ಸಾರ್ವಜನಿಕ ಶೌಚಾಲಯಗಳ ಅಭಾವ
ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸಾರ್ವಜನಿಕ ಶೌಚಾಲಯಗಳ ಸಂಖ್ಯೆಯೂ ಜಾಸ್ತಿಯಾಗಬೇಕು. ಆದರೆ ನಮ್ಮ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ನಗರಗಳಲ್ಲಿ, ಪಟ್ಟಣಗಳಲ್ಲಿ ಹಾಗೂ ಪ್ರವಾಸಿ ಕೇಂದ್ರಗಳಲ್ಲಿ ಸಾರ್ವಜನಿಕ ಶೌಚಾಲಯ ಹಾಗೂ ಮೂತ್ರಾಲಯಗಳ ಕೊರತೆ ತೀವ್ರವಾಗುತ್ತಿದೆ. ನಗರಗಳಿಗೆ ತಮ್ಮ ಕೆಲಸಗಳಿಗಾಗಿ ಬರುವ ಹಾಗೂ ಪ್ರವಾಸಿ ತಾಣಗಳಿಗೆ ಬರುವ ಜನರು ತಮ್ಮ ನೈಸರ್ಗಿಕ ಕರೆಯನ್ನು ನಿಭಾಯಿಸಲು ಪರದಾಡಬೇಕಾಗಿದೆ. ಇದು ಸರಕಾರ ತಕ್ಷಣ ನಿವಾರಿಸಬೇಕಾದ ಮೂಲಭೂತ ಸಮಸ್ಯೆ. ಆದರೆ ಸ್ವಾತಂತ್ರ್ಯ ನಂತರದ ಏಳು ದಶಕಗಳಲ್ಲಿ ಯಾವುದೇ ಸರಕಾರ ಬಂದರೂ ಈ ಸಮಸ್ಯೆ ನಿವಾರಣೆಯಾಗಿಲ್ಲ. ಕೆಲವು ಕಡೆ ಕಟ್ಟಡ ನಿರ್ಮಾಣಕ್ಕಾಗಿ ಹಾಗೂ ರಸ್ತೆಗಳ ಅಗಲೀಕರಣಕ್ಕಾಗಿ ಮುಂಚೆ ಇದ್ದ ಶೌಚಾಲಯ ಹಾಗೂ ಮೂತ್ರಾಲಯಗಳನ್ನು ನೆಲಸಮಗೊಳಿಸಲಾಗಿದೆ. ಅಲ್ಲಿ ಮತ್ತೆ ಹೊಸ ಮೂತ್ರಾಲಯ ನಿರ್ಮಿಸಿಲ್ಲ. ಜನಸಂಖ್ಯೆಗೆ ತಕ್ಕಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಯಾವುದೇ ಸರಕಾರದ ಪ್ರಾಥಮಿಕ ಕರ್ತವ್ಯ. ಆದರೆ ಸದಾ ಅಭಿವೃದ್ಧಿಯ ಮಂತ್ರವನ್ನು ಜಪಿಸುವ ಸರಕಾರಗಳಿಗೆ ಜನಸಾಮಾನ್ಯರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ವಿವೇಕವೂ ಇಲ್ಲದಂತಾಗಿದೆ.
ಸಾರ್ವಜನಿಕ ಶೌಚಾಲಯ ಮತ್ತು ಮೂತ್ರಾಲಯಗಳ ಕೊರತೆಯ ಬಗ್ಗೆ ಸಾಮಾಜಿಕ ಕಾರ್ಯಕರ್ತರು ಹಾಗೂ ಕೆಲವು ಸ್ವಯಂಸೇವಾ ಸಂಸ್ಥೆಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗಲೆಲ್ಲ ಕ್ರಿಯಾ ಯೋಜನೆ ಸಿದ್ಧವಾಗಿದೆ ಕಾರ್ಯಗತಗೊಳಿಸುವುದಾಗಿ ಸರಕಾರ ನ್ಯಾಯಾಲಯಕ್ಕೆ ತಿಳಿಸುತ್ತದೆ. ಆದರೆ ವಾಸ್ತವವಾಗಿ ಯಾವ ಕೆಲಸವೂ ಆಗಿರುವುದಿಲ್ಲ. ಒಂದು ಕೋಟಿ ಮೂವತ್ತು ಲಕ್ಷ ಜನಸಂಖ್ಯೆ ಹೊಂದಿರುವ ಬೆಂಗಳೂರಿಗೆ ನಿತ್ಯವೂ ಉತ್ತರ ಭಾರತ ಸೇರಿದಂತೆ ಇತರ ರಾಜ್ಯಗಳಿಂದ ವಲಸೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.ಈಗ ಸ್ವಯಂಸೇವಾ ಸಂಸ್ಥೆಯೊಂದು ನ್ಯಾಯಾಲಯದ ಮೊರೆ ಹೋದಾಗ ಮುಂದಿನ 2 ವರ್ಷಗಳಲ್ಲಿ ಏರಿಕೆಯಾಗಬಹುದಾದ ಜನಸಂಖ್ಯೆಯ ಜೊತೆಗೆ ಶೇ. 5ರಷ್ಟು ಬಂದು ಹೋಗುವ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯದ ಎಲ್ಲಾ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಶೌಚಾಲಯ ಹಾಗೂ ಮೂತ್ರಾಲಯ ನಿರ್ಮಿಸಲು ಕ್ರಿಯಾಯೋಜನೆ ಸಿದ್ಧವಾಗಿದೆ ಎಂದು ಸರಕಾರ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. ಸರಕಾರದ ಈ ಚಾಳಿ ಗೊತ್ತಿರುವ ಉಚ್ಚ ನ್ಯಾಯಾಲಯ ಕ್ರಿಯಾ ಯೋಜನೆಯ ಬಗ್ಗೆ ವಿವರಗಳನ್ನು ಕೇಳಿದೆ.
ಈ ಯೋಜನೆಗೆ ಕೇಂದ್ರ ಸರಕಾರದ ಪಾಲುದಾರಿಕೆ ಎಷ್ಟಿದೆ ಮತ್ತು ರಾಜ್ಯದ ಅನುದಾನ ಎಷ್ಟು ಎಂಬ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸಬೇಕು ಎಂದು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.
ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾದ ‘ಸ್ವಚ್ಛ ಭಾರತ ಅಭಿಯಾನ’ಕ್ಕೆ ಚಾಲನೆ ನೀಡಿ ಒಂಭತ್ತು ವರ್ಷಗಳಾದವು. ಬಯಲು ಮಲ ವಿಸರ್ಜನೆ ಹಾಗೂ ಕಸದ ರಾಶಿಯಿಂದ ದೇಶವನ್ನು ಮುಕ್ತ ಗೊಳಿಸಲು ಐದು ವರ್ಷಗಳ ಕಾಲಾವಧಿಯನ್ನು ಪ್ರಧಾನಿ ನಿಗದಿ ಪಡಿಸಿದ್ದರು. ಅವರು ವಿಧಿಸಿದ ಗಡುವು ಮುಗಿದು 4 ವರ್ಷಗಳಾಗಿವೆ. ಆದರೆ ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ. ರಾಜ್ಯದಲ್ಲಿ 312 ನಗರ ಸ್ಥಳೀಯ ಸಂಸ್ಥೆಗಳಿವೆ. 9,167 ಸೀಟುಗಳ ಸಾಮರ್ಥ್ಯದ 1,360 ಸಾರ್ವಜನಿಕ ಶೌಚಾಲಯಗಳಿವೆ. ಸ್ವಚ್ಛ ಭಾರತ ಅಭಿಯಾನದ ಮಾರ್ಗಸೂಚಿಯಂತೆ ಪ್ರತೀ ನಗರ, ಸ್ಥಳೀಯ ಸಂಸ್ಥೆಗಳ ಒಟ್ಟು ಜನಸಂಖ್ಯೆಯಲ್ಲಿ ಶೇ. 5ರಷ್ಟು ಅಂದರೆ 250 ಮಂದಿಯನ್ನು ಬಂದು ಹೋಗುವ ಜನಸಂಖ್ಯೆ ಎಂದು ಪರಿಗಣಿಸಬೇಕು. ಆ 250 ಮಂದಿಗೆ ಶೌಚಾಲಯ ಒದಗಿಸಲು ಸಿದ್ಧವಿರುವುದಾಗಿ ಸರಕಾರ ಹೇಳಿದೆ. ಸರಕಾರ ನ್ಯಾಯಾಲಯಕ್ಕೆ ನೀಡಿದ ಭರವಸೆಯಂತೆ ನಡೆದುಕೊಳ್ಳಬೇಕು.
ರಾಜ್ಯದ ಯಾವುದೇ ನಗರದ, ಊರಿನ ಬಸ್ ನಿಲ್ದಾಣಗಳಲ್ಲಿ ಸ್ವಚ್ಛವಾದ ಶೌಚಾಲಯ ಹಾಗೂ ಮೂತ್ರಾಲಯಗಳಿಲ್ಲ. ಊರಿಂದ ಊರಿಗೆ ಐದಾರು ತಾಸುಗಳ ಕಾಲ ಕುಳಿತು ಪ್ರಯಾಣಿಸುವ ಸಾರ್ವಜನಿಕರಿಗೆ ಯಾವುದೇ ಊರಿನಲ್ಲಿ ಇಳಿದ ತಕ್ಷಣ ಶೌಚಾಲಯ ಹಾಗೂ ಮೂತ್ರಾಲಯಗಳ ವ್ಯವಸ್ಥೆ ಇಲ್ಲ. ಇದ್ದರೂ ಗಬ್ಬೆದ್ದು ನಾರುತ್ತಿರುತ್ತವೆ. ಹೀಗಾಗಿ ಸಾರ್ವಜನಿಕ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಉಂಟಾಗುತ್ತದೆ. ಕೆಲವು ಕಡೆ ದೈಹಿಕ ಬಾಧೆ ತೀರಿಸಿಕೊಳ್ಳಲು ಹಣ ವಸೂಲಿ ಮಾಡುವ ಶೌಚಾಲಯ ಹಾಗೂ ಮೂತ್ರಾಲಯಗಳಿದ್ದರೂ ಅವುಗಳಲ್ಲಿ ಸ್ವಚ್ಛತೆ ಇರುವುದಿಲ್ಲ.
ರಾಜ್ಯದ ಸಾವಿರಾರು ಸರಕಾರಿ ಶಾಲೆಗಳ ಪರಿಸ್ಥಿತಿ ಇನ್ನೂ ಶೋಚನೀಯ ವಾಗಿದೆ. ಎಲ್ಲಾ ಸರಕಾರಿ ಶಾಲೆಗಳಲ್ಲಿ 2019ರ ಅಕ್ಟೋಬರ್ ತಿಂಗಳೊಳಗೆ ಕಡ್ಡಾಯವಾಗಿ ಶೌಚಾಲಯಗಳನ್ನು ನಿರ್ಮಿಸಬೇಕೆಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರು ಹಿಂದೆ ಆದೇಶ ಹೊರಡಿಸಿದ್ದರು. ಈ ಗಡುವು ಮುಗಿದ ನಂತರವೂ ಶೌಚಾಲಯಗಳ ನಿರ್ಮಾಣವಾಗಿಲ್ಲ ಇದಕ್ಕೆ ಯಾರು ಹೊಣೆ?
ಅಸಮರ್ಪಕ ಶೌಚಾಲಯ ವ್ಯವಸ್ಥೆಯಿಂದಾಗಿ ಅಂತರ್ಜಲ ಕಲುಷಿತಗೊಳ್ಳುತ್ತಿದೆ.ಜಗತ್ತಿನಾದ್ಯಂತ ಇಂದಿಗೂ 67 ಕೋಟಿ ಜನರು ಬಯಲು ಶೌಚಾಲಯವನ್ನೇ ಅವಲಂಬಿಸಿದ್ದಾರೆ. ನಮ್ಮ ದೇಶದಲ್ಲಿ ಸುಮಾರು ಮೂವತ್ತು ಕೋಟಿ ಮಹಿಳೆಯರಿಗೆ ಸೂಕ್ತವಾದ ಶೌಚಾಲಯ ವ್ಯವಸ್ಥೆ ಹಾಗೂ ಸ್ನಾನದ ಮನೆಯ ವ್ಯವಸ್ಥೆ ಇಲ್ಲ ಎಂದು ಅಧ್ಯಯನ ವರದಿಗಳಿಂದ ಗೊತ್ತಾಗಿದೆ. ಸ್ವಚ್ಛ ಭಾರತ ಯೋಜನೆ ಆರಂಭಿಸಿದ ನಂತರ ಗ್ರಾಮೀಣ ಯೋಜನೆಯ ಅಡಿಯಲ್ಲಿ 11 ಕೋಟಿಗೂ ಹೆಚ್ಚು ಶೌಚಾಲಯ ಗಳನ್ನು ನಿರ್ಮಿಸಿರುವುದಾಗಿ ಕೇಂದ್ರ ಸರಕಾರ ಹೇಳುತ್ತಿದ್ದರೂ ಇವತ್ತಿಗೂ ಬಯಲು ಬಹಿರ್ದೆಸೆ ಕಡಿಮೆಯಾಗಿಲ್ಲ.
ಇದಲ್ಲದೆ ಭಾರತದಲ್ಲಿ ನಗರೀಕರಣ ಪ್ರಕ್ರಿಯೆ ದೇಶಾದ್ಯಂತ ವೇಗ ಪಡೆಯುತ್ತಿದ್ದಂತೆ ಭಾರೀ ಪ್ರಮಾಣದಲ್ಲಿ ಗೃಹ ತ್ಯಾಜ್ಯ ಮತ್ತು ಕೈಗಾರಿಕಾ ತ್ಯಾಜ್ಯ ಉತ್ಪಾದನೆ ಆಗುತ್ತಿದೆ. ಆದರೆ ಈ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಬೆಂಗಳೂರು ಮಹಾನಗರ ಒಂದು ಉದಾಹರಣೆಯಾಗಿದೆ. ಇದಲ್ಲದೆ ದೇಶದಲ್ಲಿ, ರಾಜ್ಯದಲ್ಲಿ ಶೌಚಾಲಯ ಹೊಂದಿಲ್ಲದ ಸಹಸ್ರಾರು ಮನೆಗಳಿವೆ. ಅವುಗಳು ಶೌಚಾಲಯ ಹೊಂದದೇ ಬಯಲು ಬಹಿರ್ದೆಸೆಯನ್ನು ತಪ್ಪಿಸಲು ಆಗುವುದಿಲ್ಲ. ಹಾಗಾಗಿ ಸರಕಾರ ಈ ಎಲ್ಲ ಅಂಶಗಳತ್ತ ಗಮನ ಹರಿಸಿ ಈ ಸಮಸ್ಯೆಗೆ ಪರಿಹಾರವನ್ನು ಕಂಡು ಹಿಡಿಯಬೇಕು.
ರಾಜ್ಯದ ಬಹುತೇಕ ನಗರಗಳಲ್ಲಿ ಸಾರ್ವಜನಿಕ ಶೌಚಾಲಯ ಮತ್ತು ಮೂತ್ರಾಲಯಗಳ ಕೊರತೆ ಎಂಬುದು ಒಂದು ಸಮಸ್ಯೆಯಾದರೆ ಈ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಅಸಮರ್ಪಕವಾಗಿರುವುದು ಇನ್ನೊಂದು ಸಮಸ್ಯೆ. ನಗರಗಳಲ್ಲಿನ ಸಾರ್ವಜನಿಕ ಶೌಚಾಲಯಗಳ ಮತ್ತು ಮೂತ್ರಾಲಯಗಳ ಸ್ಥಿತಿಗತಿ ಹಾಗೂ ನಿರ್ವಹಣೆಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆಯು ಹೈಕೋರ್ಟ್ ನಲ್ಲಿ ಕಳೆದ ಮೂರು ವರ್ಷಗಳಿಂದ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ವಾರಗಳಲ್ಲಿ ವಿವರವಾದ ವರದಿಯನ್ನು ಸಲ್ಲಿಸಬೇಕೆಂದು ಹೈಕೋರ್ಟ್ ನೀಡಿರುವ ಆದೇಶವೂ ಪಾಲನೆಯಾಗಿಲ್ಲ ಎಂಬ ಕಾರಣಕ್ಕೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಇತ್ತೀಚೆಗೆ 5 ಲಕ್ಷ ರೂ. ದಂಡವನ್ನು ಹಾಕಿದೆ.ಇದು ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆಗೆ ಒಂದು ಉದಾಹರಣೆ.
ಸರಕಾರ ಇನ್ನು ಮುಂದಾದರೂ ಸಾರ್ವಜನಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಶೌಚಾಲಯ ಮತ್ತು ಮೂತ್ರಾಲಯ ಗಳ ಸಂಖ್ಯೆಯನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಬೇಕು. ಅಷ್ಟೇ ಅಲ್ಲ ಅವುಗಳ ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು.