ಜ್ಞಾನ ದೇಗುಲದಲ್ಲಿ ಪ್ರಶ್ನಿಸುವುದು ಅಪರಾಧವೆ?

Update: 2024-02-21 05:02 GMT

Photo: twitter.com/Sridharhsk

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಸತಿ ಶಾಲೆಗಳ ಮುಂದೆ ಬರೆದಿದ್ದ ‘ಜ್ಞಾನ ದೇಗುಲವಿದು, ಕೈ ಮುಗಿದು ಒಳಗೆ ಬಾ’ ಎಂಬ ಸಾಲನ್ನು ಅಳಿಸಿ ‘ಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ’ ಎಂದು ಬರೆಯಲಾಗಿರುವ ಬಗ್ಗೆ ಬಿಜೆಪಿ ಗದ್ದಲ ಎಬ್ಬಿಸಿದೆ. ಇದರ ವಿರುದ್ಧ ಸಾರ್ವಜನಿಕವಾಗಿ ಪ್ರತಿಭಟನೆ ನಡೆಸಿರುವುದು ಮಾತ್ರವಲ್ಲದೆ, ವಿಧಾನಮಂಡಲ ಅಧಿವೇಶನದಲ್ಲೂ ಇದನ್ನು ಚರ್ಚಿಸಿದೆ. ಈ ಮೂಲಕ ‘ಜ್ಞಾನ ದೇಗುಲವಿದು, ಕೈ ಮುಗಿದು ಒಳಗೆ ಬಾ’ ಸಾಲನ್ನು ಬರೆದಿರುವ ಕುವೆಂಪು ಅವರನ್ನು ಅವಮಾನಿಸಲಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ತಮಾಷೆಯ ವಿಷಯವೆಂದರೆ, ಈ ಸಾಲನ್ನು ಬರೆದಿರುವುದು ಕುವೆಂಪು ಅವರು ಅಲ್ಲ. ಕುವೆಂಪು ಅವರು ಬರೆದ ಪದ್ಯವನ್ನು ಆಧರಿಸಿ ಅದೇ ದಾಟಿಯಲ್ಲಿ ಈ ಸಾಲನ್ನು ಹೆಣೆಯಲಾಗಿದೆ ಅಷ್ಟೇ. ಇಷ್ಟೂ ಗೊತ್ತಿಲ್ಲದ ಬಿಜೆಪಿ ನಾಯಕರು ವಸತಿ ಶಾಲೆಗಳ ಮುಂದಿರುವ ಘೋಷವಾಕ್ಯವನ್ನು ಮುಂದಿಟ್ಟು ಏಕಾಏಕಿ ಕುವೆಂಪು ಅಭಿಮಾನಿಗಳಾಗಿ ಬಿಟ್ಟಿದ್ದಾರೆ. ಈ ಸಾಲನ್ನು ತಿದ್ದುವ ಮೂಲಕ ಭಾರತೀಯ ಸಂಸ್ಕೃತಿಗೆ ಅವಮಾನಿಸಲಾಗಿದೆ ಎಂದೂ ಅವರು ಹೇಳಿಕೆ ನೀಡಿದ್ದಾರೆ.

ಪತ್ರಕರ್ತರು ಪ್ರಶ್ನೆ ಕೇಳುತ್ತಾರೆ ಎಂದು ಹೆದರಿ ಪತ್ರಿಕಾಗೋಷ್ಠಿಯನ್ನೇ ಮಾಡದಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಆದರ್ಶವಾಗಿ ಸ್ವೀಕರಿಸಿರುವ ರಾಜ್ಯ ಬಿಜೆಪಿ ನಾಯಕರು ‘ಪ್ರಶ್ನೆ’ ಎಂದಾಗ ಗಲಿಬಿಲಿಗೊಳ್ಳುವುದು ಸಹಜವೇ ಆಗಿದೆ. ‘ವಿದ್ಯಾರ್ಥಿಗಳು ಏನನ್ನು ಪ್ರಶ್ನಿಸಬೇಕು?’ ಎಂದು ಬಿಜೆಪಿ ನಾಯಕರು ಕೇಳಿದ್ದಾರೆ. ತಾವು ಅಧಿಕಾರದಲ್ಲಿದ್ದಾಗ ಪಠ್ಯ ಪುಸ್ತಕಗಳನ್ನೇ ತಿರುಚಿದ್ದು, ಕುವೆಂಪು ಸೇರಿದಂತೆ ಹಲವು ಸಾಮಾಜಿಕ ಕ್ರಾಂತಿಕಾರಿಗಳನ್ನು ಪಠ್ಯ ಪುಸ್ತಕದಲ್ಲಿ ಅವಮಾನಿಸಿದ್ದನ್ನು ಬಿಜೆಪಿ ನಾಯಕರು ಸಂಪೂರ್ಣ ಮರೆತಿದ್ದಾರೆ. ಕುವೆಂಪು ಅವರ ಸಾಲುಗಳನ್ನು ತಿದ್ದುವುದರಿಂದ ಕುವೆಂಪು ಅವರಿಗೆ ಅವಮಾನವಾಗುತ್ತದೆಯೆಂದಾದರೆ, ನಾಡಗೀತೆಯಲ್ಲಿ ಕುವೆಂಪು ಸಾಲುಗಳನ್ನು ತಿದ್ದಿ ಅಲ್ಲಿ ಮಧ್ವರನ್ನು ಸೇರಿಸಿದ್ದು ಎಷ್ಟು ಸರಿ? ಎನ್ನುವ ಪ್ರಶ್ನೆ ಏಳುತ್ತದೆ. ಕುವೆಂಪು ಅವರು ಮಧ್ವ ಸಿದ್ಧಾಂತದ ಕಟು ಟೀಕಾಕಾರರಾಗಿದ್ದರು. ‘ಶೂದ್ರರು ನಿತ್ಯ ನಾರಕಿಗಳು’ ಎಂದರೆ ಶೂದ್ರರಿಗೆ ಮೋಕ್ಷ ಸಿಗುವುದಿಲ್ಲ ಎನ್ನುವ ಮಧ್ವ ಸಿದ್ಧಾಂತವನ್ನು ಟೀಕಿಸಿ ಅವರು ಹಲವು ಲೇಖನಗಳನ್ನು ಬರೆದಿದ್ದರು. ಆ ಕಾರಣದಿಂದಲೇ ತಮ್ಮ ‘ಭಾರತ ಜನನಿಯ ತನುಜಾತೆ’ ಹಾಡಿನಲ್ಲಿ ರಾಮಾನುಜ ಮತ್ತು ಶಂಕರಾಚಾರ್ಯರನ್ನಷ್ಟೇ ಉಲ್ಲೇಖ ಮಾಡಿದ್ದರು. ಮಧ್ವಾಚಾರ್ಯರ ಹೆಸರನ್ನು ಉದ್ದೇಶ ಪೂರ್ವಕವಾಗಿ ಕೈ ಬಿಟ್ಟಿದ್ದರು. ಆದರೆ ಆ ಪದ್ಯವನ್ನು ನಾಡಗೀತೆಯಾಗಿಸಿದಾಗ ಅಂದಿನ ಪೇಜಾವರಶ್ರೀಗಳು ಒತ್ತಡ ಹಾಕಿ ‘ಮಧ್ವ’ರನ್ನು ಸೇರ್ಪಡೆಗೊಳಿಸಿದ್ದರು. ಕುವೆಂಪು ಅವರ ಬರಹಗಳನ್ನು, ವಿಚಾರಗಳನ್ನು ಬಿಜೆಪಿ ನಾಯಕರು ಒಂದಿಷ್ಟಾದರೂ ತಿಳಿದುಕೊಂಡಿದ್ದರೆ, ಪಠ್ಯ ಪುಸ್ತಕ ಬದಲಾವಣೆಯ ಹೆಸರಿನಲ್ಲಿ ಕುವೆಂಪು ಅವರಿಗೆ ಅವಮಾನವಾಗುವ ಸಾಲುಗಳನ್ನು ಪಠ್ಯದೊಳಗೆ ಸೇರಿಸುತ್ತಿರಲಿಲ್ಲ. ಹಾಗೂ ಇದೀಗ ‘ಜ್ಞಾನ ದೇಗುಲವಿದು, ಕೈ ಮುಗಿದು ಒಳಗೆ ಬಾ’ ಸಾಲನ್ನು ಕುವೆಂಪು ಅವರ ಬರಹ ಎಂದು ಹೇಳಿ ನಗೆಪಾಟಲಿಗೀಡಾಗುವ ಸ್ಥಿತಿ ಬರುತ್ತಿರಲಿಲ್ಲ. ಎಲ್ಲ ಕ್ಕಿಂತ ಮುಖ್ಯವಾಗಿ ಕುವೆಂಪು ಅವರು ತಮ್ಮ ಬದುಕು, ಬರಹಗಳಲ್ಲಿ ವಿದ್ಯಾರ್ಥಿಗಳಿಗೆ, ಯುವಕರಿಗೆ ‘ಪ್ರಶ್ನಿಸುವುದನ್ನು’ ಕಲಿಸಿಕೊಟ್ಟರು ಎನ್ನುವುದು ಅವರ ಅರಿವಿಗೆ ಬರುತ್ತಿತ್ತು.

ಶಾಲೆಗಳಲ್ಲಿ ವಿದ್ಯಾರ್ಥಿಗಳು ಪ್ರಶ್ನೆ ಮಾಡಿದಾಗ ಮಾತ್ರ ಗುರುಗಳಿಂದ ಉತ್ತರ ಸಿಗಲು ಸಾಧ್ಯ. ತಮ್ಮ ಅನುಮಾನಗಳನ್ನು , ಪ್ರಶ್ನೆಗಳನ್ನು ಗುರುಗಳ ಜೊತೆಗೆ ಧೈರ್ಯವಾಗಿ ತೋಡಿಕೊಂಡು ಜ್ಞಾನವನ್ನು ನಿಮ್ಮದಾಗಿಸಿಕೊಳ್ಳಿ ಎನ್ನುವ ಸಂದೇಶವನ್ನು ಹೊಸ ಘೋಷ ವಾಕ್ಯ ನೀಡುತ್ತದೆ. ಭಾರತದಲ್ಲಿ ದೇಗುಲಗಳು ಪುಣ್ಯ ಸ್ಥಳಗಳಾಗಿ ಮಾತ್ರ ಉಳಿದಿಲ್ಲ. ಇಂದು ದೇವಾಲಯಗಳು ಅಸ್ಪಶ್ಯತೆ, ಪಂಕ್ತಿಭೇದ, ಮಡೆಸ್ನಾನ, ವರ್ಗಭೇದ ಮೊದಲಾದ ಕಾರಣಗಳಿಗಾಗಿಯೂ ಸುದ್ದಿಯಲ್ಲಿವೆ. ದೇವಾಲಯ ಪ್ರವೇಶಿಸಿದ ಕಾರಣಕ್ಕಾಗಿ, ದೇವರನ್ನು ಮುಟ್ಟಿದ ಕಾರಣಕ್ಕಾಗಿ ದಲಿತರ ಮೇಲೆ ಹಲ್ಲೆಯಾಗಿರುವ ಪ್ರಕರಣಗಳು ಬೆಳಕಿಗೆ ಬರುತ್ತಿರುತ್ತವೆ. ಜ್ಞಾನ ದೇಗುಲಗಳಾಗಿರುವ ಶಾಲೆಗಳು ಎಲ್ಲ ಮಂದಿರ, ದೇವಸ್ಥಾನಗಳಿಗಿಂತ ಮಿಗಿಲಾದುದು. ಇಲ್ಲಿ ಅಸ್ಪಶ್ಯತೆ, ಜಾತಿ ಭೇದ, ವರ್ಗಭೇದವಿಲ್ಲ. ದೇವಸ್ಥಾನದೊಳಗೆ ದೇವರನ್ನು ಪ್ರಶ್ನಿಸುವಂತಿಲ್ಲ. ಆದರೆ ಈ ದೇಗುಲದೊಳಗೆ ಪ್ರಶ್ನೆಗಳ ಜೊತೆಗೇ ಪ್ರವೇಶಿಸಬೇಕು. ತಮ್ಮ ಅನುಮಾನಗಳನ್ನು ಗುರುಗಳ ಜೊತೆಗೆ ತೋಡಿ, ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು. ಪ್ರಶ್ನಿಸಲು ಹಿಂಜರಿಯುವ ವಿದ್ಯಾರ್ಥಿ ಇಲ್ಲಿ ಜ್ಞಾನವನ್ನು ಪೂರ್ಣವಾಗಿ ತನ್ನದಾಗಿಸಲು ಸಾಧ್ಯವಿಲ್ಲ. ಕುವೆಂಪು ಅವರ ‘ನಿರಂಕುಶ ಮತಿಗಳಾಗಿ’ ಕೃತಿಯೂ ಇದನ್ನೇ ಪ್ರತಿಪಾದಿಸುತ್ತದೆ. ಯಾವುದನ್ನೂ ಸುಮ್ಮನೆ ಒಪ್ಪಿಕೊಳ್ಳಬೇಡಿ ಎಂದು ಅವರು ಯುವಕರಿಗೆ ಕರೆ ನೀಡುತ್ತಾರೆ. ನಿಮ್ಮ ಮತಿಯನ್ನು ಯಾವುದೋ ಮೌಢ್ಯ, ಕಂದಾಚಾರಗಳಿಗೆ ಒತ್ತೆಯಿಡಬೇಡಿ, ಎಲ್ಲವನ್ನು ಪ್ರಶ್ನಿಸಿ ಎಂದು ಅವರು ಯುವಕರಲ್ಲಿ ಮನವಿ ಮಾಡುತ್ತಾರೆ. ಶಾಲೆಯಲ್ಲಿ ಕೋಮುವಿಚಾರಗಳನ್ನು ತಂದು ವಿದ್ಯಾರ್ಥಿಗಳನ್ನು ಗುರುಗಳ ವಿರುದ್ಧ ಗಲಭೆಯೆಬ್ಬಿಸಲು ಕುಮ್ಮಕ್ಕು ನೀಡಿದ ಬಿಜೆಪಿ ನಾಯಕರು ಇದೀಗ ‘ಶಾಲೆಯಲ್ಲಿ ವಿದ್ಯಾರ್ಥಿಗಳು ಯಾಕೆ ಪ್ರಶ್ನಿಸಬೇಕು?’ ಎಂದು ಕೇಳುತ್ತಿರುವುದು ತಮಾಷೆಯಾಗಿದೆ. ಇಂದು ವಸತಿ ಶಾಲೆಗಳಲ್ಲಿ ಓದುತ್ತಿರುವ ಹೆಚ್ಚಿನ ಮಕ್ಕಳು ಶೋಷಿತ ಸಮುದಾಯಕ್ಕೆ ಸೇರಿದವರು. ಯಾವುದೇ ಅವ್ಯವಸ್ಥೆಯನ್ನು, ಜಾತೀಯತೆಯನ್ನು ಪ್ರಶ್ನಿಸುವ ಮನೋಭಾವ ಇವರಲ್ಲಿ ಬೆಳೆಸುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವಸತಿ ಶಾಲೆಗಳಲ್ಲಿ ‘ಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ’ ಎನ್ನುವ ಘೋಷಣೆಯನ್ನು ಹಾಕಿರಬಹುದು.

ಇಂದು ವಸತಿ ಶಾಲೆಗಳು ಹತ್ತು ಹಲವು ಅವ್ಯವಸ್ಥೆಗಳಿಗಾಗಿ ಗುರುತಿಸುತ್ತಿವೆ. ವಸತಿ ಶಾಲೆಗಳಲ್ಲಿ ಮಕ್ಕಳ ಕೈಯಲ್ಲೇ ಶೌಚಗುಂಡಿಯನ್ನು ಶುಚಿಗೊಳಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿವೆ. ಮಕ್ಕಳಿಗೆ ಪೌಷ್ಟಿಕ ಆಹಾರದಲ್ಲಿ ಕೊರತೆಯಾಗುತ್ತಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಕೆಲವು ಶಿಕ್ಷಕರು ವಸತಿ ಶಾಲೆಗಳಲ್ಲಿ ಜಾತೀಯತೆಯನ್ನು ಪಾಲಿಸುತ್ತಿರುವುದೂ ಬೆಳಕಿಗೆ ಬಂದಿವೆ. ವಿದ್ಯಾರ್ಥಿಗಳು ಅಲ್ಲಿ ನಡೆಯುವ ಇಂತಹ ಅಕ್ರಮಗಳನ್ನು ಪ್ರಶ್ನಿಸುವುದಕ್ಕೂ ಹೆದರಬಾರದು ಎನ್ನುವ ಕಾರಣಕ್ಕೆ ಮೇಲಿನ ಸಾಲನ್ನು ಮುಂಭಾಗದಲ್ಲಿ ಬರೆಸಿರಬಹುದು. ಇಂದು ಬಿಜೆಪಿಗೆ ನಿಜಕ್ಕೂ ವಸತಿ ಶಾಲೆಗಳ ಬಗ್ಗೆ, ಅಲ್ಲಿರುವ ವಿದ್ಯಾರ್ಥಿಗಳ ಬಗ್ಗೆ ಕಾಳಜಿಯಿದ್ದರೆ ವಸತಿ ಶಾಲೆಗಳ ಮೂಲಸೌಕರ್ಯಗಳ ಕೊರತೆಗಳನ್ನು ಎತ್ತಿಕೊಂಡು ಸಾರ್ವಜನಿಕ ಪ್ರತಿಭಟನೆಗಳನ್ನು ಮಾಡಲಿ. ವಸತಿ ಶಾಲೆಗಳಿಗೆ ಸರಕಾರ ಹೆಚ್ಚಿನ ಅನುದಾನಗಳನ್ನು ನೀಡಲು ಹೋರಾಟ ನಡೆಸಲಿ. ಇಂತಹ ಹೋರಾಟಗಳಿಂದ ವಸತಿಶಾಲೆಗಳಿಗೆ, ಅಲ್ಲಿ ಕಲಿಯುವ ಮಕ್ಕಳಿಗೆ ಅಲ್ಪ ಪ್ರಯೋಜನವಾದರೂ ಆದೀತು. ಕುವೆಂಪು ಅವರ ಆತ್ಮಕ್ಕೂ ಸಂತೋಷ ಕೊಟ್ಟೀತು. ‘ಜ್ಞಾನ ದೇಗುಲವಿದು, ಕೈ ಮುಗಿದು ಒಳಗೆ ಬಾ’ ಎನ್ನುವ ಸಾಲಿನ ಬದಲಿಗೆ ‘ಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ’ ಎನ್ನುವ ಸಾಲನ್ನು ಬರೆದಾಕ್ಷಣ ಸಂಸ್ಕೃತಿಗೆ ಯಾವ ಧಕ್ಕೆಯೂ ಆಗುವುದಿಲ್ಲ. ನಾವು ಏನನ್ನು ಪ್ರಶ್ನಿಸಬೇಕು? ಏನನ್ನು ಪ್ರಶ್ನಿಸಬಾರದು? ಎನ್ನುವ ವಿವೇಕ ನಮ್ಮಲ್ಲಿರಬೇಕು. ಮಂಗಳೂರಿನ ಶಾಲೆಯಲ್ಲಿ ಬಿಜೆಪಿಯ ನಾಯಕರು ವಿದ್ಯಾರ್ಥಿಗಳ ಬಾಯಿಯಿಂದ ಶಾಲೆಯ ಆವರಣದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿಸಿ ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ಅವಮಾನಿಸಿದ ಉದಾಹರಣೆ ನಮ್ಮ ಮುಂದಿದೆ. ‘ಆಚಾರ್ಯ ದೇವೋಭವ’ ಎನ್ನುವ ಭಾರತೀಯ ಸಂಸ್ಕೃತಿಗೆ ಮಾಡಿದ ಅವಮಾನವಿದು. ಇಂತಹ ಸಂಸ್ಕೃತಿಯ ವಕ್ತಾರರಿಗೆ ‘ಅಜ್ಞಾನವನ್ನು ಪ್ರಶ್ನಿಸಿ’ ಎನ್ನುವ ಸಾಲು ಅಸಮಾಧಾನ ತರುವುದು ಸಹಜವೇ ಆಗಿದೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News