ಮುಂಬೈ ಹೋರ್ಡಿಂಗ್ ದುರಂತ: ರಾಜ್ಯದ ನಗರಗಳು ಎಚ್ಚೆತ್ತುಕೊಳ್ಳಲಿ

Update: 2024-05-18 05:31 GMT

Photo: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಆಯುಷ್ಯ ಮುಗಿದ ಕಟ್ಟಡಗಳು ಕುಸಿದು ಸಾವು ನೋವುಗಳು ಸಂಭವಿಸುವುದು ಮುಂಬೈ ಬದುಕಿಗೆ ತೀರಾ ಸಹಜ ಎಂದು ಅಲ್ಲಿನ ಜನರು ಒಪ್ಪಿಕೊಂಡು ಬಿಟ್ಟಿದ್ದಾರೆ. ಆದರೆ ಇತ್ತೀಚೆಗೆ ಮುಂಬೈನಲ್ಲಿ ನಡೆದಿರುವ ‘ಹೋರ್ಡಿಂಗ್ ದುರಂತ’ ಯಾವುದೇ ಅಕ್ರಮ ಕಟ್ಟಡ ದುರಂತಗಳನ್ನು ಮೀರಿಸುವಂತಹದ್ದು. ಒಂದು ಬೃಹತ್ ಜಾಹೀರಾತು ಫಲಕ (ಹೋರ್ಡಿಂಗ್) ಕುಸಿದು ಸುಮಾರು 16 ಜನರು ಮೃತಪಟ್ಟಿರುವುದು ಮಾತ್ರವಲ್ಲ, 70ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಘಟನೆ ನಡೆದು ಐದು ದಿನ ಕಳೆದಿವೆೆಯಾದರೂ ಸ್ಥಳೀಯ ಜನರು ಆಘಾತದಿಂದ ಚೇತರಿಸಿಕೊಂಡಿಲ್ಲ. ಅವಶೇಷಗಳನ್ನು ಪೂರ್ಣ ಪ್ರಮಾಣದಲ್ಲಿ ತೆರವುಗೊಳಿಸುವುದಕ್ಕೂ ಸಾಧ್ಯವಾಗಿಲ್ಲ ಎನ್ನುವುದೇ ದುರಂತದ ತೀವ್ರತೆಯನ್ನು ಹೇಳುತ್ತದೆ. ಸೋಮವಾರ ಸಂಜೆ ಧೂಳು ಬಿರುಗಾಳಿ ಮತ್ತು ಭಾರೀ ಮಳೆಯ ಸಂದರ್ಭದಲ್ಲಿ 120ಘಿ120 ಅಡಿ ಗಾತ್ರದ ಜಾಹೀರಾತು ಫಲಕ ಸಮೀಪದ ಪೆಟ್ರೋಲ್ ಪಂಪ್ ಮೇಲೆ ಕುಸಿದು ಬಿದ್ದಿದ್ದು, ವಾಹನಗಳೊಂದಿಗೆ ಜನರೂ ಅದರಡಿ ಸಿಕ್ಕಿಕೊಂಡಿದ್ದರು. 16 ಜನರು ಮೃತಪಟ್ಟಿದ್ದು,70ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಗುರುವಾರದ ಹೊತ್ತಿಗೆ 30 ದ್ವಿಚಕ್ರ,31 ಚತುಷ್ಚಕ್ರ ವಾಹನಗಳು,ಎಂಟು ಆಟೋರಿಕ್ಷಾಗಳು ಮತ್ತು ಎರಡು ಘನ ವಾಹನಗಳು ಸೇರಿದಂತೆ ಹಾನಿಗೀಡಾದ ಒಟ್ಟು 73 ವಾಹನಗಳನ್ನು ಅವಶೇಷಗಳಡಿಯಿಂದ ಹೊರಕ್ಕೆ ತೆಗೆಯಲಾಗಿದೆ. ಮುಂಬೈಯಲ್ಲಿ ಈ ಹಿಂದೆ ಹಲವು ಅಕ್ರಮ ಕಟ್ಟಡಗಳು ಮಳೆಗಾಲದಲ್ಲಿ ಕುಸಿದಿವೆ. ಆದರೆ ಈ ಪ್ರಮಾಣದಲ್ಲಿ ಸಾವು ನೋವುಗಳು ಸಂಭವಿಸಿರಲಿಲ್ಲ.

ಸಾಧಾರಣವಾಗಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಮಳೆ, ಗಾಳಿಗೆ ಮರಗಳು ಉರುಳಿ ಸಂಭವಿಸುವ ಸಾವು ನೋವುಗಳನ್ನು ಮಾಧ್ಯಮಗಳು ಅತಿ ರಂಜಿತವಾಗಿ ವರದಿ ಮಾಡುತ್ತವೆ. ಆದರೆ ಘಾಟ್‌ಕೋಪರ್‌ನಲ್ಲಿ ಮನುಷ್ಯ ಹಣವೊಂದನ್ನೇ ಗುರಿಯಾಗಿಸಿಕೊಂಡು ಅಪ್ಪಟ ಸ್ವಾರ್ಥಕ್ಕಾಗಿ ದುರಂತವನ್ನು ಆಹ್ವಾನಿಸಿಕೊಂಡಿದ್ದಾನೆ. ಇಲ್ಲಿ ಒಬ್ಬನ ಹಣದ ಆಸೆಗಾಗಿ ಹಲವು ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳಬೇಕಾಯಿತು. ಪೆಟ್ರೋಲ್ ಪಂಪ್ ಮೇಲೆ ಹೋರ್ಡಿಂಗ್ ಕುಸಿದಿರುವುದರಿಂದ ದುರಂತ ಇನ್ನಷ್ಟು ಭೀಕರವಾಗುವ ಸಾಧ್ಯತೆಗಳಿದ್ದವು. ಈ ದುರಂತ ಘಾಟ್‌ಕೋಪರ್‌ಗೆ

ಸೀಮಿತವಾಗಬೇಕಾಗಿಲ್ಲ. ಬೃಹತ್ ನಗರಗಳಲ್ಲಿ ಇಂತಹ ಹೋರ್ಡಿಂಗ್‌ಗಳು ಅಣಬೆಗಳಂತೆ ತಲೆಯೆತ್ತುತ್ತಿವೆ. ಯಾಕೆಂದರೆ ಹೋರ್ಡಿಂಗ್ ಮಾಫಿಯಾ ಬಹುದೊಡ್ಡ ಕಾಳ ದಂಧೆೆಯಾಗಿ ಬದಲಾಗಿವೆ. ಇದರ ಹಿಂದೆ ಹಲವು ಪಾತಕಿಗಳೂ ಕೈ ಜೋಡಿಸಿದ್ದಾರೆ. ಬೃಹತ್ ಶಹರಗಳಲ್ಲಿ ಖಾಸಗಿ ಭೂಮಿಯಲ್ಲಿ ತಲೆಯೆತ್ತುತ್ತಿರುವ ಈ ಹೋರ್ಡಿಂಗ್‌ಗಳು ಜನಸಾಮಾನ್ಯರ ಪಾಲಿಗೆ ‘ಯಮರಾಯ ಪ್ರಾಯೋಜಿತ’ ಮರಣ ಜಾಹೀರಾತಾಗಿ ಪರಿಣಮಿಸಿವೆ. ಇವುಗಳು ಸೃಷ್ಟಿಸುತ್ತಿರುವ ಅನಾಹುತಗಳಿಗೆ ನಗರಪಾಲಿಕೆ ಅಧಿಕಾರಿಗಳು ಕಣ್ಣಿದ್ದು ಕುರುಡರು, ಕಿವಿಯಿದ್ದೂ ಕಿವುಡರಾಗಿದ್ದಾರೆ. ಇದೀಗ ಘಾಟ್‌ಕೋಪರ್‌ನಲ್ಲಿ ನಡೆದಿರುವ ದುರಂತ ಭಾರೀ ಸದ್ದು ಮಾಡಿರುವುದರಿಂದ, ತಮ್ಮ ಕಿವಿ ಮತ್ತು ಕಣ್ಣನ್ನು ತೆರೆಯುವುದು ಅವರಿಗೆ ಅನಿವಾರ್ಯವಾಗಿ ಬಿಟ್ಟಿದೆ.

ಘಾಟ್‌ಕೋಪರ್ ದುರಂತ ಅಪಘಾತವೋ, ಅಪರಾಧವೋ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾದರೆ ಅದರ ಹಿಂದಿರುವ ಶಕ್ತಿಗಳನ್ನು ಗುರುತಿಸಬೇಕಾಗಿದೆ. ಮೇ 13ರಂದು ಪೆಟ್ರೋಲ್ ಬಂಕ್ ಮೇಲೆ ಕುಸಿದ ದೈತ್ಯ ಹೋರ್ಡಿಂಗ್ ಅನ್ನು ಭಾವೇಶ್ ಭಿಂಡೆಯ ಜಾಹೀರಾತು ಸಂಸ್ಥೆ ಮೆಸರ್ಸ್ ಇಗೊ ಮೀಡಿಯಾ ಪ್ರೈವೆಟ್ ಲಿಮಿಟೆಡ್ ನಿರ್ವಹಿಸುತ್ತಿತ್ತು. ಘಟನೆಯ ನಂತರ ಭಿಂಡೆ ತಲೆ ಮರೆಸಿಕೊಂಡಿದ್ದು, ಮೇ 16ರಂದು ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈತನ ಮೇಲೆ 20ಕ್ಕೂ ಅಧಿಕ ಅಕ್ರಮ ಹೋರ್ಡಿಂಗ್‌ಗೆ ಸಂಬಂಧಪಟ್ಟ ದೂರುಗಳಿವೆ. ಇಷ್ಟಾದರೂ ಈತ ಹಲವು ಹೋರ್ಡಿಂಗ್‌ಗಳನ್ನು ನಿರ್ವಹಿಸುತ್ತಿದ್ದ. ಒಂದು ಹೋರ್ಡಿಂಗ್ ನಿರ್ವಹಿಸಲು ಕನಿಷ್ಠ 5 ಕೋಟಿ ರೂಪಾಯಿಯ ಅಗತ್ಯವಿದೆ. ಅಷ್ಟೇ ಅಲ್ಲ, ಅಧಿಕೃತ ಪರವಾನಿಗೆಯನ್ನೂ ಈತ ಹೊಂದಬೇಕಾಗಿದೆ. ಪೆಟ್ರೋಲ್ ಪಂಪ್‌ನ ಜಮೀನಿನಲ್ಲಿ ವಾಣಿಜ್ಯಕ್ಕೆ ಸಂಬಂಧಪಟ್ಟ ಜಾಹೀರಾತು ಫಲಕಗಳನ್ನು ಅಳವಡಿಸಲು ಅನುಮತಿ ನೀಡಲು ಸಾಧ್ಯವಿದೆಯೆ? ಇದಕ್ಕೆ ಪರವಾನಿಗೆ ನೀಡಿದವರು ಯಾರು? ಎನ್ನುವುದೆಲ್ಲ ದುರಂತದ ಬಳಿಕ ತನಿಖೆಗೊಳಪಡುತ್ತಿವೆ. ಕನಿಷ್ಟ ಈ ದುರಂತದಿಂದ ಪಾಠ ಕಲಿತು ಮುಂಬೈ ನಗರದಲ್ಲಿರುವ ಇನ್ನಷ್ಟು ಅಕ್ರಮ ಹೋರ್ಡಿಂಗ್‌ಗಳನ್ನು ತೆಗೆದು ಹಾಕಲು ಸಂಬಂಧಪಟ್ಟವರು ಧೈರ್ಯ ತೋರಿಸುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಅಕ್ರಮ ಹೋರ್ಡಿಂಗ್‌ಗಳ ಸಮಸ್ಯೆ ಕೇವಲ ಮುಂಬೈ ಶಹರಕ್ಕಷ್ಟೇ ಸೀಮಿತವಾಗಿಲ್ಲ. ದಕ್ಷಿಣ ಭಾರತದ ಚೆನ್ನೈ, ಬೆಂಗಳೂರಿನಂತಹ ಮಹಾನಗರಗಳಲ್ಲೂ ವ್ಯಾಪಕವಾಗಿವೆ. ಘಾಟ್‌ಕೋಪರ್ ದುರಂತ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಚೆನ್ನೈ ನಗರ ಪಾಲಿಕೆ ಅಕ್ರಮ ಹೋರ್ಡಿಂಗ್‌ಗಳ ವಿರುದ್ಧ ಬೃಹತ್ ಕಾರ್ಯಾಚರಣೆ ನಡೆಸುತ್ತಿದ್ದು, ನಾಲ್ಕು ದಿನಗಳಲ್ಲಿ 460 ಹೋರ್ಡಿಂಗ್‌ಗಳನ್ನು ತೆಗೆದು ಹಾಕಿದೆ. ತಮಿಳು ನಾಡಿನಲ್ಲಿ ಪದೇ ಪದೇ ಬಿರುಗಾಳಿ, ಚಂಡಮಾರುತಗಳು ಕಾಣಿಸಿಕೊಳ್ಳುತ್ತಿರುವುದರಿಂದ ಇಂತಹ ಹೋರ್ಡಿಂಗ್ ಅಪಾರ ಸಾವುನೋವುಗಳಿಗೆ ಕಾರಣವಾಗುತ್ತಿವೆ. ಬಿರುಗಾಳಿಗೆ ಸಿಲುಕಿ ನೂರಾರು ಹೋರ್ಡಿಂಗ್‌ಗಳು ಬೀಳುವ ಹಂತದಲ್ಲಿವೆ. ಹಾನಿಗೊಂಡಿರುವ ಅಂತಹ ಫಲಕಗಳನ್ನು ಗುರುತಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬೆಂಗಳೂರು ಕೂಡ ಅಕ್ರಮ ಹೋರ್ಡಿಂಗ್‌ಗಳಿಗಾಗಿ ಆಗಾಗ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿವೆ. ಕಳೆದ ವಾರ ಬೆಂಗಳೂರಿನಲ್ಲಿ ಮಳೆ, ಗಾಳಿಯಿಂದ ಆನೇಕಲ್ ಸಮೀಪ ಎರಡು ಹೋರ್ಡಿಂಗ್‌ಗಳು ಮುರಿದು ಬಿದ್ದಿದ್ದವು. ಜನಸಾಮಾನ್ಯರ ಜೀವಕ್ಕೆ ಅಪಾಯವಾಗಿಲ್ಲ ಎನ್ನುವ ಒಂದೇ ಒಂದು ಕಾರಣದಿಂದಾಗಿ ಅದು ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಲಿಲ್ಲ. ಆದರೆ ಜನಸಾಮಾನ್ಯರು ಈ ಬಗ್ಗೆಈಗಾಗಲೇ ತೀವ್ರ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ರಾಜಕಾರಣಿಗಳು, ಬಿಲ್ಡರ್‌ಗಳು ಮತ್ತು ಉದ್ಯಮಿಗಳ ಅಕ್ರಮ ಹೊಂದಾಣಿಕೆಯಿಂದಾಗಿ ಇದಕ್ಕೆ ಕಡಿವಾಣ ಹಾಕಲು ಅಧಿಕಾರಿಗಳು ಕೂಡ ಹಿಂಜರಿಯುತ್ತಿದ್ದಾರೆ ಎನ್ನುವ ಆರೋಪಗಳಿವೆ. ಹೋರ್ಡಿಂಗ್ ಮಾಫಿಯಾ ಮಾಸಿಕವಾಗಿ ಸುಮಾರು 2 ಲಕ್ಷ ರೂಪಾಯಿಯಂತೆ ಬಾಡಿಗೆಯನ್ನು ವಸೂಲಿ ಮಾಡುತ್ತವೆ. ನಗರದುದ್ದಕ್ಕೂ ಇಂತಹ ಹೋರ್ಡಿಂಗ್‌ಗಳ ಮೂಲಕ ಕೋಟ್ಯಂತರ ರೂಪಾಯಿ ವ್ಯವಹಾರಗಳಾಗುತ್ತವೆ. ಆನೇಕಲ್ ಹೆದ್ದಾರಿಯ ಮಧ್ಯದಲ್ಲಿ ಇಂತಹ 300ಕ್ಕೂ ಅಧಿಕ ಹೋರ್ಡಿಂಗ್‌ಗಳನ್ನು ಕಾಣಬಹುದು. ಕಳೆದ ವರ್ಷದ ಮಳೆ, ಗಾಳಿಗೆ ಬೆಂಗಳೂರಿನಲ್ಲಿ ಹಲವು ಹೋರ್ಡಿಂಗ್‌ಗಳು, ಬೃಹತ್ ಬ್ಯಾನರ್‌ಗಳು ಮುರಿದು, ಹರಿದು ಬಿದ್ದಿದ್ದವು. ಜನಸಾಮಾನ್ಯರಿಗೆ ಸಣ್ಣ ಪುಟ್ಟ ಹಾನಿಗಳೂ ಆಗಿದ್ದವು. ವಾಹನಗಳು ಜಖಂಗೊಂಡಿದ್ದವು. ಇಷ್ಟಾದರೂ ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ ಎಂದು ಜನರು ದೂರುತ್ತಿದ್ದಾರೆ.

ಘಾಟ್‌ಕೋಪರ್‌ನಲ್ಲಿ ನಡೆದ ದುರಂತ ಬೆಂಗಳೂರು, ಮಂಗಳೂರಿನಂತಹ ನಗರಗಳಿಗೂ ಪಾಠವಾಗಬೇಕಾಗಿದೆ. ಮಳೆಗಾಲ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಅನಧಿಕೃತ, ಅಕ್ರಮ, ಆಯುಷ್ಯ ಮುಗಿದ ಹೋರ್ಡಿಂಗ್‌ಗಳನ್ನು ತೆರವುಗೊಳಿಸಲು ತಕ್ಷಣ ಅಧಿಕಾರಿಗಳು ಕಾರ್ಯಾಚರಣೆ ನಡೆಸಬೇಕು. ಹೋರ್ಡಿಂಗ್‌ನಿಂದ ದುರಂತಗಳು ಸಂಭವಿಸಿದರೆ, ಸಂಬಂಧಿಸಿದ ಸಂಸ್ಥೆಗಳ ಮುಖ್ಯಸ್ಥರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವುದು ಮಾತ್ರವಲ್ಲ, ಅಂತಹ ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಈ ಹೋರ್ಡಿಂಗ್‌ಗಳು ಜನಸಾಮಾನ್ಯರ ಬದುಕಿನ ಮೇಲೆ ನಿಲ್ಲಿಸುವ ಮೃತ್ಯು ಫಲಕಗಳು ಎನ್ನುವುದನ್ನು ಅಧಿಕಾರಿಗಳು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News