ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತಂದ ಮೋದಿ ಹೇಳಿಕೆ

Update: 2024-04-15 07:02 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಈ ದೇಶದ ಎರಡು ಕೋಟಿಗೂ ಅಧಿಕ ಮಂದಿ ಪೌಷ್ಟಿಕ ಆಹಾರದ ಕೊರತೆಯಿಂದ ನರಳುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಪ್ರಧಾನಿ ಮೋದಿಯವರು, ಪೌಷ್ಟಿಕ ಆಹಾರದ ಬಗ್ಗೆಯೇ ಸಾರ್ವಜನಿಕವಾಗಿ ಅತ್ಯಂತ ಕೀಳಾಗಿ ಮಾತನಾಡಿದ್ದಾರೆ. ತಿನ್ನುವ ಆಹಾರವನ್ನೂ ಚುನಾವಣೆಯ ವಿಷಯವಾಗಿಸಿರುವ ಪ್ರಧಾನಿ ಮೋದಿಯವರು, ಪೌಷ್ಟಿಕ ಆಹಾರದ ಬಗ್ಗೆಯೇ ಕೀಳಾಗಿ ಮಾತನಾಡಿ, ಸಸ್ಯಾಹಾರಿ ಸಮುದಾಯವನ್ನು ಓಲೈಸಲು ಮುಂದಾಗಿದ್ದಾರೆ. ವಿಪಕ್ಷ ನಾಯಕರಿಬ್ಬರು ಮಾಂಸಾಹಾರ ಸೇವಿಸುವ ಹಳೆಯ ವೀಡಿಯೊವೊಂದನ್ನು ಮುಂದಿಟ್ಟುಕೊಂಡು ಮಾತನಾಡಿದ ಪ್ರಧಾನಿ ಮೋದಿ, ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸುವ ಮೂಲಕ ಹಿಂದೂಗಳ ಭಾವನೆಗಳಿಗೆ ಇವರು ಧಕ್ಕೆ ತರುತ್ತಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ. ಈ ದೇಶದ 67 ಲಕ್ಷ ಕಂದಮ್ಮಗಳಿಗೆ ಒಪ್ಪೊತ್ತಿನ ಆಹಾರಕ್ಕೂ ಗತಿಯಿಲ್ಲ ಎನ್ನುವ ಅಂಶವನ್ನು ಕೇಂದ್ರ ಆರೋಗ್ಯ ಸಚಿವಾಲಯದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಹೇಳುತ್ತದೆ. ಆರರಿಂದ 24 ತಿಂಗಳ ವಯಸ್ಸಿನ ಮಕ್ಕಳು ಆಹಾರವೇ ಇಲ್ಲದೆ ನರಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಹೊರ ಬಿದ್ದಿರುವ ಹಸಿವು ಸೂಚ್ಯಂಕದಲ್ಲಿ ಭಾರತ ಅತ್ಯಂತ ಕಳಪೆ ಸಾಧನೆಯನ್ನು ಮಾಡಿದೆ. ಹಸಿವು ಸೂಚ್ಯಂಕದಲ್ಲಿ ಭಾರತ ನೆರೆಯ ಬಾಂಗ್ಲಾ, ನೇಪಾಳ, ಶ್ರೀಲಂಕಕ್ಕಿಂತಲೂ ಕೆಳ ಸ್ಥಾನದಲ್ಲಿದೆ ಎನ್ನುವುದು ಬೆಳಕಿಗೆ ಬಂದಿದೆ. ಅಪೌಷ್ಟಿಕತೆಯ ಕಾರಣದಿಂದ ಈ ದೇಶದ 15ರಿಂದ 24 ವರ್ಷ ವಯಸ್ಸಿನ ಮಹಿಳೆಯರಲ್ಲಿ ರಕ್ತಹೀನತೆಯ ಪ್ರಮಾಣ ಶೇ.58.1ರಷ್ಟಿದ್ದು, ಇದು ಅವರ ಆರೋಗ್ಯದ ಮೇಲೆ ತೀವ್ರ ಪರಿಣಾಮವನ್ನು ಬೀರಿದೆ. ಗರ್ಭಿಣಿಯರು ಹೆರಿಗೆ ಸಮಯದಲ್ಲಿ ಮರಣವಪ್ಪುವ ಅಥವಾ ಶಾಶ್ವತ ರೋಗಪೀಡಿತರಾಗುವ ಪ್ರಮಾಣ ಈ ಅಪೌಷ್ಟಿಕತೆಯಿಂದಾಗಿ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ಎಲ್ಲರಿಗೂ ಪೌಷ್ಟಿಕ ಆಹಾರ ಒದಗಿಸುವ ಕುರಿತಂತೆ ಚುನಾವಣಾ ಪ್ರಚಾರದಲ್ಲಿ ಜನರಿಗೆ ಪ್ರಧಾನಿಯಾಗಿ ಮೋದಿ ಭರವಸೆ ನೀಡಬೇಕಾಗಿತ್ತು. ವಿಷಾದನೀಯ ಸಂಗತಿಯೆಂದರೆ, ಪೌಷ್ಟಿಕ ಆಹಾರದ ವಿರುದ್ಧವೇ ಅವರು ದಾಳಿ ನಡೆಸಿದ್ದಾರೆ. ಈ ಮೂಲಕ ದೇಶದಲ್ಲಿ ಹೆಚ್ಚುತ್ತಿರುವ ಅಪೌಷ್ಟಿಕತೆಯ ಹಿಂದೆ ಯಾರಿದ್ದಾರೆ ಎನ್ನುವುದನ್ನು ದೇಶ ತಡವಾಗಿಯಾದರೂ ಅರ್ಥ ಮಾಡಿಕೊಳ್ಳುತ್ತಿದೆ.

‘ಮಾಂಸಾಹಾರ ಮೊಗಲರ ಮನಸ್ಥಿತಿಯಾಗಿದೆ’ ಎನ್ನುವ ಮೂಲಕ, ಸ್ವತಃ ಮಾಂಸಾಹಾರಿಯಾಗಿದ್ದೂ ವಿಶ್ವಾದ್ಯಂತ ಹಿಂದೂ ಧರ್ಮದ ಹಿರಿಮೆಯನ್ನು ಹರಡಿದ ಸ್ವಾಮಿ ವಿವೇಕಾನಂದರನ್ನು ನರೇಂದ್ರ ಮೋದಿಯವರು ಅವಮಾನಿಸಿದ್ದಾರೆ. ಈ ದೇಶದಲ್ಲಿ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆಯಾಗುತ್ತಿದೆ ಎಂದು ಪದೇ ಪದೇ ಸಾರ್ವಜನಿಕ ವೇದಿಕೆಗಳಲ್ಲಿ ಗೋಳಾಡುವ ಪ್ರಧಾನಿಯವರು ಮಾಂಸಾಹಾರದ ಕುರಿತಂತೆ ಕೀಳಭಿರುಚಿಯ ಮಾತನ್ನಾಡಿ, ಈ ದೇಶದ ಬಹುಸಂಖ್ಯಾತ ಮಾಂಸಾಹಾರಿ ಸಮುದಾಯಗಳನ್ನು ಅವಮಾನಿಸಿದ್ದಾರೆ . ಎರಡು ವರ್ಷಗಳ ಹಿಂದೆ, ಇದೇ ಪ್ರಧಾನಿ ಮೋದಿ ಸರಕಾರ ಬಿಡುಗಡೆ ಮಾಡಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ವರದಿ ಪ್ರಕಾರ, ದೇಶದಲ್ಲಿ ಮಾಂಸಾಹಾರ ಸೇವಿಸುವವರ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಕೇರಳದಲ್ಲಿ ಶೇ. 97.4 ಮಂದಿ ಮಾಂಸಾಹಾರಿಗಳಾಗಿದ್ದರೆ, ಕರ್ನಾಟಕದಲ್ಲಿ ಶೇ. 79.1 ಜನರು ಮಾಂಸಾಹಾರಿಗಳಾಗಿದ್ದಾರೆ. ಆಂಧ್ರ ಪ್ರದೇಶದಲ್ಲಿ ಶೇ. 98.4 ಮಂದಿ, ದಿಲ್ಲಿಯಲ್ಲಿ ಶೇ. 63.2 ಜನರು, ಉತ್ತರ ಪ್ರದೇಶದಲ್ಲಿ ಶೇ. 60 ಮಂದಿ, ಅಸ್ಸಾಮಿನಲ್ಲಿ 78.6 ಮಂದಿ, ಪಶ್ಚಿಮ ಬಂಗಾಳದಲ್ಲಿ 98.7 ಮಂದಿ ಮಾಂಸಾಹಾರಿಗಳಾಗಿದ್ದಾರೆ. ತಮಿಳು ನಾಡಿನಲ್ಲಿ 97.8 ಮಂದಿ ಮಾಂಸಾಹಾರವನ್ನು ನೆಚ್ಚಿಕೊಂಡಿದ್ದಾರೆ. ಪಶ್ಚಿಮಬಂಗಾಳದಲ್ಲಿ ಬ್ರಾಹ್ಮಣರೂ ಮಾಂಸಾಹಾರಿಗಳಾಗಿರುವುದು ವಿಶೇಷವಾಗಿದೆ. ಮಾಂಸಾಹಾರದ ಬಗ್ಗೆ ಕೀಳು ಮಾತನಾಡುವ ಮೂಲಕ, ಈ ದೇಶದ ಬಹುಸಂಖ್ಯಾತ ಮಾಂಸಾಹಾರಿಗಳ ಭಾವನೆಗಳಿಗೆ ಪ್ರಧಾನಿ ಮೋದಿಯವರು ಧಕ್ಕೆ ತಂದಿದ್ದಾರೆ. ಅಷ್ಟೇ ಅಲ್ಲ, ಈ ಮೂಲಕ ದೇಶವನ್ನು ಇನ್ನಷ್ಟು ಹಸಿವಿನ ಕಡೆಗೆ, ಅಪೌಷ್ಟಿಕತೆಯ ಕಡೆಗೆ, ಅನಾರೋಗ್ಯದ ಕಡೆಗೆ ಮುನ್ನಡೆಸುವ ‘ಗ್ಯಾರಂಟಿ’ಯನ್ನು ಜನತೆಗೆ ನೀಡಿದ್ದಾರೆ.

ಇಷ್ಟಕ್ಕೂ ಶ್ರಾವಣ ಮಾಸದಲ್ಲಿ ಮಾಂಸ ಸೇವಿಸುವುದು ಕೆಲವರಿಗೆ ನಿಷೇಧವಿರಬಹುದು. ಇದೇ ಸಂದರ್ಭದಲ್ಲಿ ದಕ್ಷಿಣ ಭಾರತವೂ ಸೇರಿದಂತೆ ದೇಶದ ಹಲವು ಪ್ರದೇಶಗಳಲ್ಲಿ ಶ್ರಾವಣ ಮಾಸವನ್ನು ಬೇರೆ ಬೇರೆ ಹೆಸರಿನಲ್ಲಿ ಆಚರಿಸಲಾಗುತ್ತಿದ್ದು, ಮಾಂಸಾಹಾರವೇ ಈ ಸಂದರ್ಭದಲ್ಲಿ ಪ್ರಧಾನವಾಗಿರುತ್ತದೆ. ಕರ್ನಾಟಕದಲ್ಲೂ ಯುಗಾದಿ ಸಂದರ್ಭದಲ್ಲಿ ಮಾಂಸಾಹಾರಿಗಳು ಸಂಭ್ರಮದಿಂದ ಹೊಸತೊಡಕನ್ನು ಆಚರಿಸುತ್ತಾರೆ. ಪಶ್ಚಿಮ ಬಂಗಾಳವೂ ಸೇರಿದಂತೆ ಈಶಾನ್ಯ ಭಾರತದಲ್ಲೂ ಈ ಸಂದರ್ಭದಲ್ಲಿ ಮಾಂಸಾಹಾರದ ಸಂಭ್ರಮವಿರುತ್ತದೆ. ಇವರೆಲ್ಲರ ಹಬ್ಬಗಳನ್ನು , ಅವರ ಆಹಾರ ಪದ್ಧತಿಯನ್ನು ಪ್ರಧಾನಿ ಮೋದಿಯವರು ಈ ಮೂಲಕ ಅವಮಾನಿಸಿದ್ದಾರೆ.ಅವರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ತಾನು ಒಂದು ವಾರ ಉಪವಾಸ ಇದ್ದೇನೆ ಎನ್ನುವ ಪ್ರಧಾನಿ, ಈ ದೇಶದ 60 ಲಕ್ಷ ಮಕ್ಕಳು ಶಾಶ್ವತವಾಗಿ ಉಪವಾಸವನ್ನು ಆಚರಿಸುತ್ತಿದ್ದಾರೆ ಎನ್ನುವುದನ್ನು ಮರೆತಿದ್ದಾರೆ. ಭಾರತ ಹಸಿವಿನಲ್ಲಿ 111 ನೇ ಸ್ಥಾನಕ್ಕೆ ತಳ್ಳಲ್ಪಟ್ಟಿರುವ ದಿನಗಳಲ್ಲಿ, ಮೋದಿಯ ಉಪವಾಸ ಭಾರತದ ಹಸಿವಿನ ಬಹುದೊಡ್ಡ ಅಣಕವಾಗಿದೆ. ಅವರು ಭಾರತೀಯ ಬಡವರ ಹಸಿವನ್ನು ಈ ಮೂಲಕ ವ್ಯಂಗ್ಯವಾಡಿದ್ದಾರೆ.

ಮಾಂಸಾಹಾರದ ಮೂಲಕವೇ ಈ ದೇಶದ ಬಹುಸಂಖ್ಯಾತ ಜನರು ಬದುಕು ಕಟ್ಟಿಕೊಂಡಿದ್ದಾರೆ. ಭಾರತದ ಕರಾವಳಿಯು ಮೀನುಗಾರಿಕೆಯ ಮೂಲಕ ದೇಶದ ಆರ್ಥಿಕತೆಯನ್ನು ಗಟ್ಟಿಗೊಳಿಸಿದೆ. ಸಾವಿರಾರು ಮೀನುಗಾರರು ಪ್ರತಿದಿನ ಕಡಲಿಗೆ ತೆರಳಿ ಜನರ ಪೌಷ್ಟಿಕ ಆಹಾರದ ಅಗತ್ಯವನ್ನು ಪೂರೈಸುತ್ತಾ, ತಮ್ಮ ಬದುಕನ್ನು ಕಟ್ಟಿಕೊಂಡು ಬರುತ್ತಿದ್ದಾರೆ. ಮಹಿಳೆಯರು, ಪುರುಷರು ಎನ್ನದೆ ಲಕ್ಷಾಂತರ ಮಂದಿ ಈ ಮೀನುಗಾರಿಕೆಯನ್ನು ಅವಲಂಬಿಸಿದ್ದಾರೆ. ಕೋಟ್ಯಂತರ ರೂಪಾಯಿಯ ವಿದೇಶಿ ವಿನಿಮಯವನ್ನು ಈ ಮೀನುಗಾರಿಕೆಯಿಂದ ದೇಶ ತನ್ನದಾಗಿಸಿಕೊಳ್ಳುತ್ತಿದೆ. ಆದರೆ ಪ್ರಧಾನಿ ಮೋದಿಯವರು, ಈ ಮೀನುಗಾರಿಕೆಯನ್ನು ಅವಲಂಬಿಸಿರುವ ಲಕ್ಷಾಂತರ ಜನರನ್ನು ‘ಮೊಗಲರ ಸಾಲಿಗೆ’ ಸೇರಿಸಿದ್ದಾರೆ. ಪಶ್ಚಿಮಬಂಗಾಳದಂತಹ ರಾಜ್ಯಗಳಲ್ಲಿ ಬ್ರಾಹ್ಮಣರು ಮದುವೆಯಂತಹ ಶುಭ ಕಾರ್ಯಗಳಲ್ಲಿ ಮೀನು ಪದಾರ್ಥಕ್ಕೆ ವಿಶೇಷ ಆದ್ಯತೆಯನ್ನು ನೀಡುತ್ತಾರೆ. ಇವೆಲ್ಲದರ ಬಗ್ಗೆ ಎಳ್ಳಷ್ಟು ಅರಿವನ್ನು ಹೊಂದಿರದ ಪ್ರಧಾನಿ ಮೋದಿ, ಈ ದೇಶದ ಶೇ. 10 ರಷ್ಟಿರುವ ಸಸ್ಯಾಹಾರಿಗಳ ಪ್ರತಿನಿಧಿಯಾಗಲು ಹೊರಟಿರುವುದು ವಿಷಾದನೀಯ. ಇಂದು ಯಾಂತ್ರೀಕೃತ ಮೀನುಗಾರಿಕೆ ಸಮುದ್ರವನ್ನು ಬರಿದುಗೊಳಿಸುತ್ತಿದೆ. ಕಾರ್ಪೊರೇಟ್ ಶಕ್ತಿಗಳು ಈ ಮೀನುಗಾರಿಕೆಯ ಮೇಲೆ ನಿಯಂತ್ರಣ ಸಾಧಿಸಲು ಯತ್ನಿಸುತ್ತಿವೆ. ಇವರಿಗೆ ನೇರವಾಗಿ ಪ್ರಧಾನಿ ಮೋದಿ ಸಹಕರಿಸುತ್ತಿದ್ದಾರೆ. ನಿಧಾನಕ್ಕೆ ಕರಾವಳಿಯ ಮೊಗವೀರರು ಸೇರಿದಂತೆ ಮೀನುಗಾರರು ಕಡಲಿನ ಮೇಲೆ ತಮ್ಮ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ. ಭಾರತದಲ್ಲಿ ಗೋಮಾಂಸವನ್ನು ನಿಷೇಧಿಸಿ, ಅದನ್ನು ವಿದೇಶಗಳಿಗೆ ಸಾಗಿಸಲು ಬೃಹತ್ ಉದ್ಯಮಿಗಳಿಗೆ ಅನುಕೂಲ ಮಾಡಿಕೊಟ್ಟಂತೆಯೇ, ಮೀನುಗಾರಿಕೆಯ ಹಕ್ಕನ್ನೂ ಮೋದಿ ಸರಕಾರ ಜನರಿಂದ ಕಸಿದುಕೊಳ್ಳಲಿದೆೆಯೇ ಎನ್ನುವ ಆತಂಕ ಎದುರಾಗಿದೆ. ಗೋಮಾಂಸದ ವಿರುದ್ಧ ಸರಕಾರ ಅನುಸರಿಸಿದ ನೀತಿ ಅಂತಿಮವಾಗಿ ಇಡೀ ಹೈನೋದ್ಯಮದ ಮೇಲೆ, ಆಹಾರ ಸರಪಣಿಯ ಮೇಲೆ ದುಷ್ಪರಿಣಾಮವನ್ನು ಬೀರಿತು. ಜನಸಾಮಾನ್ಯರು ತಮ್ಮ ಜಾನುವಾರುಗಳನ್ನು ಮಾರುವ ಹಕ್ಕು ಕಳೆದುಕೊಂಡು ಹೈನೋದ್ಯಮದಲ್ಲಿ ನಷ್ಟ ಅನುಭವಿಸುತ್ತಿದ್ದಾರೆ. ಇದೀಗ ಕಾರ್ಪೊರೇಟ್ ಶಕ್ತಿಗಳ ಕಣ್ಣು ಮೀನುಗಾರಿಕೆಯ ಮೇಲೆ ಬಿದ್ದಿದೆ. ಆದುದರಿಂದಲೇ, ಪ್ರಧಾನಿ ಮೋದಿಯವರ ಮೂಲಕ ಮಾಂಸಾಹಾರಿಗಳನ್ನೆಲ್ಲ ‘ಮೊಗಲರಿಗೆ ಹೋಲಿಸಿ’ ಹಂತಹಂತವಾಗಿ ಮಾಂಸಾಹಾರ ನಿಷೇಧಕ್ಕೆ ಯತ್ನಿಸುತ್ತಿದ್ದಾರೆ. ಈ ದೇಶದ ಆರ್ಥಿಕತೆ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುವ ಅತ್ಯಂತ ಪೌಷ್ಟಿಕ ಆಹಾರವಾಗಿರುವ ಮೀನು ಮಾಂಸಗಳನ್ನು ಜನ ಸಾಮಾನ್ಯರ ಕೈಯಿಂದ ಕಸಿದು, ಅದನ್ನು ರಫ್ತು ಮಾಡಿ ಕೋಟ್ಯಂತರ ಹಣ ಬಾಚಲು ಬೃಹತ್ ಉದ್ಯಮಿಗಳು ಸಂಚು ನಡೆಸಿದ್ದಾರೆ. ಅದರ ಭಾಗವಾಗಿಯೇ ಮೋದಿಯವರು ‘ಮಾರ್ಜಾಲ ಸನ್ಯಾಸಿ’ಯ ವೇಷದಲ್ಲಿ ‘ಉಪವಾಸ’ ಕೂತಿದ್ದಾರೆ. ಮಾಂಸಾಹಾರಿಗಳ ಬಗ್ಗೆ ಅವಿವೇಕದ ಮಾತುಗಳನ್ನಾಡಿ, ದೇಶದ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತಂದಿರುವ ಪ್ರಧಾನಿ ಮೋದಿಯವರು, ಈ ದೇಶದ ಬಹುಜನ ಸಂಸ್ಕೃತಿಯ ಮೇಲೆ ನಡೆಸಿದ್ದಾರೆ. ಇದನ್ನು ದೇಶ ಒಕ್ಕೊರಲಲ್ಲಿ ಖಂಡಿಸಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News