ಬಿಜೆಪಿಯೇತರ ಪ್ರತಿಪಕ್ಷಗಳ ಮುಂದಿನ ಹೆಜ್ಜೆ

Update: 2023-09-05 04:48 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮುಂಬರುವ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಒಗ್ಗೂಡಿರುವ ಪ್ರತಿಪಕ್ಷಗಳು ಕಳೆದ ವಾರ ಮುಂಬೈನಲ್ಲಿ ನಡೆಸಿದ ಸಭೆ ಒಂದೆರಡು ಮಹತ್ವದ ಹೆಜ್ಜೆಗಳನ್ನು ಇರಿಸಿದೆ. ಆದರೆ ಪಯಣ ಇನ್ನೂ ಸುದೀರ್ಘವಾಗಿದೆ. ಇನ್ನಷ್ಟು ಪರಿಣಾಮಕಾರಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ. ಒಕ್ಕೂಟ ಸರಕಾರದ ಅಧಿಕಾರ ಹಿಡಿದು ಕೂತು ಒಕ್ಕೂಟ ವ್ಯವಸ್ಥೆಯನ್ನೇ ನಾಶ ಮಾಡಲು ಮುಂದಾಗಿರುವ ಕೋಮುವಾದಿ ಬಿಜೆಪಿಯನ್ನು ಸೋಲಿಸಲು ವಿಭಿನ್ನ ಹಿನ್ನೆಲೆಯ ವಿರೋಧ ಪಕ್ಷಗಳು ಒಂದುಗೂಡಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಈ ನಿಟ್ಟಿನಲ್ಲಿ ಕಳೆದ ಜೂನ್ ತಿಂಗಳಲ್ಲಿ ಪಾಟ್ನಾದಲ್ಲಿ ಸಭೆ ಸೇರಿ ಬಿಜೆಪಿ ವಿರೋಧಿ ರಂಗಕ್ಕೆ ಒಂದು ನಿರ್ದಿಷ್ಟ ರೂಪವನ್ನು ಕೊಡಲಾಗಿದೆ. ಆನಂತರ ಬೆಂಗಳೂರಿನಲ್ಲಿ ಜುಲೈ ತಿಂಗಳಲ್ಲಿ ನಡೆದ ಸಭೆಯಲ್ಲಿ ಪ್ರತಿಪಕ್ಷ ಸಂಯುಕ್ತ ರಂಗಕ್ಕೆ ‘ಇಂಡಿಯಾ’ ಎಂಬ ಹೆಸರನ್ನೂ ಕೊಡಲಾಯಿತು. ನಂತರ ಮುಂಬೈಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ಎಲ್ಲಾ ಪ್ರತಿಪಕ್ಷಗಳ ಸಮನ್ವಯ ಸಮಿತಿ ಮತ್ತು ಪ್ರಚಾರ ಸಮಿತಿಯನ್ನು ರಚಿಸಲಾಗಿದೆ. ಇದು ನಿಜಕ್ಕೂ ಮಹತ್ವದ ಬೆಳವಣಿಗೆಯಾಗಿದೆ.

ಜಾತ್ಯತೀತ ಪ್ರತಿಪಕ್ಷಗಳ ಏಕತೆಯ ಸಂಯುಕ್ತ ರಂಗದ ಸಭೆಯಲ್ಲಿ ರೂಪಿಸಲಾದ ಸಮನ್ವಯ ಸಮಿತಿ ಉನ್ನತ ಮಟ್ಟದ ನೀತಿ ನಿರೂಪಣಾ ಸಮಿತಿಯಾಗಿದೆ.ಇದರಲ್ಲಿ ಇಬ್ಬರು ಮುಖ್ಯಮಂತ್ರಿಗಳು ಹಾಗೂ ಮೂವತ್ತು ವಿವಿಧ ಪಕ್ಷಗಳ ಹಿರಿಯ ನಾಯಕರಿದ್ದಾರೆ. ಸದ್ಯಕ್ಕಂತೂ ಎಲ್ಲಾ ಪ್ರತಿಪಕ್ಷ ನಾಯಕರು ಹೇಗಾದರೂ ಮಾಡಿ ಬಿಜೆಪಿಯನ್ನು ಸೋಲಿಸಲು ಪಣ ತೊಟ್ಟಿದ್ದಾರೆ.

ಸೈದ್ಧಾಂತಿಕವಾಗಿ, ರಾಜಕೀಯವಾಗಿ ಬಿಜೆಪಿಯನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಲು ಪ್ರತಿಪಕ್ಷಗಳ ಹಿರಿಯ ನಾಯಕರ ಸಭೆ ತೀರ್ಮಾನಿಸಿದೆಯಾದರೂ ವಾಸ್ತವವಾಗಿ ಚುನಾವಣೆಯಲ್ಲಿ ನೇರವಾಗಿ ಬಿಜೆಪಿಯನ್ನು ಎದುರಿಸಬೇಕಾದರೆ ಸ್ಪರ್ಧಿಸುವ ಸ್ಥಾನಗಳ ಹೊಂದಾಣಿಕೆಯಲ್ಲಿ ಒಮ್ಮತ ಮೂಡಬೇಕಾಗುತ್ತದೆ. ಬಿಜೆಪಿ ವಿರೋಧಿ ವೋಟುಗಳು ವಿಭಜನೆಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಅದೇ ಪ್ರತಿಪಕ್ಷಗಳ ಮುಂದಿರುವ ಮುಖ್ಯ ಸವಾಲಾಗಿದೆ.

ಬಿಜೆಪಿ ಪ್ರಬಲವಾಗಿರುವ ರಾಜ್ಯಗಳಲ್ಲಿ ಪ್ರತಿಪಕ್ಷಗಳು ಸ್ಪರ್ಧಿಸುವ ಸ್ಥಾನಗಳ ಹಂಚಿಕೆ ಮತ್ತು ಹೊಂದಾಣಿಕೆ ಅಷ್ಟು ಸಮಸ್ಯೆಯಾಗುವುದಿಲ್ಲ. ಆದರೆ ಮಮತಾ ಬ್ಯಾನರ್ಜಿಯವರ ಪಶ್ಚಿಮ ಬಂಗಾಳದಲ್ಲಿ ಅವರಿಗೆ ಬಿಜೆಪಿಗಿಂತ ಕಾಂಗ್ರೆಸ್ ಮತ್ತು ಸಿಪಿಎಂಗಳು ನೇರ ಎದುರಾಳಿಗಳು. ಕೇರಳದಲ್ಲಿ ಅಧಿಕಾರದಲ್ಲಿರುವ ಕಮ್ಯುನಿಸ್ಟರು ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆಯಿದೆ. ಪಂಜಾಬ್ ಮತ್ತು ದಿಲ್ಲಿಗಳಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಮುಖಾಮುಖಿಯಾಗಿ ಹೋರಾಡುತ್ತಾ ಬಂದಿವೆ. ಇಂಥ ರಾಜ್ಯಗಳಲ್ಲಿ ಅತ್ಯಂತ ಜಾಣತನದಿಂದ ಪ್ರತಿಪಕ್ಷಗಳು ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ. ಎಲ್ಲಕ್ಕಿಂತ ಮೊದಲು ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಒಮ್ಮತದಿಂದ ರೂಪಿಸಬೇಕಾಗಿದೆ.

ದೇವೇಗೌಡರಾಗಲಿ, ಯಾರೇ ಆಗಲಿ ಹೇಳಿದರೆಂದು ಪ್ರತಿಪಕ್ಷಗಳ ಯಾವುದೇ ಒಬ್ಬ ನಾಯಕನನ್ನು ಮುಂದಿಟ್ಟುಕೊಂಡು ಲೋಕಸಭಾ ಚುನಾವಣೆಯನ್ನು ಎದುರಿಸಬೇಕಾಗಿಲ್ಲ. ಒಂದು ನಿರ್ದಿಷ್ಟ ಕನಿಷ್ಠ ಕಾರ್ಯಕ್ರಮದ ಆಧಾರದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಯನ್ನು ಎದುರಿಸಿದರೆ ಮಾತ್ರ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ. ನಾಯಕನ ಆಯ್ಕೆ ಏನಿದ್ದರೂ ಚುನಾವಣೆಯಲ್ಲಿ ಬಹುಮತ ಗಳಿಸಿದ ನಂತರ ತೀರ್ಮಾನ ವಾಗಬೇಕು. ಇದೇ ನಿಜವಾದ ಜನತಾಂತ್ರಿಕ ಹೆಜ್ಜೆಯಾಗುತ್ತದೆ.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಈಗ ‘ಒಂದು ದೇಶ, ಒಂದು ಚುನಾವಣೆ’ ಎಂಬ ಬಲೆ ಬೀಸಿದೆ. ಇದನ್ನು ಹೇಗೆ ಎದುರಿಸಬೇಕೆಂಬ ಬಗ್ಗೆ ಪ್ರತಿಪಕ್ಷಗಳು ಮೊದಲಿಗೆ ಕಾರ್ಯತಂತ್ರವನ್ನು ರೂಪಿಸಬೇಕಾಗಿದೆ. ಈಗ ಅಧಿಕಾರದಲ್ಲಿ ಇರುವುದು ಅಂತಿಂಥ ಪಕ್ಷವಲ್ಲ. ಅದು ಹೇಗಾದರೂ ಮಾಡಿ ಅಧಿಕಾರ ಉಳಿಸಿಕೊಳ್ಳಬೇಕೆಂಬ ನಾಝಿ ನಿಲುವಿನ ಪಕ್ಷ. ಪ್ರತಿಪಕ್ಷಗಳು ಅದನ್ನು ಹಗುರಾಗಿ ತೆಗದುಕೊಳ್ಳದೆ ಅತ್ಯಂತ ಎಚ್ಚರದಿಂದ ಪ್ರತಿತಂತ್ರವನ್ನು ರೂಪಿಸಬೇಕಾಗಿದೆ.

ಈ ನಡುವೆ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿರುವ ಸರಕಾರದ ದಿಢೀರ್ ತೀರ್ಮಾನದ ಹಿಂದಿನ ಮಸಲತ್ತನ್ನು ಎದುರಿಸಲು ಪ್ರತಿಪಕ್ಷಗಳು ಪ್ರತಿ ಕಾರ್ಯತಂತ್ರವನ್ನು ರೂಪಿಸಬೇಕಾಗಿದೆ. ಈಗಾಗಲೇ ಈ ಕುರಿತು ಮಂಗಳವಾರ ಪ್ರತಿಪಕ್ಷ ನಾಯಕರ ಸಭೆ ನಡೆಯಲಿದೆ. ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ರೂ. ೨೦೦ ಇಳಿಸಿದ ಕ್ರಮ, ಈಗ ಸಂಸತ್ತಿನ ವಿಶೇಷ ಅಧಿವೇಶನ, ಇನ್ನೊಂದೆಡೆ ಏಕಕಾಲದಲ್ಲಿ ಚುನಾವಣೆ, ಅದಾನಿ ಸಮೂಹ ಉದ್ಯಮಗಳ ಹಗರಣ, ಈ ಕುರಿತು ಪ್ರತಿಪಕ್ಷಗಳು ಚರ್ಚಿಸಬೇಕಾಗಿದೆ. ಏಕಕಾಲದಲ್ಲಿ ಚುನಾವಣೆ ಕಾರ್ಯಸಾಧ್ಯತೆಯ ಪರಿಶೀಲನೆಯ ಉನ್ನತ ಮಟ್ಟದ ಸಮಿತಿಯಿಂದ ಮಲ್ಲಿಕಾರ್ಜುನ ಖರ್ಗೆಯವರ ಹೆಸರನ್ನು ಕೈ ಬಿಟ್ಟಿರುವುದು ಹಾಗೂ ಸಮಿತಿಯ ಭಾಗವಾಗಲು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ನಿರಾಕರಿಸಿರುವುದು ಗಮನಾರ್ಹ ಬೆಳವಣಿಗೆಗಳಾಗಿವೆ.

ಹಲವಾರು ವಿಷಯಗಳ ಬಗ್ಗೆ ಪ್ರತಿಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳಿವೆ.ಉದಾಹರಣೆಗೆ ಅದಾನಿ ಉದ್ಯಮ ಸಮೂಹದ ಹಗರಣಗಳ ಕುರಿತಂತೆ ಸಂಸದೀಯ ಜಂಟಿ ಸಮಿತಿಯಿಂದ ತನಿಖೆ ನಡೆಸಬೇಕೆಂಬ ನಿಲುವು ಕಾಂಗ್ರೆಸ್‌ನದಾಗಿದೆ. ಇದರ ಬಗ್ಗೆ ಇತರ ಕೆಲವು ಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳಿವೆ. ಇದರ ಬಗ್ಗೆ ಆಮ್ ಆದ್ಮಿ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳಲ್ಲಿ ಒಮ್ಮತವಿಲ್ಲ. ಇಂಥ ಹಲವಾರು ಭಿನ್ನಾಭಿಪ್ರಾಯಗಳಿದ್ದರೂ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನಗಳ ರಕ್ಷಣೆಗಾಗಿ ಪ್ರತಿಪಕ್ಷಗಳ ಏಕತೆ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಪಕ್ಷಗಳು ಸಕಾರಾತ್ಮಕವಾಗಿ ಸ್ಪಂದಿಸುವ ಸಾಧ್ಯತೆಯಿದೆ.

ಬರೀ ಬಿಜೆಪಿಯನ್ನು ವಿರೋಧಿಸಲು ಒಂದುಗೂಡಿದರೆ ಸಾಲದು. ಈಗಿನ ಸರಕಾರದ ವಿನಾಶಕಾರಿ ಆರ್ಥಿಕ ನೀತಿಗಳಿಗೆ ಪರ್ಯಾಯವಾಗಿ ಜನಪರ ವಾದ ಕಾರ್ಯಕ್ರಮವನ್ನು ಮತ್ತು ಕಾರ್ಯಯೋಜನೆಯನ್ನು ರೂಪಿಸುವುದು ಅಗತ್ಯವಾಗಿದೆ. ಮಣಿಪುರ ಸೇರಿದಂತೆ ಈಶಾನ್ಯ ರಾಜ್ಯಗಳ ದಾರುಣ ಪರಿಸ್ಥಿತಿ, ಕಾಶ್ಮೀರ ಸಮಸ್ಯೆ, ದೇಶದ ಅಲ್ಪಸಂಖ್ಯಾತರು ಮತ್ತು ದಲಿತರು ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ದಾಳಿ, ಆರ್ಥಿಕ ರಂಗದಲ್ಲಿ ಸರಕಾರದ ವೈಫಲ್ಯ ಸೇರಿದಂತೆ ಹಲವಾರು ವಿಷಯಗಳನ್ನು ಇಟ್ಟುಕೊಂಡು ಪ್ರತಿಪಕ್ಷಗಳು ಜನರ ಮುಂದೆ ಹೋಗಬೇಕಾಗಿದೆ. ಅದಕ್ಕಿಂತ ಮೊದಲು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತುವುದು ಅಗತ್ಯವಾಗಿದೆ.

ಭಾರತವನ್ನು ಮುಳುಗಿಸಲು ಹೊರಟಿರುವ ಬಹುದೊಡ್ಡ ಸವಾಲನ್ನು ಎದುರಿಸಲು ದೇಶದ ಏಕತೆ ಮತ್ತು ಸಮಗ್ರತೆಗಳನ್ನು ಕಾಪಾಡಿಕೊಳ್ಳಲು ಪ್ರತಿಪಕ್ಷಗಳು ತಮ್ಮ ನಡುವಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಗೆ ಮಹತ್ವ ಕೊಡದೆ ಗುರಿ ಸಾಧನೆಯತ್ತ ಮುಂದೆ ಸಾಗಲಿ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News