ತನಿಖಾ ಸಂಸ್ಥೆಗಳೇ ಭ್ರಷ್ಟವಾದರೆ?

Update: 2024-01-29 06:00 GMT

ವಿರೋಧ ಪಕ್ಷಗಳ ಆಡಳಿತ ನಡೆಸುವ ರಾಜ್ಯಗಳ ಅಧಿಕಾರಿಗಳ ವಿರುದ್ಧ ಜಾರಿ ನಿರ್ದೇಶನಾಲಯ (ಈ.ಡಿ.) ನಡೆಸುವ ತನಿಖೆಗಳು ರಾಜಕೀಯ ದ್ವೇಷ ಸಾಧನೆಯ ಭಾಗವೇ ಎನ್ನುವುದನ್ನು ನಿರ್ಧರಿಸಲು ವ್ಯವಸ್ಥೆಯೊಂದನ್ನು ಜಾರಿಗೆ ತರುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ. ‘ತಮಿಳು ನಾಡಿನ ಸಚಿವರು ಮತ್ತು ಅಧಿಕಾರಿಗಳ ವಿರುದ್ಧ ಮೊದಲ ಮಾಹಿತಿ ವರದಿಗಳು ಮತ್ತು ಭ್ರಷ್ಟಾಚಾರ ಪ್ರಕರಣಗಳ ಇತರ ವಿವರಗಳನ್ನು ತನಗೆ ನೀಡುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕು’ ಎಂದು ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳಲ್ಲಿ ಆಡಳಿತ ನಡೆಸುವ ಪಕ್ಷಗಳು ಬೇರೆ ಬೇರೆಯಾಗಿರುವಾಗ, ಕೇಂದ್ರೀಯ ತನಿಖಾ ಸಂಸ್ಥೆಯೊಂದು ತನಿಖೆಗೆ ಇಳಿಯುವಾಗ ಮಾರ್ಗದರ್ಶಿ ಸೂತ್ರಗಳಿರಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ದ್ವೇಷ ಸಾಧನೆಯ ಸತ್ಯಾಸತ್ಯತೆಯನ್ನು ತಿಳಿಯಲು ವ್ಯವಸ್ಥೆಯೊಂದನ್ನು ಜಾರಿಗೆ ತಂದು ಇತರ ರಾಜ್ಯಗಳಿಗೆ ಅದನ್ನು ಅನ್ವಯಿಸುವ ಮುನ್ನ ತಮಿಳು ನಾಡಿನಲ್ಲೇ ಮೊದಲು ಪರೀಕ್ಷಿಸಬೇಕು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ. ಕೇಂದ್ರ ಸರಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಗೊಳಿಸಿ ತನ್ನ ವಿರೋಧಿಗಳನ್ನು ಮಟ್ಟ ಹಾಕಲು ಪ್ರಯತ್ನಿಸುತ್ತಿದೆ ಎನ್ನುವ ಆರೋಪ ವ್ಯಾಪಕವಾಗಿರುವ ಹೊತ್ತಿಗೆ ಸುಪ್ರೀಂಕೋರ್ಟ್ ಇಂತಹದೊಂದು ಹೇಳಿಕೆಯನ್ನು ನೀಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.

ತನಿಖಾ ಸಂಸ್ಥೆಗಳ ದುರುಪಯೋಗ ಆರೋಪ ಇಂದು ನಿನ್ನೆಯದಲ್ಲ. ಇಲ್ಲಿ ಎರಡು ರೀತಿಯಲ್ಲಿ ತನಿಖಾ ಸಂಸ್ಥೆಗಳನ್ನು ದುರ್ಬಲಗೊಳಿಸಲಾಗುತ್ತಿದೆ. ಸರಕಾರದ ವಿರುದ್ಧ ಯಾವುದೇ ತನಿಖೆಗಳನ್ನು ಕೈಗೆತ್ತಿಕೊಂಡರೆ, ಆ ಮುಖ್ಯಸ್ಥರ ವಿರುದ್ಧವೇ ಕಾರ್ಯಾಚರಣೆ ನಡೆಯುತ್ತದೆ. ಇನ್ನೇನು ಸಿಬಿಐ ರಫೇಲ್ ತನಿಖೆಯನ್ನು ಕೈಗೆತ್ತಿಕೊಳ್ಳುತ್ತಿದೆ ಎನ್ನುವ ಸಂದರ್ಭದಲ್ಲಿ ಸಿಬಿಐ ಮುಖ್ಯಸ್ಥರನ್ನೇ ಹೇಗೆ ಬದಲಾಯಿಸಲಾಯಿತು ಎನ್ನುವುದನ್ನು ನಾವು ನೋಡಿದ್ದೇವೆ. ಸರಕಾರದ ವಿರುದ್ಧ ಕಾರ್ಯಾಚರಣೆ ನಡೆಸುವ ತನಿಖಾ ಸಂಸ್ಥೆಗಳ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತದೆ, ಇಲ್ಲವಾದರೆ ಬದಲಾಯಿಸಲಾಗುತ್ತದೆ. ಇಂದು ಸರಕಾರದ ಪಾಲುದಾರಿಕೆಯಿರುವ ಯಾವುದೇ ಅಕ್ರಮಗಳು, ಅವ್ಯವಹಾರಗಳು ತನಿಖೆಯಾಗುತ್ತಿಲ್ಲ. ಮಧ್ಯ ಪ್ರದೇಶದಲ್ಲಿ ವ್ಯಾಪಂ ಹಗರಣದಲ್ಲಿ ಸರಕಾರದ ಭಾಗೀದಾರಿಕೆಯ ಬಗ್ಗೆ ಆರೋಪಗಳಿದ್ದವಾದರೂ, ತನಿಖಾ ಸಂಸ್ಥೆಗಳು ಈ ಬಗ್ಗೆ ಕುರುಡಾದವು. ರಫೇಲ್ ಹಗರಣವನ್ನು ತನಿಖಾ ಸಂಸ್ಥೆಗಳೇ ಸೇರಿ ಮುಚ್ಚಿ ಹಾಕಿದವು. ಕೊರೋನಾ ಕಾಲದಲ್ಲಿ ನಡೆದ ವೈದ್ಯಕೀಯ ಹಗರಣಗಳ ಪ್ರಾಮಾಣಿಕ ತನಿಖೆ ನಡೆದಿದ್ದರೆ, ಇಂದು ಸರಕಾರದೊಳಗಿರುವ ದೊಡ್ಡ ತಲೆಗಳೇ ಉರುಳುತ್ತಿದ್ದವು. ಆದರೆ ದುರದೃಷ್ಟವಶಾತ್ ಆ ತನಿಖೆ ನಡೆಯಲೇ ಇಲ್ಲ. ಅದಾನಿಯ ಹಗರಣದ ಬಗ್ಗೆಯೂ ತನಿಖಾ ಸಂಸ್ಥೆಗಳಿಗೆ ಆಸಕ್ತಿಯಿಲ್ಲ. ತನ್ನ ಪಕ್ಷದೊಳಗಿರುವ ಮುಖಂಡರ ಹಗರಣಗಳನ್ನು ರಕ್ಷಿಸುವ ನಿಟ್ಟಿನಲ್ಲಿ ತನಿಖಾ ಸಂಸ್ಥೆಗಳ ಮೇಲೆ ಸರಕಾರ ಒತ್ತಡಗಳನ್ನು ಹೇರುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಇನ್ನೊಂದೆಡೆ ತನ್ನ ವಿರೋಧಿಗಳನ್ನು ಮಟ್ಟ ಹಾಕಲು ಈ.ಡಿ.ಯೂ ಸೇರಿದಂತೆ ಎಲ್ಲ ತನಿಖಾ ಸಂಸ್ಥೆಗಳನ್ನೂ ವ್ಯವಸ್ಥಿತವಾಗಿ ಕೇಂದ್ರ ಸರಕಾರ ದುರ್ಬಳಕೆ ಮಾಡಿಕೊಂಡು ಬರುತ್ತಿದೆ. ಇದರ ನೇರ ಪರಿಣಾಮ ಈ ದೇಶದ ಆರ್ಥಿಕತೆಯ ಮೇಲೆ ಆಗುತ್ತಿದೆ. ಒಂದೆಡೆ ತನಿಖಾ ಸಂಸ್ಥೆಗಳಲ್ಲಿರುವ ಅಧಿಕಾರಿಗಳು ಭ್ರಷ್ಟರಾಗುತ್ತಿದ್ದಾರೆ. ಅವರು ಸರಕಾರದ ಓಲೈಕೆಯನ್ನೇ ತಮ್ಮ ಕರ್ತವ್ಯವನ್ನಾಗಿಸಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ, ರಾಜಕೀಯ ಭ್ರಷ್ಟರೆಲ್ಲರೂ ತಮ್ಮ ರಕ್ಷಣೆಗಾಗಿ ಪಕ್ಷಾಂತರ ಮಾಡುತ್ತಿದ್ದಾರೆ. ನೀವೆಷ್ಟೇ ಭ್ರಷ್ಟಾಚಾರಗಳನ್ನು ಮಾಡಿ, ಆದರೆ ಬಿಜೆಪಿಯೊಳಗಿರಿ ಎನ್ನುವ ಅಲಿಖಿತ ನಿಯಮಗಳನ್ನು ತನಿಖಾ ಸಂಸ್ಥೆಗಳು ಅವರಿಗೆ ರವಾನಿಸುತ್ತಿವೆ.

ಸರಕಾರ ಈ.ಡಿ.ಯಲ್ಲಿ ಹಸ್ತಕ್ಷೇಪ ನಡೆಸುತ್ತಿರುವುದು ಈ ಹಿಂದೆ ಸುಪ್ರೀಂಕೋರ್ಟ್ ಮೂಲಕವೇ ಚರ್ಚೆಗೀಡಾಗಿತ್ತು. ಜಾರಿ ನಿರ್ದೇಶನಾಲಯದ ಅಂದಿನ ಮುಖ್ಯಸ್ಥ ಸಂಜಯ್ ಮಿಶ್ರ ಅವರ ಅವಧಿ ವಿಸ್ತರಣೆಯನ್ನು ಕಾನೂನು ಬಾಹಿರ ಎಂದು ಸ್ವತಃ ಸುಪ್ರೀಂಕೋರ್ಟ್ ಹೇಳುವ ಮೂಲಕ ಸರಕಾರಕ್ಕೆ ಮುಜುಗರವನ್ನು ಉಂಟು ಮಾಡಿತ್ತು. ಸಂಜಯ್ ಕುಮಾರ್‌ಮಿಶ್ರಾರನ್ನು 2018ರ ನವೆಂಬರ್ 19ರಂದು ಮೊದಲ ಬಾರಿಗೆ ಎರಡು ವರ್ಷಗಳ ಅವಧಿಗೆ ನಿರ್ದೇಶನಾಲಯದ ನಿರ್ದೇಶಕರಾಗಿ ನೇಮಿಸಲಾಗಿತ್ತು. 2020ರ ನ. 13ರಂದು ಕೇಂದ್ರ ಸರಕಾರ ಅವರ ನೇಮಕಾತಿ ಪತ್ರಕ್ಕೆ ತಿದ್ದುಪಡಿ ತಂದು ಸೇವಾವಧಿಯನ್ನು ಎರಡರ ಬದಲಿಗೆ ಮೂರು ವರ್ಷಕ್ಕೇರಿಸಿತು. ಅಂದರೆ ಒಂದು ವರ್ಷ ಹೆಚ್ಚುವರಿಯಾಗಿ ವಿಸ್ತರಿಸಿತು. ಇದನ್ನು ವಿರೋಧ ಪಕ್ಷಗಳು ತೀವ್ರವಾಗಿ ವಿರೋಧಿಸಿ, ಇದರ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದವು. 2021ರ ಸೆಪ್ಟಂಬರ್‌ನಲ್ಲಿ ಮಿಶ್ರಾರ ಅವಧಿಯನ್ನು ಇನ್ನು ವಿಸ್ತರಿಸದಂತೆ ಸುಪ್ರೀಂಕೋರ್ಟ್ ಸರಕಾರಕ್ಕೆ ಸೂಚನೆಯನ್ನು ನೀಡಿತ್ತು. ಆದರೂ ನವೆಂಬರ್‌ನಲ್ಲಿ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ನಿರ್ದೇಶಕರ ಅವಧಿಗಳನ್ನು ಐದು ವರ್ಷಗಳವರೆಗೆ ವಿಸ್ತರಿಸಲು ಅವಕಾಶ ನೀಡುವ ಎರಡು ಸುಗ್ರೀವಾಜ್ಞೆಗಳನ್ನು ಸರಕಾರವು ಜಾರಿಗೊಳಿಸಿತು. ಇದು ಮಿಶ್ರಾರ ಅವಧಿಯನ್ನು ಇನ್ನೊಂದು ವರ್ಷ ವಿಸ್ತರಿಸಲು ಸರಕಾರಕ್ಕೆ ಅವಕಾಶ ನೀಡಿತು. ಆದರೆ ಕಳೆದ ವರ್ಷ ಜುಲೈಯಲ್ಲಿ ಮಿಶ್ರಾ ವಿಸ್ತರಣೆಯನ್ನು ಕಾನೂನುಬಾಹಿರ ಎಂದು ಸುಪ್ರೀಂಕೋರ್ಟ್ ಹೇಳಿತು. ಕಾನೂನು ಬಾಹಿರವಾಗಿ ಈ.ಡಿ. ಮುಖ್ಯಸ್ಥರಾಗಿ ಮುಂದುವರಿದ ಮಿಶ್ರಾ ಅವರ ನೇತೃತ್ವದಲ್ಲಿ ಹಲವು ವಿರೋಧ ಪಕ್ಷಗಳ ನಾಯಕರ ಮೇಲೆ ಈ.ಡಿ. ದಾಳಿ ನಡೆಸಿತ್ತು. ಕಾನೂನು ಬಾಹಿರವಾಗಿ ಮುಂದುವರಿದ ನಿರ್ದೇಶಕರ ನೇತೃತ್ವದಲ್ಲಿ ನಡೆದ ಈ ದಾಳಿಯ ವಿಶ್ವಾಸಾರ್ಹತೆಯೂ ಈ ಮೂಲಕ ಪ್ರಶ್ನಾರ್ಹವಾಯಿತು. ಇಷ್ಟಾದರೂ ‘ರಾಷ್ಟ್ರೀಯ ಹಿತಾಸಕ್ತಿ’ಯನ್ನು ಮುಂದೊಡ್ಡಿ ಸೆ. 15ರವರೆಗೆ ಮುಂದುವರಿಯಲು ಅನುಮತಿ ನೀಡಿತು. ಈ.ಡಿ. ಅಕ್ರಮ ನಡೆಯ ಬಗ್ಗೆ ಸುಪ್ರೀಂಕೋರ್ಟ್ ಹೇಳಿಕೆಗಳು ಕೂಡ ವಿರೋಧಾಭಾಸಗಳಿಂದ ಕೂಡಿವೆ. ತನ್ನ ಮೂಗಿನ ನೇರಕ್ಕಿರುವ ಮುಖ್ಯಸ್ಥನನ್ನು ನೇಮಿಸಲು ಸರಕಾರ ಕಾನೂನನ್ನು ಉಲ್ಲಂಘಿಸುತ್ತದೆಯಾದರೆ, ತನ್ನ ಹಿತಾಸಕ್ತಿಗಾಗಿ ಈ.ಡಿ.ಯನ್ನು ದುರುಪಯೋಗಗೊಳಿಸದೇ ಇರುತ್ತದೆಯೆ?

ವಿರೋಧ ಪಕ್ಷಗಳ ಮೇಲೆ ದ್ವೇಷ ಸಾಧನೆಗೆ ದುರ್ಬಳಕೆಯಾಗುತ್ತದೆ ಎನ್ನುವ ಕಾರಣಕ್ಕಾಗಿ ಮಾತ್ರವಲ್ಲ, ಈ ದೇಶದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ತನಿಖಾ ಸಂಸ್ಥೆಗಳು ವಿಫಲವಾಗುತ್ತಿವೆ ಎನ್ನುವುದೂ ಗಂಭೀರ ವಿಷಯವಾಗಬೇಕು. ಯುಪಿಎ ಸರಕಾರದ ಅವಧಿಯಲ್ಲಿ ತನಿಖಾ ಸಂಸ್ಥೆಗಳು ಈ ಮಟ್ಟಿಗೆ ದುರ್ಬಳಕೆಯಾಗಿರಲಿಲ್ಲ. ಆಗಾಗ ಸರಕಾರದ ಭ್ರಷ್ಟಾಚಾರಗಳನ್ನೂ ಬಹಿರಂಗಗೊಳಿಸುವ ಮೂಲಕ ತನಿಖಾ ಸಂಸ್ಥೆಗಳು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದವು. ಕಲ್ಲಿದ್ದಲು ಹಗರಣವೂ ಸೇರಿದಂತೆ ಹಲವು ಪ್ರಮುಖ ಹಗರಣಗಳು ಆಡಳಿತ ನಡೆಸುತ್ತಿದ್ದ ಯುಪಿಎ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದವು. ಯಾವ ಪಕ್ಷ ಆಡಳಿತದಲ್ಲಿರುತ್ತದೆಯೋ ಆ ಪಕ್ಷದ ನಾಯಕರು ಭ್ರಷ್ಟಾಚಾರದಲ್ಲಿ ಶಾಮೀಲಾಗಿರುವುದು ಸಾಮಾನ್ಯ. ಆಡಳಿತ ನಡೆಸುತ್ತಿರುವ ಸರಕಾರದ ವಿರುದ್ಧ ತನಿಖಾ ಸಂಸ್ಥೆಗಳು ಕಣ್ಣಿಟ್ಟಾಗ ಆಡಳಿತ ಸುಗಮವಾಗಿ ನಡೆಯುತ್ತದೆ ಮಾತ್ರವಲ್ಲ, ಆಡಳಿತದಲ್ಲಿ ಭ್ರಷ್ಟಾಚಾರಗಳು ಇಳಿಮುಖವಾಗುತ್ತವೆ. ಈ.ಡಿ. ಮಾತ್ರವಲ್ಲ ಎಲ್ಲ ತನಿಖಾ ಸಂಸ್ಥೆಗಳು ಸರಕಾರದ ಜೀತ ವ್ಯವಸ್ಥೆಯಿಂದ ಹೊರ ಬರಬೇಕು. ಈ ನಿಟ್ಟಿನಲ್ಲಿ ಎಲ್ಲ ತನಿಖಾ ಸಂಸ್ಥೆಗಳ ತನಿಖೆಯ ಪ್ರಕ್ರಿಯೆಯನ್ನು ಕಣ್ಣಿಡುವುದಕ್ಕೆ ವ್ಯವಸ್ಥೆಯೊಂದನ್ನು ಜಾರಿಗೆ ತರುವ ಅಗತ್ಯವಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News