‘ಧ್ಯಾನಸ್ಥ’ ಪ್ರಧಾನಿಗೆ ಕೇಳಿಸಲಿ ದಲಿತ ಮಹಿಳೆಯರ ಆಕ್ರಂದನ

Update: 2024-05-30 05:14 GMT

PC: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ದಲಿತ ಮಹಿಳೆಯೊಬ್ಬಳು ತನ್ನ ಮೇಲಾದ ಅನ್ಯಾಯವನ್ನು ಪ್ರಶ್ನಿಸಿದರೆ ಅದರ ಅಂತ್ಯ ಹೇಗಿರುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿದೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿರುವ ಘಟನೆ. ಅತ್ಯಾಚಾರ ಸಂತ್ರಸ್ತೆ ದಲಿತ ಮಹಿಳೆಯೊಬ್ಬರು ರವಿವಾರ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಆ್ಯಂಬುಲೆನ್ಸ್‌ನಿಂದ ಬಿದ್ದು ಮೃತಪಟ್ಟಿದ್ದಾರೆ. ಅತ್ಯಂತ ಆಘಾತಕಾರಿ ಅಂಶವೆಂದರೆ, ಈ ಆಂಬ್ಯುಲೆನ್ಸ್‌ನಲ್ಲಿ ಬರ್ಬರವಾಗಿ ಕೊಲೆಯಾಗಿರುವ ಆಕೆಯ ಚಿಕ್ಕಪ್ಪನ ಮೃತದೇಹವನ್ನು ಸಾಗಿಸಲಾಗುತ್ತಿತ್ತ್ತು. ಭೋಪಾಲ್‌ನ ಖುರೈ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯ ಚಿಕ್ಕಪ್ಪ ರಾಜೇಂದ್ರ ಅಹಿರ್ವಾರ್ ಮೇಲೆ ಗುಂಪೊಂದು ದಾಳಿ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರು ಶನಿವಾರ ಮೃತಪಟ್ಟಿದ್ದರು. ಅತ್ಯಾಚಾರ ಸಂತ್ರಸ್ತ ಮಹಿಳೆಯೂ ತನ್ನ ಚಿಕ್ಕಪ್ಪನ ಮೃತದೇಹದ ಜೊತೆಗಿದ್ದರು. ಅಪರಿಚಿತ ದಾರಿಯಲ್ಲಿ ಸಾಗುತ್ತಿದ್ದ ಆಂಬ್ಯುಲೆನ್ಸ್‌ನಿಂದ ನಿಗೂಢ ರೀತಿಯಲ್ಲಿ ರಸ್ತೆಗೆ ಬಿದ್ದು ಸಂತ್ರಸ್ತ ಮಹಿಳೆಯೂ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಇದೀಗ ಹೇಳುತ್ತಿದ್ದಾರೆ. ಮಹಿಳೆಯ ಇನ್ನೋರ್ವ ಸಹೋದರನನ್ನು ಕಳೆದ ಆಗಸ್ಟ್‌ನಲ್ಲಿ ದುಷ್ಕರ್ಮಿಗಳು ಕೊಂದು ಹಾಕಿದ್ದರು.

2019ರಲ್ಲಿ ವಿಕ್ರಮ್ ಸಿಂಗ್ ಠಾಕೂರ್ ಎಂಬಾತನ ವಿರುದ್ಧ ಈ ದಲಿತ ಮಹಿಳೆ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದರು. ತನ್ನ ಮೇಲಾದ ದೌರ್ಜನ್ಯದ ವಿರುದ್ಧ ಆಕೆ ಮತ್ತು ಆಕೆಯ ಕುಟುಂಬ ಧ್ವನಿಯೆತ್ತಿದ್ದು ಅವರ ಮೇಲೆ ಇನ್ನಷ್ಟು ದೌರ್ಜನ್ಯ, ಅನ್ಯಾಯಗಳಿಗೆ ಕಾರಣವಾಯಿತು. ಪೊಲೀಸರು ಆಕೆಗೆ ನ್ಯಾಯ ನೀಡುವುದರ ಬದಲಿಗೆ, ಪ್ರಕರಣವನ್ನು ಹಿಂದಕ್ಕೆ ಪಡೆಯಲು ಒತ್ತಾಯಿಸಿದ್ದರು. ಆದರೆ ಆಕೆ ಈ ಒತ್ತಡಕ್ಕೆ ಮಣಿದಿರಲಿಲ್ಲ. ಅಂದಿನಿಂದ ಇಂದಿನವರೆಗೆ ಈ ಕುಟುಂಬ ಸ್ಥಳೀಯ ಮೇಲ್‌ಜಾತಿ ಗುಂಪಿನಿಂದ ಬೇರೆ ಬೇರೆ ರೀತಿಯಲ್ಲಿ ಜೀವ ಬೆದರಿಕೆಯನ್ನು ಎದುರಿಸುತ್ತಲೇ ಬಂದಿತ್ತು. ಅಂತಿಮವಾಗಿ ಸಂತ್ರಸ್ತಳ ಸೋದರ, ಚಿಕ್ಕಪ್ಪ ಬರ್ಬರವಾಗಿ ಕೊಲೆಯಾದರು. ಇದೀಗ ಮಹಿಳೆಯೂ ವಾಹನದಿಂದ ರಸ್ತೆಗೆ ಬಿದ್ದು ಮೃತಪಟ್ಟಿದ್ದಾರೆ. ಕೊನೆಗೂ ಮೇಲ್‌ಜಾತಿಯ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯ ಕೇಳಿದ ಕಾರಣಕ್ಕಾಗಿ ದಲಿತ ಕುಟುಂಬಕ್ಕೆ ಶಿಕ್ಷೆ ನೀಡುವಲ್ಲಿ ವ್ಯವಸ್ಥೆ ಯಶಸ್ವಿಯಾಗಿದೆ. ನಿಜಕ್ಕೂ ಮಹಿಳೆ ವಾಹನದಿಂದ ಕೆಳಗೆ ಬಿದ್ದಿದ್ದಳೋ ಅಥವಾ ಅವಳನ್ನು ವಾಹನದಿಂದ ಎಸೆಯಲಾಗಿತ್ತೋ ಎನ್ನುವುದು ಇನ್ನಷ್ಟೇ ತನಿಖೆಯಿಂದ ಗೊತ್ತಾಗಬೇಕು. ದಲಿತ ಮಹಿಳೆ ಅತ್ಯಾಚಾರ ಪ್ರಕರಣ ದಾಖಲಿಸಿದಾಗಲೇ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಂಡಿದ್ದರೆ ಈ ಎಲ್ಲ ದುರಂತಗಳು ಸಂಭವಿಸುತ್ತಿರಲಿಲ್ಲ. ಕಾನೂನು ವ್ಯವಸ್ಥೆ ಆರೋಪಿಗಳ ಪರವಾಗಿ ನಿಂತು, ಸಂತ್ರಸ್ತೆಯ ಕುಟುಂಬವನ್ನೇ ಶಿಕ್ಷಿಸಿತು ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಬಿಡುತ್ತದೆ. ಚುನಾವಣೆಯ ಸಂದರ್ಭದಲ್ಲೇ ಈ ಬರ್ಬರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಹಿಂದುತ್ವದ ಬಗ್ಗೆ ಮಾತನಾಡುವ ಬಿಜೆಪಿ ಸರಕಾರ ಮಧ್ಯಪ್ರದೇಶದಲ್ಲಿದೆ. ಆದರೆ ಸಂಬಂಧ ಪಟ್ಟ ಯಾವುದೇ ರಾಜಕೀಯ ನಾಯಕರು ಈ ಘಟನೆಯ ಕುರಿತಂತೆ ಪ್ರತಿಕ್ರಿಯಿಸಿಲ್ಲ. ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆಯನ್ನ್ನೂ ವ್ಯಕ್ತಪಡಿಸಿಲ್ಲ. ಮುಂದಿನ ದಿನಗಳಲ್ಲಿ, ಈ ಘಟನೆಯನ್ನು ವರದಿ ಮಾಡಿದ ಮಾಧ್ಯಮಗಳ ವಿರುದ್ಧವೇ ಪ್ರಕರಣ ದಾಖಲಾದರೆ ಅಚ್ಚರಿಯಿಲ್ಲ.

ಶೋಷಿತ ಸಮುದಾಯದ ಮಹಿಳೆಯರ ಮೇಲೆ ಅನ್ಯಾಯಗಳಾದಾಗಲೆಲ್ಲ ಅಪರಾಧಿಗೆ ಶಿಕ್ಷೆಯಾಗುವುದಕ್ಕಿಂತ, ಸಂತ್ರಸ್ತೆಯರಿಗೆ ಶಿಕ್ಷೆಯಾದದ್ದೇ ಅಧಿಕ. ಈ ಹಿಂದೆ ಉತ್ತರ ಪ್ರದೇಶದ ಹಾಥರಸ್‌ನಲ್ಲಿ ನಡೆದಿರುವುದನ್ನು ದೇಶ ಇನ್ನೂ ಮರೆತಿಲ್ಲ. ಆರೋಪಿಯನ್ನು ಬಂಧಿಸುವ ಬದಲು ಹಾಥಾರಸ್ ಸಂತ್ರಸ್ತೆಯ ಮನೆಯನ್ನೇ ಜಿಲ್ಲಾಡಳಿತ ದಿಗ್ಬಂಧನದಲ್ಲಿಟ್ಟಿತು. ಭೇಟಿ ಮಾಡಲು ತೆರಳಿದ ರಾಜಕಾರಣಿಗಳನ್ನು ಪೊಲೀಸರು ಅರ್ಧದಲ್ಲೇ ತಡೆದರು. ವರದಿ ಮಾಡಲು ತೆರಳಿದ ಪತ್ರಕರ್ತರನ್ನು ಬಂಧಿಸಿ ಅವರ ಮೇಲೆ ದೇಶದ್ರೋಹದ ಪ್ರಕರಣವನ್ನು ದಾಖಲಿಸಿದರು. ಆರೋಪಿಗಳಿಗೆ ಯಾವ ಶಿಕ್ಷೆಯೂ ಆಗಲಿಲ್ಲ. ಆದರೆ, ಪತ್ರಕರ್ತರು ಮಾತ್ರ ಎರಡು ವರ್ಷಗಳ ಕಾಲ ಜೈಲಿನಲ್ಲಿ ಕಳೆದರು. ಉನ್ನಾವೋ ಅತ್ಯಾಚಾರ ಪ್ರಕರಣ ಕೂಡ ಭೋಪಾಲ್ ಪ್ರಕರಣವನ್ನೇ ಹೋಲುತ್ತದೆ. ಇಲ್ಲಿ ಅತ್ಯಾಚಾರ ಆರೋಪಿ ಬಿಜೆಪಿಯ ಮುಖಂಡ ಕುಲದೀಪ್ ಸಿಂಗ್ ಸೆಂಗಾರ್. 2017ರಲ್ಲಿ ಈತ ಅಪ್ರಾಪ್ತ ವಯಸ್ಕಳನ್ನು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಇದರ ವಿರುದ್ಧ ಸಂತ್ರಸ್ತೆ ಮಹಿಳೆಯ ಕುಟುಂಬ ದೂರು ದಾಖಲಿಸಿತು. ಪರಿಣಾಮವಾಗಿ ಕುಟುಂಬವೇ ದೌರ್ಜನ್ಯಕ್ಕೆ ಈಡಾಯಿತು. ಅತ್ಯಾಚಾರ ಸಂತ್ರಸ್ತೆಯ ತಂದೆಯನ್ನು ಆರೋಪಿಯ ಆದೇಶದ ಮೇರೆಗೆ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ತಳ್ಳಲಾಯಿತು. ಅಷ್ಟೇ ಅಲ್ಲ, ಎಪ್ರಿಲ್ 9, 2018ರಂದು ಈತ ಜೈಲಿನಲ್ಲಿ ನಿಗೂಢವಾಗಿ ಮೃತಪಟ್ಟ. ಪೊಲೀಸರ ಚಿತ್ರಹಿಂಸೆಯಿಂದಲೇ ಸತ್ತಿರುವುದು ಆ ಬಳಿಕ ಬಹಿರಂಗವಾಯಿತು. ನ್ಯಾಯಕ್ಕಾಗಿ ಇಡೀ ಕುಟುಂಬ ತಮ್ಮ ಜೀವವನ್ನು ಒತ್ತೆಯಿಟ್ಟು ಹೋರಾಟ ನಡೆಸಬೇಕಾಯಿತು. ಕೊನೆಗೂ ಈತನಿಗೆ ಶಿಕ್ಷೆಯಾಯಿತು ಎನ್ನುವುದು ಸಮಾಧಾನ ತರುವ ವಿಷಯ. ಆದರೆ ಆ ನ್ಯಾಯಕ್ಕಾಗಿ ಕುಟುಂಬ ಬಹಳಷ್ಟನ್ನು ಕಳೆದುಕೊಳ್ಳಬೇಕಾಯಿತು ಎನ್ನುವುದು ವಾಸ್ತವ. ಉನ್ನಾವೊದಲ್ಲಿ ಇಂತಹ ಹಲವು ಪ್ರಕರಣಗಳು ನಡೆದಿವೆೆ. ನ್ಯಾಯಕ್ಕಾಗಿ ಪೊಲೀಸ್ ಠಾಣೆ ತುಳಿದ ಹೆಣ್ಣು ಮಕ್ಕಳ ಮೇಲೆ ಬರ್ಬರ ಹಲ್ಲೆಗಳು ನಡೆದಿವೆ. ಜೀವಂತ ದಹಿಸಿದ ಉದಾಹರಣೆಗಳೂ ಇವೆ.

ಭಾರತದಲ್ಲಿ ಪ್ರತಿ ದಿನ ದಲಿತ ಮಹಿಳೆಯರ ಮೇಲೆ 10 ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತವೆ. ಸಾಧಾರಣವಾಗಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಾಗ ಅದನ್ನು ಬೇರೆ ಬೇರೆ ಸಾಮಾಜಿಕ ಕಾರಣಗಳಿಗಾಗಿ ಬಹಿರಂಗ ಪಡಿಸಲು ಕುಟುಂಬಗಳು ಹಿಂದೇಟು ಹಾಕುತ್ತವೆ. ದಲಿತ ಕುಟುಂಬಗಳು ಇಂತಹ ಪ್ರಕರಣವನ್ನು ಬಹಿರಂಗಪಡಿಸದೇ ಇರಲು ಮುಖ್ಯ ಕಾರಣ ಜೀವ ಬೆದರಿಕೆ. ಸಂತ್ರಸ್ತ ಮಹಿಳೆಯರು ಇನ್ನಷ್ಟು ಆಘಾತ, ದೌರ್ಜನ್ಯಗಳನ್ನು ಎದುರಿಸಬೇಕಾಗಬಹುದಾಗಿರುವುದರಿಂದ ಇವುಗಳು ಬಹಿರಂಗವಾಗುವುದು ತೀರಾ ಕಡಿಮೆ. ಇಷ್ಟಾದರೂ, ಪ್ರತಿ ದಿನ 10 ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತವೆ. ದಲಿತ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆದಾಗ ಪೊಲೀಸ್ ವ್ಯವಸ್ಥೆ ಹೆಚ್ಚಿನ ಸಂದರ್ಭದಲ್ಲಿ ಆರೋಪಿಗಳ ಪರವಾಗಿ ನಿಂತಿರುತ್ತದೆ. ಹಾಥಾರಸ್‌ನಲ್ಲಿ ಸಂತ್ರಸ್ತೆಯ ಮೃತದೇಹವನ್ನು ಯಾವುದೇ ಪೋಸ್ಟ್‌ಮಾರ್ಟಂ ಮಾಡದೇ ಪೊಲೀಸರ ನೇತೃತ್ವದಲ್ಲೇ ಆತುರಾತುರವಾಗಿ ಸುಟ್ಟು ಹಾಕಿದ್ದೂ ಇದೇ ಕಾರಣಕ್ಕೆ. ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗದೇ ಇರುವುದಕ್ಕೆ ಪೊಲೀಸರೇ ಕಾರಣರಾದರು. ಅಷ್ಟೇ ಅಲ್ಲ, ದಲಿತ ಮಹಿಳೆಯರ ಮೇಲೆ ದೌರ್ಜನ್ಯವೆಸಗುವುದು ಮೇಲ್‌ಜಾತಿಯ ಜನರ ಹಕ್ಕು ಎಂಬಂತೆ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸುತ್ತಾ ಬರುತ್ತಿದೆ. ಇದರ ಪರಿಣಾಮವಾಗಿಯೇ ಭೋಪಾಲ್‌ನಲ್ಲಿ ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಮೇಲೆ ಬರ್ಬರ ದಾಳಿಗಳು ನಡೆದವು. ನ್ಯಾಯಕ್ಕಾಗಿ ಇಬ್ಬರು ಕುಟುಂಬ ಸದಸ್ಯರು ಪ್ರಾಣತ್ಯಾಗ ಮಾಡಬೇಕಾಯಿತು. ಕೊನೆಗೆ ಸಂತ್ರಸ್ತೆಯೇ ಜೀವ ತೆರಬೇಕಾಯಿತು.

ತಾನು ದೇವರ ಅವತಾರ ಎಂದು ಸ್ವಯಂ ಭಾವಿಸಿರುವ ಪ್ರಧಾನಿ ನರೇಂದ್ರ ಮೋದಿಗೆ ಇವೆಲ್ಲವೂ ಇನ್ನೂ ದೃಷ್ಟಿಗೆ ಬೀಳದೇ ಇರುವುದು ವಿಪರ್ಯಾಸವಾಗಿದೆ. ಇವೆಲ್ಲವೂ ‘ದೇವರ’ ಆದೇಶದಂತೆಯೇ ನಡೆಯುತ್ತಿದೆಯೇ ಎಂದು ಜನಸಾಮಾನ್ಯರು ಅವರನ್ನು ಕೇಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ದೇಶದ ದಲಿತ ಮಹಿಳೆಯರ ಚೀತ್ಕಾರಗಳ ನಡುವೆಯೇ ಧ್ಯಾನಕ್ಕೆ ಸಿದ್ಧತೆ ನಡೆಸುತ್ತಿರುವ ಪ್ರಧಾನಿ ಮೋದಿಗೆ, ಧ್ಯಾನಾವಸ್ಥೆಯಲ್ಲಾದರೂ ದೇಶದ ಜನರ ದಯನೀಯ ಸ್ಥಿತಿ ಮನವರಿಕೆಯಾದೀತೆ?

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News