ನವಜಾತ ಮಕ್ಕಳಿಗೆ ಬೇಕಿದೆ ಆಶಾದಾಯಕ ನಾಳೆಗಳ ಗ್ಯಾರಂಟಿ

Update: 2024-02-26 05:01 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಇತ್ತೀಚೆಗೆ ಕರ್ನಾಟಕದಲ್ಲಿ ಭ್ರೂಣ ಹತ್ಯೆ ಜಾಲ ಭಾರೀ ಸುದ್ದಿ ಮಾಡಿತ್ತು. ಹೆಣ್ಣು ಮಗು ಎನ್ನುವ ಕಾರಣಕ್ಕಾಗಿ ಮಾತ್ರವಲ್ಲ, ಅಕ್ರಮ ಗರ್ಭಧಾರಣೆಯನ್ನು ಮುಚ್ಚಿ ಹಾಕುವ ದೃಷ್ಟಿಯಿಂದಲೂ ಈ ಹತ್ಯೆಗಳು ನಡೆಯುತ್ತಿದ್ದವು. ಸರಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡಿತು ಮಾತ್ರವಲ್ಲ, ಅಕ್ರಮ ಭ್ರೂಣಹತ್ಯೆಗಳ ಹಿಂದಿರುವ ವೈದ್ಯರನ್ನು ಬಂಧಿಸಿ, ಗರ್ಭಪಾತ ನಡೆಸುತ್ತಿದ್ದ ಘಟಕಗಳ ಮೇಲೆ ದಾಳಿ ನಡೆಸಿತು. ವೈದ್ಯರು, ಮಧ್ಯವರ್ತಿಗಳು ಸೇರಿ ಹಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಹೆಚ್ಚುತ್ತಿರುವ ನವಜಾತ ಶಿಶುಗಳ ಸಾವಿನ ಬಗ್ಗೆ ಸಮಾಜವಾಗಲಿ, ಸರಕಾರವಾಗಲಿ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುವುದಿಲ್ಲ. ಹುಟ್ಟಿದ ಕೆಲವೇ ಗಂಟೆಗಳಲ್ಲಿ ಅಥವಾ ದಿನಗಳಲ್ಲಿ ಮಗು ಸತ್ತರೆ ಅದಕ್ಕೆ ಯಾರನ್ನು ಹೊಣೆ ಮಾಡಬೇಕು? ಇಂತಹ ಸಾವುಗಳನ್ನು ನಾವು ವಿಧಿಯ ತಲೆಗೆ ಕಟ್ಟಿ ಸುಮ್ಮನಾಗುತ್ತೇವೆ. ಆದರೆ ಅನೇಕ ಸಂದರ್ಭದಲ್ಲಿ ಹುಟ್ಟಿದ ನವಜಾತ ಶಿಶು ಸೂಕ್ತ ವೈದ್ಯಕೀಯ ಸೌಲಭ್ಯಗಳಿಲ್ಲದೆ ಅಥವಾ ಅಪೌಷ್ಟಿಕತೆಯ ಕಾರಣಗಳಿಂದ ಮೃತಪಟ್ಟಿರುತ್ತವೆ.ಒಂದು ಆರೋಗ್ಯವಂತ ಮಗು ಒಂದು ನಾಡಿನ ಭವಿಷ್ಯ. ಅದು ಆರೋಗ್ಯಪೂರ್ಣವಾಗಿ ಬೆಳೆಯುವಂತೆ ನೋಡಿಕೊಳ್ಳುವುದು ಸರಕಾರದ, ಸಮಾಜದ ಹೊಣೆಗಾರಿಕೆ. ಆ ಮೂಲಕ ಆ ಮಗುವನ್ನು ಭವಿಷ್ಯದ ಸಂಪನ್ಮೂಲ ಪ್ರಜೆಯಾಗಿ ರೂಪಿಸಬೇಕು. ಒಂದು ವೇಳೆ ಅಪೌಷ್ಟಿಕತೆಯಿಂದ ನರಳುತ್ತಾ ಬೆಳೆದರೆ ಪರೋಕ್ಷವಾಗಿ ನಮ್ಮ ನಾಡಿನ ಭವಿಷ್ಯವೂ ಅನಾರೋಗ್ಯಕರವಾಗುತ್ತದೆ. ಈ ದೇಶದ ಬಡತನ, ಹಸಿವನ್ನು ಬೆಳೆಯುತ್ತಿರುವ ಮಕ್ಕಳ ಆರೋಗ್ಯವನ್ನು ಮಾನದಂಡವಾಗಿಟ್ಟುಕೊಂಡು ಅಳೆಯುವುದು ಇದೇ ಕಾರಣಕ್ಕೆ.

ಅಪೌಷ್ಟಿಕತೆಗಾಗಿ ಕುಖ್ಯಾತಿ ಪಡೆದ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಮುಖ್ಯವಾಗಿ ಉತ್ತರ ಕರ್ನಾಟಕ ದೈಹಿಕವಾಗಿ ತೀವ್ರ ಅಪೌಷ್ಟಿಕತೆಯನ್ನು ಎದುರಿಸುತ್ತಿರುವ ಮಕ್ಕಳನ್ನು ಹೊಂದಿದೆ. ಕರ್ನಾಟಕ ಮಾನವ ಅಭಿವೃದ್ಧಿ ವರದಿ 2022ರ ಪ್ರಕಾರ ಹಾವೇರಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಬೀದರ್, ಗದಗ, ವಿಜಯಪುರ ಮೊದಲಾದ ಜಿಲ್ಲೆಗಳು ಅಪೌಷ್ಟಿಕ ಮಕ್ಕಳಿಗಾಗಿ ಕುಖ್ಯಾತಿಯನ್ನು ಪಡೆದಿವೆ. ಈ ಜಿಲ್ಲೆಗಳಲ್ಲಿ ಶೇ. 20ರಷ್ಟು ಜನಸಂಖ್ಯೆಯನ್ನು ಬಡತನದಿಂದ ಮೇಲೆತ್ತಬೇಕಾದ ಸವಾಲನ್ನು ರಾಜ್ಯ ಸರಕಾರ ಹೊಂದಿದೆ ಎಂದು ವರದಿ ತಿಳಿಸಿದೆ. ಕುಟುಂಬ ಕಲ್ಯಾಣ ಸಚಿವಾಲಯವೇ ಹೇಳುವಂತೆ ರಾಜ್ಯದಲ್ಲಿ ಶೇ. 35ರಷ್ಟು ಮಕ್ಕಳು ಕಡಿಮೆ ತೂಕವನ್ನು ಹೊಂದಿದ್ದಾರೆ. ಇವರು ಬೆಳೆಯುತ್ತಿದ್ದಂತೆಯೇ ಹತ್ತು ಹಲವು ರೋಗಗಳಿಗೆ ಸುಲಭದಲ್ಲಿ ತುತ್ತಾಗುತ್ತಾರೆ. ನಾಡಿನ ಸಂಪನ್ಮೂಲವಾಗಬೇಕಾಗಿದ್ದ ಈ ಮಕ್ಕಳು ಸಮಾಜದ ಪಾಲಿಗೆ ಹೊರೆಯಾಗಿ ಪರಿವರ್ತನೆಗೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಇವರಿಗೆ 90 ದಿನಗಳ ಕಾಲ ಕಡ್ಡಾಯವಾಗಿ ಪೌಷ್ಟಿಕ ಆಹಾರವನ್ನು ಒದಗಿಸಲು ವರದಿ ಶಿಫಾರಸು ಮಾಡಿತ್ತು. ಬಡತನಕ್ಕಾಗಿ ಗುರುತಿಸಲ್ಪಟ್ಟಿರುವ ಯಾದಗಿರಿ ಜಿಲ್ಲೆಯಲ್ಲಿ 2023ರಲ್ಲಿ ಹಮ್ಮಿಕೊಂಡ ಸಮೀಕ್ಷೆಯಲ್ಲಿ ಶೇ. 64ರಷ್ಟು ಮಕ್ಕಳು ಕಡಿಮೆ ತೂಕ ಹೊಂದಿರುವುದು ಬೆಳಕಿಗೆ ಬಂದಿವೆ. ಕೊರೋನೋತ್ತರ ದಿನಗಳಲ್ಲಿ ಈ ಎಲ್ಲ ಜಿಲ್ಲೆಗಳಲ್ಲಿ ಹಸಿವು ಇನ್ನಷ್ಟು ಹೆಚ್ಚಿದೆ. ಈ ಕಾರಣದಿಂದಲೇ ಗ್ಯಾರಂಟಿ ಯೋಜನೆಗಳಲ್ಲಿ ಉಚಿತ ಅಕ್ಕಿಯನ್ನು ಮತ್ತು ಮಹಿಳೆಯರಿಗೆ 2,000 ರೂಪಾಯಿಯನ್ನು ನೀಡಿರುವುದಕ್ಕಾಗಿ ನೂತನ ಸರಕಾರವನ್ನು ಅಭಿನಂದಿಸಬೇಕು. ಅಪೌಷ್ಟಿಕತೆಯ ಭೀಕರತೆಯನ್ನು ತಡೆಯಲು ಈ ಉಚಿತ ಅಕ್ಕಿ ಮತ್ತು ಹಣ ಬಹಳಷ್ಟು ಕೊಡುಗೆಗಳನ್ನು ನೀಡುತ್ತಿದೆ. ಇಷ್ಟಾದರೂ ಕರ್ನಾಟಕದಲ್ಲಿ ನವಜಾತ ಶಿಶುಗಳ ಮರಣ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ ಎನ್ನುವ ಅಂಶ ಬಹಿರಂಗವಾಗಿದೆ.

ಈಗಾಗಲೇ ರಾಜ್ಯ ಸರಕಾರ ಮಾತೃ ಪೂರ್ಣ ಯೋಜನೆ, ಮಾತೃ ವಂದನಾ, ಪೌಷ್ಟಿಕ ಆಹಾರ ವಿತರಣೆ ಸೇರಿ ನಾನಾ ಯೋಜನೆಗಳಿಗೆ ಕೋಟ್ಯಂತರ ರೂಪಾಯಿಯನ್ನು ಖರ್ಚು ಮಾಡುತ್ತಿದೆ. ಇಷ್ಟಾದರೂ ಕಳೆದ ನಾಲ್ಕು ವರ್ಷಗಳಲ್ಲಿ 25,032 ನವಜಾತ ಶಿಶುಗಳು ಮರಣ ಹೊಂದಿವೆೆ ಎನ್ನುವುದನ್ನು ಸರಕಾರಿ ಅಂಕಿಅಂಶಗಳು ಬಹಿರಂಗಪಡಿಸಿವೆ. ಮೈಸೂರಿನಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 2,308 ನವಜಾತ ಶಿಶುಗಳು ಮರಣಹೊಂದಿದ್ದರೆ, 2023ರ ಎಪ್ರಿಲ್‌ನಿಂದ 2024 ಜನವರಿವರೆಗೆ 437 ನವಜಾತ ಶಿಶುಗಳು ಮರಣಹೊಂದಿವೆ. ಬಳ್ಳಾರಿಯಲ್ಲಿ 2,174 , ಬೆಳಗಾವಿಯಲ್ಲಿ 1074, ಬೆಂಗಳೂರು ನಗರದಲ್ಲಿ 2,557, ಕಲಬುರಗಿಯಲ್ಲಿ 1,443, ಧಾರವಾಡದಲ್ಲಿ 1,225, ರಾಯಚೂರಿನಲ್ಲಿ 2,142...ಹೀಗೆ ನವಜಾತ ಶಿಶುಗಳ ಸಾವುಗಳ ಅಂಕಿಸಂಕಿಗಳನ್ನು ಸರಕಾರ ವಿಧಾನಮಂಡಲದಲ್ಲಿ ಮುಂದಿಟ್ಟಿದೆ. ಬಹುತೇಕ ಸಾವುಗಳಿಗೆ ಕಡಿಮೆ ತೂಕ ಕಾರಣ ಎನ್ನಲಾಗುತ್ತಿದೆ. ಇಲ್ಲಿ ಆಕಸ್ಮಿಕ ತೊಂದರೆಗಳಿಂದ ಸಾವುಗಳು ಸಂಭವಿಸಿರುವುದಕ್ಕಿಂತ ಹಸಿವು, ಅಪೌಷ್ಟಿಕತೆಗಳೇ ಹೆಚ್ಚಿನ ಸಾವುಗಳಿಗೆ ಕಾರಣವಾಗಿವೆ. ಬೆಂಗಳೂರು ನಗರ ಪ್ರದೇಶಗಳಲ್ಲಿ ಸಂಭವಿಸಿರುವ ನವಜಾತ ಮಕ್ಕಳ ಸಾವುಗಳಲ್ಲಿ ಹೆಚ್ಚಿನವುಗಳು ಸರಕಾರಿ ಆಸ್ಪತ್ರೆಗಳಲ್ಲೇ ಸಂಭವಿಸಿವೆ. ಇವರಲ್ಲಿ ಕೂಲಿ ಕಾರ್ಮಿಕರ ಮಕ್ಕಳೇ ಅಧಿಕ. ಗರ್ಭದಲ್ಲಿದ್ದಾಗಲೇ ಒಂದು ಮಗುವಿನ ಆರೋಗ್ಯ ನಿರ್ಧಾರವಾಗುತ್ತದೆ. ಆದುದರಿಂದ ಆರೋಗ್ಯವಂತ ಮಗುವಿಗಾಗಿ, ನಾವು ಆರೈಕೆ ಮಾಡಬೇಕಾಗಿರುವುದು, ಕಾಳಜಿ ವಹಿಸಬೇಕಾಗಿರುವುದು ಗರ್ಭಿಣಿಯರನ್ನು. ಅವರು ಈ ಸಂದರ್ಭದಲ್ಲಿ ಪೂರ್ಣ ಪ್ರಮಾಣದಲ್ಲಿ ಆರೋಗ್ಯವಂತರಾಗಿದ್ದಾಗ ಅವರಿಗೆ ಹುಟ್ಟುವ ಮಗವೂ ಆರೋಗ್ಯವಾಗಿರಲು ಸಾಧ್ಯ. ಗರ್ಭಿಣಿಯರ ಆರೋಗ್ಯಕ್ಕಾಗಿ ಸರಕಾರ ಈಗಾಗಲೇ ಮೊಟ್ಟೆ ಮತ್ತು ಪೌಷ್ಟಿಕ ಆಹಾರಗಳನ್ನು ಒದಗಿಸುತ್ತಿದೆ. ಆದರೆ, ಇದು ಸರಿಯಾದ ಹೊತ್ತಿಗೆ ಅವರಿಗೆ ತಲುಪುವುದಿಲ್ಲ ಎನ್ನುವ ಆರೋಪಗಳಿವೆ.

ಮೊಟ್ಟೆ ಮೊದಲಾದ ಪೌಷ್ಟಿಕ ಆಹಾರಕ್ಕಾಗಿ ಸರಕಾರ ಕೆಲವೊಮ್ಮೆ ತಡವಾಗಿ ಒಟ್ಟಾಗಿ ಅನುದಾನಗಳನ್ನು ಬಿಡುಗಡೆ ಮಾಡುತ್ತದೆ. ಗರ್ಭಿಣಿಯರು ದಿನಕ್ಕೊಂದು ಮೊಟ್ಟೆಯನ್ನು ತಿನ್ನಬೇಕು ಎನ್ನುವುದು ನಿಯಮ. ಆದರೆ ತಿಂಗಳಿಗೆ 30 ಮೊಟ್ಟೆಗಳನ್ನು ನೀಡುವ ಬದಲಿಗೆ ಎರಡು ಮೂರು ತಿಂಗಳು ಕಳೆದ ಬಳಿಕ ಅವುಗಳನ್ನು ಒಟ್ಟಾಗಿ ನೀಡುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.ಸರಕಾರದ ಪೌಷ್ಟಿಕ ಆಹಾರ ತಲುಪುವ ಹೊತ್ತಿಗೆ ಮಹಿಳೆ ಹೆರಿಗೆಗೆ ಪೂರ್ಣ ಪ್ರಮಾಣದಲ್ಲಿ ಸಿದ್ಧಳಾಗಿರುತ್ತಾಳೆ. ಸರಕಾರದ ದಾಖಲೆಗಳಲ್ಲಿ ಆಕೆಗೆ ಪೌಷ್ಟಿಕ ಆಹಾರ ತಲುಪಿರುತ್ತದೆಯಾದರೂ, ಸರಿಯಾದ ಹೊತ್ತಿಗೆ ತಲುಪಿದೆಯೇ ಎನ್ನುವುದು ಚರ್ಚೆಗೆ ಬರುವುದಿಲ್ಲ. ಸರಕಾರದ ಯೋಜನೆಗಳು ಗರ್ಭಿಣಿ ಮಹಿಳೆಯರಿಗೆ ಸರಿಯಾದ ಹೊತ್ತಿಗೆ ತಲುಪದೇ ಇದ್ದರೆ, ಅದು ತನ್ನ ಉದ್ದೇಶವನ್ನು ಸಾಧಿಸಿಕೊಳ್ಳಲಾರದು. ಇತ್ತೀಚಿನ ದಿನಗಳಲ್ಲಿ ಅಂಗನವಾಡಿಗಳಿಗೆ ಸೂಕ್ತ ಸಮಯದಲ್ಲಿ ಅನುದಾನಗಳು ಬಿಡುಗಡೆಯಾಗುತ್ತಿಲ್ಲ ಎನ್ನುವ ಆರೋಪಗಳು ಹೆಚ್ಚುತ್ತಿವೆ. ಇದರ ನೇರ ಪರಿಣಾಮಗಳನ್ನು ಗರ್ಭಿಣಿಯರು ಅನುಭವಿಸುತ್ತಿದ್ದಾರೆ. ಜೊತೆಗೆ ಪುಟಾಣಿ ಮಕ್ಕಳು. ಗ್ರಾಮೀಣ ಪ್ರದೇಶಗಳಲ್ಲಿ ಸರಕಾರ ನೀಡುವ ಪೌಷ್ಟಿಕ ಆಹಾರಗಳನ್ನೇ ನೆಚ್ಚಿಕೊಂಡಿರುವ ಸಾವಿರಾರು ಬಡ ಮಹಿಳೆಯರಿದ್ದಾರೆ. ಅವರು ಅನಾರೋಗ್ಯ ಪೀಡಿತರಾಗಿ ಮಗುವನ್ನು ಹೆರುವ ಸ್ಥಿತಿ ನಿರ್ಮಾಣವಾದರೆ ಮಗು ಸಾಯಬೇಕಾಗುತ್ತದೆ. ಅಥವಾ ರೋಗಪೀಡಿತ ರೂಪದಲ್ಲಿ ಅವರು ಮಗುವನ್ನು ಹೆರಬೇಕಾಗುತ್ತದೆ.

ಅಪೌಷ್ಟಿಕತೆಯಿಂದ ನರಳುವ ಮಹಿಳೆಯರು ಹೆರಿಗೆಯ ಬಳಿಕ ಶಾಶ್ವತವಾಗಿ ಬೇರೆ ಬೇರೆ ರೀತಿಯ ರೋಗಗಳಿಗೆ ತುತ್ತಾಗಿ ಬಿಡುತ್ತಾರೆ. ಇಂದು ಗ್ಯಾರಂಟಿ ಯೋಜನೆಗಳು ಮಹಿಳೆಯರ ಪಾಲಿಗೆ ಹಲವು ರೀತಿಯಲ್ಲಿ ವರದಾನಗಳಾಗಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದೇ ಸಂದರ್ಭದಲ್ಲಿ ಗರ್ಭಿಣಿಯರಿಗಾಗಿ ವಿಶೇಷ ಕಾಳಜಿಯನ್ನು ಸರಕಾರ ವಹಿಸಬೇಕು. ಅವರಿಗೆ ಸಿಗಬೇಕಾದ ಸವಲತ್ತುಗಳು ಯಾವುದೇ ಕಾರಣಕ್ಕೂ ತಡವಾಗಿ ತಲುಪಬಾರದು. ಒಂದು ವೇಳೆ ಅದು ತಡವಾಗಿ ತಲುಪಿದರೆ ಎರಡು ಜೀವಗಳು ಅಪಾಯದಲ್ಲಿ ಸಿಲುಕ ಬೇಕಾಗುತ್ತದೆ. ಗ್ಯಾರಂಟಿ ಯೋಜನೆಗಳನ್ನು ವಾಪಸ್ ಪಡೆಯಿರಿ ಎಂದು ಬೊಬ್ಬಿಡುತ್ತಿರುವ ವಿರೋಧ ಪಕ್ಷಗಳ ನಾಯಕರು ಸಾವು ಬದುಕಿನ ನಡುವೆ ಭೂಮಿಗಿಳಿಸಿದ ತಮ್ಮ ಮಕ್ಕಳನ್ನು ಕಳೆದುಕೊಂಡ ಬಡ ಮಹಿಳೆಯರ ಅಳಲನ್ನು ್ನ ತಮ್ಮದನ್ನಾಗಿಸಿಕೊಳ್ಳಬೇಕಾಗಿದೆ. ಇಂದು ಗ್ಯಾರಂಟಿ ಯೋಜನೆಗಳು ಇಂತಹ ಮಹಿಳೆಯರಿಗೆ ಪರಿಣಾಮಕಾರಿಯಾಗಿ ತಲುಪುವುದಕ್ಕಾಗಿ ವಿರೋಧ ಪಕ್ಷಗಳು ಹೋರಾಟ ನಡೆಸಬೇಕು. ಬಡ ಕುಟುಂಬದಲ್ಲಿ ಹುಟ್ಟುವ ನವಜಾತ ಮಕ್ಕಳಿಗೆ ಆಶಾದಾಯಕ ನಾಳೆಗಳ ಗ್ಯಾರಂಟಿ ಸಿಗುವಂತಾಗಲು ವಿರೋಧ ಪಕ್ಷಗಳು ಸರಕಾರವನ್ನು ಒತ್ತಾಯಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News