಕರ್. ಕನಿಷ್ಠ ಸಾವರ್ಕರ್ ಹಿನ್ನೆಲೆ, ಅವರು ಪ್ರತಿಪಾದಿಸುತ್ತಿದ್ದ ಸಿದ್ಧಾಂತಗಳ ಬಗ್ಗೆ ಪ್ರಾಥಮಿಕ ಅರಿವನ್ನು ಹೊಂದಿದವರು ಇಂತಹ ಮಾತುಗಳನ್ನು ಆಡಲು ಸಾಧ್ಯವಿಲ್ಲ. ಸದನ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುತ್ತದೆ. ಸಂವಿಧಾನ ಪ್ರತಿಪಾದಿಸುವ ಆಶಯಗಳನ್ನು ವಿರೋಧಿಸುವುದಕ್ಕಾಗಿಯೇ ತಮ್ಮ ಬದುಕನ್ನ್ನು ಸವೆಸಿದವರು ಸಾವರ್ಕರ್. ‘ಯಾವುದೋ ಸೇತುವೆಗೆ ಸಾವರ್ಕರ್ ಹೆಸರಿಟ್ಟಿದ್ದಾರೆ, ಆ ಸೇತುವೆಯ ಮೇಲೆ ನೀವು ನಡೆಯುವುದಿಲ್ಲವೆ’ ಎಂದು ಸ್ಪೀಕರ್ ಕೇಳಿದ್ದಾರೆ. ಒಂದು ಮೇಲ್ಸೇತುವೆಗೂ ಸುವರ್ಣ ವಿಧಾನಸಭೆಗೂ ಇರುವ ವ್ಯತ್ಯಾಸ ಅವರಿಗೆ ಪ್ರತ್ಯೇಕವಾಗಿ ತಿಳಿಸಿಕೊಡಬೇಕೆ? ಮೇಲ್ಸೇತುವೆಯಲ್ಲಿ ಅದೇನೇನೋ ಅಕ್ರಮಗಳು ನಡೆಯುತ್ತಿರುತ್ತವೆ. ಅವೆಲ್ಲ ಸುವರ್ಣ ವಿಧಾನಸಭೆಯೊಳಗೆ ನಡೆಯುವುದಕ್ಕೆ ಆಸ್ಪದಗಳಿವೆಯೆ? ಸುಭಾಶ್ ಚಂದ್ರ ಬೋಸ್ರ ಸ್ವಾತಂತ್ರ್ಯ ಹೋರಾಟದ ಸೇನೆಗೆ ಯುವಕರು ಸೇರಬಾರದು ಎಂದು ಕರೆ ಕೊಟ್ಟವರು ಸಾವರ್ಕರ್. ಗಾಂಧೀಜಿಯ ಹತ್ಯೆಯ ಬಳಿಕ ಆರೆಸ್ಸೆಸನ್ನು ನಿಷೇಧಿಸಿದವರು ವಲ್ಲಭಭಾಯಿ ಪಟೇಲ್. ಅದೇ ಗಾಂಧೀಜಿ, ಪಟೇಲ್, ಸುಭಾಶ್ಚಂದ್ರ ಬೋಸ್ರ ಭಾವಚಿತ್ರಗಳ ಜೊತೆಗೆ ಸಾವರ್ಕರ್ ಅವರ ಭಾವಚಿತ್ರವನ್ನೂ ಇರಿಸುವ ಮೂಲಕ ಸ್ಪೀಕರ್ ಅವರು ಯಾವುದನ್ನು ಯಾವುದರ ಜೊತೆಗೆ ಜೋಡಿಸಲು ಹೊರಟಿದ್ದಾರೆ? ಈ ಮೂಲಕ ಸುಭಾಶ್ಚಂದ್ರಬೋಸ್, ಪಟೇಲ್, ಗಾಂಧೀಜಿಯಂತಹ ಮಹನೀಯರನ್ನು ಅವಮಾನಿಸುತ್ತಿದ್ದೇನೆ ಎಂದು ಸ್ಪೀಕರ್ ಅವರಿಗೆ ಯಾಕೆ ಅನ್ನಿಸುತ್ತಿಲ್ಲ?

ಸ್ಪೀಕರ್ ಅವರು ಸಾವರ್ಕರ್ ಭಾವಚಿತ್ರವನ್ನು ತೆರವುಗೊಳಿಸದಿದ್ದರೂ ಪರವಾಗಿಲ್ಲ. ಆದರೆ ತನ್ನನ್ನು ಸಮರ್ಥಿಸಿಕೊಳ್ಳಲು ಅಂಬೇಡ್ಕರ್ ಮಾತುಗಳಿಗೆ ತಪ್ಪು ವ್ಯಾಖ್ಯಾನಗಳನ್ನು ನೀಡುವುದನ್ನು ನಿಲ್ಲಿಸಬೇಕು. ಸ್ಪೀಕರ್ ಅವರು ಬೆಳೆದು ಬಂದ ಪರಿಸರ ಸಮಾಜವನ್ನು ಜೋಡಿಸುವಂತಹದ್ದು, ಒಗ್ಗೂಡಿಸುವಂತಹದ್ದು ಎನ್ನುವುದರಲ್ಲಿ ಯಾರಿಗೂ ಅನುಮಾನ ಇಲ್ಲ. ಹಾಗೆಂದು ಸಾವರ್ಕರ್ ಭಾವಚಿತ್ರವನ್ನು ತೆರವುಗೊಳಿಸಲು ಒತ್ತಾಯಿಸಿದ ನಾಯಕರೂ ಅದೇ ಪರಿಸರದಲ್ಲೇ ಬೆಳೆದು ಬಂದವರು, ಅಂಬೇಡ್ಕರ್ ಬಗ್ಗೆ ಆಳವಾದ ಪರಿಜ್ಞಾನವನ್ನು ಹೊಂದಿದವರು ಎನ್ನುವುದು ಅವರ ಗಮನದಲ್ಲಿರುವುದು ಅತ್ಯಗತ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News