ಚುನಾವಣಾ ಆಯೋಗಕ್ಕೆ ಬೇಕಿದೆ ಸುಪ್ರೀಂ ಕಣ್ಗಾವಲು

Update: 2024-02-22 06:54 GMT

Photo: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘ಪ್ರಧಾನಿ ಮೋದಿಯವರು ಮತ್ತೆ ಗೆದ್ದು ಬಂದರೆ, ಈ ದೇಶದಲ್ಲಿ ಚುನಾವಣಾ ವ್ಯವಸ್ಥೆಯೇ ರದ್ದಾಗುತ್ತದೆ’ ಎಂದು ಇತ್ತೀಚೆಗೆ ಸಮಾವೇಶವೊಂದರಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆತಂಕ ವ್ಯಕ್ತಪಡಿಸಿದ್ದರು. ಆದರೆ ಚುನಾವಣಾ ಆಯೋಗವೇ ತನ್ನ ಜೀತ ಮಾಡುತ್ತಿರುವಾಗ ‘ಚುನಾವಣೆಯನ್ನು ರದ್ದುಗೊಳಿಸಿದ ಕಳಂಕವನ್ನು ಮೈಮೇಲೆ ಎಳೆದುಕೊಳ್ಳುವ ಅಗತ್ಯವಿದೆಯೆ?’ ಎಂದು ಪ್ರಧಾನಿ ಮೋದಿಯವರು ಪರೋಕ್ಷವಾಗಿ ಕೇಳುತ್ತಿದ್ದಾರೆ. ಇತ್ತೀಚೆಗೆ ಚಂಡಿಗಡ ಮೇಯರ್ ಚುನಾವಣೆಯಲ್ಲಿ ಹಾಡಹಗಲೇ ಚುನಾವಣಾ ಅಧಿಕಾರಿಯೊಬ್ಬರು ಬಿಜೆಪಿಯ ಪರವಾಗಿ ಅಕ್ರಮ ಎಸಗಿರುವುದು ಸುಪ್ರೀಂಕೋರ್ಟ್‌ನಲ್ಲಿ ಸಾಬೀತಾದ ಬೆನ್ನಿಗೇ, ಈ ದೇಶದಲ್ಲಿ ಚುನಾವಣಾ ಆಯೋಗದ ಮೇಲಿನ ಅಳಿದುಳಿದ ವಿಶ್ವಾಸವೂ ಇಲ್ಲವಾಗಿದೆ. ಎಲ್ಲರ ಕಣ್ಮುಂದೆ ನಡೆಯುವ ಮೇಯರ್ ಚುನಾವಣೆಯಲ್ಲಿಯೇ ಇಂತಹದೊಂದು ಅಕ್ರಮ ಚುನಾವಣಾಧಿಕಾರಿಯಿಂದ ನಡೆದಿರುವಾಗ, ಸಾರ್ವತ್ರಿಕ ಚುನಾವಣೆಯಲ್ಲಿ ಚುನಾವಣಾ ಆಯೋಗದ ಮೇಲೆ ಭರವಸೆ ಇಡುವುದು ಹೇಗೆ? ಎಂದು ಜನರು ಕೇಳುತ್ತಿದ್ದಾರೆ.

ಚಂಡಿಗಡ ಮುನ್ಸಿಪಾಲಿಟಿ ಮೇಯರ್ ಚುನಾವಣೆಯಲ್ಲಿ ಚುನಾವಣಾಧಿಕಾರಿ ಅನಿಲ್ ಮಸಿಹ್ ಮತಗಳನ್ನು ವಿರೂಪಗೊಳಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ, ಸುಪ್ರೀಂಕೋರ್ಟ್ ಹಿಂದಿನ ಫಲಿತಾಂಶವನ್ನು ರದ್ದುಗೊಳಿಸಿದ್ದು , ಚುನಾವಣಾಧಿಕಾರಿಯ ನೇತೃತ್ವದಲ್ಲಿ ವಿರೂಪಗೊಂಡಿದ್ದ ಎಂಟು ಮತಗಳನ್ನು ಸಕ್ರಮ ಎಂದು ಹೇಳಿದೆ. ಆಪ್ ಅಭ್ಯರ್ಥಿಯನ್ನೇ ಚಂಡಿಗಡ ಮೇಯರ್ ಎಂದು ಘೋಷಿಸಿದೆ. ಅಷ್ಟೇ ಅಲ್ಲ, ಈ ಕ್ರಿಮಿನಲ್ ವಂಚನೆ ಕೃತ್ಯಕ್ಕಾಗಿ ಚುನಾವಣಾಧಿಕಾರಿಯ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಸುಪ್ರೀಂಕೋರ್ಟ್ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಆದರೆ ಇಡೀ ಪ್ರಕರಣದಲ್ಲಿ ಚುನಾವಣಾಧಿಕಾರಿ ಅನಿಲ್ ಮಸಿಹ್ ವೈಯಕ್ತಿಕ ಹಿತಾಸಕ್ತಿಯಿಂದ ಮೇಯರ್ ಚುನಾವಣೆಯನ್ನು ಬುಡಮೇಲು ಗೊಳಿಸಿದ್ದಾರೆಯೆ? ಅಥವಾ ಪ್ರಬಲ ಶಕ್ತಿಗಳು ಅವರಿಂದ ಈ ಕೃತ್ಯವನ್ನು ಎಸಗುವಂತೆ ಮಾಡಿತೇ ಎನ್ನುವುದು ಕೂಡ ತನಿಖೆಯಾಗಬೇಕು. ಯಾಕೆಂದರೆ, ಮೇಯರ್ ಸ್ಪರ್ಧೆಯಲ್ಲಿ ಎಲ್ಲ ರೀತಿಯಲ್ಲೂ ಕಾಂಗ್ರೆಸ್-ಆಪ್ ನೇತೃತ್ವದ ಅಭ್ಯರ್ಥಿ ಗೆಲ್ಲುವ ಸಾಧ್ಯತೆಯಿತ್ತು. ಬಿಜೆಪಿ 13 ಸದಸ್ಯರನ್ನು ಹೊಂದಿದ್ದರೆ, ಆಪ್-ಕಾಂಗ್ರೆಸ್ ಒಟ್ಟು 20 ಸದಸ್ಯ ಬಲವನ್ನು ಹೊಂದಿದ್ದವು. ಮತದಾನದ ಹಕ್ಕು ಹೊಂದಿರದ, ನಾಮನಿರ್ದೇಶಿತ ಕೌನ್ಸಿಲರ್ ಕೂಡ ಆಗಿರುವ ಅನಿಲ್ ಅವರನ್ನು ಚುನಾವಣಾಧಿಕಾರಿಯಾಗಿ ನೇಮಕ ಮಾಡಿರುವುದೇ ಚುನಾವಣೆಯ ಫಲಿತಾಂಶವನ್ನು ಬುಡಮೇಲು ಮಾಡಲು ಕಾರಣ ಎನ್ನುವ ಆರೋಪಗಳಿವೆ. ಚುನಾವಣಾಧಿಕಾರಿ ಪಕ್ಷಾತೀತವಾಗಿರಬೇಕು. ಬಿಜೆಪಿಯೊಂದಿಗೆ ನಂಟನ್ನು ಬೆಸೆದುಕೊಂಡಿರುವ ನಾಮನಿರ್ದೇಶಿತ ಕೌನ್ಸಿಲರ್‌ನ್ನು ಚುನಾವಣಾಧಿಕಾರಿಯನ್ನಾಗಿಸಿದರೆ ಆತ ತಾನು ಬೆಂಬಲಿಸುವ ಪಕ್ಷದ ಪರವಾಗಿ ಕೆಲಸ ಮಾಡದೇ ಇನ್ನೇನು ಮಾಡುತ್ತಾನೆ? ಆದುದರಿಂದ, ಚುನಾವಣಾಧಿಕಾರಿಯ ಮೇಲೆ ಮಾತ್ರವಲ್ಲದೆ, ಅವರನ್ನು ನೇಮಕ ಮಾಡಿದವರ ಮೇಲೂ ಕ್ರಮ ತೆಗೆದುಕೊಳ್ಳಬೇಕು. ಚಂಡಿಗಡ ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ, ಈ ಅಕ್ರಮದಲ್ಲಿ ಪರೋಕ್ಷವಾಗಿ ಕೇಂದ್ರ ಸರಕಾರವೂ ಕೈ ಜೋಡಿಸಿದೆ.

ಎಲ್ಲರೂ ತನ್ನನ್ನು ಗಮನಿಸುತ್ತಿದ್ದಾರೆ ಎನ್ನುವುದು ಗೊತ್ತಿದ್ದೂ ಚುನಾವಣಾಧಿಕಾರಿ ಮತಪತ್ರಗಳನ್ನು ವಿರೂಪಗೊಳಿಸಿ ಅಸಿಂಧುಗೊಳಿಸುತ್ತಾರೆ ಎನ್ನುವುದೇ ಅತ್ಯಂತ ಆತಂಕಕಾರಿಯಾಗಿದೆ. ಅಂದರೆ, ಒಂದು ವೇಳೆ ಅಕ್ರಮ ಸಾಬೀತಾದರೂ ತನ್ನನ್ನು ನ್ಯಾಯಾಲಯ ರಕ್ಷಿಸುತ್ತದೆ ಎನ್ನುವ ಭರವಸೆಯಿಂದ ಆತ ಕೃತ್ಯವನ್ನು ಎಸಗಿದ್ದಾನೆ. ಕೇಂದ್ರ ಸರಕಾರ, ನ್ಯಾಯ ವ್ಯವಸ್ಥೆ ತನ್ನ ಪರವಾಗಿ ನಿಲ್ಲುತ್ತದೆ ಎನ್ನುವ ಧೈರ್ಯದಿಂದ ಆತ ಚುನಾವಣೆಯನ್ನು ಬುಡಮೇಲು ಗೊಳಿಸಿದ್ದಾನೆ. ಇಲ್ಲಿ ಚುನಾವಣಾಧಿಕಾರಿಯೊಬ್ಬನನ್ನು ವಜಾಗೊಳಿಸುವುದರಿಂದ ನ್ಯಾಯ ಸಿಕ್ಕಂತಾಗುವುದಿಲ್ಲ. ಚುನಾವಣೆಯ ಫಲಿತಾಂಶವನ್ನು ತಿರುಚುವುದಕ್ಕೆ ಆತನ ಬೆನ್ನಿಗೆ ನಿಂತ ಎಲ್ಲರಿಗೂ ಶಿಕ್ಷೆಯಾಗಬೇಕಾಗಿದೆ. ಮೇಯರ್ ಚುನಾವಣೆಯ ಸ್ಥಿತಿಯೇ ಹೀಗಾದರೆ ಮುಂಬರುವ ಸಾರ್ವತ್ರಿಕ ಚುನಾವಣೆಯ ಸ್ಥಿತಿ ಹೇಗಿರಬಹುದು? ಈ ನಿಟ್ಟಿನಲ್ಲಿ ಚುನಾವಣಾ ಆಯೋಗದ ವಿರುದ್ಧ ವಿರೋಧ ಪಕ್ಷಗಳು ವ್ಯಕ್ತಪಡಿಸುತ್ತಿರುವ ಆರೋಪಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿದೆ. ವಿರೋಧ ಪಕ್ಷಗಳು ಇವಿಎಂ ಸೇರಿದಂತೆ ಚುನಾವಣೆಯ ಪ್ರಕ್ರಿಯೆಗೆ ಸಂಬಂಧಿಸಿ ಹಲವು ಬೇಡಿಕೆಗಳನ್ನು ಮುಂದಿಟ್ಟಿವೆ. ಆಯೋಗ ಇದನ್ನು ನಿರ್ಲಕ್ಷಿಸುತ್ತಾ ಬಂದಿದೆ. ಆದರೆ ಚಂಡಿಗಡ ಚುನಾವಣಾ ಪ್ರಕ್ರಿಯೆಯ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಬಳಿಕ ಚುನಾವಣಾ ಆಯೋಗ ಆತ್ಮವಿಮರ್ಶೆ ಮಾಡಿಕೊಳ್ಳಲೇಬೇಕಾಗಿದೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರೂ ಬಿಜೆಪಿ ಇಂದು ಅಲ್ಲಿ ಆಳ್ವಿಕೆ ನಡೆಸುತ್ತಿದೆ. ಈ ಹಿಂದೆ ಕರ್ನಾಟಕದಲ್ಲೂ ಬಿಜೆಪಿ ಬಹುಮತ ವಿಲ್ಲದೇ ಇದ್ದರೂ ಚುನಾವಣಾ ಆಯೋಗದ ಸಹಕಾರದಿಂದ ಸರಕಾರ ರಚಿಸುವಲ್ಲಿ ಯಶಸ್ವಿಯಾಗಿತ್ತು. ಇಂದು ದೇಶದಲ್ಲಿ ಚುನಾವಣಾ ಆಯೋಗವು ಚುನಾವಣಾ ಪ್ರಕ್ರಿಯೆಯನ್ನು ವಿಫಲಗೊಳಿಸುವುದಕ್ಕಾಗಿ ದುಡಿಯುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಕೇಂದ್ರ ಸರಕಾರದ ಮೂಗಿನ ನೇರಕ್ಕೆ ಎಲ್ಲ ತನಿಖಾ ಸಂಸ್ಥೆಗಳೂ ಕೆಲಸ ಮಾಡುತ್ತಿವೆ. ಚುನಾವಣಾ ಆಯೋಗವೂ ಕೇಂದ್ರ ಸರಕಾರದ ಅಡಿಯಾಳಾಗಿ ಕೆಲಸ ಮಾಡುತ್ತಿದೆ ಎಂದು ಈಗಾಗಲೇ ಮಹಾರಾಷ್ಟ್ರದಲ್ಲಿ ಉದ್ಧವ್‌ಠಾಕ್ರೆ ನೇತೃತ್ವದ ಶಿವಸೇನೆ ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಆರೋಪಿಸಿವೆ.ಚಂಡಿಗಡದಲ್ಲಿ ಚುನಾವಣಾಧಿಕಾರಿ ನಡೆಸಿದ ಅಕ್ರಮ ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು. ಆದುದರಿಂದ ಸುಪ್ರೀಂಕೋರ್ಟ್‌ನಲ್ಲಿ ಅಕ್ರಮ ಸುಲಭದಲ್ಲಿ ಸಾಬೀತಾಯಿತು. ಮಹಾರಾಷ್ಟ್ರದಲ್ಲಿ ಚುನಾವಣಾ ಆಯೋಗದ ಕೃತ್ಯ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಚುನಾವಣಾ ಆಯೋಗವೇ ಅಕ್ರಮಗಳ ನೇತೃತ್ವವನ್ನು ವಹಿಸುವುದಾಗಿದ್ದರೆ ಚುನಾವಣೆಗಳನ್ನು ನಡೆಸುವ ಅಗತ್ಯವಾದರೂ ಏನಿದೆ? ಚುನಾವಣಾಧಿಕಾರಿಗಳು ಚುನಾವಣೆಯ ಉದ್ದೇಶವನ್ನು ವಿಫಲಗೊಳಿಸುತ್ತಾರೆ. ಬಳಿಕ ರಾಜಕೀಯ ಪಕ್ಷಗಳು ಚುನಾವಣಾಧಿಕಾರಿಗಳ ಅಕ್ರಮಗಳ ವಿರುದ್ಧ ಸುಪ್ರೀಂಕೋರ್ಟ್‌ನ ಮೊರೆ ಹೋಗಬೇಕಾಗುತ್ತದೆ. ಸುಪ್ರೀಂಕೋರ್ಟ್ ವಿಚಾರಣೆ ನಡೆಸಿ ಸರಿಯಾದ ಸಾಕ್ಷ್ಯಾಧಾರಗಳು ದೊರಕಿದರೆ ಚುನಾವಣೆಯ ಅಕ್ರಮಗಳನ್ನು ಗುರುತಿಸಿ ನಿಜಕ್ಕೂ ಗೆದ್ದ ಅಭ್ಯರ್ಥಿಗಳು ಯಾರೆಂದು ಘೋಷಿಸುತ್ತದೆ. ಮುಂದಿನ ದಿನಗಳಲ್ಲಿ ನಡೆಯುವ ಎಲ್ಲಾ ಚುನಾವಣೆಗಳ ಫಲಿತಾಂಶಗಳು ಸುಪ್ರೀಂಕೋರ್ಟ್‌ನಲ್ಲೇ ಅಂತಿಮಗೊಂಡರೆ ಅಚ್ಚರಿಯಿಲ್ಲ . ಹೇಗಿದ್ದರೂ ಅಂತಿಮವಾಗಿ ಫಲಿತಾಂಶವನ್ನು ಸುಪ್ರೀಂಕೋರ್ಟ್ ಘೋಷಿಸುವುದಾದರೆ, ಚುನವಣಾ ಆಯೋಗ ಯಾಕಾದರೂ ಅಸ್ತಿತ್ವದಲ್ಲಿರಬೇಕು?

ಒಂದೋ ಚುನಾವಣಾ ಆಯೋಗ ತನ್ನನ್ನು ತಾನು ಸುಧಾರಣೆ ಮಾಡಿಕೊಂಡು ಆ ಬಳಿಕ ಚುನಾವಣೆಯಲ್ಲಿ ಸುಧಾರಣೆ ನಡೆಸಲು ಮುಂದಾಗಬೇಕು. ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿರುವ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಸೂಕ್ತ ಮಾರ್ಗದರ್ಶನಗಳನ್ನು ನೀಡಬೇಕು. ಇಲ್ಲವಾದರೆ ಸುಪ್ರೀಂಕೋರ್ಟ್‌ನ ನೇತೃತ್ವದಲ್ಲೇ ಮುಂದಿನ ಚುನಾವಣೆಗಳನ್ನು ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಬಹುದು. ಈಗಾಗಲೇ, ಈ.ಡಿ.ಯಂತಹ ತನಿಖಾ ಸಂಸ್ಥೆಗಳು ಕೇಂದ್ರ ಸರಕಾರದ ಪರವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎನ್ನುವುದನ್ನು ಪರಿಶೀಲಿಸಲು ಪ್ರತ್ಯೇಕ ವ್ಯವಸ್ಥೆಯೊಂದನ್ನು ಜಾರಿಗೊಳಿಸುವ ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಚುನಾವಣಾ ಆಯೋಗದ ಕಾರ್ಯಕ್ಷಮತೆಯನ್ನು ವೀಕ್ಷಿಸುವುದಕ್ಕೂ ಸುಪ್ರೀಂಕೋರ್ಟ್ ಇಂತಹದೊಂದು ವ್ಯವಸ್ಥೆಯನ್ನು ಸಿದ್ಧಪಡಿಸುವ ಅಗತ್ಯವನ್ನು ಚಂಡಿಗಡ ಮೇಯರ್ ಚುನಾವಣೆಯಲ್ಲಾದ ಅಕ್ರಮ ಎತ್ತಿ ಹಿಡಿದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News