ವಿಶ್ವವಿದ್ಯಾನಿಲಯಗಳ ಗುಣಮಟ್ಟ ಕಾಪಾಡಿ

Update: 2023-08-08 05:43 GMT

ಸಾಂದರ್ಭಿಕ ಚಿತ್ರ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕರ್ನಾಟಕದಲ್ಲಿ ಈಗ ಹಲವೆಡೆ ಹೊಸ ವಿಶ್ವವಿದ್ಯಾನಿಲಯಗಳು ತಲೆ ಎತ್ತಿವೆ. ಇನ್ನೂ ಕೆಲ ವಿಶ್ವವಿದ್ಯಾನಿಲಯಗಳು ಆರಂಭವಾಗಬಹುದು. ಇವುಗಳ ಸ್ಥಾಪನೆಗೆ ಶೈಕ್ಷಣಿಕ ಅಗತ್ಯಕ್ಕಿಂತ ರಾಜಕೀಯ ಆದ್ಯತೆ, ಪ್ರಭಾವ ಮುಖ್ಯವಾಗುತ್ತಿದೆ. ಸರಕಾರ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಏಕಾಏಕಿ ಹೊಸ ವಿಶ್ವವಿದ್ಯಾನಿಲಯಗಳ ಆರಂಭಕ್ಕೆ ಮುಂದಾಗುವುದು ಸರಿಯಲ್ಲ. ಈಗಿರುವ ಪ್ರತಿಷ್ಠಿತ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಮತ್ತು ಶಿಗ್ಗಾವಿಯ ಜಾನಪದ ವಿಶ್ವವಿದ್ಯಾನಿಲಯಗಳು ಅನುದಾನದ ಕೊರತೆಯಿಂದ ಬಳಲುತ್ತಿವೆ. ಅಲ್ಲಿ ಕೆಲ ತಿಂಗಳುಗಳಿಂದ ನೌಕರರ, ಅಧ್ಯಾಪಕರ ಸಂಬಳ ಪಾವತಿಯಾಗಿಲ್ಲ. ಹಳೆಯದಾದ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ.

ರಾಜ್ಯದ ಹೊಸ ವಿಶ್ವವಿದ್ಯಾನಿಲಯಗಳಿಗೆ ಕುಲಪತಿಗಳನ್ನು ನೇಮಕ ಮಾಡಲು ಹಾಗೂ ಹೊಸ ಹುದ್ದೆಗಳನ್ನು ತನ್ನ ರಾಜಕೀಯ ಹಿತಾಸಕ್ತಿಗಾಗಿ ಸೃಷ್ಟಿಸಲು ತೋರಿಸಿದ ಆಸಕ್ತಿಯನ್ನು ಹಿಂದಿನ ಬಿಜೆಪಿ ಸರಕಾರ ವಿಶ್ವವಿದ್ಯಾನಿಲಯಗಳ ಗುಣಮಟ್ಟದ ಸುಧಾರಣೆಗೆ ತೋರಿಸಲಿಲ್ಲ. ಇದರ ಪರಿಣಾಮವಾಗಿ ಹೊಸ ವಿಶ್ವವಿದ್ಯಾನಿಲಯಗಳಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಹೊಸ ವಿಶ್ವವಿದ್ಯಾನಿಲಯಗಳು ಮಾತ್ರವಲ್ಲ ರಾಜ್ಯದ ಬಹುತೇಕ ವಿಶ್ವವಿದ್ಯಾನಿಲಯಗಳಲ್ಲಿ ಮೂಲಭೂತ ಸೌಕರ್ಯಗಳ ಮತ್ತು ಬೋಧಕ ಸಿಬ್ಬಂದಿಯ ಕೊರತೆ ಎದ್ದು ಕಾಣುತ್ತಿದೆ. ಈ ಕೊರತೆಗಳನ್ನು ನಿವಾರಿಸುವಲ್ಲಿ ಆಸಕ್ತಿ ತೋರಿಸದ ಹಿಂದಿನ ರಾಜ್ಯ ಬಿಜೆಪಿ ಸರಕಾರ ಯಾವುದೇ ಪೂರ್ವ ತಯಾರಿಯಿಲ್ಲದೆ ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಹಾಗೂ ಬಾಗಲಕೋಟೆಗಳಲ್ಲಿ ಹೊಸ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವ ನಿರ್ಧಾರ ಪ್ರಕಟಿಸಿ ಕೆಲ ವಿಶ್ವವಿದ್ಯಾನಿಲಯಗಳಿಗೆ ಕುಲಪತಿಗಳನ್ನೂ ನೇಮಕ ಮಾಡಿತು. ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಲಾಭಗಳಿಕೆಗಾಗಿ ಈ ವಿಶ್ವವಿದ್ಯಾನಿಲಯಗಳನ್ನು ಹಿಂದಿನ ಸರಕಾರ ಘೋಷಿಸಿತ್ತೆಂದರೆ ಅತಿಶಯೋಕ್ತಿಯಲ್ಲ. ಅಂದಿನ ಸರಕಾರಕ್ಕೆ ಹೊಸ ವಿಶ್ವವಿದ್ಯಾನಿಲಯಗಳ ಸ್ಥಾಪನೆ ಬಗ್ಗೆ ಆಸಕ್ತಿ ಇದ್ದರೆ ವಿಧಾನಸಭಾ ಚುನಾವಣೆ ಬರುವವರೆಗೆ ಕಾಯದೆ ಮೊದಲೇ ಸ್ಥಾಪನೆ ಮಾಡಬಹುದಿತ್ತು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ಜಿಲ್ಲೆಗೊಂದು ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡುವುದಾಗಿ ಹೇಳಿದ್ದ ಅಂದಿನ ಸರಕಾರ ಅದಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಿಲ್ಲ.

ಜ್ಞಾನವನ್ನು ಸೃಷ್ಟಿಸುವುದು ಮತ್ತು ಹಂಚಿಕೆ ಮಾಡುವುದು ವಿಶ್ವವಿದ್ಯಾನಿಲಯಗಳ ಪ್ರಾಥಮಿಕ ಉದ್ದೇಶವಾಗಿರಬೇಕು. ಆದರೆ ಇದಕ್ಕೆ ತದ್ವಿರುದ್ಧವಾಗಿ ಇಂದಿನ ಬಹುತೇಕ ವಿಶ್ವವಿದ್ಯಾನಿಲಯಗಳು ಗುಣಮಟ್ಟ ಕಳೆದುಕೊಂಡು ಕೇವಲ ಪದವಿ ನೀಡುವ ಕೇಂದ್ರಗಳಾಗಿ ಮಾರ್ಪಟ್ಟಿವೆ. ಒಂದು ಕಾಲದಲ್ಲಿ ವಿಶ್ವವಿದ್ಯಾನಿಲಯಗಳು ಜ್ಞಾನ ಕೇಂದ್ರಿತ ಚಟುವಟಿಕೆಗಳ ತಾಣಗಳಾಗಿದ್ದವು. ಆದರೆ ಈಗ ಪದವಿಗಳನ್ನು ಮಾತ್ರವಲ್ಲ ಪ್ರಮಾಣ ಪತ್ರಗಳನ್ನು ನೀಡುವ ಕಾಟಾಚಾರದ ಕೇಂದ್ರಗಳಾಗಿವೆ. ೨೦೧೪ರ ನಂತರ ಕೇಂದ್ರದಲ್ಲಿ ಮನುವಾದಿ ಹಿಂದುತ್ವದ ಕಾರ್ಯಸೂಚಿಯನ್ನು ಇಟ್ಟುಕೊಂಡು ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ವಿಶ್ವವಿದ್ಯಾನಿಲಯ ಗಳಲ್ಲಿ ವಿವಿಧ ಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಂವಾದ ಮತ್ತು ಸಂಶೋಧನೆಗಳಿಗೆ ಗರ ಬಡಿದಂತಾಗಿದೆ. ದಿಲ್ಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ (ಜೆಎನ್‌ಯು) ಒಂದು ಕಾಲದಲ್ಲಿ ಸಂಶೋಧನೆ ಮತ್ತು ಸಂವಾದ ಸಂಸ್ಕೃತಿಗೆ ಹೆಸರಾಗಿತ್ತು. ವಿವಿಧ ವಿಚಾರಧಾರೆಗಳನ್ನು ರೂಪಿಸುವ ತಾಣವಾಗಿತ್ತು. ಅದನ್ನು ಮೋದಿ ಸರಕಾರ ಹಾಳುಗೆಡವಲು ಯತ್ನಿಸುತ್ತಲೇ ಇದೆ.

ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಕೂಡ ಮೊದಲಿನ ಗುಣಮಟ್ಟ ಉಳಿಸಿಕೊಂಡಿಲ್ಲ. ಅದು ಕೊಡುವ ನಾಡೋಜ ಪ್ರಶಸ್ತಿ ಬಗ್ಗೆ ವಿವಾದಗಳು ಉಂಟಾಗಿವೆ. ರಾಜ್ಯದ ಬಹುತೇಕ ವಿಶ್ವವಿದ್ಯಾನಿಲಯಗಳು ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧವಿಲ್ಲದ ಉದ್ಯಮಿಗಳಿಗೆ, ವ್ಯಾಪಾರಿಗಳಿಗೆ, ರಿಯಲ್ ಎಸ್ಟೇಟ್ ದಂಧೆಕೋರರಿಗೆ, ಮಠಾಧೀಶರಿಗೆ, ರಾಜಕಾರಣಿಗಳಿಗೆ ಗೌರವ ಡಾಕ್ಟರೇಟ್‌ಗಳನ್ನು ನೀಡುತ್ತಿವೆ. ಹಣ ಕೊಟ್ಟು ಡಾಕ್ಟರೇಟ್ ಪದವಿ ಖರೀದಿಸಲಾಗುತ್ತಿದೆ ಎಂಬ ದೂರುಗಳೂ ಇವೆ. ಇವುಗಳ ತಡೆಗೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಕ್ರಮಕೈಗೊಳ್ಳಬೇಕಾಗಿದೆ.

ಗೌರವ ಡಾಕ್ಟರೇಟ್‌ಗಳನ್ನು ಕೊಡಬಾರದೆಂದಲ್ಲ. ನಾಡಿನ ಸಾಹಿತ್ಯ, ಸಂಗೀತ, ಸಮಾಜ ಸೇವೆ ಸೇರಿದಂತೆ ನಾಡು ನುಡಿಗೆ ಸೇವೆ ಸಲ್ಲಿಸಿದವರನ್ನು ಗುರುತಿಸಿ ಗೌರವಿಸಲಿ. ಆದರೆ ಸಕ್ಕರೆ ಕಾರ್ಖಾನೆ ಮಾಲಕರನ್ನು, ಶಿಕ್ಷಣದ ವ್ಯಾಪಾರಿಗಳನ್ನು, ಮೈನಿಂಗ್ ಖದೀಮರನ್ನು ಗೌರವಿಸಿ ಗೌರವ ಡಾಕ್ಟರೇಟ್ ನೀಡುವಷ್ಟು ಕೆಳ ಮಟ್ಟಕ್ಕೆ ವಿಶ್ವವಿದ್ಯಾನಿಲಯಗಳು ಹೋಗಬಾರದು. ಹೊಸ ಸರಕಾರ ಈ ಬಗ್ಗೆ ಗಮನ ಹರಿಸಬೇಕಾಗಿದೆ. ರಾಜ್ಯದಲ್ಲಿ ಸಂಗೀತ, ಸಂಸ್ಕೃತ, ಜಾನಪದ, ಮಹಿಳೆ, ತೋಟಗಾರಿಕೆ, ಸೇರಿದಂತೆ ಹಲವಾರು ವಿಷಯವಾರು ವಿಶ್ವವಿದ್ಯಾನಿಲಯಗಳು ರಾಜ್ಯದಲ್ಲಿ ಇವೆ. ಸಂಶೋಧನಾ ಕಾರ್ಯಕ್ಕಾಗಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯವಿದೆ. ಆದರೆ ವಾಸ್ತವಿಕವಾಗಿ ಈ ವಿಶ್ವವಿದ್ಯಾನಿಲಯಗಳು ಎಷ್ಟರ ಮಟ್ಟಿಗೆ ತಮ್ಮ ಕಾರ್ಯವ್ಯಾಪ್ತಿಯನ್ನು ಗುರುತಿಸಿ ಸೃಜನ ಶೀಲ ಕೆಲಸ ಮಾಡುತ್ತಿವೆ ಎಂಬುದರ ಬಗ್ಗೆ ಸರಿಯಾದ ಮೌಲ್ಯಮಾಪನ ನಡೆದಿಲ್ಲ. ಬಹುತೇಕ ವಿಶ್ವವಿದ್ಯಾನಿಲಯಗಳು ಅನುದಾನದ ಕೊರತೆಯಿಂದ ಕಂಗಾಲಾಗಿವೆ. ತಿಂಗಳಾನುಗಟ್ಟಲೆ ಅಲ್ಲಿ ಸಂಬಳವಿಲ್ಲದೆ ಸಿಬ್ಬಂದಿ ಕೆಲಸ ಮಾಡುತ್ತಾರೆ. ಈ ಬಗ್ಗೆ ಸರಕಾರ ಲಕ್ಷ್ಯ ವಹಿಸಬೇಕಿದೆ.

ಇನ್ನು ಪಿಎಚ್.ಡಿ. ವಿದ್ಯಾರ್ಥಿಗಳ ಸಮಸ್ಯೆ ಜಟಿಲವಾಗಿದೆ. ಈ ವಿದ್ಯಾರ್ಥಿಗಳಿಗೆ ಖಾಯಂ ಬೊಧಕರಷ್ಟೇ ಮಾರ್ಗದರ್ಶನ ಮಾಡಲು ಅವಕಾಶವಿದೆ. ಹೀಗಾಗಿ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರ ಕೊರತೆ ಎದ್ದು ಕಾಣುತ್ತಿದೆ.ಕುಲಪತಿಗಳನ್ನು ನೇಮಕ ಮಾಡುವಲ್ಲಿ ತೋರಿಸುವ ಆಸಕ್ತಿಯನ್ನು ಸರಕಾರ ಬೊಧಕ ಸಿಬ್ಬಂದಿಯನ್ನು ನೇಮಕ ಮಾಡುವಲ್ಲಿ ತೋರಿಸುತ್ತಿಲ್ಲ. ರಾಜ್ಯದ ಬಹುತೇಕ ಎಲ್ಲ ವಿಶ್ವವಿದ್ಯಾನಿಲಯಗಳು ಖಾಯಂ ಬೋಧಕ ಸಿಬ್ಬಂದಿಯ ಕೊರತೆಯನ್ನು ಎದುರಿಸುತ್ತಿವೆ. ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಅಧ್ಯಾಪಕರು ಹಾಗೂ ಅತಿಥಿ ಉಪನ್ಯಾಸಕರನ್ನು ಕಟ್ಟಿಕೊಂಡು ವಿಶ್ವವಿದ್ಯಾನಿಲಯಗಳು ಕಾರ್ಯ ನಿರ್ವಹಿಸುತ್ತಿವೆ. ಕೆಲವು ವಿಭಾಗಗಳಿಗಂತೂ ಮುಖ್ಯಸ್ಥರೇ ಇಲ್ಲ. ಕೆಲವು ಕಡೆ ಮುಖ್ಯಸ್ಥ ರಿದ್ದರೂ ಅಗತ್ಯದ ಬೊಧಕ ಸಿಬ್ಬಂದಿ ಇಲ್ಲ. ಈಗ ಕಾರ್ಯನಿರ್ವಹಿಸುವ ಅತಿಥಿ ಉಪನ್ಯಾಸಕರಿಗೆ ಸಂಬಳ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಲು ವಿಶ್ವವಿದ್ಯಾನಿಲಯಗಳು ಅನುದಾನದ ಕೊರತೆಯನ್ನು ಎದುರಿಸುತ್ತಿರುವ ಉದಾಹರಣೆಗಳಿವೆ.

ನಿರ್ದಿಷ್ಟ ಸಂಖ್ಯೆಯ ಖಾಯಂ ಉಪನ್ಯಾಸಕರು ಇಲ್ಲದ ಕಾರಣದಿಂದಾಗಿ ರಾಜ್ಯದ ವಿಶ್ವವಿದ್ಯಾನಿಲಯಗಳು ನ್ಯಾಕ್ ಮಾನ್ಯತೆಯನ್ನು ಪಡೆಯಲು ಸಾಧ್ಯವಾಗಿಲ್ಲ. ಸಿದ್ದರಾಮಯ್ಯನವರ ಸರಕಾರ ಮತ್ತು ನೂತನ ಶಿಕ್ಷಣ ಸಚಿವರು ಇತ್ತ ಗಮನವನ್ನು ಹರಿಸಬೇಕು. ರಾಜ್ಯದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಕೇಂದ್ರ ಸರಕಾರದ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಈ ಬಗ್ಗೆ ರಾಜ್ಯದ ಬಹುತೇಕ ವಿಶ್ವವಿದ್ಯಾನಿಲಯಗಳ ಕುಲಪತಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸದೆ ಮೌನ ತಾಳಿದ್ದಾರೆ. ಇದು ಸರಿಯಲ್ಲ. ಈ ಬಗ್ಗೆ ತಮ್ಮ ನಿಲುವನ್ನು ಅವರು ತಿಳಿಸಬೇಕು. ಒಟ್ಟಾರೆ ವಿಶ್ವವಿದ್ಯಾನಿಲಯಗಳ ಲೋಪಗಳನ್ನು ಸರಿಪಡಿಸಿ ಅವುಗಳಲ್ಲಿ ಮತ್ತೆ ಮೊದಲಿನಂತೆ ಸಂಶೋಧನೆ ಮತ್ತು ಸಂವಾದ ಚಟುವಟಿಕೆಗಳು ನಡೆಯುವಂತೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ನೋಡಿಕೊಳ್ಳಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News