ನಕಲಿ ಪರಶುರಾಮ ಪ್ರತಿಮೆ : ಕಾಂಗ್ರೆಸ್ ಪ್ರತಿಭಟನೆ ಅಸಲಿಯೆ?

Update: 2024-07-25 05:51 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಉತ್ತರ ಪ್ರದೇಶದಲ್ಲಿ ರಾಮನಿಗೆ ಬಿಜೆಪಿ ಕಟ್ಟಿದ ಮಂದಿರ ಸೋರುತ್ತಿರುವುದು ಮಾಧ್ಯಮಗಳ ಮೂಲಕ ಸುದ್ದಿಯಾಗುತ್ತಿದ್ದಂತೆಯೇ, ಇತ್ತ ರಾಜ್ಯದಲ್ಲಿ ಪರಶುರಾಮನ ನಕಲಿ ಪ್ರತಿಮೆ ಪ್ರಕರಣ ಮತ್ತೆ ಜೀವ ಪಡೆದುಕೊಂಡಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ಉದ್ಘಾಟನೆಗೊಂಡ ಪರಶುರಾಮ ಥೀಮ್ ಪಾರ್ಕ್

ನಲ್ಲಿ ರಚನೆಯಾಗಿರುವ ಪರಶುರಾಮ ಪ್ರತಿಮೆ ಕಂಚಿನದ್ದಲ್ಲ, ಫೈಬರ್‌ನಿಂದ ತಯಾರಾಗಿರುವುದು ಎನ್ನುವುದು ಬೆಳಕಿಗೆ ಬಂದು ಒಂದು ವರ್ಷ ಕಳೆದಿದೆ. ಇದೀಗ ಏಕಾಏಕಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಪರಶುರಾಮನ ಮೇಲಿನ ಭಕ್ತಿ ಗರಿಕೆದರಿದೆ. ಹಿಂದುತ್ವದ ಪ್ರತಿಪಾದಕನಾಗಿರುವ ಸುನೀಲ್ ಕುಮಾರ್ ನೇತೃತ್ವದಲ್ಲಿ ನಿರ್ಮಾಣವಾಗಿರುವ ಪರಶುರಾಮ ಪ್ರತಿಮೆಯಲ್ಲಿ ಅಕ್ರಮ ನಡೆದಿದ್ದು, ಈ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದಿವೆ. ಪರಶುರಾಮನ ಪ್ರತಿಮೆ ಹೆಸರಿನಲ್ಲಿ ವಂಚನೆ ಎಸಗುವ ಮೂಲಕ ಹಿಂದೂಗಳ ಭಾವನೆಗಳಿಗೆ ಬಿಜೆಪಿ ಮುಖಂಡ ಸುನೀಲ್ ಕುಮಾರ್ ಧಕ್ಕೆ ತಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಪರಶುರಾಮನಿಗೂ ಕರಾವಳಿಗೂ ಯಾವುದೇ ವಿಶೇಷ ನಂಟೇನೂ ಇಲ್ಲ. ಪರಶುರಾಮ ತುಳುನಾಡಿಗೆ ಅನ್ಯ. ಒಂದು ಮೌಖಿಕ ಕತೆಯ ಪ್ರಕಾರ, ತುಳುನಾಡಿಗೆ ಆಗಮಿಸಲು ಯತ್ನಿಸುವ ಪರಶುರಾಮನನ್ನು ತುಳು ದೈವಗಳು ತಡೆದು ನಿಲ್ಲಿಸುತ್ತವೆ. ಪರಶುರಾಮ ಕೊಡಲಿ ಎಸೆದು ತುಳುನಾಡನ್ನು ಸೃಷ್ಟಿಸಿದ ಎನ್ನುವ ಕತೆಯೂ ಯಾವುದೇ ಪಾಡ್ದನಗಳಲ್ಲಿ ಉಲ್ಲೇಖವಿಲ್ಲ. ಗೋಮಟೇಶ್ವರ, ಕೋಟಿ ಚೆನ್ನಯ, ಇಲ್ಲಿರುವ ನೂರಾರು ಕಾರ್ನಿಕ ದೈವಗಳು, ನಾರಾಯಣಗುರುಗಳ ವಿಚಾರಧಾರೆಗಳೊಂದಿಗೆ ಇರುವ ಸಂಬಂಧ, ದಶಾವತಾರದ ಪಾತ್ರವಾಗಿರುವ ಪರಶುರಾಮನ ಜೊತೆಗೆ ಇಲ್ಲ. ಥೀಮ್ ಪಾರ್ಕಿಗೆ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದ ನಾರಾಯಣ ಗುರುಗಳ ಹೆಸರನ್ನು ಇಡಬಹುದಿತ್ತು. ಅಥವಾ ಬಾಹುಬಲಿ ಥೀಮ್ ಪಾರ್ಕ್ ಎಂದೂ ಅದನ್ನು ಕರೆಯುವ ಅವಕಾಶವಿತ್ತು. ಆದರೆ ರಾಜಕೀಯ ಕಾರಣಕ್ಕಾಗಿಯೇ ಸ್ಥಳೀಯ ಬಿಜೆಪಿ ನಾಯಕರು ಪರಶು ರಾಮನ ಹೆಸರನ್ನು ಎಳೆದು ತಂದರು. ಸುಮಾರು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಥೀಮ್ ಪಾರ್ಕಿನ ದೊಡ್ಡ ಹೆಗ್ಗಳಿಕೆ ಬೃಹತ್ ಕಂಚಿನ ಪರಶುರಾಮ ಮೂರ್ತಿಯಾಗಿತ್ತು. 33 ಅಡಿ ಎತ್ತರದ ಈ ಕಂಚಿನ ಪ್ರತಿಮೆಗೆ ಸುಮಾರು 2ಕೋಟಿ ರೂ.ಗಳನ್ನು ವ್ಯಯಿಸಲಾಗುತ್ತದೆ ಎಂದು ಸರಕಾರದ ಪ್ರಕಟಣೆಯಲ್ಲಿ ತಿಳಿಸಿತ್ತು. ಪ್ರತಿಮೆಯ ತೂಕ 15 ಟನ್, ಪರಶುರಾಮನ ಕೈಯ ಕೊಡಲಿಯ ಅಳತೆ 17 ಅಡಿ ಎಂದೂ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಮಿಂಚು ಪ್ರತಿಬಂಧಕ ವಿಶೇಷ ಪ್ರತಿಮೆ ಎನ್ನುವುದು ಇದರ ಇನ್ನೊಂದು ಹೆಗ್ಗಳಿಕೆಯಾಗಿತ್ತು. ಈ ಥೀಮ್ ಪಾರ್ಕನ್ನು ಸ್ವತಃ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯೇ ಉದ್ಘಾಟಿಸಿದ್ದರು. ಸಮಾರಂಭದಲ್ಲಿ ‘‘ಪರಶುರಾಮನ ಭಕ್ತನಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಇಲ್ಲಿನ ಪರಶುರಾಮ ಥೀಮ್ ಪಾರ್ಕ್ ಟೂರಿಸಂ ಕೇಂದ್ರದ ಜೊತೆಗೆ ಪುಣ್ಯ ಭೂಮಿ ಕೂಡ ಆಗಲಿದೆ’’ ಎಂದು ಘೋಷಿಸಿದ್ದರು. ಅಷ್ಟೇ ಅಲ್ಲ ಪರಶುರಾಮನ ಪುತ್ಥಳಿ ಸ್ಥಾಪನೆಯ ಆನಂತರ ತುಳುನಾಡು ಬಂಗಾರದ ನಾಡಾಗಲಿದೆ. ಇದೊಂದು ಐತಿಹಾಸಿಕ ದಿನ ಎಂದು ಬಣ್ಣಿಸಿದ್ದರು. ಥೀಮ್ ಪಾರ್ಕಿನ ನೇತೃತ್ವವನ್ನು ವಹಿಸಿದ್ದ ಅಂದಿನ ಸಚಿವ ಸುನೀಲ್ ಕುಮಾರ್ ಇಡೀ ಸಮಾರಂಭದ ಕೇಂದ್ರ ಬಿಂದುವಾಗಿದ್ದರು. ವಿಧಾನಸಭಾಚುನಾವಣೆಯ ಸಂದರ್ಭದಲ್ಲಿ ಹಿಂದುತ್ವದ ಜಾಗೃತಿಗಾಗಿ ಪರಶುರಾಮನನ್ನು ಗರಿಷ್ಠ ಪ್ರಮಾಣದಲ್ಲಿ ಈ ಸಚಿವರು ಬಳಸಿಕೊಂಡಿದ್ದರು. ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಪ್ರಧಾನಿ ಮೋದಿ ರಾಮಮಂದಿರವನ್ನು ಅವಸರವಸರವಾಗಿ ಉದ್ಘಾಟನೆ ಮಾಡಿದಂತೆ, ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಕಂಚಿನ ಪ್ರತಿಮೆಯ ಬದಲು ಫೈಬರ್ ಪ್ರತಿಮೆಯನ್ನು ಸುನೀಲ್ ತಂದು ನಿಲ್ಲಿಸಿದ್ದರು.

ಕಂಚಿನ ಪ್ರತಿಮೆಯ ಹೆಸರಿನಲ್ಲಿ ಬಿಜೆಪಿ ಸರಕಾರ ಫೈಬರ್ ಪ್ರತಿಮೆಯನ್ನು ನಿರ್ಮಾಣ ಮಾಡಿರುವುದನ್ನು ಬಹಿರಂಗಗೊಳಿಸಿದ್ದು ಕಾಂಗ್ರೆಸ್ ನಾಯಕರಲ್ಲ. ಹಿಂದೂಧರ್ಮದ ಮೇಲೆ ನಿಜವಾದ ನಂಬಿಕೆಯಿರುವ ಕೆಲವು ಸ್ಥಳೀಯರ ಕಾಳಜಿಯಿಂದ ಹಗರಣ ಬಹಿರಂಗವಾಯಿತು. ಫೈಬರ್ ಪರಶುರಾಮನ ಪೋಟೋಗಳು ಪತ್ರಿಕೆಗಳಲ್ಲಿ ಪ್ರಕಟವಾಯಿತು. ಕಂಚಿನ ಪರಶುರಾಮನ ಅಸಲಿತನ ಬಹಿರಂಗವಾಗುತ್ತಿದ್ದಂತೆಯೇ, ರಾತ್ರೋ ರಾತ್ರಿ ಪ್ರತಿಮೆ ಸುನೀಲ್ ಕುಮಾರ್ ನೇತೃತ್ವದಲ್ಲಿ ಕಾಣೆಯಾಯಿತು. ಹಿಂದೂಧರ್ಮೀಯರೂ ಸೇರಿದಂತೆ ಎಲ್ಲರೂ ಒಕ್ಕೊರಲಿನಲ್ಲಿ ಈ ಹಗರಣವನ್ನು ಖಂಡಿಸಿದ್ದರು. ತನಿಖೆಯಾಗಬೇಕು ಎಂದು ಆದಾಗ ಬಹುಮತದಿಂದ ಗೆದ್ದು ಬಂದ ಕಾಂಗ್ರೆಸ್ ಸರಕಾರವನ್ನು ಒತ್ತಾಯಿಸಿದ್ದರು. ಆದರೆ, ಈ ಬಗ್ಗೆ ಕಾಂಗ್ರೆಸ್ ಸರಕಾರದ ತುಟಿ ಬಿಚ್ಚಲಿಲ್ಲ. ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ‘ಅಕ್ರಮ ನಡೆದಿರುದು ನಿಜ’ ಎಂದು ಮಾಧ್ಯಮಗಳ ಮುಂದೆ ಒಪ್ಪಿಕೊಂಡರು. ಆದರೆ ಅಕ್ರಮವನ್ನು ಮುಚ್ಚಿಟ್ಟ, ರಾತ್ರೋ ರಾತ್ರಿ ಪ್ರತಿಮೆಯನ್ನು ನಾಪತ್ತೆ ಮಾಡಿದ ಜಿಲ್ಲಾಡಳಿತದ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ಮುಂದಾಗಲಿಲ್ಲ. ಈ ಸಂದರ್ಭದಲ್ಲಿ ‘‘ಧೈರ್ಯವಿದ್ದರೆ ತನಿಖೆ ನಡೆಸಿ’’ ಎಂದು ಕಾಂಗ್ರೆಸ್ ಸರಕಾರಕ್ಕೆ ಸ್ವತಃ ಸುನೀಲ್ ಕುಮಾರ್ ಅವರೇ ಸವಾಲು ಹಾಕಿದ್ದರು. ಇಷ್ಟಾದರೂ, ಕಾಂಗ್ರೆಸ್ ಸರಕಾರ ಪ್ರಕರಣವನ್ನು ತನಿಖೆ ನಡೆಸುವ ಧೈರ್ಯ ಪ್ರದರ್ಶಿಸಲಿಲ್ಲ.

ಇದೀಗ ಕಾಂಗ್ರೆಸ್‌ಸರಕಾರದ ವಿರುದ್ಧ ಬಿಜೆಪಿ ಒಂದೊಂದೇ ಹಗರಣಗಳನ್ನು ಬಹಿರಂಗಗೊಳಿಸಿ ಮುಖ್ಯಮಂತ್ರಿಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಂತೆಯೇ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ‘ಪರಶುರಾಮನ ಪ್ರತಿಮೆ’ಯ ನೆನಪಾಗಿದೆ. ತಮಾಷೆಯೆಂದರೆ, ರಾಜ್ಯದಲ್ಲಿರುವುದು ತನ್ನದೇ ಪಕ್ಷದ ಸರಕಾರ ಎನ್ನುವುದನ್ನು ಮರೆತು, ಪರಶುರಾಮ ಪ್ರತಿಮೆ ಅವ್ಯವಹಾರದ ತನಿಖೆಯನ್ನು ಎಸ್‌ಐಟಿ ತನಿಖೆಗೆ ಒಪ್ಪಿಸಬೇಕು ಎಂದು ಪ್ರತಿಭಟನೆ ನಡೆಸಿದ್ದಾರೆ. ಮುಖ್ಯಮಂತ್ರಿಯವರಿಗೆ ಮನವಿಯನ್ನು ಸಲ್ಲಿಸಿದ್ದಾರೆ.

ಪ್ರಕರಣವನ್ನು ಎಸ್‌ಐಟಿಗೆ ಒಪ್ಪಿಸಬೇಕು ಎಂದು ಮನವಿ ನೀಡಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಒಂದು ವರ್ಷ ಯಾಕೆ ಹಿಡಿಯಿತು? ಇಲ್ಲಿಯವರೆಗೆ ಈ ಅಕ್ರಮದ ವಿರುದ್ಧ ಮೌನವಾಗಿದ್ದದ್ದು ಯಾಕೆ? ಎಂದು ಪರಶುರಾಮನ ಭಕ್ತರು ಕಾಂಗ್ರೆಸ್ ಸರಕಾರವನ್ನು ಕೇಳುತ್ತಿದ್ದಾರೆ. ಕಾಂಗ್ರೆಸ್ ಸರಕಾರದ ಹಗರಣಗಳನ್ನು ಪ್ರಶ್ನಿಸಿದರೆ, ಬಿಜೆಪಿ ಕಾಲದ ಹಗರಣಗಳನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆೆ?’ ಎನ್ನುವ ಪರೋಕ್ಷ ಎಚ್ಚರಿಕೆಯನ್ನು ಬಿಜೆಪಿಗೆ ನೀಡುವುದಕ್ಕಾಗಿಯಷ್ಟೇ ಸಚಿವೆಯ ನೇತೃತ್ವದಲ್ಲಿ ಪರಶುರಾಮನ ಹಗರಣದ ವಿರುದ್ಧ ಪ್ರತಿಭಟನೆಯ ಪ್ರಹಸನ ನಡೆಯುತ್ತಿದೆಯೆ ಎಂದು ರಾಜ್ಯದ ಜನತೆ ಅನುಮಾನಿಸುತ್ತಿದ್ದಾರೆ.

ಹಿಂದುತ್ವದ ಹೆಸರಿನಲ್ಲಿ ಕರಾವಳಿಯ ಜನರನ್ನು ಪರಸ್ಪರ ಎತ್ತಿಕಟ್ಟುವಲ್ಲಿ ಪ್ರಧಾನ ಪಾತ್ರವಹಿಸಿದ್ದ ಸುನೀಲ್ ಕುಮಾರ್, ಹಿಂದೂಧರ್ಮದ ದಶಾವತಾರಗಳಲ್ಲಿ ಒಬ್ಬನಾಗಿರುವ ಪರಶುರಾಮನ ಹೆಸರಿನಲ್ಲಿ ಅಕ್ರಮ ನಡೆಸಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದರು. ಹಿಂದುತ್ವದ ಹೆಸರಿನಲ್ಲಿ ಗದ್ದಲ ಎಬ್ಬಿಸುವ ಬಿಜೆಪಿಗೆ ಫೈಬರ್ ಪರಶುರಾಮನನ್ನು ತಿರುಗುಬಾಣವಾಗಿಸುವ ಅವಕಾಶ ಕಾಂಗ್ರೆಸ್ ಸರಕಾರಕ್ಕಿತ್ತು. ಆದರೆ ಸುನೀಲ್ ಕುಮಾರ್ ಮತ್ತು ಆತನ ಸಂಗಡಿಗರನ್ನು ಕಾಂಗ್ರೆಸ್ ಸರಕಾರವೇ ಈವರೆಗೆ ರಕ್ಷಿಸುತ್ತಾ ಬಂದಿದೆ. ಇದೀಗ ವಾಲ್ಮೀಕಿ ಹಗರಣದಲ್ಲಿ ತನಿಖಾ ಸಂಸ್ಥೆಗಳು ತಮ್ಮ ಮುಖ್ಯಮಂತ್ರಿಯನ್ನು ಸಿಲುಕಿಸಲು ಯತ್ನ ನಡೆಸುತ್ತಿರುವುದನ್ನು ಕಂಡು ಕಾಂಗ್ರೆಸ್ ನಾಯಕರು ಎಚ್ಚೆತ್ತು ಪರಶುರಾಮನ ಕೊಡಲಿಯನ್ನು ಕೈಗೆತ್ತಿಕೊಂಡಿದ್ದಾರೆ.

ಈ ಹಿಂದೆ ಉಡುಪಿಯಲ್ಲಿ ‘ಪದ್ಮಪ್ರಿಯ’ ಆತ್ಮಹತ್ಯೆ ಪ್ರಕರಣದಲ್ಲಿ ರಘುಪತಿ ಭಟ್ ಜೊತೆಗೆ ಬಿಜೆಪಿಯ ಇನ್ನಿಬ್ಬರು ಪ್ರಭಾವಿ ನಾಯಕರು ಜೈಲಿಗೆ ಹೋಗುತ್ತಾರೆ ಎನ್ನುವಾಗ ಅವರನ್ನು ರಕ್ಷಿಸಿದ್ದು ಅಂದಿನ ಯುಪಿಎ ಸರಕಾರದೊಳಗಿದ್ದ ದಿಲ್ಲಿಯ ಹಿರಿಯ ಕಾಂಗ್ರೆಸ್ ವರಿಷ್ಠರು ಎನ್ನುವುದು ಅವಿಭಜಿತ ದಕ್ಷಿಣ ಕನ್ನಡದ ಎಲ್ಲರಿಗೂ ಗೊತ್ತಿರುವ ಸತ್ಯ. ಕಾಂಗ್ರೆಸ್ ನಾಯಕರು ಇಂತಹ ಹಲವು ಪ್ರಕರಣಗಳಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರನ್ನು ರಕ್ಷಿಸಿ ತಮ್ಮ ‘ಜಾತ್ಯತೀತ’ತೆಯನ್ನು ಎತ್ತಿ ಹಿಡಿಯುತ್ತಾ ಬಂದಿದ್ದಾರೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್‌ನ ಯಾವುದೇ ನಾಯಕರ ಜೊತೆಗೆ ಇಂತಹ ಮೃದು ನಿಲುವನ್ನು ಬಿಜೆಪಿ ತಳೆಯಲಿಲ್ಲ. ತನ್ನ ವಿರೋಧಿಗಳನ್ನು ಬಗ್ಗು ಬಡಿಯಲು ಯಾವ ಹಂತಕ್ಕೆ ಇಳಿಯಲೂ ಸಿದ್ಧ ಎನ್ನುವುದನ್ನು ಹಲವು ಪ್ರಕರಣಗಳಲ್ಲಿ ಅದು ಸಾಬೀತು ಪಡಿಸಿದೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿದ್ದ ರಾಹುಲ್‌ಗಾಂಧಿಯನ್ನು ಸಂಸತ್‌ನಿಂದ ಹೊರ ಹಾಕಲೂ ಅದು ಹಿಂದೇಟು ಹಾಕಲಿಲ್ಲ. ಇಷ್ಟಾದರೂ ಕಾಂಗ್ರೆಸ್ ಕೋಮುವಾದಿ ಶಕ್ತಿಗಳ ಜೊತೆಗೆ ಮೃದು ನಿಲುವನ್ನು ಮುಂದುವರಿಸಿದೆ. ಮುಡಾ, ವಾಲ್ಮೀಕಿ ಹಗರಣಗಳಲ್ಲಿ ತಾನು ಮಾಡಿದ್ದನ್ನೇ ಕಾಂಗ್ರೆಸ್ ತಿನ್ನುತ್ತಿದೆ. ಪರಶುರಾಮನಿಗೆ ವಂಚಿಸಿದ ಕಾರಣಕ್ಕೆ ಬಿಜೆಪಿ ನಾಯಕರು ಜೈಲು ಸೇರಲೇ ಬೇಕು. ಆದರೆ ಅದಕ್ಕೆ ತಡೆಯಾಗಿರುವುದು ಅಸ್ತಿತ್ವದಲ್ಲಿರುವ ಕಾಂಗ್ರೆಸ್ ಸರಕಾರವೆನ್ನುವುದೇ ಅತ್ಯಂತ ವಿಷಾದನೀಯ ಸಂಗತಿಯಾಗಿದೆ. ಪರಶುರಾಮನ ಕಂಚಿನ ಪ್ರತಿಮೆ ನಕಲಿಯಾಗಿರುವುದು ಎಷ್ಟು ಸತ್ಯವೋ, ಆ ಹಗರಣದ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯೂ ನಕಲಿಯೇ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News