ಪ್ರಧಾನಿಯ ಹೆಸರೇ ಕೊಲೆಗಾರರಿಗೆ ಸ್ಫೂರ್ತಿಯಾದರೆ?

Update: 2023-08-03 04:24 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಒಂದು ಊರು ಹೊತ್ತಿ ಉರಿಯುತ್ತಿದೆ. ಜನರು ಊರ ಪ್ರಮುಖನಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ‘‘ಬೆಂಕಿ ನಂದಿಸಲು ಏನಾದರೂ ಮಾಡಿ’’ ಎಂದು ಗೋಗರೆಯುತ್ತಿದ್ದಾರೆ. ಊರಿನ ಬೆಂಕಿಯನ್ನು ನಂದಿಸುವುದು ಪ್ರಮುಖನಿಗೆ ಇಷ್ಟವಿಲ್ಲ. ಬೆಂಕಿಯನ್ನು ನಂದಿಸುವ ಬದಲು ಜನರ ಬಾಯಿ ಮುಚ್ಚಿಸುವುದು ಅವನ ಗುರಿ. ಆಗ ಆತ ‘‘ನೋಡಿ...ಆ ಊರಿಗೂ ಬೆಂಕಿ ಬಿದ್ದಿದೆ...ಆ ಊರಿನಲ್ಲಿ ಎರಡು ಮನೆಗಳು ಸುಟ್ಟು ಹೋಗಿವೆ....’’ ಎಂದು ಅವರ ಗಮನವನ್ನು ಬೇರೆಗೆ ವರ್ಗಾಯಿಸುವ ಪ್ರಯತ್ನ ನಡೆಸುತ್ತಾನೆ. ಆಗಲೂ ವಿಫಲವಾದರೆ, ಆತ ತನ್ನ ಊರಿಗೆ ಬೆಂಕಿ ಬಿದ್ದಿರುವುದನ್ನು ಮುಚ್ಚಿ ಹಾಕಲು, ಇನ್ನೊಂದು ಊರಿಗೆ ಬೆಂಕಿ ಹಚ್ಚುವ ಪ್ರಯತ್ನ ನಡೆಸುತ್ತಾನೆ. ಆಗ ಈ ಊರಿನ ಬಗ್ಗೆ ಮಾತನಾಡುತ್ತಿರುವವರ ಒಂದು ಗುಂಪು ಇನ್ನೊಂದು ಊರಿನ ಬಗ್ಗೆ ಮಾತನಾಡಲು ಶುರು ಮಾಡುತ್ತದೆ. ಕಳೆದೆರಡು ತಿಂಗಳಿನಿಂದ ಮಣಿಪುರಕ್ಕೆ ಬಿದ್ದ ಬೆಂಕಿ ವಿಶ್ವಾದ್ಯಂತ ಚರ್ಚೆಯಾಗುತ್ತಿದೆ. ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ಅತ್ಯಾಚಾರ, ಬೆತ್ತಲೆ ಮೆರವಣಿಗೆಗಳ ಪ್ರಕರಣ ಸಾಮಾಜಿಕ ಜಾಲತಾಣಗಳ ಮೂಲಕ ಬೆಳಕಿಗೆ ಬಂದಾಕ್ಷಣ ಈ ದೇಶದ ಪ್ರಧಾನಿ ಮಣಿಪುರಕ್ಕೆ ಭೇಟಿ ನೀಡಿ ಶಾಂತಿಗಾಗಿ ಕರೆ ನೀಡಬೇಕಾಗಿತ್ತು. ಒಬ್ಬ ನಿಜವಾದ ನಾಯಕ ಮಾಡಬೇಕಾದ ಕೆಲಸ ಅದು. ವಿಪರ್ಯಾಸವೆಂದರೆ, ಪ್ರಧಾನಿ ಮೋದಿಯವರು ಮಣಿಪುರದ ಘಟನೆಗಳನ್ನು ಖಂಡಿಸುವ ಬದಲು, ಪಶ್ಚಿಮ ಬಂಗಾಳ, ರಾಜಸ್ಥಾನದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯದ ಘಟನೆಗಳನ್ನು ಉಲ್ಲೇಖಿಸಿ ಮಣಿಪುರದ ಅತ್ಯಾಚಾರಗಳನ್ನು ಸಮರ್ಥಿಸತೊಡಗಿದರು. ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ನಡೆದ ಮಹಿಳಾ ದೌರ್ಜನ್ಯದ ನಿರ್ದಿಷ್ಟ ಪ್ರಕರಣಗಳಿಗೂ, ಒಂದು ರಾಜ್ಯದಲ್ಲಿ ಸಾಮೂಹಿಕವಾಗಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ, ಅತ್ಯಾಚಾರಗಳಿಗೂ ವ್ಯತ್ಯಾಸ ತಿಳಿಯದ ಪ್ರಧಾನಿ ಈ ದೇಶವನ್ನು ಆಳುತ್ತಿರುವುದು ಭಾರತದ ದುರಂತವೇ ಸರಿ. ಬೇರೆ ರಾಜ್ಯಗಳ ಕಡೆಗೆ ಕೈ ತೋರಿಸಿದರೂ ಜನರ ಗಮನ ಆ ಕಡೆ ಸರಿಯುತ್ತಿಲ್ಲ ಎನ್ನುವುದು ಗೊತ್ತಾಗಿ ಇದೀಗ ಹರ್ಯಾಣಕ್ಕೆ ಬೆಂಕಿ ಹಚ್ಚುವ ಪ್ರಯತ್ನವೊಂದು ನಡೆಯುತ್ತಿದೆ. ಆ ಮೂಲಕವಾದರೂ ಮಾಧ್ಯಮಗಳ ಗಮನ ಮಣಿಪುರದಿಂದ ಸರಿಯಲಿ ಎನ್ನುವ ಉದ್ದೇಶ ಇದರ ಹಿಂದೆ ಇದ್ದಂತಿದೆ.

ಹರ್ಯಾಣದ ನೂಹ್ನಲ್ಲಿ ಸೋಮವಾರ ಸಂಜೆ ವಿಶ್ವ ಹಿಂದೂ ಪರಿಷತ್ನ ಶೋಭಾಯಾತ್ರೆ ಸಂದರ್ಭ ಹಿಂಸೆ ಭುಗಿಲೆದ್ದಿದೆ. ಹಿಂಸಾಚಾರ ರಾಜ್ಯದ ಇತರ ಭಾಗಗಳಿಗೂ ಹರಡಿದ್ದು, ಗುರುಗ್ರಾಮದಲ್ಲಿ ದುಷ್ಕರ್ಮಿಗಳು ಮಸೀದಿ ಮೇಲೆ ದಾಳಿ ನಡೆಸಿ ಅಲ್ಲಿನ ಸಹಾಯಕ ಧರ್ಮಗುರುವನ್ನು ಗುಂಡಿಕ್ಕಿ ಕೊಂದಿದ್ದಾರೆ. ಅಷ್ಟೇ ಅಲ್ಲ ಮಸೀದಿಗೂ ಬೆಂಕಿ ಹಚ್ಚಿದ್ದಾರೆ, ಅಂಗಡಿಗಳನ್ನು ಲೂಟಿ ಮಾಡಿದ್ದಾರೆ, ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಈ ಶೋಭಾಯಾತ್ರೆಯನ್ನು ಹಮ್ಮಿಕೊಂಡಿದ್ದುದೇ ಕೋಮುಗಲಭೆಗಳನ್ನು ಸೃಷ್ಟಿಸುವುದಕ್ಕೆ ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ. ಮೆರವಣಿಗೆಯಲ್ಲಿ ಭಾಗವಹಿಸಿದವರ ಕೈಯಲ್ಲಿ ಬಂದೂಕು ಸಹಿತ ಮಾರಕಾಯುಧಗಳಿದ್ದವು ಎನ್ನುವುದು ಶೋಭಾಯಾತ್ರೆಯ ದುರುದ್ದೇಶಗಳನ್ನು ಬಯಲು ಮಾಡುತ್ತದೆ ಇಷ್ಟಕ್ಕೂ ಮಣಿಪುರದಲ್ಲಿ ಇರುವಂತೆಯೇ ಹರ್ಯಾಣದಲ್ಲೂ ಇರುವುದು ಬಿಜೆಪಿ ಸರಕಾರವೇ. ಕೇಂದ್ರದಲ್ಲೂ ರಾಜ್ಯದಲ್ಲೂ ಬಿಜೆಪಿ ಸರಕಾರವೇ ಆಳ್ವಿಕೆ ನಡೆಸುತ್ತಿರುವಾಗ, ಬಿಜೆಪಿಯ ಪಾಲಿನ ಉಕ್ಕಿನ ಮನುಷ್ಯ ಈ ದೇಶದ ಗೃಹ ಸಚಿವರಾಗಿರುವಾಗ ಮಣಿಪುರ, ಹರ್ಯಾಣದ ಗಲಭೆ, ಹಿಂಸೆಗಳಿಗೆ ಯಾರನ್ನು ದೂರಬೇಕು? ಇದನ್ನು ಕೇಂದ್ರ ಮತ್ತು ರಾಜ್ಯ ಸರಕಾರದ ವೈಫಲ್ಯವೆಂದು ಟೀಕಿಸಿ ಸುಮ್ಮನಿರುವಂತಿಲ್ಲ. ಈ ಗಲಭೆಗಳು ವೈಫಲ್ಯದಿಂದ ಸಂಭವಿಸಿರುವುದಲ್ಲ, ಸರಕಾರದ ಕುಮ್ಮಕ್ಕಿನಿಂದಲೇ ನಡೆಯುತ್ತಿರುವುದು. ಮಣಿಪುರದಲ್ಲಿ ಅಮಾಯಕರ ಸಾವನ್ನು ಖಂಡಿಸುವ ಬದಲು ಆ ಕೊಲೆಗಳನ್ನು ಬೆಂಬಲಿಸಲಾಗುತ್ತಿದೆ. ಗಲಭೆಯಲ್ಲಿ ಸತ್ತವರನ್ನೇ ಅಪರಾಧಿಗಳನ್ನಾಗಿಸುವ ಪ್ರಯತ್ನ ನಡೆಯುತ್ತಿದೆ. ಇದೀಗ ಹರ್ಯಾಣದಲ್ಲಿ ಗಲಭೆ ಎಬ್ಬಿಸಿ ಅಪಾರ ಸಾವುನೋವುಗಳು ಸಂಭವಿಸಿದ ಬಳಿಕ, ಇಲ್ಲಿಯೂ ಸಂತ್ರಸ್ತರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ನಡೆಯುತ್ತಿದೆ.

ಗಲಭೆಗಳನ್ನು ಪ್ರಧಾನಿ ಮೋದಿಯವರು ತಡೆಯುತ್ತಾರೆ ಎನ್ನುವ ನಿರೀಕ್ಷೆ ಜನಸಾಮಾನ್ಯರಿಗೆ ಇಲ್ಲವಾಗುತ್ತಿದೆ. ಯಾಕೆಂದರೆ ಪ್ರಧಾನಿಯ ಹೆಸರಿನಲ್ಲಿಯೇ ಈ ದೇಶದಲ್ಲಿ ಹತ್ಯೆಗಳು ನಡೆಯುತ್ತಿವೆ. ಮುಂಬೈಯಲ್ಲಿ ಆರ್ಪಿಎಫ್ ಕಾನ್ಸ್ಟೇಬಲ್ ಆಗಿರುವ ಚೇತನ್ ಸಿಂಗ್ ಎನ್ನುವಾತ ಜೈಪುರ-ಮುಂಬೈ ಸೆಂಟ್ರಲ್ ಎಕ್ಸ್ಪ್ರೆಸ್ನಲ್ಲಿ ನಾಲ್ವರನ್ನು ಗುಂಡು ಹಾರಿಸಿ ಕೊಂದಿದ್ದಾನೆ. ಕೊಲೆಯಾದವರಲ್ಲಿ ಓರ್ವ ಆರ್ಪಿಎಫ್ ಅಸಿಸ್ಟೆಂಟ್ ಸಬ್ ಇನ್ಸ್ಪೆಪೆಕ್ಟರ್ ಆಗಿದ್ದರೆ ಇನ್ನು ಮೂವರು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಮಾಯಕ ಮುಸ್ಲಿಮರು. ದುಷ್ಕರ್ಮಿ ಕೊಲೆ ಮಾಡಿದ ಬಳಿಕ ‘‘ನೀವು ಭಾರತದಲ್ಲಿ ಬದುಕಲು ಬಯಸುವುದಾದರೆ ಪ್ರಧಾನಿ ಮೋದಿ ಮತ್ತು ಯೋಗಿ ಅವರನ್ನು ಬೆಂಬಲಿಸಿ’’ ಎಂದು ಘೋಷಣೆ ಕೂಗಿದ್ದಾನೆ. ಆತನಿಗೆ ಈ ಬರ್ಬರ ಕೊಲೆಗಳನ್ನು ಮಾಡಲು ಸ್ಫೂರ್ತಿಯೇ ಈ ದೇಶದ ಪ್ರಧಾನಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರಾಗಿದ್ದಾರೆ. ಮುಂಬೈಯಲ್ಲಿ ನಡೆದ ಈ ಬರ್ಬರ ಯಾರನ್ನು ಹೊಣೆ ಮಾಡಬೇಕು? ಯಾವ ಪೂರ್ವ ದ್ವೇಷವೂ ಇಲ್ಲದೆ ಅಮಾಯಕರ ಮೇಲೆ ಗುಂಡು ಹಾರಿಸಿ ಕೊಂದು ಹಾಕಿ ಆ ಬಳಿಕ ‘ಪ್ರಧಾನಿ ಮೋದಿ ಮತ್ತು ಯೋಗಿ ಆದಿತ್ಯನಾಥ್ನನ್ನು ಚುನಾವಣೆಯಲ್ಲಿ ಗೆಲ್ಲಿಸಿ’ ಎಂದು ಪೊಲೀಸ್ ಇನ್ಸ್ಪೆಕ್ಟರ್ ಕರೆ ನೀಡುತ್ತಾನೆ. ಈತ ಮಾಡಿದ ಕೊಲೆಗಳಿಗೆ ಪ್ರಧಾನಿಯೇ ಸ್ಫೂರ್ತಿಯಾಗಿದ್ದಾರೆ ಎನ್ನುವುದು ಇದರ ಅರ್ಥವಲ್ಲವೆ?

ಈ ಹಿಂದೆ ಉಗ್ರರ ತಂಡವೊಂದು ಬಾಂಗ್ಲಾದೇಶದಲ್ಲಿ ದಾಳಿ ನಡೆಸಿ ಸಾವು ನೋವುಗಳಿಗೆ ಕಾರಣವಾಗಿತ್ತು. ಈ ಉಗ್ರರ ತಂಡದಲ್ಲಿದ್ದ ಓರ್ವ ಸದಸ್ಯ ಧಾರ್ಮಿಕ ಮುಖಂಡ ಝಾಕಿರ್ ನಾಯ್ಕ್ ಅವರ ಭಾಷಣದ ವೀಡಿಯೊ ಒಂದನ್ನು ಲೈಕ್ ಮಾಡಿದ್ದ. ಇದನ್ನೇ ಇಟ್ಟುಕೊಂಡು ಯುವಕರನ್ನು ದಾರಿ ತಪ್ಪಿಸುತ್ತಿರುವ ಆರೋಪದಲ್ಲಿ ಮುಂದೆ ಝಾಕಿರ್ ನಾಯ್ಕ್ಗೆ ನಿಷೇಧ ಹೇರಲಾಯಿತು. ಇದೀಗ ಮುಂಬೈ ರೈಲಿನಲ್ಲಿ ನಡೆದ ಕೃತ್ಯದಲ್ಲಿ ದುಷ್ಕರ್ಮಿ ಬಹಿರಂಗವಾಗಿ ತಾನು ಮೋದಿ ಮತ್ತು ಯೋಗಿಯ ಹಿಂಬಾಲಕ ಎನ್ನುವುದನ್ನು ಘೋಷಿಸಿದ್ದಾನೆ. ಹೀಗಿರುವಾಗ ಕೃತ್ಯ ಎಸಗಿದವನನ್ನು ಶಿಕ್ಷಿಸಬೇಕೋ ಅಥವಾ ಆತನಿಗೆ ಆ ಕೃತ್ಯ ಎಸಗಲು ಸ್ಫೂರ್ತಿಯಾದವರನ್ನು ಶಿಕ್ಷಿಸಬೇಕೋ? ಆರೋಪಿಗೆ ಬುದ್ಧಿ ಮಾಂದ್ಯ ಹಣೆಪಟ್ಟಿಯನ್ನು ಕಟ್ಟಿ ರಕ್ಷಿಸುವ ಪ್ರಯತ್ನ ಇದೀಗ ನಡೆಯುತ್ತಿದೆ. ಬುದ್ಧಿ ಮಾಂದ್ಯನೊಬ್ಬನಿಗೆ ಖಾಕಿ ಧಿರಿಸನ್ನು ನೀಡಿ ಆತನ ಕೈಗೆ ಬಂದೂಕು ಕೊಟ್ಟು ಸಾರ್ವಜನಿಕರನ್ನು ರಕ್ಷಿಸಲು ಅವಕಾಶ ಕೊಟ್ಟವರು ಯಾರು?. ಪ್ರಧಾನಿ ಮೋದಿ ಮತ್ತು ಯೋಗಿಯನ್ನು ಬುದ್ಧಿ ಮಾಂದ್ಯತೆಯ ಪ್ರಥಮ ಹಂತವೆಂದು ದೇಶ ಭಾವಿಸಬೇಕೆ? ಅಲಿಪ್ತ ನೀತಿಯ ನಾಯಕನಾಗಿ ನೀಡಿದ ಕೊಡುಗೆಗಳಿಗಾಗಿ ನಾವು ಮಾಜಿ ಪ್ರಧಾನಿ ನೆಹರೂ ಅವರನ್ನು ಸ್ಮರಿಸುತ್ತೇವೆ. ಭೂಸುಧಾರಣೆ ಕಾಯ್ದೆ, ಬ್ಯಾಂಕ್ ರಾಷ್ಟ್ರೀಕರಣದಂತಹ ಜನಪರ ಕಾರ್ಯವನ್ನು ಮುಂದಿಟ್ಟು ಇಂದಿರಾಗಾಂಧಿಗೆ ಜೈ ಅನ್ನುವವರಿದ್ದಾರೆ. ಅರ್ಥಶಾಸ್ತ್ರದ ಪ್ರವೀಣರೆಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ರನ್ನು ವಿಶ್ವ ಸ್ಮರಿಸುತ್ತದೆ. ಮಾಜಿ ಪ್ರಧಾನಿಗಳನ್ನು ಆದರ್ಶವಾಗಿಟ್ಟುಕೊಂಡು ಸಾಧನೆಗೈದ ಹಲವು ಸಾಧಕರು ನಮ್ಮ ಮುಂದಿದ್ದಾರೆ. ದುರದೃಷ್ಟವಶಾತ್, ಒಬ್ಬ ಕೊಲೆಗಡುಕ ಸಾರ್ವಜನಿಕವಾಗಿ ಅಮಾಯಕರ ಮೇಲೆ ಗುಂಡು ಹಾರಿಸಿ ‘ಪ್ರಧಾನಿ ಮೋದಿಯವರನ್ನು’ ಸ್ಮರಿಸುತ್ತಾನೆ. ಕೇಳುವ ಕಿವಿಯಿದ್ದರೆ ಮಣಿಪುರ, ಹರ್ಯಾಣ ಹಿಂಸಾಚಾರಗಳ ಮಧ್ಯೆಯಿಂದಲೂ ಪ್ರಧಾನಿ ಮೋದಿಯವರ ಪರ ಘೋಷಣೆಗಳನ್ನು ನಾವು ಕೇಳಬಹುದಾಗಿದೆ.

‘ಅರಸು ರಾಕ್ಷಸ, ಮಂತ್ರಿಯೆಂಬುವ ಮೊರೆವ ಹುಲಿ,

ಪರಿವಾರ ಹದ್ದಿನ ನೆರವಿ, ಬಡವರ ಬಿನ್ನಪವಿನ್ನಾರು ಕೇಳುವರು?

ಉರಿಉರಿಯುತಿದೆ ದೇಶ ನಾವಿನ್ನಿರಲು

ಬಾರದೆನ್ನುತ ಜನ ಬೇಸರದ ಬೇಗೆಯಲ್ಲಿರಲು...’

ಕವಿ ಕುಮಾರ ವ್ಯಾಸ ಶತಮಾನಗಳ ಹಿಂದೆ ಬರೆದ ಕಾವ್ಯದ ಸಾಲು ಇಂದಿನ ಭಾರತಕ್ಕೆ ಹಿಡಿದ ಕನ್ನಡಿಯಂತಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News