ಕನ್ನಡಿಗೆ ಉಗುಳುವ ಮೂಲಕ ಮುಖದ ವಿಕಾರ ಮುಚ್ಚಿಕೊಳ್ಳಲು ಸಾಧ್ಯವೆ?

Update: 2023-09-07 04:27 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮಣಿಪುರದಲ್ಲಿ ಭೀಕರ ಹಿಂಸಾಚಾರಗಳು, ಸಾಮೂಹಿಕ ಅತ್ಯಾಚಾರಗಳು, ಮಹಿಳೆಯರ ಬೆತ್ತಲೆ ಮೆರವಣಿಗೆಗಳು ನಡೆಯುತ್ತಿರುವಾಗ ಮಾಧ್ಯಮಗಳು ಏನು ಮಾಡುತ್ತಿದ್ದವು? ಆ ಸುದ್ದಿಗಳನ್ನು ಹೊರ ಜಗತ್ತಿಗೆ ತಲುಪಿಸುವಲ್ಲಿ ಮಾಧ್ಯಮಗಳು ಯಾಕೆ ವಿಫಲವಾದವು? ಎನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವನ್ನು ಹಲವರು ನಡೆಸುತ್ತಿದ್ದಾರೆ. ಮಣಿಪುರದಲ್ಲಿ ನಡೆದ ಭೀಕರ ಘಟನೆಗಳು ಹೊರಜಗತ್ತಿಗೆ ತಿಳಿಯುವಾಗ ಸುಮಾರು ಒಂದು ತಿಂಗಳು ಕಳೆದು ಹೋಗಿತ್ತು. ಎಲ್ಲ ರಂಗಗಳಲ್ಲೂ ತಂತ್ರಜ್ಞಾನಗಳು ವಿಜೃಂಭಿಸುತ್ತಿರುವ ಹೊತ್ತಿಗೆ, ಮಣಿಪುರದ ದುರಂತವನ್ನು ತಪ್ಪಿಸುವುದಿರಲಿ, ಅದರ ಮಾಹಿತಿಯನ್ನು ತಲುಪಿಸಲು ಕೂಡ ಅವುಗಳು ವಿಫಲವಾದವು. ಗಲಭೆಗಳ ಸಂದರ್ಭದಲ್ಲಿ ಇಂಟರ್‌ನೆಟ್ ಎರಡಲಗಿನ ಕತ್ತಿ. ಅದನ್ನು ಬಳಸಿಕೊಂಡು ದುಷ್ಕರ್ಮಿಗಳು ಗಲಭೆಗಳನ್ನು ಸೃಷ್ಟಿಸಬಹುದು. ಇದೇ ಸಂದರ್ಭದಲ್ಲಿ ಆ ಗಲಭೆಗಳು ಸಂಭವಿಸಿದಾಗ ಹೊರಜಗತ್ತಿಗೆ ಮಾಹಿತಿ ತಲುಪುವಂತೆ ಮಾಡಿ ಅದನ್ನು ತಡೆಯಲೂ ಬಹುದು. ಆದರೆ ದುಷ್ಕರ್ಮಿಗಳು ವದಂತಿ ಹರಡಿ ತಮ್ಮ ಉದ್ದೇಶವನ್ನು ಸಾಧಿಸಿಕೊಂಡ ಬೆನ್ನಿಗೇ ಸರಕಾರ ಇಡೀ ಪ್ರದೇಶದ ಇಂಟರ್‌ನೆಟ್‌ಗಳನ್ನು ಸ್ಥಗಿತಗೊಳಿಸಿತು. ಇಂಟರ್‌ನೆಟ್‌ನ್ನು ಬಳಸಬಾರದವರು ಬಳಸಿದ ಬಳಿಕ, ಬಳಸಬೇಕಾದವರು ಬಳಸದಂತೆ ತಡೆಯುವುದನ್ನೇ ‘ಇಂಟರ್‌ನೆಟ್ ಸ್ಥಗಿತ’ವೆಂದು ಸರಕಾರ ಕರೆಯುತ್ತಾ ಬಂದಿದೆ. ಮಣಿಪುರದಲ್ಲೂ ಇದೇ ನಡೆಯಿತು. ಮೈತೈ ಸಮುದಾಯದ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆದಿವೆ, ಅತ್ಯಾಚಾರ ನಡೆದಿವೆ ಎನ್ನುವ ವದಂತಿಗಳು ಹರಿದಾಡುತ್ತಿದ್ದಂತೆಯೇ ಮೈತೈಗಳು ಗುಂಪು ಗುಂಪಾಗಿ ಕುಕಿ ಸಮುದಾಯದ ಮೇಲೆ ದಾಳಿ ನಡೆಸಲು ಆರಂಭಿಸಿದ್ದವು. ಈ ಹೊತ್ತಿಗೆ ಸರಿಯಾಗಿ ಸರಕಾರ ಇಂಟರ್‌ನೆಟ್‌ನ್ನು ಸ್ಥಗಿತಗೊಳಿಸಿತು. ಪರಿಣಾಮವಾಗಿ, ಮಣಿಪುರದಲ್ಲಿ ಕುಕಿಗಳ ಮೇಲೆ ಮೈತೈಗಳು ನಡೆಸಿದ ಬರ್ಬರ ದಾಳಿಗಳು ಹೊರಜಗತ್ತಿಗೆ ಸುದ್ದಿಯಾಗಲೇ ಇಲ್ಲ.

ಇಂತಹ ಸಂದರ್ಭದಲ್ಲಿ ಇತರ ಮಾಧ್ಯಮಗಳು ಕೂಡ ಹೇಗೆ ಪಕ್ಷಪಾತಿ ವರದಿಗಳನ್ನು ಮಾಡಿದವು ಎನ್ನುವುದನ್ನು ಎಡಿಟರ್ಸ್ ಗಿಲ್ಡ್‌ನ ಸತ್ಯ ಶೋಧನಾ ಸಮಿತಿ ವರದಿ ಮಾಡಿವೆ. ಹೆಚ್ಚಿನ ಕೋಮುಗಲಭೆಗಳು ಸಂಭವಿಸುವುದೇ ಮಾಧ್ಯಮಗಳು ಸುದ್ದಿಗಳ ಹೆಸರಿನಲ್ಲಿ ಹರಡುವ ವದಂತಿಗಳಿಂದ. ಗುಜರಾತ್ ಗಲಭೆಯಿಂದ ಹಿಡಿದು ಮಣಿಪುರ ಹಿಂಸಾಚಾರದವರೆಗೆ ಮಾಧ್ಯಮಗಳ ಬೇಜವಾಬ್ದಾರಿ ಕ್ಷಮಿಸಲು ಅನರ್ಹವಾದುದು. ಗೋಧ್ರಾ ರೈಲಿಗೆ ಬೆಂಕಿ ಬಿದ್ದಾಗ ಗುಜರಾತ್‌ನ ಸಂದೇಶ್ ಸೇರಿದಂತೆ ಹಲವು ಪತ್ರಿಕೆಗಳು ಪ್ರಕಟಿಸಿದ ಸುಳ್ಳು ಸುದ್ದಿಗಳು ಗುಜರಾತ್ ಹತ್ಯಾಕಾಂಡಕ್ಕೆ ಕಾರಣವಾದವು. ಗೋಧ್ರಾ ರೈಲಿನಿಂದ ಮಹಿಳೆಯರನ್ನು ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರ ಗೈಯಲಾಗಿದೆ ಎನ್ನುವ ವರದಿಯನ್ನು ಸಂದೇಶ್ ಪತ್ರಿಕೆ ಪ್ರಕಟಿಸಿತ್ತು. ಇದು ಬಳಿಕ ಗುಜರಾತ್‌ನ ಅಮಾಯಕ ಮಹಿಳೆಯರ ಅತ್ಯಾಚಾರ, ಕಗ್ಗೊಲೆಗಳಿಗೆ ಕಾರಣವಾದವು. ಮಣಿಪುರದಲ್ಲೂ ಮಾಧ್ಯಮಗಳು ಸುದ್ದಿಗಳನ್ನು ಹರಡುವ ಸಂದರ್ಭದಲ್ಲಿ ಬೇಜವಾಬ್ದಾರಿ ಪ್ರದರ್ಶಿಸಿವೆ. ಇಂಟರ್‌ನೆಟ್ ಸ್ಥಗಿತಗೊಂಡಿರುವುದರಿಂದ, ಮೇಲ್ನೋಟಕ್ಕೆ ಹರಿದಾಡುತ್ತಿರುವ ಸುದ್ದಿ ಮಾಹಿತಿಗಳನ್ನೇ ಮಾಧ್ಯಮಗಳು ಪ್ರಕಟಿಸಿರುವುದನ್ನು ಗಿಲ್ಡ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಕುಕಿ ಸಮುದಾಯದ ಮೇಲೆ ನಡೆದ ದಾಳಿಗಳನ್ನು ಪ್ರಕಟಿಸುವಲ್ಲಿ ಮಾಧ್ಯಮಗಳು ವಿಫಲವಾಗಿವೆ ಎನ್ನುವ ಅಂಶವನ್ನು ಅದು ಬಹಿರಂಗಪಡಿಸಿವೆ. ಸುಳ್ಳು ಸುದ್ದಿಗಳನ್ನು, ತಪ್ಪು ಮಾಹಿತಿಗಳನ್ನು ಹೊಂದಿದ್ದ ೧೦ಕ್ಕೂ ಅಧಿಕ ವರದಿಗಳನ್ನು ಎಡಿಟರ್ಸ್ ಗಿಲ್ಡ್ ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ. ಇದೇ ಸಂದರ್ಭದಲ್ಲಿ ರಾಜ್ಯ ಸರಕಾರದ ವೈಫಲ್ಯದ ಕಡೆಗೆ ಅದು ಬೆರಳು ತೋರಿಸಿದೆ. ಯಾವುದೇ ಕೋಮುಗಲಭೆಗಳ ಸಂದರ್ಭದಲ್ಲಿ ದುಷ್ಕರ್ಮಿಗಳು ಹೇಗೆ ಮಾಧ್ಯಮಗಳನ್ನು ತಮಗೆ ಪೂರಕವಾಗಿ ಬಳಸಿಕೊಳ್ಳುತ್ತಾರೆ ಎನ್ನುವುದು ಮಣಿಪುರ ಹಿಂಸಾಚಾರದ ಸಂದರ್ಭದಲ್ಲಿ ಮತ್ತೊಮ್ಮೆ ಸಾಬೀತಾಗಿದೆ.

ದುರದೃಷ್ಟವಶಾತ್ ಎಡಿಟರ್ಸ್ ಗಿಲ್ಡ್ ವರದಿ ಅಲ್ಲಿನ ಸರಕಾರಕ್ಕೆ ಇಷ್ಟವಾಗಿಲ್ಲ. ವದಂತಿಗಳನ್ನು ಹರಡಿ ಉದ್ವಿಗ್ನಕ್ಕೆ ಕಾರಣವಾದ ವ್ಯಕ್ತಿಗಳ ಮೇಲೆ ಎಫ್‌ಐಆರ್ ದಾಖಲಿಸಬೇಕಾಗಿದ್ದ ಸರಕಾರ ಎಡಿಟರ್ಸ್ ಗಿಲ್ಡ್ ಮೇಲೆಯೇ ಎಫ್‌ಐಆರ್ ದಾಖಲಿಸಿದೆ. ವರದಿಯಲ್ಲಿ ಭಾಗವಹಿಸಿದ ಸೀಮಾ ಗುಹಾ, ಭರತ್ ಭೂಷನ್, ಸಂಜಯ್ ಕಪೂರ್ ಮತ್ತು ಎಡಿಟರ್ಸ್ ಗಿಲ್ಡ್‌ನ ಅಧ್ಯಕ್ಷೆ ಸೀಮಾ ಮುಸ್ತಫಾ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದೀಗ ಅವರನ್ನು ಬಂಧಿಸದಂತೆ ಸುಪ್ರೀಂಕೋರ್ಟ್ ಮಧ್ಯಂತರ ರಕ್ಷಣೆಯನ್ನು ನೀಡಿದೆ. ಇಷ್ಟಕ್ಕೂ ಪೊಲೀಸರು ಎಫ್‌ಐಆರ್ ಮಾಡಿರುವುದಾದರೂ ಯಾವ ಕಾರಣಕ್ಕೆ? ಎಡಿಟರ್ಸ್ ಗಿಲ್ಡ್ ಮಾಡಿರುವ ಅಷ್ಟೂ ವರದಿಗಳಲ್ಲಿ ಒಂದು ಫೋಟೊವನ್ನು ಮುಂದಿಟ್ಟು ಇಡೀ ವರದಿ ಕುಕಿ ಉಗ್ರರಿಂದ ಪ್ರೇರಿತವಾಗಿದೆ ಎಂದು ಪೊಲೀಸರು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ. ಅರಣ್ಯ ಅಧಿಕಾರಿಯ ನಿವಾಸವನ್ನೇ ಕುಕಿಗಳ ನಿವಾಸವೆಂದು ವರದಿ ಹೇಳಿದೆ ಎನ್ನುವುದನ್ನು ಮಹಾಪರಾಧವಾಗಿ ಭಾವಿಸಿದೆ. ಮಣಿಪುರದ ಹಿಂಸಾಚಾರಕ್ಕೆ ಕಾರಣವೇ ಈ ವರದಿಯಾಗಿರಬಹುದೆ ಎಂದು ಶಂಕಿಸುವಂತಿದೆ ಪೊಲೀಸರ ವರ್ತನೆ. ಅಂದರೆ, ಮಣಿಪುರದಲ್ಲಿ ಏನು ನಡೆದಿದೆಯೋ, ಹಿಂಸಾಚಾರದಲ್ಲಿ ಯಾರೆಲ್ಲ ಕಾರಣರಾಗಿದ್ದಾರೆಯೋ ಅವರೆಲ್ಲರ ಹೆಸರು ಬಹಿರಂಗವಾಗುವುದು ರಾಜ್ಯ ಸರಕಾರಕ್ಕೂ ಬೇಕಾಗಿಲ್ಲ. ಹಿಂಸಾಚಾರದಲ್ಲಿ ರಾಜ್ಯ ಸರಕಾರದ ಪಾಲೆಷ್ಟು ಎನ್ನುವುದನ್ನು ಇದು ಹೇಳುತ್ತದೆ. ರಾಜ್ಯ ಸರಕಾರದ ನೀತಿಯನ್ನು ಮಾಧ್ಯಮ ಸಂಸ್ಥೆಗಳು ಖಂಡಿಸಿದ್ದು, ಸರಕಾರ ಪೊಲೀಸರನ್ನು ಮುಂದಿಟ್ಟುಕೊಂಡು ಸತ್ಯದ ಬಾಯಿ ಮುಚ್ಚಿಸಲು ಹೊರಟಿದೆ ಎಂದು ಆರೋಪಿಸಿವೆ.

ಮಣಿಪುರದಲ್ಲಿ ನಡೆದಿರುವ ಮಾನವ ಹಕ್ಕು ಉಲ್ಲಂಘನೆಯ ಬಗ್ಗೆ ವಿಶ್ವಸಂಸ್ಥೆಯೂ ವರದಿಯೊಂದನ್ನು ಸಿದ್ಧಪಡಿಸಿದೆ. ‘‘ಮಣಿಪುರದಲ್ಲಿ ಮಾನವ ಹಕ್ಕುಗಳ ದಮನವಾಗುತ್ತಿದೆ’’ ಎಂದು ಅದು ಕಳವಳವ್ಯಕ್ತಪಡಿಸಿದೆ. ಇಲ್ಲಿ ನಡೆಯುತ್ತಿರುವ ಹಿಂಸಾಚಾರಗಳನ್ನು ತಡೆಯುವಲ್ಲಿ ಸರಕಾರ ವಿಫಲವಾಗಿರುವುದು ವರದಿಯಲ್ಲಿ ಉಲ್ಲೇಖವಾಗಿದೆ. ಆದರೆ ಭಾರತ ವಿಶ್ವಸಂಸ್ಥೆಯ ವರದಿಯನ್ನು ಪೂರ್ವಾಗ್ರಹ ಪೀಡಿತ ಎಂದು ಕರೆದಿದೆ. ‘‘ಮಣಿಪುರದಲ್ಲಿ ಶಾಂತಿ ಹಾಗೂ ಸ್ಥಿರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಕೇಂದ್ರ ಸರಕಾರ ಬದ್ಧವಾಗಿದೆ’’ ಎಂದು ಭಾರತದ ಪ್ರತಿನಿಧಿ ಹೇಳಿಕೆ ನೀಡಿದ್ದಾರೆ. ಆದರೆ ಮಣಿಪುರದಲ್ಲಿ ಶಾಂತಿ ಪೂರ್ಣವಾಗಿ ನೆಲೆಸಿಲ್ಲ ಎನ್ನುವುದು ವಾಸ್ತವ ಸಂಗತಿಯಾಗಿದೆ. ಬುಧವಾರ ಇಡೀ ಮಣಿಪುರದಲ್ಲಿ ಸರಕಾರ ಮತ್ತೆ ಪೂರ್ಣ ಪ್ರಮಾಣದ ಕರ್ಫ್ಯೂ ಹೇರಿದೆ. ಮಣಿಪುರದಲ್ಲಿ ಸರಣಿ ಹತ್ಯೆಗಳು ಮುಂದುವರಿದಿವೆ. ಇಷ್ಟಾದರೂ, ಮಣಿಪುರದಲ್ಲಿ ಏನೂ ನಡೆದೇ ಇಲ್ಲ ಎನ್ನುವಂತೆ ವಿಶ್ವದ ಮುಂದೆ ಪ್ರಧಾನಿ ಮೋದಿಯವರು ವರ್ತಿಸುತ್ತಿದ್ದಾರೆ. ದೇಶ ಹೊತ್ತಿ ಉರಿಯುತ್ತಿರುವ ಕಾಲದಲ್ಲಿ ಇಂಡಿಯಾವನ್ನು ಭಾರತ್ ಆಗಿ ಬದಲಾಯಿಸುವ ಮಾತನಾಡುತ್ತಿದ್ದಾರೆ. ಇಂಡಿಯಾ ಮತ್ತು ಭಾರತ ಎರಡೂ ಹೆಸರುಗಳು ಇಲ್ಲಿಯ ನೆಲಕ್ಕೆ ಪರಕೀಯವಲ್ಲ. ಮೋದಿ ಹೆಸರು ಬದಲಾಯಿಸಿದರೂ, ಬದಲಾಯಿಸದಿದ್ದರೂ ಇಲ್ಲಿನ ಜನರು ಭಾರತದೊಂದಿಗೆ ಗುರುತಿಸುತ್ತಾ ಬಂದಿದ್ದಾರೆ. ಬದಲಾಗ ಬೇಕಾಗಿರುವುದು ಹೆಸರಲ್ಲ, ಬದಲಿಗೆ ಭಾರತದ ಸಾಮಾಜಿಕ ಸ್ಥಿತಿಗತಿ. ಮಣಿಪುರದಲ್ಲಿ ಮಾನವ ಘನತೆಯ ಮೇಲೆ ನಡೆದ ದಾಳಿಯ ಕಾರಣದಿಂದ ಇಂಡಿಯಾದ ಪ್ರತಿಷ್ಠೆ ನೆಲಕಚ್ಚಿದೆ. ಇಂಡಿಯಾವನ್ನು ಭಾರತ್ ಆಗಿಸುವುದರಿಂದ ಆ ಪ್ರತಿಷ್ಠೆಯನ್ನು ಎತ್ತಿ ನಿಲ್ಲಿಸಲು ಸಾಧ್ಯವಿಲ್ಲ. ಸರಕಾರ ತನ್ನ ವೈಫಲ್ಯಗಳನ್ನು ಒಪ್ಪಿಕೊಂಡು ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ, ಅಲ್ಲಿ ಕಾನೂನು ಸುವ್ಯವಸ್ಥೆಯನ್ನು ಬಲ ಪಡಿಸಬೇಕು. ಮುಖದ ವಿಕಾರಗಳನ್ನು ತೋರಿಸಿದ ಕನ್ನಡಿಗೆ ಉಗುಳುವುದರಿಂದ ಮುಖ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ಕೇಂದ್ರ ಸರಕಾರ ಇನ್ನಾದರೂ ಅರ್ಥ ಮಾಡಿಕೊಳ್ಳ ಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News