ನೋಟಾ ನೀಡಲಿ ಹೊಸ ಒಳನೋಟ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಈಬಾರಿಯ ಚುನಾವಣೆಯಲ್ಲೂ ‘ನೋಟಾ’ ಸದ್ದು ಮಾಡುತ್ತಿದೆ. ಮಂಗಳೂರು ಲೋಕಸಭಾ ಕ್ಷೇತ್ರವೂ ಸೇರಿದಂತೆ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಎದುರಾಳಿಗಿಂತ ‘ನೋಟಾ ಅಭ್ಯರ್ಥಿ’ಗೆ ಹೆದರುವಂತಹ ಸ್ಥಿತಿಯಿದೆ. ಈವರೆಗೆ ಯಾವುದೇ ಚುನಾವಣೆಯಲ್ಲಿ ನೋಟಾ ಗೆದ್ದಿಲ್ಲವಾದರೂ, ಹಲವು
ಕ್ಷೇತ್ರಗಳಲ್ಲಿ ಸೋಲುಗೆಲುವಿನಲ್ಲಿ ಅದು ನಿರ್ಣಾಯಕ ಪಾತ್ರ ವಹಿಸಿದ್ದಿದೆ. ಗೆಲುವಿನ ಅಂತರವನ್ನು ಇಳಿಸಿ ಗೆದ್ದ ಅಭ್ಯರ್ಥಿಗೆ ಮುಖಭಂಗ ಮಾಡಿದ್ದೂ ಇದೆ. ಆದುದರಿಂದಲೇ ಗೆಲ್ಲುವ ಅಭ್ಯರ್ಥಿಗಳೆಲ್ಲ ಒಳಗೊಳಗೆ ನೋಟಾ ಮತಗಳಿಗೆ ಹೆದರುತ್ತಾರೆ. ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಲ್ಲಿ ಯಾರೊಬ್ಬರೂ ಇಷ್ಟವಾಗಲಿಲ್ಲ ಎಂದಾದರೆ ಮತದಾರ ಏನು ಮಾಡಬೇಕು? ಮತ ಹಾಕದೆ ವಾಪಸ್ ಬರಬೇಕೆ?
ಅಥವಾ ಮತಗಳನ್ನು ಅಸಿಂಧುಗೊಳಿಸಬೇಕೆ? ಎನ್ನುವ ಪ್ರಶ್ನೆಗಳು ಉದ್ಭವಿಸಿದಾಗ ಹುಟ್ಟಿದ್ದು ನೋಟಾ. ಪಿಯುಸಿಎಲ್ ನೋಟಾ ಮತದಾನಕ್ಕಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. 2013ರಲ್ಲಿ ತೀರ್ಪು ನೀಡಿದ ನ್ಯಾಯಾಲಯ ‘ನೋಟಾ’ವನ್ನು ಅಳವಡಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತು. 2013ರಲ್ಲಿ ಐದು ರಾಜ್ಯಗಳಿಗೆ ನಡೆದ ಚುನಾವಣೆಯಲ್ಲಿ ಮೊದಲ ಬಾರಿಗೆ ಇದನ್ನು ಪ್ರಯೋಗಿಸಲಾಯಿತು. ಇಷ್ಟಾದರೂ ಮತದಾರರ ಈ ತಿರಸ್ಕಾರ ಚುನಾವಣೆಯ ಫಲಿತಾಂಶವನ್ನು ಯಾವ ರೀತಿಯಲ್ಲಿ ಬದಲಿಸುತ್ತದೆ ಎಂದು ಯೋಚಿಸಿದರೆ ನಿರಾಶೆಯಾಗುತ್ತದೆ. ಒಂದು ವೇಳೆ
ಯಾವುದೋ ಒಂದು ಕ್ಷೇತ್ರದಲ್ಲಿ ನೋಟಾಗೆ ಅತ್ಯಧಿಕ ಮತ ಬಿದ್ದಲ್ಲಿ ಏನು ಬದಲಾವಣೆಯಾಗುತ್ತದೆ? ಈ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ. ಆನಂತರದ ಅಭ್ಯರ್ಥಿಯನ್ನೇ ಚುನಾವಣಾ ಆಯೋಗ ‘ಗೆದ್ದ ಅಭ್ಯರ್ಥಿ’ಯಾಗಿ ಘೋಷಣೆ ಮಾಡುತ್ತದೆಯಾದರೆ, ‘ನೋಟಾ ಚಲಾವಣೆ’ಯ ಅಗತ್ಯವಾದರೂ ಏನು ಎನ್ನುವ ಪ್ರಶ್ನೆಗೆ ಆಯೋಗದ ಬಳಿ ಉತ್ತರವಿಲ್ಲ. ಇದೀಗ ಈ ಪ್ರಶ್ನೆ ನ್ಯಾಯಾಲಯದ ಮೆಟ್ಟಿಲನ್ನೇರಿದೆ.
ಒಂದು ವೇಳೆ ನೋಟಾಗೆ ಅತ್ಯಧಿಕ ಮತಗಳು ದೊರೆತಲ್ಲಿ ಆ ಕ್ಷೇತ್ರದಲ್ಲಿ ಆ ಚುನಾವಣೆಯನ್ನು ಅಸಿಂಧು ಎಂದು ಪರಿಗಣಿಸಬೇಕು ಹಾಗೂ ಅಲ್ಲಿ ಹೊಸದಾಗಿ ಚುನಾವಣೆಯನ್ನು ನಡೆಸಬೇಕು ಎಂದು ಸಂಘಟನೆಗಳು ಇದೀಗ ಮತ್ತೆ ನ್ಯಾಯಾಲಯದ ಮೊರೆ ಹೋಗಿವೆ. ಈ ಸಂಬಂಧ ಸುಪ್ರೀಂಕೋರ್ಟ್ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿದೆ. ಒಂದು ವೇಳೆ ಕಣದಲ್ಲಿರುವ ಅಭ್ಯರ್ಥಿಗಳು ನೋಟಾಗಿಂತ ಕಡಿಮೆ ಮತ ಪಡೆದಲ್ಲಿ ಅವರಿಗೆ ಐದು ವರ್ಷಗಳ ಅವಧಿಗೆ ಚುನಾವಣೆಗೆ
ಸ್ಪರ್ಧಿಸುವುದರಿಂದ ನಿಷೇಧ ವಿಧಿಸಬೇಕು ಹಾಗೂ ನೋಟಾ ಒಂದು ಕಾಲ್ಪನಿಕ ಅಭ್ಯರ್ಥಿಯೆಂಬ ಬಗ್ಗೆ ಜನತೆಯ ನಡುವೆ ಸಮರ್ಪಕ ಹಾಗೂ ದಕ್ಷ ರೀತಿಯಲ್ಲಿ ಪ್ರಚಾರವನ್ನು ನಡೆಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಈವರೆಗೆ ಯಾವುದೇ ಕ್ಷೇತ್ರದಲ್ಲಿ ನೋಟಾ ಬಹುಮತ ಪಡೆದ ಉದಾಹರಣೆಗಳಿಲ್ಲ. ಅಭ್ಯರ್ಥಿಗಳ ಗೆಲ್ಲುವ ಅಂತರವನ್ನು ಕೆಲವೆಡೆ ನೋಟಾ ಕಡಿಮೆಗೊಳಿಸಿದೆ ಎನ್ನುವುದನ್ನು ಬಿಟ್ಟರೆ, ಹೆಚ್ಚಿನ ಪರಿಣಾಮವೇನೂ ಆಗಿಲ್ಲ. ಆದರೆ ಭ್ರಷ್ಟ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವಂತೆಯೇ ನೋಟಾ ಮಹತ್ವವನ್ನು ಪಡೆದುಕೊಳ್ಳುತ್ತಿದೆ. ನ್ಯಾಯ ವಂಚಿತ ಜನರು ಪ್ರತಿಭಟನೆಯ ರೂಪದಲ್ಲಿ ಈ ನೋಟಾವನ್ನು ಬಳಸಿಕೊಳ್ಳುತ್ತಿರುವುದು ಹೆಚ್ಚಿದೆ. ಬೆಳ್ತಂಗಡಿಯಲ್ಲಿ ಸೌಜನ್ಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯ ನೀಡಬೇಕು ಎಂದು ಒತ್ತಾಯಿಸಿ ನೋಟಾ ಪ್ರಯೋಗ ಮಾಡಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ಆದರೆ ನೋಟಾ ಚಲಾವಣೆ ಪ್ರಜಾಸತ್ತೆಯ ಕುರಿತಂತೆ ಸಿನಿಕತನವನ್ನು ಬೆಳೆಸದಂತೆ ನೋಡಿಕೊಳ್ಳುವುದು ಕೂಡ ನಮ್ಮ ಹೊಣೆಗಾರಿಕೆಯಾಗಿದೆ.
ಚುನಾವಣೆ ಹೆಚ್ಚು ಭ್ರಷ್ಟವಾಗುತ್ತಿದೆ ಎನ್ನುವುದೇನೋ ನಿಜ. ಆದರೆ ಅದಕ್ಕಾಗಿ ನಾವು ಮತದಾನದಿಂದ ದೂರ ಉಳಿಯುವುದು ಖಂಡಿತ ಪರಿಹಾರವಲ್ಲ. ಇಂತಹ ಸಂದರ್ಭದಲ್ಲಿ ಇರುವ ಅಭ್ಯರ್ಥಿಗಳಲ್ಲಿ ಯೋಗ್ಯರನ್ನು ಗುರುತಿಸುವುದು ಬುದ್ಧಿವಂತಿಕೆ. ‘ನೋಟಾ ಮತದಾರರು’ ಪ್ರಬುದ್ಧರಾಗಿರುತ್ತಾರೆ. ಸಮಾಜದ ಆಗುಹೋಗುಗಳಿಗೆ ಹೆಚ್ಚು ಸ್ಪಂದಿಸುವವರು, ಸಂವೇದನಾಶೀಲರೂ ಆಗಿರುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇವೆಲ್ಲವೂ ಅವರನ್ನು ಚುನಾವಣೆಯ ಬಗ್ಗೆ ಸಿನಿಕರನ್ನಾಗಿಸಬಾರದು. ಯೋಗ್ಯ ಅಭ್ಯರ್ಥಿಗಳಿಲ್ಲ ಎಂದು ಘೋಷಿಸಿ ಚುನಾವಣೆಯನ್ನು ‘ನೋಟಾ’ದ ಹೆಸರಿನಲ್ಲಿ ಬಹಿಷ್ಕರಿಸುವುದು ಒಂದು ಸಂದೇಶವನ್ನು ನೀಡಬಹುದು. ಆದರೆ ಆ ಸಂದೇಶ ತಲುಪಬೇಕಾದವರನ್ನು ತಲುಪದೇ ಇದ್ದರೆ ಯಾವ ಪ್ರಯೋಜನವೂ ಇಲ್ಲ. ನೋಟಾ ಚಲಾಯಿಸಿ ಎಂದು ಸಾರ್ವಜನಿಕವಾಗಿ ವ್ಯಾಪಕ ಪ್ರಚಾರ ನಡೆಸಿ, ನೋಟಾವನ್ನು ಗೆಲ್ಲಿಸಿದ ಬಳಿಕವಾದರೂ ರಾಜಕೀಯ ಪಕ್ಷಗಳು ಯೋಗ್ಯ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತದೆ ಎನ್ನಲಾಗುವುದಿಲ್ಲ. ನೋಟಾ ಗೆದ್ದರೆ ಹೊಸದಾಗಿ ಚುನಾವಣೆಯನ್ನು ಕ್ಷೇತ್ರಗಳ ಮೇಲೆ ಹೇರಲಾಗುತ್ತದೆ. ಈಗಲೂ ಯೋಗ್ಯ ಅಭ್ಯರ್ಥಿ ಸ್ಪರ್ಧಿಸದೇ ಇದ್ದರೆ? ಅಥವಾ ಒಬ್ಬರಿಗೆ ಯೋಗ್ಯ ಅನ್ನಿಸಿದವನು ಇನ್ನೊಬ್ಬ ಮತದಾರನಿಗೆ ಯೋಗ್ಯ ಎಂದು ಅನ್ನಿಸದೇ ಇದ್ದರೆ? ರಾಜಕೀಯದ ಬಗ್ಗೆ ಸಿನಿಕತನ ಹೆಚ್ಚಿ ಪದೇ ಪದೇ ನೋಟಾ ಗೆಲ್ಲುತ್ತಾ ಹೋದರೆ? ಹೀಗೆಲ್ಲ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ನೋಟಾ ಹುಟ್ಟಿಸುತ್ತಲೇ ಹೋಗುತ್ತದೆ.
ನೋಟಾ ಚಲಾವಣೆ ಮತದಾರರ ಹಕ್ಕು ಎನ್ನುವುದರಲ್ಲಿ ಎರಡು ಮಾತಿಲ್ಲ. ‘ನನ್ನ ಮತಕ್ಕೆ ಯಾವ ಅಭ್ಯರ್ಥಿಯೂ ಅರ್ಹ ಅಲ್ಲ’ ಎನ್ನುವುದನ್ನು ದೇಶಕ್ಕೆ ಸ್ಪಷ್ಟ ಪಡಿಸುವ ಹಕ್ಕು ಮತದಾರನಿಗಿದೆ. ಆದರೆ ಅದು ಆತನ ವೈಯಕ್ತಿಕ ಅನ್ನಿಸಿಕೆಯಾಗಬೇಕು. ನೋಟಾವನ್ನು ಉದ್ದೇಶಪೂರ್ವಕವಾಗಿ ಪ್ರೋತ್ಸಾಹಿಸುವುದು ಚುನಾವಣೆಯ ಉದ್ದೇಶವನ್ನು ಬುಡಮೇಲು ಗೊಳಿಸಬಹುದು. ನೋಟಾ ಚಲಾವಣೆಯನ್ನು ಬೆಂಬಲಿಸುವವರು ತಾವೇ ಸಂಘಟಿತರಾಗಿ ಯೋಗ್ಯ ಅಭ್ಯರ್ಥಿಗಳನ್ನು ನಿಲ್ಲಿಸಬಹುದು. ಅಥವಾ ತಾವೇ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಇರುವ ಅಭ್ಯರ್ಥಿಗಳಲ್ಲಿ ಯೋಗ್ಯನನ್ನು ಗುರುತಿಸುವುದು ಸದ್ಯದ ಸಂದರ್ಭದಲ್ಲಿ ಹೆಚ್ಚು ಪ್ರಬುದ್ಧವಾದ ನಡೆಯಾಗಿದೆ. ನೋಟಾ ಒಬ್ಬ ಅಭ್ಯರ್ಥಿ ಖಂಡಿತ ಅಲ್ಲ. ಅದೊಂದು ಆಶಯ ಮಾತ್ರ. ರಾಜಕೀಯ ಪಕ್ಷಗಳು ಯೋಗ್ಯ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸಲು ನೋಟಾ ಸ್ಫೂರ್ತಿಯಾಗಬೇಕೇ ಹೊರತು, ಪದೇ ಪದೇ ಜನರ ಮೇಲೆ ಚುನಾವಣೆಯನ್ನು ಹೇರಲು ಒಂದು ನೆಪವಾಗಬಾರದು. ಈಗಾಗಲೇ ಗೆದ್ದ ಅಭ್ಯರ್ಥಿಯನ್ನು ಕೊಂಡುಕೊಂಡು ಮತ್ತೆ ಜನರ ಮೇಲೆ ಹೊಸದಾಗಿ ಚುನಾವಣೆಯನ್ನು ಹೇರುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಗೆದ್ದ ಅಭ್ಯರ್ಥಿ ರಾಜಕೀಯ ಆಪರೇಷನ್‌ಗೆ ಬಲಿಯಾಗಿ ಪಕ್ಷಾಂತರಗೊಂಡು ಶಾಸಕ ಸ್ಥಾನಕ್ಕೆ ಕಾರಣವಿಲ್ಲದೆ ರಾಜೀನಾಮೆ ನೀಡಿದರೆ ಆತನಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಶಾಶ್ವತ ನಿಷೇಧ ಹೇರಲು ನ್ಯಾಯಾಲಯವನ್ನು ಒತ್ತಾಯಿಸುವುದು ಇಂದಿನ ಅಗತ್ಯವಾಗಿದೆ. ಇದೇ ಸಂದರ್ಭದಲ್ಲಿ ನೋಟಾ ಮತದಾನ ಚುನಾವಣೆಗೆ ಹೊಸ ನೋಟವನ್ನು ನೀಡಬೇಕೇ ಹೊರತು, ಚುನಾವಣೆಯ ಉದ್ದೇಶವನ್ನು ಬುಡಮೇಲು ಗೊಳಿಸುವ ಉದ್ದೇಶವನ್ನು ಹೊಂದಿರಬಾರದು. ಮತದಾರರನ್ನೂ, ರಾಜಕೀಯ ಪಕ್ಷಗಳನ್ನೂ ಏಕಕಾಲದಲ್ಲಿ ಪ್ರಬುದ್ಧರನ್ನಾಗಿಸುವ ಒಳನೋಟಗಳನ್ನು ನಾವು ನೋಟಾ ಮೂಲಕ ಪಡೆದುಕೊಳ್ಳಬೇಕಾಗಿದೆ.