ಚುನಾವಣಾ ಆಯೋಗದೊಳಗೆ ಕೇಂದ್ರ ಸರಕಾರದ ಹಸ್ತಕ್ಷೇಪ

Update: 2023-08-12 04:45 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

2024ರಲ್ಲಿ ನಡೆಯುವ ಮಹಾಚುನಾವಣೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಭರ್ಜರಿ ಸಿದ್ಧತೆಯನ್ನು ಮಾಡುತ್ತಿದೆ. ಈಗಾಗಲೇ ಎಲ್ಲ ತನಿಖಾ ಸಂಸ್ಥೆಗಳ ಸೂತ್ರಗಳನ್ನು ಕೈಗೆ ತೆಗೆದು ಕೊಂಡು ಅವುಗಳನ್ನು ತನ್ನ ರಾಜಕೀಯ ವಿರೋಧಿಗಳ ವಿರುದ್ಧ ಬಳಸುತ್ತಾ ಬಂದಿರುವ ಸರಕಾರ ಇದೀಗ ಅಂತಿಮವಾಗಿ ಚುನಾವಣಾ ಆಯೋಗವನ್ನೇ ಆಪೋಶನ ತೆಗೆದುಕೊಳ್ಳಲು ಮುಂದಾಗಿದೆ. ಆ ನಿಟ್ಟಿನಲ್ಲಿ ಮಸೂದೆಯೊಂದನ್ನು ಸಂಸತ್ತಿನಲ್ಲಿ ಮಂಡಿಸಲು ಮುಂದಾಗಿದೆ. ಈ ಮಸೂದೆಯ ಪ್ರಕಾರ ಮುಖ್ಯ ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಅಧಿಕಾರವನ್ನು ಆಡಳಿತ ಪಕ್ಷವೇ ತನ್ನದಾಗಿಸಿಕೊಳ್ಳುತ್ತದೆ. ಇದು ಭವಿಷ್ಯದ ಚುನಾವಣೆಗಳ ಮೇಲೆ ಕೇಂದ್ರ ಸರಕಾರ ನಡೆಸಿರುವ ನೇರ ಹಸ್ತಕ್ಷೇಪವಾಗಿದೆ. ಈಗಾಗಲೇ ಆಡಳಿತ ಪಕ್ಷದ ಮೂಗಿನ ನೇರಕ್ಕೆ ಚುನಾವಣಾ ಆಯೋಗ ಕಾರ್ಯನಿರ್ವಹಿಸುತ್ತಿದೆ ಎನ್ನುವ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಇವುಗಳ ನಡುವೆಯೇ ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿಯ ಅಧಿಕಾರವನ್ನು ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಕೇಂದ್ರ ಸರಕಾರ ಹೊರಟಿದೆ. ಈ ಮಸೂದೆ ಅಂಗೀಕರಿಸಲ್ಪಟ್ಟರೆ ಮುಂದಿನ ದಿನಗಳಲ್ಲಿ ಚುನಾವಣಾ ಆಯೋಗವೆನ್ನುವುದು ಸರಕಾರದ ಒಂದು ಅಂಗಸಂಸ್ಥೆಯಾಗಿಯಷ್ಟೇ ಕೆಲಸ ಮಾಡಲಿದ್ದು, ಆಯೋಗದ ಹೆಸರಿನಲ್ಲಿ ಸರಕಾರವೇ ಚುನಾವಣೆಯನ್ನು ಮುನ್ನಡೆಸಲಿದೆ. ವಿಶ್ವಾಸಾರ್ಹ, ಪಾರದರ್ಶಕ ಚುನಾವಣೆಯ ಮೇಲಿನ ನಂಬಿಕೆ ಜನರಲ್ಲಿ ಇನ್ನಷ್ಟು ಕಡಿಮೆಯಾಗುವುದಕ್ಕೆ ಈ ಮಸೂದೆ ಕಾರಣವಾಗುತ್ತದೆ.

ಈ ಹಿಂದೆ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರುಗಳನ್ನು ಸರಕಾರದ ಶಿಫಾರಸಿನಂತೆ ರಾಷ್ಟ್ರಪತಿ ನೇಮಿಸುತ್ತಿದ್ದರು. ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕಾಗಿ ಈವರೆಗೆ ಯಾವುದೇ ಕಾನೂನುಗಳನ್ನು ರೂಪಿಸಿಲ್ಲ. ಇರುವ ಕಾಯ್ದೆಗಳು ಆಯುಕ್ತರ ಕರ್ತವ್ಯಗಳ ಬಗ್ಗೆ ಬೆಳಕುಚೆಲ್ಲುತ್ತವೆ. ಹಿರಿತನದ ಆಧಾರದಲ್ಲಿ ಈವರೆಗೆ ಮುಖ್ಯ ಚುನಾವಣಾ ಆಯುಕ್ತರನ್ನು ನೇಮಕ ಮಾಡಿಕೊಂಡು ಬರಲಾಗಿತ್ತು. ಇದು ಕೆಲವೊಮ್ಮೆ ರಾಜಕೀಯ ತಿಕ್ಕಾಟಗಳಿಗೆ ಕಾರಣವಾಗಿ ಬಿಡುತ್ತಿತ್ತು. ನಿಷ್ಠುರ ವ್ಯಕ್ತಿತ್ವದ ಆಯುಕ್ತರು ಮುಖ್ಯ ಆಯುಕ್ತ ಸ್ಥಾನಕ್ಕೆ ಅರ್ಹರಾದಾಗ ಅವರನ್ನು ಆ ಸ್ಥಾನ ಏರದಂತೆ ತಡೆಯಲು ರಾಜಕೀಯ ನಾಯಕರು ಗರಿಷ್ಠ ಪ್ರಯತ್ನ ನಡೆಸುತ್ತಿದ್ದರು. ೨೦೨೨ರಲ್ಲಿ ಅರುಣ್ ಗೋಯಲ್ ಅವರನ್ನು ಮುಖ್ಯ ಚುನಾವಣಾಯುಕ್ತರನ್ನಾಗಿ ನೇಮಕ ಮಾಡಿದಾಗ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. ಆಗ ಸುಪ್ರೀಂಕೋರ್ಟ್ ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ಕಾನೂನೊಂದರ ಅಗತ್ಯವನ್ನು ಎತ್ತಿ ಹಿಡಿದಿತ್ತು. ಇದೇ ಸಂದರ್ಭದಲ್ಲಿ ನೂತನ ಕಾನೂನು ಜಾರಿಯಾಗುವವರೆಗೆ, ಪ್ರಧಾನಿ ನೇತೃತ್ವದಲ್ಲಿ ಮೂವರು ಸದಸ್ಯರ ಆಯ್ಕೆ ಸಮಿತಿಯನ್ನು ರಚಿಸಲು ಹೇಳಿತು. ಈ ಆಯ್ಕೆ ಸಮಿತಿಯಲ್ಲಿ ಪ್ರಧಾನಿ, ಲೋಕಸಭೆಯ ಪ್ರತಿಪಕ್ಷ ನಾಯಕ ಮತ್ತು ಸುಪ್ರೀಂಕೋರ್ಟ್ ನ್ಯಾಯಾಧೀಶರಿರಬೇಕು ಎಂದು ಸೂಚಿಸಿತ್ತು. ಒಂದು ರೀತಿಯಲ್ಲಿ ಆಯ್ಕೆಯ ವಿಶ್ವಾಸಾರ್ಹತೆಯನ್ನು ಈ ಸಮಿತಿ ಎತ್ತಿ ಹಿಡಿಯುತ್ತದೆ. ಕಾರ್ಯಾಂಗ, ಶಾಸಕಾಂಗ ದಾರಿ ತಪ್ಪಿದಾಗ ಮಾರ್ಗದರ್ಶಿಯಾಗಿ ಕೆಲಸ ಮಾಡುವ ನ್ಯಾಯಾಂಗದ ಅತ್ಯುನ್ನತ ವ್ಯಕ್ತಿಯೊಬ್ಬ ಈ ಸಮಿತಿಯಲ್ಲಿರುವುದರಿಂದ ಮುಖ್ಯ ಚುನಾವಣಾ ಆಯುಕ್ತರ ಆಯ್ಕೆ ರಾಜಕೀಯವಾಗುವುದನ್ನು ತಪ್ಪಿಸುತ್ತದೆ. ದುರದೃಷ್ಟವಶಾತ್ ಈಗ ಸರಕಾರ ಮಂಡಿಸಲು ಮುಂದಾಗಿರುವ ಮಸೂದೆಯಲ್ಲಿ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರನ್ನು ಹೊರಗಿಡಲಾಗಿದೆ. ಅವರ ಬದಲಿಗೆ ಕೇಂದ್ರದ ಪ್ರಧಾನಿ ನೇಮಿಸುವ ಸಂಪುಟ ದರ್ಜೆಯ ಸಚಿವರೊಬ್ಬರನ್ನು ಸೇರ್ಪಡೆಗೊಳಿಸಲಾಗಿದೆ. ಆ ಮೂಲಕ ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಸಂಪೂರ್ಣ ಅಧಿಕಾರವನ್ನು ಶಾಸಕಾಂಗ ತನ್ನಲ್ಲೇ ಉಳಿಸಿಕೊಂಡಂತಾಗಿದೆ.

ಸುಪ್ರೀಂಕೋರ್ಟ್ ಸೂಚಿಸಿದ ಸಮಿತಿಯಲ್ಲಿ ಬಹುಮತಕ್ಕೆ ಆದ್ಯತೆಯಿತ್ತು. ಅದರಲ್ಲಿ ಇಬ್ಬರು ಸರಕಾರದ ಭಾಗವಾಗಿದ್ದರೂ ವಿರೋಧ ಪಕ್ಷದ ನಾಯಕರು ಪ್ರಧಾನಿಯ ಮೂಗಿನ ನೇರಕ್ಕೆ ನಡೆಯುವ ಆಯ್ಕೆಗೆ ಸಹಮತ ಹೊಂದುವ ಸಾಧ್ಯತೆಗಳು ಕಡಿಮೆಯಿತ್ತು. ಇಂತಹ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರ ಮತ ನಿರ್ಣಾಯಕವಾಗಿ ಬಿಡುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರ ಆಯ್ಕೆಯಲ್ಲೂ ಕೇಂದ್ರ ಸರಕಾರ ಮೂಗು ತೂರಿಸುತ್ತಿದೆ. ಸುಪ್ರೀಂಕೋರ್ಟ್ ನ್ಯಾಯಾಧೀಶರು ಪ್ರಧಾನಿ ಹೇಳಿದಂತೆ ಕುಣಿಯುತ್ತಿದ್ದಾರೆ ಎನ್ನುವ ಆರೋಪಗಳಿವೆ. ನಿವೃತ್ತರಾದ ಬಳಿಕ ರಾಜ್ಯಸಭೆಯಲ್ಲಿ ಸ್ಥಾನ ಬಯಸುವವರು, ರಾಜ್ಯಪಾಲರಾಗಿ ಆಯ್ಕೆಯಾಗ ಬಯಸುವವರ ಸಂಖ್ಯೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರು ಪ್ರಧಾನಿಯ ಆಯ್ಕೆಯ ಜೊತೆ ನಿಲ್ಲುವ ಸಾಧ್ಯತೆಗಳೇ ಹೆಚ್ಚಿದ್ದರೂ, ಮುಖ್ಯ ಚುನಾವಣಾ ಆಯುಕ್ತರ ಆಯ್ಕೆಯಲ್ಲಿ ನ್ಯಾಯಾಂಗವೂ ಪಾಲುಗೊಳ್ಳುವುದರಿಂದ ಆ ಸ್ಥಾನದ ವಿಶ್ವಾಸಾರ್ಹತೆ ಹೆಚ್ಚುತ್ತಿತ್ತು. ಈಗ ಸರಕಾರ ಮಂಡಿಸುವ ಮಸೂದೆಯು, ಸುಪ್ರೀಂಕೋರ್ಟ್ ನ್ಯಾಯಾಧೀಶರ ಸ್ಥಾನದಲ್ಲಿ ಪ್ರಧಾನಿ ಆಯ್ಕೆ ಮಾಡುವ ಸಂಪುಟ ದರ್ಜೆಯ ಸ್ಥಾನಮಾನವಿರುವ ಸಚಿವನನ್ನು ತಂದು ಕೂರಿಸಿದೆ. ಒಂದೆಡೆ ನ್ಯಾಯಾಂಗದ ಪ್ರತಿನಿಧಿಯನ್ನು ಹೊರಗಿಟ್ಟಿದ್ದೇ ಅಲ್ಲದೆ, ಅವರಿಗೆ ಬದಲು ಪ್ರಧಾನಿ ತನ್ನ ಸರಕಾರದ ಭಾಗವಾಗಿರುವ ಇನ್ನೊಬ್ಬ ಕಿರಿಯನನ್ನು ಸೇರಿಸಿದ್ದಾರೆ. ಈ ಮೂಲಕ ವಿಪಕ್ಷ ನಾಯಕರ ಆಯ್ಕೆಗೆ ಯಾವುದೇ ಬೆಲೆಯಿಲ್ಲದಂತಾಯಿತು. ಒಂದು ರೀತಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರ ಆಯ್ಕೆಯ ಅಧಿಕಾರವನ್ನು ಪ್ರಧಾನಿ ತನ್ನಲ್ಲಿ ಉಳಿಸಿಕೊಳ್ಳಲು ಮುಂದಾಗಿದ್ದಾರೆ.

ಚುನಾವಣಾ ಆಯೋಗದ ಅಧಿಕಾರವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡು ರಾಜಕೀಯ ನಾಯಕರ ನಿದ್ದೆ ಗೆಡಿಸಿದವರು ಟಿ.ಎನ್. ಶೇಷನ್. ಆವರೆಗೆ ಆಡಳಿತ ಪಕ್ಷದ ಸೂತ್ರದಂತೆ ಗೊಂಬೆಯಂತೆ ವರ್ತಿಸುತ್ತಾ ಬಂದಿದ್ದ ಆಯೋಗ ಒಂದು ಸ್ವತಂತ್ರ ಆಯೋಗದ ರೂಪದಲ್ಲಿ ಕೆಲಸ ಮಾಡತೊಡಗಿತು. ದೇಶದ ಜನರು ಮುಖ್ಯ ಚುನಾವಣಾ ಆಯುಕ್ತರ ಆಯ್ಕೆಯ ಬಗ್ಗೆ ಕುತೂಹಲ ತೋರಿಸತೊಡಗಿದ್ದು ಆ ಬಳಿಕ. ಆದರೆ ಆಳುವವರಿಗೆ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಬೇಕಾದರೆ ಚುನಾವಣಾ ಆಯೋಗ ತನ್ನ ನಿಯಂತ್ರಣದಲ್ಲಿರಲೇಬೇಕು. ಆದುದರಿಂದ, ಮುಖ್ಯ ಚುನಾವಣಾ ಆಯುಕ್ತರ ಆಯ್ಕೆಯ ಸಂದರ್ಭದಲ್ಲಿ ಸರಕಾರ ಮೂಗು ತೂರಿಸತೊಡಗಿತು. ಇದು ಹಲವು ಸಂದರ್ಭದಲ್ಲಿ ತಿಕ್ಕಾಟಕ್ಕೆ ಕಾರಣವಾಯಿತು. ಅರ್ಹವಾಗಿ ಆಯ್ಕೆಯಾಗಬೇಕಾಗಿದ್ದ ಆಯುಕ್ತರು ಈ ಬಗ್ಗೆ ಸ್ಪಷ್ಟ ಧ್ವನಿಯಲ್ಲಿ ಮಾತನಾಡುವುದಕ್ಕೆ ಆರಂಭಿಸಿದರು. ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ಬೆಂಬಲದೊಂದಿಗೆ ಚುನಾವಣೆಯಲ್ಲಿ ಆಯ್ಕೆಯಾದ ಸರಕಾರಗಳನ್ನು ಉರುಳಿಸುವ ಪ್ರಯತ್ನಗಳು ನಡೆಯುತ್ತಿವೆ. ‘ಆಪರೇಷನ್ ಕಮಲ’ದ ಬಗ್ಗೆ ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ನೀಡಿದರೂ ಪ್ರಯೋಜನ ಆಗುತ್ತಿಲ್ಲ. ಚುನಾವಣಾ ಆಯೋಗದ ಈ ಪಕ್ಷಪಾತಿ ಧೋರಣೆಯ ವಿರುದ್ಧ ಇತ್ತೀಚೆಗೆ ಶಿವಸೇನೆ ನಾಯಕ ಉದ್ಧವ್ ಠಾಕ್ರೆಯವರು ತೀವ್ರವಾಗಿ ಕಿಡಿಕಾರಿದ್ದರು. ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಯಲ್ಲಿ ಚುನಾವಣಾ ಆಯೋಗ ಬಿಜೆಪಿಯ ಜೊತೆಗೆ ಬಹಿರಂಗವಾಗಿ ನಿಂತಿದೆ ಎಂದು ಆರೋಪಿಸಿದ್ದ ಠಾಕ್ರೆ ‘‘ಚುನಾವಣಾ ಆಯೋಗವನ್ನು ವಿಸರ್ಜಿಸಿ’’ ಎಂದು ಆಗ್ರಹಿಸಿದ್ದರು. ಇದೀಗ ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಅಧಿಕಾರವನ್ನು ಕೇಂದ್ರ ಸರಕಾರ ತನ್ನ ಕೈಗೆ ತೆಗೆದುಕೊಂಡರೆ, ಆಯೋಗ ಪೂರ್ಣ ಪ್ರಮಾಣದಲ್ಲಿ ಕೇಂದ್ರ ಸರಕಾರ ಹೇಳಿದಂತೆ ಕಾರ್ಯನಿರ್ವಹಿಸುವ ಒಂದು ಉಪಅಂಗವಾಗಿಯಷ್ಟೇ ಉಳಿಯುತ್ತದೆ. ಚುನವಾಣಾ ಆಯೋಗವನ್ನು ವಿಸರ್ಜಿಸುವ ಅಗತ್ಯವೂ ಆಗ ಉಳಿಯುವುದಿಲ್ಲ. ಮುಂದಿನ ದಿನಗಳಲ್ಲಿ ಇದು ಚುನಾವಣೆಗಳ ಮೇಲೆ ಹಸ್ತಕ್ಷೇಪ ನಡೆಸಲು ಕೇಂದ್ರ ಸರಕಾರಕ್ಕೆ ನೇರ ಅವಕಾಶ ಮಾಡಿಕೊಡುವುದರಲ್ಲಿ ಯಾವ ಸಂಶಯವೂ ಇಲ್ಲ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News