ಶಾಲೆಗಳಿಗೆ ಬಾಂಬ್ ಬೆದರಿಕೆ: ಉನ್ನತ ತನಿಖೆ ಅಗತ್ಯ

Update: 2023-12-04 03:47 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಭಾರತದಲ್ಲಿ ‘ಬಾಂಬ್’ನ್ನು ಕೂಡ ಮತಾಂತರಿಸಲಾಗಿದೆ.. ಎಲ್ಲಾದರೂ ಬಾಂಬ್ ಸ್ಫೋಟವಾದರೆ, ಬಾಂಬ್ ಬೆದರಿಕೆ ಕೇಳಿ ಬಂದರೆ ಅದಕ್ಕೆ ಒಂದು ನಿರ್ದಿಷ್ಟ ಸಮುದಾಯವನ್ನು ತಕ್ಷಣ ಹೊಣೆ ಮಾಡಲಾಗುತ್ತದೆ. ಆರೋಪಿಗಳು ಸಿಗುವವರೆಗೂ ಆ ಮಾಡದ ತಪ್ಪನ್ನು ಆ ಸಮುದಾಯದ ಜನರೇ ಹೊತ್ತುಕೊಂಡು ತಿರುಗಾಡಬೇಕು. ಅಪರೂಪಕ್ಕೆ ತನಿಖೆ ನಡೆದು ನಿಜವಾದ ಆರೋಪಿಗಳು ಪತ್ತೆಯಾದಾಗ ಮಾತ್ರ, ಅವರ ತಲೆಗೆ ಕಟ್ಟಲ್ಪಟ್ಟ ಬಾಂಬ್ನಿಂದ ಭಾಗಶಃ ಮುಕ್ತಿ. ದಶಕದ ಹಿಂದೆ ಸಂಭವಿಸಿದ ಮಾಲೆಗಾಂವ್ ಸ್ಫೋಟ, ಮಕ್ಕಾ ಮಸೀದಿ ಸ್ಫೋಟಗಳಲ್ಲಿ ಒಂದು ನಿರ್ದಿಷ್ಟ ಸಮುದಾಯದ ನೂರಾರು ಅಮಾಯಕರನ್ನು ಪೊಲೀಸರು ಬಂಧಿಸಿದ್ದರು. ಕರ್ಕರೆ ತಂಡ ಈ ಸ್ಫೋಟಗಳನ್ನು ಗಂಭೀರವಾಗಿ ತನಿಖೆ ನಡೆಸುತ್ತಾ ಹೋದಂತೆಯೇ ‘‘ಬಾಂಬ್ಗಳಿಗೆ ಧರ್ಮವಿಲ್ಲ’’ ಎನ್ನುವುದು ಬೆಳಕಿಗೆ ಬಂತು. ಸ್ವಾಮಿ ಅಸೀಮಾನಂದ, ಪ್ರಜ್ಞಾಠಾಕೂರ್, ಪುರೋಹಿತ್ ಮೊದಲಾದ ಹೆಸರುಗಳು ಹೊರ ಬರುತ್ತಿದ್ದಂತೆಯೇ ‘ಉಗ್ರವಾದ, ಭಯೋತ್ಪಾದನೆ’ ಎಂದು ಬೊಬ್ಬಿಡುತ್ತಿದ್ದವರು ಏಕಾಏಕಿ ಮೌನವಾದರು. ಇತ್ತೀಚೆಗೆ ಕೇರಳದ ಒಂದು ಚರ್ಚ್ನಲ್ಲಿ ಬಾಂಬ್ ಸ್ಫೋಟಗೊಳ್ಳುತ್ತಿದ್ದಂತೆಯೇ, ಈ ದೇಶದ ಮುಸ್ಲಿಮರ ವಿರುದ್ಧ ಕೆಲವು ರಾಜಕೀಯ ನಾಯಕರು ಸಾಲು ಸಾಲಾಗಿ ತೀರ್ಪುಗಳನ್ನು ನೀಡ ತೊಡಗಿದರು. ಅವರಲ್ಲಿ ಕೇಂದ್ರ ಸಚಿವರು ಕೂಡ ಸೇರಿದ್ದರು. ಆದರೆ ಕೆಲವೇ ಗಂಟೆಗಳಲ್ಲಿ ಬಾಂಬಿನ ಅಸಲಿ ಧರ್ಮ, ಹೆಸರು ಬಹಿರಂಗವಾಗುತ್ತಿದ್ದಂತೆಯೇ ‘ಭಯೋತ್ಪಾದನೆ, ಉಗ್ರವಾದ’ದ ಕುರಿತ ಹೇಳಿಕೆಗಳೆಲ್ಲ ಬಿಲ ಸೇರಿಕೊಂಡವು. ಇದೀಗ ರಾಜ್ಯದಲ್ಲಿ ಕೆಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಒಡ್ಡಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿವೆ. ಈ ಪತ್ರ ರವಾನೆಗೆ ಶುಕ್ರವಾರವನ್ನೇ ಆರಿಸಿರುವುದು ಆಕಸ್ಮಿಕವಲ್ಲ. ಸುಮಾರು ೪೪ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಿಗೆ ಈ ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿರುವುದರಿಂದ ಈ ಪ್ರಕರಣವನ್ನು ‘ಕಿಡಿಗೇಡಿ’ಗಳ ಕೃತ್ಯವೆಂದು ನಿರ್ಲಕ್ಷಿಸುವಂತಿಲ್ಲ.

ಹಾಗೆ ನೋಡಿದರೆ ಕರ್ನಾಟಕದಲ್ಲಿ ರಾಜಕೀಯ ದುರುದ್ದೇಶಗಳಿಗಾಗಿ ಶಾಲೆಗಳನ್ನು ಬಳಸುತ್ತಿರುವುದು ಇದೇ ಮೊದಲಲ್ಲ. ಕೊರೋನದಿಂದ ತತ್ತರಿಸಿದ ಶಾಲೆಗಳನ್ನು ಮೇಲೆತ್ತ ಬೇಕಾಗಿದ್ದ ಅಂದಿನ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ, ಹಿಜಾಬ್ ಹೆಸರಿನಲ್ಲಿ ರಣರಂಗ ಮಾಡಿತು. ಅದಾಗಲೇ ಕೊರೋನ ಕಾರಣದಿಂದ ಸಾವಿರಾರು ಮಕ್ಕಳು ಶಾಲೆ ತೊರೆದಿದ್ದರು. ಅವರನ್ನು ಮರಳಿ ಶಾಲೆಗೆ ಕರೆ ತರುವ ಬದಲು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿನಿಯರನ್ನು ಹಿಜಾಬ್ ಹೆಸರಿನಲ್ಲಿ ಕಾಲೇಜುಗಳಿಂದ ಹೊರ ಹಾಕಿತು. ಹಿಜಾಬ್ ಧರಿಸಿ ಶಾಲೆಗೆ ತೆರಳಲು, ವಿದ್ಯಾರ್ಥಿನಿಯರು ನ್ಯಾಯಾಲಯದ ಮೆಟ್ಟಿಲೇರುವ ಸ್ಥಿತಿ ನಿರ್ಮಾಣವಾಯಿತು. ಇಷ್ಟೇ ಅಲ್ಲ, ವಿದ್ಯಾರ್ಥಿಗಳಿಗೆ ಕೇಸರಿ ಶಾಲುಗಳನ್ನು ವಿತರಿಸಿ ಶಾಲೆಯ ಪರಿಸರವನ್ನು ಹಿಂದೂ-ಮುಸ್ಲಿಂ ಎಂದು ವಿಭಜಿಸುವ ಪ್ರಯತ್ನ ಸರಕಾರದ ನೇತೃತ್ವದಲ್ಲೇ ನಡೆಯಿತು. ಹಿಜಾಬ್ ಪ್ರಕರಣ ತಣ್ಣಗಾಗುತ್ತಿದ್ದ ಹಾಗೆಯೇ, ಪಠ್ಯ ಪುಸ್ತಕಗಳನ್ನ್ನು ತಿರುಚುವ ಅನಗತ್ಯ ಸಾಹಸಕ್ಕೆ ಕೈ ಹಾಕಿತು. ಸಂಘಪರಿವಾರದ ಮೂರನೇ ದರ್ಜೆಯ ಕಾರ್ಯಕರ್ತರ ನೇತೃತ್ವದಲ್ಲಿ ಪಠ್ಯ ಪುಸ್ತಕಗಳನ್ನು ವಿರೂಪಗೊಳಿಸಲಾಯಿತು. ನಾರಾಯಣ ಗುರುಗಳ ಜಾಗದಲ್ಲಿ ಹೆಡಗೇವಾರ್ರನ್ನು ತಂದು ಕೂರಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸೋಲಿಗೆ, ಅವರು ಶಾಲೆ, ಕಾಲೇಜುಗಳನ್ನು ತಮ್ಮ ರಾಜಕೀಯ ದುರುದ್ದೇಶಗಳಿಗೆ ಬಳಸಿರುವುದು ಕೂಡ ಒಂದು ಕಾರಣ. ತನ್ನ ರಾಜಕೀಯ ಉದ್ದೇಶ ಸಾಧಿಸುವುದಕ್ಕಾಗಿ ಎಂತಹ ಕೀಳುಮಟ್ಟಕ್ಕೂ ಇಳಿಯಬಲ್ಲೆ ಎನ್ನುವುದನ್ನು ಅಂದಿನ ಬಿಜೆಪಿ ಸರಕಾರ ಮತ್ತು ಸಂಘಪರಿವಾರ ಸಾಬೀತು ಪಡಿಸಿತ್ತು. ಆದರೆ ಜನಸಾಮಾನ್ಯರು ಸಂಘಪರಿವಾರದ ಉದ್ದೇಶವನ್ನು ಚುನಾವಣೆಯಲ್ಲಿ ವಿಫಲಗೊಳಿಸಿದರು.

ಇದೀಗ ೪೪ ಶಾಲೆಗಳಿಗೆ ಬಾಂಬ್ ಬೆದರಿಕೆ ‘ಶಾಲೆಗಳ ರಾಜಕೀಯ ದುರುಪಯೋಗದ’ ಮುಂದುವರಿದ ಭಾಗವಾಗಿದೆ. ‘‘ಎಲ್ಲರೂ ಮುಸ್ಲಿಮರಾಗಿ, ಇಲ್ಲದಿದ್ದರೆ ಎಲ್ಲ ಶಾಲೆಗಳನ್ನು ಬಾಂಬ್ ಹಾಕಿ ಸ್ಫೋಟಿಸುತ್ತೇವೆ’’ ಎನ್ನುವ ಧ್ವನಿಯುಳ್ಳ ಬೆದರಿಕೆಯ ಈ ಮೇಲ್ ಕಳುಹಿಸುವ ಮೂಲಕ ಸಮಾಜದಲ್ಲಿ ಆತಂಕದ ವಾತಾವರಣವನ್ನು ನಿರ್ಮಿಸುವುದು ಮಾತ್ರವಲ್ಲ, ಒಂದು ಧರ್ಮದ ಜನರ ವಿರುದ್ಧ ದ್ವೇಷವನ್ನು ಹರಡುವುದು ಕೂಡ ದುಷ್ಕರ್ಮಿಗಳ ಗುರಿಯಾಗಿದೆ. ಶಾಲೆಯಲ್ಲಿರುವ ವಿದ್ಯಾರ್ಥಿಗಳ ನಡುವೆ ಪರಸ್ಪರ ಅಪನಂಬಿಕೆಗಳನ್ನು ಬಿತ್ತುವ ಪ್ರಯತ್ನ ಇದು. ಇಷ್ಟೇ ಅಲ್ಲ, ಹೊಸದಾಗಿ ರಚನೆಯಾಗಿರುವ ಸರಕಾರದ ದೌರ್ಬಲ್ಯವನ್ನು ಬಳಸಿಕೊಂಡು ಭಯೋತ್ಪಾದಕರು ಈ ಬೆದರಿಕೆಯನ್ನು ಒಡ್ದಿದ್ದಾರೆ ಎನ್ನುವ ಸಂದೇಶವನ್ನು ಜನರಿಗೆ ಈ ಪತ್ರ ನೀಡುತ್ತದೆ. ‘ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದವರೇ ಇದನ್ನು ಮಾಡಿದ್ದಾರೆ’’ ಎನ್ನುವುದನ್ನು ಸ್ಪಷ್ಟ ಪಡಿಸುವ ಉದ್ದೇಶ ಪತ್ರದಲ್ಲಿ ಬರೆದಿರುವ ಕೆಲವು ಸಾಲುಗಳಲ್ಲಿವೆ. ಜೊತೆಗೆ ಇನ್ಶಾ ಅಲ್ಲಾ, ಬಿಸ್ಮಿಲ್ಲಾ ಎಂಬಿತ್ಯಾದಿಯನ್ನು ಎಲ್ಲಿ ಬಳಸಬೇಕು ಎಂದು ಗೊತ್ತಿಲ್ಲದೆಯೇ ಒಟ್ಟಾರೆಯಾಗಿ ಬಳಸಿರುವುದು ಕೂಡ ಎದ್ದು ಕಾಣುತ್ತದೆ. ಈ ಬಾಂಬ್ ಬೆದರಿಕೆಯ ಪತ್ರ ಬಹಿರಂಗವಾಗುತ್ತಿದ್ದಂತೆಯೇ ಬಿಜೆಪಿಯ ನಾಯಕರು ‘ಉಗ್ರರು, ಭಯೋತ್ಪಾದಕರು’ ಎಂಬಿತ್ಯಾದಿಯಾಗಿ ಮಾತನಾಡತೊಡಗಿದ್ದಾರೆ. ಎಲ್ಲಿಯವರೆಗೆ ತನಿಖೆ ನಡೆದು ನಿಜವಾದ ‘ಭಯ ಉತ್ಪಾದಕರ’ ಮುಖವಾಡ ಕಳಚಲ್ಪಡುವುದಿಲ್ಲವೋ ಅಲ್ಲಿಯವರೆಗೆ ಈ ಪತ್ರದ ಹೊಣೆಯನ್ನು ಈ ನಾಡಿನ ಒಂದು ನಿರ್ದಿಷ್ಟ ಸಮುದಾಯದ ಜನರೇ ಹೊತ್ತುಕೊಳ್ಳಬೇಕಾಗುತ್ತದೆ ಮತ್ತು ಸಂಘಪರಿವಾರ ಮತ್ತು ಬಿಜೆಪಿ ಈ ಪತ್ರವನ್ನೇ ಮುಂದಿಟ್ಟುಕೊಂಡು ಸಮಾಜದಲ್ಲಿ ದ್ವೇಷವನ್ನು ಹರಡಲು ಯತ್ನಿಸುತ್ತದೆ. ಆದುದರಿಂದ ಸರಕಾರ ಈ ಪತ್ರದ ಹಿಂದಿರುವ ಶಕ್ತಿಗಳನ್ನು ಹುಡುಕಿ ತೆಗೆದು ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ.

ಇತ್ತೀಚೆಗಷ್ಟೇ ಪ್ರಗತಿ ಪರ ಲೇಖಕರು, ವಿಚಾರವಾದಿಗಳಿಗೆ ಸಾಲು ಸಾಲು ಜೀವ ಬೆದರಿಕೆಯ ಅನಾಮಿಕ ಪತ್ರಗಳನ್ನು ಬರೆದ ಸಂಘಪರಿವಾರದ ಮುಖಂಡನೊಬ್ಬನನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಅದರ ಮುಂದುವರಿದ ಭಾಗ ಇದಾಗಿರುವ ಸಾಧ್ಯತೆಗಳೂ ಇವೆ. ಕೆಲವು ವರ್ಷಗಳ ಹಿಂದೆ ಹುಬ್ಬಳ್ಳಿಯ ನ್ಯಾಯಾಲಯದ ಆವರಣದಲ್ಲಿ ಬಾಂಬ್ ಸ್ಫೋಟ ನಡೆದಿತ್ತು. ಆ ಕೃತ್ಯ ನಡೆದ ಬೆನ್ನಿಗೇ ಸ್ಫೋಟದ ಹಿಂದಿರುವ ಇಸ್ಲಾಮಿಕ್ ಭಯೋತ್ಪಾದನೆ ಸಂಘಟನೆಗಳ ಬಗ್ಗೆ ಪತ್ರಿಕೆಗಳು ಪುಂಖಾನುಪುಂಖವಾಗಿ ಬರೆದವು. ಆದರೆ ಬಳಿಕ ಈ ಕೃತ್ಯವನ್ನು ಎಸಗಿರುವುದು ರಾಮಸೇನೆಯ ಕಾರ್ಯಕರ್ತನಾಗಿದ್ದ ಜಂಬಗಿ ಮತ್ತು ಆತನ ಸಹಚರರು ಎನ್ನುವುದು ಬೆಳಕಿಗೆ ಬಂತು. ಸಿಂಧಗಿಯ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಪಾಕಿಸ್ತಾನದ ಧ್ವಜವನ್ನು ಹಾರಿಸಲಾಯಿತು. ಕೃತ್ಯ ನಡೆದ ಬೆನ್ನಿಗೇ ಆರೆಸ್ಸೆ ಸ್ ಮತ್ತು ರಾಮಸೇನೆ ಕಾರ್ಯಕರ್ತರು ಇದರ ವಿರುದ್ಧ ಪ್ರತಿಭಟನೆಗಳನ್ನೂ ನಡೆಸಿದರು. ಆದರೆ ತನಿಖೆಯಲ್ಲಿ ಈ ಧ್ವಜವನ್ನು ಹಾರಿಸಿರುವುದು ಸ್ವತಃ ರಾಮಸೇನೆ ಕಾರ್ಯಕರ್ತರು ಎನ್ನುವುದು ಬೆಳಕಿಗೆ ಬಂತು. ಅಂದರೆ, ತಮ್ಮ ರಾಜಕೀಯ ದುರುದ್ದೇಶಕ್ಕಾಗಿ ಈ ದೇಶದ ವಿರುದ್ಧವೇ ಸಂಚು ರೂಪಿಸುವುದಕ್ಕೆ ಇವರು ಹೇಸುವುದಿಲ್ಲ ಎನ್ನುವುದು ಇದರಿಂದ ಸಾಬೀತಾಗುತ್ತದೆ. ಈ ಹಿಂದೆ ಮಾಲೆಗಾಂವ್, ಮಕ್ಕಾ ಸ್ಫೋಟಗಳಲ್ಲೂ ಇದೇ ಸಂಭವಿಸಿದವು. ‘ಭಾರತ ಮಾತೆ’ ಎಂದು ದೇಶವನ್ನು ಕರೆಯುತ್ತಲೇ, ಮಾತೆಯ ಮಡಿಲಿಗೆ ಬಾಂಬುಗಳನ್ನು ಇಡುವ ದ್ರೋಹಿಗಳು ನಮ್ಮ ನಡುವೆ ಇದ್ದಾರೆ. ಇಂದು ಶಾಲೆಗಳಿಗೆ ಬೆದರಿಕೆಯನ್ನು ಹಾಕಿದ ಶಕ್ತಿಗಳು ನಾಳೆ, ನಿಜಕ್ಕೂ ಶಾಲೆಗಳಿಗೆ ಬಾಂಬ್ಗಳನ್ನಿಟ್ಟರೆ ಅಚ್ಚರಿಯೇನೂ ಇಲ್ಲ. ಇದೇ ಸಂದರ್ಭದಲ್ಲಿ ಶಾಲೆಗಳಿಗೆ ರವಾನಿಸಿದ ಈಮೇಲ್ ಹಿಂದೆ ನಿಜಕ್ಕೂ ಇಸ್ಲಾಮಿಕ್ ಮೂಲಭೂತವಾದಿ ಶಕ್ತಿಗಳು ಇದ್ದಾರೆಯೇ ಎನ್ನುವುದೂ ತನಿಖೆಯಾಗಬೇಕಾಗಿದೆ. ಯಾಕೆಂದರೆ, ಧರ್ಮದ ಹೆಸರಿನಲ್ಲಿ ಯುವಕರನ್ನು ದಾರಿತಪ್ಪಿಸುವುದಕ್ಕೆ ಹಲವು ಶಕ್ತಿಗಳು ಹೊಂಚು ಹಾಕಿ ಕೂತಿರುವ ದಿನಗಳು ಇದು. ಈ ಬೆದರಿಕೆಯನ್ನು ಒಡ್ಡಿದವರು ಯಾವ ಧರ್ಮಕ್ಕೇ ಸೇರಿರಲಿ, ಅವರ ಅಂತಿಮ ಉದ್ದೇಶ ಭಯವನ್ನು ಉತ್ಪಾದಿಸಿ ಸಮಾಜದ ಶಾಂತಿಯನ್ನು ಕೆಡಿಸುವುದೇ ಆಗಿದೆ. ಆದುದರಿಂದ ಸರಕಾರ ತಕ್ಷಣ ಈ ಪತ್ರದ ಹಿಂದೆ ಬಿದ್ದು ಅಸಲಿ ಭಯೋತ್ಪಾದಕರ ಮುಖವಾಡವನ್ನು ಕಳಚಿ, ಅವರನ್ನು ಬಂಧಿಸುವ ಕೆಲಸ ಮಾಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News