ಉಡುಪಿ ನೇಜಾರು ಕಗ್ಗೊಲೆ: ಕೊಲೆಗಾರನ ಹಿನ್ನೆಲೆ ತನಿಖೆಯಾಗಲಿ

Update: 2023-11-17 03:49 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಉಡುಪಿಯ ನೇಜಾರ್ನಲ್ಲಿ ಒಂದೇ ಕುಟುಂಬದ ನಾಲ್ವರ ಕಗ್ಗೊಲೆಗೆ ಸಂಬಂಧಿಸಿ ಆರೋಪಿ ಪ್ರವೀಣ್ ಚೌಗುಲೆ ಎಂಬಾತನನ್ನು ಬಂಧಿಸಲಾಗಿದೆ. ಈ ಕೊಲೆಯ ಬರ್ಬರತೆಗೆ ಹಲವು ಆಯಾಮಗಳಿವೆ. ಅಸಹಾಯಕ ಸ್ಥಿತಿಯಲ್ಲಿದ್ದ ಮೂವರು ಮಹಿಳೆಯರನ್ನು ಮತ್ತು ಮಗುವನ್ನು ಆತ ಕೊಂದಿದ್ದಾನೆ ಎನ್ನುವುದೇ ಆತನ ಕೌರ್ಯದ ಆಳವನ್ನು ಹೇಳುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಕೊಲೆಗಾರ ಯಾವುದೋ ಕಾಡಿನಿಂದಲೋ, ಜೈಲಿನಿಂದಲೋ ಅಥವಾ ಮಾನಸಿಕ ಆಸ್ಪತ್ರೆಯೊಂದಲೋ ಬಂದವನಲ್ಲ. ಕನಿಷ್ಠ ದರೋಡೆಕೋರನೂ ಅಲ್ಲ. ಗಣ್ಯರು, ನಾಗರಿಕರು ಎಂದು ಕರೆಸಿಕೊಂಡವರು ದೇಶ, ವಿದೇಶಗಳಿಗೆ ಪ್ರಯಾಣಿಸುವ ಏರ್ ಇಂಡಿಯಾದಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಜೊತೆಗೆ ಕೊಲೆ ಆರೋಪಿ ಪತ್ನಿ, ಮಗು ಹೊಂದಿರುವ ನಲವತ್ತು ವರ್ಷದ ಗೃಹಸ್ಥ. ಪ್ರೀತಿಯಂತಹ ಎಳಸು ಕಾರಣವನ್ನು ಮುಂದಿಟ್ಟು, ಇಡೀ ಒಂದು ಕುಟುಂಬವನ್ನು ಕೊಂದು ಹಾಕುವ ಅಪ್ರಬುದ್ಧ ಯುವ ಮನಸ್ಸಿನವನಂತೂ ಖಂಡಿತಾ ಅಲ್ಲ. ವೈಯಕ್ತಿಕ ವೈಮನಸ್ಯದ ಹೆಸರಿನಲ್ಲಿ ಒಂದು ಇಡೀ ಕುಟುಂಬವನ್ನು ಕೊಂದು ಹಾಕುವ ಕ್ರೌರ್ಯವನ್ನು ಈತ ಮೆರೆದಿದ್ದಾನೆ ಎಂದಾದರೆ, ಮತ್ತೊಂದು ದಿನ ಯಾವುದೋ ಪ್ರಯಾಣಿಕನ ಮೇಲಿನ ಸಿಟ್ಟಿಗೆ ವಿಮಾನದೊಳಗೆ ಬಾಂಬ್ ಇಡಲಾರ ಎನ್ನುವಂತಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಈತ ಮಹಾರಾಷ್ಟ್ರದಲ್ಲಿ ಪೊಲೀಸ್ ಸಿಬ್ಬಂದಿಯಾಗಿಯೂ ಕೆಲಸ ಮಾಡಿದ್ದ. ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಪೊಲೀಸ್ ಸಿಬ್ಬಂದಿಯೊಳಗೇ ಹೀಗೊಬ್ಬ ಭಯಾನಕ ಕೊಲೆಗಾರನಿದ್ದ ಎನ್ನುವುದು ಸಮಾಜ ಆತಂಕ ಪಡಬೇಕಾದ ವಿಷಯವಾಗಿದೆ.

ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬ ರೈಲಿನಲ್ಲಿ ಯಾವ ಕಾರಣವೂ ಇಲ್ಲದೆ, ಕೇವಲ ಧರ್ಮದ ಹೆಸರಿನಲ್ಲಿ ಮೂವರನ್ನು ಕೊಂದು ಹಾಕಿದ ಪ್ರಕರಣ ಇನ್ನೂ ಹಸಿಯಾಗಿದೆ. ಜನಸಾಮಾನ್ಯರನ್ನು ರಕ್ಷಿಸಲು ಬಳಸಬೇಕಾಗಿದ್ದ ಕೋವಿಯಿಂದ, ಅಮಾಯಕರನ್ನು ಧರ್ಮದ ಹೆಸರಿನಲ್ಲಿ ಕೊಂದು ಹಾಕಿ, ಬಳಿಕ ‘ಮೋದಿಗೆ ಜೈಕಾರ’ ಕೂಗಿದ್ದ ಈತ. ನಕಲಿ ಗೋರಕ್ಷಕರು, ಸಂಸ್ಕೃತಿ ರಕ್ಷಕರು ನಡೆಸುವ ಕ್ರೌರ್ಯದ ಜೊತೆಗೆ ಪೊಲೀಸರು ಪರೋಕ್ಷವಾಗಿ ಶಾಮೀಲಾಗುತ್ತಿರುವ ಆರೋಪಗಳು ಕೇಳಿ ಬರುತ್ತಿರುವ ದಿನಗಳಲ್ಲೇ, ಪೊಲೀಸ್ ಇಲಾಖೆಗಳಲ್ಲಿ ನೇಮಕವಾದ ಸಿಬ್ಬಂದಿ ಕೊಲೆಯಂತಹ ಬರ್ಬರ ಕ್ರೌರ್ಯಗಳಲ್ಲಿ ನೇರವಾಗಿ ಗುರುತಿಸಿಕೊಳ್ಳುವುದು ದೇಶದ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಅಪಾಯಕಾರಿ ಬೆಳವಣಿಗೆಯಾಗಿದೆ. ಸನಾತನ ಸಂಸ್ಥೆ, ರಾಮಸೇನೆಯಂತಹ ಭಯೋತ್ಪಾದನಾ ಸಂಘಟನೆಗಳು ಬಿತ್ತಿದ ದ್ವೇಷ ಸಿದ್ಧಾಂತದಿಂದ ಮೆದುಳು ಕೆಡಿಸಿಕೊಂಡ ಯುವಕರ ಗುಂಪು ಬೆಳೆಯುತ್ತಿರುವುದು ಮಾತ್ರವಲ್ಲ, ಪೊಲೀಸ್ ಇಲಾಖೆ, ಸೇನೆಯಂತಹ ಆಂತರಿಕ ಭದ್ರತೆಯ ಕ್ಷೇತ್ರದೊಳಗೆ ಅವರು ನುಸುಳುತ್ತಿರುವುದನ್ನು ಇದು ಹೇಳುತ್ತಿದೆ. ಆದುದರಿಂದಲೇ, ಉಡುಪಿಯ ನೇಜಾರ್ನಲ್ಲಿ ಬರ್ಬರ ಕೊಲೆಗಳನ್ನು ಮಾಡಿದ ವ್ಯಕ್ತಿಯ ಹಿನ್ನೆಲೆಯನ್ನು ತಿಳಿದುಕೊಳ್ಳುವುದು ಕೂಡ ತನಿಖೆಯ ಮುಖ್ಯ ಭಾಗವಾಗಬೇಕಾಗಿದೆ. ಕೊಲೆಗಳಿಗೆ ಕಾರಣ ಏನೇ ಇರಬಹುದು, ಆದರೆ ನಾಲ್ಕು ಕೊಲೆಗಳನ್ನು ಮಾಡುವಂತಹ ಮಾನಸಿಕತೆಗೆ ಒಬ್ಬನನ್ನು ಸಜ್ಜುಗೊಳಿಸುವುದರ ಹಿಂದೆ, ಯಾವುದಾದರೂ ದ್ವೇಷ ಸಿದ್ಧಾಂತಗಳನ್ನು ಹರಡುವುದಕ್ಕಾಗಿಯೇ ಇರುವ ಸಂಘಟನೆಗಳು ಕೆಲಸಮಾಡಿದೆಯೇ ಎನ್ನುವುದನ್ನು ಪರಿಶೀಲಿಸುವುದು ಇಂದಿನ ದಿನಗಳಿಗೆ ಅತ್ಯಗತ್ಯವಾಗಿದೆ. ಯಾಕೆಂದರೆ, ಪ್ರೇಮ ಪ್ರಕರಣದಲ್ಲಿ ನಿರಾಶನಾಗಿ ಮಗುವು ಸೇರಿದಂತೆ ಮೂವರು ಅಮಾಯಕ ಮಹಿಳೆಯರನ್ನು ಕೊಲ್ಲುವಂತಹ ಕೃತ್ಯದ ಹಿಂದಿರುವ ಕ್ರೌರ್ಯಕ್ಕೆ ಬೇರೆ ಬೇರೆ ಮಾನಸಿಕ ಆಯಾಮಗಳಿರುವ ಸಾಧ್ಯತೆಗಳಿವೆ. ಅವನೊಳಗೆ ಜಾಗೃತವಾಗಿದ್ದ ಆ ದ್ವೇಷ, ಕ್ರೌರ್ಯ ಹೊರಬರುವುದಕ್ಕೆ ಒಂದು ನೆಪವನ್ನು ಕಾಯುತ್ತಿತ್ತು ಎಂದಷ್ಟೇ ತಿಳಿಯಬೇಕಾಗುತ್ತದೆ. ಆದುದರಿಂದ ಆತ ಬೆಳೆದು ಬಂದ ಪರಿಸರ, ಆತ ಪೊಲೀಸ್ ಇಲಾಖೆಗೆ ಸೇರುವ ಮೊದಲು ಭಾಗಿಯಾಗಿದ್ದ ಚಟುವಟಿಕೆಗಳು ಈ ಎಲ್ಲದರ ಬಗ್ಗೆಯೂ ತನಿಖೆ ನಡೆಸುವುದರಿಂದ ಸಮಾಜದಲ್ಲಿ ಹೆಚ್ಚುತ್ತಿರುವ ಹಿಂಸೆ, ಕ್ರೌರ್ಯಗಳ ಮೂಲಗಳನ್ನು ಗುರುತಿಸಿ ಅವುಗಳಿಗೆ ಔಷಧಿಗಳನ್ನು ಕಂಡು ಹುಡುಕಬಹುದಾಗಿದೆ. ಮುಖ್ಯವಾಗಿ ಏರ್ಇಂಡಿಯಾದಂತಹ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಮಾನಸಿಕ ಸ್ಥಿತಿ ಗತಿಗಳನ್ನು ಆಗಾಗ ತಪಾಸಣೆ ಮಾಡುವ ಅಗತ್ಯವಂತೂ ತುರ್ತಾಗಿ ಇದೆ ಎನ್ನುವುದನ್ನು ಈ ಪ್ರಕರಣ ಸಾರಿ ಹೇಳುತ್ತಿದೆ. ಇಲ್ಲದೇ ಇದ್ದರೆ ಒಂದಲ್ಲ ಒಂದು ದೊಡ್ಡ ಅವಘಡಗಳಿಗೆ ಇಂತಹ ಸಿಬ್ಬಂದಿ ಕಾರಣರಾಗಿ ಬಿಡುತ್ತಾರೆ.

ಇತ್ತೀಚೆಗೆ ಉಡುಪಿಯಲ್ಲಿ ಶಾಲೆಯ ಒಂದಿಬ್ಬರು ವಿದ್ಯಾರ್ಥಿನಿಯರು ಹುಡುಗಾಟಿಕೆಗೆ ಮಾಡಿದ ವೀಡಿಯೊ ಚಿತ್ರೀಕರಣದ ಪ್ರಕರಣವನ್ನು ಕೆಲವು ರಾಜಕೀಯ ವ್ಯಕ್ತಿಗಳು ರಾಷ್ಟ್ರಮಟ್ಟದ ‘ಅಪರಾಧ’ವನ್ನಾಗಿಸಿದರು. ಇಲ್ಲಿ ವಿದ್ಯಾರ್ಥಿನಿಯರು ಹುಡುಗಾಟಿಕೆಗೆ ವೀಡಿಯೊ ಮಾಡಿರುವುದು ಮಾತ್ರವಲ್ಲ, ಪ್ರಮಾದ ಅರಿವಿಗೆ ಬಂದಾಕ್ಷಣ ಅದನ್ನು ಅಳಿಸಿದ್ದಾರೆ. ಸಂತ್ರಸ್ತರು ಯಾವುದೇ ದೂರನ್ನು ನೀಡದೇ ಇದ್ದರೂ, ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ಅದಕ್ಕೆ ಧರ್ಮದ ಬಣ್ಣ ಬಳಿದು, ಬೀದಿಗಿಳಿದು ಪ್ರತಿಭಟನೆ ನಡೆಸಿದರು. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯೂ ಆಗಿರುವ ಖುಷ್ಬೂ ಉಡುಪಿಗೆ ಭೇಟಿ ನೀಡಿ ವಿಚಾರಣೆ ನಡೆಸಿದರು. ‘ಲವ್ ಜಿಹಾದ್’ನ್ನು ಕೂಡ ಗಂಟು ಹಾಕಲು ಯತ್ನಿಸಿದರು. ಸಮಾಜದ ಬಗ್ಗೆ ಇಷ್ಟೊಂದು ಕಾಳಜಿಯಿರುವ, ಪ್ರತಿ ಕೊಲೆಗಳಲ್ಲಿ ಧರ್ಮವನ್ನು ಹುಡುಕುವ ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ದೇಶವನ್ನು ಬೆಚ್ಚಿ ಬೀಳಿಸಿದ ನೇಜಾರು ಘಟನೆ ನಡೆದು ಒಂದು ವಾರ ಕಳೆದರೂ ಉಡುಪಿಗೆ ಭೇಟಿ ನೀಡಿಲ್ಲ. ಸಚಿವೆ ಶೋಭಾ ಕರಂದ್ಲಾಜೆ ಕನಿಷ್ಠ ತಾನೊಬ್ಬ ಮಹಿಳೆ ಎನ್ನುವ ಕಾರಣಕ್ಕಾದರೂ, ಈ ಕೃತ್ಯದ ಬಗ್ಗೆ ತಮ್ಮ ಖಂಡನೆಯನ್ನು ವ್ಯಕ್ತಪಡಿಸಬೇಕಾಗಿತ್ತು. ಹಾಗೆಯೇ ಸ್ವಯಂಘೋಷಿತ ಹಿಂದೂ ನಾಯಕಿ ಎನ್ನುವ ನೆಲೆಯಲ್ಲಿ ಆರೋಪಿ ಮಾಡಿದ ಕೃತ್ಯಕ್ಕೂ ತನ್ನ ಧರ್ಮಕ್ಕೂ ಯಾವ ಸಂಬಂಧವೂ ಇಲ್ಲ ಎನ್ನುವ ಸ್ಪಷ್ಟೀಕರಣವನ್ನೂ ಮಾಧ್ಯಮಗಳ ಮುಂದೆ ನೀಡಬೇಕಾಗಿತ್ತು. ದುರದೃಷ್ಟವಶಾತ್ ಈ ಭೀಕರ ಕೃತ್ಯ ‘ವೀಡಿಯೊ ಪ್ರಕರಣ’ದಷ್ಟು ಗಂಭೀರವಾಗಿ ಇವರಾರಿಗೂ ಕಂಡಿಲ್ಲ. ಯಾಕೆಂದರೆ ಕೊಲೆಗೀಡಾದವರು ಮಹಿಳೆಯರೇ ಆದರೂ ಅವರ ಧರ್ಮ ಬದಲಾಗಿದೆ. ಹಾಗೆಯೇ ಕೊಲೆಗಾರನ ಧರ್ಮವೂ ಬದಲಾಗಿದೆ.

ಒಂದು ವೇಳೆ ಈ ಪ್ರಕರಣದಲ್ಲಿ ಕೊಲೆಗೈಯಲ್ಪಟ್ಟ ತರುಣಿಯ ಹೆಸರು ಹಿಂದೂ ಧರ್ಮಕ್ಕೆ ಸೇರಿದ್ದು, ಕೊಲೆಗಾರನ ಹೆಸರು ಮುಸ್ಲಿಮ್ ಸಮುದಾಯಕ್ಕೆ ಸೇರಿದ್ದರೆ. ಸಂಘಪರಿವಾರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಎಂತಹ ಭೀಕರ ಸ್ಥಿತಿಯನ್ನು ತಂದಿಡುತ್ತಿತ್ತು? ಎನ್ನುವುದನ್ನೊಮ್ಮೆ ಕಲ್ಪಿಸಿಕೊಳ್ಳೋಣ. ಕೊಲೆಗಾರ ತನ್ನ ಸ್ವಾರ್ಥಕ್ಕಾಗಿ ಒಂದು ಕುಟುಂಬವನ್ನು ಕೊಂದು ಹಾಕಿದರೆ, ಆ ಕೊಲೆಯನ್ನು ಬಳಸಿಕೊಂಡು ಈ ಸಂಘಪರಿವಾರದ ನಾಯಕರು ಇಡೀ ಜಿಲ್ಲೆಗೇ ಬೆಂಕಿ ಹಚ್ಚುತ್ತಿದ್ದರು. ಅಷ್ಟೇ ಅಲ್ಲ, ತಮ್ಮ ಭಾಷಣಗಳ ಮೂಲಕ, ಇನ್ನಷ್ಟು ಕೊಲೆಗಾರರನ್ನು ಸೃಷ್ಟಿಸುತ್ತಿದ್ದರು. ಆದುದರಿಂದಲೇ, ಕೊಲೆ, ಹಿಂಸೆಗಳನ್ನು ತಮ್ಮ ರಾಜಕೀಯಕ್ಕೆ ಬಳಸುವ ಇಂತಹ ರಾಜಕಾರಣಿಗಳ ಮಾನಸಿಕ ಸ್ಥಿತಿ ಯಾವುದೇ ಚೌಗುಲೆಯ ಮಾನಸಿಕ ಸ್ಥಿತಿಗಿಂತ ಕಡಿಮೆ ಅಪಾಯಕಾರಿಯಲ್ಲ. ಆದುದರಿಂದ, ಈ ಬರ್ಬರ ಕೊಲೆಗಳನ್ನು ಯಾವುದೇ ರಾಜಕೀಯಕ್ಕೆ ಬಳಸದೇ ಇರುವ ಕಾರಣಕ್ಕೆ ಉಡುಪಿ ಜಿಲ್ಲೆಯ ಎಲ್ಲರನ್ನು ಅಭಿನಂದಿಸಬೇಕಾಗಿದೆ. ಅಷ್ಟೇ ಅಲ್ಲ, ಕೊಲೆ ನಡೆದ ಸಂದರ್ಭದಲ್ಲಿ ಇಡೀ ಊರೇ ಜಾತಿ ಧರ್ಮ ಮರೆತು ಶೋಕಾಚರಣೆಯನ್ನು ಆಚರಿಸಿತ್ತು. ಇಂತಹ ಸಂಯಮ, ವಿವೇಕವನ್ನು ನಾವು ಮೈಗೂಡಿಸಿಕೊಂಡಾಗ ಮಾತ್ರ, ಭವಿಷ್ಯದಲ್ಲಿ ಹಿಂಸೆ, ಕೊಲೆಗಳಿಲ್ಲದ ಸತ್ ಸಮಾಜವನ್ನು ಕಟ್ಟಿ ಬೆಳೆಸ ಬಹುದು. ಅಪರಾಧಿಗೆ ಕಠಿಣ ಶಿಕ್ಷೆಯಾಗಬೇಕು ಮಾತ್ರವಲ್ಲ, ಇಂತಹ ಅಪರಾಧಗಳಿಗೆ ಕಾರಣವಾಗುವ, ಪ್ರೇರಣೆ ನೀಡುವ ಎಲ್ಲ ಆಯಾಮಗಳನ್ನು ಗಮನಿಸಿ ಅವುಗಳ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಬೇಕು. ಅತ್ಯುತ್ತಮ ಶಿಕ್ಷಣ, ಉದ್ಯೋಗ ಇವೆಲ್ಲದರ ಜೊತೆಗೆ ವಿವೇಕ, ಪ್ರಬುದ್ಧತೆ, ಸಂಯಮಗಳನ್ನು ದೈನಂದಿನ ಬದುಕಿನಲ್ಲಿ ಯುವ ಜನತೆ ಮೈಗೂಡಿಸಿಕೊಳ್ಳಬೇಕಾದ ಅಗತ್ಯವನ್ನೂ ಈ ದುರಂತ ನಮಗೆ ಹೇಳುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News