ತಿರುಗುಬಾಣವಾದ ಪಾದಯಾತ್ರೆ

Update: 2024-08-14 05:12 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ವಾಲ್ಮೀಕಿ, ಮುಡಾ ಹಗರಣಗಳ ವಿರುದ್ಧ ಬಿಜೆಪಿಯ ‘ಮೈಸೂರು ಚಲೋ ಪಾದಯಾತ್ರೆ’ ಸಮಾರೋಪಗೊಂಡಿದೆ. ಸರಕಾರದ ವಿರುದ್ಧ್ದ ಮೊದಲ ಬಾರಿಗೆ ವಿರೋಧ ಪಕ್ಷವಾಗಿ ಬಿಜೆಪಿಯು ಸಂಘಟಿತ ಹೋರಾಟವೊಂದನ್ನು ರೂಪಿಸಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಮುಖಭಂಗದಿಂದ ಬಿಜೆಪಿ ನಾಯಕರು ಚೇತರಿಸಿಕೊಳ್ಳಲು ಬಹುಸಮಯ ತೆಗೆದುಕೊಂಡರು. ಸಿದ್ದರಾಮಯ್ಯ ನೇತೃತ್ವದಲ್ಲಿ ಸರಕಾರ ರಚನೆಯಾಗಿ ಹಲವು ತಿಂಗಳು ಕಳೆದರೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ರಾಜ್ಯಾಧ್ಯಕ್ಷರ ಆಯ್ಕೆಗೂ ಸಾಕಷ್ಟು ಸಮಯ ತೆಗೆದುಕೊಂಡಿತು. ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕರ ಆಯ್ಕೆಯಾದ ಬಳಿಕವೂ ಬಿಜೆಪಿಯೊಳಗೆ ಎಲ್ಲವೂ ಸರಿಯಿಲ್ಲ ಎನ್ನುವ ವಾತಾವರಣವಿತ್ತು. ಎಲ್ಲ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲು, ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ ಈ ವಾತಾವರಣ ಪೂರಕವಾಯಿತು. ಸಿದ್ದರಾಮಯ್ಯ ಅವರು ನಡೆದದ್ದೇ ದಾರಿ ಎನ್ನುವಂತೆ, ಸರಕಾರ ಒಂದು ವರ್ಷವನ್ನು ಯಶಸ್ವಿಯಾಗಿ ಪೂರೈಸಿತ್ತು. ವಾಲ್ಮೀಕಿ ಮತ್ತು ಮುಡಾ ಹಗರಣ ಬೆಳಕಿಗೆ ಬಂದ ಬೆನ್ನಿಗೇ ಅದನ್ನು ಸರಕಾರದ ವಿರುದ್ಧ ಅಸ್ತ್ರವಾಗಿ ಬಳಸಲು ಬಿಜೆಪಿ ನಾಯಕರು ಕೊನೆಗೂ ಸಂಘಟಿತರಾದರು. ಈ ಎರಡೂ ಹಗರಣಗಳು ಒಂದು ಸರಕಾರವನ್ನು ಬೀಳಿಸುವಷ್ಟು ದೊಡ್ಡದಾಗಿಲ್ಲದಿದ್ದರೂ, ಮುಳುಗುವವನಿಗೆ ಹುಲ್ಲುಕಡ್ಡಿ ಎಂಬಂತೆ ಬಿಜೆಪಿ ಈ ಹಗರಣಗಳನ್ನು ಮುಂದಿಟ್ಟು ಸಿದ್ದರಾಮಯ್ಯ ಅವರ ರಾಜೀನಾಮೆಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿತು. ಈ ಪಾದಯಾತ್ರೆಗೆ ಸಿದ್ದರಾಮಯ್ಯರ ರಾಜೀನಾಮೆ ಪಡೆಯಲು ಸಾಧ್ಯವಾಗದೇ ಇದ್ದರೂ, ರಾಜ್ಯದಲ್ಲಿ ವಿರೋಧ ಪಕ್ಷ ಇದೆ ಎನ್ನುವುದನ್ನು ಸಾಬೀತು ಪಡಿಸಲು ಬಿಜೆಪಿ ಮೊದಲ ಬಾರಿಗೆ ಯಶಸ್ವಿಯಾಯಿತು. ಅಷ್ಟಕ್ಕಾಗಿ ಈ ಪಾದಯಾತ್ರೆಯನ್ನು ರೂಪಿಸಿದ ವಿರೋಧ ಪಕ್ಷ ನಾಯಕ ಅಶೋಕ್ ಮತ್ತು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಅಭಿನಂದಿಸಬೇಕು.

ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ ಅದರ ಹೊಣೆಗಾರಿಕೆಗಳನ್ನು ಬಿಜೆಪಿಯ ಪಾದಯಾತ್ರೆ ನೆನಪಿಸಿಕೊಟ್ಟಿತು. ಬಿಜೆಪಿಯ ಭಾರೀ ಭ್ರಷ್ಟಾಚಾರಗಳನ್ನು ಮುಂದಿಟ್ಟುಕೊಂಡು ಕಳೆದ ಬಾರಿ ಕಾಂಗ್ರೆಸ್ ಪಕ್ಷ ಮತ ಯಾಚಿಸಿ, ಭರ್ಜರಿ ಬಹುಮತವನ್ನು ಪಡೆದು ಸರಕಾರ ರಚಿಸಿತು. ಅಧಿಕಾರಕ್ಕೆ ಬಂದರೆ, ಬಿಜೆಪಿಯ ಭ್ರಷ್ಟರನ್ನು ಜೈಲಿಗೆ ಕಳುಹಿಸಲಿದ್ದೇವೆ ಎಂದು ಹಲವು ವೇದಿಕೆಗಳಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿಯವರು ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ಬಿಜೆಪಿ ನಾಯಕರ ಮೇಲೆ ಯಾವುದೇ ಕ್ರಮವನ್ನು ತೆಗೆದುಕೊಳ್ಳಲಿಲ್ಲ. ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಭಾರೀ ಭ್ರಷ್ಟಾಚಾರಗಳ ಬಗ್ಗೆ ತುಟಿ ಬಿಚ್ಚಲಿಲ್ಲ. ಯಾವಾಗ ಬಿಜೆಪಿಯು ಮುಡಾ ಮತ್ತು ವಾಲ್ಮೀಕಿ ಹಗರಣಗಳನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ವಿರುದ್ಧ ರಾಜ್ಯಮಟ್ಟದಲ್ಲಿ ಆಂದೋಲನವನ್ನು ರೂಪಿಸಲು ಹೊರಟಿತೋ ಆಗ ಸರಕಾರ ಎಚ್ಚೆತ್ತುಕೊಂಡಿತು. ಹಿಂದಿನ ಸರಕಾರ ನಡೆಸಿದ ಹಗರಣಗಳು ಸಿದ್ದರಾಮಯ್ಯ ಸರಕಾರಕ್ಕೆ ನೆನಪಾದದ್ದು ಆಗ. ‘‘ನಮ್ಮ ಹಗರಣಗಳ ಬಗ್ಗೆ ಮಾತನಾಡಿದರೆ, ನಿಮ್ಮ ಹಗರಣಗಳನ್ನು ಬಿಚ್ಚಿಡಬೇಕಾಗುತ್ತದೆ’’ ಎನ್ನುವ ಬೆದರಿಕೆಯನ್ನು ಕಾಂಗ್ರೆಸ್ ಪ್ರತಿಯಾಗಿ ರವಾನಿಸಿತು. ಪಾದಯಾತ್ರೆಗೆ ಪ್ರತಿಯಾಗಿ ಜನಾಂದೋಲನವನ್ನು ನಡೆಸಿ ಬಿಜೆಪಿಯ ಹಗರಣಗಳನ್ನು ಜನರ ಮುಂದಿಡತೊಡಗಿತು. ಕಾಂಗ್ರೆಸ್ ಸರಕಾರವೇ ಮುಚ್ಚಿ ಹಾಕಿದ್ದ ನಕಲಿ ಪರಶುರಾಮ ಹಗರಣಕ್ಕೆ ಏಕಾಏಕಿ ಜೀವ ಬಂತು. ಜೆಡಿಎಸ್ ನಾಯಕರ ಲೈಂಗಿಕ ಹಗರಣಗಳು, ಕುಮಾರಸ್ವಾಮಿಯ ಆಸ್ತಿ ವಿವರಗಳೆಲ್ಲವೂ ಒಂದೊಂದಾಗಿ ಕಾಂಗ್ರೆಸ್ ನಾಯಕರ ಮೂಲಕ ಹೊರ ಬರತೊಡಗಿದವು. ಕಾಂಗ್ರೆಸ್ ಸರಕಾರವು ತನ್ನ ಬುಡಕ್ಕೆ ಬರುವವರೆಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಹಗರಣಗಳ ಬಗ್ಗೆ ಯಾಕೆ ಮೌನವಿತ್ತು? ಎನ್ನುವ ಜನರ ಪ್ರಶ್ನೆಗೆ ಕಾಂಗ್ರೆಸ್ ನಾಯಕರೇ ಉತ್ತರಿಸಬೇಕು.

ಉಳಿದಂತೆ ಬಿಜೆಪಿ ಪಾದಯಾತ್ರೆ ನಿರೀಕ್ಷಿತ ಯಶಸ್ಸನ್ನು ಕಾಣಲಿಲ್ಲ. ಅದಕ್ಕೆ ಹಲವು ಕಾರಣಗಳಿವೆ. ಮುಡಾ ಮತ್ತು ವಾಲ್ಮೀಕಿ ಹಗರಣಗಳು ನೂತನ ಸರಕಾರದ ನೇರ ಭಾಗೀದಾರಿಕೆಯಿಂದ ನಡೆದಿರುವ ಹಗರಣಗಳಲ್ಲ. ಹಿಂದಿನ ಬಿಜೆಪಿ ಸರಕಾರ ನಡೆಸಿದ ಭಾರೀ ಹಗರಣಗಳ ಮುಂದೆ ಇವುಗಳು ಏನೂ ಅಲ್ಲ. ವಾಲ್ಮೀಕಿ, ಮುಡಾ ಹಗರಣಗಳೆರಡರಲ್ಲೂ ಈ ಹಿಂದಿನ ಸರಕಾರಗಳ ಪಾಲುದಾರಿಕೆಯೂ ಇದೆ. ಮುಖ್ಯಮಂತ್ರಿಯನ್ನು ನೇರವಾಗಿ ಗುರಿ ಮಾಡಿರುವ ಮುಡಾ ಹಗರಣವನ್ನು ಕೆದಕುವುದು ಕೆಲವು ಜೆಡಿಎಸ್ ನಾಯಕರಿಗೇ ಇಷ್ಟವಿದ್ದಿರಲಿಲ್ಲ. ಪಾದಯಾತ್ರೆಯ ವೈಫಲ್ಯಕ್ಕೆ ಇನ್ನೊಂದು ಮುಖ್ಯ ಕಾರಣವೆಂದರೆ, ಪ್ರತಿಭಟಿಸುತ್ತಿರುವ ಬಿಜೆಪಿ ನಾಯಕರೇ ಮಹಾ ಭ್ರಷ್ಟರಾಗಿ ಗುರುತಿಸಲ್ಪಟ್ಟಿರುವುದು. ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಯಾವ ನೈತಿಕತೆಯೂ ಇಲ್ಲದ ನಾಯಕರೇ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿರುವುದನ್ನು ರಾಜ್ಯದ ಜನತೆ ಗಂಭೀರವಾಗಿ ಸ್ವೀಕರಿಸಲಿಲ್ಲ. ಇದೇ ಸಂದರ್ಭದಲ್ಲಿ ಪಾದಯಾತ್ರೆಯ ವಿರುದ್ಧ ಬಿಜೆಪಿಯೊಳಗೆಯೇ ಭಿನ್ನ ಧ್ವನಿಗಳು ಕೇಳಿ ಬಂದದ್ದು. ಆರಂಭದಲ್ಲಿ ಯತ್ನಾಳ್ ಸೇರಿದಂತೆ ಬಿಜೆಪಿಯೊಳಗಿರುವ ಹಲವು ಹಿರಿಯ ನಾಯಕರು ಪಾದಯಾತ್ರೆಯನ್ನು ವಿರೋಧಿಸಿದರು. ಇದು ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿಸಲು ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆ ಎನ್ನುವ ಆರೋಪ ಬಿಜೆಪಿಯೊಳಗಿಂದಲೇ ಕೇಳಿ ಬಂತು. ಬೆನ್ನಿಗೇ, ‘ಪಾದಯಾತ್ರೆಯಲ್ಲಿ ಭಾಗವಹಿಸುವುದಿಲ್ಲ’ ಎನ್ನುವ ಬೆದರಿಕೆಯನ್ನು ಜೆಡಿಎಸ್‌ನ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಒಡ್ಡಿದರು. ಪಾದಯಾತ್ರೆಯು ಬಿಜೆಪಿ ಮತ್ತು ಜೆಡಿಎಸ್‌ನೊಳಗಿರುವ ಒಡಕುಗಳನ್ನು ಜಗಜ್ಜಾ

ಹೀರುಗೊಳಿಸಿತು. ಕಾಂಗ್ರೆಸ್ ವಿರುದ್ಧ ಹೇಳಿಕೆಗಳನ್ನು ನೀಡಬೇಕಾಗಿದ್ದ ಬಿಜೆಪಿ ನಾಯಕರು, ಸ್ವತಃ ತಮ್ಮೊಳಗಿನ ಭಿನ್ನಾಭಿಪ್ರಾಯಗಳಿಗೆ ಸ್ಪಷ್ಟೀಕರಣ ನೀಡಬೇಕಾದ ಸ್ಥಿತಿ ನಿರ್ಮಾಣವಾಯಿತು. ಯಾತ್ರೆಗೆ ಮುನ್ನವೇ ಪಾದಯಾತ್ರೆಯ ಪದ ಕುಸಿಯಿತು. ಕಾಂಗ್ರೆಸ್ ನಾಯಕರಿಗೆ ಇದು ಅನುಕೂಲವನ್ನು ಉಂಟು ಮಾಡಿತು. ಬಿಜೆಪಿಯ ಪಾದಯಾತ್ರೆಗಿಂತಲೂ, ಬಿಜೆಪಿಯ ವಿರುದ್ಧ ಕಾಂಗ್ರೆಸ್ ಸಂಘಟಿಸಿದ ಜನಾಂದೋಲನವೇ ಹೆಚ್ಚು ಸುದ್ದಿ ಮಾಡಿತು. ಬಿಜೆಪಿ ಬಿಟ್ಟ ಬಾಣ ಬಿಜೆಪಿಗೆ ತಿರುಗುಬಾಣವಾಯಿತು.

ಪಾದಯಾತ್ರೆ ಮುಗಿದ ಬೆನ್ನಿಗೇ ಬಿಜೆಪಿಯೊಳಗಿರುವ ಅತೃಪ್ತರು ಸಭೆ ಸೇರಿದ್ದಾರೆ. ಈ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಹಿರಿಯರು ಬಂಡೆದಿದ್ದಾರೆ. ‘‘ಕೇಂದ್ರ ನಾಯಕರು ಮಧ್ಯಪ್ರವೇಶಿಸದೇ ಇದ್ದರೆ ಬಿಜೆಪಿ ಇಬ್ಭಾಗವಾಗುತ್ತದೆ’’ ಎಂದು ಈಶ್ವರಪ್ಪ ಎಚ್ಚರಿಕೆಯನ್ನು ನೀಡಿದ್ದಾರೆ. ವಿಜಯೇಂದ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಗೆದ್ದು ಬರಲಿ ಎಂದು ಬಿಜೆಪಿ ಶಾಸಕರೊಬ್ಬರು ಸಲಹೆ ನೀಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಉತ್ತರ ಕರ್ನಾಟಕದಲ್ಲಿ ತನ್ನ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ ಎಂದು ಬಸನಗೌಡ ಪಾಟೀಲ್ ಘೋಷಿಸಿದ್ದಾರೆ. ಬಿಜೆಪಿ ನಡೆಸಿರುವ ಪಾದಯಾತ್ರೆ, ನಾಯಕರನ್ನ್ನು ಒಂದು ವೇದಿಕೆಗೆ ತರುವಲ್ಲಿ ಸಂಪೂರ್ಣ ವಿಫಲವಾಗಿದೆ ಮಾತ್ರವಲ್ಲ, ಬಿರುಕುಗಳನ್ನು ಹೆಚ್ಚಿಸಿದೆ ಎನ್ನುವುದು ಸ್ಪಷ್ಟವಾಗಿದೆ. ಇದೇ ಸಂದರ್ಭದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಅಳಿಸಿ, ಕಾಂಗ್ರೆಸ್ ನಾಯಕರನ್ನು ಒಂದೇ ವೇದಿಕೆಗೆ ತರಲು ಬಿಜೆಪಿ ಪರೋಕ್ಷ ನೆರವಾಯಿತು. ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಉದ್ದೇಶದಿಂದ ಆರಂಭಗೊಂಡಿದ್ದ ಬಿಜೆಪಿಯ ಆಂದೋಲನ, ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಹೋರಾಟವಾಗಿ ಪರಿವರ್ತನೆಗೊಂಡಿರುವುದು ವಿಪರ್ಯಾಸವೇ ಸರಿ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News