ತುಮಕೂರಿನ ಈ ಆತ್ಮಹತ್ಯೆ ಬರ್ಬರ ಕೊಲೆಯೇ ಅಲ್ಲವೆ?

Update: 2023-11-29 05:00 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಇತ್ತೀಚೆಗೆ ಉಡುಪಿ ಜಿಲ್ಲೆಯಲ್ಲಿ ಒಂದು ಕುಟುಂಬದ ಮೂವರು ಮಹಿಳೆಯರು ಹಾಗೂ ಒಂದು ಮಗುವನ್ನು ದುಷ್ಕರ್ಮಿಯೊಬ್ಬ ಬರ್ಬರವಾಗಿ ಕೊಂದು ಹಾಕಿರುವುದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಯಿತು. ಈ ಕೃತ್ಯದ ವಿರುದ್ಧ ಇಡೀ ಜಿಲ್ಲೆ ಒಂದಾಯಿತು. ಪೊಲೀಸ್ ಇಲಾಖೆಯೂ ತಕ್ಷಣ ಎಚ್ಚೆತ್ತುಕೊಂಡು ಆರೋಪಿಯನ್ನು ಎರಡೇ ದಿನಗಳಲ್ಲಿ ಪತ್ತೆ ಹಚ್ಚಿ ಬಂಧಿಸಿತು. ಯಾವ ತಪ್ಪನ್ನೂ ಮಾಡದ ಒಂದು ಕುಟುಂಬನ ಕೊಲೆಗಾರನ ಕ್ರೌರ್ಯಕ್ಕೆ ನಾಡು ಬೆಚ್ಚಿತು. ಬಲಿಯಾದವರಿಗಾಗಿ ಕಂಬನಿ ಮಿಡಿಯಿತು. ಉಡುಪಿ ಜಿಲ್ಲೆಯಲ್ಲಿ ಸಂತ್ರಸ್ತ ಕುಟುಂಬದ ಪರವಾಗಿ ಬೃಹತ್ ಸಂತಾಪ ಸಭೆಯೂ ನಡೆಯಿತು. ಅಲ್ಪಸಂಖ್ಯಾತ ಸಮುದಾಯಕ್ಕೆ ಸಂಬಂಧ ಪಟ್ಚ ಬೇರೆ ಬೇರೆ ಸಂಘಟನೆಗಳು ಸಂಘಟಿತವಾಗಿ ಸಂತ್ರಸ್ತರ ಪರವಾಗಿ ಸರಕಾರಕ್ಕೆ ಮನವಿ ಸಲ್ಲಿಸಿದವು. ಅಷ್ಟೇ ಅಲ್ಲ, ಪ್ರಕರಣದ ತ್ವರಿತ ವಿಚಾರಣೆ ನಡೆಸಿ ಆರೋಪಿಗೆ ಶಿಕ್ಷೆ ನೀಡಲು ಒತ್ತಾಯಿಸಿದವು. ಒಂದು ಭೀಕರ ಕೃತ್ಯವನ್ನು ಹೀಗೆ ಸಮಾಜ ಸಂಘಟಿತವಾಗಿ ಖಂಡಿಸಿರುವುದು ನಿಜಕ್ಕೂ ಶ್ಲಾಘನೀಯ. ಸಾರ್ವಜನಿಕರ ಒತ್ತಡ ತೀವ್ರವಾದ ಬಳಿಕ ಸ್ಥಳಕ್ಕೆ ಉಸ್ತುವಾರಿ ಸಚಿವರು ಆಗಮಿಸಿದರು. ಗೃಹ ಸಚಿವರೂ ಸ್ಪಂದಿಸಿದರು.

ಉಡುಪಿಯ ಘಟನೆ ಮನಃಪಟಲದಿಂದ ಮಾಸುವ ಮುನ್ನವೇ ತುಮಕೂರಿನಲ್ಲಿ ಹೃದಯವಿದ್ರಾವಕವಾದ, ಬೆಚ್ಚಿ ಬೀಳಿಸುವ ಹತ್ಯಾಕಾಂಡವೊಂದು ನಡೆದಿದೆ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಬಡಕುಟುಂಬವೊಂದರ ಐವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಮಾಡಿರುವ ಸಾಲವೇ ಅವರ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ. ಕಾಕತಾಳೀಯವೆಂದರೆ, ಅವರಿರುವ ಸ್ಥಿತಿಗೆ ಅನ್ವರ್ಥವಾಗುವಂತೆ, ಕುಟುಂಬದ ಹಿರಿಯನ ಹೆಸರೇ ಗರೀಬ್ ಸಾಬ್. ಆತ್ಮಹತ್ಯೆ ಮಾಡಿಕೊಂಡವರಲ್ಲಿ ಓರ್ವ ಮಹಿಳೆ ಮತ್ತು ಮೂವರು ಮಕ್ಕಳು ಸೇರಿದ್ದಾರೆ. ಬಾಲಕಿಗೆ 14 ವರ್ಷ. ಇನ್ನಿಬ್ಬರು 10 ವರ್ಷ ಮತ್ತು 8 ವರ್ಷ ಪ್ರಾಯದ ಕಂದಮ್ಮಗಳು. ಇವರೆಲ್ಲರೂ ತಾವು ಮಾಡದ ತಪ್ಪಿಗೆ ಬಲಿಯಾಗಿದ್ದಾರೆ, ಉಡುಪಿಯ ಅಮಾಯಕ ಮಹಿಳೆಯರು ಮತ್ತು ಮಗುವಿನಂತೆ. ಮಕ್ಕಳನ್ನು ಓದಿಸುವುದಕ್ಕೆಂದು ಮಾಡಿರುವ ಸಾಲ ಅಂತಿಮವಾಗಿ ಇಡೀ ಕುಟುಂಬದ ಕೊರಳಿಗೆ ಉರುಳಾಗಿ ಹೋಯಿತು. ತಮ್ಮ ಸಾವಿಗೆ ಯಾರು ಹೊಣೆ ಎನ್ನುವುದನ್ನು ಪತ್ರದಲ್ಲಿ ಬರೆದಿಟ್ಟು ಹೋಗಿದ್ದಾರೆ. ಮುಖ್ಯವಾಗಿ ಇವರ ಬಡತನ, ದೈನೇಸಿ ಸ್ಥಿತಿಯ ಜೊತೆಗೆ ನೆರೆಹೊರೆಯವರ ಕಿರುಕುಳ ಅವರನ್ನು ಬದುಕಲಾಗದ ಪರಿಸ್ಥಿತಿಗೆ ತಂದು ನಿಲ್ಲಿಸಿತು. ಒಂದು ಮೂಲದ ಪ್ರಕಾರ, ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಇವರು ಬಡ್ಡಿ ಸಾಲವನ್ನು ಪಡೆದುಕೊಂಡಿದ್ದಾರೆ. ಈ ಸಾಲವನ್ನು ತೀರಿಸಲಾಗದೆ ಸಾಲದಾತರಿಂದ ತೀವ್ರ ಬೆದರಿಕೆಯನ್ನು ಎದುರಿಸುತ್ತಿದ್ದರು. ನೆರೆಹೊರೆಯವರ ನೆರವೂ ಇವರಿಗೆ ಸಿಗಲಿಲ್ಲ. ಮನೆ ಬಾಡಿಗೆ ಕಟ್ಟಲೂ ಸಾಧ್ಯವಿಲ್ಲ ಎನ್ನುವ ಸ್ಥಿತಿಯಲ್ಲಿದ್ದರು. ಅಂತಿಮವಾಗಿ ಎಲ್ಲ ಅವಮಾನ, ಬೆದರಿಕೆಗಳಿಂದ ಮುಕ್ತಿಯನ್ನು ಪಡೆಯಲು ಸಾವನ್ನು ಆರಿಸಿಕೊಂಡರು.

ಮಕ್ಕಳನ್ನು ಓದಿಸುವುದಕ್ಕೆಂದೇ ಸಾಲ ಮಾಡಿದ್ದ ಕುಟುಂಬವನ್ನು ಸಾಲದ ಬಡ್ಡಿ ಅಂತಿಮವಾಗಿ ಅತ್ಯಂತ ಕ್ರೂರವಾಗಿ ಕೊಂದು ಹಾಕಿತು. ಇಲ್ಲಿ ಕೊಲೆಗಾರ ಪ್ರತ್ಯಕ್ಷವಾಗಿ ಕಾಣಿಸಿಕೊಂಡಿಲ್ಲ ಎನ್ನುವ ಒಂದೇ ಕಾರಣದಿಂದ ಯಾರಿಗೂ ಇದೊಂದು ಬರ್ಬರ ಕೊಲೆ ಎಂದು ಅನ್ನಿಸುತ್ತಿಲ್ಲ. ಹಲವರು ‘‘ಆತ್ಮಹತ್ಯೆಯೇ ಸಂಕಟಗಳಿಗೆ ಪರಿಹಾರವಲ್ಲ’’ ಎಂದು ಉಪದೇಶಗಳನ್ನು ನೀಡುತ್ತಿದ್ದಾರೆ. ಸಾಲದಾತರ ಕಿರುಕುಳಗಳು, ಜೀವ ಬೆದರಿಕೆ, ಅವರು ಮಾಡುವ ಅವಮಾನಗಳು ಪ್ರತೀ ಕ್ಷಣವೂ ಅವರನ್ನು ಕೊಂದು ಹಾಕುತ್ತಿದ್ದವು. ಈ ಸಂದರ್ಭದಲ್ಲಿ ಅವರಿಗೆ ತಕ್ಷಣ ನೆರವಾಗಬೇಕಾದವರು, ಅವರ ಸಂಕಟಗಳಿಗೆ ಸಾಂತ್ವನ ಹೇಳಬೇಕಾದವರು ನೆರೆಹೊರೆಯ ಜನರು. ಆದರೆ ಅವರಿಂದಲೂ ನಾವು ದಿನ ನಿತ್ಯ ಕಿರುಕುಳ ಎದುರಿಸುತ್ತಿದ್ದೆವು ಎನ್ನುವುದನ್ನು ಡೆತ್‌ನೋಟ್‌ನಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಸಾವಿಗೆ ಇಂಥವರೇ ಕಾರಣ ಎಂದು ಅವರು ಸ್ಪಷ್ಟವಾಗಿ ಬರೆದಿಟ್ಟಿದ್ದಾರೆ. ಪುಟ್ಟ ಮಕ್ಕಳು ಸೇರಿದಂತೆ ಇಡೀ ಕುಟುಂಬ ಸಾವಿಗೀಡಾಗಿರುವಾಗ, ಊರು ಒಂದಾಗಿ ನ್ಯಾಯಕ್ಕೆ ಬೇಡಿಕೆ ಇಡುವುದು ಅತ್ಯಗತ್ಯವಾಗಿತ್ತು. ಸ್ಥಳಕ್ಕೆ ಗೃಹ ಸಚಿವರು ಭೇಟಿ ನೀಡಿದ್ದಾರೆ ಮಾತ್ರವಲ್ಲ ‘‘ಮೀಟರ್ ಬಡ್ಡಿ ದಂಧೆ’ ಕಂಡು ಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಗೃಹಸಚಿವ ಪರಮೇಶ್ವರ್ ತುಮಕೂರು ಜಿಲ್ಲೆಯ ಉಸ್ತುವಾರಿ ಸಚಿವರು ಕೂಡ. ಆದುದರಿಂದ ‘ಕಂಡು ಬಂದರೆ ಕ್ರಮ’ ಎನ್ನುವ ಬೀಸು ಹೇಳಿಕೆಯಿಂದ ಸಂತ್ರಸ್ತರಿಗೆ ನ್ಯಾಯ ನೀಡಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಮೀಟರ್ ಬಡ್ಡಿ ದಂಧೆಕೋರರನ್ನು ಗುರುತಿಸಿ ಅವರ ಮೇಲೆ ಕ್ರಮ ತೆಗೆದುಕೊಳ್ಳಲು, ಅವರ ಬಗ್ಗೆ ವರದಿ ನೀಡಲು ಗೃಹ ಸಚಿವರು ತಕ್ಷಣ ಆದೇಶವನ್ನು ನೀಡಬೇಕಾಗಿತ್ತು. ಮೀಟರ್ ಬಡ್ಡಿ ಕೋರರು ಆರ್ಥಿಕವಾಗಿ ಬಲಾಢ್ಯರು ಮಾತ್ರವಲ್ಲ, ತಮ್ಮ ಜೊತೆಗೆ ಗೂಂಡಾಗಳ ಪಡೆಯನ್ನೇ ಇಟ್ಟುಕೊಂಡಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ರಾಜಕಾರಣಿಗಳಿಗೆ ಇವರ ಹಣ ಮಾತ್ರವಲ್ಲ, ಈ ಗೂಂಡಾಗಳೂ ಕಾರ್ಯಕರ್ತರ ರೂಪದಲ್ಲಿ ಪ್ರಯೋಜನಕ್ಕೆ ಬರುತ್ತಾರೆ. ಆದುದರಿಂದಲೇ ರಾಜಕಾರಣಿಗಳು ಮೀಟರ್ ಬಡ್ಡಿಕೋರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಈ ಹಿಂಜರಿಕೆಯೇ ಬಡ್ಡಿ ದಂಧೆಗೆ ಕುಮ್ಮಕ್ಕು ನೀಡುತ್ತಿದೆ.

ಮೀಟರ್ ಬಡ್ಡಿ ದಂಧೆ ಈ ನಾಡಿನಲ್ಲಿ ವ್ಯವಸ್ಥಿತವಾಗಿ ಹರಡಿಕೊಂಡಿದೆ. ರೈತರು, ಕಾರ್ಮಿಕರ ಸಾಲು ಸಾಲು ಆತ್ಮಹತ್ಯೆಗಳಲ್ಲಿ ಇವರ ನೇರ ಪಾತ್ರವಿದೆ. ಮೀಟರ್ ಬಡ್ಡಿ ದಂಧೆ ಕಾನೂನು ಪ್ರಕಾರ ಅಪರಾಧ ಎನ್ನುವುದು ಗೊತ್ತಿದ್ದೂ ಬಡವರು, ರೈತರ ಅಸಹಾಯಕತೆಯನ್ನು ಬಳಸಿಕೊಂಡು ತಳಸ್ತರದ ಜನರ ಆರ್ಥಿಕತೆಯನ್ನು ನಿಯಂತ್ರಿಸುತ್ತಾ ಬರುತ್ತಿದ್ದಾರೆ. ಮೀಟರ್ ಬಡ್ಡಿ ದಂಧೆ ಒಂದಲ್ಲ ಒಂದು ದಿನ ತಮ್ಮ ಕೊರಳಿಗೆ ಉರುಳಾಗುತ್ತದೆ ಎಂದು ಗೊತ್ತಿದ್ದೂ ಬಡವರು ಅವರ ಬಲೆಗೆ ಬೀಳುವುದಕ್ಕೆ ಮುಖ್ಯ ಕಾರಣವನ್ನು ನಾವು ಗಮನಿಸಬೇಕಾಗಿದೆ. ಇಂದಿಗೂ ಬಡವರು, ಸಣ್ಣ ಪುಟ್ಟ ಭೂಮಿಯನ್ನು ಹೊಂದಿದ ರೈತರು ಬ್ಯಾಂಕಿನ ಮೆಟ್ಟಿಲು ತುಳಿದರೆ ಅವರಿಗೆ ಸಾಲ ಹುಟ್ಟುವುದಿಲ್ಲ. ಸಾವಿರ ನೆಪಗಳನ್ನು ಒಡ್ಡಿ ಅವರಿಗೆ ಸಾಲವನ್ನು ನಿರಾಕರಿಸಲಾಗುತ್ತದೆ. ಇಂತಹ ಹೊತ್ತಿನಲ್ಲಿ, ಸ್ವಂತ ನೆಲವೂ ಇಲ್ಲದ ಗರೀಬ್ ಸಾಬ್ ಎನ್ನುವ ಬಡವನಿಗೆ ಮಕ್ಕಳ ಶಿಕ್ಷಣಕ್ಕಾಗಿ ಸಾಲವನ್ನು ನೀಡುವುದು ಸಾಧ್ಯವೆ? ಇಂತಹ ಸಂದರ್ಭದಲ್ಲಿ ಆತ ಸ್ಥಳೀಯ ಬಡ್ಡಿ ವ್ಯಾಪಾರಿಗಳ ಬಳಿ ಹೋಗಿದ್ದಾನೆ. ಅಥವಾ ಬಡ್ಡಿ ವ್ಯಾಪಾರಿಗಳು ಅವನ ಅಸಹಾಯಕತೆಯನ್ನು ಬಳಸಿಕೊಂಡಿದ್ದಾರೆ. ಒಂದು ರೀತಿಯಲ್ಲಿ ಸಾಲದ ಉರುಳನ್ನು ಬಡವರ ಕೊರಳಿಗೆ ಹಾಕಿ ಇನ್ನೊಂದು ತುದಿಯನ್ನು ಬಡ್ಡಿ ವ್ಯಾಪಾರಿಗಳು ಎಳೆಯುತ್ತಿರುತ್ತಾರೆ. ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಂಡರೂ, ಇದು ಪರೋಕ್ಷವಾಗಿ ಬಡ್ಡಿ ದಂಧೆಕೋರರು ನಡೆಸುವ ಕಗ್ಗೊಲೆಯೇ ಆಗಿದೆ.ಆದುದರಿಂದ, ತುಮಕೂರಿನಲ್ಲಿ ನಡೆದಿರುವ ಆತ್ಮಹತ್ಯೆಯನ್ನು ಬಡ್ಡಿ ವ್ಯಾಪಾರಿಗಳು ನಡೆಸಿದ ಬರ್ಬರ ಕೊಲೆಯೆಂದು ಪರಿಗಣಿಸಿ ತನಿಖೆ ನಡೆಸಬೇಕು ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು.

ಸಿದ್ದರಾಮಯ್ಯ ಸರಕಾರ ಬಡವರಿಗಾಗಿ ಉಚಿತಗಳನ್ನು ಘೋಷಿಸಿದಾಗ ಇದರಿಂದ ಜನರು ಸೋಮಾರಿಗಳಾಗುತ್ತಾರೆ ಎಂದು ಹುಯಿಲೆಬ್ಬಿಸಿದವರು ಹಲವರು. ಇಂದಿಗೂ ಒಂದು ಹೊತ್ತಿನ ಊಟಕ್ಕ್ಕೆ ಒದ್ದಾಡುವ ಕುಟುಂಬಗಳು ನಾಡಿನಲ್ಲಿವೆ. ಸರಕಾರ ನೀಡುವ ಉಚಿತ ಅಕ್ಕಿಯಿಂದ ಹೊಟ್ಟೆ ತುಂಬಾ ಉಂಡ ಕುಟುಂಬಗಳ ಸಂಖ್ಯೆ ದೊಡ್ಡದಿದೆ. ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ನೀಡಿರುವ ಮಾಸಿಕ ೨,೦೦೦ ರೂ.ಯಿಂದ ಪ್ರಯೋಜನ ಪಡೆದ ಮಹಿಳೆಯರು ಸಾವಿರಾರು ಜನರಿದ್ದಾರೆ. ಶಕ್ತಿ ಯೋಜನೆಯಿಂದಾಗಿ, ದುಡಿದ ದಿನದ ಸಂಬಳವನ್ನು ಬಸ್ಸಿಗೇ ವ್ಯಯಿಸಬೇಕಾದ ಸ್ಥಿತಿಯಿಂದ ಕಾರ್ಮಿಕ ಮಹಿಳೆಯರು ಹೊರ ಬರುತ್ತಿದ್ದಾರೆ. ಬಡವರಿಗಾಗಿ ಜಾರಿಗೊಳಿಸಿರುವ ಇಂತಹ ಯೋಜನೆಗಳು ಒಂದಿಷ್ಟು ಕುಟುಂಬಗಳನ್ನು ಆತ್ಮಹತ್ಯೆಯಂತಹ ನಿರ್ಧಾರದಿಂದ ರಕ್ಷಿಸಿದರೆ ಅದುವೇ ಬಹುದೊಡ್ಡ ಯಶಸ್ಸು. ಗರೀಬ್ ಸಾಬ್‌ನಂತಹ ಕುಟುಂಬಗಳ ಸಮಸ್ಯೆಗಳನ್ನು ಅಧ್ಯಯನ ನಡೆಸಿ, ಅವರನ್ನು ಬಡ್ಡಿ ವ್ಯಾಪಾರಿಗಳಿಂದ ಪಾರು ಮಾಡುವ ಬಗ್ಗೆಯೂ ಸರಕಾರ ಗಂಭೀರ ಕ್ರಮ ಕೈಗೊಳ್ಳಬೇಕು. ಹಾಡು ಹಗಲೇ ಬಡ್ಡಿ ವ್ಯಾಪಾರಿಗಳಿಂದ ನಡೆಯುವ ಇಂತಹ ಕೊಲೆಗಳು ಇನ್ನಾದರೂ ನಿಲ್ಲಬೇಕು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News