ಅಂಬಾನಿ ಪುತ್ರನ ಮದುವೆಯೂಟವೂ, 67 ಲಕ್ಷ ಆಹಾರ ವಂಚಿತ ಮಕ್ಕಳೂ...

Update: 2024-03-07 03:46 GMT

ದೇಶ ಅಂಬಾನಿ ಪುತ್ರನ ಮದುವೆಯ ಸಂಭ್ರಮದಲ್ಲಿದೆ. ದೇಶ, ವಿದೇಶಗಳ ಗಣ್ಯಾತಿಗಣ್ಯರೆಲ್ಲರೂ ಜಾಮ್ನಗರದಲ್ಲಿ ನೆರೆದಿದ್ದಾರೆ. ಸ್ವರ್ಗವೇ ಧರೆಗಿಳಿದಿದೆ ಎಂದು ಮಾಧ್ಯಮಗಳು ಬಣ್ಣಿಸುತ್ತಿವೆ. ಮದುವೆಯಲ್ಲಿ ಗಣ್ಯರ ಉಡುಪುಗಳು, ಮದುವೆಗಾಗಿ ಶೃಂಗಾರಗೊಂಡ ನಗರ, ವಿಶ್ವ ವಿಖ್ಯಾತ ಪಾಪ್ಗಾಯಕಿಯರು, ಅವರ ಅರೆಬರೆ ಬಟ್ಟೆ, ಬಾಲಿವುಡ್ ಖಾನ್ಗಳ ನೃತ್ಯ ಎಲ್ಲವನ್ನೂ ಕಣ್ಣಿಗೆ ಕಟ್ಟಿದಂತೆ ವರದಿಗಾರರು ವರ್ಣಿಸುತ್ತಿದ್ದಾರೆ. ವಿಶೇಷವಾಗಿ ಮದುವೆಯಲ್ಲಿ ಬಡಿಸಲಾಗುತ್ತಿರುವ ಅಡುಗೆಯನ್ನು ದೇಶದ ಜನರೆಲ್ಲ ಬಾಯಲ್ಲಿ ನೀರೂರುವಂತೆ ಟಿವಿಗಳು ವಿವರಿಸುತ್ತಿವೆ. ಇಡೀ ಗುಜರಾತನ್ನು ಅಂಬಾನಿ ಪುತ್ರನ ಮದುವೆಯ ಚಪ್ಪರವಾಗಿ ಪರಿವರ್ತಿಸಲಾಗಿದೆ. ಪ್ರಾತಿನಿಧಿಕವಾಗಿ ಕೆಲವು ಬಡಮಕ್ಕಳನ್ನು ಮದುವೆ ಮನೆಗೆ ಆಹ್ವಾನಿಸಲಾಗಿದ್ದು, ಅವರಿಗೆ ಅಂಬಾನಿ ಪುತ್ರ ಲಡ್ಡು ಹಂಚುತ್ತಿರುವುದನ್ನು ಪತ್ರಕರ್ತರು ತೋರಿಸುತ್ತಿದ್ದಾರೆ. ಲಡ್ಡುವಿನಲ್ಲಿರುವ ಗೋಡಂಬಿ, ಬಾದಮಿಗಳನ್ನೂ ಬಿಡದೆ ಕ್ಯಾಮರಾದಲ್ಲಿ ತೋರಿಸಲಾಗುತ್ತಿದೆ. ಅಂಬಾನಿ ಪುತ್ರನ ಈ ಅದ್ದೂರಿ ಮದುವೆಯೇ ಮೋದಿ ಸರಕಾರ ಭಾರತಕ್ಕೆ ನೀಡಿದ ‘ಅಮೃತ ಕಾಲ’ ಎಂದು ಜನತೆ ಭಾವಿಸುವಂತಾಗಿದೆ. ಜಗತ್ತನ್ನೇ ಬೆಕ್ಕಸ ಬೆರಗಾಗುವಂತೆ ಮಾಡಿದ ಈ ಮದುವೆಯ ಮೂಲಕ ಭಾರತ ‘ವಿಶ್ವ ಗುರು’ವಾಗಿದೆ ಎಂದು ಜನರನ್ನು ನಂಬಿಸಲು ಮಾಧ್ಯಮಗಳು ಶತಪ್ರಯತ್ನ ನಡೆಸುತ್ತಿವೆ.

ವಿಪರ್ಯಾಸವೆಂದರೆ ಈ ಮದುವೆಯ ಸಂಭ್ರಮವನ್ನು ಅಣಕಿಸುವಂತೆ ಭಾರತದಲ್ಲಿ ಆಹಾರ ವಂಚಿತ ಮಕ್ಕಳ ಸ್ಥಿತಿಗತಿಯನ್ನು ಹೇಳುವ ವರದಿಯೊಂದು ಇದೇ ಸಂದರ್ಭದಲ್ಲಿ ಹೊರ ಬಿದ್ದಿದೆ. ಕೇಂದ್ರ ಆರೋಗ್ಯ ಸಚಿವಾಲಯದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ(2019-21)ಯ ದತ್ತಾಂಶಗಳನ್ನು ಬಳಸಿಕೊಂಡು ನಡೆಸಲಾದ ಅಧ್ಯಯನವೊಂದು ಈ ದೇಶದ 67 ಲಕ್ಷ ಮಕ್ಕಳಿಗೆ ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲ ಎನ್ನುವ ಹೃದಯ ವಿದ್ರಾವಕ ಸಂಗತಿಯನ್ನು ಬಹಿರಂಗಪಡಿಸಿದೆ. ಕಡಿಮೆ ಆದಾಯ ಮತ್ತು ಮಧ್ಯಮ ಆದಾಯದ 92 ದೇಶಗಳಲ್ಲಿಯ ಆರೋಗ್ಯ ಸಮೀಕ್ಷೆಗಳನ್ನು ಬಳಸಿಕೊಂಡು ಈ ಅಧ್ಯಯನವನ್ನು ನಡೆಸಲಾಗಿದ್ದು, ‘ಜೆಎಎಂಎ ನೆಟ್ವರ್ಕ್ ಓಪನ್’ ಜರ್ನಲ್ನಲ್ಲಿ ಅಧ್ಯಯನ ವರದಿ ಪ್ರಕಟಗೊಂಡಿದೆ. ಶೂನ್ಯ ಆಹಾರ ಸೇವಿಸುವ ಮಕ್ಕಳು ಎಂದರೆ, 24 ಗಂಟೆಗಳ ಅವಧಿಯಲ್ಲಿ ಯಾವುದೇ ಹಾಲು ಅಥವಾ ಘನ ಆಹಾರ ಅಥವಾ ಅರೆಘನ ಆಹಾರವನ್ನು ಸೇವಿಸಿರದ 6ರಿಂದ 24 ತಿಂಗಳ ವಯಸ್ಸಿನ ಮಕ್ಕಳಾಗಿದ್ದಾರೆ. ಪಶ್ಚಿಮ ಆಫ್ರಿಕಾದ ಗಿನಿ, ಲೈಬೀರಿಯಾ, ಮಾಲಿಯಂತಹ ಅತ್ಯಂತ ಬಡ ದೇಶಗಳ ಸಾಲಿನಲ್ಲಿ ಭಾರತವೂ ನಿಂತಿದೆ ಎನ್ನುವ ವಾಸ್ತವದ ಕಡೆಗೆ ಈ ಅಧ್ಯಯನ ಬೊಟ್ಟು ಮಾಡಿದೆ. ಆಹಾರ ವಂಚಿತ ಮಕ್ಕಳ ಪ್ರಮಾಣಕ್ಕೆ ಸಂಬಂಧಿಸಿ ಗಿನಿ, ಮಾಲಿ ಅಗ್ರಸ್ಥಾನದಲ್ಲಿದ್ದರೆ ಭಾರತ ಮೂರನೆಯ ಸ್ಥಾನದಲ್ಲಿದೆ. ಗಿನಿಯಲ್ಲಿ ಶೇ. 21.8 ಮಕ್ಕಳು ಪೂರ್ಣ ಪ್ರಮಾಣದಲ್ಲಿ ಆಹಾರ ವಂಚಿತರಾಗಿದ್ದರೆ, ಮಾಲಿಯಲ್ಲಿ ಶೇ. 20.5ರಷ್ಟು ಮಕ್ಕಳು ಶೂನ್ಯ ಆಹಾರವನ್ನು ಹೊಂದಿದ್ದಾರೆ. ಭಾರತದಲ್ಲಿ ಶೇ. 19.3ರಷ್ಟು ಮಕ್ಕಳು ಆಹಾರ ವಂಚಿತರಾಗಿದ್ದು ವಿಶ್ವದಲ್ಲಿ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಈಗಾಗಲೇ ಭಾರತದಲ್ಲಿ ಹೆಚ್ಚಿರುವ ಹಸಿವು ಸೂಚ್ಯಂಕವು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಲ್ಲಿದೆ. ಈ ಅಂಕಿ ಅಂಶವನ್ನು ಸರಕಾರ ನಿರಾಕರಿಸಿದ್ದರೂ, ವಾಸ್ತವವನ್ನು ಮುಚ್ಚಿ ಡುವುದು ಮೋದಿ ಸರಕಾರಕ್ಕೆ ಕಷ್ಟವಾಗುತ್ತಿದೆ. ಇದೀಗ ಒಪ್ಪೊತ್ತಿನ ಆಹಾರವೂ ಇಲ್ಲದ 67 ಲಕ್ಷ ಮಕ್ಕಳು ಅಂಬಾನಿ ಮದುವೆಯ ವೈಭವವನ್ನು ಮಂಕಾಗಿಸಿ ಸರಕಾರದ ಪಾಲಿಗೆ ‘ದೇಶದ್ರೋಹಿ’ಗಳಾಗಿ ಗುರುತಿಸಿಕೊಂಡಿದ್ದಾರೆ.

ಕಳೆದ ವರ್ಷ ಭಾರತವು ಹಸಿವಿನ ಸೂಚ್ಯಂಕದಲ್ಲಿ ಅತ್ಯಂತ ಕಳಪೆ ಸ್ಥಾನದಲ್ಲಿ ಗುರುತಿಸಿಕೊಂಡಿತ್ತು. 2023ರ ವರದಿಯ ಪ್ರಕಾರ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು 125 ದೇಶಗಳ ಪೈಕಿ 111ನೇ ಸ್ಥಾನದಲ್ಲಿದೆ. 2022ರಲ್ಲಿ ಭಾರತವು 107ನೇ ಸ್ಥಾನದಲ್ಲಿತ್ತು. ಭಾರತದ ಮಕ್ಕಳ ಅಪೌಷ್ಟಿಕತೆಯ ಪ್ರಮಾಣ ಶೇ. 18.7ರಷ್ಟಿದೆ. ಭಾರತದಲ್ಲಿ ತೀವ್ರ ಅಪೌಷ್ಟಿಕತೆಯ ಪ್ರಮಾಣವು ಶೇ. 16.6ರಷ್ಟಿದೆ. ಐದು ವರ್ಷದೊಳಗಿರುವ ಮಕ್ಕಳ ಮರಣ ಪ್ರಮಾಣವು ಶೇ. 3.1ರಷ್ಟಿದೆ ಎನ್ನುವುದನ್ನು ಸೂಚ್ಯಂಕ ಬೆಳಕಿಗೆ ತಂದಿತ್ತು. ವಿಪರ್ಯಾಸವೆಂದರೆ ಹಸಿವಿನ ಸೂಚ್ಯಂಕದಲ್ಲಿ ನೆರೆಯ ಪಾಕಿಸ್ತಾನ (102), ಬಾಂಗ್ಲಾದೇಶ (81), ನೇಪಾಳ (69) ಮತ್ತು ಶ್ರೀಲಂಕಾ (60) ಭಾರತಕ್ಕಿಂತ ಉತ್ತಮ ಸ್ಥಾನದಲ್ಲಿದೆ. ಭಾರತದಲ್ಲಿ ಅದಾನಿ, ಅಂಬಾನಿಗಳು ವಿಶ್ವದಲ್ಲೇ ಅತಿ ಶ್ರೀಮಂತರಾಗಿ ಹೊರಹೊಮ್ಮುತ್ತಿರುವ ಹೊತ್ತಿಗೇ , ತಳಸ್ತರದಲ್ಲಿ ಬಡವರು ಇನ್ನಷ್ಟು ಬಡವರಾಗುತ್ತಾ ಹೋಗುತ್ತಿರುವ ವಿಪರ್ಯಾಸವನ್ನು ಇದು ಹೇಳುತ್ತಿದೆ. ಕೊರೋನೋತ್ತರ ಭಾರತದಲ್ಲಿ ಅಪೌಷ್ಟಿಕತೆ ಹೆಚ್ಚುತ್ತಿರುವುದು ಮತ್ತು ಇದು ಹತ್ತು ಹಲವು ರೀತಿಯಲ್ಲಿ ಕಾಯಿಲೆಗಳಿಗೆ ಕಾರಣವಾಗಿರುವುದನ್ನು ಸೂಚ್ಯಂಕ ಗುರುತಿಸಿದೆ. 15ರಿಂದ 24 ವರ್ಷ ವಯಸ್ಸಿನ ಮಹಿಳೆಯರಲ್ಲಿ ರಕ್ತಹೀನತೆಯ ಪ್ರಮಾಣವು 58.1ರಷ್ಟಿರುವುದನ್ನೂ ಸೂಚ್ಯಂಕ ಹೇಳುತ್ತಿದೆ. ಒಂದೆಡೆ ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದೆ ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳು, ಸರಿಯಾದ ಪೌಷ್ಟಿಕತೆ ದೊರಕದೆ ರಕ್ತಹೀನತೆಯಿಂದ ನರಳುತ್ತಿರುವ ತಾಯಂದಿರು, ಪೌಷ್ಟಿಕತೆಯ ಕೊರತೆಯಿಂದಲೇ ಕ್ಷಯದಂತಹ ರೋಗಗಳಿಗೆ ಬಲಿಯಾಗುತ್ತಿರುವ ಬಡವರು ಇವರೆಲ್ಲರಿಗೆ ಅಂಬಾನಿ ಮದುವೆಯ ಆಹ್ವಾನ ಪತ್ರಿಕೆಯನ್ನು ಪ್ರಧಾನಿ ಮೋದಿಯವರು ಇನ್ನೂ ತಲುಪಿಸಿಲ್ಲ.

ಅಪೌಷ್ಟಿಕತೆಗಾಗಿ ವಿಶ್ವಮಟ್ಟದಲ್ಲಿ ಭಾರತ ಸುದ್ದಿ ಮಾಡುತ್ತಿದ್ದಂತೆಯೇ, ಇನ್ನೊಂದೆಡೆ ಭಾರತ ಬೀಫ್ ರಫ್ತಿನಲ್ಲಿ ಎರಡನೇ ಸ್ಥಾನಕ್ಕೇರಿದೆ. ಮೊದಲನೇ ಸ್ಥಾನವನ್ನು ಬ್ರೆಝಿಲ್ ತನ್ನದಾಗಿಸಿಕೊಂಡಿದ್ದರೆ,ಮೂರು ಮತ್ತು ನಾಲ್ಕನೇ ಸ್ಥಾನವನ್ನು ಅಮೆರಿಕ ಮತ್ತು ಆಸ್ಟ್ರೇಲಿಯ ತನ್ನದಾಗಿಸಿಕೊಂಡಿವೆ. ಬ್ರೆಝಿಲ್, ಅಮೆರಿಕ, ಆಸ್ಟ್ರೇಲಿಯದಂತಹ ದೇಶಗಳು ತನ್ನ ದೇಶದ ಜನರ ಪೌಷ್ಟಿಕ ಆಹಾರದ ಅಗತ್ಯವನ್ನು ಪೂರೈಸಿದ ಬಳಿಕ ಇತರ ದೇಶಗಳಿಗೆ ಬೀಫ್ ರಫ್ತು ಮಾಡುತ್ತಿದ್ದರೆ, ಭಾರತವು ತನ್ನ ದೇಶದ ಜನರ ಬಾಯಿಯಿಂದ ಪೌಷ್ಟಿಕ ಆಹಾರವನ್ನು ಕಿತ್ತುಕೊಂಡು ಅದನ್ನು ವಿದೇಶದ ಜನರಿಗೆ ಉಣಿಸುತ್ತಿದೆ. ಭಾರತದಲ್ಲಿ ಜಾನುವಾರು ಮಾರಾಟ ನಿಷೇಧ ಕಾಯ್ದೆಯಿಂದಾಗಿ ಜನಸಾಮಾನ್ಯರು ಪೌಷ್ಟಿಕ ಆಹಾರವಾಗಿರುವ ಬೀಫ್ನಿಂದ ವಂಚಿತರಾಗಿದ್ದಾರೆ. ‘ಗೋ ರಕ್ಷಣೆ’ಯ ಹೆಸರಿನಲ್ಲಿ ಮೋದಿ ನೇತೃತ್ವದ ಸರಕಾರ ನಡೆಸುತ್ತಿರುವ ಕೆಟ್ಟ ರಾಜಕೀಯ ಈ ದೇಶದಲ್ಲಿ ಹೈನೋದ್ಯಮವನ್ನು ಸಂಪೂರ್ಣ ನಾಶ ಮಾಡುತ್ತಿದೆ ಮಾತ್ರವಲ್ಲ, ಜನರ ಪೌಷ್ಟಿಕ ಆಹಾರವಾಗಿರುವ ಹಾಲು, ಮಾಂಸವನ್ನು ಅವರಿಂದ ಕಸಿದು ಕೊಳ್ಳುತ್ತಿದೆ. ಜಾನುವಾರು ಮಾರಾಟ ನಿಷೇಧ ಕಾನೂನಿನ ಮೂಲಕ, ಅನುಪಯುಕ್ತ ಗೋವುಗಳನ್ನು ಮಾರಾಟ ಮಾಡಲು ಸರಕಾರ ರೈತರ ಕೈಗಳನ್ನು ಕಟ್ಟಿಹಾಕಿದೆ. ಅಷ್ಟೇ ಅಲ್ಲ, ಈ ಅನುಪಯುಕ್ತ ಗೋವುಗಳನ್ನು ಸಾಕುವುದಕ್ಕಾಗಿಯೇ ಸಾವಿರಾರು ಕೋಟಿ ರೂಪಾಯಿಗಳನ್ನು ಸರಕಾರ ಗೋಶಾಲೆಗಳಿಗಾಗಿ ವ್ಯಯ ಮಾಡುತ್ತಿದೆ. ಇನ್ನೊಂದೆಡೆ, ಅಕ್ರಮವಾಗಿ ಈ ಗೋವುಗಳು ಬೃಹತ್ ಸಂಸ್ಕರಣಾ ಘಟಕಗಳಿಗೆ ರವಾನೆಯಾಗಿ ಅಲ್ಲಿಂದ ಮಾಂಸವಾಗಿ ವಿದೇಶಗಳಿಗೆ ರಫ್ತಾಗುತ್ತವೆ. ಭಾರತೀಯರು ತಮ್ಮ ಆಹಾರಕ್ಕಾಗಿ ಜಾನುವಾರುಗಳನ್ನು ಹತ್ಯೆಗೈಯುವುದು ತಪ್ಪೇ ಆಗಿದ್ದರೆ, ವಿದೇಶಗಳಿಗೆ ರಫ್ತು ಮಾಡಲು ಜಾನುವಾರುಗಳನ್ನು ಹತ್ಯೆಗೈಯುವುದು ಎಷ್ಟು ಸರಿ? ಭಾರತೀಯರ ಪೌಷ್ಟಿಕ ಆಹಾರದ ಅಗತ್ಯವನ್ನು ಪೂರೈಸಿದ ಬಳಿಕ ವಿದೇಶಕ್ಕೆ ಅವುಗಳನ್ನು ರಫ್ತು ಮಾಡಬೇಕು. ಆದರೆ ಭಾರತದಲ್ಲಿ ಮಾಂಸಾಹಾರದ ಬಗ್ಗೆ ತಪ್ಪು ಮಾಹಿತಿಗಳನ್ನು ಹರಡುತ್ತಾ ಗುಟ್ಟಾಗಿ ವಿದೇಶಗಳಿಗೆ ಅವುಗಳನ್ನು ರಫ್ತು ಮಾಡುತ್ತಿರುವ ಸರಕಾರದ ಸೋಗಲಾಡಿತನ ಇದೀಗ ಬಯಲಾಗಿದೆ. ಅನುಪಯುಕ್ತ ಗೋವುಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ಒಂದೋ ಹಟ್ಟಿಯಲ್ಲಿಟ್ಟು ಅವುಗಳನ್ನು ಸಾಕಬೇಕು ಅಥವಾ ಗೋ ಶಾಲೆಗಳಿಗೆ ಪುಕ್ಕಟೆಯಾಗಿ ಅವುಗಳನ್ನು ದಾನ ಮಾಡಬೇಕು ಎನ್ನುವ ಸ್ಥಿತಿಯಲ್ಲಿ ರೈತರಿದ್ದಾರೆ. ಗೋ ಸಾಕಣೆಗಾರರಿಗೆ ಸರಕಾರ ಸಹಾಯಧನ ನೀಡುವ ಬದಲು, ಈ ಗೋಶಾಲೆಗಳನ್ನು ನಡೆಸುತ್ತಿರುವ ನಕಲಿ ಗೋರಕ್ಷಕರಿಗೆ ಸಹಾಯ ಧನ ನೀಡುತ್ತಿದೆ. ಈ ಆಹಾರ ರಾಜಕೀಯದಿಂದಾಗಿ ದೇಶದಲ್ಲಿ ಹೈನೋದ್ಯಮ ದುಬಾರಿಯಾಗುತ್ತಿದೆ. ತಮ್ಮದೇ ಜಾನುವಾರುಗಳನ್ನು ಮಾರಾಟ ಮಾಡುವ ಹಕ್ಕುಗಳನ್ನು ಕಳೆದುಕೊಂಡು ರೈತರು ನಷ್ಟವನ್ನು ಅನುಭವಿಸುತ್ತಿದ್ದಾರೆ. ಪರಿಣಾಮವಾಗಿ ಗೋಸಾಕಣೆಯಿಂದ ಹಿಂದೆ ಸರಿಯುತ್ತಿದ್ದಾರೆ. ದೇಶದಲ್ಲಿ ಗೋಮಾಂಸ ದುಬಾರಿಯಾಗಿರುವುದರಿಂದ, ಇತರ ಮಾಂಸ, ತರಕಾರಿಗಳ ಬೆಲೆ ಹೆಚ್ಚಿವೆ. ಜೊತೆಗೆ ಹಾಲಿನ ಉತ್ಪಾದನೆ ಇಳಿಕೆಯಾಗಿ, ಜನಸಾಮಾನ್ಯರು ಹಾಲಿನ ಕೊರತೆಯನ್ನೂ ಎದುರಿಸುತ್ತಿದ್ದಾರೆ.

ಒಂದೆಡೆ ಜನಸಾಮಾನ್ಯರ ಸಂಪತ್ತನ್ನು ಕಿತ್ತು ಅದಾನಿ, ಅಂಬಾನಿಗಳಿಗೆ ಹಂಚಲಾಗುತ್ತಿದೆ. ಇನ್ನೊಂದೆಡೆ ಜನಸಾಮಾನ್ಯರ ಪೌಷ್ಟಿಕ ಆಹಾರಗಳನ್ನು ಕಸಿದುಕೊಂಡು ಅವುಗಳನ್ನು ವಿದೇಶಗಳಿಗೆ ರವಾನೆ ಮಾಡಲಾಗುತ್ತಿದೆ. ಈ ದೇಶದ ಬಡವರ ಹಸಿವನ್ನು ಮುಚ್ಚಿ ಹಾಕುವ ಭಾಗವಾಗಿ, ಅಂಬಾನಿಯ ಮದುವೆಯ ಊಟದ ವಿವರಗಳನ್ನು ಮಾಧ್ಯಮಗಳು 24 ಗಂಟೆ ಟಿವಿಗಳಲ್ಲಿ ಪ್ರಸಾರ ಮಾಡುತ್ತಿವೆ. ಆದರೆ ಅಂಬಾನಿ ಮನೆಯ ಮದುವೆ ಊಟ ಈ ದೇಶದ ಬಡವರ ಮಕ್ಕಳ ಹಸಿವೆಯನ್ನು ಇಂಗಿಸಲಾರದು ಎನ್ನುವ ಸತ್ಯವನ್ನು ಮೋದಿ ನೇತೃತ್ವದ ಸರಕಾರ ಅರ್ಥ ಮಾಡಿಕೊಂಡಾಗ ಮಾತ್ರ, ಈ ಮಕ್ಕಳ ಹಸಿವೆಯನ್ನು ನೀಗಿಸಲು ದಾರಿಯೊಂದು ತೆರೆದುಕೊಂಡೀತು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News