ಸ್ವಂತಿಕೆಯನ್ನು ಬಲಿಕೊಟ್ಟು ಜೆಡಿಎಸ್ ಪಡೆದುಕೊಂಡ ಭಿಕ್ಷೆ

Update: 2024-03-21 05:26 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘ಏಡಿ ಹಿಡಿಯಲೆಂದು ಬಿಲಕ್ಕೆ ಕೈ ಹಾಕಿದರೆ ಏಡಿಯೂ ಇಲ್ಲ, ಹಾಕಿದ ಕೈಯೂ ಇಲ್ಲ’ ಎನ್ನುವಂತಹ ಸ್ಥಿತಿಯಲ್ಲಿ ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ಒದ್ದಾಡುತ್ತಿದ್ದಾರೆ. ಅವಸಾನದ ಅಂಚಿನಲ್ಲಿರುವ ತನ್ನ ಪಕ್ಷವನ್ನು ಬಿಜೆಪಿಯೊಂದಿಗೆ ಮೈತ್ರಿ ಮಾಡಿ ಉಳಿಸಿಕೊಳ್ಳುವ ಕುಮಾರಸ್ವಾಮಿ ಪ್ರಯತ್ನ ಫಲಕೊಡುವಂತೆ ಕಾಣುತ್ತಿಲ್ಲ. ಬಿಜೆಪಿಯೊಂದಿಗೆ ವರ್ಣಸಂಕರಕ್ಕೆ ಬಲಿಯಾಗಿರುವ ಜೆಡಿಎಸ್‌ಗೆ ಈಗ ರಾಜ್ಯದಲ್ಲಿ ಸ್ವಂತ ಅಸ್ತಿತ್ವವೇ ಇಲ್ಲ ಎನ್ನುವ ಸ್ಥಿತಿಯಿದೆ. ಜೆಡಿಎಸ್‌ನ್ನು ಬಳಸಿಕೊಂಡು ಹಾಸನ, ಮಂಡ್ಯ ಭಾಗದಲ್ಲಿ ಬಿಜೆಪಿಯನ್ನು ಇನ್ನಷ್ಟು ಆಳಕ್ಕಿಳಿಸಲು ಹೊರಟಿರುವ ಬಿಜೆಪಿ ವರಿಷ್ಠರು, ಭಿಕ್ಷೆಯಂತೆ ಎರಡು ಸ್ಥಾನಗಳನ್ನು ಜೆಡಿಎಸ್‌ಗೆ

ನೀಡಿದ್ದಾರೆ. ‘‘ಕೇವಲ ಎರಡು ಕ್ಷೇತ್ರಕ್ಕಾಗಿ ಈ ಮೈತ್ರಿ ಬೇಕಿತ್ತೆ?’’ ಎಂದು ಕುಮಾರ ಸ್ವಾಮಿಯವರು ಕೇಳಿಕೊಂಡಿದ್ದಾರೆ. ಆದರೆ ಅವರು ಅವರಲ್ಲೇ ಈ ಪ್ರಶ್ನೆಯನ್ನು ಕೇಳಿಕೊಂಡು ಉತ್ತರವನ್ನು ಪಡೆದುಕೊಳ್ಳಬೇಕಾಗಿದೆ. ಯಾಕೆಂದರೆ, ಬಿಜೆಪಿ ಉತ್ತರಿಸುವ ಸ್ಥಿತಿಯಲ್ಲಿ ಇಲ್ಲ. ‘‘ನಾನೇನು ಬಿಜೆಪಿ ಹೈಕಮಾಂಡ್ ಬಳಿ 6-7 ಸ್ಥಾನಗಳನ್ನು ಕೇಳಿಲ್ಲ. ಹಾಸನ, ಮಂಡ್ಯ ಹಾಗೂ ಕೋಲಾರ ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧಿಸಲಿದೆ. ಬಿಜೆಪಿ ಹೈಕಮಾಂಡ್ ರಾಜ್ಯದ 20 ಲೋಕಸಭೆ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದಾಗ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ವಿಷಾದನೀಯ’’ ಎಂದು ಅವರು ಕಣ್ಣೀರು ಹಾಕಿದ್ದಾರೆ. ‘‘ನಮ್ಮನ್ನು, ನಮ್ಮ ಪಕ್ಷವನ್ನು ಬಿಜೆಪಿ ನಿರ್ಲಕ್ಷ್ಯ ಮಾಡುತ್ತಿದೆ. ಚುನಾವಣಾ ಸಭೆ, ಪ್ರಚಾರವನ್ನು ಬಿಜೆಪಿ ನಮ್ಮನ್ನು ಬಿಟ್ಟು ಮಾಡುತ್ತಿದೆ. ಯಾವ ಸಭೆಗೂ ಬಿಜೆಪಿ ನಮ್ಮನ್ನು ಕರೆಯುತ್ತಿಲ್ಲ’’ ಎಂದು ಜೆಡಿಎಸ್ ನಾಯಕರು ಕೊರಗುತ್ತಿದ್ದಾರೆ. ನಿಜಕ್ಕೂ ಇಂತಹದೊಂದು ಅವಮಾನವನ್ನು ಕುಮಾರಸ್ವಾಮಿ ಬಿಜೆಪಿಯ ಬಳಿ ಬೇಡಿ ಪಡೆದುಕೊಂಡಿದ್ದಾರೆ. ಲೋಕಸಭಾ ಚುನಾವಣೆ ಘೋಷಣೆಗೆ ಮುನ್ನವೇ ಈ ಸ್ಥಿತಿಯಾದರೆ ಫಲಿತಾಂಶದ ಬಳಿಕ ಜೆಡಿಎಸ್ ಗತಿಯೇನು ಎಂದು ಕಾರ್ಯಕರ್ತರು ಚಿಂತಾಗ್ರಸ್ತರಾಗಿದ್ದಾರೆ. ಜೆಡಿಎಸ್ ಒಳಗಿರುವ ಅಳಿದುಳಿದ ಕಾರ್ಯಕರ್ತರು ಈಗಾಗಲೇ ಪೂರ್ಣ ಪ್ರಮಾಣದಲ್ಲಿ ಬಿಜೆಪಿಯೊಂದಿಗೆ ವಿಲೀನವಾಗಲು ಸಿದ್ಧತೆ ನಡೆಸುತ್ತಿದ್ದಾರೆ.

ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಂದರ್ಭದಲ್ಲಿ ಅಮಿತ್ ಶಾ ಅವರು ರಾಜ್ಯದ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ. ದಿಲ್ಲಿಯಲ್ಲಿ ಮೈತ್ರಿ ಘೋಷಣೆಯಾದಾಗ ರಾಜ್ಯದಲ್ಲಿರುವ ಬಿಜೆಪಿ ನಾಯಕರಿಗೆ ಅದರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಜೆಡಿಎಸ್ ಜೊತೆಗೆ ಮೈತ್ರಿ ಮಾಡುವುದರ ವಿರುದ್ಧ ರಾಜ್ಯದ ಹಲವು ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಸ್ವತಃ ಯಡಿಯೂರಪ್ಪ ಅವರೇ ಈ ಬಗ್ಗೆ ಕಿಡಿಯಾಗಿದ್ದರು. ಇದೀಗ ಟಿಕೆಟ್ ಹಂಚಿಕೆಯಲ್ಲಿ ಯಡಿಯೂರಪ್ಪ ಬಣದ ಕೈ ಮೇಲಾಗಿದೆ. ರಾಜ್ಯ ಬಿಜೆಪಿ ನಾಯಕರು ಟಿಕೆಟ್ ಹಂಚಿಕೆಯ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಜೆಡಿಎಸ್‌ಗೆ ಟಿಕೆಟ್ ನೀಡುವುದರ ಬಗ್ಗೆ ಕಠಿಣ ನಿಲುವು ತಳೆದಿದ್ದಾರೆ. ಚುನಾವಣೆಯಲ್ಲಿ ಜೆಡಿಎಸ್‌ಗೆ ಬಿಜೆಪಿಯ ಅಗತ್ಯವಿದೆಯೇ ಹೊರತು, ಬಿಜೆಪಿಗೆ ಜೆಡಿಎಸ್‌ನ ಅಗತ್ಯವಿಲ್ಲ ಎನ್ನುವ ಸಂದೇಶವನ್ನು ಅವರು ಈಗಾಗಲೇ ಕುಮಾರಸ್ವಾಮಿಗೆ ರವಾನಿಸಿದ್ದಾರೆ. ಸದ್ಯಕ್ಕೆ ಬಿಜೆಪಿಯೊಳಗೆ ಎದ್ದಿರುವ ಗದ್ದಲವನ್ನು ತಣಿಸುವುದು ಹೇಗೆ ಎನ್ನುವ ಚಿಂತೆಯಲ್ಲಿದ್ದಾರೆ ಬಿಜೆಪಿಯ ವರಿಷ್ಠರು. ಟಿಕೆಟ್ ಕಳೆದುಕೊಂಡಿರುವ ಹಲವು ನಾಯಕರು ಬಿಜೆಪಿಯೊಳಗೆ ಬಂಡೆದ್ದಿದ್ದಾರೆ. ಕಾಂಗ್ರೆಸ್‌ಗೆ ಪಕ್ಷಾಂತರವಾಗುವ ಮಾತನಾಡುತ್ತಿದ್ದಾರೆ. ಈ ಗದ್ದಲದಲ್ಲಿ ಕುಮಾರಸ್ವಾಮಿಯ ಅಳಲನ್ನು ಕೇಳುವವರೇ ಇಲ್ಲ ಎನ್ನುವಂತಾಗಿದೆ.

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಜೆಡಿಎಸ್ ಅದೆಷ್ಟು ಮೈ ಕೊಳೆ ಮಾಡಿಕೊಂಡಿದೆ ಎಂದರೆ ಸ್ವತಃ ಬಿಜೆಪಿ ನಾಯಕರೇ ಜೆಡಿಎಸ್ ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದಾರೆ. ಈ ಬಾರಿ ಟಿಕೆಟ್ ಹಂಚಿಕೆಯ ಸಂದರ್ಭದಲ್ಲಿ ದ್ವೇಷ ಕಾರುವ ಹಲವು ರಾಜಕಾರಣಿಗಳನ್ನು ಬಿಜೆಪಿ ವರಿಷ್ಠರು ದೂರ ಇಟ್ಟಿದ್ದಾರೆ. ಸಿ.ಟಿ. ರವಿ, ಈಶ್ವರಪ್ಪ, ಅನಂತಕುಮಾರ್ ಹೆಗಡೆಯಂತಹ ರಾಜಕಾರಣಿಗಳಿಗೆ ಈ ಕಾರಣಕ್ಕಾಗಿಯೇ ಟಿಕೆಟ್ ತಪ್ಪಿದೆ. ವಿಪರ್ಯಾಸವೆಂದರೆ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಬೆನ್ನಿಗೇ ಜೆಡಿಎಸ್ ನಾಯಕರು, ದ್ವೇಷ ರಾಜಕಾರಣದಲ್ಲಿ ಬಿಜೆಪಿ ನಾಯಕರೊಂದಿಗೆ ಪೈಪೋಟಿಗೆ ಇಳಿದರು. ಮಂಡ್ಯದಲ್ಲಿ ಧ್ವಜ ರಾಜಕಾರಣದ ಹೆಸರಿನಲ್ಲಿ ಜೆಡಿಎಸ್ ನಾಯಕರ ವರ್ತನೆ ಬಿಜೆಪಿ ನಾಯಕರೂ ನಾಚುವಂತಿತ್ತು. ಈ ಧ್ವಜ ರಾಜಕಾರಣ ಮಂಡ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ಗೆ ಸಾಕಷ್ಟು ಹಿನ್ನಡೆಯನ್ನುಂಟು ಮಾಡಿದೆ. ಮಂಡ್ಯದ ಜನರು ದ್ವೇಷಕಾರಣದ ಜೊತೆಗೆ ನಾವಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೆ ಜೆಡಿಎಸ್‌ನ ಕಾರ್ಯಕರ್ತರನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಭಾಗಶಃ ಯಶಸ್ವಿಯಾಗಿದೆ. ಬಿಜೆಪಿಗೂ ಬೇಕಾಗಿರುವುದು ಇಷ್ಟೇ. ಕಾಟಾಚಾರಕ್ಕೆ ಎರಡು ಸ್ಥಾನಗಳನ್ನು ಕೊಟ್ಟಂತೆ ಮಾಡಿ, ಜೆಡಿಎಸ್‌ನ ತಳಸ್ತರದ ಕಾರ್ಯಕರ್ತರನ್ನು ಪೂರ್ಣ ಪ್ರಮಾಣದಲ್ಲಿ ತನ್ನೊಳಗೆ ವಿಲೀನವಾಗಿಸುವುದು ಬಿಜೆಪಿ ವರಿಷ್ಠರ ಯೋಜನೆಯಾಗಿದೆ.

ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡ ಜೆಡಿಎಸ್ 7 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ 21 ಸ್ಥಾನಗಳನ್ನು ತನ್ನಲ್ಲಿ ಉಳಿಸಿಕೊಂಡಿತ್ತು. ಈ ಮೈತ್ರಿಯಿಂದ ಕಾಂಗ್ರೆಸ್‌ಗೆ ಲಾಭಕ್ಕಿಂತ ದೊಡ್ಡ ಮಟ್ಟದಲ್ಲಿ ನಷ್ಟವಾಯಿತು. ಮೈತ್ರಿ ನಾಯಕರ ಮಟ್ಟದಲ್ಲಿ ನಡೆಯಿತೇ ಹೊರತು, ಕಾರ್ಯಕರ್ತರ ಮಟ್ಟದಲ್ಲಿ ಫಲಕೊಡಲೇ ಇಲ್ಲ. ಪರಿಣಾಮವಾಗಿ ತುಮಕೂರಿನಲ್ಲಿ ಸ್ಪರ್ಧಿಸಿದ್ದ ದೇವೇಗೌಡರು ಕೂಡ ಸೋಲುಣ್ಣ ಬೇಕಾಯಿತು. ಪ್ರಜ್ವಲ್ ರೇವಣ್ಣ ಅವರ ಗೆಲುವಿನಿಂದ ಜೆಡಿಎಸ್ ಸಂತೃಪ್ತಿ ಪಡಬೇಕಾಯಿತು. ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡ ಸಂದರ್ಭದಲ್ಲಿ ಜೆಡಿಎಸ್‌ಗೆ ರಾಜ್ಯದಲ್ಲಿ ತನ್ನದೇ ಅಸ್ತಿತ್ವವೊಂದು ಇತ್ತು. ಆದರೆ ಇಂದು ತನ್ನ ಆತ್ಮಾಭಿಮಾನವನ್ನು ಬಲಿಕೊಟ್ಟು ಬಿಜೆಪಿಯ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ದೊಡ್ಡ ಧ್ವನಿಯಲ್ಲಿ, ಆತ್ಮವಿಶ್ವಾಸದಿಂದ ತನ್ನ ಪಾಲನ್ನು ಪಡೆಯುವ ಶಕ್ತಿಯನ್ನು ಜೆಡಿಎಸ್ ಕಳೆದುಕೊಂಡಿದೆ. ಕಣ್ಣೀರು ಸುರಿಸುತ್ತಾ ಬಿಜೆಪಿ ವರಿಷ್ಠರ ಜೊತೆಗೆ ತನ್ನ ಪಾಲನ್ನು ಕುಮಾರಸ್ವಾಮಿ ಬೇಡುತ್ತಿದ್ದಾರೆ. ಬಿಜೆಪಿ ಕೊಟ್ಟದ್ದನ್ನು ತೆಗೆದುಕೊಂಡು ಸ್ಪರ್ಧಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಜಾತ್ಯತೀತ ಮುಖವಾಡವನ್ನು ಈಗಾಗಲೇ ಹರಿದು ಹಾಕಿರುವ ಜೆಡಿಎಸ್ ತನ್ನ ವಿರೂಪಗೊಂಡ ಮುಖದೊಂದಿಗೆ ಮತ್ತೆ ಮತದಾರರನ್ನು ಸ್ವತಂತ್ರವಾಗಿ ಎದುರಿಸುವುದು ಕಷ್ಟ. ಆದುದರಿಂದ ಸಿಕ್ಕಿದ್ದು ಪಂಚಾಮೃತ ಎಂದು ಸ್ವೀಕರಿಸಿ, ಪ್ರಧಾನಿ ಮೋದಿಯ ಹೆಸರಿನಲ್ಲಿ ಕುಮಾರಸ್ವಾಮಿಯವರು ಮತ ಯಾಚಿಸಿ, ರಾಜ್ಯ ರಾಜಕೀಯದಲ್ಲಿ ಅಸ್ತಿತ್ವ ಉಳಿಸಿಕೊಳ್ಳಬೇಕಾಗಿದೆ.

ಈ ಬಾರಿಯ ಚುನಾವಣೆ ರಾಜ್ಯದಲ್ಲಿ ಜೆಡಿಎಸ್ ಪಾಲಿಗೆ ಕೊನೆಯ ಚುನಾವಣೆಯಾಗುವ ಸಾಧ್ಯತೆಯಿದೆ. ಲೋಕಸಭಾ ಚುನಾವಣೆಯ ಬಳಿಕ ಎನ್‌ಡಿಎ ಮತ್ತೆ ಅಧಿಕಾರಕ್ಕೇರಿದರೆ ಅದರ ಫಲಾನುಭವಿಯಾಗುವ ಬಗ್ಗೆ ಕಾರ್ಯ ಯೋಜನೆಯನ್ನು ಕುಮಾರಸ್ವಾಮಿ ಹಾಕಿಕೊಂಡಿದ್ದಾರೆ. ಆದರೆ ಅದಕ್ಕೆ ಅವರು ತೆರಬೇಕಾದ ಬೆಲೆ ಮಾತ್ರ ದೊಡ್ಡದು. ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿಗೆ ಜೆಡಿಎಸ್ ಪೂರ್ಣ ಪ್ರಮಾಣದಲ್ಲಿ ಬಿಜೆಪಿಯೊಂದಿಗೆ ವಿಲೀನವಾಗಿರುತ್ತದೆ. ಬಿಜೆಪಿಯೊಳಗೆ ತನ್ನ ಪುತ್ರರಿಗೆ ಯೋಗ್ಯ ಸ್ಥಾನಮಾನ ಒದಗಿಸಿ ಕುಮಾರಸ್ವಾಮಿ ರಾಜಕೀಯವಾಗಿ ನಿವೃತ್ತರಾಗಬಹುದು. ನಾಡು ನುಡಿಯ ಪರವಾಗಿ ನಿಂತು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾಗಿ ಬೆಳೆಯುವ ಅವಕಾಶವನ್ನು ಕುಮಾರಸ್ವಾಮಿಯವರು ಈ ಬಾರಿಯ ಲೋಕಸಭಾ ಚುನಾವಣೆಯೊಂದಿಗೆ ಶಾಶ್ವತವಾಗಿ ಕಳೆದುಕೊಳ್ಳುವ ಎಲ್ಲ ಸೂಚನೆಗಳು ಕಾಣುತ್ತಿವೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News