ತನಿಖಾ ಸಂಸ್ಥೆಗಳು ರಾಜಕೀಯ ಅಸ್ತ್ರವಾಗಬಾರದು

Update: 2024-02-06 05:28 GMT

Photo: wiki/Enforcement_Directorate

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಪ್ರಜಾಪ್ರಭುತ್ವದಲ್ಲಿ ಅಧಿಕಾರದಲ್ಲಿರುವ ಪಕ್ಷ ಮತ್ತೆ ಗೆಲುವು ಸಾಧಿಸಬೇಕೆಂದು ಬಯಸುವುದು ಸಹಜ. ಅದೇ ರೀತಿ ಪ್ರತಿಪಕ್ಷಗಳೂ ತಾವು ಗೆಲ್ಲಬೇಕೆಂದು ಪ್ರಯತ್ನಿಸುತ್ತವೆ.ಯಾವುದೇ ಪಕ್ಷ ಇರಲಿ ತಮ್ಮ ಕಾರ್ಯಕ್ರಮ ಮತ್ತು ಪ್ರಣಾಳಿಕೆಯ ಆಧಾರದಲ್ಲಿ ಮತ ಯಾಚಿಸಬೇಕು. ಆಡಳಿತ ಪಕ್ಷ ತನ್ನ ಸಾಧನೆಗಳನ್ನು ಜನರ ಮುಂದಿಟ್ಟು ಮತ ಯಾಚಿಸಬೇಕು. ಆದರೆ ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಬರುವ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಅಡ್ಡ ಹಾದಿ ಹಿಡಿದಿದೆ. ಪ್ರತಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಸರಕಾರಗಳನ್ನು ಉರುಳಿಸಲು ರಾಜಕೀಯೇತರ ಒತ್ತಡಗಳನ್ನು ತರುತ್ತಿದೆ. ರಾಜ್ಯಪಾಲರನ್ನು ಮತ್ತು ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಂಡು ಪ್ರತಿಪಕ್ಷಗಳ ಬಲ ಕುಗ್ಗಿಸಲು ಮಸಲತ್ತು ನಡೆಸಿರುವುದು ಸರಿಯಲ್ಲ.

ಬಿಹಾರದಲ್ಲಿ ಏನೇನೋ ಕರಾಮತ್ತು ಮಾಡಿ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರನ್ನು ಎನ್‌ಡಿಎ ಬುಟ್ಟಿಗೆ ಹಾಕಿಕೊಂಡಿತು. ಜಾರ್ಖಂಡ್‌ನಲ್ಲಿ ಬುಟ್ಟಿಗೆ ಬೀಳಲು ಒಪ್ಪಿಕೊಳ್ಳದ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಮೇಲೆ ಜಾರಿ ನಿರ್ದೇಶನಾಲಯ(ಈ.ಡಿ.)ವನ್ನು ಛೂ ಬಿಟ್ಟು ಜೈಲಿಗೆ ತಳ್ಳಲಾಯಿತು. ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಶರಣಾಗತರಾಗಿದ್ದರೆ ಈತ ಸುರಕ್ಷಿತವಾಗಿ ಇರುತ್ತಿದ್ದರು. ಸೊರೇನ್ ಬಂಧನದ ನಂತರ ಅವರ ಪಕ್ಷದ ಹಿರಿಯ ನಾಯಕ ಚಂಪಾಯಿ ಸೊರೇನ್ ಅಧಿಕಾರ ವಹಿಸಿಕೊಳ್ಳಲು ಅಡ್ಡಗಾಲು ಹಾಕಿತು. ಹೀಗಾಗಿ ಜಾರ್ಖಂಡ್ ಮುಕ್ತಿ ಮೋರ್ಚಾದ 40 ಶಾಸಕರನ್ನು ಹೈದರಾಬಾದ್‌ಗೆ ಸಾಗಿಸಲಾಗಿತ್ತು. ಸೋಮವಾರ ನಡೆದ ವಿಶ್ವಾಸಮತ ಯಾಚನೆಯಲ್ಲಿ ಚಂಪಾಯಿ ಸೊರೇನ್ ಗೆಲುವು ಸಾಧಿಸಿದ್ದರಿಂದ ಸದ್ಯಕ್ಕೆ ಅವರ ಸರಕಾರ ಬಚಾವಾಗಿದೆ. ಆದರೂ ಪರಿಸ್ಥಿತಿ ಇನ್ನೂ ಸಂಪೂರ್ಣ ತಿಳಿಯಾಗಿಲ್ಲ. ಜಾರ್ಖಂಡ್ ಕತೆ ಇದಾದರೆ ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ತನಿಖಾ ಸಂಸ್ಥೆಗಳ ಮೂಲಕ ಕಿರುಕುಳ ನೀಡಲಾಗುತ್ತಿದೆ. ಕೇರಳದಲ್ಲಿ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಮೋದಿ ಸರಕಾರದ ಏಜೆಂಟರಾಗಿ ಆ ರಾಜ್ಯದ ಚುನಾಯಿತ ಕಮ್ಯುನಿಸ್ಟ್ ಸರಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ಒಟ್ಟಾರೆ ಮೋದಿ ಸರಕಾರಕ್ಕೆ ಪ್ರತಿಪಕ್ಷಗಳಿಲ್ಲದ ಭಾರತ ಬೇಕಾಗಿದೆ.

ದೇಶವ್ಯಾಪಿ ಸಿಬಿಐ, ಈ.ಡಿ., ಐಟಿ ಕಾರ್ಯಾಚರಣೆಗೆ ಬಲಿಯಾಗುತ್ತಿರುವವರು ಪ್ರತಿಪಕ್ಷ ನಾಯಕರು ಮಾತ್ರ. ಅಕ್ರಮ ಹಣ ವರ್ಗಾವಣೆ ನೆಪ ಮುಂದೆ ಮಾಡಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಾಗಲೂ ಪಕ್ಷಪಾತ ಎದ್ದು ಕಾಣುತ್ತದೆ. ಕೋಟಿ, ಕೋಟಿ ಹಣ ಲಪಟಾಯಿಸಿದ ಖದೀಮರು ಬಿಜೆಪಿ ಪಾಳಯದಲ್ಲಿದ್ದಾರೆ. ಸಾರ್ವಜನಿಕ ಸಂಪತ್ತನ್ನು ದೋಚಿದ ಗಣಿ ಲೂಟಿಕೋರರನ್ನು ಸಾಕಿ ಸಲಹಿದ ಪಕ್ಷ ಬಿಜೆಪಿ. ಬರೀ ಬಿಜೆಪಿ ಮಾತ್ರವಲ್ಲ, ವ್ಯಕ್ತಿಯ ಚಾರಿತ್ರ್ಯ ನಿರ್ಮಾಣದ ಬಗ್ಗೆ ಉದ್ದುದ್ದ ಉಪದೇಶ ನೀಡುವ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರಕ್ಕೂ ಇಂಥ ದಗಾಕೋರರ ಮೇಲೆ ವಿಶೇಷ ಪ್ರೇಮ. ಒಟ್ಟಾರೆ ತಮ್ಮ ಕೋಮುವಾದಿ ಕಾರ್ಯಸೂಚಿಯನ್ನು ಒಪ್ಪಿಕೊಂಡರೆ ಸಾಕು ಅವರು ಪವಿತ್ರಾತ್ಮರಾಗುತ್ತಾರೆ.

ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ 2014ರಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಪ್ರತಿಪಕ್ಷದ ನಾಯಕರನ್ನು ಹತ್ತಿಕ್ಕಲು ತನಿಖಾ ಸಂಸ್ಥೆಗಳನ್ನು ಮನ ಬಂದಂತೆ ಬಳಸಿಕೊಳ್ಳುತ್ತಿದೆ. ಈ ಹಿಂದೆ ದಿಲ್ಲಿಯ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರನ್ನು ಅಬಕಾರಿ ನೀತಿಯ ಜಾರಿಗೆ ಸಂಬಂಧಿಸಿದ ನೆಪ ಮುಂದೆ ಮಾಡಿ ಸಿಬಿಐ ಬಂಧಿಸಿತು. ಕೊನೆಗೆ ಅವರು ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಬಿಹಾರದಲ್ಲಿ ಸಂಘಪರಿವಾರ ಕಾಲೂರಲು ಅವಕಾಶ ನೀಡದ ಹಾಗೂ ರಥಯಾತ್ರೆಯನ್ನು ತಡೆದು ಅಡ್ವಾಣಿಯನ್ನು ಬಂಧಿಸಿದ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ಯಾದವ್‌ರನ್ನು ಸೆರೆಮನೆಯಲ್ಲಿ ಕೊಳೆಯುವಂತೆ ಮಾಡಲಾಯಿತು. ಸಮಾಜವಾದಿ ಪಕ್ಷದ ಆಝಂ ಖಾನ್, ಕಾಂಗ್ರೆಸ್ ಪಕ್ಷದ ನವಾಬ್ ಮಲಿಕ್, ತೃಣಮೂಲ ಕಾಂಗ್ರೆಸ್‌ನ ಅಭಿಷೇಕ್ ಬ್ಯಾನರ್ಜಿ, ಶಿವಸೇನೆಯ ಸಂಜಯ್ ರಾವುತ್ ಹೀಗೆ ಸಾಲು ಸಾಲಾಗಿ ಪ್ರತಿಪಕ್ಷ ನಾಯಕರ ವಿರುದ್ಧ ತನಿಖಾ ಸಂಸ್ಥೆಗಳನ್ನು ಛೂ ಬಿಡಲಾಯಿತು.

ಅಧಿಕಾರ ರಾಜಕಾರಣದಲ್ಲಿ ಇಲ್ಲದ ಆದರೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿರುವ ಆನಂದ ತೇಲ್ತುಂಬ್ಡೆ, ಕವಿ ವರವರರಾವ್, ಗೌತಮ್ ನವ್ಲಾಖ ಮುಂತಾದವರ ಬಾಯಿ ಮುಚ್ಚಿಸಲು ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳಲು ಮೋದಿ ಸರಕಾರ ಹಿಂಜರಿಯಲಿಲ್ಲ.

ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಭ್ರಷ್ಟಾಚಾರ ತಡೆಯುವುದು ಮುಖ್ಯವಲ್ಲ. ಅದರ ಉದ್ದೇಶ ಭ್ರಷ್ಟಾಚಾರದ ಆರೋಪವನ್ನು ಬಳಸಿಕೊಂಡು ತನಿಖಾ ಸಂಸ್ಥೆಗಳ ಮೂಲಕ ಪ್ರತಿಪಕ್ಷ ನಾಯಕರ ಬಾಯಿ ಮುಚ್ಚಿಸುವುದಾಗಿದೆ. ಒಂದು ವೇಳೆ ತನಿಖಾ ಸಂಸ್ಥೆಗಳ ಕಿರಿಕಿರಿಗೆ ಹೆದರಿ ಪ್ರತಿಪಕ್ಷ ನಾಯಕರು ಬಿಜೆಪಿಗೆ ಶರಣಾಗತರಾದರೆ ಅವರನ್ನು ಎಲ್ಲಾ ಆರೋಪಗಳಿಂದ ದೋಷಮುಕ್ತರನ್ನಾಗಿ ಮಾಡಲಾಗುತ್ತದೆ. ಇದಕ್ಕೆ ನೂರಾರು ಉದಾಹರಣೆಗಳನ್ನು ಕೊಡಬಹುದು. ತನಿಖಾ ಸಂಸ್ಥೆಗಳ ಕಾಟಕ್ಕೆ ಹೆದರಿ ಮುಕುಲ್‌ರಾಯ್, ನಾರಾಯಣ ರಾಣೆ, ಹಿಮಂತ ಶರ್ಮಾ, ಸುವೇಂದು ಅಧಿಕಾರಿ ಈಗ ಬಿಜೆಪಿ ಸೇರಿ ದೋಷಮುಕ್ತರಾಗಿದ್ದಾರೆ.

ಒಂದೆಡೆ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಪ್ರತಿಪಕ್ಷ ನಾಯಕರಿಗೆ ಕಿರುಕುಳ ನೀಡಲಾಗುತ್ತಿದೆ. ಇನ್ನೊಂದೆಡೆ ಪ್ರತಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ರಾಜ್ಯಪಾಲರನ್ನು ಸಂವಿಧಾನ ಬಾಹಿರವಾಗಿ ಬಳಸಿಕೊಂಡು ಪ್ರತಿಪಕ್ಷ ಸರಕಾರಗಳ ದೈನಂದಿನ ಆಡಳಿತದಲ್ಲಿ ತೊಂದರೆ ನೀಡಲಾಗುತ್ತಿದೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತಗೊಂಡ ಸರಕಾರಗಳನ್ನು ರಾಜ್ಯಪಾಲರ ಮೂಲಕ ದುರ್ಬಲಗೊಳಿಸಲಾಗುತ್ತಿದೆ. ಇದು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ.

ಸ್ವತಂತ್ರ, ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ಪ್ರತಿಪಕ್ಷಗಳನ್ನು ಹಣಿಯಲು ದುರುಪಯೋಗ ಮಾಡಿಕೊಂಡರೆ, ಇನ್ನೊಂದೆಡೆ ಚುನಾವಣಾ ಆಯೋಗದಂಥ ಸಾಂವಿಧಾನಿಕ ಸಂಸ್ಥೆಯನ್ನು ಮೋದಿ ಸರಕಾರ ತನ್ನ ರಾಜಕೀಯ ಹಿತಾಸಕ್ತಿಗಳ ಸಲುವಾಗಿ ಬಳಸಿಕೊಳ್ಳುತ್ತಿದೆ. ಈ ಬಗ್ಗೆ ಈ ಹಿಂದೆ ಸುಪ್ರೀಂ ಕೋರ್ಟ್ ಕೂಡ ಆತಂಕವನ್ನು ವ್ಯಕ್ತಪಡಿಸಿತ್ತು. ಒಟ್ಟಾರೆ ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಪ್ರತಿಪಕ್ಷಗಳು, ನಾಗರಿಕರು ಇದನ್ನು ಉಳಿಸಿಕೊಳ್ಳಲು ಸಂಕಲ್ಪ ಮಾಡಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News