ಕನ್ನಡಕ್ಕಾಗಿ ಕೈಯೆತ್ತುವುದು ಅಪರಾಧವೆ?

Update: 2023-12-29 04:34 GMT

ಸಾಂದರ್ಭಿಕ ಚಿತ್ರ Photo: twitter.com/vasantshetty81

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು ಹಾಕಬೇಕು ಎಂದು ಒತ್ತಾಯಿಸಿ ಕನ್ನಡ ಪರ ಕಾರ್ಯಕರ್ತರು ಬೆಂಗಳೂರಿನಲ್ಲಿ ಬುಧವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಮೆರವಣಿಗೆಯ ಸಂದರ್ಭದಲ್ಲಿ ಹಲವೆಡೆ ಪರಭಾಷೆಯ ನಾಮಫಲಕಗಳನ್ನು ಧ್ವಂಸಗೊಳಿಸಿದ್ದಾರಷ್ಟೇ ಅಲ್ಲದೆ, ಕೆಲವೆಡೆ ಕಲ್ಲುತೂರಾಟಗಳು ನಡೆದಿವೆ ಎಂದು ಪೊಲೀಸರು ಆರೋಪಿಸಿದ್ದಾರೆ. ಪ್ರತಿಭಟನೆಗಳ ಬೆನ್ನಿಗೇ ಕನ್ನಡ ಪರ ಕಾರ್ಯಕರ್ತರನ್ನು ಬಂಧಿಸುವ, ಅವರ ಮೇಲೆ ಪ್ರಕರಣದಾಖಲಿಸುವ ಕೆಲಸವೂ ಶುರುವಾಗಿದೆ. ಸರಕಾರಕ್ಕೂ ಏಕಾಏಕಿ ನಾಡಿನ ಕಾನೂನು ಸುವ್ಯವಸ್ಥೆ ನೆನಪಿಗೆ ಬಂದಿದೆ. ‘‘ಕನ್ನಡದ ಹೆಸರಿನಲ್ಲಿ ಹಿಂಸೆಯನ್ನು ಸಹಿಸುವುದಿಲ್ಲ’’ ಎಂದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಒಕ್ಕೊರಲಿನ ಹೇಳಿಕೆಯನ್ನು ನೀಡಿದ್ದಾರೆ. ನೀವು ಹಿಂಸೆ ಮಾಡುವುದಾದರೆ ‘‘ಗೋರಕ್ಷಣೆಯ ಹೆಸರಿನಲ್ಲಿ, ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ, ಹಿಂದುತ್ವದ ಹೆಸರಿನಲ್ಲಿ ಹಿಂಸೆಯನ್ನು ನಡೆಸಿ. ಅದನ್ನು ಬೇಕಾದರೆ ಸಹಿಸುತ್ತೇವೆ’’ ಎಂಬ ಅರ್ಥವನ್ನು ಕೊಡುತ್ತಿದೆ ಅವರ ಹೇಳಿಕೆ. ಹಿಂಸೆ ಎಂದರೇನು? ಸಾರ್ವಜನಿಕ ವೇದಿಕೆಯಲ್ಲಿ ನಿಂತು ನಾಡಿನ ಹೆಣ್ಣು ಮಕ್ಕಳ ಬಗ್ಗೆ ಕೋಮುವೈರಸ್ ತಲೆಗೇರಿಸಿಕೊಂಡ ವ್ಯಕ್ತಿಯೊಬ್ಬ ಅಶ್ಲೀಲ ಹೇಳಿಕೆಗಳನ್ನು ಹೇಳುವುದು, ಆ ಹೇಳಿಕೆಗೆ ಒಂದಿಷ್ಟು ಜನರು ಸಂಭ್ರಮಿಸಿ ಚಪ್ಪಾಳೆ ತಟ್ಟುವುದು ‘ಹಿಂಸೆ’ ಅಲ್ಲವೆ? ಈ ಮೂಲಕ ಆತ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಗಟ್ಟಿಗೊಳಿಸಲು ತನ್ನ ಕೊಡುಗೆಯನ್ನು ನೀಡಿದ್ದನೆ? ಈತನ ವಿರುದ್ಧ ಒಂದೇ ಒಂದು ಹೇಳಿಕೆಯನ್ನು ನೀಡದ ಸರಕಾರ, ಒಂದಿಷ್ಟು ಕನ್ನಡ ಪರ ಕಾರ್ಯಕರ್ತರು ಕನ್ನಡದ ಹೆಸರಿನಲ್ಲಿ ಬೀದಿಗಿಳಿದು ಘೋಷಣೆ ಕೂಗಿದಾಕ್ಷಣ ಸರಕಾರಕ್ಕೆ ಅದು ‘ಹಿಂಸೆ’ಯಾಗಿ ಕಂಡಿದೆ.

ನಿಜ, ಕನ್ನಡವನ್ನು ಕತ್ತಿ, ದೊಣ್ಣೆಗಳ ಮೂಲಕ ಉಳಿಸಲು ಸಾಧ್ಯವಿಲ್ಲ. ಆದರೆ ಕನ್ನಡದ ವಿರುದ್ಧ ಪರಭಾಷಿಗರು ಇಂದು ಕರ್ನಾಟಕದಲ್ಲಿ ನಡೆಸುತ್ತಿರುವುದೇನು? ಕೇಂದ್ರ ಸರಕಾರ ಬಲವಂತವಾಗಿ ಎಲ್ಲ ಕ್ಷೇತ್ರಗಳಲ್ಲಿ ಹಿಂದಿಯನ್ನು ತುರುಕಲು ಯತ್ನಿಸುತ್ತಿದೆ. ಕನ್ನಡ ನೆಲದಲ್ಲಿ ಹುಟ್ಟಿದ ಬ್ಯಾಂಕುಗಳನ್ನು ಉತ್ತರ ಭಾರತದ ಬ್ಯಾಂಕುಗಳು ಜಪ್ತಿ ಮಾಡಿವೆ. ಕನ್ನಡ ನೆಲ ಜಲದ ಮೇಲೆ ಉತ್ತರ ಭಾರತೀಯ ಉದ್ಯಮಿಗಳು ಹಕ್ಕು ಸಾಧಿಸುತ್ತಿದ್ದಾರೆ. ತಮ್ಮದೇ ನೆಲದಲ್ಲಿ ಕನ್ನಡದಲ್ಲಿ ಮಾತನಾಡಿದರೆ ಕೆಕ್ಕರು ಗಣ್ಣಿನಲ್ಲಿ ನೋಡಿ ‘‘ನಮಗೆ ಕನ್ನಡ ಬರುವುದಿಲ್ಲ, ಹಿಂದಿಯಲ್ಲಿ ಬೊಗಳು’’ ಎಂದು ಬೆದರಿಕೆ ಹಾಕುವ ವಾತಾವರಣ ಸೃಷ್ಟಿಯಾಗಿದೆ. ಪರಭಾಷೆಯ ಹುಲಿ ಸಾಮೂಹಿಕವಾಗಿ ಎರಗಿದಾಗ, ಕನ್ನಡದ ಜಿಂಕೆಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಕೊಂಬು ಬೀಸುವುದು ಹಿಂಸೆಯಾಗುತ್ತದೆಯೆ? ಈ ನಾಡಿನಲ್ಲಿ ಯಾರು ಯಾವ ಬಟ್ಟೆ ಧರಿಸಬೇಕು, ಧರಿಸಬಾರದು ಎನ್ನುವ ಒತ್ತಡ ಹಾಕಿದಾಗ ಅದು ಸರಕಾರಕ್ಕೆ ಹಿಂಸೆಯೆನ್ನಿಸುವುದಿಲ್ಲ, ಯಾರು ಆಹಾರ ಸೇವಿಸಬೇಕು ಎನ್ನುವ ಹೆಸರಿನಲ್ಲಿ ದಾಂಧಲೆ ನಡೆಸಿದಾಗಲೂ ಅದು ಹಿಂಸೆಯೆನ್ನಿಸುವುದಿಲ್ಲ, ಆದರೆ ಬೀದಿಗಿಳಿದು ‘‘ನಿಮ್ಮ ಅಂಗಡಿಗಳಿಗೆ ಕನ್ನಡ ನಾಮಫಲಕ’’ ಹಾಕಿ ಎಂದು ಒತ್ತಾಯಿಸುವುದು ಮಾತ್ರ ಹಿಂಸೆಯಾಗುವುದು ಹೇಗೆ? ಇತರ ಭಾಷೆಗಳ ಜೊತೆಗೆ ಕಡ್ಡಾಯವಾಗಿ ಕನ್ನಡದಲ್ಲೂ ನಾಮಫಲಕಗಳನ್ನು ಹಾಕಬೇಕು ಎಂದು ಸರಕಾರವೇ ಹಲವು ಬಾರಿ ಸೂಚನೆಗಳನ್ನು ನೀಡಿದೆ. ಕನ್ನಡ ನಾಮಫಲಕಗಳಿಲ್ಲದೆ ಇದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ಇಷ್ಟಾದರೂ ಕನ್ನಡದ ನಾಮಫಲಕಗಳನ್ನು ಹಾಕಲು ಉದ್ಯಮಿಗಳು, ಕಚೇರಿಗಳು ಯಾಕೆ ಹಿಂಜರಿಯುತ್ತಿವೆ? ಕನ್ನಡದ ಕುರಿತಂತೆ, ಕನ್ನಡಿಗರ ಕುರಿತಂತೆ ಅವರಿಗಿರುವ ಕೀಳರಿಮೆಯನ್ನು, ತಿರಸ್ಕಾರ ಮನೋಭಾವವನ್ನು ಇದು ಹೇಳುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡ ನುಡಿಗಾಗಿ ಕೆಲವು ಕಾರ್ಯಕರ್ತರು ಬೀದಿಗಿಳಿದರೆ, ಅವರನ್ನು ಬಂಧಿಸುವುದು, ಅವರ ಮೇಲೆ ಹಿಂದೆ ಮುಂದೆ ನೋಡದೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವುದು ಕನ್ನಡ ವಿರೋಧಿ ನಿಲುವಾಗಿದೆ.

ಕನ್ನಡದ ಹೆಸರಿನಲ್ಲಿ ಜನಾಂಗೀಯ ಹಿಂಸೆಯನ್ನು ಎಸಗುವುದು ತಪ್ಪು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ರಾಜ್ಯದಲ್ಲಿ ಕನ್ನಡ ಅಭದ್ರತೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಉತ್ತರ ಭಾರತೀಯರು ತಮ್ಮ ಭಾಷೆ , ಸಂಸ್ಕೃತಿಯನ್ನು ಇಲ್ಲಿನ ಜನರ ಮೇಲೆ ಹೇರಲು ಯತ್ನಿಸುವುದು, ಹಿಂದಿ ತಿಳಿಯದ ಕನ್ನಡಿಗರನ್ನು ಅಸ್ಪಶ್ಯರಂತೆ ನೋಡುವುದು ಸಹಜವಾಗಿಯೇ ಸಂಘರ್ಷಕ್ಕೆ ಕಾರಣವಾಗಬಹುದು. ಇಂದು ಕರ್ನಾಟಕ ಹಿಂದಿ ಭಾಷೆಯಿಲ್ಲದೆಯೇ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಹಲವು ಶತಮಾನಗಳ ಹಿಂದೆಯೇ ಈ ನಾಡಿನಲ್ಲಿ ಒಂದು ಸ್ವತಂತ್ರ ಧರ್ಮ ಬಸವಣ್ಣನ ಮೂಲಕ ಹುಟ್ಟಿ ವಿಶ್ವಮಾನ್ಯವಾಗಿದೆ. ಕನ್ನಡಿಗ ಟಿಪ್ಪು ಸುಲ್ತಾನ್‌ನನ್ನು ಶತಮಾನಗಳ ಹಿಂದೆಯೇ ಅಮೆರಿಕದ ಕ್ರಾಂತಿಕಾರಿಗಳು ತಮ್ಮ ಹೋರಾಟಕ್ಕೆ ಆದರ್ಶವಾಗಿಸಿಕೊಂಡಿದ್ದರು. ಇಂದು ಬೆಂಗಳೂರು ಐಟಿ, ಬಿಟಿಯೂ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗಳನ್ನು ಮಾಡುತ್ತಿದೆ. ಈ ಕಾರಣದಿಂದಲೇ ಉತ್ತರ ಭಾರತೀಯರು ದಕ್ಷಿಣಕ್ಕೆ ಅದರಲ್ಲೂ ಬೆಂಗಳೂರಿನಂತಹ ನಗರಗಳಿಗೆ ಕೆಲಸ ಹುಡುಕಿಕೊಂಡು ಬರುತ್ತಿದ್ದಾರೆ. ಸಹಸ್ರಾರು ಉತ್ತರ ಭಾರತೀಯರಿಗೆ ಈ ಕನ್ನಡ ನೆಲ ಆಶ್ರಯ ಕೊಟ್ಟಿದೆ. ಅವರೆಲ್ಲರೂ ತಮ್ಮ ಭಾಷೆ, ಸಂಸ್ಕೃತಿಯ ಜೊತೆಗೆ ಕನ್ನಡ ಭಾಷೆಯನ್ನೂ ಉಳಿಸಿ ಬೆಳೆಸಲು ಕೈಜೋಡಿಸಬೇಕು ಎಂದು ನಿರೀಕ್ಷಿಸುವುದು ಅಪರಾಧವೆ?. ರಾಷ್ಟ್ರೀಯತೆಯ ಹೆಸರಿನಲ್ಲಿ ಪ್ರಾದೇಶಿಕತೆಯನ್ನು ಹಂತ ಹಂತವಾಗಿ ನುಂಗಿ ಹಾಕುವ ಸಂಚುಗಳನ್ನು ವಿಫಲಗೊಳಿಸಲು ಕನ್ನಡಿಗರು ಒಂದಾಗಿ ಬೀದಿಗಿಳಿಯಲೇಬೇಕಾಗಿದೆ.

ಇದೇ ಸಂದರ್ಭದಲ್ಲಿ ‘ನಾಮಫಲಕಗಳಲ್ಲಿ’ ಕಾಟಾಚಾರಕ್ಕೆ ಕನ್ನಡವನ್ನು ಸೇರಿಸಿದಾಕ್ಷಣ ಕನ್ನಡ ಉದ್ಧಾರವಾಗುತ್ತದೆ ಎಂದು ಭಾವಿಸುವುದು ತಪ್ಪಾಗುತ್ತದೆ. ಕರ್ನಾಟಕದಲ್ಲಿ ಉದ್ಯಮಗಳು, ಕಂಪೆನಿಗಳು, ಕಾರ್ಖಾನೆಗಳು ಕನ್ನಡಿಗರಿಗೆ ಆದ್ಯತೆಯ ಮೇಲೆ ಉದ್ಯೋಗಗಳನ್ನು ನೀಡಬೇಕು. ಈ ನಿಟ್ಟಿನಲ್ಲಿ ಸರೋಜಿನಿ ಮಹಿಷಿ ವರದಿಯನ್ನು ಅನುಷ್ಠಾನಗೊಳಿಸಲು ಸರಕಾರ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು. ಬೀದಿಯಲ್ಲಿರುವ ಯಾವುದೋ ಸಣ್ಣ ಪುಟ್ಟ ಅಂಗಡಿ, ಹೊಟೇಲುಗಳ ನಾಮಫಲಕಗಳನ್ನು ಧ್ವಂಸಗೊಳಿಸಿ, ಬೆದರಿಕೆ ಹಾಕಿ ಅವರಿಂದ ಕನ್ನಡ ನಾಮಫಲಕವನ್ನು ಹಾಕಿಸಬಹುದು. ಆದರೆ ಇದೇ ಸಂದರ್ಭದಲ್ಲಿ ಹೈಕೋರ್ಟ್‌ಗೆ ನುಗ್ಗಿ, ಅಲ್ಲಿನ ವಿದ್ಯಾವಂತ ವಕೀಲರಲ್ಲಿ , ನ್ಯಾಯಾಧೀಶರಲ್ಲಿ ‘ಕನ್ನಡದಲ್ಲಿ ವ್ಯವಹರಿಸಿ, ಕನ್ನಡದಲ್ಲಿ ನ್ಯಾಯಾಲಯ ಕಲಾಪಗಳನ್ನು ನಡೆಸಿ’ ಎಂದು ಬೆದರಿಕೆ ಹಾಕಲು ಸಾಧ್ಯವಿದೆಯೆ? ಬ್ಯಾಂಕುಗಳು, ನ್ಯಾಯಾಲಯ, ಬೃಹತ್ ಕಂಪೆನಿಗಳ ಒಳಗೆ ಕನ್ನಡ ಅನುಭವಿಸುತ್ತಿರುವ ಕೀಳರಿಮೆಗಳನ್ನು ತೊಡೆದು ಹಾಕಲು ಸರಕಾರವೇ ಮುಂದೆ ನಿಂತು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ದೈನಂದಿನ ವ್ಯವಹಾರಗಳ ಸಂದರ್ಭದಲ್ಲಿ ಕನ್ನಡ ಬಳಕೆ ಸಾಧ್ಯವಾಗದೇ ಇದ್ದರೆ ಕನ್ನಡ ನಾಡಿನಲ್ಲಿ ಕನ್ನಡ ಉಳಿಯಲು ಸಾಧ್ಯವಿಲ್ಲ.

ಕರ್ನಾಟಕದಲ್ಲಿ ಎಲ್ಲರ ಮನೆ ಭಾಷೆ ಕನ್ನಡವಲ್ಲ. ಇಲ್ಲಿ ಕೊಂಕಣಿ, ಬ್ಯಾರಿ, ಅರೆಭಾಷೆ, ಕೊಡವ, ಉರ್ದು ಮೊದಲಾದ ಭಾಷೆಗಳನ್ನು ಮನೆ ಭಾಷೆಯಾಗಿ ಬಳಸುವವರಿದ್ದಾರೆ. ಇವರೆಲ್ಲ ಕನ್ನಡವನ್ನು ಕಲಿಯುವುದು ಶಾಲೆಗಳಲ್ಲಿ. ಕನ್ನಡ ಮಾಧ್ಯಮ ಶಾಲೆಗಳ ಸ್ಥಿತಿ ರಾಜ್ಯದಲ್ಲಿ ಹೇಗಿದೆ ಎನ್ನುವುದನ್ನು ನಾವು ನೋಡುತ್ತಿದ್ದೇವೆ. ಖಾಸಗಿ ಶಾಲೆಗಳು ಕಾಟಾಚಾರಕ್ಕೆ ಕನ್ನಡವನ್ನು ಪಠ್ಯವನ್ನಾಗಿ ಕಲಿಸುತ್ತದೆಯಾದರೂ, ಈ ವಿದ್ಯಾರ್ಥಿಗಳಿಗೆ ಕನ್ನಡ ಓದುವುದಕ್ಕಾಗಲಿ, ಮಾತನಾಡುವುದಕ್ಕಾಗಲಿ ಸಾಧ್ಯವಾಗುತ್ತಿಲ್ಲ ಎನ್ನುವುದು ವಾಸ್ತವ. ಇಂಗ್ಲಿಷ್ ಮಾಧ್ಯಮಗಳಲ್ಲಿ ಕಲಿಯುತ್ತಿರುವುದರಿಂದ ಮನೆ ಭಾಷೆಯ ಆನಂತರ ಇವರು ಇಂಗ್ಲಿಷ್‌ನ್ನು ವ್ಯವಹಾರಕ್ಕೆ ಬಳಸುತ್ತಿದ್ದಾರೆ. ಹಿಂದಿಯನ್ನು ಇವರ ಮೇಲೆ ಕೇಂದ್ರ ಸರಕಾರ ಬೇರೆ ಬೇರೆ ರೂಪಗಳಲ್ಲಿ ಬಲವಂತವಾಗಿ ಹೇರುತ್ತಿದೆ. ಕನ್ನಡ ಈ ಯುವ ಸಮೂಹಕ್ಕೆ ಅಪಥ್ಯವಾಗಿದೆ. ಇವರಿಗೆ ಕನ್ನಡವನ್ನು ತಲುಪಿಸುವ ಬಗೆ ಹೇಗೆ? ಕನ್ನಡದಲ್ಲಿ ನಾಮಫಲಕಗಳು ಇದ್ದರೆ ಸಾಕೆ? ಕನ್ನಡದಲ್ಲಿರುವ ನಾಮಫಲಕಗಳನ್ನು ಓದುವ ತಲೆಮಾರನ್ನು ಬೆಳೆಸುವುದು ಕೂಡ ಹೊಣೆಗಾರಿಕೆಯಲ್ಲವೆ? ಪ್ರಾಥಮಿಕ ಶಿಕ್ಷಣದ ಹಂತದಲ್ಲೇ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲು ಸರಕಾರವನ್ನು ಒತ್ತಾಯಿಸುವುದು ಕೂಡ ಇಂದಿನ ಅಗತ್ಯವಾಗಿದೆ.

‘ಕನ್ನಡಕ್ಕಾಗಿ ಕೈಯೆತ್ತು. ಆ ಕೈ ಕಲ್ಪವೃಕ್ಷವಾಗುತ್ತದೆ’ ಎಂದು ಕುವೆಂಪು ಅವರು ಹೇಳಿದ್ದರು. ಕನ್ನಡಕ್ಕಾಗಿ ಕೈಯೆತ್ತಿದವರ ಕೈಗೆ ಕೋಳ ತೋಡಿಸುವುದು ಯಾವ ಕಾರಣಕ್ಕೂ ಸರಕಾರಕ್ಕೆ ಭೂಷಣವಲ್ಲ. ಆದುದರಿಂದ ಕನ್ನಡ ಪರವಾಗಿ ಬೀದಿಗಿಳಿದ ತರುಣರ ಮೇಲಿನ ಮೊಕದ್ದಮೆಗಳನ್ನು ಹಿಂದೆಗೆದು ಅವರನ್ನು ತಕ್ಷಣ ಬಿಡುಗಡೆಗೊಳಿಸಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News