ಮಣಿಪುರ: ಬೆತ್ತಲೆಯಾದದ್ದು ಯಾರು?

Update: 2023-07-21 06:40 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದ ಭೀಕರತೆಯನ್ನು ತೆರೆದಿಡುವ ವೀಡಿಯೊವೊಂದು ಮೋದಿ ಸರಕಾರವನ್ನು ಜಗತ್ತಿನ ಮುಂದೆ ಬೆತ್ತಲೆ ನಿಲ್ಲಿಸಿದೆ. ಕಳೆದ ಮೇ ತಿಂಗಳಲ್ಲಿ ಗುಂಪೊಂದು ಕುಕಿ ಸಮುದಾಯಕ್ಕೆ ಸೇರಿದ ಮಹಿಳೆಯರಿಬ್ಬರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ್ದಲ್ಲದೆ, ಅವರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಹೇಯ ಕೃತ್ಯ ವೀಡಿಯೊದಲ್ಲಿ ದಾಖಲಾಗದೇ ಇದ್ದಿದ್ದರೆ ಶಾಶ್ವತವಾಗಿ ದಫನವಾಗಿ ಬಿಡುತ್ತಿತ್ತು. ಇದೀಗ ಮಣಿಪುರದಲ್ಲಿ ನಡೆದ ಈ ಕೃತ್ಯದ ವಿರುದ್ಧ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಇದರಿಂದ ಭಾರತದ ಘನತೆಗೆ ವಿಶ್ವಮಟ್ಟದಲ್ಲಿ ಧಕ್ಕೆಯುಂಟಾಗಿದೆ.

ನೂರಕ್ಕೂ ಅಧಿಕ ಮಂದಿ ಬರ್ಬರವಾಗಿ ಕೊಲೆಯಾದಾಗ, ನೂರಾರು ಮನೆಗಳು ಸುಟ್ಟು ಹೋದಾಗ, ಸಾವಿರಾರು ಜನರು ನಿರ್ವಸಿತರಾದಾಗ ವೌನವಾಗಿದ್ದ ಪ್ರಧಾನಿ ಮೋದಿಯವರು, ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ತಮ್ಮ ‘ಆಘಾತ’ವನ್ನು ವ್ಯಕ್ತಪಡಿಸಿದ್ದಾರೆ. ಅವರು ವ್ಯಕ್ತಪಡಿಸಿರುವುದು ಇಬ್ಬರು ಮಹಿಳೆಯರ ಮೇಲೆ ನಡೆದ ಕೃತ್ಯದ ಕುರಿತಂತೆ. ಆದರೆ ಇಂತಹ ನೂರಾರು ಕೃತ್ಯಗಳು ಮಣಿಪುರದಲ್ಲಿ ಜರುಗಿವೆ ಎಂದು ಮಣಿಪುರದ ಮುಖ್ಯಮಂತ್ರಿಯೇ ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಿಪರ್ಯಾಸವೆಂದರೆ ಮಣಿಪುರವನ್ನು ಆಳುತ್ತಿರುವುದು ಬಿಜೆಪಿ ನೇತೃತ್ವದ ಸರಕಾರ. ಹಾಗಿದ್ದರೆ ಪ್ರಧಾನಿ ಮೋದಿಯವರು ತಮ್ಮ ಆಘಾತ, ಆಕ್ರೋಶವನ್ನು ಯಾರ ವಿರುದ್ಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲಿನ ರಾಜ್ಯ ಸರಕಾರದ ವಿರುದ್ಧವೆ? ಅಥವಾ ಅವುಗಳನ್ನು ತಡೆಯುವಲ್ಲಿ ಸೂಕ್ತ ಕ್ರಮ ಕೈಗೊಳ್ಳದ ಗೃಹ ಸಚಿವ ಅಮಿತ್ ಶಾ ವಿರುದ್ಧವೆ? ಅಥವಾ ಈವರೆಗೆ ಮಣಿಪುರದ ಹಿಂಸಾಚಾರವನ್ನು ತನ್ನಿಂದ ಮುಚ್ಚಿಟ್ಟ ಅಧಿಕಾರಿಗಳ ವಿರುದ್ಧವೆ? ಈ ಬಗ್ಗೆ ಇನ್ನೂ ವಿವರಗಳು ಹೊರಬಿದ್ದಿಲ್ಲ. ವಿಷಾದದ ಮಾತುಗಳಿಂದ ತನ್ನ ಮಾನ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಪ್ರಧಾನಿ ಮೋದಿಯವರು. ಮಣಿಪುರದಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸಿ ಅವರನ್ನು ಮೆರವಣಿಗೆ ಮಾಡಿರುವುದು, ಅವರ ಮೇಲೆ ಸಾಮೂಹಿಕ ಅತ್ಯಾಚಾರಗಳನ್ನು ಎಸಗಿರುವುದು ಕಳೆದ 80 ದಿನಗಳ ಮಣಿಪುರ ಹಿಂಸಾಚಾರದ ಒಂದು ಸಣ್ಣ ಬರ್ಬರ ದೃಶ್ಯ ಮಾತ್ರ. ಇಂತಹ ಪೈಶಾಚಿಕ ಕೃತ್ಯಗಳು ಹಿಂಸಾಚಾರದ ಸಂದರ್ಭದಲ್ಲಿ ಬಹಳಷ್ಟು ನಡೆದಿವೆ. ಮಣಿಪುರದ ಹಿಂಸಾಚಾರದ ಹಿಂದಿರುವ ರಾಜಕೀಯ ಶಕ್ತಿಗಳೇ ಈ ಎಲ್ಲ ಕೃತ್ಯಗಳ ನೇರ ಹೊಣೆಗಾರರು. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಗಳನ್ನು ತಡೆಯಲು ಕೇಂದ್ರ ಸರಕಾರ ಸರಿಯಾದ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸ್ವತಃ ಮಣಿಪುರದ ಬಿಜೆಪಿಯ ನಾಯಕರೇ ಮಾಧ್ಯಮಗಳ ಮುಂದೆ ಹೇಳಿಕೆಗಳನ್ನು ನೀಡಿದ್ದಾರೆ. ತಮ್ಮದೇ ಸರಕಾರದ ವಿರುದ್ಧ ಅವರು ಆಕ್ರೋಶವನ್ನು ವ್ಯಕ್ತಪಡಿಸಬೇಕಾದ ದೈನೇಸಿ ಸ್ಥಿತಿಯಲ್ಲಿದ್ದಾರೆ. ಆದುದರಿಂದ ಪ್ರಧಾನಿ ಮೋದಿಯವರೇ ಮಣಿಪುರದ ಹಿಂಸಾಚಾರದ ನೈತಿಕ ಹೊಣೆಯನ್ನು ಹೊತ್ತುಕೊಳ್ಳಬೇಕಾಗಿದೆ.

ಕುಕಿ ಬುಡಕಟ್ಟು ಸಮುದಾಯದ ಎಸ್‌ಟಿ ಸ್ಥಾನಮಾನವನ್ನು ಅಲ್ಲಿರುವ ಬಹುಸಂಖ್ಯಾತ ಮೈತೈ ಸಮುದಾಯಕ್ಕೂ ನೀಡಲು ಬಿಜೆಪಿ ಸರಕಾರ ಹೊರಟಿದ್ದೇ ಹಿಂಸಾಚಾರದ ಮೂಲವಾಗಿದೆ. ಕುಕಿ ಬುಡಕಟ್ಟು ಸಮುದಾಯದಲ್ಲಿ ಕ್ರೈಸ್ತ ಸಮುದಾಯಕ್ಕೆ ಸೇರಿದ ದೊಡ್ಡ ಸಂಖ್ಯೆಯ ಜನರಿದ್ದಾರೆ. ಅಲ್ಲಿನ ಮೈತೈ ಸಮುದಾಯವನ್ನು ಕುಕಿ ಸಮುದಾಯದ ವಿರುದ್ಧ ಎತ್ತಿಕಟ್ಟಲು ಸಂಘಪರಿವಾರ ನೇತೃತ್ವದಲ್ಲಿ ಭಾರೀ ಪ್ರಯತ್ನಗಳು ನಡೆಯುತ್ತಾ ಬರುತ್ತಿವೆ. ಕುಕಿ ಬುಡಕಟ್ಟು ಸಮುದಾಯಕ್ಕಿರುವ ಸಾಮಾಜಿಕ ಸ್ಥಾನಮಾನದ ಕಾರಣದಿಂದಾಗಿ ಇಲ್ಲಿನ ಭೂಮಿಯ ಮೇಲೆ ಹಕ್ಕು ಸಾಧಿಸಲು ಮೈತೈ ಸಮುದಾಯಕ್ಕೆ ಕಷ್ಟಕರವಾಗುತ್ತಿದೆ. ಮೈತೈ ಸಮುದಾಯವನ್ನು ಸಂಘಪರಿವಾರ ತನ್ನ ಹಿಂದುತ್ವ ರಾಜಕೀಯಕ್ಕೆ ಬಳಸಿಕೊಳ್ಳುವಲ್ಲಿ ಭಾಗಶಃ ಯಶಸ್ವಿಯಾಗಿದೆ. ಮೈತೈ ಮತ್ತು ಕುಕಿ ಸಮುದಾಯದ ನಡುವಿನ ಘರ್ಷಣೆಗೆ ಹಿಂದೂ-ಕ್ರಿಶ್ಚಿಯನ್ ಬಣ್ಣ ಬಳಿಯುವ ಪ್ರಯತ್ನವನ್ನು ಸಂಘಪರಿವಾರ ಮಾಡುತ್ತಿದೆ. ಮಣಿಪುರ ರಾಜ್ಯ ಸರಕಾರವು, ನಾಗಾ-ಕುಕಿ ಬುಡಕಟ್ಟು ಎಸ್‌ಟಿ ಸ್ಥಾನಮಾನವನ್ನು ಹೈಕೋರ್ಟನ್ನು ಬಳಸಿ ಮೈತೈ ಸಮುದಾಯಕ್ಕೆ ನೀಡಲು ಮುಂದಾದಾಗ ಇದರ ವಿರುದ್ಧ ಕುಕಿ ಸಮುದಾಯ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿತು. ಅಲ್ಲಿನ ಸರಕಾರ ಅದಾಗಲೇ ಅರಣ್ಯ ಭೂಮಿಯ ಹೆಸರಿನಲ್ಲಿ ಕುಕಿ ಸಮುದಾಯಕ್ಕೆ ಸಾಕಷ್ಟು ಕಿರುಕುಳಗಳನ್ನು ನೀಡುತ್ತಾ ಬಂದಿದೆ. ಒಂದು ವೇಳೆ ಎಸ್‌ಟಿ ಸ್ಥಾನಮಾನವನ್ನು ಮೈತೈ ಸಮುದಾಯ ತನ್ನದಾಗಿಸಿಕೊಂಡರೆ ಕುಕಿ ಸಮುದಾಯ ಇನ್ನಷ್ಟು ಅಸಮಾನತೆಗಳನ್ನು ಎದುರಿಸುವ ಸಾಧ್ಯತೆಗಳಿವೆ ಎಂದು ಕುಕಿ ಹೋರಾಟಗಾರರು ಬೀದಿಗಿಳಿದಿದ್ದರು. ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಮೈತೈ ಸಮುದಾಯ ಸಾಕಷ್ಟು ಪ್ರಾತಿನಿಧ್ಯವನ್ನು ಹೊಂದಿದ್ದರೂ ಅವರಿಗೆ ಎಸ್‌ಟಿ ಸ್ಥಾನಮಾನ ನೀಡುತ್ತಿರುವ ಉದ್ದೆೇಶವನ್ನು ಅವರು ಪ್ರಶ್ನಿಸಿದ್ದರು.ಈ ಪ್ರತಿಭಟನೆಯೇ ಹಿಂಸಾಚಾರ ಭುಗಿಲೇಳಲು ಒಂದು ನೆಪವಾಯಿತು. ಸ್ವತಃ ಮೈತೈ ಸಮುದಾಯಕ್ಕೆ ಸೇರಿರುವ ಮಣಿಪುರದ ಮುಖ್ಯಮಂತ್ರಿ ಈ ಹಿಂಸಾಚಾರವನ್ನು ತಡೆಯುವ ಇಚ್ಛಾಶಕ್ತಿಯನ್ನು ಹೊಂದಿಲ್ಲ ಎಂದು ಕುಕಿ ಸಮುದಾಯ ಆರೋಪಿಸುತ್ತಿದೆ.

ಪ್ರಧಾನ ಮಂತ್ರಿ ಮೋದಿಯವರು ಭಾರತದ ತನ್ನದೇ ಜನರ ಅಳಲನ್ನು ಆಲಿಸದಿದ್ದರೂ ಪರವಾಗಿಲ್ಲ, ಅಮೆರಿಕ ಪ್ರವಾಸದಲ್ಲಿದ್ದಾಗ ಅವರ ಅಮೆರಿಕದ ಮಿತ್ರರ ಮಾತುಗಳನ್ನಾದರೂ ಆಲಿಸಬೇಕಾಗಿತ್ತು. ಅಮೆರಿಕದ ಪತ್ರಕರ್ತರು ಭಾರತದ ಪ್ರಜಾಸತ್ತೆ ಅಪಾಯದಲ್ಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಗಮನ ಸೆಳೆದಿದ್ದರು. ಅಮೆರಿಕದ ಮಾಜಿ ಅಧ್ಯಕ್ಷ ಒಬಾಮ ಸೇರಿದಂತೆ ಹಲವು ನಾಯಕರು ಭಾರತದಲ್ಲಿ ನಡೆಯುತ್ತಿರುವ ಮಾನವಹಕ್ಕು ಉಲ್ಲಂಘನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ವಿಪರ್ಯಾಸವೆಂದರೆ, ಈ ದೇಶದ ವಿತ್ತ ಸಚಿವರು, ರಕ್ಷಣಾ ಸಚಿವರು ಅಮೆರಿಕದ ನಾಯಕರ ವಿರುದ್ಧ ತಿರುಗಿ ಬಿದ್ದಿದ್ದರು. ‘‘ಭಾರತಕ್ಕೆ ಬುದ್ಧಿವಾದ ಹೇಳುವ ಅಗತ್ಯವಿಲ್ಲ’’ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ ವಿರುದ್ಧ ಪ್ರತಿ ಟೀಕೆಗಳನ್ನು ಮಾಡಿದ್ದರು. ಒಬಾಮಾ ಮತ್ತು ಅಮೆರಿಕ ಪತ್ರಕರ್ತರು ಪ್ರಧಾನಿ ಮೋದಿಯ ಮುಖಕ್ಕೆ ಕನ್ನಡಿ ಹಿಡಿದಿದ್ದರೆ, ಆ ಕನ್ನಡಿಗೇ ಉಗುಳುವ ಮೂಲಕ ತಮ್ಮ ಮುಖದ ವಿರೂಪಗಳನ್ನು ಮುಚ್ಚಿಕೊಳ್ಳಬಹುದು ಎಂದು ಭಾರತದ ನಾಯಕರು ಭಾವಿಸಿದರು. ಆದರೆ ಇದೀಗ ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದಿರುವ ಬರ್ಬರ ಕೃತ್ಯಗಳು ಭಾರತದ ಮಾನವನ್ನು ವಿಶ್ವದ ಮುಂದೆ ಹರಾಜಿಗಿಟ್ಟಿದೆ. ನಿಜಕ್ಕೂ ಮಣಿಪುರದಲ್ಲಿ ದುಷ್ಕರ್ಮಿಗಳು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿರುವುದು ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು. ಮೋದಿಯ ಭಾರತ ಜಗತ್ತಿನ ಮುಂದೆ ಬೆತ್ತಲಾಗಿದೆ.

ಗುಜರಾತಿನಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಕಗ್ಗೊಲೆಗಳನ್ನು ಮಾಡಿ ಜೀವಾವಧಿ ಶಿಕ್ಷೆ ಎದುರಿಸುತ್ತಿದ ಆರೋಪಿಗಳನ್ನು ಬಿಡುಗಡೆ ಮಾಡಿದ ಸರಕಾರ ಇದೀಗ ಮಣಿಪುರದಲ್ಲಿ ನಡೆದಿರುವ ಕೃತ್ಯಕ್ಕೆ ನ್ಯಾಯ ನೀಡುವ ಮಾತನ್ನಾಡುತ್ತಿದೆ. ಸ್ವತಃ ಆರೋಪಿ ಸ್ಥಾನದಲ್ಲಿ ನಿಂತಿರುವ ಸರಕಾರವೊಂದು ಅಪರಾಧಿಗಳಿಗೆ ಶಿಕ್ಷೆ ನೀಡುತ್ತದೆ ಎನ್ನುವುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಮಣಿಪುರ ಹಿಂಸಾಚಾರದಲ್ಲಿ ಕಳೆದು ಹೋದ ತನ್ನ ಮಾನವನ್ನು ಉಳಿಸಿಕೊಳ್ಳಲು ಕೇಂದ್ರ ಸರಕಾರದ ಮುಂದಿರುವ ಒಂದೇ ಒಂದು ದಾರಿಯೆಂದರೆ, ಅಲ್ಲಿನ ಸರಕಾರವನ್ನು ತಕ್ಷಣ ವಜಾಗೊಳಿಸುವುದು. ಪ್ರಧಾನಿ ಮೋದಿಯವರ ಮೊಸಳೆ ಕಣ್ಣೀರು ಮಣಿಪುರದ ನೋವುಗಳನ್ನು ಇನ್ನಷ್ಟು ಹೆಚ್ಚಿಸಬಹುದೇ ಹೊರತು, ಯಾವುದೇ ಪರಿಹಾರ ನೀಡಲಾರದು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News