ಹೆಣ್ಣು ಭ್ರೂಣ ಹತ್ಯೆಗೆ ಕೊನೆ ಎಂದು?

Update: 2024-06-04 02:03 GMT

ಮಹಿಳೆಯರನ್ನು ಮಾತೆಯರೆನ್ನುತ್ತೇವೆ. ದೇವತೆಯ ಸ್ಥಾನ ಮಾನ ನೀಡುತ್ತೇವೆ. ಆದರೆ ವಾಸ್ತವದಲ್ಲಿ ಹೆಣ್ಣು ಮಕ್ಕಳ ಪರಿಸ್ಥಿತಿ ನಮ್ಮ ಭಾರತದಲ್ಲಿ ಹೇಗಿದೆ?. ನಿತ್ಯ ಅತ್ಯಾಚಾರ, ಹತ್ಯೆ, ಮಾನಭಂಗ, ಮಾರಾಟ. ಇದು ಸಾಲದೆಂಬಂತೆ ಭ್ರೂಣದಲ್ಲಿ ಇರುವಾಗಲೇ ಹೆಣ್ಣಿನ ಕೊಲೆ. ಹೆಣ್ಣು ಭ್ರೂಣ ಹತ್ಯೆಗೆ ಸರಕಾರ ಎಷ್ಟೇ ಕಾನೂನುಗಳನ್ನು ಮಾಡಿದರೂ, ಜನಜಾಗೃತಿ ಉಂಟು ಮಾಡಿದರೂ ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ಮಂಡ್ಯ ಜಿಲ್ಲೆಯ ಪಾಂಡವಪುರದ ಸಮೀಪದ ಆಲೆಮನೆಯೊಂದರಲ್ಲಿ ಬಯಲಿಗೆ ಬಂದ ಹೆಣ್ಣು ಭ್ರೂಣ ಹತ್ಯೆಯ ಭಯಾನಕ ಜಾಲದ ಬೆನ್ನ ಹಿಂದೆಯೇ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ನಡೆದ ಗರ್ಭಪಾತದ ಪ್ರಕರಣ ತೀವ್ರ ಆತಂಕಕಾರಿಯಾಗಿದೆ. ಎರಡೂ ಪ್ರಕರಣಗಳಲ್ಲಿ ಸರಕಾರಿ ಅಧಿಕಾರಿಗಳ ಘನ ಘೋರ ನಿರ್ಲಕ್ಷ್ಯ ಅತ್ಯಂತ ಖಂಡನೀಯವಾಗಿದೆ.

ಪ್ರತೀ ಬಾರಿ ಹೆಣ್ಣು ಭ್ರೂಣ ಹತ್ಯೆ ನಡೆದಾಗ ಖಂಡನೆಯ ಹೇಳಿಕೆಗಳು ಬರುತ್ತವೆ. ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಯಾಗುತ್ತದೆ. ಆರೋಗ್ಯ ಮಂತ್ರಿಗಳು ಸಭೆ ನಡೆಸುತ್ತಾರೆ. ಭ್ರೂಣ ಹತ್ಯೆಯ ಸುಳಿವು ನೀಡಿದವರಿಗೆ ಬಹುಮಾನ ಘೋಷಿಸಲಾಗುತ್ತದೆ. ಜಾಗೃತ ದಳ ರಚನೆಯಾಗುತ್ತದೆ. ಆದರೆ ಈ ಹತ್ಯೆಯನ್ನು ತಡೆಯಲು ಸಾಧ್ಯವಾಗುವುದಿಲ್ಲ. ಇಂತಹ ಪ್ರಕರಣದ ಆರೋಪಿಗಳು ಯಾರ ಹೆದರಿಕೆಯೂ ಇಲ್ಲದೆ ಮತ್ತೆ ಅದೇ ಹೇಯ ಕೃತ್ಯ ದಲ್ಲಿ ತೊಡಗುತ್ತಾರೆ. ಬರೀ ಸರಕಾರದ ಕ್ರಮಗಳಿಂದ ಇದನ್ನು ತಡೆಯಲು ಸಾಧ್ಯವಾಗುವುದಿಲ್ಲ. ಧರ್ಮಗುರುಗಳು, ಧಾರ್ಮಿಕ ಸಂಘಟನೆಗಳು, ಸಾಮಾಜಿಕ ಸಂಘಟನೆಗಳು ಕೂಡ ಈ ಬಗ್ಗೆ ಧ್ವನಿಯೆತ್ತಬೇಕು. ವಿಭಿನ್ನ ಮತಗಳ ಯುವಕ, ಯುವತಿ ಪ್ರೀತಿಸಿ ಮದುವೆಯಾದರೆ ‘ಲವ್ ಜಿಹಾದ್’ ಎಂದು ಹುಯಿಲೆಬ್ಬಿಸುವ ಕೆಲವು ಮತೀಯವಾದಿ ಸಂಘಟನೆಗಳು ಹೆಣ್ಣು ಭ್ರೂಣ ಹತ್ಯೆಯಂತಹ ಪ್ರಕರಣಗಳಲ್ಲಿ ಜಾಣ ಮೌನವನ್ನು ತಾಳುತ್ತವೆ. ಹೀಗಾಗಿ ಯಾರ, ಯಾವ ಹೆದರಿಕೆಯೂ ಇಲ್ಲದೆ ಈ ಸಮಾಜದಲ್ಲಿ ಭ್ರೂಣದಲ್ಲೇ ಹೆಣ್ಣಿನ ಕೊಲೆ ನಡೆಯುತ್ತದೆ.

ಮೊದಲು ಹೆಣ್ಣು ಭ್ರೂಣ ಹತ್ಯೆ ದೊಡ್ಡ ನಗರಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳಲ್ಲಿ, ಪ್ರಯೋಗಾಲಯಗಳಲ್ಲಿ ನಡೆಯುತ್ತಿದ್ದವು. ಈಗ ರಾಜಧಾನಿ ಬೆಂಗಳೂರಿನಿಂದ 471 ಕಿ.ಮೀ. ದೂರದಲ್ಲಿರುವ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಂಥ ಸಣ್ಣ ಊರಿನಲ್ಲೂ ಭ್ರೂಣ ಹತ್ಯೆ ಗಳು ವ್ಯಾಪಕವಾಗಿ ನಡೆಯುತ್ತಿವೆ. ಮಹಾಲಿಂಗಪುರದಲ್ಲಿ ಮಹಾರಾಷ್ಟ್ರದ ಊರುಗಳಿಂದ ಬಂದು ಮಹಿಳೆಯರು ಭ್ರೂಣ ತೆಗೆಸಿಕೊಂಡು ಹೋಗುತ್ತಾರೆ. ಹೀಗೆ ಬಂದ ಮಹಿಳೆಯೊಬ್ಬಳು ಸಾವಿಗೀಡಾಗಿದ್ದಾಳೆ. ಗರ್ಭಪಾತ ಮಾಡಿಸಿದ ಮಹಿಳೆಯ ಮೇಲೆ ಹಿಂದೆಯೂ ಇಂತಹ ಪ್ರಕರಣಗಳು ದಾಖಲಾಗಿದ್ದವು. ಆದರೂ ಆಕೆ ಯಾರ ಹೆದರಿಕೆಯೂ ಇಲ್ಲದೆ ಅದೇ ಕೆಲಸವನ್ನು ಮುಂದುವರಿ ಸಿದ್ದಾಳೆ. ಇದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ.

ಮಂಡ್ಯದಲ್ಲಾಗಲಿ, ಮಹಾಲಿಂಗಪುರದಲ್ಲಾಗಲಿ ಎಲ್ಲೇ ಆಗಲಿ ಪ್ರಭಾವಿಗಳ, ಅಧಿಕಾರಿಗಳ ಆಶೀರ್ವಾದ ಇಲ್ಲದೇ ಇಂತಹ ಅಕ್ರಮಗಳು ನಡೆಯುವುದಿಲ್ಲ. ಇವು ಅವ್ಯಾಹತವಾಗಿ ನಡೆಯುತ್ತಿವೆಯಾದರೂ ಏನೋ ಎಡವಟ್ಟು ಆದಾಗ ಬಯಲಿಗೆ ಬರುತ್ತದೆ. ಆಗ ಕಣ್ಣೊರೆಸುವ ನಾಟಕಗಳು ನಡೆಯುತ್ತವೆ. ಮತ್ತೆ ಕೆಲವು ದಿನಗಳ ನಂತರ ಮುಂದುವರಿಯುತ್ತವೆ. ಜನರು ಎಚ್ಚರಗೊಂಡು ಸಿಡಿದು ನಿಂತಾಗ ಮಾತ್ರ ಇವುಗಳನ್ನು ತಡೆಯಲು ಸಾಧ್ಯವಾಗುತ್ತದೆ.

ಹೆಣ್ಣು ಭ್ರೂಣ ಹತ್ಯೆ ಉತ್ತರ ಭಾರತದಲ್ಲಿ ವ್ಯಾಪಕವಾಗಿದೆ. ವಿಶೇಷವಾಗಿ ಪಂಜಾಬ್ ಮತ್ತು ಹರ್ಯಾಣಗಳು ಇದಕ್ಕೆ ಕುಖ್ಯಾತಿ ಗಳಿಸಿವೆ. ಹೀಗಾಗಿ ದೇಶದಲ್ಲಿ ಲಿಂಗಾನುಪಾತದ ಪ್ರಮಾಣವೂ ಹೆಚ್ಚುತ್ತಿದೆ. ಪ್ರತೀ ಸಾವಿರ ಗಂಡು ಮಕ್ಕಳಿಗೆ 839 ಹೆಣ್ಣು ಮಕ್ಕಳು ಇದ್ದಾರೆ. ಹೀಗಾಗಿ ಮದುವೆಗೆ ಕನ್ಯೆಯರು ಸಿಗದೆ ಉತ್ತರ ಭಾರತದ ಶ್ರೀಮಂತ ಯುವಕರು ಕೇರಳ, ತಮಿಳುನಾಡುಗಳಿಗೆ ಬಂದು ಬಡ ಹೆಣ್ಣು ಮಕ್ಕಳನ್ನು ಖರೀದಿಸಿ ಮದುವೆಯಾದ ಬಗ್ಗೆ ವರದಿಗಳಿವೆ. ಜನರ ಅಂತಃಸಾಕ್ಷಿ ಸತ್ತು ಹೋದಾಗ ಇಂತಹ ದುರಂತಗಳು ಸಂಭವಿಸುತ್ತವೆ.

ಸಂವಿಧಾನದ ಪ್ರಕಾರ ಗಂಡು, ಹೆಣ್ಣು ಸಮಾನರು. ಹೆಣ್ಣು ಮಕ್ಕಳು ತಾವು ಯಾವುದರಲ್ಲೂ ಕಡಿಮೆಯಿಲ್ಲ ಎಂದು ಸಾಧಿಸಿ ತೋರಿಸಿದ್ದಾರೆ.ಶಿಕ್ಷಕಿಯರಾಗಿ, ದಾದಿಯರಾಗಿ, ವೈದ್ಯರಾಗಿ, ವಿಜ್ಞಾನಿಗಳಾಗಿ, ಸೇನಾಧಿಕಾರಿಗಳಾಗಿ, ಆಡಳಿತಾಧಿಕಾರಿಗಳಾಗಿ, ಚುನಾಯಿತ ಸಂಸ್ಥೆಗಳ ಸದಸ್ಯರಾಗಿ ಸಮಾಜದ ಗಮನವನ್ನು ಸೆಳೆದಿದ್ದಾರೆ. ಆದರೆ ನಮ್ಮ ಪುರುಷಾಧಿಪತ್ಯದ ಸಮಾಜ ಇನ್ನೂ ಬದಲಾಗಿಲ್ಲ. ಹೆಣ್ಣು ಹುಟ್ಟಿದರೆ ಹೊರೆ ಎಂಬ ಹಳೆಯ ಕಾಲದ ನಂಬಿಕೆ ನಮ್ಮ ಸಮಾಜದಲ್ಲಿ ಸಾಕಷ್ಟಿದೆ. ವಂಶೋದ್ಧಾರಕನ ಭ್ರಮೆಯಲ್ಲಿ ಇರುವ ಜನ ಇಂತಹ ಅಪರಾಧ ಕೃತ್ಯಕ್ಕೆ ಕೈ ಹಾಕುತ್ತಾರೆ.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣಾ ಪ್ರಚಾರದಲ್ಲೂ ಈ ಹೆಣ್ಣು ಭ್ರೂಣ ಹತ್ಯೆಯ ವಿಷಯ ಹೆಚ್ಚು ಪ್ರಸ್ತಾಪಕ್ಕೆ ಬರಲಿಲ್ಲ. ಜನರನ್ನು ಕೋಮು ಆಧಾರದಲ್ಲಿ ವಿಭಜಿಸಿ ವೋಟಿನ ಬೆಳೆ ತೆಗೆದು ಅಧಿಕಾರದಲ್ಲಿ ಉಳಿಯಲು ಹೊರಟವರಿಂದ ಅವರು ಅಧಿಕಾರ ಬಂದರೂ ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯಲು ಸಾಧ್ಯವಿಲ್ಲ. ಯಾವುದಕ್ಕೂ ನಮ್ಮ ಸಾರ್ವಜನಿಕ ಜಾಗೃತಿ ಸತ್ತು ಹೋಗಬಾರದು.

ಅನೇಕ ಕುಟುಂಬಗಳಲ್ಲಿ ಹೆಣ್ಣು ಮಕ್ಕಳೇ ಕುಟುಂಬದ ಆಧಾರ ಸ್ತಂಭವಾಗಿದ್ದಾರೆ. ಮನೆಯೊಳಗೆ ಮತ್ತು ಹೊರಗೆ ಹೀಗೆ ಎರಡೂ ಕಡೆ ದುಡಿದು ಮನೆಯನ್ನು ನಡೆಸುತ್ತಾರೆ. ಆದರೂ ಸಮಾಜದಲ್ಲಿ ಹೆಣ್ಣಿನ ಬಗ್ಗೆ ತಾತ್ಸಾರದ ಭಾವನೆ ಹೋಗಿಲ್ಲ. ಇದರ ಪರಿಣಾಮವಾಗಿ ಹೆಣ್ಣು ಭ್ರೂಣ ಹತ್ಯೆಗಳು ನಡೆಯುತ್ತವೆ. ಇದನ್ನು ತಡೆಯಲು ಕಟ್ಟುನಿಟ್ಟಿನ ಕಾನೂನುಗಳನ್ನು ರಚಿಸಿದರೆ ಸಾಲದು ಅವು ಜಾರಿಯಾಗುವಂತೆ ಸಾಮಾಜಿಕ ಮತ್ತು ಸ್ವಯಂ ಸೇವಾ ಸಂಘಟನೆಗಳು ನೋಡಿಕೊಳ್ಳಬೇಕು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News