ಉತ್ತರ ಪ್ರದೇಶದಲ್ಲಿ ಹಿಟ್ಲರ್ ಆದೇಶ

Update: 2024-07-20 05:13 GMT

Photo: X.com

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸರಕಾರದಿಂದ ತಾವೇನು ನಿರೀಕ್ಷಿಸುತ್ತಿದ್ದೇವೆ ಎನ್ನುವುದನ್ನು ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಜನರು ದೇಶಕ್ಕೆ ಕೇಳಿಸುವಂತೆ ಸ್ಪಷ್ಟವಾಗಿ ಹೇಳಿದ್ದರು. ಅಭಿವೃದ್ಧಿಯನ್ನು ಕಡೆಗಣಿಸಿ ಬುಲ್ಡೋಜರ್ ಮೂಲಕ ಜನರ ಮನ-ಮನೆಗಳನ್ನು ಧ್ವಂಸಗೊಳಿಸುವ ಆದಿತ್ಯನಾಥ್ ರಾಜಕಾರಣಕ್ಕೆ ಮರ್ಮಾಘಾತವನ್ನು ನೀಡಿತ್ತು ಚುನಾವಣೆಯ ಫಲಿತಾಂಶ. ಆದರೆ ಇದರಿಂದ ಆದಿತ್ಯನಾಥ್ ಪಾಠ ಕಲಿತಂತಿಲ್ಲ. ಅಥವಾ ಅವರಿಗೆ ದ್ವೇಷ ಮತ್ತು ಧ್ವಂಸ ಗೊಳಿಸುವ ರಾಜಕಾರಣಕ್ಕೆ ಹೊರತಾದ ಇನ್ನೊಂದು ರಾಜಕೀಯದ ಪರಿಚಯವೇ ಇದ್ದಂತಿಲ್ಲ. ಇದೇ ಸಂದರ್ಭದಲ್ಲಿ ರಾಮಮಂದಿರ ಸೋರುವ ಮೂಲಕ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ರಾಮಪಥ ಒಂದೆರಡು ಮಳೆಗೆ ಹೊಂಡಗಳಿಂದಾವೃತವಾಗಿದೆ. ಆದಿತ್ಯನಾಥ್‌ನ ನಕಲಿ ರಾಮರಾಜ್ಯದ ಬಣ್ಣ ಬಯಲಾಗಿದೆ. ಜನರ ಮೇಲೆ ಪ್ರಯೋಗಿಸಿದ ಬುಲ್ಡೋಜರ್ ಇದೀಗ ತನ್ನ ಕುರ್ಚಿಯನ್ನೇ ಬುಡಮೇಲು ಗೊಳಿಸಲು ಯತ್ನಿಸುತ್ತಿರುವುದು ಅವರ ಗಮನಕ್ಕೆ ಬಂದಿದೆ. ಈಗಾಗಲೇ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ನಡುವೆ ತಿಕ್ಕಾಟಗಳು ಆರಂಭವಾಗಿವೆೆ. ದಿಲ್ಲಿ ವರಿಷ್ಠರು ಆದಿತ್ಯ ನಾಥ್‌ಗೆ ಪರ್ಯಾಯವಾಗಿ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ‌್ಯರನ್ನು ಮುಂದಿಡುವ ಪ್ರಯತ್ನ ನಡೆಸುತ್ತಿದ್ದಾರೆ. ತನ್ನ ಕುರ್ಚಿಯನ್ನು ಉಳಿಸಿಕೊಳ್ಳುವ ಭಾಗವಾಗಿ ಆದಿತ್ಯನಾಥ್‌ರಿಗೆ ಮತ್ತೆ ರಾಜ್ಯವನ್ನು ಧರ್ಮದ ಹೆಸರಿನಲ್ಲಿ ವಿಭಜಿಸುವುದಕ್ಕೆ ಹೊರತಾದ ಇನ್ನಾವ ದಾರಿಯೂ ಕಾಣುತ್ತಿಲ್ಲ. ಪರಿಣಾಮವಾಗಿ ಕನ್ವರ್ ಯಾತ್ರೆಯನ್ನು ತನ್ನ ಕ್ಷುದ್ರ ರಾಜಕಾರಣಕ್ಕೆ ಬಳಸಲು ಮುಂದಾಗಿದ್ದಾರೆ.

ಕನ್ವರ್ ಯಾತ್ರೆ ಸಾಗುವ 250 ಕಿ. ಮೀ. ಸುದೀರ್ಘವಾದ ದಾರಿಯಲ್ಲಿ ಉದ್ದಕ್ಕೂ ಇರುವ ಎಲ್ಲ ಹೊಟೇಲ್‌ಗಳು, ಆಹಾರ ಮಾರಾಟದ ಅಂಗಡಿಗಳು ತಮ್ಮ ಮಾಲಕರು ಮತ್ತು ಸಿಬ್ಬಂದಿಯ ಹೆಸರಿನ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕು ಎನ್ನುವ ಹೊಸ ಆದೇಶವನ್ನು ಮುಝಪ್ಪರ್ ನಗರ ಪೊಲೀಸರು ಬುಧವಾರ ನೀಡಿದ್ದಾರೆ. ‘‘ಯಾತ್ರಾರ್ಥಿಗಳು ರಸ್ತೆ ಬದಿಯ ತಿಂಡಿ, ಅಂಗಡಿಗಳಿಂದ ಆಹಾರ ಖರೀದಿಸುತ್ತಾರೆ. ಅವರು ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎನ್ನುವ ದೃಷ್ಟಿಯಿಂದ ಈ ಆದೇಶವನ್ನು ಹೊರಡಿಸಲಾಗಿದೆ. ಮುಂದೆ ಯಾವುದೇ ಆರೋಪ, ಪ್ರತ್ಯಾರೋಪಗಳು ಬಾರದಂತೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರದಂತೆ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ’’ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈವರೆಗೆ ಯಾರು ಎಲ್ಲಿ ವ್ಯಾಪಾರ ಮಾಡಬೇಕು ಎನ್ನುವುದು ದೇವಳದ ಪರಿಸರಕ್ಕಷ್ಟೇ ಸೀಮಿತವಾಗಿರುತ್ತಿತ್ತು. ದೇವಸ್ಥಾನದ ಆವರಣದಲ್ಲಿ, ಜಾತ್ರೆಯ ಸಂದರ್ಭದಲ್ಲಿ ನಿರ್ದಿಷ್ಟ ಸಮುದಾಯದ ಜನರು ವ್ಯಾಪಾರ ಮಾಡಬಾರದು, ಅಂಗಡಿಗಳನ್ನು ಇಡಬಾರದು ಎನ್ನುವ ದಾಂಧಲೆಗಳನ್ನು ಸಂಘಪರಿವಾರದ ಕಾರ್ಯಕರ್ತರು ಕರ್ನಾಟಕದಲ್ಲೂ ಮಾಡಿದ್ದಾರೆ. ಅವರ ಉದ್ದೇಶ, ದೇವಸ್ಥಾನ, ದರ್ಗಾ, ಮಸೀದಿ ಮೊದಲಾದ ಪ್ರದೇಶಗಳಲ್ಲಿ ಇರುವ ಹಿಂದೂ-ಮುಸ್ಲಿಮರ ನಡುವಿನ ಕೊಡು-ಕೊಳ್ಳುವಿಕೆಯನ್ನು, ಸೌಹಾರ್ದವನ್ನು ಇಲ್ಲವಾಗಿಸುವುದು. ತಲೆತಲಾಂತರಗಳಿಂದ ಈ ವ್ಯಾಪಾರ, ಕೊಡುಕೊಳ್ಳುವಿಕೆಗಳು ಎರಡೂ ಧರ್ಮಗಳ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುತ್ತಾ ಬಂದಿದೆ. ಈ ಸಂಬಂಧದಲ್ಲಿ ಬಿರುಕುಮೂಡಿಸುವುದಕ್ಕಾಗಿಯೇ ಜಾತ್ರೆಯಲ್ಲಿ ನಿರ್ದಿಷ್ಟ ಸಮುದಾಯದ ಜನರು ಅಂಗಡಿಗಳನ್ನು ಇಡಬಾರದು ಎಂದು ಸಂಘಪರಿವಾರ ಒತ್ತಾಯಿಸುತ್ತಾ ಬಂದಿದೆ. ಇದನ್ನು ಜನಸಾಮಾನ್ಯರೂ ಅರ್ಥ ಮಾಡಿಕೊಂಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಇದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಪೊಲೀಸರ ಆದೇಶದಂತೆ ಸುಮಾರು 250 ಕಿ.ಮೀ. ರಸ್ತೆ ಉದ್ದಕ್ಕೆ ಹೊಟೇಲು, ಅಂಗಡಿಗಳನ್ನು ಇಟ್ಟವರು ತಮ್ಮ ಹೊಟೇಲ್ ಮಾಲಕರು ಮತ್ತು ಸಿಬ್ಬಂದಿಯ ಹೆಸರನ್ನು ಪ್ರದರ್ಶಿಸಬೇಕು. ರಸ್ತೆಯಲ್ಲಿ ಸಾಗುವವರೆಲ್ಲರೂ ತಮ್ಮ ತಮ್ಮ ಹೆಸರುಗಳನ್ನು ಬಹಿರಂಗಪಡಿಸಬೇಕು ಎನ್ನುವ ಆದೇಶವನ್ನು ಸರಕಾರ ಪುಣ್ಯಕ್ಕೆ ಇನ್ನೂ ಹೊರಡಿಸಿಲ್ಲ. ಈ ಆದೇಶದ ಮೂಲಕ ಕಾನೂನುಸುವ್ಯವಸ್ಥೆ ಕಾಪಾಡುವುದು ಪೊಲೀಸರ ಉದ್ದೇಶವಲ್ಲ. ಬದಲಿಗೆ ನಿರ್ದಿಷ್ಟ ಸಮುದಾಯದ ವಿರುದ್ಧ ಜನರನ್ನು ಎತ್ತಿಕಟ್ಟುವುದು ಅವರ ಉದ್ದೇಶ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿ ಬಿಡುತ್ತದೆ. ಯಾತ್ರಿಕರ ವೇಷದಲ್ಲಿ ನಾಳೆ ದುಷ್ಕರ್ಮಿಗಳು ನಿರ್ದಿಷ್ಟ ಸಮುದಾಯದ ಅಂಗಡಿಗಳ ಮೇಲೆ ದಾಳಿ ಮಾಡುವುದಕ್ಕೆ ಪೊಲೀಸ್ ಇಲಾಖೆಯೇ ಈ ಮೂಲಕ ಅನುಕೂಲ ಮಾಡಿಕೊಡುತ್ತಿದೆ. ಇದರ ವಿರುದ್ಧ ವಿರೋಧ ಪಕ್ಷಗಳು ಮಾತ್ರವಲ್ಲ, ಸಮಾಜದ ಬೇರೆ ಬೇರೆ ವಲಯದ ಗಣ್ಯರಿಂದ ಹೇಳಿಕೆಗಳು ಹೊರ ಬಿದ್ದವು. ‘‘ಇದೊಂದು ಸಾಮಾಜಿಕ ಅಪರಾಧ. ನ್ಯಾಯಾಲಯ ಸ್ವಯಂ ಪ್ರೇರಿತವಾಗಿ ಇದರ ವಿರುದ್ಧ ಪ್ರಕರಣದಾಖಲಿಸಬೇಕು’’ ಎಂದು ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ. ‘‘ಹಿಟ್ಲರ್‌ನ ಕಾಲದಲ್ಲಿ ಜರ್ಮನಿಯಲ್ಲೂ ಅಂಗಡಿ ಮತ್ತು ಮನೆಗಳ ಮೇಲೆ ನಿರ್ದಿಷ್ಟ ಗುರುತುಗಳನ್ನು ಹಾಕುತ್ತಿದ್ದರು. ಇದೊಂದು ಆಘಾತಕಾರಿ ಆದೇಶ’’ ಎಂದು ಹಿರಿಯ ಲೇಖಕ, ಹಾಡು ರಚನೆಕಾರ ಜಾವೇದ್ ಅಖ್ತರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತೀವ್ರ ಟೀಕೆಗಳು ಬಂದ ಬಳಿಕ ಪೊಲೀಸರು ಈ ಆದೇಶದಲ್ಲಿ ಸಣ್ಣದೊಂದು ಮಾರ್ಪಾಡು ಮಾಡಿದರು. ಅಂದರೆ, ಅಂಗಡಿ ಮಾಲಕರು ತಮ್ಮ ಹೆಸರು ಪ್ರಕಟಿಸುವುದು ಐಚ್ಛಿಕ ಎಂದು ಹೇಳಿಕೆ ನೀಡಿದರು. ಆದರೆ ಮಧ್ಯ ಪ್ರವೇಶಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ಹೆಸರು ಪ್ರಕಟಿಸುವುದು ಕಡ್ಡಾಯ ಎಂದು ಮರು ಆದೇಶ ಹೊರಡಿಸಿದ್ದಾರೆ. ‘ಯಾತ್ರಾರ್ಥಿಗಳ ಪಾವಿತ್ರ್ಯತೆಯನ್ನು ಕಾಪಾಡುವುದೇ ಇದರ ಉದ್ದೇಶ’ ಎಂದು ತಮ್ಮ ಆದೇಶವನ್ನು ಸಮರ್ಥಿಸಿಕೊಂಡಿದ್ದಾರೆ.

ಸಾಧಾರಣವಾಗಿ ಆಹಾರದ ಮಳಿಗೆಗಳು ತಮ್ಮ ತಮ್ಮ ಆಹಾರದ ಗುಣಮಟ್ಟಗಳ ಪ್ರಮಾಣ ಪತ್ರವನ್ನು ಪ್ರಕಟಿಸಬೇಕು ಎಂದು ಒತ್ತಾಯಿಸುವುದು ಕ್ರಮ. ಕಳಪೆ ಆಹಾರದ ವಿರುದ್ಧ ಕ್ರಮ ತೆಗೆದುಕೊಂಡು ಯಾತ್ರಾರ್ಥಿಗಳ ಆರೋಗ್ಯವನ್ನು ಕಾಪಾಡುವುದು ಸರಕಾರದ ಕರ್ತವ್ಯ. ಆದರೆ ಇಲ್ಲಿ, ಅಂಗಡಿಗಳ ಮಾಲಕರ ಹೆಸರಿನ ಆಧಾರದಲ್ಲಿ ಆಹಾರದ ಗುಣಮಟ್ಟವನ್ನು ನಿರ್ಧರಿಸಲು ಮುಂದಾಗಿದೆ. ಸರಕಾರದ ಈ ಕ್ರಮವನ್ನು ವಿರೋಧ ಪಕ್ಷಗಳು ಮಾತ್ರವಲ್ಲ, ಸ್ವತಃ ಬಿಜೆಪಿಯೊಳಗಿರುವ ಕೆಲವು ನಾಯಕರೂ ಖಂಡಿಸಿದ್ದಾರೆ. ಮುಖ್ಯವಾಗಿ ಬಿಜೆಪಿ ಹಿರಿಯ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಇದು ಉತ್ತರ ಪ್ರದೇಶದಲ್ಲಿ ಜಾತಿ ಅಸ್ಪಶ್ಯತೆಗೂ ಕಾರಣವಾಗಬಹುದು ಎಂದು ಅವರು ಆತಂಕ ತೋಡಿಕೊಂಡಿದ್ದಾರೆ. ಹೆಸರುಗಳನ್ನು ಪ್ರಕಟಿಸುವುದರಿಂದ ಕೆಲವರ ಧರ್ಮಗಳು ಮಾತ್ರವಲ್ಲ, ಹಲವರ ಜಾತಿಗಳೂ ಈ ಮೂಲಕ ಬಹಿರಂಗವಾಗಲಿದೆ. ಯಾತ್ರಾರ್ಥಿಗಳು ಯಾವ ಜಾತಿಯ ಜನರ ಅಂಗಡಿಗಳಿಂದ ಆಹಾರವನ್ನು ಸೇವಿಸಬೇಕು ಎನ್ನುವುದನ್ನೂ ಪರೋಕ್ಷವಾಗಿ ನಿರ್ದೇಶಿಸಿದಂತಾಗಿದೆ. ಆಧ್ಯಾತ್ಮಿಕ ಯಾತ್ರೆಯೊಂದಕ್ಕೆ ಕೋಮು ಮತ್ತು ಜಾತಿ ವಿಷವನ್ನು ಹಿಂಡಲು ಮುಂದಾಗಿರುವ ಆದಿತ್ಯನಾಥ್ ಈ ಮೂಲಕ ಯಾತ್ರಾರ್ಥಿಗಳ ಧಾರ್ಮಿಕ ನಂಬಿಕೆ ಮೌಲ್ಯಗಳಿಗೆ ಧಕ್ಕೆಯುಂಟು ಮಾಡಿದ್ದಾರೆ.

ಮುಸ್ಲಿಮರು ಹಿಂದೂ ದೇವರ ಹೆಸರನ್ನು ತಮ್ಮ ಅಂಗಡಿಗಳಿಗೆ ಇಟ್ಟು ವ್ಯಾಪಾರ ಮಾಡುತ್ತಿದ್ದಾರೆ ಎನ್ನುವುದು ಮುಖ್ಯಮಂತ್ರಿ ಆದಿತ್ಯನಾಥ್‌ನ ಆಕ್ಷೇಪ. ಈ ದೇಶದಲ್ಲಿ ವಿದೇಶಗಳಿಗೆ ಸಾವಿರಾರು ಟನ್ ಮಾಂಸಗಳನ್ನು ರಫ್ತು ಮಾಡುವ ಬೃಹತ್ ಕಂಪೆನಿಗಳು ಮುಸ್ಲಿಮ್ ಹೆಸರುಗಳನ್ನು ಹೊಂದಿವೆ. ಆದರೆ, ಅದರ ಮಾಲಕರಲ್ಲಿ ಬಹುತೇಕರು ಮುಸ್ಲಿಮೇತರರು. ಜೈನ ಸಮುದಾಯಕ್ಕೆ ಸೇರಿದ ಉದ್ಯಮಿಗಳೂ ಈ ಸಂಸ್ಥೆಯ ಪಾಲುದಾರರಾಗಿದ್ದಾರೆ. ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವ ಬಡಪಾಯಿಗಳ ಅಂಗಡಿಗಳಿಗೆ ನೀಡಿರುವ ಆದೇಶ, ಉತ್ತರ ಪ್ರದೇಶದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಮಾಂಸ ಸಂಸ್ಕರಣಾ ಘಟಕಗಳಿಗೆ, ರಫ್ತು ಸಂಸ್ಥೆಗಳಿಗೂ ಅನ್ವಯವಾಗಲಿ. ವಿದೇಶಗಳಿಗೆ ಮಾಂಸದ ಉತ್ಪನ್ನಗಳು ಮಾರಾಟಮಾಡುವ ಸಂಸ್ಥೆಗಳ ಒಳಗಿರುವ ಮಾಲಕರು, ಪಾಲುದಾರರು, ಸಿಬ್ಬಂದಿಯ ಹೆಸರೂ ಸಾರ್ವಜನಿಕವಾಗಿ ಬಹಿರಂಗ ಪಡಿಸಲಿ. ಮುಖ್ಯಮಂತ್ರಿ ಆದಿತ್ಯನಾಥ್ ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಜೊತೆಗೆ ಮಾತುಕತೆ ನಡೆಸಬೇಕು. ಆಹಾರದ ವಿಷಯದಲ್ಲಿ ಬಡ ವ್ಯಾಪಾರಿಗಳಿಗೊಂದು ನಿಯಮ, ಶ್ರೀಮಂತ ವ್ಯಾಪಾರಿಗಳಿಗೊಂದು ನಿಯಮ ಎಷ್ಟು ಸರಿ?

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News