ಬ್ಯಾಂಕುಗಳಲ್ಲಿ ಕನ್ನಡ ಭಾಷೆಯ ಠೇವಣಿ ಬೆಳೆಯಲಿ

Update: 2023-09-14 04:57 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಒಂದು ಕಾಲವಿತ್ತು. ಸಾಲಗಾರರು ಸಾಲದಾತನಿಗೆ ‘‘ನಿಮ್ಮ ದುಡ್ಡು ಬ್ಯಾಂಕಿನಲ್ಲಿಟ್ಟಂತೆ. ಏನೂ ಹೆದರದಿರಿ’’ ಎಂದು ಭರವಸೆಯ ಮಾತುಗಳನ್ನು ಆಡುತ್ತಿದ್ದರು. ಅಂದಿನ ದಿನಗಳಲ್ಲಿ ಬ್ಯಾಂಕಿನ ಕುರಿತಂತೆ ಜನಸಾಮಾನ್ಯರು ಅಷ್ಟೊಂದು ನಂಬಿಕೆ ಬೆಳೆಸಿಕೊಂಡಿದ್ದರು. ಆದರೆ ನೋಟು ನಿಷೇಧದ ಬಳಿಕ ಬ್ಯಾಂಕಿನಲ್ಲಿ ದುಡ್ಡು ಇಡುವುದೆಂದರೆ ಜನರು ಹೆದರ ತೊಡಗಿದ್ದಾರೆ. ಮೊದಲೆಲ್ಲ ಕಳ್ಳರು ಬ್ಯಾಂಕನ್ನು ದರೋಡೆ ಮಾಡಿದ ಸುದ್ದಿಗಳು ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟವಾಗುತ್ತಿದ್ದರೆ, ಈಗ ಬ್ಯಾಂಕುಗಳೇ ಗ್ರಾಹಕರನ್ನು ದರೋಡೆ ಮಾಡುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿರುತ್ತವೆ. ನೋಟು ನಿಷೇಧದ ದಿನಗಳಿಂದ ಗ್ರಾಹಕರು ಮತ್ತು ಬ್ಯಾಂಕುಗಳ ನಡುವೆ ಅಂತರ ಹೆಚ್ಚುತ್ತಿದೆ. ಈ ಅಂತರಕ್ಕೆ ಇನ್ನೊಂದು ಗೋಡೆಯಾಗಿ ನಿಂತಿರುವುದು ಭಾಷೆ. ನೋಟು ನಿಷೇಧದ ಬಳಿಕ ನಡೆದ ಬ್ಯಾಂಕ್ ವಿಲೀನಗಳು ದೇಶದ ಅರ್ಥ ವ್ಯವಸ್ಥೆಯಲ್ಲಿ ಇನ್ನಷ್ಟು ಬದಲಾವಣೆಗಳನ್ನು ತಂದವು. ಇಲ್ಲಿನ ರೈತರು, ಉದ್ಯಮಿಗಳು, ಜನಸಾಮಾನ್ಯರು ಕಟ್ಟಿ ಬೆಳೆಸಿದ, ಲಾಭದಲ್ಲಿದ್ದ ಬ್ಯಾಂಕುಗಳನ್ನು ಉತ್ತರ ಭಾರತದ ನಷ್ಟದಲ್ಲಿರುವ ಬ್ಯಾಂಕುಗಳ ಜೊತೆಗೆ ವಿಲೀನಗೊಳಿಸಲಾಯಿತು. ವಿಪರ್ಯಾಸವೆಂದರೆ ಅಂತಿಮವಾಗಿ ಲಾಭದಲ್ಲಿದ್ದ ಕರ್ನಾಟಕ ಮೂಲದ ಬ್ಯಾಂಕುಗಳು ತಮ್ಮ ಹೆಸರನ್ನು, ಅಸ್ತಿತ್ವವನ್ನು ಕಳೆದುಕೊಂಡವು. ಇಂದು ವಿಜಯ ಬ್ಯಾಂಕ್, ಮೈಸೂರು ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್ ಉತ್ತರ ಭಾರತದ ಬ್ಯಾಂಕುಗಳ ಹೆಸರಿನಲ್ಲಿ ದೇಶದಾದ್ಯಂತ ಗುರುತಿಸಲ್ಪಡುತ್ತಿವೆ. ಇಂದು ನಾವೇ ಕಟ್ಟಿ ಬೆಳೆಸಿದ ಬ್ಯಾಂಕುಗಳ ಮುಂದೆ ಅನ್ಯರಾಗಿ ತಲೆಬಗ್ಗಿಸಿ ವ್ಯವಹರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ದಕ್ಷಿಣ ಭಾರತದ ಲಾಭದಾಯಕ ಬ್ಯಾಂಕುಗಳನ್ನು ಬಲಿತೆಗೆದುಕೊಂಡು ಉತ್ತರ ಭಾರತ ಮೂಲದ ಬ್ಯಾಂಕುಗಳನ್ನು ಉಳಿಸಿಕೊಂಡ ಕೇಂದ್ರ ಸರಕಾರ ಆ ಮೂಲಕ ಬ್ಯಾಂಕುಗಳಿಂದ ಸಾಲ ಪಡೆದು ಕಟ್ಟದೆ ನಷ್ಟಕ್ಕೆ ಕಾರಣವಾಗಿದ್ದ ಉತ್ತರ ಭಾರತದ ಉದ್ಯಮಿಗಳ ಬೆನ್ನಿಗೆ ನಿಂತಿತು. ಇದರ ಬೆನ್ನಿಗೆ ವಿಲೀನಗೊಂಡ ದಕ್ಷಿಣ ಭಾರತದ ಬ್ಯಾಂಕುಗಳ ಶಾಖೆಗಳಿಗೆ ಉತ್ತರ ಭಾರತೀಯ ಸಿಬ್ಬಂದಿಯನ್ನು ತುರುಕಲು ಆರಂಭಿಸಿ, ಇಂದು ಕರ್ನಾಟಕದ ಬಹುತೇಕ ಬ್ಯಾಂಕುಗಳಲ್ಲಿ ಉತ್ತರ ಭಾರತೀಯರೇ ತುಂಬಿಕೊಂಡಿದ್ದಾರೆ. ಪರಿಣಾಮವಾಗಿ ಇಂದು ಬ್ಯಾಂಕುಗಳು ಸಂಪೂರ್ಣವಾಗಿ ಹಿಂದಿಮಯವಾಗಿವೆ. ಕನ್ನಡಿಗರು ಬ್ಯಾಂಕುಗಳಿಗೆ ಕಾಲಿಡಬೇಕಾದರೆ ಒಂದೋ ಹಿಂದಿಯಲ್ಲಿ ಮಾತನಾಡಬೇಕು ಅಥವಾ ಇಂಗ್ಲಿಷ್‌ನಲ್ಲಿ ವ್ಯವಹರಿಸಬೇಕು ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಕನ್ನಡ ಭಾಷಿಗರನ್ನು ಕರ್ನಾಟಕದಲ್ಲಿರುವ ಬ್ಯಾಂಕುಗಳು ಪರಕೀಯ ಭಾಷಿಗರು ಎನ್ನುವಂತೆ ನೋಡುತ್ತಿವೆ. ಕನ್ನಡದಲ್ಲಿ ಮಾತನಾಡುವವರ ಜೊತೆಗೆ ಸಿಬ್ಬಂದಿ ಅತ್ಯಂತ ಕೆಟ್ಟದಾಗಿ ವ್ಯವಹರಿಸುತ್ತಿದ್ದಾರೆ ಮಾತ್ರವಲ್ಲ, ‘‘ಹಿಂದಿಯಲ್ಲಿ ವ್ಯವಹರಿಸಿ, ಇಲ್ಲವಾದರೆ ತೊಲಗಿ’’ ಎಂದು ಸಿಬ್ಬಂದಿ ಮುಖಕ್ಕೆ ಹೊಡೆದಂತೆ ಉತ್ತರಿಸುತ್ತಿದ್ದಾರೆ. ಇದಕ್ಕೆ ಸಿಬ್ಬಂದಿಯ ದರ್ಪವಷ್ಟೇ ಕಾರಣವಲ್ಲ. ಉತ್ತರ ಭಾರತೀಯರಿಗೆ ದಕ್ಷಿಣ ಭಾರತೀಯರೊಂದಿಗೆ ಮತ್ತು ದಕ್ಷಿಣ ಭಾರತೀಯ ಭಾಷೆಗಳ ಬಗ್ಗೆ ಇರುವ ತಾತ್ಸಾರ ಭಾವನೆಯನ್ನು ಇದು ಎತ್ತಿ ತೋರಿಸುತ್ತದೆ.

ದಕ್ಷಿಣ ಭಾರತೀಯರ ಮೇಲೆ ಹಿಂದಿಯನ್ನು ಹೇರಲು ಬ್ಯಾಂಕುಗಳನ್ನು ಪರಿಣಾಮಕಾರಿಯಾಗಿ ಬಳಸಲು ಕೇಂದ್ರ ಸರಕಾರ ಮುಂದಾಗಿದೆ. ಈ ಹಿಂದೆ, ಎಲ್ಲ ಬ್ಯಾಂಕುಗಳಲ್ಲಿ ‘ಹಿಂದಿ ಜಾಗೃತಿ ದಿನ’ವನ್ನು ಆಚರಿಸಲು ಕೇಂದ್ರ ಸರಕಾರ ನಿರ್ದೇಶನಗಳನ್ನು ನೀಡುತ್ತಿತ್ತು. ಬ್ಯಾಂಕುಗಳಲ್ಲಿ ಹಿಂದಿ ಭಾಷೆಯ ಮಹತ್ವವನ್ನು ಸಾರುವುದು, ಗ್ರಾಹಕರಿಗೆ ಹಿಂದಿ ಪದಗಳನ್ನು ಪರಿಚಯಿಸುವುದು ಇತ್ಯಾದಿಗಳು ನಡೆಯುತ್ತಿದ್ದವು. ಇದೀಗ ಹಿಂದಿ ಜಾಗೃತಿ ಎಂದರೆ, ಕನ್ನಡದ ತಿರಸ್ಕಾರ ಎನ್ನುವಂತಾಗಿದೆ. ಬ್ಯಾಂಕು, ನ್ಯಾಯಾಲಯ, ಸರಕಾರಿ ಕಚೇರಿಗಳಲ್ಲಿ ಜನಸಾಮಾನ್ಯರು ಒಂದಲ್ಲ ಒಂದು ಕಾರಣಕ್ಕಾಗಿ ವ್ಯವಹರಿಸಲೇ ಬೇಕಾಗುತ್ತದೆ. ಇಲ್ಲಿ ಹಿಂದಿ ಭಾಷೆ ಗೊತ್ತಿಲ್ಲದೆ ವ್ಯವಹರಿಸಲು ಸಾಧ್ಯವಿಲ್ಲ ಎಂದಾದರೆ ಜನರು ಹಿಂದಿ ಕಲಿಯುವುದು ಅನಿವಾರ್ಯವಾಗುತ್ತದೆ. ಕನ್ನಡದ ಸ್ಥಾನದಲ್ಲಿ ಹಿಂದಿಯನ್ನು ಹೇರಿ ಕರ್ನಾಟಕವನ್ನು ಹಿಂದಿಮಯವಾಗಿಸುವುದು ಕೇಂದ್ರ ಸರಕಾರದ ಗುರಿ. ಈವರೆಗೆ ನಮ್ಮ ರಾಜ್ಯ ಕನ್ನಡ ಮತ್ತು ಇಂಗ್ಲಿಷ್ ಮೂಲಕವೇ ಇಂದು ವಿಶ್ವಮಟ್ಟದಲ್ಲಿ ಸಾಧನೆಗಳನ್ನು ಮಾಡಿದೆ. ಐಟಿ, ಬಿಟಿಯ ಮೂಲಕ ಬೆಂಗಳೂರು ದೇಶ ವಿದೇಶಗಳಲ್ಲಿ ಗುರುತಿಸಲ್ಪಡುತ್ತಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲೂ ಬಹಳಷ್ಟು ಸಾಧನೆಗಳನ್ನು ಮಾಡಿದೆ. ಉತ್ತರ ಭಾರತದ ರಾಜ್ಯಗಳಿಗೆ ದಕ್ಷಿಣ ಭಾರತದ ರಾಜ್ಯಗಳು ಅಭಿವೃದ್ಧಿಯಲ್ಲಿ ಮಾದರಿಯಾಗಿವೆ. ಹಿಂದಿ ಗೊತ್ತಿಲ್ಲದ ಕಾರಣಕ್ಕಾಗಿ ಕರ್ನಾಟಕ ಕಳೆದುಕೊಂಡದ್ದೇನೂ ಇಲ್ಲ, ಹಿಂದಿಯ ಮೂಲಕ ಉತ್ತರ ಭಾರತ ಸಾಧಿಸಿದ್ದೂ ಇಲ್ಲ. ಹೀಗಿರುವಾಗ, ಹಿಂದಿ ಭಾಷೆಯನ್ನು ಕನ್ನಡಿಗರ ಮೇಲೆ ಕೇಂದ್ರ ಸರಕಾರ ಹೇರುವ ಉದ್ದೇಶವಾದರೂ ಏನು? ಕರ್ನಾಟಕ ಹಿಂದಿಮಯವಾದರೆ ಉತ್ತರ ಭಾರತೀಯರಿಗೆ ಈ ರಾಜ್ಯದ ಮೇಲೆ ನಿಯಂತ್ರಣ ಸಾಧಿಸುವುದು ಸುಲಭವಾಗುತ್ತದೆ. ಪ್ರಾದೇಶಿಕ ಭಾಷೆಗಳನ್ನು ಇಲ್ಲವಾಗಿಸಿ ಒಂದು ರಾಷ್ಟ್ರ, ಒಂದು ಭಾಷೆ ಎನ್ನುವ ಘೋಷಣೆಯನ್ನು ಈ ಮೂಲಕ ಜಾರಿಗೊಳಿಸುವುದು ಸಂಘಪರಿವಾರದ ಹುನ್ನಾರವಾಗಿದೆ. ಹಿಂದಿ ಹೇರಿಕೆಯೆಂದರೆ ದಕ್ಷಿಣದ ಮೇಲೆ ಉತ್ತರದ ಹೇರಿಕೆಯಾಗಿದೆ.

ಇದೀಗ ತಡವಾಗಿಯಾದರೂ ರಾಜ್ಯ ಸರಕಾರ ಬ್ಯಾಂಕುಗಳಲ್ಲಿ ಹಿಂದಿ ಪಾರಮ್ಯದ ವಿರುದ್ಧ ತನ್ನ ನಿಲುವನ್ನು ಪ್ರಕಟಿಸುವ ಇಂಗಿತ ವ್ಯಕ್ತಪಡಿಸಿದೆ. ಬ್ಯಾಂಕ್ ಸಿಬ್ಬಂದಿ ಕನ್ನಡದಲ್ಲಿ ವ್ಯವಹರಿಸುವುದು ಕಡ್ಡಾಯಗೊಳಿಸಲು ಸರಕಾರ ಮುಂದಾಗಿದೆ. ಈ ಬಗ್ಗೆ ಅಧಿಸೂಚನೆಯೊಂದನ್ನು ಹೊರಡಿಸುವ ನಿರೀಕ್ಷೆಯಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೇಳಿದೆ. ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ-೨೦೨೨’ನ್ನು ಮಾರ್ಚ್‌ನಲ್ಲಿ ಅಂಗೀಕರಿಸಲಾಗಿದ್ದು, ಇದರ ಪ್ರಕಾರ ಎಲ್ಲ ಸರಕಾರಿ ಸಿಬ್ಬಂದಿ ಕನ್ನಡ ಕಲಿಯುವುದು ಕಡ್ಡಾಯವಾಗಿದೆ. ಬ್ಯಾಂಕ್‌ಗಳಲ್ಲಿ ಹಿಂದಿ ಜಾಗೃತಿ ದಿನಕ್ಕೆ ಬದಲಾಗಿ, ಕನ್ನಡ ಕಲಿಕಾ ಘಟಕಗಳನ್ನು ಸ್ಥಾಪಿಸುವ ಬಗ್ಗೆ ಸರಕಾರ ಚಿಂತಿಸುತ್ತಿದೆ. ಈ ಮೂಲಕ ಉತ್ತರ ಭಾರತದ ಸಿಬ್ಬಂದಿಯ ಭಾಷಾ ದರ್ಪವನ್ನು ಇಲ್ಲವಾಗಿಸುವುದು ಮಾತ್ರವಲ್ಲ, ಕರ್ನಾಟಕದಲ್ಲಿ ಕೆಲಸ ಮಾಡುವ ಪರಭಾಷಿಗರು ಕನ್ನಡ ಕಲಿಯುವುದನ್ನು ಅನಿವಾರ್ಯಗಿಸುತ್ತದೆ. ಕನಿಷ್ಠ ಕರ್ನಾಟಕದಲ್ಲಿರುವ ಕನ್ನಡಿಗರು ಕೀಳರಿಮೆ ಅನುಭವಿಸುತ್ತಾ ಬ್ಯಾಂಕಿನಲ್ಲಿ ವ್ಯವಹರಿಸುವುದು ಇದರಿಂದ ಇಲ್ಲವಾಗಬಹುದು. ಜೊತೆಗೆ ಉತ್ತರ ಭಾರತೀಯರನ್ನು ಕರ್ನಾಟಕದ ನೆಲದ ಜೊತೆಗೆ ಬೆಸೆಯುವ ಪ್ರಯತ್ನವೂ ಇದರಿಂದಾಗುತ್ತದೆ. ಆದುದರಿಂದ ಸರಕಾರ ತಕ್ಷಣ ಎಲ್ಲ ಬ್ಯಾಂಕುಗಳಲ್ಲಿ ಕನ್ನಡ ಕಲಿಕಾ ಘಟಕಗಳನ್ನು ತೆರೆಯಲು ವ್ಯವಸ್ಥೆ ಮಾಡಬೇಕು. ಕನ್ನಡದಲ್ಲಿ ಮಾತನಾಡಿದ ಗ್ರಾಹಕರೊಂದಿಗೆ ಉದ್ಧಟತನದಿಂದ ವರ್ತಿಸಿದ ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತಾಗಬೇಕು. ಕನ್ನಡಿಗರ ಹಣದಿಂದ ಬೆಳೆದು ನಿಂತ ಬ್ಯಾಂಕುಗಳಲ್ಲಿ ಕನ್ನಡ ಭಾಷೆಯೂ ಠೇವಣಿಯಾಗಿ ಬೆಳೆಯುವಂತಾಗಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News