ಚುನಾವಣಾ ಬಾಂಡ್: ದೇಣಿಗೆಯಲ್ಲ, ಲಂಚ!

Update: 2023-11-01 05:10 GMT

Photo: iasgyan.in

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ದೇಶದಲ್ಲಿ ಎಂತಹ ಪರಿಸ್ಥಿತಿಯಿದೆಯೆಂದರೆ, ಇಲ್ಲಿ ಪ್ರಧಾನಿಯನ್ನು ಆಯ್ಕೆ ಮಾಡಿದ ಪೌರರ ಅರ್ಹತೆಯೇ ಪ್ರಶ್ನೆಗೊಳಗಾಗುತ್ತದೆ. ಮೊದಲು ಪ್ರಜೆಗಳು ಪ್ರಧಾನಿಯನ್ನು ಆಯ್ಕೆ ಮಾಡುತ್ತಾರೆ. ಬಳಿಕ ಪ್ರಧಾನಿ ‘‘ನೀವು ಈ ದೇಶದ ಪೌರರು ಹೌದೋ ಅಲ್ಲವೋ ಎನ್ನುವುದನ್ನು ಸಾಬೀತು ಪಡಿಸಿ. ಇಲ್ಲದೇ ಇದ್ದರೆ ಬಂಧನ ಕೇಂದ್ರಕ್ಕೆ ತೆರಳಿ’’ ಎಂದು ಆದೇಶ ಹೊರಡಿಸುತ್ತಾರೆ. ಈ ದೇಶದ ಪೌರರು ಕಕ್ಕಾಬಿಕ್ಕಿಯಾಗಿ ‘ನಾವು ಈ ದೇಶದ ಪೌರರು ಹೌದೋ ಅಲ್ಲವೋ ಎನ್ನುವ ಅನುಮಾನ ನಿಮಗಿದೆಯಾದರೆ, ಅನುಮಾನಿಸಲ್ಪಡುತ್ತಿರುವ ಪೌರರ ಮತಗಳಿಂದ ಆಯ್ಕೆಯಾಗಿರುವ ನೀವು ದೇಶದ ಪ್ರಧಾನಿಯೆಂದು ಮಾನ್ಯರಾಗುವುದು ಹೇಗೆ?’ ಎಂದು ಮರು ಪ್ರಶ್ನಿಸಿದರೆ, ಅವರನ್ನು ದೇಶದ್ರೋಹಿಗಳೆಂದು ಗುರುತಿಸಿ ಜೈಲಿಗೆ ತಳ್ಳಲಾಗುತ್ತದೆ. ಪ್ರಜಾಸತ್ತಾತ್ಮಕ ದೇಶದಲ್ಲಿ ಪ್ರಜೆಗಳು ಪ್ರಭುಗಳನ್ನು ಸದಾ ಅನುಮಾನದಿಂದ ನೋಡಬೇಕಾಗುತ್ತದೆ. ಆದರೆ ಸದ್ಯದ ದಿನಗಳಲ್ಲಿ ಪ್ರಭುಗಳು ಪ್ರಜೆಗಳನ್ನು ಶಂಕಿಸುತ್ತಿದ್ದಾರೆ, ಪ್ರಶ್ನಿಸುತ್ತಿದ್ದಾರೆ. ಪ್ರಜೆಗಳಿಗೆ ಹೆದರಿ ಆಡಳಿತ ನಡೆಸಬೇಕಾದ ಪ್ರಭುಗಳು, ಪ್ರಜೆಗಳನ್ನು ಭೀತಿಗೆ ತಳ್ಳಿದ್ದಾರೆ. ಈ ದೇಶದಲ್ಲಿ ಮೊದಲು ರಾಜಕಾರಣಿಗಳ ಬಳಿಯಿದ್ದ ಕಪ್ಪು ಹಣವನ್ನು ಬಹಿರಂಗಪಡಿಸಲು ಪ್ರಜೆಗಳು ಬೀದಿಯಲ್ಲಿ ನಿಂತು ಒತ್ತಡ ಹೇರುತ್ತಿದ್ದರು. ಆದರೆ ಪ್ರಧಾನಿ ಮೋದಿಯವರ ಆಡಳಿತದಲ್ಲಿ, ಪ್ರಜೆಗಳೇ ಬ್ಯಾಂಕ್‌ಗಳ ಮುಂದೆ ಸರದಿಯಲ್ಲಿ ನಿಂತು ‘‘ನಮ್ಮಲ್ಲಿ ಕಪ್ಪು ಹಣವಿಲ್ಲ’’ ಎನ್ನುವುದನ್ನು ಸಾಬೀತು ಪಡಿಸುವಂತಹ ಸ್ಥಿತಿ ನಿರ್ಮಾಣವಾಯಿತು.

ಕೊರೋನ ಕಾಲದಲ್ಲಿ ಆರೋಗ್ಯ, ಆಹಾರ, ಶಿಕ್ಷಣಕ್ಕಾಗಿ ಹಾಹಾಕಾರ ಎದ್ದಿತ್ತು. ಜನರ ನೆರವಿಗೆ ದಾವಿಸಬೇಕಾಗಿದ್ದ ಮೋದಿಯವರು ‘ಪ್ರಧಾನಿ ಕ್ಷೇಮ ನಿಧಿ’ಯನ್ನು ಸ್ಥಾಪಿಸಿ ವಿವಿಧ ವಲಯಗಳಿಂದ ಹಣ ಸಂಗ್ರಹಿಸಿ ತಿಜೋರಿಯ ಕೀಲಿ ಕೈಯನ್ನು ತಮ್ಮ ಸೊಂಟದಲ್ಲಿ ಸಿಕ್ಕಿಸಿಕೊಂಡರು. ಉದ್ಯಮಿಗಳು, ಕಾರ್ಪೊರೇಟ್ ಕುಳಗಳು, ಸರಕಾರಿ ನೌಕರರು, ಶಿಕ್ಷಕರು ಹೀಗೆ ಎಲ್ಲ ಮೂಲಗಳಿಂದ ದೇಣಿಗೆಯ ಹೆಸರಿನಲ್ಲಿ ಬಲವಂತವಾಗಿ ಈ ನಿಧಿಗೆ ಹಣವನ್ನು ತುಂಬಿಸಿಕೊಳ್ಳಲಾಯಿತು. ಪ್ರಧಾನಿ ನಿಧಿಯಾಗಿರುವುದರಿಂದ, ಇದು ಸರಕಾರದ ನಿಧಿಯೇ ಆಗಿರುತ್ತದೆ ಎನ್ನುವ ಸಮಾಧಾನವೊಂದು ಜನರಿಗಿತ್ತು. ಆದರೆ ಈ ಕ್ಷೇಮ ನಿಧಿಯ ಬಳಕೆಯ ಬಗ್ಗೆ ಸರಕಾರ ಯಾವುದೇ ಮಾಹಿತಿಯನ್ನು ಸರಕಾರ ಬಿಟ್ಟುಕೊಡಲಿಲ್ಲ. ಅಂತಿಮವಾಗಿ ಮಾಹಿತಿ ಹಕ್ಕಿನಲ್ಲಿ ಇದರ ವಿವರಗಳನ್ನು ಕೇಳಿದರೆ ‘‘ಇದರ ವಿವರಗಳನ್ನು ಮೂರನೇ ವ್ಯಕ್ತಿಗಳಿಗೆ ಕೊಡುವಂತಿಲ್ಲ’’ ಎಂದು ನ್ಯಾಯಾಲಯದಲ್ಲಿ ವಾದಿಸಿತು. ಪಿಎಂ ಕೇರ್ಸ್ ಅಧಿಕೃತ ಸರಕಾರದ ನಿಧಿಯಲ್ಲ, ಅದೊಂದು ಚಾರಿಟೇಬಲ್ ಟ್ರಸ್ಟ್ ಎಂದು ವಾದಿಸಿತು. ಜನಸಾಮಾನ್ಯರು ತಾವು ಕೊಟ್ಟ ಹಣದ ವಿವರಗಳ ಬಗ್ಗೆ ಸ್ಪಷ್ಟನೆಯನ್ನು ಕೇಳುವ ಹಕ್ಕನ್ನು ಸರಕಾರ ನಿರಾಕರಿಸಿತು.

ಇಷ್ಟಕ್ಕೇ ನಿಲ್ಲಲಿಲ್ಲ. ಕೊರೋನ ಕಾಲದಲ್ಲಿ ಲಸಿಕೆಯನ್ನು ಎಲ್ಲರಿಗೂ ಪರೋಕ್ಷವಾಗಿ ಕಡ್ಡಾಯಗೊಳಿಸಿತು. ಲಸಿಕೆ ಪಡೆಯದವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶವಿಲ್ಲ ಎನ್ನುವ ಆದೇಶಗಳನ್ನು ಜಿಲ್ಲಾಡಳಿತಗಳ ಮೂಲಕ ಹೊರಡಿಸಿತು. ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಸಿಗಬೇಕಾದರೆ ಅವರಿಗೂ ಲಸಿಕೆ ಕಡ್ಡಾಯ ಎಂದು ಹೇಳಿತು. ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿಯ ಭಾವಚಿತ್ರವನ್ನೂ ಛಾಪಿಸಲಾಗಿತ್ತು. ಸರಕಾರದ ಜಾಹೀರಾತು, ಪ್ರಚಾರ, ಒತ್ತಡಗಳಿಗೆ ಬಲಿಯಾಗಿ ಜನರು ಅನಿವಾರ್ಯವಾಗಿ ಲಸಿಕೆಗಳನ್ನು ಹಾಕಿಸಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಹಲವರಲ್ಲಿ ಲಸಿಕೆಯ ದುಷ್ಪರಿಣಾಮಗಳು ಕಾಣಿಸಿಕೊಂಡವು.ಕೆಲವರು ಅಂಗವಿಕಲರಾದರು. ಅನಿರೀಕ್ಷಿತವಾಗಿ ಸಾವಿಗೀಡಾದರು. ಲಸಿಕೆಯ ಈ ಸಂತ್ರಸ್ತರ ಕುಟುಂಬಗಳು ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋದರು. ವಿಪರ್ಯಾಸವೆಂದರೆ, ‘‘ಲಸಿಕೆಯ ಮೂಲಕ ಕೊರೋನದಿಂದ ಜನರ ಜೀವ ಉಳಿಸಿದ್ದೇ ನಾನು’’ ಎನ್ನುತ್ತಿದ್ದ ಸರಕಾರ ನ್ಯಾಯಾಲಯದಲ್ಲಿ ವ್ಯತಿರಿಕ್ತ ಹೇಳಿಕೆಯನ್ನು ನೀಡಿತು. ‘ಲಸಿಕೆ ತೆಗೆದುಕೊಳ್ಳುವುದು ಐಚ್ಛಿಕವಾಗಿತ್ತೇ ಹೊರತು ಕಡ್ಡಾಯವಾಗಿರಲಿಲ್ಲ. ಲಸಿಕೆಯಿಂದಾಗಿರುವ ಯಾವುದೇ ಅಡ್ಡ ಪರಿಣಾಮಕ್ಕೆ ಸರಕಾರ ಹೊಣೆಯಲ್ಲ. ಅದನ್ನು ಲಸಿಕೆಯನ್ನು ತಯಾರಿಸಿರುವ ಕಂಪೆನಿಯ ಜೊತೆಗೇ ವ್ಯವಹರಿಸಬೇಕು’ ಎಂದು ಅದು ಹೇಳಿತು. ಜನಸಾಮಾನ್ಯರ ಕೋಟ್ಯಂತರ ರೂಪಾಯಿ ತೆರಿಗೆಯನ್ನು ಲಸಿಕೆಯ ಮೇಲೆ ಸುರಿದಿರುವಾಗ ಅದರ ಗುಣಮಟ್ಟದ ಹೊಣೆಗಾರಿಕೆಯನ್ನು ಸರಕಾರ ಹೊರಬೇಡವೆ? ಲಸಿಕೆ ತೆಗೆದುಕೊಳ್ಳುವುದು ಐಚ್ಛಿಕವಾಗಿದ್ದಿದ್ದರೆ ಸಾರ್ವಜನಿಕ ಸ್ಥಳಗಳಲ್ಲಿ, ಕಚೇರಿಗಳಲ್ಲಿ, ಶಾಲೆಗಳಲ್ಲಿ ಪ್ರವೇಶ ನೀಡಬೇಕಾದರೆ ಲಸಿಕೆ ಪಡೆಯಲೇಬೇಕು ಎನ್ನುವ ಆದೇಶವನ್ನು ಹೊರಡಿಸಿದ್ದು ಯಾಕೆ? ಲಸಿಕೆ ಪ್ರಮಾಣ ಪತ್ರದಲ್ಲಿ ಮೋದಿಯವರೇಕೆ ತಮ್ಮ ಭಾವಚಿತ್ರವನ್ನು ಛಾಪಿಸಿದ್ದರು? ಇದೀಗ ಹೆಚ್ಚುತ್ತಿರುವ ಯುವಕರ ಹೃದಯಾಘಾತಗಳ ಹಿಂದೆಯೂ ಲಸಿಕೆಯ ದುಷ್ಪರಿಣಾಮಗಳಿವೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಸರಕಾರ ಈ ಹೃದಯಾಘಾತಗಳನ್ನು ಕೊರೋನದ ತಲೆಗೆ ಕಟ್ಟಲು ಮುಂದಾಗಿದೆ.

ಮೋದಿ ನೇತೃತ್ವದ ಸರಕಾರದ ಈ ಆತ್ಮವಂಚನೆ ಇಲ್ಲಿಗೆ ನಿಂತಿಲ್ಲ. ಇದೀಗ ಚುನಾವಣಾ ಬಾಂಡ್ ಎನ್ನುವ ಕಾನೂನು ಬದ್ಧವಾದ ಲಂಚವನ್ನು ಸುಪ್ರೀಂ ಕೋರ್ಟ್ ನಲ್ಲಿ ಕೇಂದ್ರ ಸರಕಾರ ಸಮರ್ಥಿಸಿಕೊಂಡಿದೆ. ಅಷ್ಟೇ ಅಲ್ಲ, ರಾಜಕೀಯ ಪಕ್ಷಗಳು ಸ್ವೀಕರಿಸುವ ಈ ದೇಣಿಗೆಯ ಮೂಲವನ್ನು ತಿಳಿಯುವ ಹಕ್ಕು ನಾಗರಿಕರಿಗಿಲ್ಲ ಎಂದು ಸುಪ್ರೀಂಕೋರ್ಟ್‌ನಲ್ಲಿ ವಾದಿಸಿದೆ. ಚುನಾವಣಾ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆಯನ್ನು ತಿಳಿಯುವ ಹಕ್ಕು ನಾಗರಿಕರಿಗಿದೆಯಾದರೆ, ರಾಜಕೀಯ ಪಕ್ಷಗಳು ಚುನಾವಣೆಗೆ ವೆಚ್ಚ ಮಾಡುವ ಹಣ ಯಾವ ಮೂಲದಿಂದ ಬಂದಿದೆ ಎಂದು ತಿಳಿದುಕೊಳ್ಳುವ ಹಕ್ಕು ನಾಗರಿಕರಿಗೆ ಯಾಕಿಲ್ಲ? ಎನ್ನುವ ಪ್ರಶ್ನೆ ತಲೆಯೆತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ, ತನಗೆ ಸಿಕ್ಕಿರುವ ದೇಣಿಗೆಯ ಮೂಲವನ್ನು ಬಹಿರಂಗಪಡಿಸಲು ಕೇಂದ್ರ ಸರಕಾರ ಯಾಕೆ ಸಿದ್ಧವಿಲ್ಲ ಎನ್ನುವುದು ಇನ್ನೊಂದು ಪ್ರಶ್ನೆ. ದೇಣಿಗೆಯ ಮೂಲಕ ಸಕ್ರಮವಾಗಿದ್ದಿದ್ದರೆ ಅವುಗಳನ್ನು ಬಹಿರಂಗಪಡಿಸಲು ರಾಜಕೀಯ ಪಕ್ಷಗಳಿಗೆ ಯಾವ ಅಡ್ಡಿಯೂ ಇಲ್ಲ. ಅಕ್ರಮ ಮೂಲದಿಂದ ಬಂದ ಹಣವನ್ನು ವ್ಯಯಿಸಿ, ಅಧಿಕಾರ ಹಿಡಿಯುವ ರಾಜಕೀಯ ಪಕ್ಷ ಜನಸಾಮಾನ್ಯರಿಗೆ, ದೇಶಕ್ಕೆ ಒಳಿತನ್ನು ಮಾಡುತ್ತದೆ ಎಂದು ನಿರೀಕ್ಷಿಸುವುದಾದರೂ ಹೇಗೆ ಸಾಧ್ಯ? ಈ ಪ್ರಶ್ನೆಗೆ ಉತ್ತರವನ್ನು ಸುಪ್ರೀಂಕೋರ್ಟ್ ನೀಡಬೇಕಾಗಿದೆ.

ಅಕ್ರಮ ಹಣದ ಮೂಲಗಳು ರಾಜಕೀಯ ಪಕ್ಷಗಳನ್ನು ಪ್ರಭಾವಿಸದಂತೆ ತಡೆಯಲು, ಈ ದೇಶದಲ್ಲೊಂದು ಕಾನೂನಿತ್ತು. ಹಾಗೆಯೇ ಯಾವುದೇ ಕಂಪೆನಿಗಳು ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಗಳಿಗೆ ಮಿತಿಗಳಿದ್ದವು. 2018ರಲ್ಲಿ ಕಾನೂನು ಬಾಹಿರವಾಗಿ ಹಣವನ್ನು ವರ್ಗಾಯಿಸುವ ಪ್ರಕ್ರಿಯೆಯನ್ನು ಸರಳಗೊಳಿಸಲು ಚುನಾವಣಾ ಬಾಂಡ್‌ಗಳ ವ್ಯವಸ್ಥೆಯನ್ನು ಪರಿಚಯಿಸಲಾಯಿತು. ಆ ಬಳಿಕ ಒಟ್ಟಾರೆ ಚುನಾವಣಾ ಬಾಂಡ್‌ಗಳಲ್ಲಿ ಶೇ. 70ಕ್ಕಿಂತಲೂ ಅಧಿಕ ದೇಣಿಗೆ ಬಿಜೆಪಿಗೇ ಹೋಗಿವೆ. ಮುಂದಿನ ದಿನಗಳಲ್ಲಿ ಇದರ ಲಾಭವನ್ನು ಬಿಜೆಪಿ ಇನ್ನಷ್ಟು ತನ್ನದಾಗಿಸಿಕೊಳ್ಳಲಿದೆ. ಈ ಬಾಂಡ್‌ಗಳ ಪ್ರಯೋಜನವನ್ನು ಹತ್ತು ಹಲವು ನಕಲಿ ಕಂಪೆನಿಗಳು ತಮ್ಮದಾಗಿಸಿಕೊಳ್ಳಲಿವೆ. ಕಾರ್ಪೊರೇಟ್ ಮತ್ತು ರಾಜಕೀಯ ಪಕ್ಷಗಳ ನಡುವಿನ ಅನೈತಿಕ ಬಾಂಡ್ ಇದಾಗಿದೆ. ಈ ಕಾರಣದಿಂದಲೇ, ದೇಣಿಗೆಯ ಮೂಲವನ್ನು ಪ್ರಜೆಗಳಿಗೆ ತಿಳಿಸುವುದು ಕೇಂದ್ರ ಸರಕಾರಕ್ಕೆ ಬೇಕಾಗಿಲ್ಲ. ಯಾಕೆಂದರೆ ಅವರು ಸ್ವೀಕರಿಸುತ್ತಿರುವುದು ದೇಣಿಗೆಯಲ್ಲ, ಅಕ್ರಮ ಮೂಲಗಳಿಂದ

ಪಡೆಯುತ್ತಿರುವ ಲಂಚ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News