ಕನ್ನಡ ಮಾಧ್ಯಮ: ಬಡವರ ಮಕ್ಕಳು ಬಲಿಪಶುವಾಗದಿರಲಿ

Update: 2024-06-22 05:19 GMT

ಸಾಂದರ್ಭಿಕ ಚಿತ್ರ PC: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಜೊತೆಗೆ ಇಂಗ್ಲಿಷ್ ಮಾಧ್ಯಮಗಳಲ್ಲಿ ಕಲಿಸುವ ಸರಕಾರದ ಆದೇಶಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಈ ಆದೇಶದ ವಿರುದ್ಧ ಪ್ರಾಧಿಕಾರದ ಅಧ್ಯಕ್ಷರು ಸಚಿವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದ್ದಾರೆ. ರಾಜ್ಯದ ಒಂದು ಸಾವಿರಕ್ಕೂ ಅಧಿಕ ಪ್ರಾಥಮಿಕ ಶಾಲೆಗಳಲ್ಲಿ 2024-25ನೇ ಸಾಲಿನಿಂದ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಇಂಗ್ಲಿಷ್ ಮಾಧ್ಯಮವನ್ನು (ದ್ವಿ ಭಾಷಾ ಮಾಧ್ಯಮ) ಅಳವಡಿಸಲು ಸರಕಾರ ಈಗಾಗಲೇ ನಿರ್ಧರಿಸಿದೆ. ಈ ಆದೇಶವು ಕನ್ನಡದ ಸಾರ್ವಭೌಮತೆಗೆ ಧಕ್ಕೆ ಉಂಟು ಮಾಡುತ್ತದೆ ಎನ್ನುವುದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಚಿಂತೆಯಾಗಿದೆ. ಆದೇಶವು ಕನ್ನಡ ಭಾಷಾ ಕಲಿಕೆಯ ಅಧಿ ನಿಯಮ 2015ಕ್ಕೆ ವಿರುದ್ಧವಾಗಿದೆ ಎನ್ನುವುದನ್ನೂ ಪ್ರಾಧಿಕಾರ ಉಲ್ಲೇಖಿಸಿದೆ. ಪ್ರಾಧಿಕಾರದ ಈ ಆತಂಕ, ಊರು ನೆರೆಯಿಂದ ಕೊಚ್ಚಿ ಹೋಗುತ್ತಿರುವಾಗ, ಮನೆಯಾಕೆ ಅಂಗಳದ ತುಳಸಿ ಕಟ್ಟೆಯ ಬಗ್ಗೆ ಚಿಂತೆ ಮಾಡಿದಂತಾಗಿದೆ. ರಾಜ್ಯ ಮಾತ್ರವಲ್ಲ, ಇಡೀ ದೇಶದಲ್ಲಿ ಸರಕಾರಿ ಶಾಲೆಗಳು ಹಂತ ಹಂತವಾಗಿ ಮುಚ್ಚುತ್ತಿವೆ. ಕರ್ನಾಟಕದಲ್ಲೇ ಕಳೆದ ಐದು ವರ್ಷಗಳಲ್ಲಿ ಮೂರು ಸಾವಿರಕ್ಕಿಂತಲೂ ಅಧಿಕ ಸರಕಾರಿ ಶಾಲೆಗಳು ಮುಚ್ಚಿವೆ.ಇದರ ಪರಿಣಾಮವಾಗಿ ನಾಡಿನ ಶೋಷಿತ ಸಮುದಾಯದ ಸಹಸ್ರಾರು ಮಕ್ಕಳು ಶಿಕ್ಷಣದಿಂದಲೇ ವಂಚಿತರಾಗಿದ್ದಾರೆ. ವಿಪರ್ಯಾಸವೆಂದರೆ, ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯ ಕೊರತೆಯನ್ನು ಮುಂದಿಟ್ಟುಕೊಂಡೇ ಸರಕಾರ ಸಾವಿರಾರು ಶಾಲೆಗಳನ್ನು ಮುಚ್ಚಿಸಿವೆ. ಇನ್ನಷ್ಟು ಶಾಲೆಗಳು ಮುಚ್ಚುವ ಹಂತದಲ್ಲಿವೆ. ಇಂತಹ ಸಂದರ್ಭದಲ್ಲಿ ಸರಕಾರಿ ಶಾಲೆಗಳ ಅಳಿವಿಗೆ ಕಾರಣಗಳನ್ನು ಹುಡುಕಿ ಅವುಗಳನ್ನು ಉಳಿಸುವುದರ ಕಡೆಗೆ ನಾಡಿನ ಶಿಕ್ಷಣ ತಜ್ಞರು ಆದ್ಯತೆಯನ್ನು ನೀಡಬೇಕಾಗಿದೆ. ಸರಕಾರಿ ಶಾಲೆಗಳು ಉಳಿದ ಆನಂತರ ತಾನೇ, ಆ ಶಾಲೆಯೊಳಗೆ ಯಾವ ಮಾಧ್ಯಮದಲ್ಲಿ ಬೋಧಿಸಬೇಕು ಎನ್ನುವುದನ್ನು ನಾವು ನಿರ್ಧರಿಸಲು ಸಾಧ್ಯ? ಕನ್ನಡ ಮಾಧ್ಯಮದ ಮೇಲಿನ ಪ್ರೀತಿಯೆನ್ನುವುದು ‘ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ’ ಎಂಬಂತಾಗಬಾರದಲ್ಲ?

ಭವಿಷ್ಯದಲ್ಲಿ ಕನ್ನಡ ಉಳಿಯಬೇಕಾದರೆ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಮಾಡಬೇಕು ಎನ್ನುವುದರ ಬಗ್ಗೆ ಯಾರಿಗೂ ಭಿನ್ನಭಿಪ್ರಾಯವಿಲ್ಲ. ಆದರೆ ಕನ್ನಡವನ್ನು ಉಳಿಸುವ ಹೊಣೆಗಾರಿಕೆಯನ್ನು ಕೇವಲ ಮುಳುಗುತ್ತಿರುವ ಸರಕಾರಿ ಶಾಲೆಗಳಿಗಷ್ಟೇ ಹೊರಿಸುವುದರಿಂದ ಎರಡು ಅಪಾಯಗಳಿವೆ. ಒಂದು, ಸರಕಾರಿ ಶಾಲೆಗಳು ಹಂತ ಹಂತವಾಗಿ ಮುಚ್ಚಲ್ಪಡುತ್ತವೆ. ಎರಡನೆಯದು, ಈ ಸರಕಾರಿ ಶಾಲೆಗಳ ಜೊತೆ ಜೊತೆಗೇ ಕನ್ನಡ ಮಾಧ್ಯಮ ಶಿಕ್ಷಣವೂ ಇಲ್ಲವಾಗಿ ಬಿಡುತ್ತದೆ. ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುವುದಕ್ಕೆ ಒಂದು ಮುಖ್ಯ ಕಾರಣ ಇಂಗ್ಲಿಷ್ ಮಾಧ್ಯಮ. ಇದನ್ನು ಇಂಗ್ಲಿಷ್ ಮಾಧ್ಯಮದ ಮೋಹ ಎಂದು ಕನ್ನಡ ಪರ ಚಿಂತಕರು ಟೀಕಿಸುವುದಿದೆ. ಆದರೆ, ಆಧುನಿಕ ದಿನಗಳಲ್ಲಿ ಇಂಗ್ಲಿಷ್ ಇಲ್ಲದೆಯೇ ಬರೇ ಕನ್ನಡದ ಮೂಲಕ ಶೋಷಿತ ಸಮುದಾಯದ ಮಕ್ಕಳು ಬದುಕನ್ನು ಕಟ್ಟಿಕೊಳ್ಳುವುದು ಅಸಾಧ್ಯ ಎನ್ನುವ ಸ್ಥಿತಿಯಿದೆ. ಕನ್ನಡ ಉಳಿಸುವ ಹೊಣೆಗಾರಿಕೆಯನ್ನು ಈ ನಾಡಿನ ಶೋಷಿತ, ಬಡ ಮಕ್ಕಳೇ ಹೊತ್ತುಕೊಳ್ಳಬೇಕು ಎಂದೂ ಕನ್ನಡ ಪರ ಹೋರಾಟಗಾರರು ಬಯಸಬಾರದು. ಸರಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತೇ ಇಂಗ್ಲಿಷ್‌ನಲ್ಲಿ ಸಾಧನೆಗಳನ್ನು ಮಾಡಿದವರಿಲ್ಲವೆ? ಎಂಬ ಉದಾಹರಣೆಗಳನ್ನು ನೀಡುವವರೂ ಹಲವರು. ಆದರೆ, ಅವರ ಸಾಧನೆಗಳಲ್ಲಿ ಇಂಗ್ಲಿಷ್‌ನ ಪಾತ್ರ ಬಹುದೊಡ್ಡದಿದೆ ಎನ್ನುವುದನ್ನು ಮರೆಯಲಾಗುವುದಿಲ್ಲ. ಮತ್ತು ಅವರೆಲ್ಲರೂ ವಿಶೇಷ ಉದಾಹರಣೆಗಳು. ಇಂದಿನ ಸರಕಾರಿ ಶಾಲೆಗಳ ಕನ್ನಡ ಮಾಧ್ಯಮದ ಜೊತೆಗೆ ಅವರನ್ನು ತುಲನೆ ಮಾಡಿ, ಬಡವರ ಮಕ್ಕಳ ಭವಿಷ್ಯದ ಮೇಲೆ ಚೆಲ್ಲಾಟವಾಡುವ ಯಾವ ಅಧಿಕಾರವೂ ಕನ್ನಡ ಪರ ಹೋರಾಟಗಾರರಿಗೆ ಇಲ್ಲ.

ಮೂಲಭೂತ ಸೌಕರ್ಯಗಳ ಕೊರತೆ, ಶಿಕ್ಷಕರ ಕೊರತೆ, ಗುಣಮಟ್ಟದ ಶಿಕ್ಷಣದ ಕೊರತೆ ಇವೆಲ್ಲವುಗಳ ಜೊತೆಗೆ ಇಂಗ್ಲಿಷ್ ಭಾಷಾ ಮಾಧ್ಯಮದ ದೆಸೆಯಿಂದಾಗಿ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿವೆ. ಸರಕಾರಿ ಶಾಲೆಗಳನ್ನು ಸ್ಥಾಪಿಸಿರುವುದು ಎಲ್ಲರಿಗೂ ಶಿಕ್ಷಣವನ್ನು ತಲುಪಿಸುವ ಸಂವಿಧಾನದ ಆಶಯವನ್ನು ಈಡೇರಿಸುವುದಕ್ಕಾಗಿ. ಸಂವಿಧಾನದ ಈ ಮುಖ್ಯ ಆಶಯವೇ ವಿಫಲವಾಗುತ್ತಿರುವಾಗ, ಭಾಷಾ ಕಲಿಕೆಯ ಅಧಿನಿಯಮವನ್ನು ಮುಂದೊಡ್ಡಿ ಪ್ರಾಧಿಕಾರ ಕನ್ನಡ ಮಾಧ್ಯಮವನ್ನು ಹೇರಲು ಮುಂದಾಗುವುದು ಎಷ್ಟು ಸರಿ? ಕನ್ನಡ ಮಾಧ್ಯಮ ಶಾಲೆಗಳು ಇತರ ಖಾಸಗಿ ಶಾಲೆಗಳ ಜೊತೆಗೆ ಸ್ಪರ್ಧಿಸಲು ವಿಫಲವಾಗುತ್ತಿವೆ .

ಕನ್ನಡ ಮಾಧ್ಯಮ ಎನ್ನುವ ಕಾರಣಕ್ಕಾಗಿ ಮಕ್ಕಳ ಸಂಖ್ಯೆ ಇಳಿಮುಖವಾಗಿ ಶಾಲೆಗಳನ್ನೇ ಮುಚ್ಚಿಸಬೇಕಾಗುತ್ತದೆ ಎಂದಾಗ, ಆ ಶಾಲೆಯನ್ನು ಮುಚ್ಚಿಸುವುದಕ್ಕಿಂತ ಅಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಅಳವಡಿಸಿಕೊಂಡು ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡುವುದು ಸರಿಯಾದ ಕ್ರಮ. ಯಾಕೆಂದರೆ ಸರಕಾರಿ ಶಾಲೆಗಳು ಮುಚ್ಚಲ್ಪಟ್ಟಾಗ ಅದರ ನೇರ ಸಂತ್ರಸ್ತರು ಈ ನಾಡಿನ ಶೋಷಿತ ಸಮುದಾಯದ ಮಕ್ಕಳು. ಒಂದು ಸರಕಾರಿ ಶಾಲೆ ಮುಚ್ಚಿದಾಗ ಅದರ ಜೊತೆ ಜೊತೆಗೆ ಹಲವು ಮಕ್ಕಳು ಶಾಲೆಯನ್ನೇ ತೊರೆಯಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಈ ದೇಶದ ತಳಸ್ತರದ ಮಕ್ಕಳು ಆರ್ಥಿಕ ಕಾರಣದಿಂದ ಶಿಕ್ಷಣ ಪಡೆಯದೇ ಇರುವ ಸ್ಥಿತಿ ನಿರ್ಮಾಣವಾಗುವುದಕ್ಕಿಂತ ಯಾವ ಮಾಧ್ಯಮಗಳಲ್ಲೇ ಆಗಲಿ ಶಿಕ್ಷಣವನ್ನು ಪಡೆಯುವುದು ಅತ್ಯಗತ್ಯವಾಗಿದೆ. ಕನ್ನಡ ಹೆಸರಿನಲ್ಲಿ ಬಡವರ ಮಕ್ಕಳನ್ನು ಶಿಕ್ಷಣದಿಂದ, ಇಂಗ್ಲಿಷ್‌ನಿಂದ, ವಿಜ್ಞಾನ ತಂತ್ರಜ್ಞಾನದಿಂದ ಸಂಪೂರ್ಣವಾಗಿ ಹೊರಗಿಡುವ ಕೆಲಸ ಖಂಡಿತ ಆಗಬಾರದು. ಇರುವ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸಬಾರದು ಎಂದು ಒತ್ತಾಯಿಸುವ ಪ್ರಾಧಿಕಾರ, ಮುಚ್ಚಲ್ಪಟ್ಟಿರುವ ಸಾವಿರಾರು ಸರಕಾರಿ ಶಾಲೆಗಳನ್ನು ಮತ್ತೆ ತೆರೆಯಬೇಕು ಎಂದು ಯಾಕೆ ಒತ್ತಾಯಿಸುತ್ತಿಲ್ಲ? ಈಗಾಗಲೇ ಮುಚ್ಚಲ್ಪಟ್ಟಿರುವ ಬಹುತೇಕ ಸರಕಾರಿ ಶಾಲೆಗಳು ಕನ್ನಡ ಮಾಧ್ಯಮ ಶಾಲೆಗಳೇ ಆಗಿವೆ. ಇದರಿಂದ ಕನ್ನಡಕ್ಕೆ ಧಕ್ಕೆಯಾಗಿಲ್ಲವೆ? ಮುಚ್ಚಲ್ಪಟ್ಟಿರುವ ಸರಕಾರಿ ಶಾಲೆಗಳನ್ನು ಮತ್ತೆ ಆರಂಭಿಸಿ ಎನ್ನುವ ಚಳವಳಿಯ ಜೊತೆಗೆ ಪ್ರಾಧಿಕಾರದ ಕನ್ನಡ ಆಂದೋಲನ ಆರಂಭವಾಗಲಿ.

ಸರಕಾರಿ ಶಾಲೆಗಳನ್ನು ಉಳಿಸಿಕೊಂಡು ಅದರ ಜೊತೆ ಜೊತೆಗೇ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಡಬೇಕು. ಇಂಗ್ಲಿಷ್ ಮಾಧ್ಯಮದ ಮೂಲಕ ಸರಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಸಾಧ್ಯವಾಗುತ್ತದೆ ಎಂದಾದರೆ ಎಲ್ಲ ಸರಕಾರಿ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮವಾಗಿ ಪರಿವರ್ತಿಸಬೇಕು. ದ್ವಿಭಾಷಾ ಮಾಧ್ಯಮದ ಮೂಲಕ ಕನ್ನಡ ಮತ್ತು ಇಂಗ್ಲಿಷ್ ಜೊತೆ ಜೊತೆಯಾಗಿ ಸಾಗಿದರೆ ಮಾತ್ರ ಸರಕಾರಿ ಶಾಲೆಗಳು ಉಳಿಯುತ್ತವೆ. ಶೋಷಿತ ಸಮುದಾಯದ ಮಕ್ಕಳು ಸರಕಾರಿ ಶಾಲೆಗಳ ಮೂಲಕ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಅದರ ಜೊತೆಗೇ ಕನ್ನಡವೂ ಉಳಿಯುತ್ತದೆ. ಬೆಳೆಯುತ್ತದೆ. ಸರಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಕಡ್ಡಾಯ ಮಾಡುವ ಹಟದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಏಕ ಕಾಲದಲ್ಲಿ ಸರಕಾರಿ ಶಾಲೆಗಳಿಗೂ, ಕನ್ನಡದ ಬೆಳವಣಿಗೆಗೂ ಧಕ್ಕೆ ಉಂಟು ಮಾಡಲಿದೆ. ಇದರ ನೇರ ಸಂತ್ರಸ್ತರು ಈ ನಾಡಿನ ಬಡವರ ಮಕ್ಕಳು ಎನ್ನುವ ಎಚ್ಚರಿಕೆ ಪ್ರಾಧಿಕಾರಕ್ಕೂ, ಕನ್ನಡ ಪರ ಹೋರಾಟಗಾರರಿಗೂ ಇರಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News