ಅಭಿವೃದ್ಧಿ ಗೆಲ್ಲಲಿ, ದ್ವೇಷ ಸೋಲಲಿ!

Update: 2023-10-05 05:20 GMT

PHoto: twitter.com/_rahulism_

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ದೇಶದಲ್ಲಿ ಇಂದು ನಾಯಕನಾಗುವುದು ಅತ್ಯಂತ ಸುಲಭ. ಆತನಿಗೆ ದೇಶದ ಅಭಿವೃದ್ಧಿಯ ಕುರಿತ ಯಾವ ದೂರದೃಷ್ಟಿಯ ಅಗತ್ಯವೂ ಇಲ್ಲ ಅಥವಾ ಜನರೊಂದಿಗೆ ಬೆರೆತು ಅವರ ಸಂಕಟಗಳಿಗೆ ಧ್ವನಿಯಾಗಿ, ಬೀದಿ ಹೋರಾಟ ನಡೆಸಿ ನಾಯಕನಾಗುವ ಕಷ್ಟವೂ ಇಲ್ಲ. ಬಿಜೆಪಿಯೊಳಗಡೆಯೇ ಹತ್ತು ಹಲವು ನಾಯಕರು ಜನ ಚಳವಳಿಯ ಜೊತೆಗೆ ರಾಜ್ಯ ರಾಷ್ಟ್ರಮಟ್ಟದಲ್ಲಿ ನಾಯಕರಾಗಿ ಬೆಳೆದವರಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ ಅದಕ್ಕೆ ಉದಾಹರಣೆಯಾದರೆ ರಾಷ್ಟ್ರಮಟ್ಟದಲ್ಲಿ ಅಟಲ್ ಬಿಹಾರಿ ವಾಜಪೇಯಿಯಂಥವರು ನಾಯಕರಾಗಿ ಹೊರಹೊಮ್ಮಲು ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ. ಆದರೆ ಈಗ ನಾಯಕರಾಗಿ ಬೆಳೆಯಲು ತಳಮಟ್ಟದಲ್ಲಿ ದಶಕಗಳ ಕಾಲ ಪಕ್ಷಕ್ಕೆ ಮಣ್ಣು ಹೊರಬೇಕಾಗಿಲ್ಲ. ಜನರೊಂದಿಗೆ ಗುರುತಿಸಬೇಕಾಗಿಲ್ಲ. ಸಾರ್ವಜನಿಕವಾಗಿ ಉದ್ವಿಗ್ನಕಾರಿ ಭಾಷಣಗಳನ್ನು ಮಾಡಿದರೆ ರಾತ್ರೋರಾತ್ರಿ ನಾಯಕರಾಗಿ ಹೊರಹೊಮ್ಮುತ್ತಾರೆ. ಇಂದಿನ ನಾಯಕರೆಲ್ಲ ಉಲ್ಕೆಗಳ ಹಾಗೆ. ಏಕಾಏಕಿ ಆಕಾಶದಿಂದ ಉದುರಿ ಉರಿದು ಬೂದಿಯಾಗುವವರು. ಪಟಾಕಿಗಳಂತೆ ಸದ್ದು ಮಾಡುವವರು. ಅಂತಿಮವಾಗಿ ಅವರು ಸಮಾಜಕ್ಕೆ ಉಳಿಸುವುದು ಗಂಧಕದ ವಾಸನೆಯನ್ನು. ಮಾಲಿನ್ಯದಿಂದ ಕೂಡಿದ ವಾತಾವರಣವನ್ನು. ಶಾಶ್ವತ ಬೆಳಕನ್ನಲ್ಲ.

ರಮೇಶ್ ಬಿದೂರಿ ಎನ್ನುವ ಸಂಸದ ಯಾರು, ಆತನ ಹಿನ್ನೆಲೆ ಏನು ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಆತ ಸಂಸತ್‌ನಲ್ಲಿ ಈ ದೇಶದ ಅಭಿವೃದ್ಧಿಗಾಗಿ, ತನ್ನ ರಾಜ್ಯದ ಜನರ ಏಳಿಗೆಗಾಗಿ ಮಾತನಾಡಿದ ಬಗ್ಗೆ ಯಾವ ವಿವರಗಳೂ ಈವರೆಗೆ ಮಾಧ್ಯಮಗಳಲ್ಲಿ ಬಂದಿಲ್ಲ. ಆದರೆ ರಾತ್ರೋ ರಾತ್ರಿ ಆತ ತನ್ನ ದ್ವೇಷ ಭಾಷಣಕ್ಕಾಗಿ ಸುದ್ದಿಯಾದ. ಆತ ದ್ವೇಷ ಭಾಷಣವನ್ನು ಮಾಡಿರುವುದು ಸಾರ್ವಜನಿಕ ವೇದಿಕೆಗಳಲ್ಲಿ ಅಲ್ಲ. ಪ್ರಜಾಸತ್ತೆಯ ಮೇಲೆ ನಂಬಿಕೆಯಿಟ್ಟಿರುವ ಜನತೆ ಯಾವ ಸಂಸತ್ತನ್ನು ಪವಿತ್ರವೆಂದು ಭಾವಿಸುತ್ತಾ ಬಂದಿದ್ದಾರೆಯೋ ಆ ಸಂಸತ್ತನ್ನೇ ತನ್ನ ದ್ವೇಷ ಭಾಷಣಕ್ಕೆ ವೇದಿಕೆಯನ್ನಾಗಿಸಿಕೊಂಡ. ಬಿಎಸ್‌ಪಿ ಸಂಸದ ದಾನಿಶ್ ಅಲಿ ಅವರನ್ನು ‘ಭಯೋತ್ಪಾದಕ’ ಎಂದು ಕರೆದ. ಹೀಗೆ ಕರೆಯಲು ಆತನ ಬಳಿಯಿದ್ದ ಸಾಕ್ಷಿಯಾದರೂ ಏನು? ಸಂಸದ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದವನಾಗಿರುವುದೇ ‘ಭಯೋತ್ಪಾದಕ’ ಎಂದು ಕರೆಯಲು ಮುಖ್ಯ ಕಾರಣ. ಸಂಸತ್‌ನಲ್ಲಿ ಭಯೋತ್ಪಾದನೆಯ ಆರೋಪ ಹೊತ್ತವರು ಇಲ್ಲ ಎಂದಿಲ್ಲ. ಮಾಲೆಗಾಂವ್ ಸ್ಫೋಟದಲ್ಲಿ ಪ್ರಮುಖ ಆರೋಪಿ ಎಂದು ಗುರುತಿಸಲ್ಪಟ್ಟ ಶಂಕಿತ ಭಯೋತ್ಪಾದಕಿ ಪ್ರಜ್ಞಾ ಸಿಂಗ್ ಠಾಕೂರ್‌ಗೆ ಇದೇ ಬಿಜೆಪಿ ಟಿಕೆಟ್ ಕೊಟ್ಟು ಸಂಸತ್ ಪ್ರವೇಶಿಸುವಂತೆ ಮಾಡಿತ್ತು. ಬಿದೂರಿಗೆ ಅದು ಗೊತ್ತಿಲದೇ ಇರುವುದೇನೂ ಅಲ್ಲ. ಬಿದೂರಿಯ ಉದ್ದೇಶ ಒಂದು ಸಮುದಾಯವನ್ನು ನಿಂದಿಸುವುದಾಗಿತ್ತು. ಆ ಮೂಲಕ ತನ್ನನ್ನು ಬಿಜೆಪಿ ನಾಯಕರ ಮುಂದೆ ಪ್ರಕಟ ಪಡಿಸುವುದು ಅವನ ಗುರಿಯಾಗಿತ್ತು. ಸಂಸತ್‌ನಲ್ಲಿ ಈತನು ಆಡಿದ ಮಾತುಗಳಿಗೆ ಸ್ಪೀಕರ್ ಸಹಿತ ಹಲವು ಬಿಜೆಪಿ ನಾಯಕರೇ ವಿಷಾದ ವ್ಯಕ್ತಪಡಿಸಿದರು. ಆದರೆ ಹೀಗೆ ಮಾತನಾಡಿದ ಬೆನ್ನಿಗೇ ಈತನಿಗೆ ಬಿಜೆಪಿ ವರಿಷ್ಠರು ರಾಜಸ್ಥಾನದ ಚುನಾವಣೆ ಉಸ್ತುವಾರಿಯನ್ನು ನೀಡಿದರು. ಸಂಸತ್ತನ್ನೇ ದ್ವೇಷ ಹರಡುವುದಕ್ಕೆ ದುರುಪಯೋಗ ಪಡಿಸಿದ ನಾಯಕನೊಬ್ಬ ಚುನಾವಣೆಯಲ್ಲಿ ರಾಜಸ್ಥಾನಕ್ಕೆ ಏನನ್ನು ನೀಡಬಹುದು? ಅವನಲ್ಲಿ ದ್ವೇಷದ ಸಿಡಿಮದ್ದುಗಳನ್ನು ಹೊರತು ಪಡಿಸಿದಂತೆ, ರಾಜಸ್ಥಾನದ ಅಭಿವೃದ್ಧಿಗಾಗಿ ಯಾವುದಾದರೂ ದೂರದೃಷ್ಟಿಯ ಯೋಜನೆಗಳು ಇರಲು ಸಾಧ್ಯವೇ?

ದೇಶದ ಶೇ. ೪೦ ಸಂಸದರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ೧೯೪ ಸಂಸದರ ಮೇಲೆ ಕೊಲೆ, ಕೊಲೆಯತ್ನ, ಅಪಹರಣ, ಮಹಿಳೆಯರ ಮೇಲಿನ ದೌರ್ಜನ್ಯದಂತಹ ಗಂಭೀರ ಪ್ರಕರಣಗಳಿವೆ. ೨೧ ಸದಸ್ಯರ ಮೇಲೆ ಮಹಿಳಾ ದೌರ್ಜನ್ಯ ಪ್ರಕರಣ ದಾಖಲಾಗಿದ್ದರೆ, ಇವರಲ್ಲಿ ನಾಲ್ವರು ಸಂಸದರು ಅತ್ಯಾಚಾರ ಆರೋಪವನ್ನು ಎದುರಿಸುತ್ತಿದ್ದಾರೆ. ಇಂತಹ ಸಂಸದರು ರೂಪಿಸುವ ಕಾನೂನಿನ ಆಧಾರದ ಮೇಲೆ ನಾವು ದೇಶದಲ್ಲಿ ಶಾಂತಿ ಸುವ್ಯವಸ್ಥೆಯ ನಿರೀಕ್ಷೆಯನ್ನು ಮಾಡುತ್ತಿದ್ದೇವೆ. ಈ ಶೇ. ೪೦ ಸಂಸದರೆ ಸಾರ್ವಜನಿಕ ವೇದಿಕೆಗಳಲ್ಲಿ ‘ರಾಮರಾಜ್ಯ’ವನ್ನು ಕೊಡುವ ಬಗ್ಗೆ ಭರವಸೆ ನೀಡುತ್ತಿದ್ದಾರೆ ಎನ್ನುವುದನ್ನು ಕೂಡ ನಾವು ಗಮನಿಸಬೇಕಾಗಿದೆ. ಹಾಗೆಂದು ಈ ಸಂಸದರೆಲ್ಲ ಅನಕ್ಷರಸ್ಥರಲ್ಲ. ಸಮೀಕ್ಷೆಯ ಪ್ರಕಾರ ಒಬ್ಬ ಸಂಸದನಷ್ಟೇ ಅನಕ್ಷರಸ್ಥ. ಉಳಿದಂತೆ ರಾಜ್ಯ ಸಭೆ, ಲೋಕಸಭೆಯಲ್ಲಿ ೫೪ ಸಂಸದರು ಡಾಕ್ಟರೇಟ್ ಪದವಿ ಪಡೆದವರಾಗಿದ್ದಾರೆ. ೧೮೪ ಪದವೀಧರರು ಮತ್ತು ೧೪೧ ಮಂದಿ ವೃತ್ತಿ ಪರ ಪದವೀಧರರಾಗಿದ್ದಾರೆ. ೫೦ರಿಂದ ೬೦ ವರ್ಷದ ಒಳಗಿನ ೨೩೯ ಸಂಸದರಿದ್ದರೆ, ೬೦ರಿಂದ ೭೦ ವರ್ಷ ವಯಸ್ಸಿನ ೨೦೯ ಸಂಸದರಿದ್ದಾರೆ. ೪೦ರಿಂದ ೫೦ ವರ್ಷದ ಒಳಗಿನ ೧೮೪ ಸಂಸದರಿದ್ದಾರೆ. ೮೦ ವರ್ಷಕ್ಕಿಂತ ಮೇಲ್ಪಟ್ಟ ಆರು ಮಂದಿ ಸಂಸದರಿದ್ದಾರೆ. ಅಂದರೆ ಯಾರೂ ಎಳಸುಗಳಲ್ಲ. ಎಲ್ಲರೂ ಅನುಭವಿಗಳೇ. ರಾಜಕೀಯವಾಗಿ ಬೆಳೆದಂತೆಲ್ಲ ಅವರು ಅರ್ಥ ಮಾಡಿಕೊಂಡಿರುವುದೇನೆಂದರೆ, ಅಭಿವೃದ್ಧಿಯ ಬಗ್ಗೆ ಮಾತನಾಡುವುದಕ್ಕಿಂತ, ದ್ವೇಷ ಭಾಷಣಗಳ ಮೂಲಕ ಮತಗಳನ್ನು ಪಡೆಯುವುದು ಅತಿ ಸುಲಭ. ಅಂದರೆ ಜನರು ಇಂತಹ ಭಾವನಾತ್ಮಕ ಮಾತುಗಳಿಗೆ ಸುಲಭದಲ್ಲಿ ಬಲಿ ಬೀಳುತ್ತಾರೆ ಎನ್ನುವುದನ್ನು ಅವರು ತಿಳಿದುಕೊಂಡಿದ್ದಾರೆ.

ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ಸಮೀಕ್ಷೆಯ ಪ್ರಕಾರ ೧೦೭ ಸಂಸದರ ಮತ್ತು ಶಾಸಕರ ವಿರುದ್ಧ ದ್ವೇಷ ಭಾಷಣದ ಪ್ರಕರಣಗಳಿವೆ. ದ್ವೇಷ ಭಾಷಣದ ಆರೋಪ ಹೊತ್ತಿರುವ ೪೮೦ ಅಭ್ಯರ್ಥಿಗಳು ಕಳೆದ ಐದು ವರ್ಷಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ ಎನ್ನುವುದನ್ನೂ ಈ ಸಮೀಕ್ಷೆ ಹೇಳಿದೆ. ಮುಖ್ಯವಾಗಿ ಬಿಜೆಪಿ ದ್ವೇಷ ಭಾಷಣದ ಮೂಲಕ ನಾಯಕರಾಗಿ ಹೊರಹೊಮ್ಮಿದ ಅಭ್ಯರ್ಥಿಗಳಿಗೆ ಪಕ್ಷದ ಟಿಕೆಟನ್ನು ನೀಡುತ್ತದೆ. ಆದುದರಿಂದ ದ್ವೇಷ ಭಾಷಣ ರಾಜಕೀಯ ನಾಯಕರಿಗೆ ಇರಬೇಕಾದ ಪ್ರಮುಖ ಅರ್ಹತೆಯಾಗಿ ಬಿಟ್ಟಿದೆ. ದ್ವೇಷ ಭಾಷಣವೆನ್ನುವುದು ರಾಜಕೀಯದ ಅಡ್ಡದಾರಿ ಮಾತ್ರವಲ್ಲ, ಸಂಸತ್ತನ್ನು ತಲುಪುವ ಸುಲಭದಾರಿಯೂ ಆಗಿದೆ. ಈ ದ್ವೇಷ ಭಾಷಣಗಳಿಗೆ ಮೆದುಳನ್ನು ತೆತ್ತು ಅವರನ್ನು ಆಯ್ಕೆ ಮಾಡಿ ಸಂಸತ್‌ಗೆ ಕಳುಹಿಸುವ ಜನಸಾಮಾನ್ಯರೇ ಪ್ರಜಾಸತ್ತೆಯ, ಅಭಿವೃದ್ಧಿಯ ಅತಿ ದೊಡ್ಡ ಶತ್ರುಗಳು. ದ್ವೇಷ ಭಾಷಣದ ಮೂಲಕ ಆಯ್ಕೆಯಾದ ಜನರು ದೇಶಕ್ಕೆ ದ್ವೇಷವನ್ನಲ್ಲದೆ ಇನ್ನೇನನ್ನೂ ಕೊಡಲಾರರು. ಇಂದು ಶಿವಮೊಗ್ಗದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನೂ ಈ ಹಿನ್ನೆಲೆಯಲ್ಲೇ ನೋಡಬೇಕಾಗಿದೆ.

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಗೃಹ ಸಚಿವರು ಆಗಮಿಸಿ ‘ದ್ವೇಷ ಮಾತುಗಳನ್ನು’ ಆಡಿ ಜನರಲ್ಲಿ ಮತಗಳನ್ನು ಯಾಚಿಸಿದ್ದರು. ಕಾಂಗ್ರೆಸ್ ಗೆದ್ದರೆ ರಾಜ್ಯದಲ್ಲಿ ಗಲಭೆಗಳು ನಡೆಯುತ್ತವೆ ಎಂದು ಬೆದರಿಸಿದ್ದರು. ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ನೇತೃತ್ವದ ತಂಡ ಮೋದಿ ಮತ್ತು ಅಮಿತ್ ಶಾ ಗೆ ಎದುರಾಗಿ ‘ಗ್ಯಾರಂಟಿ’ಗಳನ್ನು ಬಿಟ್ಟಿತು. ಅಭಿವೃದ್ಧಿ ರಾಜಕಾರಣ ಚುನಾವಣೆಯಲ್ಲಿ ಗೆದ್ದಿತು. ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಗಲಭೆಯಾಗುತ್ತದೆ’ ಎನ್ನುವ ಅಮಿತ್ ಶಾ ಭರವಸೆಯನ್ನು ನಿಜ ಮಾಡಲು ರಾಜ್ಯಾದ್ಯಂತ ಕೆಲವು ಶಕ್ತಿಗಳು ಪ್ರಯತ್ನಿಸುತ್ತಿವೆ. ಹಬ್ಬದ ಹೆಸರಿನಲ್ಲಿ ನಡೆದ ಕಲ್ಲುತೂರಾಟ, ಲಾಠಿಚಾರ್ಜ್‌ಗಳನ್ನು ಮುಂದಿಟ್ಟುಕೊಂಡು ರಾಜಕಾರಣಿಗಳು ದ್ವೇಷದ ಮಾತುಗಳನ್ನು ಆಡಿ ಜನರನ್ನು ಇನ್ನಷ್ಟು ಪ್ರಚೋದಿಸುತ್ತಿದ್ದಾರೆ. ಲೋಕಸಭಾ ಚುನಾವಣೆಗೆ ದ್ವೇಷ ಮಾತುಗಳ ಮೂಲಕ ಸಿದ್ಧತೆ ನಡೆಸುತ್ತಿದ್ದಾರೆ. ಶಕ್ತಿ ಯೋಜನೆ, ಗೃಹ ಲಕ್ಷ್ಮಿ, ಅನ್ನಭಾಗ್ಯದಂತಹ ಯೋಜನೆಗಳನ್ನು ಸೋಲಿಸಲು ದ್ವೇಷ ಭಾಷಣಗಳನ್ನು ಹರಿಯ ಬಿಡುತ್ತಿದ್ದಾರೆ. ಯಾವುದು ಗೆಲ್ಲಬೇಕು, ಯಾವುದು ಗೆದ್ದರೆ ನಾಡಿಗೆ ಒಳಿತು ಎನ್ನುವುದನ್ನು ಅರ್ಥೈಸಿಕೊಂಡು ಜನರು ಹೆಜ್ಜೆ ಮುಂದಿಡಬೇಕಾಗಿದೆ. ದ್ವೇಷ ಗೆದ್ದರೆ ಮುಂದಿನ ದಿನಗಳಲ್ಲಿ ನಾಡು ದ್ವೇಷವನ್ನೇ ಕುಳಿತು ಉಣ್ಣಬೇಕಾದ ದೈನೇಸಿ ಸ್ಥಿತಿ ಒದಗಬಹುದು. ಆಗ ರಾಜಕಾರಣಿಗಳನ್ನು ಟೀಕಿಸಿ ಯಾವ ಪ್ರಯೋಜನವೂ ಇಲ್ಲ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News