ಮಹಿಷ ದಸರಾ: ಸಾಂಸ್ಕೃತಿಕ ವೈವಿಧ್ಯಗಳನ್ನು ಸಂಭ್ರಮಿಸೋಣ

Update: 2023-10-12 05:20 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸರಕಾರದ ನೇತೃತ್ವದಲ್ಲಿ ಮೈಸೂರು ದಸರಾ ಆಚರಣೆಗೆ ಸಿದ್ಧತೆ ನಡೆಯುತ್ತಿರುವಾಗಲೇ, ಅತ್ತ ಶ್ರೀಸಾಮಾನ್ಯರು ಆಚರಿಸಲು ಹೊರಟ ‘ಮಹಿಷ ದಸರಾ’ ವಿವಾದಕ್ಕೀಡಾಗಿದೆ. ಪ್ರತೀ ವರ್ಷ ಅಕ್ಟೋಬರ್ ಆಗಮಿಸುತ್ತಿರುವಂತೆಯೇ ರಾಜ್ಯದ ವಿವಿಧೆಡೆಗಳಲ್ಲಿ ದಸರಾ ಸಂಭ್ರಮಗಳು ಕಳೆ ಪಡೆಯತೊಡಗುತ್ತವೆ. ದಸರಾದ ಮೌಲ್ಯಗಳನ್ನು ಒಪ್ಪುವ ಜನಸಮೂಹ ಇದರಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತವೆ. ಇದೇ ಸಂದರ್ಭದಲ್ಲಿ ಮೈಸೂರಿನಲ್ಲಿ ‘ಮಹಿಷ ದಸರಾ’ ಆಚರಣೆಯನ್ನು ಕೆಲವು ಸಂಘಟನೆಗಳು ಕಳೆದ ಕೆಲವು ವರ್ಷಗಳಿಂದ ಆಚರಿಸುತ್ತಾ ಬಂದಿವೆ. ಮಹಿಷ ದಸರಾ ಹೆಸರಿನಲ್ಲಿ, ಈ ನಾಡಿನ ತಳಸ್ತರದ ಸಂಸ್ಕೃತಿಯ ಕುರಿತಂತೆ ಚರ್ಚೆ, ವಿಚಾರ ಸಂಕಿರಣ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿವೆ. ಈ ಹಿಂದೆ ಬಿಜೆಪಿ ಸರಕಾರ ಇದ್ದಾಗಲೂ ಅವರು ‘ಮಹಿಷ ದಸರಾ’ವನ್ನು ಆಚರಿಸಿಕೊಂಡು ಬಂದಿದ್ದಾರೆ. ಮಹಿಷ ದಸರಾದ ಬಗ್ಗೆ ಕೆಲವರ ಆಕ್ಷೇಪಗಳು ವ್ಯಕ್ತವಾಗಿವೆೆಯಾದರೂ, ಈ ಆಚರಣೆಗೆ ಅದು ಯಾವ ರೀತಿಯಲ್ಲೂ ಅಡ್ಡಿಯನ್ನುಂಟು ಮಾಡಿರಲಿಲ್ಲ. ಆದರೆ ಈ ಬಾರಿ ಕಾಂಗ್ರೆಸ್ ನೇತೃತ್ವದ ಸರಕಾರ ಅಸ್ತಿತ್ವದಲ್ಲಿರುವಾಗ, ಮಹಿಷ ದಸರಾ ಆಚರಣೆಗೆ ಕೆಲವು ಶಕ್ತಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ಮೈಸೂರಿನ ಸಂಸದರೊಬ್ಬರು ಮಹಿಷ ದಸರಾ ಆಚರಿಸುವವರನ್ನು ‘ತುಳಿಯುವ, ಬಗ್ಗು ಬಡಿಯುವ’ ಮಾತುಗಳನ್ನು ಮಾಧ್ಯಮಗಳ ಮುಂದೆ ಆಡಿದ್ದಾರೆ. ಸಂಘಪರಿವಾರದ ಕೆಲವು ಗುಂಪು, ಮಹಿಷ ದಸರಾ ಆಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಬೆದರಿಸುತ್ತಿವೆ. ಇದೀಗ ಮೈಸೂರಿನ ನಗರ ಪೊಲೀಸ್ ಆಯುಕ್ತರು ಮಹಿಷ ದಸರಾ ಆಚರಣೆಗೆ ಅನುಮತಿಯನ್ನು ನಿರಾಕರಿಸಿರುವುದು ಬಹುಜನ ಸಮುದಾಯದೊಳಗೆ ತೀವ್ರ ಅಸಮಾಧಾನ ಹುಟ್ಟುಹಾಕಿದೆ.

ಹಾಗೆ ನೋಡಿದರೆ ಮೈಸೂರು ದಸರಾ ಕೂಡ ಭಿನ್ನ ಧ್ವನಿಗಳ ನಡುವೆಯೇ ಹಲವು ದಶಕಗಳಿಂದ ಸಂಭ್ರಮದಿಂದ ಆಚರಣೆಯಾಗುತ್ತಾ ಬರುತ್ತಿದೆ. ಮುಖ್ಯವಾಗಿ ಇದು ರಾಜಪ್ರಭುತ್ವವನ್ನು ವೈಭವೀಕರಿಸುತ್ತದೆ ಎನ್ನುವ ಆರೋಪಗಳನ್ನು ಹಲವರು ಮಾಡಿದ್ದಾರೆ. ಅಖಂಡ ಕರ್ನಾಟಕವಾಗುವಲ್ಲಿ ಒಡೆಯರ್ ವಂಶಸ್ಥರು ಹಲವು ತಕರಾರುಗಳನ್ನು ತೆಗೆದಿದ್ದರು. ಒಡೆಯರ್ ವಂಶಸ್ಥರು ಮತ್ತು ಸರಕಾರದ ನಡುವೆ ಈಗಲೂ ಹತ್ತು ಹಲವು ಭಿನ್ನಾಭಿಪ್ರಾಯಗಳಿದ್ದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತಿವೆ. ರಾಜಪ್ರಭುತ್ವ ತೊಲಗಿ ಪ್ರಜೆಗಳೇ ಪ್ರಭುಗಳಾಗಿರುವ ಈ ಹೊತ್ತಿನಲ್ಲಿ, ರಾಜರನ್ನು ಮತ್ತೆ ಸಿಂಹಾಸನದಲ್ಲಿ ಕುಳ್ಳಿರಿಸಿ ಅವರ ಪಾದ ಪೂಜೆ ಮಾಡುವುದು ಎಷ್ಟು ಸರಿ? ಎನ್ನುವ ಪ್ರಶ್ನೆಯನ್ನು ಈ ಹಿಂದೆ ಹಲವರು ಎತ್ತಿದ್ದಾರೆ. ಜೊತೆ ಜೊತೆಗೆ, ಮೈಸೂರು ದಸರಾದಲ್ಲಿ ವೈದಿಕ ಮೌಲ್ಯಗಳಿಗೆ ಮನ್ನಣೆ ನೀಡುವುದು ಪರೋಕ್ಷವಾಗಿ ಜಾತೀಯತೆಯನ್ನು ಎತ್ತಿ ಹಿಡಿದಂತೆ ಎನ್ನುವ ಆಕ್ಷೇಪಗಳನ್ನೂ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಬರಗೂರು ರಾಮಚಂದ್ರಪ್ಪ ಅವರು ದಸರಾ ಉದ್ಘಾಟಿಸಿದಾಗ ‘ದಸರಾ ಹಿಂಸಾ ಮೌಲ್ಯಗಳನ್ನು ಎತ್ತಿ ಹಿಡಿಯುವಂತಾಗಬಾರದು’ ಎಂಬ ಎಚ್ಚರಿಕೆಯನ್ನು ನೀಡಿದ್ದರು. ಈ ಎಲ್ಲ ಭಿನ್ನ್ನಾಭಿಪ್ರಾಯಗಳ ನಡುವೆಯೂ ದಸರಾವನ್ನು ನಾಡಿನ ಜನತೆ ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದಾರೆ. ಇಲ್ಲಿನ ಸಾಂಸ್ಕೃತಿಕ ಸಂಭ್ರಮಗಳ ಮುಂದೆ ಉಳಿದೆಲ್ಲ ಭಿನ್ನಭಿಪ್ರಾಯಗಳು ನಗಣ್ಯವಾಗಿದ್ದವು. ಹೀಗಿರುವಾಗ ಮಹಿಷ ದಸರಾದ ಕುರಿತಂತೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದ ಹಾಗೆಯೇ, ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಿಸಿರುವುದು ಎಷ್ಟು ಸರಿ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಮೈಸೂರಿಗೆ ಮಹಿಷೂರು ಎನ್ನುವ ಹೆಸರಿಟ್ಟಿರುವುದೇ ಒಡೆಯರ್ ವಂಶಸ್ಥರು ಎನ್ನುವುದನ್ನು ಇತಿಹಾಸ ಹೇಳುತ್ತದೆ. ಮಹಿಷನ ಜೊತೆಗಿರುವ ಕರುಳ ಸಂಬಂಧದ ಕಾರಣಕ್ಕಾಗಿಯೇ ಮಹಿಷನನ್ನು ಗೌರವಿಸಿ ತನ್ನ ನಾಡಿಗೆ ಒಡೆಯರ್ ‘ಮಹಿಷೂರು’ ಎಂಬ ಹೆಸರು ನೀಡಿದ್ದಾರೆ. ಆತನೊಬ್ಬ ದುಷ್ಟನೇ ಆಗಿದ್ದರೆ ಮೈಸೂರು ಆತನ ಹೆಸರಿನ ಮೂಲಕ ಗುರುತಿಸಲ್ಪಡುತ್ತಿರಲಿಲ್ಲ. ‘ಮೈಸೂರು ದಸರಾ’ ಚಾಮುಂಡಿಯನ್ನು ಸ್ಮರಿಸಿ ಆಚರಿಸಲಾಗುತ್ತದೆಯಾದರೆ ‘ಮಹಿಷ ದಸರಾ’ ಮಹಿಷ ಉಳಿಸಿ ಹೋದ ಶ್ರಮ ಸಂಸ್ಕೃತಿಯ ಮೌಲ್ಯಗಳನ್ನು ಮುಂದಿಟ್ಟುಕೊಂಡು ಆಚರಿಸಲಾಗುತ್ತದೆ. ಮಹಿಷ ದೊರೆ ಕೊಲ್ಲಲ್ಪಟ್ಟ ಕಾರಣಕ್ಕಾಗಿ ಆರಾಧಿಸಲ್ಪಡುತ್ತಿದ್ದಾನೆಯೇ ಹೊರತು, ಕೊಂದ ಕಾರಣಕ್ಕಾಗಿ ಆರಾಧಿಸಲ್ಪಡುತ್ತಿಲ್ಲ. ಹಾಗೆ ನೋಡಿದರೆ ಶೋಷಿತ, ತಳಸ್ತರದ ಬಹುತೇಕ ದೈವ, ಶಕ್ತಿಗಳು ಇನ್ನೊಬ್ಬರಿಂದ ಅನ್ಯಾಯವಾಗಿ ಕೊಲ್ಲಲ್ಪಟ್ಟವರೇ ಆಗಿದ್ದಾರೆ. ಮೈಸೂರು ಒಂದು ಕಾಲದ ಮಹಿಷ ಮಂಡಲವಾಗಿತ್ತು ಎಂದು ಹೇಳುತ್ತಾರೆ. ಮಹಿಷ ಎಂದರೆ ಎಮ್ಮೆ , ಕೋಣ ಸಾಕುವವರು. ಅಂದರೆ ಎಮ್ಮೆಗಳನ್ನೇ ವ್ಯವಸಾಯ ಪ್ರಧಾನವಾಗಿಸಿಕೊಂಡವರು. ಒಡೆಯರ್ ಯದುಕುಲದವರು. ಗೋವು ಕೇಂದ್ರಿತ ಆರ್ಥಿಕತೆಯನ್ನು ನೆಚ್ಚಿ

ಕೊಂಡವರು. ಮೈಸೂರಿನ ನಿಜವಾದ ಅಸ್ಮಿತೆಯಾಗಿರುವ ಮಹಿಷನ ಹೆಸರಿನಲ್ಲಿ ದಸರಾ ಆಚರಿಸಲು ಮುಂದಾದರೆ ಅದನ್ನು ವಿರೋಧಿಸುವುದು ಅಸಹಿಷ್ಣುತೆಯಾಗುತ್ತದೆ.

ಕೇರಳದಲ್ಲಿ ‘ಓಣಂ’ ಆಚರಣೆಯ ವಿರುದ್ಧವೂ ಇಂತಹದೊಂದು ತಕರಾರು ತೆಗೆಯಲು ಅಮಿತ್ ಶಾ ನೇತೃತ್ವದಲ್ಲಿ ಆರೆಸ್ಸೆಸ್ ಪ್ರಯತ್ನಿಸಿತಾದರೂ ಕೊನೆಗೂ ಅದರಲ್ಲಿ ವಿಫಲವಾಯಿತು. ಕೇರಳದ ಜನರು ಅದನ್ನು ಒಕ್ಕೊರಲಿನಲ್ಲಿ ವಿರೋಧಿಸಿದರು. ಕೇರಳದಲ್ಲಿ ವಾಮನನಿಂದ ಮೋಸದಿಂದ ಪಾತಾಳಕ್ಕೆ ಅಥವಾ ದಕ್ಷಿಣಕ್ಕೆ ತಳ್ಳಲ್ಪಟ್ಟ ಬಲಿ ಚಕ್ರವರ್ತಿ ವರ್ಷಕ್ಕೊಮ್ಮೆ ಕೇರಳಕ್ಕೆ ಬರುವ ದಿನವನ್ನು ‘ಓಣಂ’ ಎಂದು ಜನರು ತಲೆ ತಲಾಂತರಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಚಾಮುಂಡಿ ಮಹಿಷನನ್ನು ಕೊಂದಂತೆಯೇ ಇಲ್ಲಿ ವಾಮನನಿಂದ ಬಲಿ ಚಕ್ರವರ್ತಿ ವಂಚಿಸಲ್ಪಟ್ಟು ರಾಜ್ಯ ಕಳೆದುಕೊಂಡು ಪಾತಾಳಕ್ಕೆ ತಳ್ಳಲ್ಪಡುತ್ತಾನೆ. ಆದರೆ ಆತನಿಗೆ ವರ್ಷಕ್ಕೊಮ್ಮೆ ತನ್ನ ರಾಜ್ಯವನ್ನು ವೀಕ್ಷಿಸುವ ಅವಕಾಶವನ್ನು ನೀಡಲಾಗುತ್ತದೆ. ಆ ದಿನವನ್ನೇ ಕೇರಳ ನಾಡಹಬ್ಬವಾಗಿ ಆಚರಿಸುತ್ತಿದೆ. ನಾಲ್ಕು ವರ್ಷಗಳ ಹಿಂದೆ, ಈ ಹಬ್ಬವನ್ನು ‘ವಾಮನ ಜಯಂತಿ’ಯಾಗಿ ಪರಿವರ್ತಿಸುವ ಪ್ರಯತ್ನ ಕೇಂದ್ರ ಸರಕಾರದಿಂದ ನಡೆಯಿತು. ಅಮಿತ್ ಶಾ ಭಾವಚಿತ್ರವಿರುವ ಕೇಂದ್ರ ಸರಕಾರದ ಜಾಹೀರಾತಿನಲ್ಲಿ ಓಣಂ ಬದಲಿಗೆ ‘ವಾಮನ ಜಯಂತಿ’ ಶುಭಾಶಯವನ್ನು ಕೋರಲಾಯಿತು. ಜಾಹೀರಾತಿನಲ್ಲಿ ಬಲಿ ಚಕ್ರವರ್ತಿಯ ಚಿತ್ರದ ಬದಲಿಗೆ ಆತನ ತಲೆಯ ಮೇಲೆ ಕಾಲಿಟ್ಟ ವಾಮನನ ಚಿತ್ರವನ್ನು ಛಾಪಿಸಲಾಯಿತು. ಆದರೆ ಕೇರಳದ ಜನರು ಇದರ ವಿರುದ್ಧ ಒಂದಾಗುತ್ತಿದ್ದಂತೆಯೇ ಜಾಹೀರಾತನ್ನು ಕೇಂದ್ರ ಸರಕಾರ ಹಿಂದೆಗೆಯಿತು. ಬಲಿ ಚಕ್ರವರ್ತಿಯನ್ನು ‘ರಾಕ್ಷಸ’ನನ್ನಾಗಿಸಿ ಆತನನ್ನು ರಾಜ್ಯದಿಂದ ಹೊರತಳ್ಳಿದವರಿಗೆ ವಾಮನ ಅವತಾರ ಪುರುಷನಾದರೆ, ಜನಸಾಮಾನ್ಯರಿಗೆ ಬಲಿ ಚಕ್ರವರ್ತಿ ಆದರ್ಶ ಪುರುಷ. ಆ ಕಾರಣಕ್ಕಾಗಿಯೇ ಆತನನ್ನು ಈಗಲೂ ಸ್ಮರಿಸುತ್ತಾರೆ.

ಭಾರತ ಬಹುಸಂಸ್ಕೃತಿಗಳ ದೇಶ. ತಳಸ್ತರದ ಜನರ ನಾಯಕರನ್ನು ಕೊಂದ ದಿನವನ್ನು ಇಲ್ಲಿ ಸಂಭ್ರಮಿಸಿ ಆಚರಿಸಬಹುದಾದರೆ, ಸಾಯಿಸಲ್ಪಟ್ಟವರ ಸಮುದಾಯಗಳಿಗೆ ಅವರ ನಾಯಕನನ್ನು ನೆನೆದು ಹಬ್ಬ ಆಚರಿಸುವ ಹಕ್ಕೂ ಇದೆ. ಮೈಸೂರು ದಸರಾ, ಮಹಿಷ ದಸರಾ ಬೇರೆ ಬೇರೆ ಮೌಲ್ಯಗಳನ್ನು ಎತ್ತಿ ಹಿಡಿಯುವ ಈ ದೇಶದ ಸಾಂಸ್ಕೃತಿಕ ವೈವಿಧ್ಯಗಳು. ಹೇಗೆ ತಳಸ್ತರದ ಜನರು ವೈದಿಕ ಹಬ್ಬಗಳನ್ನು ಗೌರವಿಸುತ್ತಾ ಬಂದಿದ್ದಾರೆಯೋ ಅದೇ ಹಿರಿಮೆಯನ್ನು ಉಳಿದವರು ತಳಸ್ತರದ ಜನರ ಹಬ್ಬಗಳಲ್ಲೂ ವ್ಯಕ್ತಪಡಿಸಬೇಕು. ಮಹಿಷ ದಸರಾವನ್ನು ಬೆಂಬಲಿಸುವುದು ಮಾತ್ರವಲ್ಲ, ಅದರಲ್ಲಿ ಸಂಪೂರ್ಣ ಭಾಗಿಯಾಗಿ ‘ಮೈಸೂರು’ ಅಥವಾ ‘ಮಹಿಷೂರು’ ಹೆಸರಿನ ಘನತೆಯನ್ನು ಎತ್ತಿ ಹಿಡಿಯಬೇಕು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News