ಪಂಚರಾಜ್ಯ ಚುನಾವಣೆ: ಹೆದರುತ್ತಿರುವ ಕೇಂದ್ರ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ನವೆಂಬರ್‌ನಲ್ಲಿ ಪಂಚರಾಜ್ಯ ಚುನಾವಣೆಯನ್ನು ಘೋಷಿಸಲಾಗಿದೆ. ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಮಿಜೋರಾಮ್, ಛತ್ತೀಸ್‌ಗಡಗಳಲ್ಲಿ ಎರಡು ಹಂತಗಳ ಮತದಾನಗಳು ನಡೆಯಲಿವೆ. ಇದೇ ಸಂದರ್ಭದಲ್ಲಿ ಜಮ್ಮುಕಾಶ್ಮೀರ ಚುನಾವಣೆಯನ್ನು ಮುಂದೆ ಹಾಕಿದೆ. ಈಗಾಗಲೇ ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದಿಂದ ಕೇಂದ್ರ ಸರಕಾರ ಬೆಚ್ಚಿ ಬಿದ್ದಿದೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಭಾವನಾತ್ಮಕ ರಾಜಕಾರಣಕ್ಕೆ ಬಲಿಯಾಗದೆ ಕರ್ನಾಟಕ ಅಭಿವೃದ್ಧಿ ರಾಜಕಾರಣದ ಜೊತೆಗೆ ಬಲವಾಗಿ ನಿಂತಿತು. ಮಧ್ಯಮವರ್ಗ ಕಾಂಗ್ರೆಸ್‌ನ ಗ್ಯಾರಂಟಿಗಳನ್ನು ನಂಬಿ ಮತ ಹಾಕಿತು. ಇದೀಗ ಈ ಗ್ಯಾರಂಟಿಗಳು ರಾಜ್ಯದಲ್ಲಿ ಯಶಸ್ವಿಯಾಗಿ ಅನುಷ್ಠಾನವಾಗುತ್ತಿದೆ ಮಾತ್ರವಲ್ಲ, ಇತರ ರಾಜ್ಯಗಳಿಗೂ ಕರ್ನಾಟಕದ ಯೋಜನೆ ಮಾದರಿಯಾಗುತ್ತಿದೆ. ಗ್ಯಾರಂಟಿ ಯೋಜನೆಗಳು ಕೇಂದ್ರ ಸರಕಾರದ ನಿದ್ದೆಗೆಡಿಸಿವೆ. ಮಹಿಳೆಯರು ಮತ್ತು ಮಧ್ಯಮ ವರ್ಗ ನಿಧಾನಕ್ಕೆ ರಾಹುಲ್ ಗಾಂಧಿ ಕಡೆಗೆ ವಾಲುತ್ತಿರುವುದನ್ನು ಕೇಂದ್ರ ಸರಕಾರದ ಅರಿವಿಗೆ ಬಂದಿದೆ. ಈ ಕಾರಣಕ್ಕೆ ಮೊದಲ ಬಾರಿಗೆ ಅಡುಗೆ ಅನಿಲದಲ್ಲಿ 200 ರೂ. ಕಡಿತಗೊಳಿಸಿತು. ಮಹಿಳಾ ಮಸೂದೆಯನ್ನು ಆತುರಾತುರವಾಗಿ ಮಂಡಿಸಿದ್ದೂ ಇದೇ ಕಾರಣಕ್ಕೆ. ಸರಕಾರ ಮಹಿಳೆಯರ ಪರವಾಗಿದೆ ಎನ್ನುವುದನ್ನು ಪ್ರಕಟಪಡಿಸುವುದಕ್ಕೆ ಪ್ರಧಾನಿ ಮೋದಿಯವರು ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಒದ್ದಾಡುತ್ತಿದ್ದಾರೆ.
ಇದೀಗ ಪಂಚರಾಜ್ಯ ಚುನಾವಣೆಯೂ ಕೇಂದ್ರ ಸರಕಾರಕ್ಕೆ ಇನ್ನೊಂದು ಅಗ್ನಿ ಪರೀಕ್ಷೆಯಾಗಿದೆ. ಈ ಚುನಾವಣೆಯ ಫಲಿತಾಂಶ ನೇರವಾಗಿ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮಬೀರಬಹುದು ಎನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರ. ಮಧ್ಯಪ್ರದೇಶ ಮತ್ತು ರಾಜಸ್ಥಾನವನ್ನು ಅದು ಗೆಲ್ಲಲೇ ಬೇಕು ಎನ್ನುವಂತಹ ಸ್ಥಿತಿಯಲ್ಲಿದೆ. ತೆಲಂಗಾಣದಲ್ಲಿ ಈ ಹಿಂದಿಗಿಂತ ಕೆಲವು ಸ್ಥಾನಗಳನ್ನಾದರೂ ಹೆಚ್ಚು ಗಳಿಸುವುದು ಅದರ ಗುರಿ. ಮಣಿಪುರ ಸೇರಿದಂತೆ ಈಶಾನ್ಯಕ್ಕೆ ಬೆಂಕಿ ಬಿದ್ದಿದೆ. ಈ ಬೆಂಕಿಯಿಂದ ಮಿಜೋರಾಂ, ಛತ್ತೀಸ್‌ಗಡದಲ್ಲಿ ತನ್ನ ಮತಗಳನ್ನು ಬಿಜೆಪಿ ಹೆಚ್ಚಿಸಿಕೊಳ್ಳಲಿದೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ. ಮಧ್ಯಪ್ರದೇಶದ ಆಡಳಿತ ಈಗ ಬಿಜೆಪಿಯ ಕೈಯಲ್ಲಿದೆಯಾದರೂ, ಕಳೆದ ಚುನಾವಣೆಯಲ್ಲಿ ಅದು ಮಧ್ಯಪ್ರದೇಶವನ್ನು ಕಳೆದುಕೊಂಡಿತ್ತು. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಸರಕಾರವನ್ನೂ ರಚಿಸಿತ್ತು. ಮಧ್ಯಪ್ರದೇಶ ಬಿಜೆಪಿಗೆ ಎಷ್ಟು ಅಗತ್ಯವಿತ್ತು ಎಂದರೆ, ಕೊರೋನ, ಲಾಕ್‌ಡೌನ್‌ನ ಸಂಕಟದ ಕಾಲದಲ್ಲೇ, ಬಿಜೆಪಿಯು ಕಾಂಗ್ರೆಸ್‌ನ ಶಾಸಕರನ್ನು ಕೊಂಡುಕೊಂಡು ಸರಕಾರವನ್ನು ಉರುಳಿಸಿ ಹೊಸ ಸರಕಾರವನ್ನು ರಚಿಸಿತು. ಇಡೀ ದೇಶ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಯಾವ ನಾಚಿಕೆಯೂ ಇಲ್ಲದೆ ಕುದುರೆ ವ್ಯಾಪಾರ ನಡೆಸಿ ಮಧ್ಯಪ್ರದೇಶವನ್ನು ತನ್ನದಾಗಿಸಿಕೊಂಡಿತು. ಒಂದು ವೇಳೆ ಮಧ್ಯಪ್ರದೇಶ ಕೈ ಬಿಟ್ಟು ಹೋದರೆ, ಬಿಜೆಪಿ ಅಲ್ಲಿ ಮಾಡಿಟ್ಟ ಬ್ರಹ್ಮಾಂಡ ಭ್ರಷ್ಟಾಚಾರಕ್ಕಾಗಿ ಹಲವು ಪ್ರಮುಖ ನಾಯಕರು ಜೈಲು ಸೇರಬೇಕಾದ ಸಾಧ್ಯತೆಗಳಿತ್ತು. ಈ ಬಾರಿಯೂ ಮಧ್ಯಪ್ರದೇಶವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ ಬಿಜೆಪಿ. ಆದಿವಾಸಿಯೊಬ್ಬನ ಮೇಲೆ ಬಿಜೆಪಿ ಮುಖಂಡ ಮೂತ್ರ ಮಾಡಿದ ಘಟನೆ ದೇಶಾದ್ಯಂತ ಸುದ್ದಿಯಾದಾಗ ಮಧ್ಯ ಪ್ರದೇಶದ ಮುಖ್ಯಮಂತ್ರಿ ತಕ್ಷಣ ಧಾವಿಸಿ ಆತನ ಪಾದ ತೊಳೆದದ್ದು ಇದೇ ಕಾರಣಕ್ಕೆ. ಲೋಕಸಭೆ ಚುನಾವಣೆಗೆ ಮಧ್ಯಪ್ರದೇಶದ ಕೊಡುಗೆ ಬಹುದೊಡ್ಡದಿದೆ.
ರಾಜಸ್ಥಾನದಲ್ಲಿರುವ ಕಾಂಗ್ರೆಸ್ ಸರಕಾರವನ್ನು ಉರುಳಿಸುವುದಕ್ಕೆ ಬಿಜೆಪಿ ಹಲವು ಪ್ರಯತ್ನಗಳನ್ನು ನಡೆಸಿತ್ತು. ಕಾಂಗ್ರೆಸ್‌ನೊಳಗಿರುವ ಭಿನ್ನಮತಗಳನ್ನು ಬಳಸಿಕೊಂಡು ರಾಜಸ್ಥಾನದ ಅಧಿಕಾರವನ್ನು ಮರಳಿ ಪಡೆಯುವ ಪ್ರಯತ್ನವನ್ನು ಬಿಜೆಪಿ ಈ ಬಾರಿ ನಡೆಸಲಿದೆ. ಆದರೆ ಬಿಹಾರದಲ್ಲಿ ಬಿಡುಗಡೆಯಾಗಿರುವ ಜಾತಿ ಗಣತಿ ಮುಂದಿನ ಚುನಾವಣೆಯಲ್ಲಿ ನಿರ್ಣಾಯಕವಾಗುವ ಸಾಧ್ಯತೆಗಳಿವೆ. ಜಾತಿ ಗಣತಿ ವರದಿಗೆ ಪ್ರಧಾನಿ ಮೋದಿ ಬೆದರಿದ್ದಾರೆ ಎನ್ನುವುದು ಅವರ ಹೇಳಿಕೆಗಳಿಂದಲೇ ಬಹಿರಂಗವಾಗಿದೆ. ಮೀಸಲಾತಿ ಪರಿಣಾಮಕಾರಿಯಾಗಿ ಜಾರಿಯಾಗಬೇಕಾದರೆ ಸ್ಪಷ್ಟವಾದ ಜಾತಿ ಅಂಕಿಅಂಶಗಳ ಅಗತ್ಯವಿದೆ ಎಂದು ಸರ್ವೋಚ್ಚ ನ್ಯಾಯಾಲಯವೇ ಅಭಿಪ್ರಾಯ ಪಟ್ಟಿರುವಾಗ, ‘‘ಜಾತಿ ಗಣತಿಯಿಂದ ದೇಶವನ್ನು ಒಡೆಯಲಾಗುತ್ತದೆ’’ ಎಂಬ ಹೇಳಿಕೆಯನ್ನು ಪ್ರಧಾನಿ ಮೋದಿಯವರು ನೀಡಲು ಹೇಗೆ ಸಾಧ್ಯ? ಈ ದೇಶದಲ್ಲಿ ಬಡತನ ಮತ್ತು ಜಾತಿಗಳಿಗೆ ನೇರ ನಂಟಿದೆ. ದಲಿತರು ಮತ್ತು ಕೆಳಜಾತಿಯ ಜನರು ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಹಿಂದುಳಿಯಲು ಜಾತಿಯೇ ಕಾರಣ ಎನ್ನುವುದು ಸ್ಪಷ್ಟವಿರುವಾಗ, ಜಾತಿ ಗಣತಿಯೇ ದೇಶದ ಅಭಿವೃದ್ಧಿಯ ಕೀಲಿಕೈಯಲ್ಲವೆ? ಕಾಂಗ್ರೆಸ್ ತನ್ನ ಆಡಳಿತದಲ್ಲಿರುವ ಎಲ್ಲ ರಾಜ್ಯಗಳಲ್ಲೂ ಜಾತಿ ಗಣತಿಗಳನ್ನು ಮಾಡಲು ಮುಂದಾಗಿದೆ. ಜಾತಿ ಗಣತಿಯಿಂದ ಹಿಂದುಳಿದ ಜಾತಿಗಳಿಗೆ ಲಾಭವಾದರೆ ಪರೋಕ್ಷವಾಗಿ ಹಿಂದೂಗಳಿಗೆ ಲಾಭವಾದಂತೆ. ಹಿಂದೂಧರ್ಮದೊಳಗಿರುವ ಅಸಮಾನತೆಗಳು ಈ ಮೂಲಕ ಇಲ್ಲವಾದರೆ ಅದಕ್ಕೆ ಬಿಜೆಪಿ ಸಂತೋಷ ಪಡಬೇಕು. ಆದರೆ ಬಿಜೆಪಿ ಜಾತಿಗಣತಿಗೆ ಬೆದರಿದೆ. ರಾಜಸ್ಥಾನದಲ್ಲೂ ಇದೀಗ ಜಾತಿ ಗಣತಿ ನಡೆಸುವುದಾಗಿ ಘೋಷಿಸಲಾಗಿದೆ. ಇದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವ ಪರಿಣಾಮ ಬೀರಲಿದೆ ಎನ್ನುವುದರ ಆಧಾರದಲ್ಲಿ ಮುಂದಿನ ಲೋಕಸಭಾ ಚುನಾವಣೆಯ ಕಾರ್ಯತಂತ್ರವನ್ನು ಬಿಜೆಪಿ ಹೆಣೆಯಲಿದೆ. ಬಹುಶಃ ಜಾತಿಗಣತಿಗೆ ಎದುರಾಗಿ ರಾಮಮಂದಿರವನ್ನೇ ಬಿಜೆಪಿ ಕೊನೆಯ ಅಸ್ತ್ರವಾಗಿ ಬಳಸುವ ಎಲ್ಲ ಸಾಧ್ಯತೆಗಳು ಕಾಣುತ್ತವೆ.
ಇಷ್ಟಾದರೂ ಜಮ್ಮು -ಕಾಶ್ಮೀರದಲ್ಲಿ ಸರಕಾರ ಇನ್ನೂ ಚುನಾವಣೆಯನ್ನು ಘೋಷಿಸಿಲ್ಲ. ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ ರಾಜ್ಯವನ್ನು ಕೇಂದ್ರಾಡಳಿತವಾಗಿ ವಿಭಜಿಸಿ ನಾಲ್ಕು ವರ್ಷಗಳಾಗಿವೆ. ಇಡೀ ರಾಜ್ಯ ಅಕ್ಷರಶಃ ದಿಗ್ಬಂಧನದಲ್ಲಿದೆ. ಜಮ್ಮು- ಕಾಶ್ಮೀರದಲ್ಲಿ ಶಾಂತಿಯನ್ನು ಸ್ಥಾಪಿಸಿದ್ದೇವೆ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಆದರೆ ಅಲ್ಲಿ ಚುನಾವಣೆಯನ್ನು ನಡೆಸಲು ಹಿಂದೇಟು ಹಾಕುತ್ತಿದೆ. ‘ಚುನಾವಣೆ ನಡೆಸದೇ ಇರಲು ಕೇಂದ್ರ ಸರಕಾರದ ಮುಂದಿರುವ ಕಾರಣಗಳೇನು?’ ಎಂದು ಅಲ್ಲಿನ ರಾಜಕೀಯ ಪಕ್ಷಗಳು ಕೇಳುತ್ತಿವೆ. ಅಂದರೆ ಸೇನೆಯ ಮೂಲಕ ಕಾಶ್ಮೀರದಲ್ಲಿ ಶಾಂತಿಯನ್ನು ಸ್ಥಾಪಿಸಲು, ಪ್ರಜಾಸತ್ತಾತ್ಮಕವಾದ ವಾತಾವರಣವನ್ನು ನೆಲೆಗೊಳಿಸಲು ತಾನು ವಿಫಲವಾಗಿದ್ದೇನೆ ಎಂದು ಕೇಂದ್ರ ಸರಕಾರ ಸ್ವಯಂಘೋಷಿಸಿಕೊಂಡಿದೆಯೆ? ಅಥವಾ ಚುನಾವಣೆಯಲ್ಲಿ ಕಾಶ್ಮೀರದ ಜನತೆ ಬಿಜೆಪಿಯನ್ನು ಸೋಲಿಸಿದ್ದೇ ಆದರೆ ಅದು ಪರೋಕ್ಷವಾಗಿ ಕೇಂದ್ರ ಸರಕಾರ ತೆಗೆದುಕೊಂಡ ನಿರ್ಧಾರದ ವಿರುದ್ಧ ಚಲಾಯಿಸಿದ ಮತಗಳಾಗುತ್ತವೆ ಎನ್ನುವ ಆತಂಕ ಸರಕಾರಕ್ಕಿದೆಯೆ? 370ನೇ ವಿಧಿಯನ್ನು ರದ್ದುಗೊಳಿಸಿ ಪ್ರಜಾತಂತ್ರವನ್ನು ಅಮಾನತಿನಲ್ಲಿಟ್ಟಾಗ ಜಮ್ಮು-ಕಾಶ್ಮೀರ ದಂಗೆಯೇಳಬಹುದು ಎಂದು ಕೇಂದ್ರ ಸರಕಾರ ಭಾವಿಸಿತ್ತು. ಅಪಾರ ಸಾವು ನೋವುಗಳು ಸಂಭವಿಸುವ ಸಾಧ್ಯತೆಗಳನ್ನು ಊಹಿಸಿತ್ತು. ಆದರೆ ಜಮ್ಮು- ಕಾಶ್ಮೀರ ಗರಿಷ್ಠ ಸಹನೆಯನ್ನು ಪಾಲಿಸಿದೆ. ಭಾರತ ಸರಕಾರ ಮತ್ತು ನ್ಯಾಯವ್ಯವಸ್ಥೆಯಲ್ಲಿ ಅಲ್ಲಿನ ಜನರು ನಂಬಿಕೆಯಿಟ್ಟಿದ್ದಾರೆ. ಆ ನಂಬಿಕೆಯನ್ನು ಉಳಿಸಿಕೊಳ್ಳುವ ಸಮಯ ಇದೀಗ ಬಂದಿದೆ. ಈಗಾಗಲೇ ವಿವಿಧ ರಾಜಕೀಯ ಪಕ್ಷಗಳ ನಾಯಕರು ಕೇಂದ್ರ ಸರಕಾರದ ವಿರುದ್ಧ ಬಂಡೆದಿದ್ದಾರೆ. ಮೊದಲ ಬಾರಿಗೆ ಚುನಾವಣೆಗಾಗಿ ಬೃಹತ್ ಪ್ರತಿಭಟನೆಗಳು ನಡೆದಿವೆ. ಇಂತಹ ಪ್ರತಿಭಟನೆಗಳು ವ್ಯಾಪಕವಾಗುತ್ತಾ ಹೋದ ಹಾಗೆಯೇ ಜಮ್ಮು -ಕಾಶ್ಮೀರದ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆಗಳಿವೆ. ಪ್ರಜಾತಂತ್ರವನ್ನು ಮರುಸ್ಥಾಪಿಸುವ ಮೂಲಕ ಜಮು-್ಮಕಾಶ್ಮೀರಕ್ಕಾದ ಅನ್ಯಾಯವನ್ನು ಕೂಡಲೇ ಸರಿಪಡಿಸಬೇಕು. ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಸಲು ಹಿಂಜರಿಯುವುದು ಎಂದರೆ, ಸರಕಾರ ಅಲ್ಲಿ ಶಾಂತಿ ಸ್ಥಾಪನೆಯಲ್ಲಿ ವಿಫಲವಾಗಿರುವುದನ್ನು ಒಪ್ಪಿಕೊಂಡಂತೆ ಎನ್ನುವುದನ್ನು ಪ್ರಧಾನಿ ಮೋದಿ ಮರೆಯಬಾರದು.