ಹಿಜಾಬ್ ನಿಷೇದಕ್ಕೆ ತಡೆ : ಸುಪ್ರೀಂಕೋರ್ಟ್ ತೀರ್ಪು ರಾಜ್ಯಕ್ಕೆ ಮಾರ್ಗದರ್ಶಿಯಾಗಲಿ

Update: 2024-08-15 07:00 GMT

‘‘ಮಗ ಸತ್ತರೂ ಚಿಂತೆಯಿಲ್ಲ, ಸೊಸೆ ಮುಂ...ಯಾಗಬೇಕು....’’ ಎನ್ನುವ ಕೆಟ್ಟ ಮನಸ್ಥಿತಿ ದೇಶದಲ್ಲಿ ಹಿಜಾಬ್ ವಿವಾದವನ್ನು ಹುಟ್ಟು ಹಾಕಿತು. ಭಾರತದಂತಹ ಮುಂದುವರಿಯುತ್ತಿರುವ ದೇಶ, ಬಾಲಕಿಯರ ಶಿಕ್ಷಣಕ್ಕಾಗಿ ಕೋಟ್ಯಂತರ ರೂಪಾಯಿಯನ್ನು ಹೂಡಿಕೆ ಮಾಡುತ್ತಾ ಬಂದಿದೆ. ‘ಮಹಿಳೆಯರ ಸಬಲೀಕರಣದ ಜಾಹೀರಾತಿಗಾಗಿಯೇ’ ಹಲವು ಕೋಟಿ ರೂಪಾಯಿಗಳನ್ನು ಪ್ರತಿ ವರ್ಷ ಸುರಿಯುತ್ತಿದೆ. ಉತ್ತರ ಭಾರತದಲ್ಲಿ ಬಾಲಕಿಯರನ್ನು ಶಾಲೆ, ಕಾಲೇಜುಗಳಲ್ಲಿ ಮುಂದುವರಿಯುವಂತೆ ಮಾಡುವುದು ಈಗಲೂ ಅತಿ ದೊಡ್ಡ ಸವಾಲಾಗಿ ಉಳಿದಿದೆ. ವಿದ್ಯಾರ್ಥಿಗಳು ಶಾಲೆಗಳನ್ನು ತೊರೆಯದಂತೆ ನೋಡಿಕೊಳ್ಳುವುದಕ್ಕಾಗಿಯೇ ಉಚಿತ ಸಮವಸ್ತ್ರ, ಬಿಸಿಯೂಟದಂತಹ ಯೋಜನೆಗಳನ್ನು ಸರಕಾರ ಹಮ್ಮಿಕೊಂಡಿತು. ವಿದ್ಯಾರ್ಥಿನಿಯರನ್ನು ಶಾಲೆ, ಕಾಲೇಜುಗಳಲ್ಲಿ ಮುಂದುವರಿಯುವಂತೆ ನೋಡಿಕೊಳ್ಳುವುದಕ್ಕೆ ಹೊಸ ಯೋಜನೆಗಳನ್ನು ರೂಪಿಸಬೇಕಾಗಿದ್ದ ಸರಕಾರ, ಸಮವಸ್ತ್ರದ ನೆಪವೊಡ್ಡಿ ಒಂದು ನಿರ್ದಿಷ್ಟ ಸಮುದಾಯದ ವಿದ್ಯಾರ್ಥಿನಿಯರಿಗೆ ಶಾಲೆ, ಕಾಲೇಜುಗಳಿಂದ ಬಹಿಷ್ಕಾರವನ್ನು ಹಾಕಿತು. ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಲಾಗಿದೆ ಎನ್ನುವ ಆದೇಶಗಳನ್ನು ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ಹೊರಡಿಸಿದವು. ಇದೀಗ ಸುಪ್ರೀಂಕೋರ್ಟ್ ನಿರ್ದಿಷ್ಟ ಧರ್ಮದ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡ ಈ ತಲೆಬುಡವಿಲ್ಲದ ಆದೇಶಕ್ಕೆ ತಡೆಯಾಜ್ಞೆಯನ್ನು ನೀಡಿದೆ.

ಮುಂಬೈಯ ಕಾಲೇಜೊಂದು ಹೊರಡಿಸಿರುವ ಸುತ್ತೋಲೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ್ದು, ‘‘ಸಮಾನ ವಸ್ತ್ರ ಸಂಹಿತೆಯನ್ನು ಜಾರಿಗೆ ತರುವುದಾಗಿದ್ದರೆ ತಿಲಕ ಮತ್ತು ಬಿಂದಿ ಮುಂತಾದ ಇತರ ಧಾರ್ಮಿಕ ಚಿಹ್ನೆಗಳಿಗೆ ಈ ನಿಷೇಧವನ್ನು ಯಾಕೆ ಅನ್ವಯಿಸಲಾಗಿಲ್ಲ’’ ಎಂದು ಕೇಳಿದೆ. ‘‘ತಾವು ಧರಿಸುವ ಬಟ್ಟೆಯ ವಿಚಾರದಲ್ಲಿ ವಿದ್ಯಾರ್ಥಿನಿಯರಿಗೆ ಆಯ್ಕೆಯ ಸ್ವಾತಂತ್ರ್ಯವಿರಬೇಕು ಮತ್ತು ಕಾಲೇಜು ಅವರನ್ನು ಬಲವಂತಪಡಿಸಬಾರದು. ದೇಶದಲ್ಲಿ ಹಲವು ಧರ್ಮಗಳಿವೆ ಎನ್ನುವುದು ಈಗ ನಿಮಗೆ ಗೊತ್ತಾಗಿರುವುದು ದುರದೃಷ್ಟಕರ. ತಿಲಕ ಧರಿಸಿದವರಿಗೆ ಕಾಲೇಜು ಪ್ರವೇಶಿಸಲು ಅನುಮತಿ ಇಲ್ಲ ಎಂದು ಹೇಳಲು ನಿಮಗೆ ಸಾಧ್ಯವೆ?’’ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಕೇಳಿದೆ. ಇವೆಲ್ಲವೂ ಕಾಲೇಜು ಸಂಸ್ಥೆಗೆ ಗೊತ್ತಿಲ್ಲದೇ ಇರುವ ವಿಷಯವೇನೂ ಅಲ್ಲ. ಅವರ ಸಮಸ್ಯೆ ಶಿಕ್ಷಣ, ಸಮವಸ್ತ್ರ ಯಾವುದೂ ಆಗಿರಲಿಲ್ಲ. ಸಮವಸ್ತ್ರದ ಹೆಸರಿನಲ್ಲಿ ವಿದ್ಯಾರ್ಥಿಗಳ ನಡುವೆ ಕೋಮು ವೈಷಮ್ಯವನ್ನು ಬಿತ್ತುವುದು ಮುಖ್ಯ ಗುರಿ. ಕೆಲವು ರಾಜಕೀಯ ಶಕ್ತಿಗಳು ಕಾಲೇಜುಗಳ ಹಿಜಾಬ್ ನಿಷೇಧದ ಹಿಂದೆ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿವೆ. ಇಂತಹ ಆದೇಶಗಳ ಹಿಂದೆ ಶಿಕ್ಷಣಕ್ಕೆ ಸಂಬಂಧಿಸಿದ ಎಳ್ಳಷ್ಟು ಹಿತಾಸಕ್ತಿ ಇಲ್ಲ ಎನ್ನುವುದು ಈಗಾಗಲೇ ಸಾಬೀತಾಗಿದೆ.

ಒಂದು ಕಾಲದಲ್ಲಿ ‘ಮುಸ್ಲಿಮ್ ತರುಣಿಯರ ಶಿಕ್ಷಣ’ ಚರ್ಚೆಯಲ್ಲಿರುತ್ತಿತ್ತು. ಮುಸ್ಲಿಮರು ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ, ಇಸ್ಲಾಂ ಧರ್ಮ ಮುಸ್ಲಿಮ್ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಪ್ರೋತ್ಸಾಹಿಸುವುದಿಲ್ಲ ಎನ್ನುವ ಆರೋಪಗಳು ಮುಖ್ಯವಾಹಿನಿಯಲ್ಲಿತ್ತು. ಇಂದು ಮುಸ್ಲಿಮ್ ಹೆಣ್ಣುಮಕ್ಕಳು ದೊಡ್ಡ ಸಂಖ್ಯೆಯಲ್ಲಿ ಶಾಲೆ, ಕಾಲೇಜು ಮೆಟ್ಟಿಲನ್ನು ತುಳಿಯುತ್ತಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಮಹತ್ತರ ಸಾಧನೆಗಳನ್ನು ಮಾಡುತ್ತಿದ್ದಾರೆ. ಧಾರ್ಮಿಕ ಹಿನ್ನೆಲೆಯಿರುವ ಕುಟುಂಬಗಳ ಹೆಣ್ಣುಮಕ್ಕಳನ್ನ್ನು ಶಾಲೆಯವರೆಗೆ ಕೈ ಹಿಡಿದು ಮುನ್ನಡೆಸಿರುವುದು ಹಿಜಾಬ್. ಇದು ಯಾವ ಕಾರಣಕ್ಕೂ ಶಾಲೆಯ ಸಮವಸ್ತ್ರಕ್ಕೆ ಅಡ್ಡಿಯನ್ನುಂಟು ಮಾಡುತ್ತಿರಲಿಲ್ಲ. ಯಾಕೆಂದರೆ ಹಿಜಾಬ್‌ನ ಬಣ್ಣ ಕೂಡ ಶಾಲೆಯ ಸಮವಸ್ತ್ರದ ಬಣ್ಣಗಳಲ್ಲೇ ಇರುತ್ತಿತ್ತು. ಶಾಲೆ ಕಾಲೇಜುಗಳ ಮುಖ್ಯಸ್ಥರಿಗೆ ಈ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬರುವುದು ಒಂದು ಸಮಸ್ಯೆಯಾಗಿ ಯಾವತ್ತೂ ಕಾಡಿರಲಿಲ್ಲ. ಅದು ಭಾರತದ ವೈವಿಧ್ಯಗಳಲ್ಲಿ ಒಂದಾಗಿ ಗುರುತಿಸಲ್ಪಡುತ್ತಿತ್ತು. ಆದರೆ ಯಾವಾಗ ವೈವಿಧ್ಯಗಳೇ ಇಲ್ಲಿನ ರಾಜಕಾರಣಿಗಳಿಗೆ ಸಮಸ್ಯೆಯಾಗಿ ಕಾಡತೊಡಗಿತೋ ಅಲ್ಲಿಂದ ಹಿಜಾಬ್ ಶಿಕ್ಷಣ ಸಂಸ್ಥೆಗಳಿಗೆ ಸಮಸ್ಯೆಯಾಗತೊಡಗಿತು.

ಭಾರತದಲ್ಲಿ ಹಿಜಾಬ್ ಸಂಸ್ಕೃತಿಯಾಗಿ, ವೈವಿಧ್ಯವಾಗಿ ಬೆರೆತುಕೊಂಡು ಬಂದಿದೆ. ಕೇವಲ ಮುಸ್ಲಿಮರಲ್ಲಿ ಮಾತ್ರವಲ್ಲ, ಹಲವು ಧರ್ಮಗಳಲ್ಲಿ ಹಿಜಾಬ್ ಬಳಕೆಯಲ್ಲಿದೆ. ವಿಶೇಷವೆಂದರೆ, ಮಹಿಳೆಯರ ಜೊತೆಗೇ ಪುರುಷರೂ ಹಿಜಾಬ್‌ನ್ನು ಕಡ್ಡಾಯವಾಗಿ ಪಾಲಿಸುವವರಿದ್ದಾರೆ. ಸಿಖ್ ಸಮುದಾಯದಲ್ಲಿ ಯುವಕರು ಧರಿಸುವ ಪಗಡಿಗೆ ಧಾರ್ಮಿಕ, ಸಾಂಸ್ಕೃತಿಕ ಮಹತ್ವವಿದೆ. ಸೇನೆಯಲ್ಲೂ ಅವರಿಗೆ ಪೇಟವನ್ನು ಧರಿಸಲು ಅನುಮತಿಯಿದೆ. ಶಿಸ್ತು, ಸಮವಸ್ತ್ರಗಳ ವಿಷಯದಲ್ಲಿ ಸೇನೆ ಅತ್ಯಂತ ಕಠಿಣವಾಗಿ ವರ್ತಿಸುತ್ತದೆ. ಅಂತಹ ಸೇನೆಯಲ್ಲಿ ಸಿಖ್ ಸಮುದಾಯದ ಯುವಕರು ಪೇಟ ಧರಿಸುವುದರಿಂದ ಶಿಸ್ತಿಗೆ ಯಾವ ಧಕ್ಕೆಯೂ ಆಗುವುದಿಲ್ಲ ಎಂದಾದರೆ ಶಾಲೆಯ ಸಮವಸ್ತ್ರಕ್ಕೆ ವಿದ್ಯಾರ್ಥಿನಿ ಧರಿಸುವ ಹಿಜಾಬ್‌ನಿಂದ ಧಕ್ಕೆಯುಂಟಾಗಲು ಹೇಗೆ ಸಾಧ್ಯ? ಸಮವಸ್ತ್ರ ಶಿಕ್ಷಣಕ್ಕೆ ಪೂರಕವಾಗಿ ಇರಬೇಕೇ ಹೊರತು, ಅದು ಶಾಲೆ ಕಾಲೇಜುಗಳಲ್ಲಿ ಶಿಕ್ಷಣಕ್ಕಿಂತಲೂ ಹೆಚ್ಚು ಮಹತ್ವವನ್ನು ಪಡೆಯಬಾರದು. ಸಮವಸ್ತ್ರದ ಕಾರಣದಿಂದ ಸಾವಿರಾರು ವಿದ್ಯಾರ್ಥಿನಿಯರು ಶಾಲೆ ಕಾಲೇಜುಗಳನ್ನು ತೊರೆಯುವ ಸನ್ನಿವೇಶ ನಿರ್ಮಾಣವಾಗುತ್ತದೆ ಎಂದಾದರೆ, ಶಾಲೆ, ಕಾಲೇಜುಗಳು ಸಮವಸ್ತ್ರಗಳನ್ನು ತೊರೆಯಲು ಮುಂದಾಗಬೇಕೇ ಹೊರತು, ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಬಹಿಷ್ಕಾರ ಹಾಕುವುದಲ್ಲ.

ಮುಂಬೈಯ ಕಾಲೇಜಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ಕರ್ನಾಟಕಕ್ಕೆ ಮಾದರಿಯಾಗಬೇಕಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಸಮಾಜದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸುವ, ಶಾಲೆ, ಕಾಲೇಜುಗಳನ್ನು ರಾಜಕೀಯವಾಗಿ ವಿಭಜಿಸುವ ದುರುದ್ದೇಶದಿಂದ ಹಿಜಾಬ್ ನಿಷೇಧ ಮಾಡಿತ್ತು. ಸರಕಾರದ ಭಾಗವಾಗಿರುವ ರಾಜಕೀಯ ನಾಯಕರೇ ವಿದ್ಯಾರ್ಥಿಗಳಿಗೆ ಕೇಸರಿ ಶಾಲನ್ನು ಹಂಚಿ ಅವರನ್ನು ಹಿಜಾಬ್ ಧರಿಸುವ ವಿದ್ಯಾರ್ಥಿನಿಯರ ವಿರುದ್ಧ ಎತ್ತಿ ಕಟ್ಟಿದರು. ಕೊರೋನೋತ್ತರ ದಿನಗಳಲ್ಲಿ ಶಾಲೆ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಇಳಿಕೆಯಾಗಿರುವುದರ ಬಗ್ಗೆ ಹೈಕೋರ್ಟ್ ಅಂದಿನ ಸರಕಾರದ ಗಮನವನ್ನು ಸೆಳೆದಿತ್ತು. ಶಾಲೆ, ಕಾಲೇಜುಗಳನ್ನು ಅರ್ಧದಲ್ಲೇ ತೊರೆದ ವಿದ್ಯಾರ್ಥಿನಿಯರನ್ನು ಮರಳಿ ಸೇರಿಸುವುದಕ್ಕೆ ಕ್ರಮ ತೆಗೆದುಕೊಳ್ಳುವ ಬದಲು ಸರಕಾರ, ಹಿಜಾಬ್‌ನ ಹೆಸರಿನಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಬಹಿಷ್ಕಾರ ಹಾಕಿ ಕಾಲೇಜು ತೊರೆಯುವಂತೆ ಮಾಡಿತು. ಇದರ ವಿರುದ್ಧ ಹಲವು ವಿದ್ಯಾರ್ಥಿನಿಯರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಮುಸ್ಲಿಮ್ ವಿದ್ಯಾರ್ಥಿನಿಯರ ಅಥವಾ ಮಹಿಳೆಯರ ಶೈಕ್ಷಣಿಕ ಬದುಕಿಗೆ ಯಾವ ರೀತಿಯಲ್ಲೂ ಪ್ರಯೋಜನವಾಗದ, ಬದಲಿಗೆ ಅವರ ಶೈಕ್ಷಣಿಕ ಬದುಕನ್ನೇ ಮುರುಟಿಸುವ ಹಿಜಾಬ್ ನಿಷೇಧವನ್ನು ಹಿಂದೆಗೆಯಲು ರಾಜ್ಯ ಸರಕಾರಕ್ಕೆ ಇದು ಸಕಾಲವಾಗಿದೆ. ಈಗಾಗಲೇ ಗೃಹಲಕ್ಷ್ಮಿ, ಶಕ್ತಿಯೋಜನೆ ಮೊದಲಾದ ಕಾರ್ಯಕ್ರಮಗಳ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಮುಂದಾಗಿರುವ ರಾಜ್ಯ ಸರಕಾರ, ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧವೆನ್ನುವ ರಾಜಕೀಯ ಪ್ರೇರಿತ ಆದೇಶವನ್ನು ಹಿಂದೆಗೆದು ಮುಸ್ಲಿಮ್ ಬಾಲಕಿಯರು ಮುಕ್ತವಾಗಿ ವಿದ್ಯೆ ಕಲಿಯಲು ನೆರವಾಗಬೇಕಾಗಿದೆ. ಶಿಕ್ಷಣ ಮುಸ್ಲಿಮ್ ಮಹಿಳೆಯರ ಬದುಕಿನಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರುವಂತಾಗಬೇಕಾದರೆ, ಮೊದಲು ಅವರು ಯಾವ ಅಡೆತಡೆಗಳಿಲ್ಲದೆ ಶಾಲೆ ಕಾಲೇಜುಗಳಿಗೆ ತೆರಳುವ ವಾತಾವರಣ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಆದೇಶದ ನೆರಳಿನಲ್ಲಿ, ಹಿಜಾಬ್ ನಿಷೇಧವನ್ನು ಹಿಂದೆಗೆಯಲು ಸರಕಾರ ಮುಂದಾಗಬೇಕು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News