ವಸತಿ ಶಾಲೆಯ ಸಿಬ್ಬಂದಿಯ ಮೆದುಳಿನ ಗುಂಡಿ ಶುಚಿಯಾಗಲಿ..

Update: 2023-12-20 04:06 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಶೋಷಿತ ಸಮುದಾಯದ ಮಕ್ಕಳು ಸೇರಿದಂತೆ ರಾಜ್ಯದ ಬಡವರ ಮಕ್ಕಳು ಆರ್ಥಿಕ ಕಾರಣದಿಂದಾಗಿ ಶಿಕ್ಷಣವಂಚಿತರಾಗಬಾರದು ಎನ್ನುವ ಮಹತ್ವದ ಉದ್ದೇಶವನ್ನು ಹೊತ್ತುಕೊಂಡು ಮೊರಾರ್ಜಿ ವಸತಿ ಶಾಲೆಗಳನ್ನು ನಿರ್ಮಿಸಲಾಗಿದೆ. ಈ ವಸತಿ ಶಾಲೆಗಳು ಕೇವಲ ದಲಿತರು ಅಥವಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಎಲ್ಲ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಸತಿ ಶಾಲೆಯನ್ನು ಕಲ್ಪಿಸಲಾಗುತ್ತದೆ. ರಾಜ್ಯದಲ್ಲಿ 400ಕ್ಕೂ ಅಧಿಕ ಮೊರಾರ್ಜಿ ವಸತಿ ಶಾಲೆಗಳು ಕಾರ್ಯಾಚರಿಸುತ್ತಿದ್ದು, ದಲಿತ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಇವು ಮಹತ್ತರ ಕೊಡುಗೆ ನೀಡುತ್ತಿದೆ. ಎಲ್ಲ ಜಾತಿ ಧರ್ಮಗಳ ಮಕ್ಕಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಈ ಶಾಲೆಗಳಿಗೆ ಸರಕಾರ ಅಪಾರ ಸವಲತ್ತುಗಳನ್ನು ನೀಡುತ್ತಾ ಬರುತ್ತಿದೆಯಾದರೂ ಅವುಗಳು ವಿದ್ಯಾರ್ಥಿಗಳಿಗೆ ಎಷ್ಟರಮಟ್ಟಿಗೆ ತಲುಪುತ್ತಿದೆ ಎನ್ನುವುದನ್ನು ಚರ್ಚೆ ಮಾಡಬೇಕಾದ ಸಮಯ ಬಂದಿದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಿಗೆ 179 ವಸತಿ ಶಾಲೆಗಳಿದ್ದರೆ, ಪರಿಶಿಷ್ಟ ವರ್ಗಕ್ಕೆ ಸುಮಾರು 33 ವಸತಿ ಶಾಲೆಗಳಿವೆ. ಅಲ್ಪಸಂಖ್ಯಾತರಿಗಾಗಿ 55 ವಸತಿ ಶಾಲೆಗಳಿವೆ. ಹಿಂದುಳಿದ ವರ್ಗಗಳಿಗಾಗಿ 132 ಶಾಲೆಗಳಿವೆ. ವಿದ್ಯಾರ್ಥಿ ಹಂತದಲ್ಲೇ ಸಮಾಜವನ್ನು ಬೆಸೆಯಲು ಈ ವಸತಿ ಶಾಲೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಎಲ್ಲ ಅವಕಾಶಗಳು ಸರಕಾರಕ್ಕಿದೆ. ಮುಖ್ಯವಾಗಿ ಬೇರೆ ಬೇರೆ ಜಾತಿ, ಧರ್ಮಗಳ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಜೊತೆ ಜೊತೆಯಾಗಿ ಆಟ ಪಾಠಗಳನ್ನು ಹೇಳಿಕೊಟ್ಟು ಅವರಲ್ಲಿ ವಿಶ್ವಮಾನವ ಪ್ರಜ್ಞೆಯನ್ನು ಮೂಡಿಸುವುದಕ್ಕೆ ಸಾಧ್ಯವಾಗಬೇಕು. ಆದರೆ ದುರದೃಷ್ಟವಶಾತ್ ಇಂದು ಈ ಶಾಲೆಗಳೇ ವಿದ್ಯಾರ್ಥಿಗಳಲ್ಲಿ ಜಾತೀಯತೆಯನ್ನು ಬಿತ್ತುವ ಮೂಲಕ ಸುದ್ದಿಯಾಗುತ್ತಿದೆ.

ದೇಶ ಇಂದಿಗೂ ಜಾತೀಯತೆಯ ಮಲದ ಗುಂಡಿಯಲ್ಲಿ ಬಿದ್ದು ಹೊರಳಾಡುತ್ತಿದೆ. ದೇಶವನ್ನು ಈ ಗುಂಡಿಯಿಂದ ಎತ್ತುವ ಕೆಲಸವನ್ನು ಮೊರಾರ್ಜಿ ವಸತಿ ಶಾಲೆಗಳಂತಹ ಸಂಸ್ಥೆ ಮಾಡಬೇಕು. ಆದರೆ ಶಾಲೆಗಳೇ ಮಲದಗುಂಡಿಗೆ ಇಳಿಯಲು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಮುಂದಾದರೆ? ಕೋಲಾರದ ಮೊರಾರ್ಜಿ ಶಾಲೆಯಲ್ಲಿ ವಿದ್ಯಾರ್ಥಿಗಳನ್ನೇ ಮಲದಗುಂಡಿಗೆ ಇಳಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಯಾವ ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ತಮ್ಮ ಬದುಕನ್ನು ಆಮೂಲಾಗ್ರವಾಗಿ ಪರಿವರ್ತಿಸಿಕೊಳ್ಳಬೇಕೋ ಆ ವಿದ್ಯಾರ್ಥಿಗಳನ್ನು ಮತ್ತೆ ಅಸ್ಪಶ್ಯತೆಯ ಕೊಳಚೆಗೆ ಇಳಿಸಿರುವ ಆಘಾತಕಾರಿ ಘಟನೆ ಕೋಲಾರದ ಮಾಲೂರಿನಲ್ಲಿ ನಡೆದಿದೆ. ಕೋಲಾರ ಚಿನ್ನದ ಗಣಿಗೆ ಖ್ಯಾತವಾಗಿರುವಂತೆಯೇ ಮಲಹೊರುವ ಪದ್ಧತಿಗಾಗಿಯೂ ಕುಖ್ಯಾತಿಯನ್ನು ಪಡೆದಿದೆ. ಇಲ್ಲಿನ ಗಣಿಗಾರಿಕೆ ಮತ್ತು ಮಲಹೊರುವ ಪದ್ಧತಿ ಒಂದಕ್ಕೊಂದು ಪೂರಕವಾಗಿ ಬೆಳೆದುಕೊಂಡು ಬಂದಿದೆ. ಚಿನ್ನದ ಗಣಿ ಕೋಲಾರದ ತಳಸ್ತರದ ಬದುಕನ್ನು ಯಾವ ರೀತಿಯಲ್ಲೂ ಬದಲಾಯಿಸಿಲ್ಲ. ಸರಕಾರದ ಕಠಿಣ ಕ್ರಮಗಳ ಬಳಿಕವೂ ಆಗಾಗ ಮಾಧ್ಯಮಗಳಲ್ಲಿ ಮಲಹೊರುವ ಪದ್ಧತಿಗಾಗಿ ಕೋಲಾರ ಸುದ್ದಿಯಾಗುತ್ತಿರುತ್ತದೆ. ಇದೀಗ ವಸತಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳ ಕೈಯಲ್ಲೇ ಮಲದಗುಂಡಿ ಶುಚಿಗೊಳಿಸುವ ಮೂಲಕ, ಸಮಸ್ಯೆಯ ಮೂಲ ನಿಜಕ್ಕೂ ಎಲ್ಲಿದೆ ಎನ್ನುವುದನ್ನು ನಾಡಿಗೆ ಬಟಾಬಯಲು ಮಾಡಿದೆ.

ಮಾಲೂರಿನ ವಸತಿ ಶಾಲೆಯಲ್ಲಿ ಮಲದ ಗುಂಡಿಗೆ ಇಳಿದ ಅಷ್ಟೂ ವಿದ್ಯಾರ್ಥಿಗಳು ದಲಿತ ಸಮುದಾಯಕ್ಕೆ ಸೇರಿದವರು ಎನ್ನುವುದನ್ನು ಗಮನಿಸಬೇಕಾಗಿದೆ. ಇದು ಶಿಕ್ಷಕರು ದಲಿತ ವಿದ್ಯಾರ್ಥಿಗಳ ಕುರಿತಂತೆ ಹೊಂದಿರುವ ಮನಸ್ಥಿತಿಯನ್ನು ಹೇಳುತ್ತದೆ. ಶಿಕ್ಷಕರ ಮನಸ್ಥಿತಿಯೇ ಇಷ್ಟು ಹೊಲಸೆದ್ದು ಹೋಗಿರುವಾಗ, ಸಮಾಜದೊಳಗಿರುವ ಬಲಾಢ್ಯ ಜಾತಿಗಳು ಈ ದಲಿತ ಸಮುದಾಯದ ಕುರಿತಂತೆ ಹೇಗೆ ವರ್ತಿಸಬಹುದು? ರಾಜಸ್ಥಾನದ ಶಾಲೆಯೊಂದರಲ್ಲಿ ದಲಿತ ವಿದ್ಯಾರ್ಥಿ ನೀರು ಮುಟ್ಟಿದ್ದಕ್ಕಾಗಿ ಶಿಕ್ಷಕ ಆತನನ್ನು ಥಳಿಸಿ ಕೊಂದ ಘಟನೆ ವರದಿಯಾಗಿತ್ತು. ದೇಶಾದ್ಯಂತ ಇದು ತೀವ್ರ ಚರ್ಚೆಗೆ ಕಾರಣವಾಗಿತ್ತು. ಆ ಶಿಕ್ಷಕ ಎಸಗಿದ ಕೃತ್ಯ, ಕೋಲಾರದಲ್ಲಿ ವಸತಿ ಶಾಲೆಯ ಶಿಕ್ಷಕರು ಎಸಗಿದ ಕೃತ್ಯಕ್ಕಿಂತ ಯಾವ ರೀತಿಯಲ್ಲೂ ಭಿನ್ನವಾಗಿಲ್ಲ. ಮೊರಾರ್ಜಿ ವಸತಿ ಶಾಲೆ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಅವರ ಬದುಕನ್ನು ಮೇಲೆತ್ತುವ ಉದ್ದೇಶ ಹೊಂದಿದ್ದರೆ, ಈ ಶಿಕ್ಷಕರು ವಿದ್ಯಾರ್ಥಿಗಳನ್ನು ಕೊಳಚೆಗೆ ಇಳಿಸಿ ಅವರ ಬದುಕನ್ನು ಇನ್ನಷ್ಟು ಪ್ರಪಾತಕ್ಕೆ ತಳ್ಳಲು ಹೊರಟಿದ್ದಾರೆ. ಸಂವಿಧಾನವನ್ನು, ಅಂಬೇಡ್ಕರ್‌ರನ್ನು ತಿಳಿಸಿ ವಿದ್ಯಾರ್ಥಿಗಳನ್ನು ಜಾಗೃತಿಗೊಳಿಸಬೇಕಾಗಿದ್ದ ಶಿಕ್ಷಕರು, ಕೊಳಚೆಗುಂಡಿಯನ್ನು ಶುಚಿಗೊಳಿಸುವ ಶಿಕ್ಷಣವನ್ನು ನೀಡಿ ದಲಿತ ವಿದ್ಯಾರ್ಥಿಗಳನ್ನು ಶಾಶ್ವತವಾಗಿ ಮಲ ಹೊರುವ ವ್ಯವಸ್ಥೆಯ ಭಾಗವಾಗಿಸಲು ಮುಂದಾಗಿದ್ದಾರೆ. ಶೋಷಿತ ಸಮುದಾಯದಿಂದ ಬಂದ ವಿದ್ಯಾರ್ಥಿಗಳ ಕುರಿತಂತೆ ಅವರಿಗಿರುವ ಅಸಹನೆಯನ್ನು ಇದು ಎತ್ತಿ ಹಿಡಿಯುತ್ತದೆ. ವಿದ್ಯಾರ್ಥಿಗಳ ಕೈಯಲ್ಲಿ ಕೊಳಚೆಗುಂಡಿಯನ್ನು ಶುಚಿಗೊಳಿಸಿದವರು, ವಸತಿ ನಿಲಯದಲ್ಲಿ ಈ ವಿದ್ಯಾರ್ಥಿಗಳ ಜೊತೆಗೆ ಯಾವ ರೀತಿಯಲ್ಲಿ ವರ್ತಿಸುತ್ತಿರಬಹುದು ಎನ್ನುವುದನ್ನು ಒಂದು ಕ್ಷಣ ಯೋಚಿಸೋಣ.

ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆಯುವ ಅಕ್ರಮಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಆಗೆಲ್ಲ ವಸತಿ ಶಾಲೆಯ ಮುಖ್ಯಸ್ಥರ ಅಕ್ರಮ, ಅವ್ಯವಹಾರಗಳಷ್ಟೇ ಚರ್ಚೆಯಾಗಿ, ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಆದರೆ ಈ ಅಕ್ರಮ, ಭ್ರಷ್ಟಾಚಾರದ ಹಿಂದೆ ಜಾತೀಯ ಮನಸ್ಸು ಕೂಡ ಕೆಲಸ ಮಾಡಿರುತ್ತದೆೆ. ಈ ಮಕ್ಕಳಿಗೆ ಮನೆಯಲ್ಲಿ ಒಂದು ಹೊತ್ತಿನ ಗಂಜಿಗೆ ಗತಿಯಿಲ್ಲ, ಹೀಗಿರುವಾಗ ವಸತಿ ಶಾಲೆಯಲ್ಲಿ ಯೋಗ್ಯ ಆಹಾರವನ್ನು ಯಾಕೆ ನೀಡಬೇಕು? ಎನ್ನುವ ಮನಸ್ಥಿತಿಯೇ ವಿದ್ಯಾರ್ಥಿಗಳಿಗೆ ಕಳಪೆ ಆಹಾರವನ್ನು ನೀಡಲು ಶಿಕ್ಷಕರಿಗೆ ಪ್ರೇರಣೆಯಾಗಿದೆ. ಕಳಪೆ ಆಹಾರ ಒದಗಿಸುವುದರ ಹಿಂದೆ ‘‘ಅದಕ್ಕೆಲ್ಲ ಈ ವಿದ್ಯಾರ್ಥಿಗಳು ಯೋಗ್ಯರಲ್ಲ’’ ಎನ್ನುವ ಶಿಕ್ಷಕರು, ಸಿಬ್ಬಂದಿಯ ಮನೋಭಾವವಿದೆ. ಸರಕಾರದ ಸವಲತ್ತು ಸೂಕ್ತ ಸಮಯದಲ್ಲಿ ಸಿಗದೇ ಇರುವುದು ಒಂದೆಡೆಯಾದರೆ ಸಿಗುವ ಸವಲತ್ತನ್ನು ವಿದ್ಯಾರ್ಥಿಗಳಿಗೆ ಒದಗಿಸುವ ವಿಷಯದಲ್ಲಿ ಶಿಕ್ಷಕರ ಜಿಪುಣತನ ಮೊರಾರ್ಜಿ ಶಾಲೆಯ ಉದ್ದೇಶವನ್ನೇ ಬುಡಮೇಲುಗೊಳಿಸಿದೆ. ಮುಖ್ಯವಾಗಿ ಅವ್ಯವಸ್ಥೆಗಳು ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ದಲಿತ ವಿದ್ಯಾರ್ಥಿಗಳು ಹೆಚ್ಚಿರುವ ವಸತಿ ಶಾಲೆಗಳಲ್ಲಿ. ಇಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಜೊತೆಗೆ ಜಾತೀಯ ಕಾರಣಕ್ಕಾಗಿಯೇ ನಿಕೃಷ್ಟವಾಗಿ ವರ್ತಿಸುತ್ತಿರುತ್ತಾರೆ. ಮೊರಾರ್ಜಿ ಶಾಲೆಗಳಲ್ಲಿ ದಲಿತ ವಿದ್ಯಾರ್ಥಿಗಳನ್ನು ಘೆಟ್ಟೋ ತರಹ ಒಂದೇ ವಸತಿ ನಿಲಯದಲ್ಲಿ ಇಡುವುದರಿಂದ ಕೆಲವೊಮ್ಮೆ ಅವರು ಹೆಚ್ಚು ಶೋಷಣೆಯನ್ನು ಅನುಭವಿಸುವುದಕ್ಕೆ ನೆಪವಾಗುತ್ತದೆ. ಎಲ್ಲ ಜಾತಿ, ಧರ್ಮಗಳ ವಿದ್ಯಾರ್ಥಿಗಳ ಜೊತೆಗೆ ಒಂದಾಗಿ ಕಲಿಯುವ ಅವಕಾಶವನ್ನು ಶೋಷಿತ ಸಮುದಾಯದಿಂದ ಬಂದ ವಿದ್ಯಾರ್ಥಿಗಳಿಗೆ ಒದಗಿಸಬೇಕು. ಇದರಿಂದ ವಿದ್ಯಾರ್ಥಿಗಳ ಹಂತದಲ್ಲೇ ಜಾತಿ ಧರ್ಮಗಳನ್ನು ಮೀರಲು ಸಾಧ್ಯವಾಗುತ್ತದೆ. ಎಲ್ಲ ಜಾತಿ, ಧರ್ಮಗಳು ಒಂದೇ ಎನ್ನುವ ಮನೋಭಾವ ವಸತಿ ಶಾಲೆಯಲ್ಲಿರುವ ವಿದ್ಯಾರ್ಥಿಗಳಲ್ಲಿ ಮೂಡುತ್ತದೆ.

ಕೋಲಾರದ ಘಟನೆಯಿಂದ ಗೊತ್ತಾಗುವುದೇನೆಂದರೆ, ಮೊದಲು ಶಿಕ್ಷಕರ ಮೆದುಳಿನಿಂದ ಜಾತೀಯತೆಯ ಕೊಳಚೆಯನ್ನು ಶುಚಿಗೊಳಿಸಬೇಕು. ಮೇಲಧಿಕಾರಿಗಳು ಆ ಮೆದುಳುಗುಂಡಿಯೊಳಗೆ ಇಳಿದು ಅಲ್ಲಿರುವ ಕೊಳಕನ್ನು ತೆಗೆದು, ವೈರಸ್‌ಗಳಿಗೆ ಮದ್ದು ಹಚ್ಚಿ ಬಳಿಕ ಅವರಿಗೆ ವಿದ್ಯಾರ್ಥಿಗಳ ಉಸ್ತುವಾರಿಯನ್ನು ನೀಡಬೇಕು. ಹಾಗೆಯೇ ಮೊರಾರ್ಜಿ ವಸತಿ ಶಾಲೆಗಳಿಗೆ ಸರಕಾರ ಕನಿಷ್ಠ ತಿಂಗಳಿಗೊಮ್ಮೆಯಾದರೂ ಅನಿರೀಕ್ಷಿತ ಭೇಟಿಯನ್ನು ನೀಡಿ ಅಲ್ಲಿನ ಸ್ಥಿತಿಗತಿಯನ್ನು ಪರಿಶೀಲಿಸುವ ವ್ಯವಸ್ಥೆ ಮಾಡಬೇಕು. ಪ್ರತಿ ವಿದ್ಯಾರ್ಥಿಗಳು ತಮ್ಮ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಕಡ್ಡಾಯವಾಗಿ ದೂರು ಪೆಟ್ಟಿಗೆಯಿರಬೇಕು. ಇಲ್ಲವಾದರೆ ಮೊರಾರ್ಜಿ ಶಾಲೆಗಳು ಶಿಕ್ಷಣ ಕೇಂದ್ರವಾಗದೆ, ಮಕ್ಕಳ ಪಾಲಿಗೆ ಶಿಕ್ಷೆಯ ಕೇಂದ್ರವಾಗಬಹುದು. ವಿದ್ಯಾರ್ಥಿಗಳು ಜಾತೀಯತೆಯ, ಶೋಷಣೆಯ ಇನ್ನಷ್ಟು ಗಾಯಗಳನ್ನು ಹೊತ್ತುಕೊಂಡು ಅಲ್ಲಿಂದ ಹೊರಹೋಗುವ ಸ್ಥಿತಿ ನಿರ್ಮಾಣವಾಗಬಹುದು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News