ಅಮಿತ್ ಶಾ ಬಂದು ಹೋದರೂ ಬಗೆಹರಿಯದ ಬಿಜೆಪಿ ಬಿಕ್ಕಟ್ಟು
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ರಾಜ್ಯ ಬಿಜೆಪಿಯ ಒಡಕು ಬೀದಿಗೆ ಬಂದು ಮೂರು ತಿಂಗಳಾಗುತ್ತಾ ಬಂತು. ಯಡಿಯೂರಪ್ಪನರ ಮಗ ವಿಜಯೇಂದ್ರರನ್ನು ಪಕ್ಷದ ಅಧ್ಯಕ್ಷನನ್ನಾಗಿ ಮಾಡಿದ ನಂತರ ತೀವ್ರಗೊಂಡ ಒಳಜಗಳ ಈಶ್ವರಪ್ಪನವರ ಮಗ ಕಾಂತೇಶ್‌ರಿಗೆ ಟಿಕೆಟ್ ನಿರಾಕರಿಸಿದ ನಂತರ ಇನ್ನಷ್ಟು ಉಲ್ಬಣಿಸಿದೆ. ಈ ಬಿಕ್ಕಟ್ಟನ್ನು ಬಗೆಹರಿಸಲು ಕೇಂದ್ರ ಗೃಹ ಸಚಿವರು ಧಾವಿಸಿ ಬಂದರೂ ಪ್ರಯೋಜನವಾಗಿಲ್ಲ.
ಲೋಕಸಭಾ ಚುನಾವಣೆಯ ಅಭ್ಯರ್ಥಿ ಆಯ್ಕೆಯ ನಂತರವಂತೂ ಪರಿಸ್ಥಿತಿ ಸಂಪೂರ್ಣ ಬಿಗಡಾಯಿಸಿದೆ. ಶಿವಮೊಗ್ಗದಲ್ಲಿ ಯಡಿಯೂರಪ್ಪನವರ ಮಗ ರಾಘವೇಂದ್ರರನ್ನು ಸೋಲಿಸಲು ಪಣ ತೊಟ್ಟಿರುವ ಪಕ್ಷದ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಸ್ವತಂತ್ರವಾಗಿ ಸ್ಪರ್ಧಿಸಿ ಸೆಡ್ಡು ಹೊಡೆದಿದ್ದಾರೆ.ಚಿಕ್ಕಬಳ್ಳಾಪುರದಲ್ಲಿ ಸುಧಾಕರ್‌ಗೆ ಬಿಜೆಪಿ ಟಿಕೆಟ್ ನೀಡಿರುವುದನ್ನು ಪ್ರತಿಭಟಿಸಿ ಬಂಡಾಯವೆದ್ದ ಶಾಸಕ ವಿಶ್ವನಾಥ್ ಮೇಲ್ನೋಟಕ್ಕೆ ತಣ್ಣಗಾಗಿದ್ದರೂ ಒಳಗೊಳಗೆ ಕುದಿಯುತ್ತಿದ್ದಾರೆ. ಬೀದರ್‌ನಲ್ಲಿ ಭಗವಂತ ಖೂಬಾ ವಿರುದ್ಧ ಅಲ್ಲಿನ ಬಿಜೆಪಿ ಶಾಸಕರು ಸಿಡಿದೆದ್ದಿದ್ದಾರೆ. ಬೆಳಗಾವಿಯಲ್ಲಿ ಹೊರಗಿನಿಂದ ಬಂದ ಜಗದೀಶ್ ಶೆಟ್ಟರ್ ಅವರನ್ನು ಒಪ್ಪಿಕೊಳ್ಳಲು ಸ್ಥಳೀಯ ಬಿಜೆಪಿ ನಾಯಕರು ತಯಾರಿಲ್ಲ. ಮೈಸೂರಿನಲ್ಲಿ ತನಗೆ ಸಿಗಬೇಕಿದ್ದ ಟಿಕೆಟ್ ಪಡೆದ ಯುವರಾಜರ ವಿರುದ್ಧ ಸಂಸದ ಪ್ರತಾಪ ಸಿಂಹ ಅಸಹಾಯಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೊಪ್ಪಳದಲ್ಲಿ ಸಂಗಣ್ಣ ಕರಡಿ ಮೇಲ್ನೋಟಕ್ಕೆ ಸುಮ್ಮನಿದ್ದರೂ ಒಳಗೊಳಗೆ ಏನು ಮಾಡಬೇಕೋ ಅದನ್ನು ಮಾಡುತ್ತಿದ್ದಾರೆ. ದಾವಣಗೆರೆಯಲ್ಲಿ ಸಂಸದ ಸಿದ್ದೇಶ್ವರ ಪತ್ನಿಯ ಸ್ಪರ್ಧೆಯ ವಿರುದ್ಧ ಮಾಜಿ ಸಚಿವ ರವೀಂದ್ರನಾಥ್ ಮತ್ತು ರೇಣುಕಾಚಾರ್ಯ ಗುಡುಗುತ್ತಿದ್ದಾರೆ. ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ಮಾಡಲು ಬಿಜೆಪಿ ನಾಯಕ ಪ್ರೀತಂಗೌಡ ಬರುತ್ತಿಲ್ಲ. ಕೇಂದ್ರ ನಾಯಕರ ಮಾತಿಗೂ ಸೊಪ್ಪು ಹಾಕದ ಪ್ರೀತಂ ಗೌಡರನ್ನು ತಕ್ಷಣದಿಂದ ಹಾಸನದಿಂದ ಎತ್ತಂಗಡಿ ಮಾಡಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಉಸ್ತುವಾರಿಯನ್ನಾಗಿ ಮಾಡಲಾಗಿದೆ. ಹೀಗೆ ಪ್ರತೀ ಮತಕ್ಷೇತ್ರದಲ್ಲಿ ಬಿಜೆಪಿ ಒಡೆದು ಹಲವಾರು ಹೋಳಾಗಿದೆ. ಇದನ್ನು ಮರೆಮಾಚಿ ಮರ್ಯಾದೆ ಉಳಿಸಿಕೊಳ್ಳಲು ರಾಜ್ಯ ಬಿಜೆಪಿ ನಾಯಕರು ರಾಜ್ಯದ ಕಾಂಗ್ರೆಸ್ ಸರಕಾರದ ಪತನದ ಮಾತನ್ನು ಬಹಿರಂಗವಾಗಿ ಆಡುತ್ತ ತಮ್ಮ ಕಾರ್ಯಕರ್ತರನ್ನು ಉಳಿಸಿ ಕೊಳ್ಳಲು ಹೆಣಗಾಡುತ್ತಿದ್ದಾರೆ. ಲೋಕಸಭಾ ಚುನಾವಣೆ ನಡೆದು ನರೇಂದ್ರ ಮೋದಿ ಪ್ರಧಾನಿಯಾದ ನಂತರ ರಾಜ್ಯದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಪತನವಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ, ಜೋಶಿ ಹೇಳುತ್ತಿದ್ದಾರೆ. ಆದರೆ ಮತದಾನ ನಡೆದು ಫಲಿತಾಂಶ ಬರುವ ಮುನ್ನವೇ ಮೋದಿ ಮತ್ತೆ ಗೆದ್ದು ಪ್ರಧಾನಿಯಾಗುತ್ತಾರೆಂಬ ಭ್ರಮೆಯಲ್ಲಿ ಇರುವ ಬಿಜೆಪಿ ನಾಯಕರು ಅಪಹಾಸ್ಯಕ್ಕೀಡಾಗುತ್ತಿದ್ದಾರೆ. ವಿಧಾನಸಭಾ ಚುನಾವಣೆ ಫಲಿತಾಂಶ ಬಂದ ದಿನದಿಂದಲೇ ಕುರ್ಚಿ ಕಳೆದುಕೊಂಡವರು ಇದೇ ಮಾತು ಹೇಳುತ್ತಿದ್ದಾರೆ. ಚುನಾಯಿತ ಸರಕಾರ ಕೆಡಹುವುದೆಂದರೆ ಪಕ್ಷಾಂತರಕ್ಕೆ ಪ್ರಚೋದನೆ ನೀಡುವುದು, ಶಾಸಕರಿಗೆ ಕೋಟಿಗಟ್ಟಲೆ ಹಣ ಆಮಿಷವೊಡ್ಡುವುದು. ಮುಂಬೈ, ಗೋವಾ ರೆಸಾರ್ಟ್‌ಗಳಲ್ಲಿ ಶಾಸಕರನ್ನು ಕರೆದುಕೊಂಡು ಹೋಗಿ ಬಚ್ಚಿಡುವುದಾದರೆ ಇದಕ್ಕಿಂತ ಅನೈತಿಕತೆ ಇನ್ನೊಂದಿದೆಯೇ?.
ಯಡಿಯೂರಪ್ಪ ಮತ್ತು ಅವರ ಮಗನ ನಾಯಕತ್ವವನ್ನು ಬಿಜೆಪಿಯೊಳಗಿನ ಆರೆಸ್ಸೆಸ್ ಒಲವಿನ ಒಂದು ಗುಂಪು ಒಪ್ಪಿಕೊಳ್ಳುತ್ತಿಲ್ಲ. ಈ ಗುಂಪು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಲು ಕಾರಣ ಒಳಗಿಂದೊಳಗೆ ಬಿಜೆಪಿಯೊಳಗಿನ ರಾಷ್ಟ್ರೀಯ ನಾಯಕರ ಒಂದು ಗುಂಪಿನ ಚಿತಾವಣೆ. ಇಲ್ಲವಾದರೆ ಈ ಧೈರ್ಯ ಅವರಿಗೆ ಬರುತ್ತಿರಲಿಲ್ಲ. ಆರೆಸ್ಸೆಸ್ ಸಿದ್ಧಾಂತದ ಪ್ರಕಾರ ವ್ಯಕ್ತಿಗಿಂತ ಸಂಘಟನೆ ಮುಖ್ಯ. ಆದರೆ ತಮ್ಮ ಜಾತಿಯ ಬಲದಿಂದ ಸಂಘಟನೆಯನ್ನು ಮೀರಿ ಬೆಳೆಯುತ್ತಿರುವ ಯಡಿಯೂರಪ್ಪ ಬಗ್ಗೆ ಮಾತ್ರವಲ್ಲ ನರೇಂದ್ರ ಮೋದಿ, ಅಮಿತ್ ಶಾ ಎಂಬ ಗುರು ಶಿಷ್ಯರ ಬಗೆಗೂ ಸಂಘಕ್ಕೆ ಅಸಮಾಧಾನವಿದೆ. ಇದನ್ನು ಬಹಿರಂಗವಾಗಿ ವ್ಯಕ್ತಪಡಿಸಲಾಗದೆ ಕೆಲವರನ್ನು ಛೂಬಿಡಲಾಗುತ್ತಿದೆ. ಇಲ್ಲವಾದರೆ ಸಂಘದ ನಿಷ್ಠಾವಂತ ಸ್ವಯಂ ಸೇವಕ ಈಶ್ವರಪ್ಪ ಈ ಪರಿ ಎಗರಾಡುತ್ತಿರಲಿಲ್ಲ.
ಇನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಪರಿಸ್ಥಿತಿಯೂ ಚೆನ್ನಾಗಿಲ್ಲ. ತನ್ನ ಈಗಿನ ಸ್ಥಿತಿಗೆ ಜೋಶಿಯೇ ಕಾರಣವೆಂದು ಒಳಗೊಳಗೆ ಕುದಿಯುತ್ತಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ಕೊಟ್ಟು ಸಮಾಧಾನ ಮಾಡಿದ್ದರೂ ಅವರಿಗೆ ತಮ್ಮ ಗೆಲುವಿನ ಜೊತೆಗೆ ಜೋಶಿಯ ಸೋಲು ಮುಖ್ಯವಾಗಿದೆ. ಇವೆಲ್ಲದರ ಪರಿಣಾಮವಾಗಿ ವೀರಶೈವ ಲಿಂಗಾಯತರು ಈ ಸಲ ಜೋಶಿಯನ್ನು ಸೋಲಿಸಲು ಪಣ ತೊಟ್ಟಿದ್ದಾರೆ. ಅವರ ಧ್ವನಿಯಾಗಿ ದಿಂಗಾಲೇಶ್ವರ ಸ್ವಾಮಿ ಬಹಿರಂಗವಾಗಿ ಸಿಡಿದೆದ್ದಿದ್ದಾರೆ. ಯಡಿಯೂರಪ್ಪನವರು ಕೂಡ ಎಲ್ಲ ಮತಕ್ಷೇತ್ರಗಳ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ. ಅವರಿಗೆ ಶಿವಮೊಗ್ಗದಲ್ಲಿ ಪುತ್ರ ರಾಘವೇಂದ್ರನ ಗೆಲುವು ಮುಖ್ಯವಾಗಿದೆ.
ಬಿಜೆಪಿ ಮತ್ತು ಜೆಡಿಎಸ್ ನಡುವೆ ನಾಯಕರ ಮಟ್ಟದಲ್ಲಿ ಹೊಂದಾಣಿಕೆಯಾಗಿದ್ದರೂ ದ್ವಿತೀಯ ಹಂತದ ಮುಖಂಡರು ಮತ್ತು ಕಾರ್ಯಕರ್ತರ ನಡುವೆ ವೈಮನಸ್ಸು ಒಳಗೊಳಗೆ ತೀವ್ರವಾಗುತ್ತಿದೆ. ಚಿಕ್ಕ ಬಳ್ಳಾಪುರದ ಮಾಜಿ ಶಾಸಕ ಹಿರಿಯ ನಾಯಕ ಬಚ್ಚೇಗೌಡರು ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಅಳಿಯ ಡಾ. ಸಿ.ಎನ್. ಮಂಜುನಾಥ್‌ರಿಗೆ ಬಿಜೆಪಿ ಟಿಕೆಟ್ ಕೊಡಿಸಿ ಆ ಪಕ್ಷದಿಂದ ಕಣಕ್ಕೆ ಇಳಿಸಿರುವುದು ಜೆಡಿಎಸ್‌ನ ಅನೇಕ ನಾಯಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಎಲ್ಲ ಬೆಳವಣಿಗೆಗಳಿಂದಾಗಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳು ಕಂಗಾಲಾಗಿದ್ದಾರೆ. ಅವರಿಗೆ ಮತದಾರರ ಬಳಿ ಹೇಳಿಕೊಳ್ಳಲು ಯಾವ ಸಾಧನೆಯೂ ಇಲ್ಲ. ಬಹಳ ನಿರೀಕ್ಷೆ ಇರಿಸಿಕೊಂಡಿದ್ದ ಅಯೋಧ್ಯೆಯ ರಾಮ ಮಂದಿರದ ವಿಷಯವೂ ಚುನಾವಣೆಯಲ್ಲಿ ನೆರವಾಗುವ ಸಂಭವವಿಲ್ಲ.ಕೋಮು ಧ್ರುವೀಕರಣವೂ ಆಗುತ್ತಿಲ್ಲ. ಹೀಗಾಗಿ ಪಕ್ಷದ ಬದಲಾಗಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಮತ ಯಾಚಿಸುವ ಹತಾಶ ಸ್ಥಿತಿಗೆ ಬಿಜೆಪಿ ತಲುಪಿದೆ. ಇತ್ತೀಚೆಗೆ ಟಿ.ವಿ. ವಾಹಿನಿಯೊಂದು ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಮುಖಾಮುಖಿ ಕಾರ್ಯಕ್ರಮವನ್ನು ಪ್ರಸಾರ ಮಾಡಿತು. ಅದರಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ‘‘ನೀವು ಯಾವ ಆಧಾರದಲ್ಲಿ ಮತ ಕೇಳುತ್ತೀರಿ?’’ ಎಂದು ಪ್ರಶ್ನಿಸಿದಾಗ ಕಾಂಗ್ರೆಸ್ ಅಭ್ಯರ್ಥಿ ‘‘ಗ್ಯಾರಂಟಿ ಆಧಾರದಲ್ಲಿ ಮತ ಯಾಚಿಸುತ್ತೇನೆ’’ ಎಂದು ಹೇಳಿದರು. ಅದೇ ಪ್ರಶ್ನೆಯನ್ನು ಬಿಜೆಪಿ ಅಭ್ಯರ್ಥಿಗೆ ಹಾಕಿದಾಗ ‘‘ಮೋದಿಯೇ ನಮ್ಮ ಗ್ಯಾರಂಟಿ’’ ಎಂದು ಹತಾಶರಾಗಿ ನುಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯದಲ್ಲಿ ತಿಂಗಳು ಕಾಲ ಊರೂರು ಸುತ್ತಿದರು. ನಡು ಬಗ್ಗಿಸಿ ನಮಸ್ಕರಿಸಿ ಮತ ಯಾಚಿಸಿದರು. ಅವರಿಗೆ ಅಮಿತ್ ಶಾ ಸಾಥ್ ಕೊಟ್ಟರು. ಇಷ್ಟೆಲ್ಲಾ ಕಸರತ್ತು ಮಾಡಿದರೂ ಕಾಂಗ್ರೆಸ್ 136 ಸ್ಥಾನಗಳನ್ನು ಗೆದ್ದುಕೊಂಡಿತು. ಜನಪರವಾದ ಗ್ಯಾರಂಟಿ ಯೋಜನೆಗಳನ್ನು ನಂಬಿದ ಜನ ಬಿಜೆಪಿಗೆ ಪಾಠ ಕಲಿಸಿದರು. ಈಗ ಮತ್ತೆ ಮೋದಿ ಹೆಸರು ಕೆಲಸಕ್ಕೆ ಬರುವ ಸಾಧ್ಯತೆ ಇದೆಯೇ?
ಕರ್ನಾಟಕದ ಈ ಎಲ್ಲಾ ವಿದ್ಯಮಾನಗಳಿಂದ ಅಮಿತ್ ಶಾ ಮಾತ್ರವಲ್ಲ ಪ್ರಧಾನಿ ನರೇಂದ್ರ ಮೋದಿಯವರೂ ಆತಂಕಗೊಂಡಿದ್ದಾರೆ. ಅಮಿತ್ ಶಾ ಬೆಂಗಳೂರಿಗೆ ಬಂದು ಹಿರಿಯ ನಾಯಕರನ್ನು ಕರೆದು ಮಾತಾಡಿಸಿ, ಭಿನ್ನಾಭಿಪ್ರಾಯ ನಿವಾರಿಸಲು ಯತ್ನಿಸಿದರೂ ಪ್ರಯೋಜನವಾಗಿಲ್ಲ. ಇದನ್ನು ಮರೆ ಮಾಚಲು ಬಿಜೆಪಿ ನಾಯಕರು ಕಾಂಗ್ರೆಸ್‌ನಲ್ಲಿ ಒಡಕಿನ ಕನಸು ಕಾಣುತ್ತಿದ್ದಾರೆ.