ದಕ್ಷಿಣ ಭಾರತದ ಮಕ್ಕಳ ಕೊರಳಿಗೆ ಉರುಳಾಗುತ್ತಿರುವ ನೀಟ್

Update: 2023-08-19 09:19 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣವಾಗಲು ಸಾಧ್ಯವಾಗದೆ ಇತ್ತೀಚೆಗೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಬೆನ್ನಿಗೇ ತಮಿಳು ನಾಡಿನಲ್ಲಿ ನೀಟ್ ವಿರುದ್ಧದ ಆಕ್ರೋಶ ಮುಗಿಲು ಮುಟ್ಟಿದೆ. ೧೯ ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಿಗೇ ಈ ಸಾವಿನ ಆಘಾತವನ್ನು ತಾಳಲಾರದೆ ತಂದೆಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದುರಂತದ ಬೆನ್ನಿಗೇ ತಮಿಳುನಾಡು ಸರಕಾರ ನೀಟ್‌ನ್ನು ರದ್ದುಗೊಳಿಸುವ ಕುರಿತ ತನ್ನ ನಿರ್ಧಾರದ ಜೊತೆಗೆ ಇನ್ನಷ್ಟು ಗಟ್ಟಿಯಾಗಿ ನಿಂತುಕೊಂಡಿದೆ. ಈ ಮೂಲಕ ರಾಜ್ಯಪಾಲ ಮತ್ತು ಸರಕಾರದ ನಡುವಿನ ಸಂಘರ್ಷ ಇನ್ನ ಷ್ಟು ತೀವ್ರ ಸ್ವರೂಪವನ್ನು ಪಡೆಯುವ ಎಲ್ಲ ಸಾಧ್ಯತೆಗಳು ಕಾಣುತ್ತಿವೆ. ತಮಿಳು ನಾಡು ಸರಕಾರ ಈಗಾಗಲೇ ನೀಟ್ ವಿರುದ್ಧದ ಮಸೂದೆಯನ್ನು ಎರಡು ಬಾರಿ ಅಸೆಂಬ್ಲಿಯಲ್ಲಿ ಅಂಗೀಕರಿಸಿದೆ. ಆದರೆ ರಾಜ್ಯಪಾಲ ಮೊದಲ ಬಾರಿ ಈ ಮಸೂದೆಯನ್ನು ಮರಳಿಸಿದ್ದರು. ತೀವ್ರ ಒತ್ತಡಗಳ ಬಳಿಕ ಎರಡನೇ ಬಾರಿ ಅಂಗೀಕರಿಸಿದ ಮಸೂದೆಯನ್ನು ರಾಜ್ಯಪಾಲರು ರಾಷ್ಟ್ರಪತಿಗೆ ಕಳುಹಿಸಿದರು. ಈಗ ಮಸೂದೆ ರಾಷ್ಟ್ರಪತಿಯ ಅಂಗಳದಲ್ಲಿದೆ.

ನೀಟ್ ಪರೀಕ್ಷೆ ದಕ್ಷಿಣ ಭಾರತದ ವಿದ್ಯಾರ್ಥಿಗಳ ವೈದ್ಯಕೀಯ ಕಲಿಕೆಯ ಅವಕಾಶಗಳನ್ನು ಉತ್ತರ ಭಾರತೀಯರು ಕಿತ್ತುಕೊಳ್ಳಲು ಕಾರಣವಾಗಿದೆ ಎನ್ನುವ ಆಕ್ರೋಶವನ್ನು ಮೊದಲು ವ್ಯಕ್ತಪಡಿಸಿರುವುದು ತಮಿಳು ನಾಡು ಸರಕಾರ. ಬಳಿಕ ಕೇರಳವೂ ನೀಟ್ ಪರೀಕ್ಷೆಯ ಕುರಿತಂತೆ ತನ್ನ ಆಕ್ಷೇಪಗಳನ್ನು ವ್ಯಕ್ತಪಡಿಸಿತ್ತು. ಕರ್ನಾಟಕ ರಾಜ್ಯ ನೀಟ್‌ನ್ನು ಗಂಭೀರ ವಾಗಿ ಸ್ವೀಕರಿಸಿದ್ದು ಉಕ್ರೇನ್ ಯುದ್ಧದ ಸಂದರ್ಭದಲ್ಲಿ. ಆ ಪುಟ್ಟ ದೇಶದಲ್ಲಿ ವೈದ್ಯಕೀಯ ಕಲಿಕೆಗಾಗಿ ತೆರಳಿದ್ದ ಭಾರತದ ಸಾವಿರಾರು ವಿದ್ಯಾರ್ಥಿಗಳು ಬೀದಿಗೆ ಬಿದ್ದಾಗ, ಶಿಕ್ಷಣಕ್ಕಾಗಿ ವಲಸೆ ಹೋಗುತ್ತಿರುವುದು ಬೆಳಕಿಗೆ ಬಂತು. ಉಕ್ರೇನ್ ವಿರುದ್ಧ ರಶ್ಯ ಯುದ್ಧ ಘೋಷಣೆ ಮಾಡಿದಾಗ ಭಾರತದ ಸಾವಿರಾರು ವಿದ್ಯಾರ್ಥಿಗಳು ಸಂತ್ರಸ್ತರಾಗಿ ತಮ್ಮ ವೈದ್ಯಕೀಯ ಕಲಿಕೆಯನ್ನು ಅರ್ಧದಲ್ಲೇ ನಿಲ್ಲಿಸಿ ಭಾರತಕ್ಕೆ ವಾಪಸಾಗಬೇಕಾಯಿತು. ಅವರ ಶೈಕ್ಷಣಿಕ ಬದುಕು ಅತಂತ್ರವಾಯಿತು. ಸಾಲ ಸೋಲ ಮಾಡಿ ತೆರಳಿದ್ದ ವಿದ್ಯಾರ್ಥಿಗಳು ಸಂಪೂರ್ಣ ಬೀದಿಗೆ ಬಿದ್ದಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ನೀಡಿದ ಹೇಳಿಕೆಯಂತೂ ತೀರಾ ಬಾಲಿಶವಾಗಿತ್ತು. ‘‘ಭಾರತ ಇಷ್ಟೆಲ್ಲ ಅಭಿವೃದ್ಧಿ ಗೊಂಡಿರುವಾಗ ವೈದ್ಯಕೀಯ ಶಿಕ್ಷಣಕ್ಕಾಗಿ ಭಾರತಕ್ಕಿಂತಲೂ ಸಣ್ಣ ದೇಶಗಳಿಗೆ ಹೋಗುವ ಅಗತ್ಯವೇನಿತ್ತು?’’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದರು. ನಿಜಕ್ಕೂ ಈ ಪ್ರಶ್ನೆಗೆ ಉತ್ತರ ಹೇಳಬೇಕಾಗಿದ್ದುದು ಕೇಂದ್ರ ಸರಕಾರ. ಭಾರತದ ಶೈಕ್ಷಣಿಕ ಕ್ಷೇತ್ರ ಹೇಗೆ ದುಬಾರಿಯಾಗಿದೆ ಎನ್ನುವುದಕ್ಕೆ ಈ ವಿದ್ಯಾರ್ಥಿಗಳು ಸಾಕ್ಷಿಯಾಗಿದ್ದರು. ಭಾರತದಲ್ಲಿ ವೈದ್ಯಕೀಯ ಕಲಿಕೆಯ ವೆಚ್ಚಕ್ಕಿಂತ ಹಲವು ಪಟ್ಟು ಕಡಿಮೆ ವೆಚ್ಚದಲ್ಲಿ ವಿದೇಶಗಳಲ್ಲಿ ಕಲಿಯಬಹುದು ಎನ್ನುವ ಕಾರಣಕ್ಕಾಗಿ ಇವರು ಉಕ್ರೇನ್‌ನಂತಹ ಸಣ್ಣ ರಾಷ್ಟ್ರಗಳಿಗೆ ತೆರಳಿದ್ದರು. ಶೈಕ್ಷಣಿಕ ಕ್ಷೇತ್ರವನ್ನು ಸರಕಾರ ನಿರ್ಲಕ್ಷಿಸಿ, ಅದನ್ನು ಕಾರ್ಪೊರೇಟ್ ಪಾಲಾಗಿಸಿರುವುದರ ಕಾರಣದಿಂದಾಗಿ ಬಡ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ದೇಶ ತೊರೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಒಬ್ಬ ಪ್ರಧಾನಿಯಾಗಿ ಇಷ್ಟನ್ನು ಅರಿತುಕೊಳ್ಳದೆ, ಹೆಚ್ಚಿನ ಕಲಿಕೆಗಾಗಿ ವಿದೇಶಕ್ಕೆ ತೆರಳಿದ ವಿದ್ಯಾರ್ಥಿಗಳನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದರು.

ಇದೇ ಸಂದರ್ಭದಲ್ಲಿ, ದಕ್ಷಿಣ ಭಾರತದ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಹೆಚ್ಚಿನ ಕಲಿಕೆಗಾಗಿ ಸಣ್ಣ ಪುಟ್ಟ ದೇಶಗಳನ್ನು ಅವಲಂಬಿಸಿರುವುದು ಬೆಳಕಿಗೆ ಬಂದವು. ಇದಕ್ಕೆ ಮುಖ್ಯ ಕಾರಣ, ದಕ್ಷಿಣ ಭಾರತದಲ್ಲಿ ಅತ್ಯುತ್ತಮ ವೈದ್ಯಕೀಯ ಕಾಲೇಜುಗಳು ಇಲ್ಲ ಎಂದಲ್ಲ. ಯಾವಾಗ ನೀಟ್ ಪರೀಕ್ಷೆಯನ್ನು ಕೇಂದ್ರ ಸರಕಾರ ಕಡ್ಡಾಯಗೊಳಿಸಿತೋ ಅಲ್ಲಿಂದ, ದಕ್ಷಿಣ ಭಾರತ ಕಟ್ಟಿ ಬೆಳೆಸಿದ ಶೈಕ್ಷಣಿಕ ಕಾಲೇಜುಗಳ ಸವಲತ್ತುಗಳನ್ನು ಉತ್ತರ ಭಾರತೀಯರು ತಮ್ಮದಾಗಿಸಿಕೊಳ್ಳತೊಡಗಿದರು. ಇಂದಿಗೂ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿವೆ. ಉತ್ತರ ಭಾರತದ ರಾಜ್ಯಗಳು ರಾಮಮಂದಿರ, ಪಟೇಲ್ ಪ್ರತಿಮೆ, ಶಿವಾಜಿ ಪ್ರತಿಮೆ ರಾಜಕಾರಣದ ಮೂಲಕ ಹಿಂದಕ್ಕೆ ಚಲಿಸುತ್ತಿರುವ ಸಂದರ್ಭದಲ್ಲಿ ದಕ್ಷಿಣ ಭಾರತದ ರಾಜ್ಯಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಸಾಧಿಸುತ್ತಾ ಬಂದವು. ಇಂದು ಉತ್ತರ ಪ್ರದೇಶ, ಬಿಹಾರದಂತಹ ದೊಡ್ಡ ರಾಜ್ಯಗಳಿಂದ ಉದ್ಯೋಗ ಅರಸಿ ದಕ್ಷಿಣ ಭಾರತಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚುತ್ತಿದೆ. ಉದ್ಯೋಗಗಳಿಗಾಗಿ ರಾಜ್ಯಗಳ ಜನರು ಪರಸ್ಪರ ಅವಲಂಬಿಸುವುದು ದೇಶದ ಅಭಿವೃದ್ಧಿಗೆ ಪೂರಕ ನಿಜ. ಆದರೆ ದಕ್ಷಿಣ ಭಾರತವನ್ನು ಉತ್ತರ ಭಾರತೀಯರ ವಸಾಹತನ್ನಾಗಿಸಲು ಇಲ್ಲಿನವರ ಮೇಲೆ ಹಿಂದಿಯನ್ನು ಹೇರಲು ಸರಕಾರ ಮುಂದಾಯಿತು. ಒಂದು ವೇಳೆ ಉತ್ತರ ಭಾರತೀಯರು ಉದ್ಯೋಗಗಳನ್ನು ಅರಸಿ ದಕ್ಷಿಣಕ್ಕೆ ಬರುವುದಾದರೆ ಇಲ್ಲಿ ಭಾಷೆ, ಸಂಸ್ಕೃತಿಯೊಂದಿಗೆ ಒಂದಾಗುವ ಹೃದಯ ವೈಶಾಲ್ಯವನ್ನು ಹೊಂದಿರಬೇಕು. ಆದರೆ ಕೇಂದ್ರ ಸರಕಾರ ಉತ್ತರ ಭಾರತೀಯರಿಗಾಗಿ ದಕ್ಷಿಣ ಭಾರತೀಯರು ತಮ್ಮ ಭಾಷೆ, ಸಂಸ್ಕೃತಿಯನ್ನು ಬದಲಿಸಬೇಕು ಎಂದು ಬಯಸುತ್ತಿದೆ. ಈ ಕಾರಣದಿಂದಲೇ ಕೇಂದ್ರ ಸರಕಾರದ ಹಿಂದಿ ಹೇರಿಕೆಗೆ ದಕ್ಷಿಣ ಭಾರತದ ರಾಜ್ಯಗಳು ಪ್ರತಿರೋಧವನ್ನು ಒಡ್ಡುತ್ತಿವೆ.


ನೀಟ್ ಪರೀಕ್ಷೆ ಕೇಂದ್ರ ಸರಕಾರದ ಹೇರಿಕೆಯ ಮುಂದುವರಿದ ಭಾಗವಾಗಿದೆ. ನೀಟ್ ಪರೀಕ್ಷೆ ಜಾರಿಗೊಳ್ಳುವ ಮುನ್ನ ಸಿಇಟಿ ಮೂಲಕ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ತಮ್ಮ ರಾಜ್ಯಗಳಲ್ಲೇ ಕಲಿಕೆಗೆ ಅವಕಾಶಗಳನ್ನು ಗಿಟ್ಟಿಸಿಕೊಳ್ಳಬಹುದಿತ್ತು. ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್‌ನಂತಹ ಪುಟ್ಟ ದೇಶಗಳಿಗೆ ಹೋಗಬೇಕಾಗಿರಲಿಲ್ಲ. ಆದರೆ ಯಾವಾಗ ನೀಟ್ ಪರೀಕ್ಷೆ ಜಾರಿಯಾಯಿತೋ ಅಲ್ಲಿಂದ, ದಕ್ಷಿಣದ ರಾಜ್ಯಗಳ ವೈದ್ಯಕೀಯ ಕಾಲೇಜುಗಳ ದೊಡ್ಡ ಪಾಲನ್ನು ಉತ್ತರ ಭಾರತೀಯ ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡರು. ಇದರ ಜೊತೆಗೆ ನೀಟ್ ಪರೀಕ್ಷೆಯಲ್ಲ್ ಹಿಂದಿ ಹೇರಿಕೆ ಉತ್ತರ ಭಾರತದ ಹಿಂದಿ ಮಾತೃಭಾಷಿಗರಿಗೆ ಹೆಚ್ಚು ಅನುಕೂಲವನ್ನುಂಟು ಮಾಡಿತು. ಅವರು ತಮ್ಮ ಮಾತೃಭಾಷೆಯಲ್ಲೇ ಪರೀಕ್ಷೆಯನ್ನು ಬರೆಯಬಹುದಿತ್ತು. ಇದೇ ಸಂದರ್ಭದಲ್ಲಿ ಕನ್ನಡಿಗರು, ತಮಿಳರು ಒಂದೋ ಇಂಗ್ಲಿ ಷ್ ಇಲ್ಲವೇ ಹಿಂದಿ ಭಾಷೆಯನ್ನೇ ಅವಲಂಬಿಸಬೇಕಾಗಿತ್ತು. ಸ್ಥಳೀಯ ಮಾಧ್ಯಮದಲ್ಲಿ ಕಲಿತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಟ್‌ನಲ್ಲಿ ಸ್ಪರ್ಧಿಸಿ ಗೆಲ್ಲುವುದು ಕಷ್ಟವಾಗತೊಡಗಿತು. ಅತ್ಯುತ್ತಮ ವೈದ್ಯಕೀಯ ಕಾಲೇಜುಗಳು ದಕ್ಷಿಣ ಭಾರತದಲ್ಲಿದ್ದಂತೆ ಉತ್ತರ ಭಾರತದಲ್ಲಿಲ್ಲ. ಆದುದರಿಂದ ನೀಟ್ ಪರೀಕ್ಷೆಗಾಗಿ ಪ್ರತ್ಯೇಕ ತಯಾರಿಗಳನ್ನು ಮಾಡಿಕೊಂಡು ಉತ್ತರ ಭಾರತದ ವಿದ್ಯಾರ್ಥಿಗಳು ದಕ್ಷಿಣ ಭಾರತದ ಬೇರೆ ಬೇರೆ ರಾಜ್ಯಗಳಲ್ಲಿರುವ ಕಾಲೇಜುಗಳನ್ನು ಆವರಿಸಿಕೊಂಡರು. ಸ್ಥಳೀಯ ವಿದ್ಯಾರ್ಥಿಗಳು ತಮ್ಮ ರಾಜ್ಯವನ್ನೇ ತೊರೆದು ವಿದೇಶಗಳಲ್ಲಿ ಅವಕಾಶಗಳನ್ನು ಅರಸುವಂತಹ ಸ್ಥಿತಿ ನಿರ್ಮಾಣವಾಯಿತು.

ಕರ್ನಾಟಕದ ನೂರಾರು ವಿದ್ಯಾರ್ಥಿಗಳು ಯುದ್ಧದ ಕಾರಣದಿಂದ ಉಕ್ರೇನ್‌ನಿಂದ ಅರ್ಧದಲ್ಲೇ ಮರಳಿದಾಗ ನೀಟ್ ವಿರುದ್ಧ ಇಲ್ಲಿನ ಸರಕಾರ ಆಕ್ರೋಶವನ್ನೇನೋ ವ್ಯಕ್ತಪಡಿಸಿತು. ಆದರೆ ಈ ಬಗ್ಗೆ ತಮಿಳು ನಾಡು ಸರಕಾರ ತೆಗೆದುಕೊಂಡ ಗಂಭೀರ ಕ್ರಮವನ್ನು ಕರ್ನಾಟಕ ಸರಕಾರ ತೆಗೆದುಕೊಳ್ಳುವ ಧೈರ್ಯ ತೋರಿಸಲಿಲ್ಲ. ಕೇಂದ್ರದ ಜೀತವನ್ನೇ ತನ್ನ ಪರಮ ಭಾಗ್ಯವೆಂದು ನಂಬಿದ್ದ ಬಿಜೆಪಿ ನೇತೃತ್ವದ ಸರಕಾರವಂತೂ ನೀಟ್‌ನಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ತುಟಿ ಬಿಚ್ಚಲಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀಟ್‌ನ್ನು ರದ್ದುಗೊಳಿಸುವುದಾಗಿ ರಾಹುಲ್ ಗಾಂಧಿ ಹೇಳಿಕೆಯನ್ನು ನೀಡಿದ್ದಾರೆ. ಇದೀಗ ರಾಜ್ಯವನ್ನು ಕಾಂಗ್ರೆಸ್ ನೇತೃತ್ವದ ಸರಕಾರ ಆಳುತ್ತಿದೆ. ನೀಟ್‌ನ ಕುರಿತಂತೆ ಕೇಂದ್ರಕ್ಕೆ ಸ್ಪಷ್ಟವಾಗಿ ತನ್ನ ನಿಲುವನ್ನು ತಿಳಿಸುವ ಎಲ್ಲ ಅವಕಾಶ ಈ ಸರಕಾರಕ್ಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರಕ್ಕೆ ತಮಿಳು ನಾಡು ಸರಕಾರ ಮಾದರಿಯಾಗಬೇಕು. ಇಲ್ಲದೇ ಇದ್ದರೆ ಮುಂದಿನ ದಿನಗಳಲ್ಲಿ ವೈದ್ಯಕೀಯ ಕಲಿಕೆಯ ಕನಸುಗಳು ಭಗ್ನಗೊಂಡು ರಾಜ್ಯದ ವಿದ್ಯಾರ್ಥಿಗಳು ನೇಣಿಗೆ ಕೊರಳೊಡ್ಡುವ ಪ್ರಕರಣಗಳು ಹೆಚ್ಚಾಗಬಹುದು. ನೀಟ್ ಎನ್ನುವುದು ದಕ್ಷಿಣ ಭಾರತದ ರಾಜ್ಯದ ವಿದ್ಯಾರ್ಥಿಗಳ ಕೊರಳಿಗೆ ಹಿಂದಿ ರಾಜ್ಯಗಳು ಸಿದ್ಧ ಪಡಿಸಿದ ಉರುಳು ಎನ್ನುವುದನ್ನು ಅರ್ಥ ಮಾಡಿಕೊಂಡು ಅದರ ವಿರುದ್ಧ ಒಂದಾಗಬೇಕಾದ ಸಮಯ ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News