ರಾಜಕೀಯಕ್ಕೆ ಬಲಿಯಾದ ಭಾರತದ ಕ್ರೀಡೆ

Update: 2023-10-20 03:57 GMT

Photo: dhanrajnathwani.com

ಒಂದು ದೇಶದ ಕ್ರೀಡಾ ಸಾಧನೆಗಳು ಆ ದೇಶದ ಆರೋಗ್ಯ ಮತ್ತು ಪೌಷ್ಟಿಕತೆಯನ್ನು ಎತ್ತಿ ಹಿಡಿಯುತ್ತದೆ. ಯಾವ ದೇಶ ಯುವಶಕ್ತಿಯನ್ನು ಸದುಪಯೋಗ ಪಡಿಸಿಕೊಳ್ಳುವುದೋ ಆ ದೇಶ ಕ್ರೀಡಾ ಸಾಧನೆಗಳಲ್ಲಿ ಸದಾ ಮುಂದಿರುತ್ತದೆ. ಆ ಸಾಧನೆ ದೇಶದ ಬೇರೆ ಬೇರೆ ಕ್ಷೇತ್ರಗಳ ಮೇಲೆ ಪರಿಣಾಮಗಳನ್ನು ಬೀರುತ್ತದೆ. ಯುವ ಸಂಪನ್ಮೂಲದ ಮಹತ್ವವನ್ನು ಅರಿಯದ, ಅವುಗಳನ್ನು ಪೋಲುಮಾಡುವ, ಕೆಟ್ಟ ರಾಜಕೀಯಗಳಿಗೆ ಬಳಸುವ ದೇಶ ಕ್ರೀಡಾ ಸಾಧನೆಗಳಲ್ಲಿ ಸದಾ ಹಿಂದಿರುತ್ತದೆ. ಭಾರತ ಯಾಕೆ ಕ್ರೀಡೆಯಲ್ಲಿ ಹಿಂದುಳಿದಿದೆ ಮತ್ತು ಚೀನಾದಂತಹ ದೇಶಗಳು ಯಾಕೆ ಸದಾ ಕ್ರೀಡಾ ಸಾಧನೆಗಳಲ್ಲಿ ಮುಂದಿರುತ್ತವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಇಷ್ಟು ಸಾಕು. ಈ ಬಾರಿ ಏಶ್ಯನ್ ಗೇಮ್ಸ್‌ನಲ್ಲಿ ಭಾರತ 100ಕ್ಕೂ ಅಧಿಕ ಪದಕಗಳನ್ನು ತನ್ನದಾಗಿಸಿಕೊಂಡಿದೆ. ಈ ಬಾರಿ ಒಟ್ಟು ಪದಕಗಳ ಸಂಖ್ಯೆ ನೂರು ದಾಟಿರುವುದರ ಸಂಭ್ರಮದಲ್ಲಿದೆ ದೇಶ. ಚಿನ್ನದ ಪದಕಗಳ ಸಂಖ್ಯೆಯೂ 20ನ್ನು ದಾಟಿ 28ನ್ನು ತಲುಪಿದೆ. 38 ಬೆಳ್ಳಿ, 41 ಕಂಚಿನ ಪದಕಗಳ ಜೊತೆಗೆ 107 ಪದಕಗಳನ್ನು ಗಳಿಸಿ ಈ ಹಿಂದಿನ ತನ್ನದೇ ಫಲಿತಾಂಶವನ್ನು ಹಿಂದಿಕ್ಕಿ ಸಾಧನೆ ಮೆರೆದಿದೆ. ಆದರೆ ಭಾರತಕ್ಕಿಂತಲೂ ಸಣ್ಣದಾಗಿರುವ ಜಪಾನ್, ಕೊರಿಯಾದಂತಹ ದೇಶಗಳು ಇದಕ್ಕಿಂತಲೂ ಹೆಚ್ಚು ಪದಕಗಳನ್ನು ತಮ್ಮದಾಗಿಸಿಕೊಂಡಿವೆ. ಜಪಾನ್ 52 ಚಿನ್ನವನ್ನು ತನ್ನದಾಗಿಸಿಕೊಂಡಿದ್ದರೆ, ಕೊರಿಯಾ 42 ಚಿನ್ನವನ್ನು ಗೆದ್ದಿದೆ. ಚೀನಾ 201 ಚಿನ್ನಗಳನ್ನು ಪಡೆದು ಅಗ್ರ ಸ್ಥಾನದಲ್ಲಿದೆ. ಯೋಗವನ್ನು ಪರಿಚಯಿಸಿ ಇಡೀ ವಿಶ್ವವನ್ನು ಆರೋಗ್ಯವಾಗಿರಿಸಲು ಮುಂದಾಗಿರುವ ಭಾರತದ ಪಾಲಿಗೆ ಇದು ಸಣ್ಣ ಮುಖಭಂಗವೇನೂ ಅಲ್ಲ. ಅಂತರ್‌ರಾಷ್ಟ್ರೀಯ ಯೋಗದ ಮೂಲಕ ವಿಶ್ವಕ್ಕೆ ದೈಹಿಕ ಕ್ಷಮತೆಯನ್ನು ಕಲಿಸಲು ಅತ್ಯುತ್ಸಾಹ ಪ್ರದರ್ಶಿಸುತ್ತಿರುವ ಭಾರತ ಕ್ರೀಡೆಯಲ್ಲಿ ಪದಕಗಳನ್ನು ಪಡೆಯುವಾಗ ಮಾತ್ರ ಯಾಕೆ ಹಿಂದುಳಿಯುತ್ತದೆ? ಎನ್ನುವ ಪ್ರಶ್ನೆಗೆ ಭಾರತ ಉತ್ತರ ಕಂಡುಕೊಳ್ಳಬೇಕಾದುದು ಅತ್ಯಗತ್ಯವಾಗಿದೆ.

ಏಶ್ಯನ್ ಗೇಮ್ಸ್ ಅಥವಾ ಕಾಮನ್ ವೆಲ್ತ್ ಗೇಮ್ಸ್‌ನ ಪದಕಗಳನ್ನು ಎಣಿಸುವ ಸಂದರ್ಭದಲ್ಲಿ ಇರುವ ಉತ್ಸಾಹ ಒಲಿಂಪಿಕ್ಸ್ ಪದಕಗಳನ್ನು ಎಣಿಸುವ ಸಂದರ್ಭದಲ್ಲಿ ಭಾರತಕ್ಕೆ ಇರುವುದಿಲ್ಲ. ಒಲಿಂಪಿಕ್ಸ್‌ನಲ್ಲಿ ದೇಶ ಒಂದು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರೆ ಆ ಹೆಸರಲ್ಲಿ ನಾವು ನಾಲ್ಕು ವರ್ಷ ಹಬ್ಬ ಆಚರಿಸಿಕೊಳ್ಳುತ್ತೇವೆ. ಇದೇ ಸಂದರ್ಭದಲ್ಲಿ ಜಪಾನ್, ಚೀನಾ, ಕೊರಿಯಾ, ಅಮೆರಿಕ ಇಷ್ಟೇ ಯಾಕೆ ಕ್ಯೂಬಾದಂತಹ ದೇಶ ಕೂಡ ಭಾರತಕ್ಕಿಂತ ಹಲವು ಪಟ್ಟು ಅಧಿಕ ಪದಕಗಳನ್ನು ತನ್ನದಾಗಿಸಿಕೊಂಡಿರುತ್ತವೆ. ಭಾರತವೇನೂ ಬಯಲು ಪ್ರದೇಶವಲ್ಲ. ಇದು ಬೆಟ್ಟ, ಗುಡ್ಡ, ನದಿ, ಕಂದರಗಳ ನಾಡು. ಇಲ್ಲಿ ಪ್ರತೀ ಯುವಕನೂ ಪ್ರಕೃತಿಯೊಂದಿಗೆ ಓಡಾಡುತ್ತಾ ಬೆಳೆಯಬೇಕು. ಪ್ರಕೃತಿಯೇ ಆತನನ್ನು ಕ್ರೀಡಾಳುವಾಗಿ ಪಳಗಿಸುತ್ತದೆ. ಸರಕಾರ ಒಂದಿಷ್ಟು ಕೈಚಾಚಿದರೆ ಇಲ್ಲಿ ಕ್ರೀಡಾಳುಗಳನ್ನು ಬೆಳೆಸುವುದು ದೊಡ್ಡ ಕೆಲಸವೇನೂ ಅಲ್ಲ. ಕ್ರೀಡೆಯ ಕುರಿತಂತೆ ಈಗ ನಮ್ಮನ್ನಾಳುವವರಿಗೆ ಇರುವ ಗಾಢ ನಿರ್ಲಕ್ಷ್ಯವೇ ಇಲ್ಲಿ ಕ್ರೀಡಾಳುಗಳು ಬೆಳೆಯದೇ ಇರುವುದಕ್ಕೆ ಮುಖ್ಯ ಕಾರಣವಾಗಿದೆ. ಈ ದೇಶದ ಒಲಿಂಪಿಕ್ಸ್‌ನಲ್ಲಿ ಗುರುತಿಸಿಕೊಂಡ ಕುಸ್ತಿ ಪಟುಗಳ ಜೊತೆಗೆ ಸರಕಾರ ಹೇಗೆ ನಡೆದುಕೊಂಡಿದೆ ಎನ್ನುವುದೊಂದೇ ಸಾಕು, ಈ ದೇಶದಲ್ಲಿ ಕ್ರೀಡೆ ಯಾಕೆ ಬೆಳೆದಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಮಹಿಳಾ ಕುಸ್ತಿ ಪಟುಗಳು ಯೋಗ್ಯ ಸವಲತ್ತಿಗಾಗಿ ಅಥವಾ ಅನುದಾನಕ್ಕಾಗಿ ಸರಕಾರದ ವಿರುದ್ಧ ಬೀದಿಗಿಳಿಯಲಿಲ್ಲ. ತಮ್ಮ ಮೇಲೆ ರಾಜಕೀಯ ನಾಯಕನಿಂದ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಅವರು ಪ್ರತಿಭಟನೆ ನಡೆಸಿದರು. ಆ ರಾಜಕೀಯ ನಾಯಕ ಏಕಕಾಲದಲ್ಲಿ ಮಹಿಳೆಯರ ಮೇಲೂ, ಕ್ರೀಡೆಯ ಮೇಲೂ ಶೋಷಣೆ ನಡೆಸಿದ್ದ. ಕುಸ್ತಿಯಂತಹ ಕ್ರೀಡೆಯಲ್ಲಿ ಭಾರತದ ಮಹಿಳೆಯರು ಭಾಗವಹಿಸುವುದೇ ಸಾಧನೆ. ಅಂತಹದರಲ್ಲಿ ಅಂತರ್‌ರಾಷ್ಟ್ರೀಯ ಕಣದಲ್ಲಿ ಸಾಧನೆಗೈದ ಈ ಮಹಿಳೆಯರನ್ನು ಸಕಲ ರೀತಿಯಲ್ಲಿ ಪ್ರೋತ್ಸಾಹಿಸುವ ಬದಲು, ಅವರ ಮೇಲೆ ಸರಕಾರ ದೌರ್ಜನ್ಯ ಎಸಗಿತು. ನ್ಯಾಯ ಕೇಳಿದವರಿಗೆ ಪೊಲೀಸರ ಲಾಠಿಯ ಮೂಲಕ ಉತ್ತರಿಸಿತು. ರಾಜಕೀಯವೆನ್ನುವುದು ಈ ದೇಶದ ಕ್ರೀಡಾ ವ್ಯವಸ್ಥೆಯನ್ನು ಸುತ್ತಿಕೊಂಡ ಬಂದಣಿಕೆಯಾಗಿದೆ. ಅದನ್ನು ಕಿತ್ತು ಹಾಕುವವರೆಗೆ ಕ್ರೀಡೆಯಲ್ಲಿ ದೇಶ ಯಾವ ಸಾಧನೆಯನ್ನು ಮಾಡಲು ಸಾಧ್ಯವಿಲ್ಲ.

ಕ್ರೀಡೆಗೆ ಬಜೆಟ್‌ನಲ್ಲಿ ಅನುದಾನ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ. ಈ ಅನುದಾನ ಹಂಚಿಕೆಯಲ್ಲೂ ಸರಕಾರ ನ್ಯಾಯ ಕಾಪಾಡಿಲ್ಲ.ಯಾವ ರಾಜ್ಯಗಳಿಂದ ಹೆಚ್ಚು ಕ್ರೀಡಾಪಟುಗಳು ಹೊರಹೊಮ್ಮುತ್ತಿದ್ದಾರೆಯೋ ಆ ರಾಜ್ಯಗಳಿಗೆ ಹೆಚ್ಚಿನ ಕ್ರೀಡಾ ಸವಲತ್ತುಗಳನ್ನು, ಅನುದಾನಗಳನ್ನು ನೀಡಬೇಕು. ಆದರೆ ಕೇಂದ್ರದ ಜೊತೆಗೆ ರಾಜಕೀಯವಾಗಿ ಹತ್ತಿರವಿರುವ ರಾಜ್ಯಗಳು ಹೆಚ್ಚು ಅನುದಾನಗಳನ್ನು ಕಿತ್ತುಕೊಳ್ಳುತ್ತಿವೆ. ಕ್ರೀಡೆಗೆ ನಿಜವಾದ ಕೊಡುಗೆಗಳನ್ನು ನೀಡುವ ರಾಜ್ಯಗಳು ಸಿಕ್ಕಿದ ಅನುದಾನದಿಂದ ತೃಪ್ತಿ ಪಡಬೇಕಾದ ಸ್ಥಿತಿಯಿದೆ. ಕಳೆದ ಏಶ್ಯನ್ ಗೇಮ್ಸ್‌ನಲ್ಲಿ ಭಾರತದ ವಿವಿಧ ರಾಜ್ಯಗಳಿಂದ 655 ಕ್ರೀಡಾಳುಗಳು ಪ್ರತಿನಿಧಿಸಿದ್ದಾರೆ. ಇದರಲ್ಲಿ ಹಿಂದುಳಿದ ರಾಜ್ಯವೆಂದು ಗುರುತಿಸಲ್ಪಟ್ಟ ಹರ್ಯಾಣ ಅತ್ಯಧಿಕ 79 ಕ್ರೀಡಾಳುಗಳನ್ನು ಕಳುಹಿಸಿಕೊಟ್ಟಿದ್ದರೆ, ಮಹಾರಾಷ್ಟ್ರ 72 ಕ್ರೀಡಾಳುಗಳನ್ನು ಕಳುಹಿಸಿಕೊಟ್ಟಿದೆ. ಒಟ್ಟು 107 ಪದಕಗಳನ್ನು ಭಾರತ ತನ್ನದಾಗಿಸಿಕೊಂಡಿದೆ. ಹರ್ಯಾಣ ಮತ್ತು ಪಂಜಾಬ್ ರಾಜ್ಯಗಳು ದೇಶಕ್ಕೆ ಅತಿ ಹೆಚ್ಚು ಪದಕಗಳನ್ನು ತಂದುಕೊಟ್ಟಿವೆ. ಈ ರಾಜ್ಯಗಳನ್ನು ಸರಕಾರ ಅದೆಷ್ಟು ನಿಕೃಷ್ಟವಾಗಿ ನೋಡುತ್ತಾ ಬಂದಿದೆ ಎನ್ನುವುದನ್ನು ನಾವು ಕಂಡಿದ್ದೇವೆ. ಹರ್ಯಾಣ, ಪಂಜಾಬ್ ಕೃಷಿಕರು ಈ ದೇಶಕ್ಕೆ ಕೃಷಿ ಕ್ಷೇತ್ರದಲ್ಲಿ ಕೊಟ್ಟ ಕೊಡುಗೆಯನ್ನು ಮರೆಯುವಂತಿಲ್ಲ. ಸೇನೆಗೂ ಪಂಜಾಬ್‌ನ ಜನರ ರಕ್ತಧಾರೆಯೇ ಹರಿದಿದೆ. ಇದೀಗ ಕ್ರೀಡಾ ಕ್ಷೇತ್ರದಲ್ಲೂ ಇವರ ಸಾಧನೆ ದೇಶಕ್ಕೆ ಹೆಮ್ಮೆ ತರುವಂತಹದು.

ವಿಪರ್ಯಾಸವೆಂದರೆ, ಈ ದೇಶಕ್ಕೆ ಅತಿ ಹೆಚ್ಚು ಪದಕಗಳನ್ನು ನೀಡಿದ ಈ ರಾಜ್ಯಗಳು ಖೇಲೋ ಇಂಡಿಯಾದಿಂದ ಅತಿ ಕಡಿಮೆ ಅನುದಾನಗಳನ್ನು ಪಡೆದಿವೆ. ಹರ್ಯಾಣ 88 ಕೋಟಿ ರೂ. ಪಡೆದಿದ್ದರೆ, ಪಂಜಾಬ್ 93 ಕೋಟಿ ರೂ.ಯನ್ನಷ್ಟೇ ಪಡೆದಿದೆ. ಪದಕ ಪಡೆಯುವಲ್ಲಿ ಮೂರನೇ ಸ್ಥಾನದಲ್ಲಿರುವ ಮಹಾರಾಷ್ಟ್ರ ಪಡೆದಿರುವುದು 110 ಕೋಟಿ ರೂ. ಇದೇ ಸಂದರ್ಭದಲ್ಲಿ ಗುಜರಾತ್ ರಾಜ್ಯ ಕ್ರೀಡೆಯನ್ನು ಬೆಳೆಸುವುದಕ್ಕಾಗಿ 608 ಕೋಟಿ ರೂ. ಪಡೆದಿದೆ. ಇಷ್ಟೂ ಹಣವನ್ನು ತನ್ನದಾಗಿಸಿಕೊಂಡಿರುವ ಗುಜರಾತ್ ರಾಜ್ಯದ ಕ್ರೀಡಾಳುಗಳು ಒಂದೇ ಒಂದು ಪದಕವನ್ನು ಪಡೆದುಕೊಂಡಿಲ್ಲ. ಉತ್ತರ ಪ್ರದೇಶ 503 ಕೋಟಿ ರೂ. ಅನುದಾನವನ್ನು ಕಿತ್ತುಕೊಂಡಿದೆ. ಇದು ಪಡೆದುಕೊಂಡ 21 ಪದಕಗಳು ಹರ್ಯಾಣ, ಪಂಜಾಬ್‌ನ ಮುಂದೆ ಏನೂ ಅಲ್ಲ. ಕ್ರೀಡಾ ಕ್ಷೇತ್ರಕ್ಕೆ ಇಷ್ಟೊಂದು ಅನುದಾನವನ್ನು ಗುಜರಾತ್ ಯಾವ ಮಾನದಂಡದಲ್ಲಿ ಕೇಂದ್ರ ಸರಕಾರದಿಂದ ತನ್ನದಾಗಿಸಿಕೊಂಡಿತು? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಕಷ್ಟವೇನೂ ಇಲ್ಲ. ಕ್ರೀಡಾ ಪ್ರತಿಭೆಗಳನ್ನು ಮುಂದಿಟ್ಟುಕೊಂಡು ಅನುದಾನ ವಿತರಣೆಯಾಗದೇ, ಆ ರಾಜ್ಯದಿಂದ ಕೇಂದ್ರದಲ್ಲಿ ಪ್ರತಿನಿಧಿಸುತ್ತಿರುವ ನಾಯಕರನ್ನು ಮುಂದಿಟ್ಟು ಹಣ ಹಂಚಲಾಗಿದೆ. ಇಷ್ಟೂ ಹಣವನ್ನು ಪಡೆದ ಗುಜರಾತ್ ಒಂದು ಪದಕವನ್ನು ಪಡೆಯುವುದಕ್ಕೂ ವಿಫಲವಾಗಿದ್ದು ಹೇಗೆ ಎನ್ನುವುದು ತನಿಖೆಗೆ ಅರ್ಹವಾಗಿರುವ ಪ್ರಶ್ನೆ.

ಹಸಿವು, ಅಪೌಷ್ಟಿಕತೆಗಾಗಿ ಭಾರತ ವಿಶ್ವದಲ್ಲೇ ಕುಖ್ಯಾತಿಗೊಳಗಾಗಿದೆ. ಅತ್ಲೆಟಿಕ್‌ಗಳಲ್ಲಿ ಸಾಧನೆ ಮಾಡುವ ಬಹುತೇಕರು ಗ್ರಾಮೀಣ ಪ್ರದೇಶದ ಮಧ್ಯಮವರ್ಗದಿಂದ ಬಂದ ಯುವಕರು. ಬಾಲ್ಯದಲ್ಲೇ ಅಪೌಷ್ಟಿಕತೆ, ಹಸಿವಿನಿಂದ ನರಳುತ್ತಾ ಬೆಳೆದವರು. ಗಿಡವಾಗಿರುವಾಗ ಯೋಗ್ಯ ಗೊಬ್ಬರ ದೊರಕದೇ ಬೆಳೆದ ಈ ಮರಗಳಿಂದ ಪದಕಗಳ ಹಣ್ಣುಗಳನ್ನು ಕೊಯ್ಯಲು ಭಾರತ ಯತ್ನಿಸುತ್ತಿದೆ. ಎಳವೆಯಲ್ಲೇ ಪ್ರತಿಭೆಗಳನ್ನು ಗುರುತಿಸಿ ಅವುಗಳನ್ನು ಪೋಷಿಸದೆ ಬರೇ ಪ್ರಧಾನಿ ಮೋದಿಯವರ ‘ಅಂತರ್‌ರಾಷ್ಟ್ರೀಯ ಯೋಗ’ ಪ್ರಹಸನದಿಂದ ಪದಕಗಳನ್ನು ಆಕಾಶದಿಂದ ಉದುರಿಸಲು ಸಾಧ್ಯವಿಲ್ಲ ಎನ್ನುವ ವಾಸ್ತವವನ್ನು ಭಾರತ ಇನ್ನಾದರೂ ಒಪ್ಪಿಕೊಳ್ಳಬೇಕಾಗಿದೆ. ಕ್ರೀಡೆಯನ್ನು ಸುತ್ತಿಕೊಂಡಿರುವ ರಾಜಕೀಯ ಬಂದಣಿಕೆಯನ್ನು ಕತ್ತರಿಸಿ, ಆ ಕ್ಷೇತ್ರವನ್ನು ಗಾಳಿ, ಬೆಳಕಿಗೆ ಮುಕ್ತವಾಗಿಸುವುದಕ್ಕೆ ಇದು ಯೋಗ್ಯ ಸಮಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News