ಗದ್ದರ್: ವ್ಯವಸ್ಥೆ ಕೊಂದು ಹಾಕಿದ ಹಾಡು ಹಕ್ಕಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕಾಡಿನಲ್ಲಿ ಕಳೆದು ಹೋಗಬಹುದಾಗಿದ್ದ ಜನಾಕ್ರೋಶಗಳನ್ನು ತನ್ನ ಹಾಡಿನ ಬೆಳಕಿನಲ್ಲಿ ನಾಡಿನ ಕಡೆಗೆ ಮುನ್ನಡೆಸಿದ ಹೆಮ್ಮೆ ಗದ್ದರ್ ಅವರದು. ಆಂಧ್ರದಲ್ಲಿ ಭೂಮಾಲಕರು ಮತ್ತು ಸರಕಾರದ ದೌರ್ಜನ್ಯಗಳ ವಿರುದ್ಧ ಒಂದು ದೊಡ್ಡ ಗುಂಪು ಪ್ರಜಾಸತ್ತಾತ್ಮಕವಾದ, ಅಹಿಂಸಾ ಮಾರ್ಗಕ್ಕೆ ವಿಮುಖವಾಗಿ ಉಗ್ರವಾದದ ಕಡೆಗೆ ಹೆಜ್ಜೆ ಹಾಕಿದ್ದು ಸರಕಾರಕ್ಕೆ ಒಂದು ರೀತಿಯಲ್ಲಿ ಆ ಜನಚಳವಳಿಯನ್ನು ಬಗ್ಗು ಬಡಿಯಲು ಅನುಕೂಲವೇ ಆಯಿತು. ಕ್ರಾಂತಿಕಾರಿಗಳು ಕಾಡಿನಲ್ಲಿ ಕುಳಿತು ಆಯುಧಗಳನ್ನು ಸಂಗ್ರಹಿಸಿ ಪ್ರತಿ ಹಿಂಸೆಯ ಮೂಲಕ ಪ್ರತಿಭಟಿಸಿದಾಗ ಪೊಲೀಸರು ಅದೇ ಹಿಂಸೆಯನ್ನು ನೆಪ ಮಾಡಿಕೊಂಡು ಹೋರಾಟವನ್ನು ದಮನಿಸಿದರು. ನಕ್ಸಲ್ ಪ್ರಭಾವಕ್ಕೆ ಯುವಕರು ಒಳಗಾದಂತೆಯೇ ಸರಕಾರ ಜಾಗೃತವಾದುದು ಹೌದು. ಅರಣ್ಯ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬದುಕುತ್ತಿರುವ ರೈತರ ಬಗ್ಗೆ ಅನಿವಾರ್ಯ ವಾಗಿ ಹೊರಳಿ ನೋಡುವಂತಹ ಸನ್ನಿವೇಶವನ್ನು ನಕ್ಸಲರು ಸೃಷ್ಟಿ ಮಾಡಿದರು ಎನ್ನುವುದರಲ್ಲಿ ಎರಡು ಮಾತಿಲ್ಲ.
ಕರ್ನಾಟಕದಲ್ಲಿ ನಕ್ಸಲ್ ಚಳವಳಿಯ ದುರಂತ ನಮ್ಮ ಮುಂದೆ ಹಸಿಯಾಗಿಯೇ ಇದೆ. ಆದಿವಾಸಿಗಳ ಮೇಲಿನ ದೌರ್ಜನ್ಯ, ಒಕ್ಕಲೆಬ್ಬಿಸುವಿಕೆಯನ್ನು ಪ್ರತಿಭಟಿಸುತ್ತಾ ಯುವಕರು ಹಿಂಸೆಯ ಹಾದಿ ಹಿಡಿದರು. ಯುವಕರು ಹಿಂಸೆಯ ಹಾದಿ ಹಿಡಿಯುತ್ತಿದ್ದಾರೆ ಎನ್ನುವ ಕಾರಣಕ್ಕಾಗಿಯೇ ಕೆಲವು ಪ್ರದೇಶಗಳು ‘ನಕ್ಸಲ್ ಪೀಡಿತ’ ಪ್ರದೇಶಗಳಾಗಿ ಘೋಷಣೆಯಾದವು. ಪೊಲೀಸರ ಎನ್‌ಕೌಂಟರ್‌ಗಳಿಗೆ ಯುವಕರ ಹೆಣ ಒಂದರ ಅನಂತರ ಒಂದು ಬೀಳುತ್ತಾ ಹೋದ ಹಾಗೆಯೇ ಹೊರನಾಡಿಗೆ ಆ ಜಾಗದ ಪರಿಚಯವಾಗ ತೊಡಗಿತು. ಇವರು ತಮ್ಮ ಪ್ರಾಣವನ್ನು ಕೊಡದೇ ಹೋಗಿದ್ದರೆ ಈ ಊರಿನಲ್ಲಿ ಶತಮಾನಗಳಿಂದ ಬದುಕುತ್ತಿರುವ ಜನರ ನೋವು, ಸಂಕಟ ಹೊರಜಗತ್ತಿಗೆ ಗೊತ್ತಾಗುತ್ತಿರಲಿಲ್ಲ ಎನ್ನುವುದು ಸತ್ಯ. ಇದೇ ಸಂದರ್ಭದಲ್ಲಿ ಪುನರ್ವಸತಿ ಮಾಡುವ ಸಂದರ್ಭದಲ್ಲಿ ಪರಿಹಾರ ಹೆಚ್ಚಿಸುವುದಕ್ಕೆ, ಕಾಡಿನ ಮಕ್ಕಳ ಜೊತೆಗೆ ಪೊಲೀಸರು, ಅರಣ್ಯ ಇಲಾಖೆ ಸೌಜನ್ಯದಿಂದ ವರ್ತಿಸುವುದಕ್ಕೆ ಹೆಚ್ಚುತ್ತಿರುವ ನಕ್ಸಲೀಯ ಚಳವಳಿಯೂ ಒಂದು ಕಾರಣವಾಗಿತ್ತು. ಒಂದೆಡೆ ಸರಕಾರ ನಕ್ಸಲ್ ವಿರುದ್ಧ ಕೂಂಬಿಂಗ್ ನಡೆಸುತ್ತಲೇ ಇನ್ನೊಂದೆಡೆಯಿಂದ ಆದಿವಾಸಿಗಳನ್ನು ತಮ್ಮವರನ್ನಾಗಿಸುವ ಪ್ರಯತ್ನದಲ್ಲಿ ತೊಡಗಿತು. ಈ ಯುವಕರೆಲ್ಲ ಒಂದಾಗಿ ಪ್ರಜಾಸತ್ತಾತ್ಮಕ ಚಳವಳಿಯ ಹಾದಿಯನ್ನು ಹಿಡಿದಿದ್ದರೆ ಸರಕಾರ ಆದಿವಾಸಿಗಳ ಸಮಸ್ಯೆಗಳಿಗೆ ಇಷ್ಟು ಶೀಘ್ರವಾಗಿ ಸ್ಪಂದಿಸುತ್ತಿತ್ತೆ? ಎನ್ನುವ ಪ್ರಶ್ನೆಯನ್ನು ಹಲವರು ಈ ಸಂದರ್ಭದಲ್ಲಿ ಕೇಳಿದ್ದರು. ಆದರೆ ಹಿಂಸಾತ್ಮಕ ಹಾದಿ ಹಿಡಿದ ಚಳವಳಿಯನ್ನು ಬಗ್ಗು ಬಡಿಯಲು ಸರಕಾರಕ್ಕೆ ಸುಲಭವಾಯಿತು. ದೀಪಕ್ಕೆ ಸಿಕ್ಕಿದ ಹಾತೆಗಳಂತೆ ಯುವಕರು ಪೊಲೀಸರ ಬಂದೂಕಿಗೆ ಸಿಲುಕಿ ಸುಟ್ಟು ಹೋದರು.
ಆಂಧ್ರದಲ್ಲಿ ನಕ್ಸಲ್‌ವಾದಿ ಜನಕ್ರಾಂತಿಯನ್ನು ಬದಿಗಿಟ್ಟು ಅಲ್ಲಿಯ ಸಾಮಾಜಿಕ ಸ್ಥಿತಿಗತಿಯನ್ನು ಚರ್ಚಿಸುವಂತಿಲ್ಲ. ೭೦ರಿಂದ ೯೦ರ ದಶಕದವರೆಗೆ ಅಲ್ಲಿನ ನಕ್ಸಲ್ ಚಳವಳಿ ಪಡೆದ ಬೇರೆ ರೂಪಗಳು ಅಲ್ಲಿನ ಭೂಮಾಲಕ ವ್ಯವಸ್ಥೆಯನ್ನು ನಡುಗಿಸಿತ್ತು. ಚಾರುಮುಜುಂದಾರ್ ಅವರ ಸಶಸ್ತ್ರ ಯುದ್ಧಕ್ಕೆ ಭಿನ್ನವಾದ, ಕ್ರಾಂತಿಕಾರಿ ಸಮೂಹ ಸಂಘಟನೆಯನ್ನು ಕಟ್ಟುವ ಕೆಲಸವನ್ನು ತಳಸ್ತರದಿಂದ ಮಾಡಿದವರು ಕೊಂಡಪಳ್ಳಿ ಸೀತಾರಾಮಯ್ಯ ಅವರು. ಕಾಡಲ್ಲಿ ಕುಳಿತು ನಡೆಸುವ ಶಸ್ತ್ರಾಸ್ತ್ರ ಹೋರಾಟಕ್ಕಿಂತ ಭಿನ್ನವಾಗಿ ರೈತರನ್ನು, ಕೂಲಿಕಾರ್ಮಿಕರನ್ನು ಸಂಘಟಿಸುವ ಪ್ರಯತ್ನವನ್ನು ೭೦ರ ದಶಕದಲ್ಲಿ ಸೀತಾರಾಮಯ್ಯ ಯಶಸ್ವಿಯಾಗಿ ನಡೆಸಿದರು. ಆಂಧ್ರಪ್ರದೇಶದ ವಿವಿಧ ಪಕ್ಷಗಳ ನಾಯಕರಿಗೂ ಈ ಹೋರಾಟಗಾರರ ಜೊತೆಗೆ ಮೃದು ನಿಲುವನ್ನು ತಳೆಯುವುದು ಅನಿವಾರ್ಯವಾಯಿತು. ಆದರೆ ಎನ್.ಟಿ.ರಾಮರಾವ್ ಕಾಲದಲ್ಲಿ ಹೋರಾಟಗಾರರ ವಿರುದ್ಧ ನಡೆದ ಭೀಕರ ಕಾರ್ಯಾಚರಣೆ ಹಲವು ನಾಯಕರಿಗೆ ಭೂಗತರಾಗುವುದನ್ನು ಅನಿವಾರ್ಯವಾಗಿಸಿತು. ಕ್ರಾಂತಿಕಾರಿ ವಿಚಾರಧಾರೆಗಳನ್ನು ತಮ್ಮ ಹಾಡುಗಳ ಮೂಲಕವೇ ಹಳ್ಳಿ ಹಳ್ಳಿಗೆ ತಲುಪಿಸಿದ ಗದ್ದರ್ ಅವರು ಭೂಗತರಾದುದು ಇದೇ ಸಂದರ್ಭದಲ್ಲಿ. ಆದರೆ ೧೯೯೦ರಲ್ಲಿ ಮತ್ತೆ ನಾಡಿಗೆ ಗದ್ದರ್ ಕಾಲಿಟ್ಟಾಗ ಅವರನ್ನು ಸ್ವಾಗತಿಸಲು ನೆರೆದ ಲಕ್ಷಾಂತರ ರೈತರು, ದಲಿತರ ಸಂಖ್ಯೆಯೇ ಅವರ ಹಾಡಿನ ಶಕ್ತಿಯನ್ನು ನಾಡನ್ನು ಆಳುವವರಿಗೆ ಸಾಬೀತು ಪಡಿಸಿತು. ಕೋವಿ ಹಿಡಿದ ನಕ್ಸಲ್ ಮುಖಂಡರನ್ನು ದಮನಿಸಲು ಯಶಸ್ವಿಯಾದ ವ್ಯವಸ್ಥೆಗೆ ಗದ್ದರ್ ಹಾಡನ್ನು ದಮನಿಸುವುದು ಕಷ್ಟವಾಯಿತು. ಇಂತಹ ಸಂದರ್ಭದಲ್ಲೇ ೧೯೯೭ರಲ್ಲಿ ಅವರ ನಿವಾಸದಲ್ಲಿ ಅಪರಿಚಿತರು ಅವರ ಮೇಲೆ ಗುಂಡಿನ ದಾಳಿ ನಡೆಸಿದರು. ಪೊಲೀಸರೇ ಮಫ್ತಿಯಲ್ಲಿ ಈ ದಾಳಿ ನಡೆಸಿದರು ಎನ್ನುವ ಆರೋಪವೂ ಇದೆ. ಅವರ ಎದೆಯನ್ನು ಹೊಕ್ಕಿದ್ದ ಗುಂಡುಗಳಲ್ಲಿ ಒಂದು ಮಾತ್ರ ಅಲ್ಲೇ ಉಳಿಯಿತು. ಆ ಗುಂಡಿನ ಜೊತೆಗೇ ಅವರು ಉಳಿದ ಬದುಕನ್ನು ಬದುಕಿದರು.
ತನ್ನ ಬದುಕಿನುದ್ದಕ್ಕೂ ಗದ್ದರ್ ನಕ್ಸಲರಿಗಿಂತ ಹೆಚ್ಚು ತಲೆನೋವಾದರು. ಅವರು ಜನರ ನಡುವೆಯೇ ಓಡಾಡುತ್ತಿದ್ದರು. ಕೈಯಲ್ಲಿ ಕೋವಿಯ ಬದಲು ತಂಬೂರಿಯಿತ್ತು. ಜನನಾಟ್ಯ ಮಂಡಳಿಯನ್ನು ಸ್ಥಾಪಿಸಿ ಆ ಮೂಲಕ ಜನರನ್ನು ತಲುಪಿದ ಗದ್ದರ್, ಸಿನೆಮಾಗಳನ್ನು ಕೂಡ ತನ್ನ ಮಾಧ್ಯಮವಾಗಿಸಿಕೊಂಡಿದ್ದರು. ರೈತರ ಹಕ್ಕುಗಳನ್ನು ಜಾನಪದ ಹಾಡುಗಳ ರೂಪದಲ್ಲಿ ಹಾಡುತ್ತಾ ಜನರ ನಡುವೆ ಓಡಾಡಿದರು. ಕ್ರಾಂತಿ ಮಾತುಗಳು ತಲುಪದ ಜಾಗಕ್ಕೆ ಅವರ ಹಾಡುಗಳು ತಲುಪಿದವು. ಕೋವಿಗೆ ಕೋವಿಯಿಂದ ಉತ್ತರಿಸುತ್ತೇವೆ ಎಂದು ಹೇಳಿ ತನ್ನ ಹಿಂಸಾಚಾರವನ್ನು ಸರಕಾರ ಸಮರ್ಥಿಸಿಕೊಳ್ಳಬಹುದು. ಆದರೆ ಗದ್ದರ್ ಹಾಡಿನ ವಿರುದ್ಧ ಕೋವಿಯನ್ನು ಬಳಸುವುದಾದರೂ ಹೇಗೆ? ಇಷ್ಟಕ್ಕೂ ಗದ್ದರ್ ಹೋದಲ್ಲಿ, ಬಂದಲ್ಲಿ ಸೇರಿದ ಲಕ್ಷಾಂತರ ಜನರು ಅವರಿಗಿರುವ ಜನಬೆಂಬಲವನ್ನು ಹೇಳುತ್ತಿತ್ತು. ಈ ಜನಬೆಂಬಲವನ್ನು ವಿರೋಧಿಸುವುದು ಸರಕಾರಕ್ಕೆ ಕಷ್ಟವಾಯಿತು. ೧೯೯೦ರಲ್ಲಿ ಕರ್ನಾಟಕಾದ್ಯಂತ ಗದ್ದರ್ ಓಡಾಡಿದರು. ಕರ್ನಾಟಕದಲ್ಲೂ ಅವರು ಭಾರೀ ಜನಬೆಂಬಲವನ್ನು ಪಡೆದಿದ್ದರು. ೯೦ರ ದಶಕದಲ್ಲಿ ನಿಧಾನಕ್ಕೆ ಆಂಧ್ರದ ಕ್ರಾಂತಿಕಾರಿ ಹೋರಾಟಗಳು ಹಿನ್ನಡೆ ಅನುಭವಿಸಿದವು. ಚಳವಳಿಗಳು ಒಡೆದವು. ನಾಯಕರು ಪರಸ್ಪರ ಎದುರಾಳಿಗಳಾದರು. ಇಂತಹ ಸಂದರ್ಭದಲ್ಲೇ ಹಲವು ನಾಯಕರು ಶರಣಾಗತರಾದರು. ಕೊಂಡಪಳ್ಳಿ ಸೀತಾರಾಮಯ್ಯರೂ ಶರಣಾಗತರಾಗುವುದು ಅನಿವಾರ್ಯವಾಯಿತು. ಅದಾಗಲೇ ವೃದ್ಧಾಪ್ಯ, ಕಾಯಿಲೆಗಳಿಂದ ಅವರು ನರಳುತ್ತಿದ್ದರು. ಎರಡೇ ವರ್ಷಗಳಲ್ಲಿ ಅವರು ತೀರಿಕೊಂಡರು.
ಗದ್ದರ್‌ರನ್ನು ಬಲಿ ಹಾಕಲು ವ್ಯವಸ್ಥೆ ಬೇರೆಯೇ ದಾರಿಯೊಂದನ್ನು ಕಂಡುಕೊಂಡಿತು ಎನ್ನುವುದು ಇನ್ನೊಂದು ವಿಷಾದನೀಯ ಸಂಗತಿ. ಯಾವ ಅಸಮಾನತೆಯ ವಿರುದ್ಧ ತನ್ನ ಬದುಕಿನುದ್ದಕ್ಕೂ ಧ್ವನಿಯೆತ್ತಿ ಹಾಡಿದರೋ ಅದೇ ಅಸಮಾನತೆ ಅವರನ್ನು ಜೀವನದ ಕಟ್ಟ ಕಡೆಯ ದಿನಗಳಲ್ಲಿ ‘ಖರೀದಿ’ ಮಾಡಿತು. ವೈದಿಕ ಕ್ಷೇತ್ರವೊಂದರಲ್ಲಿ ಜಾತಿ, ವರ್ಗ ಅಸಮಾನತೆಯನ್ನು ಪ್ರತಿಪಾದಿಸುವ ಪುರೋಹಿತರಿಗೆ ಸಾರ್ವಜನಿಕವಾಗಿ ಅಡ್ಡ ಬಿದ್ದರು. ‘ನಾನೂ ದೇವರನ್ನು ನಂಬುತ್ತೇನೆ’ ಎಂದು ಘೋಷಿಸಿಕೊಂಡರು. ದೇವರನ್ನು ನಂಬುವುದಕ್ಕೂ, ಅಸಮಾನತೆಯ ಸಿದ್ಧಾಂತಗಳಿಗೆ ತಲೆಬಾಗುವುದಕ್ಕೂ ವ್ಯತ್ಯಾಸವಿದೆ ಎನ್ನುವುದನ್ನು ಅರಿಯದಷ್ಟು ಮುಗ್ಧರು ಗದ್ದರ್ ಖಂಡಿತ ಅಲ್ಲ. ದೇವರ ನಂಬಿಕೆಯ ಮೂಲಕವೇ ಸಮಾನತೆಯ ಹಾದಿಯನ್ನು ಕಂಡುಕೊಳ್ಳುವ ಪ್ರಯತ್ನ ನಡೆಸಿದ ಹಲವು ಕ್ರಾಂತಿಕಾರಿಗಳು ವಿಶ್ವದಲ್ಲಿ ಆಗಿ ಹೋಗಿದ್ದಾರೆ. ಬಸವಣ್ಣ, ನಾರಾಯಣ ಗುರು, ಜೀಸಸ್, ಪ್ರವಾದಿ ಪೈಗಂಬರ್ ಇವರೆಲ್ಲರೂ ದೇವರ ನಂಬಿಕೆಯ ಮೂಲಕವೇ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಿದರು. ಬಡವರ ಪರವಾಗಿ ಮಾತನಾಡಿದರು. ಬಡ್ಡಿ, ಮದ್ಯ, ಅಸ್ಪಶ್ಯತೆ ಮೊದಲಾದವುಗಳ ವಿರುದ್ಧ ಹೋರಾಡಿದರು. ಗಾಂಧೀಜಿ ತನ್ನನ್ನು ತಾನು ಒಬ್ಬ ಹಿಂದೂ ಎಂದು ಘೋಷಿಸಿಕೊಂಡವರು. ಆದರೆ ಎಂದಿಗೂ ಯಾವುದೇ ದೇವಸ್ಥಾನಗಳಲ್ಲಿ ಪುರೋಹಿತರಿಗೆ ಅಡ್ಡ ಬಿದ್ದ ಉದಾಹರಣೆಗಳಿಲ್ಲ. ಗದ್ದರ್ ಶರಣಾಗಿದ್ದು ದೇವರಿಗಲ್ಲ, ಪುರೋಹಿತ ವ್ಯವಸ್ಥೆಗೆ ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಕಷ್ಟವಿರಲಿಲ್ಲ. ರೈತರ ನೋವು ದುಮ್ಮಾನಗಳನ್ನು ಹಳ್ಳಿ ಹಳ್ಳಿಗಳಿಗೆ ಹರಡಿದ ಗದ್ದರ್ ಬದುಕಿನ ಕೊನೆಯಲ್ಲಿ ರಾಮಾನುಜರ ತತ್ವಗಳನ್ನು ಹಾಡುಗಳಲ್ಲಿ ಹಾಡಿದರು. ಒಂದು ಕಾಲದಲ್ಲಿ ಅವರ ಹಾಡುಗಳಿಗೆ ಮರುಳಾಗಿ ಕ್ರಾಂತಿಯ ಕೊಳ್ಳಿ ಹಿಡಿದು ಸುಟ್ಟು ಹೋದ ನೂರಾರು ಯುವಕರ ಆತ್ಮಗಳು ಆ ಹೊತ್ತಿಗೆ ನರಳಿದ್ದು ಸುಳ್ಳಲ್ಲ. ಆಂಧ್ರದಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಯುವಕರನ್ನು ‘ಹುತಾತ್ಮರೆಂದು ಬಣ್ಣಿಸಿ’ ಹಾಡಿದ ಗದ್ದರ್ ಅವರನ್ನು ವ್ಯವಸ್ಥೆ ತಂತ್ರಗಾರಿಕೆಯಿಂದ ಅತ್ಯಂತ ಭೀಕರವಾಗಿ ಕೊಂದು ಹಾಕಿತು. ಅವರ ಈ ಸಾವನ್ನು ಏನೆಂದು ಕರೆಯಬೇಕು ಎನ್ನುವ ಗೊಂದಲದಲ್ಲಿದೆ ಅವರು ಉಳಿಸಿ ಹೋದ ಅಳಿದುಳಿದ ಪೀಳಿಗೆ.