ಮಹಿಳೆಯರ ‘ಗ್ಯಾರಂಟಿ ಶಕ್ತಿ’ಯನ್ನು ಕಿತ್ತುಕೊಳ್ಳಲಿರುವ ಮದ್ಯದಂಗಡಿಗಳು

Update: 2023-09-28 03:48 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸಾ ಧಾರಣವಾಗಿ ಗ್ರಾಮಕ್ಕೊಂದು ಗ್ರಂಥಾಲಯ, ಗ್ರಾಮಕ್ಕೊಂದು ಆಸ್ಪತ್ರೆ, ಗ್ರಾಮಕ್ಕೊಂದು ಸರಕಾರಿ ಶಾಲೆಗಳ ಬಗ್ಗೆ ಸರಕಾರ ತಲೆಕೆಡಿಸಿಕೊಳ್ಳುವುದಿದೆ. ಆ ಬಗ್ಗೆ ಕಾರ್ಯ ಯೋಜನೆಗಳನ್ನು ಸಿದ್ಧಪಡಿಸುವ ಹೊಣೆಗಾರಿಕೆಯೂ ಸರಕಾರದ್ದಾಗಿದೆ. ಆದರೆ ಸಿದ್ದರಾಮಯ್ಯ ನೇತೃತ್ವದ ‘ಗ್ಯಾರಂಟಿ ಸರಕಾರ’ ಇದೀಗ ಗ್ರಾಮಪಂಚಾಯತ್ಗೊಂದರಂತೆ ಮದ್ಯದಂಗಡಿಗಳನ್ನು ಒದಗಿಸಲು ಸಿದ್ಧತೆ ನಡೆಸುವ ಮೂಲಕ ಸುದ್ದಿಯಲ್ಲಿದೆ. ಮದ್ಯದಂಗಡಿಗಳೇ ಇಲ್ಲದ ಸುಮಾರು 600 ಗ್ರಾಮ ಪಂಚಾಯತ್ಗಳಲ್ಲಿ ಕನಿಷ್ಠ ತಲಾ ಒಂದು ಮದ್ಯದಂಗಡಿಗೆ ಪರವಾನಿಗೆ ನೀಡಲು ಸಿದ್ಧತೆ ನಡೆಸಿದೆ. ರಾಜ್ಯಾದ್ಯಂತ ಸುಮಾರು 1,000 ಮದ್ಯದಂಗಡಿಗಳನ್ನು ಹೊಸದಾಗಿ ಆರಂಭಿಸಲು ಯೋಜನೆ ರೂಪಿಸಿದೆ.

ಹೊಸ ಪ್ರಸ್ತಾವಗಳ ಕುರಿತಂತೆ ಅಬಕಾರಿ ಸಚಿವರು ಈಗಾಗಲೇ ಇಲಾಖೆಯ ಅಧಿಕಾರಿಗಳ ಜೊತೆಗೆ ಮೊದಲ ಹಂತದ ಸಭೆ ನಡೆಸಿದ್ದಾರೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಾರಾ ಹೊಟೇಲ್, ಹೊಟೇಲ್, ಬೋರ್ಡಿಂಗ್ಗೆ ಮದ್ಯದಂಗಡಿ ಪರವಾನಿಗೆ ನೀಡಲು ಇರುವ ನಿರ್ಬಂಧಗಳನ್ನು ಕಿತ್ತು ಹಾಕುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಬಿಬಿಎಂಪಿ ವ್ಯಾಪ್ತಿ ಮತ್ತು ಜಿಲ್ಲಾ ಕೇಂದ್ರಗಳ ವ್ಯಾಪ್ತಿಯ ಸೂಪರ್ ಮಾರ್ಕೆಟ್ ಮತ್ತು ಹೈಪರ್ ಮಾರ್ಕೆಟ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ಪರವಾನಿಗೆ ನೀಡುವ ಬಗ್ಗೆಯೂ ಸಿದ್ಧತೆ ನಡೆಯುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮದ್ಯವನ್ನು ಹಂತ ಹಂತವಾಗಿ ನಿಷೇಧ ಮಾಡುವ ಬಗ್ಗೆ ಸರಕಾರ ಯೋಜನೆ ರೂಪಿಸಬೇಕೇ ಹೊರತು, ಜನಸಂಖ್ಯೆಯ ಸಾಮರ್ಥ್ಯಕ್ಕನುಗುಣವಾಗಿ ಗ್ರಾಮಗಳಿಗೆ ಮದ್ಯಗಳನ್ನು ಒದಗಿಸುವುದನ್ನು ಜನಪರ ಆಡಳಿತ ಎಂದು ಕರೆಯಲಾಗುವುದಿಲ್ಲ. ಶಿಕ್ಷಣ, ಆರೋಗ್ಯ, ಆಹಾರಗಳ ಸಾಲಿನಲ್ಲಿ ಮದ್ಯವನ್ನು ತಂದು ನಿಲ್ಲಿಸುವ ಸರಕಾರದ ಪ್ರಯತ್ನ ಜನವಿರೋಧಿಯಾಗಿದೆ. ಗೃಹಲಕ್ಷ್ಮಿ, ಶಕ್ತಿ ಯೋಜನೆಯ ಮೂಲಕ ಮಹಿಳಾ ಸಬಲೀಕರಣ ಮಾಡುತ್ತೇನೆ ಎನ್ನುತ್ತಿರುವ ಸರಕಾರ, ಅದರ ಜೊತೆ ಜೊತೆಗೇ ಎಲ್ಲ ಗ್ರಾಮಗಳಿಗೂ ಮದ್ಯದಂಗಡಿಯನ್ನು ಒದಗಿಸುವ ಮಾತನಾಡುತ್ತಿದೆ. ಮಹಿಳಾ ಸಬಲೀಕರಣ ಮತ್ತು ಮದ್ಯ ಮಾರಾಟ ಎರಡೂ ಜೊತೆಯಾಗಿ ಸಾಗುವುದಕ್ಕೆ ಸಾಧ್ಯವಿಲ್ಲ.

ಮಹಿಳಾ ಸಬಲೀಕರಣಕ್ಕೆ ಅತಿ ದೊಡ್ಡ ಸವಾಲಾಗಿದೆ ಮದ್ಯ ಸೇವನೆ. ಇಂದು ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಶೋಷಣೆಗಳಿಗೆ ಮದ್ಯಪಾನ ಮೊದಲ ಕಾರಣವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಅಪೌಷ್ಟಿಕತೆ, ಅನಾರೋಗ್ಯ, ಅನಕ್ಷರತೆಗೆ ಮದ್ಯಪಾನದ ಕೊಡುಗೆ ದೊಡ್ಡದು. ಹೀಗಿರುವಾಗ ಸರಕಾರ ಗ್ರಾಮೀಣ ಪ್ರದೇಶದ ಮೂಲೆ ಮೂಲೆಗಳಿಗೆ ಮದ್ಯದಂಗಡಿಗಳನ್ನು ತಲುಪಿಸಿ, ಮಹಿಳೆಯರ ಬದುಕನ್ನು ಇನ್ನಷ್ಟು ನರಕ ಮಾಡಲು ಹೊರಟಿದೆಯೆ? ಎಂದು ಜನಸಾಮಾನ್ಯರು ಪ್ರಶ್ನಿಸುವಂತಾಗಿದೆ.

ಚುನಾವಣೆಗೆ ಮುನ್ನ ತಾನು ನೀಡಿರುವ ‘ಗ್ಯಾರಂಟಿ’ ಭರವಸೆಗಳನ್ನು ಈಡೇರಿಸಲು ಸರಕಾರ ಗರಿಷ್ಠ ಪ್ರಯತ್ನ ನಡೆಸುತ್ತಿದೆ. ಅದರಲ್ಲಿ ಭಾಗಶಃ ಯಶಸ್ವಿಯಾಗಿದೆ. ಶಕ್ತಿ ಯೋಜನೆಯ ಪ್ರಯೋಜನವನ್ನು ಈ ರಾಜ್ಯದ ಲಕ್ಷಾಂತರ ಮಹಿಳೆಯರು ಈಗಾಗಲೇ ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಇದು ಮಹಿಳಾ ಸಬಲೀಕರಣಕ್ಕೆ ನೀಡಿದ ಕೊಡುಗೆಯನ್ನು ಯಾವ ಕಾರಣಕ್ಕೂ ನಿರಾಕರಿಸುವಂತೆಯೇ ಇಲ್ಲ. ಸಾವಿರಾರು ಉದ್ಯೋಗಿ ಮಹಿಳೆಯರು ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಾ ದಿನಕ್ಕೆ ಕನಿಷ್ಠ 50 ರೂ.ಯಿಂದ 100 ರೂ.ವರೆಗೆ ಉಳಿಸುತ್ತಿದ್ದಾರೆ. ಮಾಸಿಕವಾಗಿ ಇದರಿಂದ ಅವರಿಗೆ ಸರಾಸರಿ 2,000 ರೂ.ಯಷ್ಟಾದರೂ ಉಳಿತಾಯವಾಗುತ್ತಿದೆ. ಉಚಿತ ಅಕ್ಕಿ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಬಹುದೊಡ್ಡ ವರದಾನ. ಇದು ಕೂಡ ಮಹಿಳೆ ಮತ್ತು ಮಕ್ಕಳ ಬದುಕಿನ ಮೇಲೆ ಬಹಳಷ್ಟು ಸುಧಾರಣೆಯನ್ನು ಮಾಡಿದೆ. ಉಚಿತ ಅಕ್ಕಿಯಿಂದಾಗಿ ಉಳಿತಾಯವಾದ ಹಣವನ್ನು ಮಕ್ಕಳ ಶಿಕ್ಷಣ, ಆರೋಗ್ಯಕ್ಕೆ ವ್ಯಯಿಸಲು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಸಾಧ್ಯವಾಗುತ್ತಿದೆ. ಗೃಹ ಲಕ್ಷ್ಮಿ ಯೋಜನೆ ಗ್ರಾಮೀಣ ಪ್ರದೇಶದ ಕುಟುಂಬಗಳ ಯಜಮಾನಿಕೆಯನ್ನು ಮಹಿಳೆಯ ಕೈಗೆ ವರ್ಗಾಯಿಸಿದೆ. ಇಂದು ಈ ಯೋಜನೆಯ ಕಾರಣದಿಂದಲೇ ರಾಜ್ಯದ ಗ್ರಾಮೀಣ ಪ್ರದೇಶದ ಸಾವಿರಾರು ಮಹಿಳೆಯರು ತಮ್ಮ ತಮ್ಮ ಬ್ಯಾಂಕ್ ಅಕೌಂಟ್ಗಳನ್ನು ತೆರೆಯುವಂತಾಗಿದೆ.

ಎಷ್ಟೋ ಮನೆಗಳಲ್ಲಿ ಈ ಯೋಜನೆಯ ಕಾರಣದಿಂದ ಮಹಿಳೆಯರನ್ನು ಗಂಡಸರು ಗೌರವದಿಂದ ನಡೆಸಿಕೊಳ್ಳುವಂತಹ ವಾತಾವರಣ ನಿರ್ಮಾಣವಾಗಿದೆ. ಗೃಹ ಜ್ಯೋತಿಯೂ ಗ್ರಾಮೀಣ ಪ್ರದೇಶದ ಮನೆಗೆ ಬೆಳಕು ತುಂಬಿದೆ. ಈ ಎಲ್ಲ ಯೋಜನೆಗಳ ನೇರ ಫಲಾನುಭವಿಗಳು ಮಹಿಳೆಯರು. ಆದರೆ ಈ ಗ್ಯಾರಂಟಿಗಳೇ ಮದ್ಯ ಮಾರಾಟವನ್ನು ಪ್ರೋತ್ಸಾಹಿಸಬೇಕಾದ ಅನಿವಾರ್ಯ ಸ್ಥಿತಿಗೆ ಸರಕಾರವನ್ನು ತಂದು ನಿಲ್ಲಿಸಿದೆ. ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳು, ಚುನಾವಣೆಯ ಬಳಿಕ ಹೊರ ಬಂದ ಭರ್ಜರಿ ಫಲಿತಾಂಶದಿಂದಾಗಿ ಗ್ಯಾರಂಟಿಯನ್ನು ತಕ್ಷಣ ಈಡೇರಿಸಲೇ ಬೇಕಾದಂತಹ ಒತ್ತಡಕ್ಕೆ ಸರಕಾರ ಸಿಲುಕಿತು. ನೂತನ ಸರಕಾರದ ಕೈಗೆ ಸಿಕ್ಕಿರುವುದು ಅದಾಗಲೇ ಬಿಜೆಪಿ ಶೇ. 40 ಕಮಿಷನ್ ಮೂಲಕ ಬರಿದು ಮಾಡಿದ ಖಜಾನೆ. ಗ್ಯಾರಂಟಿಗಳಿಗೆ ತಕ್ಷಣ ಹಣ ಭರಿಸುವುದು ಸರಕಾರದ ಮುಂದಿದ್ದ ಸಣ್ಣ ಸವಾಲು ಆಗಿರಲಿಲ್ಲ.

ಇಂತಹ ಸಂದರ್ಭದಲ್ಲಿ ತಕ್ಷಣ ಹಣದ ಮುಗ್ಗಟ್ಟಿನಿಂದ ಪಾರಾಗಲು ಯಾವುದೇ ಸರಕಾರ ಆಧರಿಸುವುದು ಅಬಕಾರಿ ಇಲಾಖೆಯನ್ನು. ಈ ಹಿಂದೆ ಕೊರೋನ, ಲಾಕ್ಡೌನ್ನಿಂದ ಆರ್ಥಿಕತೆ ತತ್ತರಿಸಿ ಕೂತಾಗ ರಾಜ್ಯ ಸರಕಾರ ನೆಚ್ಚಿಕೊಂಡಿದ್ದು ಅಬಕಾರಿ ಇಲಾಖೆಯನ್ನು. ಅಬಕಾರಿ ಇಲಾಖೆ ಇಲ್ಲದೇ ಇದ್ದಿದ್ದರೆ ಸರಕಾರಿ ಉದ್ಯೋಗಿಗಳಿಗೆ ಸಂಬಳ ಕೊಡಲೂ ಹಣವಿಲ್ಲ ಎನ್ನುವ ಸ್ಥಿತಿ ಅಂದು ನಿರ್ಮಾಣವಾಗಿತ್ತು. ಇದೀಗ ಗ್ಯಾರಂಟಿಗಳಿಗೆ ಹಣ ಹೊಂದಿಸುವುದಕ್ಕೂ ಸರಕಾರ ನೆಚ್ಚಿಕೊಳ್ಳ ಲು ಹೊರಟಿರುವುದು ಅಬಕಾರಿ ಇಲಾಖೆಯನ್ನೇ.

ಆದರೆ ಸರಕಾರದ ಗ್ಯಾರಂಟಿ ಯೋಜನೆಗಳ ಉದ್ದೇಶವನ್ನೇ ಈ ಮದ್ಯದಂಗಡಿಗಳು ಮಣ್ಣು ಪಾಲು ಮಾಡುತ್ತವೆ. ಸರಕಾರವೇ ಇಂದು ರಸ್ತೆ ಬದಿಗಳಲ್ಲಿ ‘‘ಕೊಡು ತಾಯಿ ವರವನ್ನು ಕುಡುಕನಲ್ಲದ ಗಂಡನನ್ನು’’ ಎನ್ನುವ ಜಾಹೀರಾತುಗಳಿಗೆ ಸರಕಾರ ಕೋಟಿಗಟ್ಟಲೆ ಸುರಿಯುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮದ್ಯದಂಗಡಿಗಳನ್ನು ತೆರೆದರೆ, ಗ್ಯಾರಂಟಿಯ ಮೂಲಕ ಕೊಟ್ಟಂತೆ ಮಾಡಿ, ಮದ್ಯದಂಗಡಿಯ ಮೂಲಕ ಕಿತ್ತುಕೊಂಡಂತಾಗುತ್ತದೆ.

ಗ್ರಾಮೀಣ ಪ್ರದೇಶದ ಈ ಮದ್ಯದಂಗಡಿಗಳು ಮತ್ತೆ ಇದೇ ಗ್ಯಾರಂಟಿ ಫಲಾನುಭವಿಗಳ ಕುಟುಂಬದ ಕಿಸೆಗೆ ಕತ್ತರಿ ಹಾಕುತ್ತದೆ ಎನ್ನುವುದನ್ನು ಸರಕಾರ ಮರೆಯಬಾರದು. ಮದ್ಯದಂಗಡಿಗಳ ನೇರ ಸಂತ್ರಸ್ತರು ಮಹಿಳೆಯರು. ಗ್ರಾಮೀಣ ಪ್ರದೇಶದಲ್ಲಿ ತೆರೆಯಲಿರುವ ಮದ್ಯದಂಗಡಿಗಳು ನೇರವಾಗಿ ‘ಗ್ಯಾರಂಟಿ’ಗಳ ಫಲಾನುಭವಿಗಳನ್ನೇ ಗುರಿಯಾಗಿಸಿಕೊಂಡಿವೆ. ಸರಕಾರ ಕೊಟ್ಟ ಉಚಿತ ಅಕ್ಕಿ, ಮಹಿಳೆಯರಿಗೆ ನೀಡಿದ ಮಾಸಿಕ 2,000 ರೂ., ಶಕ್ತಿ ಯೋಜನೆಯಿಂದ ಮಹಿಳೆಯರು ಉಳಿತಾಯ ಮಾಡಿದ ಹಣವನ್ನು ಪುರುಷರು ಕಿತ್ತುಕೊಂಡು ಈ ಮದ್ಯದಂಗಡಿಗೆ ಸುರಿಯಲಿದ್ದಾರೆ. ಒಂದೆಡೆ ಮಹಿಳೆಯರ ಕೈಗೆ ಉಚಿತವಾಗಿ ಹಣ ದೊರಕುವಂತೆ ಮಾಡಿರುವುದರಿಂದ ಆ ಹಣವನ್ನು ಕಿತ್ತುಕೊಳ್ಳುವ ನೆಪದಲ್ಲಿ ಕೌಟುಂಬಿಕ ದೌರ್ಜನ್ಯಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಲಿವೆ. ಮದ್ಯ ಸೇವನೆಯ ಚಟ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿದಂತೆಯೇ ಬಡತನ, ಅಪೌಷ್ಟಿಕತೆಯೂ ಹೆಚ್ಚುತ್ತದೆ. ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣದ ಮೇಲೂ ಇದು ಪರಿಣಾಮ ಬೀರುತ್ತದೆ.

ಗ್ಯಾರಂಟಿಯು ಮಹಿಳೆಯರಿಗೆ ನೀಡಿದ ಶಕ್ತಿ ಪುರುಷರ ಮೂಲಕ ಮದ್ಯದಂಗಡಿಯ ಪಾಲಾಗಲಿದೆ. ಮಹಿಳೆಯರು ಮಾನಸಿಕವಾಗಿ ಮತ್ತು ದೈಹಿಕವಾಗಿ ಜರ್ಜರಿತವಾಗಬೇಕಾದ ಸನ್ನಿವೇಶ ನಿರ್ಮಾಣವಾಗಬಹುದು. ಇದರ ಅರ್ಥ, ಸರಕಾರ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಬೇಕು ಎಂದಲ್ಲ. ಅದಕ್ಕೆ ಬೇಕಾದ ಹಣವನ್ನು ಹೊಂದಿಸಲು ಬೇರೆ ದಾರಿಯನ್ನು ಹುಡುಕಿಕೊಳ್ಳಬೇಕು. ಮುಖ್ಯವಾಗಿ, ಬೃಹತ್ ಕಾರ್ಪೊರೇಟ್ ಸಂಸ್ಥೆಗಳಿಂದ ತೆರಿಗೆ ಸಂಗ್ರಹಿಸುವ ದಾರಿಗಳನ್ನು ಹುಡುಕಬೇಕು. ಐಟಿ, ಬಿಟಿಗಳಂತಹ ಬೃಹತ್ ಉದ್ಯಮಿಗಳಿಗೆ ನೀಡುತ್ತಿರುವ ಸಬ್ಸಿಡಿಗಳನ್ನು ಕಡಿತಗೊಳಿಸಿ, ಅವುಗಳನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಬೇಕು.

ಇದೇ ಸಂದರ್ಭದಲ್ಲಿ, ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬರಬೇಕಾದ ಪರಿಹಾರ ಹಣಗಳು ಸಿಗುವಂತೆ ಬಿಜೆಪಿ ಸಂಸದರು ಕೂಡ ಕೇಂದ್ರಕ್ಕೆ ಒತ್ತಡಗಳನ್ನು ಹೇರಬೇಕು. ವಿವಿಧ ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳನ್ನು ನಿಯಂತ್ರಿಸಿ ಅನಗತ್ಯ ಸೋರಿಕೆಗಳನ್ನು ತಡೆಯಬೇಕು. ಹಂತಹಂತವಾಗಿ ಮದ್ಯ ನಿಷೇಧ ಮಾಡುವುದು ಮಹಿಳಾ ಸಬಲೀಕರಣದ ಪ್ರಮುಖ ಭಾಗವಾಗಿದೆ. ಪೂರ್ಣ ಪ್ರಮಾಣದ ಮದ್ಯ ನಿಷೇಧ ಆರೋಗ್ಯಪೂರ್ಣ ರಾಜ್ಯ ನಿರ್ಮಾಣಕ್ಕೆ ಕಾರಣವಾಗುತ್ತದೆ ಮಾತ್ರವಲ್ಲ, ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಇಳಿಮುಖವಾಗತೊಡಗುತ್ತದೆ. ಕೊಟ್ಟಂತೆ ಮಾಡಿ ಮದ್ಯದಂಗಡಿಗಳ ಮೂಲಕ ಕಿತ್ತುಕೊಳ್ಳುವ ಗ್ಯಾರಂಟಿ ಯೋಜನೆಗಳಿಂದ ಸುಭಿಕ್ಷವಾದ ಕರ್ನಾಟಕವನ್ನು ಕಟ್ಟಲು ಸಾಧ್ಯವಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News