ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಬೇಡ

Update: 2023-10-17 03:15 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕರ್ನಾಟಕದಲ್ಲಿ ಮುಂಗಾರು ಬಹುತೇಕ ವಿಫಲವಾಗಿದೆ. ಇದರ ಪರಿಣಾಮವಾಗಿ ತೀವ್ರ ವಿದ್ಯುತ್ ಅಭಾವ ಎದುರಾಗಿದೆ. ಕೃಷಿ, ಉದ್ಯಮ ಮತ್ತು ಗೃಹ ಬಳಕೆದಾರರಿಗೆ ತೀವ್ರ ತೊಂದರೆಯಾಗಿದೆ. ಬೇಸಿಗೆಯ ದಿನಗಳಲ್ಲಿ ಬಳಕೆಯಾಗುವಷ್ಟು ವಿದ್ಯುತ್ಗೆ ಮಳೆಗಾಲದಲ್ಲೇ ಬೇಡಿಕೆ ಬಂದಿದೆ. ಅದರಲ್ಲೂ ಮುಖ್ಯವಾಗಿ ಕೃಷಿ ಚಟುವಟಿಕೆಗಳಿಗೆ ತೊಂದರೆ ಉಂಟಾಗಿದೆ. ಇದರ ನಿವಾರಣೆಗೆ ರಾಜ್ಯ ಸರಕಾರ ತುರ್ತು ಕ್ರಮಗಳನ್ನು ಕೈಗೊಳ್ಳುತ್ತಿದೆ. ರೈತರಿಗೆ ಪ್ರತಿದಿನ ಮೂರು ಪಾಳಿಗಳಲ್ಲಿ ಕನಿಷ್ಠ ಐದು ತಾಸು ನಿರಂತರ ವಿದ್ಯುತ್ ಪೂರೈಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿವಿಧ ವಿದ್ಯುತ್ ನಿಗಮಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದಾರೆ.

ಇಂತಹ ಸನ್ನಿವೇಶ ನಿರ್ಮಾಣವಾಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ ವಾದರೂ ವಿದ್ಯುತ್ ನಿಗಮಕ್ಕೆ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಸಂದರ್ಭವನ್ನು ಎದುರಿಸುವ ಪೂರ್ವ ಸಿದ್ಧತೆಯನ್ನು ಮಾಡಿಕೊಂಡಿದ್ದರೆ ಇಂತಹ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ. ಈ ಕುರಿತು ಮುಖ್ಯಮಂತ್ರಿಗಳೂ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಪೂರೈಕೆಯ ತೊಂದರೆಯ ಬಗ್ಗೆ ರೈತರು ಹಲವಾರು ಕಡೆ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ವಿದ್ಯುತ್ ಪೂರೈಕೆ ಮತ್ತು ನಿರ್ವಹಣೆಯಲ್ಲಿ ವಿದ್ಯುತ್ ನಿಗಮಗಳ ಅಧಿಕಾರಿಗಳು, ಮುಖ್ಯ ಇಂಜಿನಿಯರ್ಗಳು ಮುನ್ನೆಚ್ಚರಿಕೆ ವಹಿಸಿದ್ದರೆ ಹೀಗಾಗುತ್ತಿರಲಿಲ್ಲ.

ಸಾಮಾನ್ಯವಾಗಿ ಪ್ರತಿವರ್ಷ ಮಾರ್ಚ್ ತಿಂಗಳ ನಂತರ ವಿದ್ಯುತ್ಗೆ ಬೇಡಿಕೆ ಹೆಚ್ಚಾಗುತ್ತಿತ್ತು. ಆದರೆ ಈ ವರ್ಷ ಸೆಪ್ಟಂಬರ್ ಮೊದಲ ವಾರದಲ್ಲೇ ಬೇಸಿಗೆಯಲ್ಲಿ ಬೇಕಾಗುವಷ್ಟು ವಿದ್ಯುತ್ಗೆ ಬೇಡಿಕೆ ಬರುತ್ತಿದೆ. ಇಂಧನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ೯,೦೦೦ದಿಂದ ೧೧,೦೦೦ ಮೆಗಾವ್ಯಾಟ್ ವಿದ್ಯುತ್ ಮಾತ್ರ ಉತ್ಪಾದನೆಯಾಗುತ್ತಿದೆ. ಆದರೆ ಬೇಡಿಕೆಯ ಪ್ರಮಾಣ ೧೬,೦೦೦ ಮೆಗಾವ್ಯಾಟ್ಗಿಂತಲೂ ಜಾಸ್ತಿಯಾಗಿದೆ. ಈಗಲೇ ಈ ಪರಿಸ್ಥಿತಿ ಉಂಟಾದರೆ ಬರಲಿರುವ ಬೇಸಿಗೆಯನ್ನು ಎದುರಿಸುವುದಾದರೂ ಹೇಗೆ? ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕಡು ಬಿಸಿಲಿನ ದಿನಗಳನ್ನು ನೆನಪಿಸುವಂತಹ ವಾತಾವರಣ ಉಂಟಾಗಿದೆ. ಪರಿಸ್ಥಿತಿ ಇನ್ನೂ ಬಿಗಡಾಯಿಸುವ ಸೂಚನೆಗಳು ಕಂಡು ಬರುತ್ತಿವೆ.

ರೈತರು ತಾವು ಬಿತ್ತಿರುವ ಬೆಳೆಗಳನ್ನು ಉಳಿಸಿಕೊಳ್ಳಲು ನೀರಾವರಿ ಪಂಪ್ಸೆಟ್ ಗಳತ್ತ ಮುಖ ಮಾಡಿದ್ದಾರೆ. ಇದರಿಂದ ದಿನದಿಂದ ದಿನಕ್ಕೆ ವಿದ್ಯುತ್ ಬೇಡಿಕೆಯ ಪ್ರಮಾಣ ಹೆಚ್ಚುತ್ತಲೇ ಇದೆ. ವಾಣಿಜ್ಯ ಮತ್ತು ಉದ್ಯಮ ಕ್ಷೇತ್ರಗಳಿಂದಲೂ ವಿದ್ಯುತ್ಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ನಿಜ, ಮುಂಗಾರು ಮಳೆ ಈ ಪರಿ ಕೈಕೊಡುತ್ತದೆ ಎಂದು ರಾಜ್ಯ ಸರಕಾರವೂ ಅಂದುಕೊಂಡಿರಲಿಲ್ಲ. ಇಂಧನ ಇಲಾಖೆಯೂ ಪೂರ್ವ ತಯಾರಿ ಮಾಡಿಕೊಂಡಿರಲಿಲ್ಲ. ಹೀಗಾಗಿ ಕೆಲವೆಡೆ ಅಘೋಷಿತ ಲೋಡ್ ಶೆಡ್ಡಿಂಗ್ ಜಾರಿಯಲ್ಲಿದೆ.

ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ಈ ವರ್ಷ ಬಹುತೇಕ ಜಲಾಶಯಗಳು ಭರ್ತಿಯಾಗಿಲ್ಲ. ಹೀಗಾಗಿ ಜಲ ವಿದ್ಯುತ್ ಉತ್ಪಾದನೆಗೆ ಅವಕಾಶವಿಲ್ಲ. ತೀವ್ರ ಕಲ್ಲಿದ್ದಲು ಅಭಾವದಿಂದಾಗಿ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲೂ ನಿರೀಕ್ಷಿಸಿದ ಪ್ರಮಾಣದ ವಿದ್ಯುತ್ ಉತ್ಪಾದನೆ ಆಗುತ್ತಿಲ್ಲ. ಕಲ್ಲಿದ್ದಲು ಸಂಗ್ರಹ ಮುಗಿಯುತ್ತ ಬಂದಿರುವುದು ಇನ್ನೊಂದು ಆತಂಕಕಾರಿ ಸಂಗತಿಯಾಗಿದೆ. ಇನ್ನು ಸೌರಶಕ್ತಿ, ಪವನ ವಿದ್ಯುತ್ ಮೂಲಗಳಿಂದ ೧೩,೦೦೦ಕ್ಕೂ ಹೆಚ್ಚು ವಿದ್ಯುತ್ ಉತ್ಪಾದಿಸುವ ಘಟಕಗಳು ರಾಜ್ಯದಲ್ಲಿ ಇದ್ದರೂ ಅಲ್ಲೂ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗದಿರುವುದು ಪರಿಸ್ಥಿತಿ ಬಿಗಡಾಯಿಸಲು ಕಾರಣವಾಗಿದೆ.

ರಾಜ್ಯದಲ್ಲಿ ಉಂಟಾಗಿರುವ ವಿದ್ಯುತ್ ಕೊರತೆಯನ್ನು ನಿವಾರಿಸಲು ಉತ್ತರ ಪ್ರದೇಶ ಸೇರಿದಂತೆ ಇತರ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡಲು ಪ್ರಯತ್ನ ಮಾಡುವುದಾಗಿ ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.ಆದರೆ ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಮಳೆಯ ಕೊರತೆಯಿಂದಾಗಿ ಅಲ್ಲಿಂದ ಎಷ್ಟು ಮೆಗಾವ್ಯಾಟ್ ವಿದ್ಯುತ್ ಬರುತ್ತದೆ ಎಂಬುದು ಗೊತ್ತಿಲ್ಲ. ಕೇಂದ್ರೀಯ ವಿದ್ಯುತ್ ವಿತರಣಾ ಜಾಲದಿಂದಲೂ ನಿರೀಕ್ಷಿಸಿದ ಪ್ರಮಾಣದಲ್ಲಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಇನ್ನು ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ವಿದ್ಯುತ್ ಖರೀದಿಸಬೇಕೆಂದರೆ ಅಲ್ಲೂ ಇದೇ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ತಕ್ಷಣಕ್ಕೆ ವಿದ್ಯುತ್ ಪೂರೈಸುವ ಸ್ಥಿತಿಯಲ್ಲಿ ರಾಜ್ಯದ ಇಂಧನ ಇಲಾಖೆಯೂ ಇಲ್ಲ.

ಈ ವಿದ್ಯುತ್ ಸಮಸ್ಯೆಯನ್ನು ಪ್ರತಿಪಕ್ಷಗಳು ಅದರಲ್ಲೂ ಬಿಜೆಪಿ ರಾಜ್ಯದ ಕಾಂಗ್ರೆಸ್ ಸರಕಾರವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಬಳಸಿಕೊಳ್ಳಬಾರದು.ಕಾಂಗ್ರೆಸ್ ಅಧಿಕಾರಕ್ಕೆ ಬಂದು ಕೇವಲ ನಾಲ್ಕು ತಿಂಗಳಾಗಿದೆ. ಅದಕ್ಕಿಂತ ಮೊದಲು ಅಧಿಕಾರದಲ್ಲಿ ಇದ್ದವರು ವಿದ್ಯುತ್ ಉತ್ಪಾದನೆ ಮತ್ತು ನಿರ್ವಹಣೆಗೆ ಸರಿಯಾದ ಕ್ರಮಗಳನ್ನು ಕೈಗೊಂಡಿದ್ದರೆ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ. ರಾಜ್ಯದಲ್ಲಿ ವಿವಿಧ ಮೂಲಗಳಿಂದ ಒಟ್ಟು ೩೧,೬೬೯ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದು.ಆದರೆ ಈಗ ಅದರ ಅರ್ಧದಷ್ಟೂ ಉತ್ಪಾದನೆ ಆಗುತ್ತಿಲ್ಲ. ಇದರ ಹೊಣೆಯನ್ನು ಹಿಂದೆ ಇದ್ದ ಸರಕಾರವೂ ವಹಿಸಿಕೊಳ್ಳಬೇಕಾಗುತ್ತದೆ.

ಈಗ ಪ್ರತಿನಿತ್ಯ ೫,೦೦೦ ಮೆಗಾವ್ಯಾಟ್ ವಿದ್ಯುತ್ ಖರೀದಿ ಮಾಡಲಾಗುತ್ತಿದೆ.ಇದಕ್ಕೆ ರಾಜ್ಯ ಸರಕಾರ ಪ್ರತಿದಿನ ೪೦ರಿಂದ ೫೦ ಕೋಟಿ ರೂ. ಖರ್ಚು ಮಾಡುತ್ತಿದೆ. ಇನ್ನು ಮಳೆ ಬಂದು ಜಲಾಶಯಗಳು ಭರ್ತಿಯಾಗುತ್ತವೆ ಎಂದು ಕಾದು ಕೂರುವುದರಲ್ಲಿ ಅರ್ಥವಿಲ್ಲ. ಮುಂದೆ ಎದುರಾಗಬಹುದಾದ ವಿದ್ಯುತ್ ಸಮಸ್ಯೆಯನ್ನು ಎದುರಿಸಲು ಇಂಧನ ಇಲಾಖೆ ಯುದ್ಧೋಪಾದಿಯಲ್ಲಿ ಕಾರ್ಯ ಮಾಡಬೇಕಾಗಿದೆ.

ಅಸಾಂಪ್ರದಾಯಿಕ ಮೂಲಗಳಿಂದ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಗೆ ಅವಕಾಶಗಳಿವೆ. ಇದಕ್ಕಾಗಿ ಕ್ರಿಯಾಯೋಜನೆಯನ್ನು ರೂಪಿಸಿ ಕಾರ್ಯರೂಪಕ್ಕೆ ತರಬೇಕಾಗಿದೆ. ಸೌರ ವಿದ್ಯುತ್ ಮತ್ತು ಪವನ ವಿದ್ಯುತ್ ಉತ್ಪಾದನೆ ಕುಂಠಿತಗೊಳ್ಳಲು ಕಾರಣವೇನು ಎಂಬುದನ್ನು ಪತ್ತೆ ಹಚ್ಚಿ ಲೋಪವನ್ನು ಸರಿಪಡಿಸಬೇಕಾಗಿದೆ.ಸ್ವಂತ ಮೂಲದಿಂದಲೇ ವಿದ್ಯುತ್ ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕಾಗಿದೆ.ಎಲ್ಲಕ್ಕಿಂತ ಮುಖ್ಯವಾಗಿ ವಿದ್ಯುತ್ ಕೊರತೆಗೆ ಇನ್ನೊಂದು ಕಾರಣ ವಿದ್ಯುತ್ ಸೋರಿಕೆ ಮತ್ತು ಭಾರೀ ಉದ್ಯಮಪತಿಗಳು ಉಳಿಸಿಕೊಂಡ ವಿದ್ಯುತ್ ಬಾಕಿ. ಈ ಬಾಕಿ ವಸೂಲಿ ಮಾಡಿ ವಿದ್ಯುತ್ ಸೋರಿಕೆ ತಡೆಯಲು ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಬರುವ ಬೇಸಿಗೆಯಲ್ಲೂ ರೈತರಿಗೆ, ಕೈಗಾರಿಕೆಗಳಿಗೆ ಮತ್ತು ಗೃಹ ಬಳಕೆಗೆ ವಿದ್ಯುತ್ ಕೊರತೆಯಾಗದಂತೆ ಸಮರ್ಪಕವಾದ ಸಂಕಷ್ಟ ಪರಿಹಾರ ಸೂತ್ರವೊಂದನ್ನು ಇಂಧನ ಇಲಾಖೆ ಸಿದ್ಧಪಡಿಸಿ ಯಾರಿಗೂ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News