ಇಂಟರ್‌ನೆಟ್ ಸ್ಥಗಿತ: ಅಭಿವ್ಯಕ್ತಿಯ ದಮನವಲ್ಲವೆ?

Update: 2024-05-17 05:30 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ನರೇಂದ್ರ ಮೋದಿಯವರು ಈ ದೇಶದ ಚುಕ್ಕಾಣಿಯನ್ನು ಕೈಗೆತ್ತಿಕೊಂಡ ದಿನಗಳಲ್ಲಿ ಈ ದೇಶ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಹಸಿವು, ನಿರುದ್ಯೋಗ, ಹಿಂಸಾಚಾರ, ಕೋಮುಗಲಭೆ, ಕೊರೋನ ಸಾವು ನೋವು ಹೀಗೆ ಹಲವು ವಿಷಯಗಳಲ್ಲಿ ಭಾರತ ವಿಶ್ವದಲ್ಲಿ ನಂ.1 ಆಗಿ ಗುರುತಿಸಿಕೊಂಡಿದೆ. ಇದೀಗ 2023ರಲ್ಲಿ ಸತತ ಆರನೇ ವರ್ಷವೂ ಸರಕಾರಿ ಪ್ರಾಯೋಜಿತ ಇಂಟರ್‌ನೆಟ್ ಸ್ಥಗಿತದಲ್ಲಿ ಭಾರತವು ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದೆ ಎನ್ನುವುದನ್ನು ಡಿಜಿಟಲ್ ಹಕ್ಕುಗಳು ಮತ್ತು ಖಾಸಗಿತನವನ್ನು ಎತ್ತಿ ಹಿಡಿಯುವ ಸಂಘಟನೆ ‘ಎಕ್ಸೆಸ್ ನೌ’ ಹೇಳಿದೆ. ಒಂದೆಡೆ ಭಾರತವನ್ನು ಡಿಜಿಟಲ್ ಯುಗಕ್ಕೆ ಕೊಂಡೊಯ್ದಿದ್ದೇನೆ ಎಂದು ಸಾರ್ವಜನಿಕವಾಗಿ ಕೊಚ್ಚಿಕೊಳ್ಳುವ ನರೇಂದ್ರ ಮೋದಿಯವರು, ಮಗದೊಂದೆಡೆ ಡಿಜಿಟಲ್ ಹಕ್ಕುಗಳ ಮೇಲೆ ನಿರಂತರ ದಾಳಿ ನಡೆಸುತ್ತಾ ಬಂದ ‘ಸರ್ವಾಧಿಕಾರಿ’ಯಾಗಿ ವಿಶ್ವದಲ್ಲೇ ಗುರುತಿಸಿಕೊಳ್ಳುತ್ತಿದ್ದಾರೆ. ಇಂಟರ್‌ನೆಟ್ ನಿಲುಗಡೆ ಮಾಡುವಂತೆ ಭಾರತ ಸರಕಾರವು 2023ರಲ್ಲಿ 116 ಬಾರಿ ಆದೇಶಗಳನ್ನು ನೀಡಿದೆ ಎಂದು ವರದಿ ಹೇಳುತ್ತಿದೆ. ಇಡೀ ವಿಶ್ವದಲ್ಲಿ 2023ರಲ್ಲಿ 283 ಬಾರಿ ಇಂಟರ್‌ನೆಟ್ ಸ್ಥಗಿತಗೊಂಡಿದ್ದರೆ, ಭಾರತವೊಂದರಲ್ಲೇ 116 ಬಾರಿ ಸ್ಥಗಿತಗೊಂಡಿದೆ ಎನ್ನುವುದು ಅಧ್ಯಯನದಿಂದ ಬೆಳಕಿಗೆ ಬಂದಿದೆ. ಭಾರತದಲ್ಲಿ ಅಧಿಕ ಬಾರಿ ಇಂಟರ್‌ನೆಟ್ ಸ್ಥಗಿತಗೊಂಡಿರುವುದು ಕೋಮು ಹಿಂಸಾಚಾರದ ಹಿನ್ನೆಲೆಯಲ್ಲಿ. ಮಣಿಪುರ ಮತ್ತು ಕಾಶ್ಮೀರ ಕಳೆದ ವರ್ಷ ಅತಿ ಹೆಚ್ಚು ಇಂಟರ್‌ನೆಟ್ ಸ್ಥಗಿತಕ್ಕೆ ಬಲಿಯಾದ ರಾಜ್ಯಗಳಾಗಿದ್ದವು. 2023ರ ಮೇ ಮತ್ತು ಡಿಸೆಂಬರ್ ನಡುವಿನ ಅವಧಿಯಲ್ಲಿ ಮಣಿಪುರದ ಸುಮಾರು 32 ಲಕ್ಷ ಜನರು 212 ದಿನಗಳ ಕಾಲ ಇಂಟರ್‌ನೆಟ್ ಇಲ್ಲದೆ ಬಳಲಿದ್ದರು ಎನ್ನುವುದನ್ನು ವರದಿ ಹೇಳುತ್ತಿದೆ. ಆ ಕಾಲಘಟ್ಟದಲ್ಲಿ ಮಣಿಪುರದಲ್ಲಿ ಏನೇನೆಲ್ಲ ಅನ್ಯಾಯಗಳು ನಡೆದವು ಎನ್ನುವುದು ಜಗತ್ತಿಗೇ ಗೊತ್ತಿದೆ.

ಯಾವುದೇ ಪತ್ರಿಕೆಗಳಿಗೆ ಅಥವಾ ಟಿವಿ ಚಾನೆಲ್‌ಗಳಿಗೆ ನಿಷೇಧವನ್ನು ವಿಧಿಸಿದರೆ ಅದು ವಿಶ್ವಾದ್ಯಂತ ಸುದ್ದಿಯಾಗುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣದ ಭಾಗವಾಗಿ ಅದನ್ನು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಲಾಗುತ್ತದೆ. ಸರಕಾರವನ್ನು ಟೀಕಿಸಲಾಗುತ್ತದೆ. ಆದರೆ ಇಂಟರ್‌ನೆಟ್ ಸ್ಥಗಿತವನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡು ಟೀಕೆ, ಚರ್ಚೆಗಳು ನಡೆಯುವುದಿಲ್ಲ. ಆಧುನಿಕ ದಿನಗಳಲ್ಲಿ ಡಿಜಿಟಲ್ ಮಾಧ್ಯಮಗಳು ಪರ್ಯಾಯ ಮಾಧ್ಯಮವಾಗಿ, ಜನಮಾಧ್ಯಮವಾಗಿ ಕೆಲಸ ಮಾಡುತ್ತಿದೆ. ಇಂದು ಮುದ್ರಣ ಮತ್ತು ಟಿವಿ ಮಾಧ್ಯಮಗಳು ಇದರ ವೇಗದ ಮುಂದೆ ಮಂಕಾಗುತ್ತಿವೆ. ಯಾವುದೇ ಟಿವಿ ವಾಹಿನಿಗಳು ಸುದ್ದಿ ನೀಡುವ ಮುನ್ನವೇ ಡಿಜಿಟಲ್ ಮಾಧ್ಯಮಗಳ ಮೂಲಕ ಜನಸಾಮಾನ್ಯರು ತಳಸ್ತರದ ಸುದ್ದಿಗಳನ್ನು ವಿಶ್ವಾದ್ಯಂತ ತಲುಪಿಸುತ್ತಾರೆ. ಜನರಿಂದ ಜನರಿಗಾಗಿ ಈ ಮಾಧ್ಯಮ ಬೆಳೆದಿದೆ. ಮುದ್ರಣ ಮಾಧ್ಯಮಗಳನ್ನು, ಟಿವಿ ವಾಹಿನಿಗಳನ್ನು ತನ್ನ ರಾಜಕೀಯ ಬಲ ಮತ್ತು ಧನಬಲದಿಂದ ಕೊಂಡುಕೊಂಡಿರುವ ಸರಕಾರಕ್ಕೆ ಜನಸಾಮಾನ್ಯರ ಡಿಜಿಟಲ್ ಮಾಧ್ಯಮಗಳ ಮೇಲೆ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣವನ್ನು ಸಾಧಿಸಲು ಸಾಧ್ಯವಾಗಿಲ್ಲ. ಇಂಟರ್‌ನೆಟ್ ಸ್ಥಗಿತವೆಂದರೆ ಪರೋಕ್ಷವಾಗಿ ಪರ್ಯಾಯ ಮಾಧ್ಯಮವಾಗಿ ಕೆಲಸ ಮಾಡುತ್ತಿರುವ ಜನಸಾಮಾನ್ಯರ ಧ್ವನಿಯನ್ನು ಅಡಗಿಸುವುದೆಂದೇ ಅರ್ಥ. ಅಭಿವ್ಯಕ್ತಿ ಸ್ವಾತಂತ್ರ್ಯ ದಮನದ ಇನ್ನೊಂದು ಮುಖ ಇದಾಗಿದೆ. ಆದುದರಿಂದಲೇ ಭಾರತ ಸತತ 6 ನೇ ವರ್ಷವೂ ಇಂಟರ್‌ನೆಟ್ ಸ್ಥಗಿತದಲ್ಲಿ ನಂ. 1 ಆಗಿರುವುದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ.

ಇಂಟರ್‌ನೆಟ್ ಸ್ಥಗಿತ ಮತ್ತು ಕೋಮು ಉದ್ವಿಗ್ನತೆ ಇವೆರಡೂ ಒಂದನ್ನೊಂದು ಅವಲಂಬಿಸಿಕೊಂಡಿವೆ. ಭಾರತ ಯಾವಾಗೆಲ್ಲ ಇಂಟರ್‌ನೆಟ್ ಸ್ಥಗಿತದ ಕಾರಣಕ್ಕೆ ನಂ.1 ಸ್ಥಾನವನ್ನು ಪಡೆದುಕೊಂಡಿದೆಯೋ ಅದರ ಜೊತೆಗೇ ಗಲಭೆ, ಹಿಂಸಾಚಾರಗಳಿಗಾಗಿಯೂ ಸುದ್ದಿಯಾಗಿದೆ. ಕಾನೂನು ಸುವ್ಯವಸ್ಥೆಯಲ್ಲಿ ಭಾರತದ ವೈಫಲ್ಯಗಳನ್ನು ಇಂಟರ್‌ನೆಟ್ ಸ್ಥಗಿತ ಎತ್ತಿ ಹಿಡಿಯುತ್ತದೆ. ವಿಪರ್ಯಾಸವೆಂದರೆ, ಕಾನೂನು ಸುವ್ಯವಸ್ಥೆಯನ್ನು ಮರುಸ್ಥಾಪಿಸುವ ಹೆಸರಿನಲ್ಲೇ ಸರಕಾರ ಪ್ರತಿಬಾರಿ ಇಂಟರ್‌ನೆಟ್ ಸ್ಥಗಿತವನ್ನು ಜನರ ಮೇಲೆ ಹೇರುತ್ತಾ ಬಂದಿದೆ. ಇಂಟರ್‌ನೆಟ್ ಸ್ಥಗಿತಕ್ಕೆ ಸರಕಾರ ನೀಡುವ ಮೊತ್ತ ಮೊದಲ ಕಾರಣ, ಡಿಜಿಟಲ್ ಮಾಧ್ಯಮಗಳ ಮೂಲಕ ವದಂತಿಗಳು ಬೆಂಕಿಯಂತೆ ಇತರೆಡೆಗೆ ಹರಡುತ್ತವೆ ಎನ್ನುವುದು. ಆದರೆ ಇಂದಿನ ದಿನಗಳಲ್ಲಿ ಕೋಮುಗಲಭೆಗಳನ್ನು ಹರಡುವಲ್ಲಿ ಡಿಜಿಟಲ್ ಮಾಧ್ಯಮಗಳಿಗಿಂತ ಸರಕಾರದ ಜೀತ ಮಾಡುತ್ತಿರುವ ಮುದ್ರಣ ಮಾಧ್ಯಮಗಳು ಮತ್ತು ಟಿವಿ ಮಾಧ್ಯಮಗಳೇ ಅಗ್ರಸ್ಥಾನದಲ್ಲಿವೆ. ಯಾವುದೇ ಗಲಭೆಗಳ ಸಂದರ್ಭದಲ್ಲಿ ಇಂಟರ್‌ನೆಟ್ ಸ್ಥಗಿತ ಮಾಡುವ ಮೂಲಕ ಜನರ ನಡುವಿನ ಸಂಪರ್ಕವನ್ನು ಸಂಪೂರ್ಣ ಕಡಿತಗೊಳಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಸರಕಾರ ಮುದ್ರಣ ಮಾಧ್ಯಮ ಮತ್ತು ಟಿವಿ ಮಾಧ್ಯಮಗಳಲ್ಲಿ ಯಾವ ಸುದ್ದಿ ಪ್ರಕಟವಾಗಬೇಕು, ಪ್ರಕಟವಾಗಬಾರದು ಎನ್ನುವುದನ್ನು ನಿರ್ಧರಿಸುತ್ತದೆ. ಮಣಿಪುರದ ಹಿಂಸಾಚಾರದಲ್ಲಿ ಇಂಟರ್‌ನೆಟ್ ಸ್ಥಗಿತದ ಪರಿಣಾಮಗಳು ವ್ಯಾಪಕವಾಗಿವೆ. ಮಣಿಪುರವನ್ನು ಇಂಟರ್‌ನೆಟ್ ನಿಲುಗಡೆಯ ಮೂಲಕ ಹೊರ ರಾಜ್ಯಗಳ ಸಂಪರ್ಕದಿಂದ ಸಂಪೂರ್ಣ ದೂರ ಇಡಲಾಯಿತು. ಇದರ ಪ್ರಯೋಜನವನ್ನು ದುಷ್ಕರ್ಮಿಗಳು ತನ್ನದಾಗಿಸಿಕೊಂಡರು.

2023ರ ಮೇ ತಿಂಗಳಲ್ಲಿ ಇಡೀ ಮಣಿಪುರ ಹೇಗೆ ಹೊತ್ತಿ ಉರಿಯಿತು ಎನ್ನುವುದನ್ನು ನಾವು ನೋಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರು ಇತ್ತ ಕರ್ನಾಟಕ ವಿಧಾನಸಭಾ ಚುನಾವಣೆಯ ರ್ಯಾಲಿಯಲ್ಲಿ ಭಾಗವಹಿಸಿ ಸಮಯ ಕಳೆಯುತ್ತಿರುವಾಗ ಅತ್ತ ಮಣಿಪುರ ಹಿಂಸಾಚಾರದಿಂದ ತತ್ತರಿಸಿ ಜಗತ್ತಿನ ನೆರವಿಗಾಗಿ ಮೊರೆಯಿಡುತ್ತಿತ್ತು. ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿರುವುದಲ್ಲದೆ, ಅವರ ಮೇಲೆ ಸಾಮೂಹಿಕ ಅತ್ಯಾಚಾರಗಳು ಜರುಗಿರುವುದು ಇದೇ ಹೊತ್ತಿಗೆ. ಮಣಿಪುರದಲ್ಲಿ ಆದಿವಾಸಿಗಳ ಮೇಲೆ ಇಷ್ಟೊಂದು ಬರ್ಬರ ಹಿಂಸಾಚಾರ ನಡೆಯುತ್ತಿದ್ದರೂ ಅದು ಬೆಳಕಿಗೆ ಬಂದಿರುವುದು ಎರಡು ತಿಂಗಳ ಬಳಿಕ. ಯಾಕೆಂದರೆ ಆ ಸಂದರ್ಭದಲ್ಲಿ ಮಣಿಪುರದಲ್ಲಿ ಪೂರ್ಣ ಪ್ರಮಾಣದಲ್ಲಿ ಇಂಟರ್‌ನೆಟ್‌ನ್ನು ಸರಕಾರ ಸ್ಥಗಿತಗೊಳಿಸಿತ್ತು. ಮುಖ್ಯ ಮಾಧ್ಯಮಗಳು ಮಣಿಪುರದಲ್ಲಿ ನಡೆಯುತ್ತಿರುವ ಬರ್ಬರ ಕೃತ್ಯಗಳನ್ನು ಹೊರಜಗತ್ತಿನಿಂದ ಸಂಪೂರ್ಣ ಮುಚ್ಚಿಟ್ಟವು. ಹಂತ ಹಂತವಾಗಿ ಸರಕಾರ ಇಂಟರ್‌ನೆಟ್ ನಿಷೇಧವನ್ನು ಹಿಂದೆಗೆದುಕೊಂಡಂತೆಯೇ ಒಂದೊಂದೇ ಕೃತ್ಯಗಳು ಬಹಿರಂಗವಾದವು. ಕೇಂದ್ರ ಸರಕಾರ ಮಧ್ಯ ಪ್ರವೇಶಿಸಬೇಕು ಎನ್ನುವ ಒತ್ತಡ ತೀವ್ರವಾದದ್ದು ಆ ಬಳಿಕ. ಕಾಶ್ಮೀರದಲ್ಲಿಯೂ ಇಂಟರ್‌ನೆಟ್ ಸ್ಥಗಿತ ಮಾಡುವ ಮೂಲಕ ಅಲ್ಲಿನ ಜನರ ಮೂಲಭೂತ ಹಕ್ಕುಗಳನ್ನು ದಮನ ಮಾಡುತ್ತಲೇ ಬರಲಾಗುತ್ತಿದೆ. ಕಾಶ್ಮೀರದಲ್ಲಿ ಸೇನೆ ನಡೆಸುತ್ತಿರುವ ದೌರ್ಜನ್ಯಗಳನ್ನು ಮುಚ್ಚಿಡುವುದಕ್ಕಾಗಿ ಇಂಟರ್‌ನೆಟ್ ನಿಲುಗಡೆಯನ್ನು ವ್ಯವಸ್ಥಿತವಾಗಿ ದುರ್ಬಳಕೆ ಮಾಡಲಾಗುತ್ತಿದೆ.

ಇಂಟರ್‌ನೆಟ್ ಸ್ಥಗಿತ ಇಂದಿನ ದಿನಗಳಲ್ಲಿ ಲಾಕ್‌ಡೌನ್‌ನ ಇನ್ನೊಂದು ಮುಖವೇ ಆಗಿದೆ. ಕೊರೋನ ವೈರಸ್ ಆಗಮಿಸುವ ಮುನ್ನವೇ ಕಾಶ್ಮೀರ ಭಾಗಶಃ ಇಂತಹ ಲಾಕ್‌ಡೌನ್‌ನ ಬಲಿ ಪಶುವಾಗಿತ್ತು. ಇದೀಗ ಕೊರೋನ ಅಳಿದ ಬಳಿಕವೂ ಕಾಶ್ಮೀರ, ಮಣಿಪುರದಂತಹ ರಾಜ್ಯಗಳು ನಿರಂತರ ಲಾಕ್‌ಡೌನ್ ಶಿಕ್ಷೆಯನ್ನು ಅನುಭವಿಸುತ್ತಲೇ ಇವೆ.ಎಲ್ಲಿಯವರೆಗೆ ಡಿಜಿಟಲ್ ಹಕ್ಕುಗಳ ಮೇಲೆ ಸರಕಾರ ನಡೆಸುವ ದಾಳಿಗಳನ್ನು ಮಾನವ ಹಕ್ಕುಗಳ ಮೇಲೆ, ಪರ್ಯಾಯ ಮಾಧ್ಯಮಗಳ ಮೇಲೆ ನಡೆಯುವ ದಾಳಿ ಎಂದು ಪರಿಗಣಿಸಿ ಅದನ್ನು ಚರ್ಚೆಗೆತ್ತಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಈ ದಾಳಿಯನ್ನು ತನ್ನ ದುರುದ್ದೇಶಗಳಿಗೆ ಸರಕಾರ ಬಳಸುತ್ತಲೇ ಇರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News