ನೀಟ್ ಪರೀಕ್ಷೆ ರದ್ದಾಗಲಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಉಕ್ರೇನ್ ಮೇಲೆ ರಶ್ಯ ಯುದ್ಧ ಹೇರಿದಾಗ ಕರ್ನಾಟಕದಲ್ಲಿ ನೀಟ್ ಪರೀಕ್ಷೆ ವಿರುದ್ಧ ಏಕಾಏಕಿ ಪ್ರತಿಭಟನೆಗಳು ಆರಂಭವಾಗಿದ್ದವು. ಉನ್ನತ ವೈದ್ಯಕೀಯ ಶಿಕ್ಷಣಕ್ಕಾಗಿ ರಾಜ್ಯದಿಂದ ನೂರಾರು ವಿದ್ಯಾರ್ಥಿಗಳು ಉಕ್ರೇನ್‌ಗೆ ತೆರಳಿರುವುದು ಮತ್ತು ಯುದ್ಧ ಕಾರಣದಿಂದ ಅವರು ಬೀದಿಗೆ ಬಿದ್ದಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಯಿತು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಅಚ್ಚರಿಯಿಂದ ‘‘ಭಾರತದಲ್ಲೇ ಕಾಲೇಜುಗಳು ಇರುವಾಗ ಉನ್ನತ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್‌ನಂತಹ ಸಣ್ಣ ದೇಶಗಳಿಗೆ ಯಾಕೆ ಹೋಗುತ್ತಾರೆ?’’ ಎಂದು ‘ಅಮಾಯಕ’ನಂತೆ ಕಳವಳ ವ್ಯಕ್ತಪಡಿಸಿದ್ದರು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿಸಣ್ಣ ಪುಟ್ಟ ದೇಶಗಳಿಗೆ ತೆರಳುವ ವಿದ್ಯಾರ್ಥಿಗಳು ಪ್ರತಿಭಾವಂತರೇ ಆಗಿದ್ದಾರೆ. ಆದರೆ ಅವರಿಗೆ ಭಾರತದಲ್ಲಿ ವೈದ್ಯಕೀಯ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗದಂತಹ ಸ್ಥಿತಿಯನ್ನು ಕೇಂದ್ರ ಸರಕಾರವೇ ತಂದಿಟ್ಟಿದೆ ಎನ್ನುವುದು ಪ್ರಧಾನಿಯವರಿಗೆ ತಿಳಿದಿರಲಿಲ್ಲ. ಆ ಚರ್ಚೆ ಮುನ್ನೆಲೆಗೆ ಬರುತ್ತಿದ್ದಂತೆಯೇ ಕೇಂದ್ರ ಸರಕಾರದ ನೀಟ್ ಪರೀಕ್ಷೆ ಹೇಗೆ ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮದೇ ರಾಜ್ಯಗಳಲ್ಲಿರುವ ಕಾಲೇಜುಗಳಿಂದ ಹೊರ ದಬ್ಬಲ್ಪಡುತ್ತಿದ್ದಾರೆ ಎನ್ನುವ ಅಂಶ ಬೆಳಕಿಗೆ ಬಂತು. ಅದಾಗಲೇ ನೀಟ್ ಪರೀಕ್ಷೆಯ ವಿರುದ್ಧ ತಮಿಳು ನಾಡು ಮತ್ತು ಕೇರಳ ಸ್ಪಷ್ಟ ಧ್ವನಿಯಲ್ಲಿ ತಮ್ಮ ಆಕ್ಷೇಪಗಳನ್ನು ವ್ಯಕ್ತಪಡಿಸುತ್ತಾ ಬಂದಿದ್ದವು. ಆದರೆ ಕರ್ನಾಟಕ ತನ್ನ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವ್ಯಕ್ತಪಡಿಸುವುದಕ್ಕಾಗಿ ರಶ್ಯ ಉಕ್ರೇನ್ ವಿರುದ್ಧ ಯುದ್ಧವನ್ನು ಘೋಷಿಸಬೇಕಾಗಿ ಬಂತು. ಕರ್ನಾಟಕದ ವಿದ್ಯಾರ್ಥಿಗಳು ಯುದ್ಧ ಭೂಮಿಯಿಂದ ಜೀವ ಉಳಿಸಿಕೊಂಡು ಸಾಲು ಸಾಲಾಗಿ ರಾಜ್ಯಕ್ಕೆ ಮರಳುತ್ತಿದ್ದಂತೆಯೇ ರಾಜ್ಯದ ಕಾಲೇಜುಗಳಲ್ಲಿ ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಬೇಕು ಎನ್ನುವ ಕೂಗು ಬಲವಾಗಿ ಕೇಳಿ ಬರತೊಡಗಿತ್ತು.
ನೀಟ್ ಪರೀಕ್ಷೆ ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲೇ ಹಮ್ಮಿಕೊಳ್ಳುತ್ತಿರುವುದು ಈ ಹಿಂದೆಯೇ ತರಾಟೆಗೀಡಾಗಿತ್ತು. ಇಂಗ್ಲಿಷ್ ಹೊರತು ಪಡಿಸಿದರೆ ಹಿಂದಿಯಲ್ಲಿ ಬರೆಯುವುದು ದಕ್ಷಿಣ ಭಾರತೀಯರಿಗೆ ಅನಿವಾರ್ಯವಾಗಿತ್ತು. ಉತ್ತರ ಭಾರತೀಯ ವಿದ್ಯಾರ್ಥಿಗಳಿಗೆ ಇದು ಬಹಳಷ್ಟು ಅನುಕೂಲವನ್ನು ಮಾಡಿಕೊಡುತ್ತಿತ್ತು. ಇಂತಹ ಸಂದರ್ಭದಲ್ಲಿ, ಪ್ರಾದೇಶಿಕ ಭಾಷೆಗಳಿಗೂ ಅವಕಾಶ ನೀಡಬೇಕು ಎನ್ನುವ ಆಗ್ರಹ, ಪ್ರತಿಭಟನೆಗಳನ್ನು ದಕ್ಷಿಣ ಭಾರತದ ರಾಜ್ಯಗಳು ಮಾಡತೊಡಗಿದವು. ಅನಿವಾರ್ಯವಾಗಿ ಈ ಬೇಡಿಕೆಯನ್ನು ಕೇಂದ್ರ ಸರಕಾರ ಒಪ್ಪಿಕೊಂಡಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತರ ಭಾರತಕ್ಕಿಂತ ದಕ್ಷಿಣ ಭಾರತದ ರಾಜ್ಯಗಳು ಅಪಾರ ಸಾಧನೆಗಳನ್ನು ಮಾಡುತ್ತಾ ಬಂದಿವೆ. ಉನ್ನತ ವೈದ್ಯಕೀಯ ಶಿಕ್ಷಣಕ್ಕಾಗಿ ಅಪಾರ ಹಣವನ್ನು ತನ್ನ ಬಜೆಟ್‌ನಲ್ಲಿ ಮೀಸಲಿಡುತ್ತಾ ಬಂದಿವೆೆ. ದಕ್ಷಿಣ ಭಾರತದ ಜನತೆಯ ತೆರಿಗೆ ಹಣವನ್ನು ದೊಡ್ಡ ಪ್ರಮಾಣದಲ್ಲಿ ಉನ್ನತ ಶಿಕ್ಷಣಕ್ಕೆ ವ್ಯಯ ಮಾಡುತ್ತಿರುವುದರಿಂದ, ಇಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೇ ಹೆಚ್ಚು ಅವಕಾಶ ಸಿಗಬೇಕು ಎನ್ನುವುದು ದಕ್ಷಿಣ ಭಾರತದ ರಾಜ್ಯಗಳ ಆಗ್ರಹವಾಗಿದೆ. ಆದರೆ ನೀಟ್ ಪರೀಕ್ಷೆಯಿಂದಾಗಿ ಉತ್ತರ ಭಾರತೀಯ ವಿದ್ಯಾರ್ಥಿಗಳು ಇಲ್ಲಿನ ವಿದ್ಯಾರ್ಥಿಗಳ ಅವಕಾಶವನ್ನು ಕಸಿದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಯಿತು. ಈ ಕಾರಣದಿಂದಲೇ, ಉನ್ನತ ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ಆಯಾ ರಾಜ್ಯಗಳಿಗೇ ಸೇರಬೇಕು ಎನ್ನುವ ಒತ್ತಾಯವನ್ನು ದಕ್ಷಿಣ ಭಾರತೀಯ ರಾಜ್ಯಗಳು ಮಾಡಿಕೊಂಡು ಬಂದಿವೆ. ಆದರೆ ಕೇಂದ್ರ ಸರಕಾರ ಈ ಆಗ್ರಹಕ್ಕೆ ಜಾಣ ಕಿವುಡನಂತೆ ವರ್ತಿಸಿದೆ.
ಇದೀಗ ನೀಟ್ ಪರೀಕ್ಷೆ ತನ್ನ ಅಕ್ರಮಗಳ ಕಾರಣಕ್ಕಾಗಿ ರಾಷ್ಟ್ರಮಟ್ಟದಲ್ಲಿ ಮತ್ತೆ ಸುದ್ದಿಯಲ್ಲಿದೆ. ಈ ಬಾರಿ 67 ಮಂದಿಗೆ ಪ್ರಥಮ ರ್ಯಾಂಕ್ ಬಂದಿರುವುದು ಆರೋಪಕ್ಕೆ ಪ್ರಮುಖ ಕಾರಣವಾಗಿದ್ದು, ಇದು ಅಸಾಧ್ಯ ಎನ್ನಲಾಗುತ್ತಿದೆ. 2019ರಿಂದೀಚಿನ ಮಾಹಿತಿಯ ಪ್ರಕಾರವೇ ನೀಟ್‌ನಲ್ಲಿ ನಾಲ್ಕಕ್ಕಿಂತ ಹೆಚ್ಚು ಮಂದಿಗೆ ಸಂಪೂರ್ಣ ಅಂಕ ಅಂದರೆ, 720ರಲ್ಲಿ 720 ಅಂಕಗಳು ದೊರಕಿದ ದಾಖಲೆಯಿಲ್ಲ. 2023ರಲ್ಲಿ 2 ಟಾಪರ್‌ಗಳಿದ್ದರೆ, 2022ರಲ್ಲಿ ಸಂಪೂರ್ಣ ಅಂಕ ಪಡೆದವರಿಲ್ಲ. ಆದರೆ ಈ ಬಾರಿ ಪೂರ್ಣ ಅಂಕ ಪಡೆದ 67 ಮಂದಿಯಲ್ಲಿ ಆರು ಮಂದಿ ಒಂದೇ ಅನುಕ್ರಮದ ಸೀಟ್ ಸಂಖ್ಯೆಗಳನ್ನು ಹೊಂದಿದ್ದಾರೆ. ಅದು ಹರ್ಯಾಣದ ಪರೀಕ್ಷಾ ಕೇಂದ್ರದ್ದೆನ್ನಲಾಗಿದೆ. ಇದು ಕೂಡಾ ಸಾಕಷ್ಟು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ನೀಡಿರುವ ಅಂಕಗಳ ಬಗ್ಗೆಯೂ ಹಲವರು ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ನೀಟ್ ಸಮರ್ಥನೆಯನ್ನು ನೀಡಿದೆಯಾದರೂ ಅದು ನಂಬುವುದಕ್ಕೆ ಯೋಗ್ಯವಾಗಿಲ್ಲ. ಚುನಾವಣೆಯ ಅವಧಿಯಲ್ಲೇ ಆತುರಾತುರವಾಗಿ ನೀಟ್ ಫಲಿತಾಂಶವನ್ನು ಘೋಷಿಸಿರುವುದು ಮತ್ತು ಸಂಬಂಧಿಸಿದ ಅಧಿಕಾರಿಗಳು ಅನುಮಾನಗಳಿಗೆ ಸ್ಪಷ್ಟ ಉತ್ತರ ನೀಡದೆ ನುಣುಚಿಕೊಳ್ಳುತ್ತಿರುವುದರಿಂದ ಪೋಷಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎನ್ನುವ ಆರೋಪ ತಿಂಗಳ ಹಿಂದೆಯೇ ಕೇಳಿ ಬಂದಿತ್ತು. ಅಂಕದ ವ್ಯತ್ಯಾಸಗಳನ್ನು ಸಮರ್ಥಿಸಲು ಇದೀಗ ಗ್ರೇಸ್ ಅಂಕಗಳನ್ನು ನೀಡಲಾಗಿದೆ ಎನ್ನುತ್ತಿದೆ. ಆದರೆ ಯಾವ ಮಾನದಂಡದಲ್ಲಿ ಈ ಅಂಕಗಳನ್ನು ನೀಡಲಾಗಿದೆ ಎನ್ನುವುದಕ್ಕೆ ಸ್ಪಷ್ಟ ಉತ್ತರವಿಲ್ಲ. ಇದೀಗ ಉತ್ತರ ಭಾರತದಲ್ಲಿ ಮರು ಪರೀಕ್ಷೆ ಆಗ್ರಹಿಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಬೀದಿಗಿಳಿದಿದ್ದಾರೆ. ನೀಟ್ ಫಲಿತಾಂಶದ ವಿರುದ್ಧ ಹಲವರು ನ್ಯಾಯಾಲಯ ಮೆಟ್ಟಿಲನ್ನೂ ತುಳಿದಿದ್ದಾರೆ.
ನೀಟ್ ಪರೀಕ್ಷೆಯ ಗೊಂದಲ ಈ ದೇಶದ ಸಹಸ್ರಾರು ವಿದ್ಯಾರ್ಥಿಗಳಲ್ಲಿ ಆತಂಕ, ಒತ್ತಡಗಳನ್ನು ಸೃಷ್ಟಿಸಿದೆ. ಈಗಾಗಲೇ ನೀಟ್ ಪರೀಕ್ಷೆಯ ಗೊಂದಲದಿಂದ ಹಲವರು ಆತ್ಮಹತ್ಯೆಯನ್ನು ಮಾಡಿದ್ದಾರೆ. ನೂರಾರು ವಿದ್ಯಾರ್ಥಿಗಳು ಖಿನ್ನತೆ, ಆತಂಕಗಳನ್ನು ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯ ಮಾತ್ರವಲ್ಲ, ವೈದ್ಯಕೀಯ ಕ್ಷೇತ್ರದ ಭವಿಷ್ಯವೂ ಇದರೊಂದಿಗೆ ತಳಕು ಹಾಕಿಕೊಂಡಿದೆ. ನೀಟ್‌ನ್ನು ಮುಂದಿಟ್ಟುಕೊಂಡು ಹಣ, ಅಕ್ರಮಗಳ ಮೂಲಕ ಅನರ್ಹ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದೆ. ಪ್ರತಿಭಾವಂತರು ಪ್ರವೇಶಾವಕಾಶ ಕಳೆದುಕೊಂಡು ಉಕ್ರೇನ್, ಕಝಕಿಸ್ತಾನ್ ಮೊದಲಾದ ಸಣ್ಣ ದೇಶಗಳ ಕಡೆಗೆ ವಲಸೆ ಹೋಗಬೇಕಾದ ಸ್ಥಿತಿಯನ್ನು ಸರಕಾರವೇ ನಿರ್ಮಾಣ ಮಾಡುತ್ತಿದೆ. ಪರಿಸ್ಥಿತಿ ಕೈ ಮೀರುವುದಕ್ಕೆ ಮೊದಲೇ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಬೇಕು. ಶೋಷಿತ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡುವ ಸಂದರ್ಭದಲ್ಲಿ ‘ಪ್ರತಿಭೆ’ಯನ್ನು ಗುರಾಣಿಯಾಗಿ ಬಳಸುತ್ತಿರುವ ರಾಜಕೀಯ ನಾಯಕರಿಗೆ, ನೀಟ್‌ನಲ್ಲಿ ನಡೆಯುತ್ತಿರುವ ಅಕ್ರಮಗಳು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿರುವುದು ಯಾಕೆ ಕಾಣುತ್ತಿಲ್ಲ ? ಈಗಾಗಲೇ ಹಣವಂತರು ಪೇಮೆಂಟ್ ಸೀಟ್‌ಗಳ ಮೂಲಕ ಪ್ರವೇಶವನ್ನು ಪಡೆಯುತ್ತಿದ್ದಾರೆ. ಅವುಗಳ ನಡುವೆಯೇ ಅಕ್ರಮಗಳ ಮೂಲಕ ಪ್ರತಿಭಾವಂತರ ಅವಕಾಶವನ್ನು ಕಿತ್ತುಕೊಳ್ಳುವುದು ಎಷ್ಟು ಸರಿ?
ಸದ್ಯಕ್ಕೆ ನೀಟ್ ಮರು ಪರೀಕ್ಷೆಯೇ ಸರಕಾರದ ಮುಂದಿರುವ ಏಕೈಕ ಪರಿಹಾರ. ಇದೇ ಸಂದರ್ಭದಲ್ಲಿ ದಕ್ಷಿಣ ಭಾರತದ ರಾಜ್ಯಗಳು ಈ ನೀಟ್ ಪರೀಕ್ಷೆಯನ್ನು ಸಂಪೂರ್ಣ ರದ್ದುಗೊಳಿಸಲು ಸಂಘಟಿತವಾಗಿ ಹೋರಾಟ ನಡೆಸಬೇಕಾಗಿದೆ. ಇದೀಗ ದೇಶದಲ್ಲಿ ಎನ್‌ಡಿಎ ನೇತೃತ್ವದ ಸರಕಾರವಿದೆ. ದಕ್ಷಿಣ ಭಾರತದ ಪ್ರಾದೇಶಿಕ ಪಕ್ಷಗಳು ಈ ಎನ್‌ಡಿಎ ಜೊತೆಗೆ ಕೈ ಜೋಡಿಸಿಕೊಂಡಿವೆ. ಈ ಪಕ್ಷಗಳು ಉನ್ನತ ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿ ರಾಜ್ಯದ ಹಿತಾಸಕ್ತಿಯನ್ನು ಎತ್ತಿ ಹಿಡಿಯಬೇಕು. ನೀಟ್ ಮೂಲಕ, ರಾಜ್ಯದ ವೈದ್ಯಕೀಯ ಶಿಕ್ಷಣದ ಮೇಲೆ ಕೇಂದ್ರ ನಡೆಸುತ್ತಿರುವ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಲು ಇದು ಸರಿಯಾದ ಸಂದರ್ಭವಾಗಿದೆ.